ಅಂತರ್ಜಾಲದ ಅಂತರಂಗದಲ್ಲಿ ಅಡಗಿವೆ ಹಲವು ವಿಸ್ಮಯ!
'ತಂತ್ರಜ್ಞಾನ ಅದ್ಭುತ ಅನ್ನಿಸುವಂತಹ ನಿರ್ಮಾಣಗಳಿಗೆ ಅಥವಾ ಊಹಿಸಲಾಗದಷ್ಟೂ ವಿಧ್ವಂಸಕ್ಕೆ ಕಾರಣವಾಗಬಲ್ಲದು ಎನ್ನುವುದು ಗೊತ್ತಿರುವಂಥದ್ದೆ. ಕಡೆಗಣಿಸಲಾಗದ ಸತ್ಯವೆಂದರೆ ಈ ಸಂಪರ್ಕ ಮಾಧ್ಯಮ ಉಗ್ರವಾದಿಗಳನ್ನು ಮತ್ತು ಕ್ರೂರ ಧರ್ಮಾಂಧರನ್ನು ಒಗ್ಗೂಡಿಸಬಲ್ಲದು
ಕಳೆದ ವಾರ ನನ್ನ ಗೆಳೆಯನೊಬ್ಬ ಅಂತರ್ಜಾಲಕ್ಕೆ ಸಂಬಂಧಿಸಿದ ಒಂದು ಉತ್ಕೃಷ್ಟ ಪುಸ್ತಕವೊಂದನ್ನು ಕಳುಹಿಸಿಕೊಟ್ಟ. ನಿಜ ಹೇಳಬೇಕೆಂದರೆ ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯುತ್ತಮ ಪುಸ್ತಕವಿದು. 'ದಿ ನ್ಯೂ ಡಿಜಿಟಲ್ ಏಜ್' ಎಂಬುದು ಪುಸ್ತಕದ ಹೆಸರು.
ಇದನ್ನು ಗೂಗಲ್ನ ಎಕ್ಸಿಕ್ಯೂಟಿವ್ ಮುಖ್ಯಸ್ಥ ಎರಿಕ್ ಸ್ಕಿಮಿಡ್ಟ್ ಮತ್ತು ಸಹ ಲೇಖಕ ರೆಡ್ ಕೋಹೆನ್ ಬರೆದಿದ್ದಾರೆ.
ಲೇಖಕರು ಬರೆದಿರುವ ಪ್ರಸ್ತಾವನೆಯ ಪೂರ್ವಾಧ ಆಯ್ದ ಭಾಗ ಈ ರೀತಿ ಇದೆ: 'ಇಂಟರ್ನೆಟ್ ಮನುಷ್ಯರಿಂದ ನಿರ್ಮಾಣವಾಗಿರುವ ಮತ್ತು ವಾಸ್ತವವಾಗಿ ಅವರ ಅರಿವಿಗೆ ನಿಲುಕದ ಕೆಲವೇ ಕೆಲವು ವಿಷಯಗಳಲ್ಲಿ ಒಂದು. ಮಾಹಿತಿ ತಂತ್ರಜ್ಞಾನ ಪ್ರತಿನಿಧಿಸುವ ಎಲ್ಲಾ ಸಾಧ್ಯತೆಗಳನ್ನು, ಅದರ ಉಪಯೋಗವನ್ನು ಒಳ್ಳೆಯ ಅಥವಾ ಕೆಟ್ಟ ಕೆಲಸಕ್ಕೆ ಬಳಸುವುದು ನಮ್ಮ ಕೈಯಲ್ಲಿದೆ. ಮುಂದಿನ ವರ್ಷಗಳಲ್ಲಿ ಮನುಷ್ಯರನ್ನು ಮಷೀನುಗಳೇ ಆಳುತ್ತವೆ ಎಂಬ ಮಾತನ್ನು ಬದಿಸರಿಸಿಬಿಡಿ. ಏಕೆಂದರೆ ಭವಿಷ್ಯದಲ್ಲಿ ಏನಾಗಲಿದೆಯೋ ಅದೆಲ್ಲ ನಮ್ಮ ಮೇಲೆ ಅವಲಂಬಿತವಾಗಿದೆ'.
2011ರಲ್ಲಿ 'ದಿ ಹಿಂದೂ' ಪತ್ರಿಕೆ ಭಾರತದ ವಿದೇಶಿ ನೀತಿ ಮತ್ತು ಸ್ಥಳೀಯ ವಿಷಯಗಳಿಗೆ ಸಂಬಂಧಿಸಿದ ವರದಿಗಳನ್ನು(ಕೇಬಲ್ಗಳು) ಪ್ರಕಟಿಸತೊಡಗಿದಾಗ ಓದುಗರಿಗೆ ವಿಕೀಲೀಕ್ಸ್ ಎನ್ನುವ ಸಂಸ್ಥೆಯ ಪರಿಚಯವಾಯಿತು.
ನಿಜಕ್ಕೂ ಭಾರತೀಯ ಕೇಬಲ್ಗಳಲ್ಲಿ ಅದ್ಭುತ ವಿಷಯಗಳನ್ನು ಕಲೆಹಾಕಲಾಗಿತ್ತು. ಒಂದೆಡೆ ನಮ್ಮ ದಕ್ಷ ರಾಜತಾಂತ್ರಿಕರ ಗಮನ ನೆರೆ ರಾಷ್ಟ್ರಗಳೊಂದಿಗೆ, ರಷ್ಯಾ, ಯುರೋಪಿಯನ್ ಯೂನಿಯನ್, ಇಸ್ರೇಲ್, ಪ್ಯಾಲಸ್ತೇನ್, ಇರಾನ್, ಪಶ್ಚಿಮ ಏಶಿಯಾ, ಆಫ್ರಿಕಾ, ಕ್ಯೂಬಾ ಮತ್ತು ಸಂಯುಕ್ತ ರಾಷ್ಟ್ರಗಳೊಂದಿಗಿನ ಸಂಬಂಧದತ್ತ ನೆಟ್ಟಿದ್ದರೆ. ವಿಕೀಲೀಕ್ಸ್ನ ಕಣ್ಣು ನಿರ್ಯಾತ ನಿಯಂತ್ರಣ, ಮಾನವಾಧಿಕಾರ, ಭಾರತೀಯ ನೌಕರಶಾಹಿ, ಪರ್ಯಾವರಣ, ಅಫ್ಘನ್-ಪಾಕ್ ಮತ್ತು ಇನ್ನು ಹಲವಾರು ವಿದ್ಯಮಾನಗಳತ್ತ ನೆಟ್ಟಿತ್ತು. ಅಲ್ಲದೆ 26/11, ಕಾಶ್ಮೀರ, ನೆರೆ ರಾಷ್ಟ್ರಗಳ ಪ್ರತಿ ಭಾರತದ ನೀತಿ ಎತ್ತ ಸಾಗುತ್ತಿದೆ ಎನ್ನುವುದರತ್ತ ಅದರ ಚಿತ್ತವಿತ್ತು. ರಾಜಕಾರಣಿಗಳು, ರಾಜತಾಂತ್ರಿಕರು ಮತ್ತು ಇನ್ನಿತರ ಅಧಿಕಾರಿಗಳು, ಉದ್ಯಮಿಗಳು, ಪತ್ರಕರ್ತರು...ಹೀಗೆ ಭಾರತದ ಕುರಿತಾದ ಸುಮಾರು 5100 ಕನ್ಸುಲೇಟ್ನ ಕೇಬಲ್ಗಳ ಬಗ್ಗೆ ವಿಕೀಲೀಕ್ಸ್ನಲ್ಲಿ ಮಾಹಿತಿ ಇದೆ.
ಎಲ್ಲಾ ಪತ್ರಿಕಾ ಓದುಗರಂತೆ ನಾನು ಕೂಡ ವಿಕೀಲೀಕ್ಸ್ನ ಮುಖ್ಯ ಸಂಪಾದಕ ಅಸಾಂಜೆ, ಗುಪ್ತ ದಸ್ತಾವೇಜುಗಳನ್ನು ಹ್ಯಾಕ್ ಮಾಡಿ ಹೊರಹಾಕಿದ ಪರಿಯನ್ನು ನೋಡಿ ಪ್ರಭಾವಿತನಾಗಿದ್ದೆ. ಆದರೆ ಯಾವಾಗ ಆತನನ್ನು ಗೃಹ ಬಂಧನದಲ್ಲಿಡಲಾಯಿತೋ ಆಗ ನನಗೆ ನಿಜಕ್ಕೂ ಬೇಸರವಾಯಿತು.
ಅಸಾಂಜೆ ಗೃಹ ಬಂಧನದಲ್ಲಿದ್ದ ಸಂದರ್ಭದಲ್ಲಿ ಎರಿಕ್ ಸ್ಕಿಮಿಡ್ಟ್ ಮತ್ತು ಲೇಖಕ ರೆಡ್ ಕೋಹೆನ್ ಆತನ ಸಂದರ್ಶನ ನಡೆಸಿದ್ದರು.
ಪುಸ್ತಕ ಹೇಳುತ್ತದೆ: ಸಂದರ್ಶನದ ಸಮಯದಲ್ಲಿ ಅಸಾಂಜೆ ಈ ವಿಷಯವಾಗಿ ತಮ್ಮ ಎರಡು ಮೂಲ ತರ್ಕಗಳನ್ನು ಮುಂದಿಡುತ್ತಾನೆ. ಮೊದಲನೆಯದು, 'ಮಾನವ ಸಭ್ಯತೆ ಎಂಬುದು ಸಂಪೂರ್ಣ ಬೌದ್ಧಿಕ ಜೀವನ ಇತಿಹಾಸದಿಂದ ರೂಪಿತವಾದದ್ದು. ಹಾಗಾಗೇ ಮುಂದಿನ ತಲೆಮಾರಿಗೆ ತಿಳಿಸಲು ನಮ್ಮ ರೆಕಾರ್ಡ್ ಆದಷ್ಟೂ ದೊಡ್ಡದಿರಬೇಕು'. ಎರಡನೆಯದು, 'ತಮ್ಮ ಸ್ವಹಿತಾಸಕ್ತಿಗಾಗಿ ನಮ್ಮ ಇತಿಹಾಸವನ್ನು ಅಳಸಿ ಹಾಕುವ ಪ್ರಯತ್ನದಲ್ಲಿ ಕೆಲವರು ತೊಡಗಿರುತ್ತಾರೆ, ಹಾಗಾಗೆ ಸತ್ಯವನ್ನು ಹೇಳಬಯಸುವವರು ತಮ್ಮೆಲ್ಲಾ ಮಾಹಿತಿಯನ್ನು ರೆಕಾರ್ಡ್ ಮಾಡುವ ಮೂಲಕ ಅದು ಅಳಸಿಹೋಗದಂತೆ ಮತ್ತು ಪ್ರಪಂಚದಾದ್ಯಂತ ಎಲ್ಲರಿಗೂ ದೊರಕುವಂತೆ ಮಾಡುವುದು'.
ಅಸಾಂಜೆಯ ಈ ಅವತಾರ, ನನಗೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನಪು ಮಾಡಿಕೊಡುತ್ತದೆ. ರಾಷ್ಟ್ರೀಯ ಭದ್ರತೆಗೆ ಅಪಾಯ ಎಂಬ ನೆಪವೊಡ್ಡಿ ಅಂದು ಲಕ್ಷಾಂತರ ಕಾರ್ಯಕರ್ತರನ್ನು ಜೈಲಿಗಟ್ಟಲಾಯಿತು, ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಹಾಗಾಗೇ ಪಾರದರ್ಶಕತೆ ಹೆಚ್ಚಾದಂತೆಲ್ಲ ಸುರಕ್ಷಿತ ಮತ್ತು ಸ್ವತಂತ್ರ ಪ್ರಪಂಚ ಹುಟ್ಟಿಕೊಳ್ಳುತ್ತದೆ ಎನ್ನುವ ಅಸಾಂಜೆಯ ವಾದವನ್ನು ನಾನು ಒಪ್ಪಿಕೊಳ್ಳುತ್ತೇನೆ.
ಇಂಟರ್ನೆಟ್ ಮತ್ತು ಆಧುನಿಕ ಸಂವಹನ ಉಪಕರಣಗಳು ಸೃಷ್ಟಿಸಿರುವ ಕ್ರಾಂತಿಯಿಂದಾಗಿ, ರಾಷ್ಟ್ರಗಳ ಮತ್ತು ಪ್ರಜೆಗಳ ಭದ್ರತೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂಬ ಎಚ್ಚರಿಕೆ ಈ ಪುಸ್ತಕವನ್ನೋದಿದ ಮೇಲೆ ನನಗೆ ಇನ್ನಷ್ಟು ಹೆಚ್ಚಾಯಿತು.
ನಾನು ಇಲ್ಲಿ 'ಎಚ್ಚರಿಕೆ' ಎನ್ನುವ ಪದ ಬಳಸಿರುವುದಕ್ಕೆ ಈ ಪುಸ್ತಕದಲ್ಲಿನ 'ದಿ ಫ್ಯೂಚರ್ ಆಫ್ ಟೆರರಿಸಂ' ಎನ್ನುವ 5 ಅಧ್ಯಾಯವೇ ಕಾರಣ: 'ತಂತ್ರಜ್ಞಾನ ಅದ್ಭುತ ಅನ್ನಿಸುವಂತಹ ನಿರ್ಮಾಣಗಳಿಗೆ ಅಥವಾ ಊಹಿಸಲಾಗದಷ್ಟೂ ವಿಧ್ವಂಸಕ್ಕೆ ಕಾರಣವಾಗಬಲ್ಲದು ಎನ್ನುವುದು ಗೊತ್ತಿರುವಂಥದ್ದೆ. ಕಡೆಗಣಿಸಲಾಗದ ಸತ್ಯವೆಂದರೆ ಈ ಸಂಪರ್ಕ ಮಾಧ್ಯಮ ಉಗ್ರವಾದಿಗಳನ್ನು ಮತ್ತು ಕ್ರೂರ ಧರ್ಮಾಂಧರನ್ನು ಒಗ್ಗೂಡಿಸಬಲ್ಲದು. ಸಂಪರ್ಕ ಜಾಲ ಹೆಚ್ಚಾದಂತೆಲ್ಲ ಅಪಾಯಗಳೂ ಹೆಚ್ಚುತ್ತವೆ. ಉಗ್ರವಾದದಿಂದಾಗಿ ತಮ್ಮ ಮಾತೃಭೂಮಿಯನ್ನು ಉಳಿಸಿಕೊಳ್ಳಲು ದಿನವೂ ಹೆಣಗುತ್ತಿರುವ ದೇಶಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಪಾಟಲು ಪಡಲಿವೆ' ಎಂದು ಹೇಳುತ್ತದೆ ಆ ಅಧ್ಯಾಯ.
ಅದರಲ್ಲೂ ಅಂತಹ ಗುಂಪುಗಳಿಗೆ ಪರಮಾಣು, ರಸಾಯನಿಕ ಅಥವಾ ಜೈವಿಕ ಅಸ್ತ್ರಗಳು ಸಿಗಬಹುದಾದ ಅಪಾಯಕಾರಿ ಸಾಧ್ಯತೆಯೂ ಇದೆ!
ಈ ಪುಸ್ತಕದ ಕಲ್ಪನೆ ಇವರುಗಳಿಗೆ ಒಡಮೂಡಿದ್ದು 2009ರಲ್ಲಿ ಇವರಿಬ್ಬರೂ ಬಾಗ್ದಾದ್ನಲ್ಲಿ ಭೇಟಿಯಾದಾಗ. ತಂತ್ರಜ್ಞಾನವನ್ನು ಬಳಸಿ ಹೇಗೆ ಒಂದು ಸಮಾಜಕ್ಕೆ ಪುನರ್ರೂಪು ಕೊಡಬಹುದು ಎನ್ನುವುದರ ಬಗ್ಗೆ ಇವರು ಇರಾಕಿಗಳನ್ನು ಪ್ರಶ್ನಿಸತೊಡಗಿದರು. "2009ರಲ್ಲಿ ಇರಾಕಿನಾದ್ಯಂತ ಸಂಚಾರ ಮಾಡಿದಾಗ, 'ಉಗ್ರವಾದಿಯಾಗುವುದು ತುಂಬಾ ಸುಲಭ' ಎನ್ನುವ ಆಘಾತಕಾರಿ ಸತ್ಯ ನಮ್ಮೆದುರು ಹಲ್ಲು ಕಿರಿದು ನಗುತ್ತಿತ್ತು. ದುಬಾರಿ ಸುಧಾರಿತ ಸ್ಫೋಟಕಗಳು, 2009ರ ವೇಳೆಗೆ ಅತ್ಯಂತ ಸಸ್ತಾ ದರದಲ್ಲಿ ತಯಾರಾಗತೊಡಗಿದ್ದವು. ಈಗಂತೂ ಒಂದು ಚಿಕ್ಕ ಮೊಬೈಲ್ಗೆ ಬಾಂಬ್ ಅಳವಡಿಸಿ, ದೂರದಿಂದಲೇ ಸ್ಫೋಟಿಸಿ ಅಪಾರ ಹಾನಿ ಎಸಗಬಹುದು" ಎನ್ನುತ್ತಾರೆ ಲೇಖಕರು.
ಒಸಾಮಾ ಬಿನ್ ಲ್ಯಾಡೆನ್ನ ಅಬೋಟಾಬಾದ್ ಅಧ್ಯಾಯವನ್ನು ಉಲ್ಲೇಖಿಸುತ್ತಾ ಅವರು ಹೇಳುತ್ತಾರೆ- ತಂತ್ರಜ್ಞಾನದ ಉಪಯೋಗ ಭವಿಷ್ಯದಲ್ಲಿ ಉಗ್ರವಾದಿಗಳಿಗೆ ಅನಿವಾರ್ಯವಾಗುತ್ತದಾದರೂ, ಅತಿ ಹೆಚ್ಚು ಅಪಾಯಗಳಿಗೂ ಅದು ಅವರನ್ನು ಸಿಕ್ಕಿಸುತ್ತದೆ. 2011ರಲ್ಲಿ ಯಾವಾಗ ಲ್ಯಾಡೆನ್ ಸತ್ತನೋ, ಅಂದೇ ಆಧುನಿಕ ತಂತ್ರಜ್ಞಾನದಿಂದ ತಲೆತಪ್ಪಿಸಿಕೊಂಡ ಗುಹಾವಾಸಿ ಉಗ್ರವಾದಿಗಳ ಅಂತ್ಯವೂ ಆಯಿತು. ಸುಮಾರು 5 ವರ್ಷಗಳ ವರೆಗೆ ಇಂಟರ್ನೆಟ್ ಅಥವಾ ಮೊಬೈಲ್ ಫೋನ್ಗಳಿಲ್ಲದೇ ಲಾಡೆನ್ ಪಾಕಿಸ್ತಾನದಲ್ಲಿ ಬದುಕಿಬಿಟ್ಟ. ಆದರೂ ಆತನಿಗೆ ತಮ್ಮ ತಂಡದಿಂದ ಮಾಹಿತಿ ಪಡೆಯಲು ಫ್ಲ್ಯಾಷ್ ಡ್ರೈವ್ಗಳನ್ನು, ಹಾರ್ಡ್ಡ್ರೈವ್ಗಳನ್ನು, ಡಿ.ವಿ.ಡಿಗಳನ್ನು ಬಳಸಲೇಬೇಕಾಯಿತು. ಯಾವಾಗ ಅಮೆರಿಕದ ಸೇನೆ ಈತನ ಮನೆಯನ್ನು ರೇಡ್ ಮಾಡಿತೋ ಅಂದು ಕೇವಲ ಆತನಷ್ಟೇ ಅಲ್ಲದೆ ಆತನ ಸಂಪರ್ಕದಲ್ಲಿದ್ದ ಸಾವಿರಾರು ಉಗ್ರರ ವಿಳಾಸಗಳೂ ಪತ್ತೆಯಾದವು."
ಇಂಥದ್ದೇ ಉದಾಹರಣೆ ನಮ್ಮ ದೇಶದಲ್ಲೂ ಸಿಗುತ್ತದೆ. ಮುಂಬೈ ದಾಳಿಯಲ್ಲಿ ಸುಮಾರು 174 ಜನರನ್ನು ಬಲಿ ತೆಗೆದುಕೊಂಡ ಉಗ್ರರು, ಆಧುನಿಕ ಉಪಕರಣಗಳ ಮೂಲಕ ತಮ್ಮನ್ನು ಕಳುಹಿಸಿದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈಗ ಅವೇ ಉಪಕರಣಗಳಿಂದಾಗಿ, ಅವರು ಯಾವ ದೇಶದೊಂದಿಗೆ ಮಾತನಾಡುತ್ತಿದ್ದರು ಎನ್ನುವುದು ಬಯಲಾಗಿದೆ.
ಮುಗಿಸುವ ಮುನ್ನ: ಡಿಜಿಟಲ್ ಕ್ರಾಂತಿಯ ಆಳವನ್ನು ಅರ್ಥಮಾಡಿಕೊಳ್ಳಲು ಬಯಸುವವರು 'ದಿ ನ್ಯೂ ಡಿಜಿಟಲ್ ಏಜ್' ಪುಸ್ತಕವನ್ನು ಓದುವುದು 'ಅನಿವಾರ್ಯ' ಎಂದು ಹೇಳುತ್ತಾರೆ ಸಿಐಎನ ಪೂರ್ವ ಡೈರೆಕ್ಟರ್ ಜನರಲ್ ಮಿಷೆಲ್ ಡಾಯ್ಡೆನ್.
ಪ್ರಪಂಚದಾದ್ಯಂತ ಇಂಟರ್ನೆಟ್ ಅನ್ನು ಅಧಿಕಾಂಶ ರೂಪದಲ್ಲಿ ಉಪಯೋಗ ಮಾಡುವವರು ಒಂದಲ್ಲ ಒಂದು ರೀತಿಯ ಸೆನ್ಸಾರ್ಶಿಪ್ ಅನ್ನು ಎದುರಿಸಿರುತ್ತಾರೆ. ಇದನ್ನು 'ಫಿಲ್ಟರಿಂಗ್' ಎಂದೂ ಕರೆಯಲಾಗುತ್ತದೆ. ಆದರೆ ಕೆಲವು ರಾಷ್ಟ್ರಗಳು ಮೂರು ತರಹದ ಸೆನ್ಸಾರ್ಶಿಪ್ ಅಥವಾ ಫಿಲ್ಟರಿಂಗ್ ಮಾಡಲ್ ಅಳವಡಿಸಿರುತ್ತವೆ: ಮುಕ್ತ, ಸಂಕುಚಿತ ಮತ್ತು ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ.
ಮುಕ್ತ: ಮಾಹಿತಿಯನ್ನು ಫಿಲ್ಟರ್ ಮಾಡುವುದರಲ್ಲಿ ಚೀನಿಯರು ಮುಂಚೂಣಿಯಲ್ಲಿದ್ದಾರೆ. ಫೇಸ್ಬುಕ್, ಟ್ವಿಟರ್, ಟಂಬ್ಲರ್ಗಳಂತಹ ಜಾಲತಾಣಗಳನ್ನು ಬ್ಲಾಕ್ ಮಾಡಿದ್ದಷ್ಟೇ ಅಲ್ಲದೆ, ರಾಜಕೀಯವಾಗಿ ಸೂಕ್ಷ್ಮ ವಿಚಾರಗಳಾದ ಟಿಯಾನೆನ್ಮೆನ್ ಪ್ರತಿಭಟನೆಗಳು, ದಲಾಯ್ ಲಾಮಾ, ಟಿಬೆಟಿಯನ್ನರ ಹೋರಾಟ, 2011ರಲ್ಲಿ ಗೂಗಲ್ನ ಮುಖ್ಯಸ್ಥ ಬೀಜಿಂಗ್ಗೆ ಭೇಟಿ ಕೊಟ್ಟ ವಿಷಯಗಳೆಲ್ಲ ಹೊರ ಪ್ರಪಂಚಕ್ಕೆ ತಿಳಿಯದಂತೆ ಅದು ಮಾಡಿತು.
ಸಂಕುಚಿತ: ಚೀನಾದಷ್ಟು ಬಿಗಿ ಧೋರಣೆಯನ್ನು ತೋರಿಲ್ಲವಾದರೂ, ಟರ್ಕಿ ದೇಶ ಇದುವರೆಗೂ ಸುಮಾರು 8,000 ಜಾಲತಾಣಗಳನ್ನು ನಿಷೇಧಿಸಿದೆ. ಅದೂ ಸಾರ್ವಜನಿಕ ಅಥವಾ ಸರ್ಕಾರದ ಅಧಿಕೃತ ದೃಢೀಕರಣವಿಲ್ಲದೆ.
ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ: ಈ ತರಹದ ಫಿಲ್ಟರಿಂಗ್ ಅನ್ನು ದಕ್ಷಿಣ ಕೊರಿಯಾ, ಜರ್ಮನಿ ಮತ್ತು ಮಲೇಶಿಯಾಗಳಲ್ಲಿ ಕಾಣಬಹುದು. ಕಾನೂನಿನಲ್ಲಿ ಸೂಚಿಸಲಾಗಿರುವ ಅಂಶಗಳಿಗೆ ಅನುಗುಣವಾಗಿಯಷ್ಟೇ ಫಿಲ್ಟರಿಂಗ್ ಮಾಡಲಾಗುತ್ತದೆ. ಅಲ್ಲದೆ ಈ ವಿಷಯವನ್ನು ಅವು ಸಾರ್ವಜನಿಕರಿಗೆ ಪೂರ್ವದಲ್ಲಿಯೇ ತಿಳಿಸುತ್ತವೆ.
ಈ ಮೂರನೇ ಮಾಡಲ್ ಎಲ್ಲಾ ರಾಷ್ಟ್ರಗಳ ನಿಯಮವಾಗಲಿ ಎನ್ನುವುದು ಈ ಪುಸ್ತಕದ ಬಯಕೆ.
-ಎಲ್.ಕೆ.ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

