ಕರ್ಮ ಹೋರಾಟಕ್ಕೆ ಕೃತಜ್ಞರಾಗೋಣ...

Updated on: 

ಕೆಟ್ಟದ್ದರ ವಿರುದ್ಧ ಹೋರಾಟವನ್ನು ಹಾಗೂ ಅಂಥ ಹೋರಾಟಗಳನ್ನು ಪ್ರೇರೇಪಿಸಿದ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲೇಬೇಕು. ಕೆಲವೊಮ್ಮೆ ಹೋರಾಟವನ್ನು ಅವರು ಯಾವ ಮಾರ್ಗದಲ್ಲಿ ಮುನ್ನಡೆಸಿದರು ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾದ ಸಂದರ್ಭಗಳಿದ್ದಿರಬಹುದು. ಆದರೆ ಅಂಥ ಭಿನ್ನತೆಗಳು ಅವರು ಸವಾಲು ಎದುರಿಸಿದ ಅಂಶವನ್ನೇ ಮುಸುಕಾಗಿಸಬಾರದು.
ಈ ಹಿನ್ನೆಲೆಯಲ್ಲೇ ಮಹೇಂದ್ರ ಕರ್ಮ ಮುಖ್ಯರಾಗುತ್ತಾರೆ. ಶನಿವಾರ ಚತ್ತೀಸ್‌ಗಡದಲ್ಲಿ ನಡೆದ ಭೀಕರ ನಕ್ಸಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಕಾಂಗ್ರೆಸ್‌ನ ಮುಖಂಡ ಮಹೇಂದ್ರ ಕರ್ಮ. ನಕ್ಸಲರನ್ನು ನಿರ್ದಯವಾಗಿ ಹಿಮ್ಮೆಟ್ಟಿಸಬೇಕು ಎಂಬುದನ್ನು ಕೊನೆಯವರೆಗೂ ಪ್ರಖರವಾಗಿ ಪ್ರತಿಪಾದಿಸಿದ ಕರ್ಮ, ಕೆಲ ಅವಧಿಗಳವರೆಗೆ ಅಸ್ತಿತ್ವದಲ್ಲಿದ್ದ ಸಲ್ವಾ ಜುದುಮ್‌ನ ನೇತೃತ್ವ ವಹಿಸಿದ್ದರು. ನಕ್ಸಲರ ವಿರುದ್ಧ ಗುಡ್ಡಗಾಡು ಜನರನ್ನು ಸಂಘಟಿಸಿ ಸರ್ಕಾರವೇ ಅವರ ಕೈಗೆ ಶಸ್ತ್ರಗಳನ್ನು ನೀಡಿ ನಕ್ಸಲರ ವಿರುದ್ಧ ಹೋರಾಡುವುದಕ್ಕೆಂದು ರೂಪಿಸಿದ್ದ ವ್ಯವಸ್ಥೆ 'ಸಲ್ವಾ ಜುದುಮ್‌'. 2005-06ರ ಸಂದರ್ಭದಲ್ಲಿ ಮಹೇಂದ್ರ ಕರ್ಮ ಮುಂದಾಳತ್ವದಲ್ಲಿ ಹುಟ್ಟಿಕೊಂಡಿದ್ದ ಈ ವ್ಯವಸ್ಥೆಯನ್ನು ಸುಪ್ರೀಂಕೋರ್ಟ್ 2011ರಲ್ಲಿ ವಜಾಗೊಳಿಸುವಂತೆ ಸರ್ಕಾರಕ್ಕೆ ಆದೇಶಿಸಿತು. ಜನರು ಸಲ್ವಾ ಜುದುಮ್ ಇಲ್ಲವೇ ನಕ್ಸಲರ ಪಾಳಯದಲ್ಲಿ ಗುರುತಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿ ಆ ಸಂಘರ್ಷದಲ್ಲಿ ಮಾನವ ಹಕ್ಕುಗಳ ಪ್ರಶ್ನೆ ಎದ್ದಿದ್ದೇ ಇದಕ್ಕೆ ಕಾರಣವಾಗಿತ್ತು.  ಮಾವೋವಾದಿ ಹಿಂಸಾಚಾರಕ್ಕೆ ಅತಿಯಾಗಿ ಗುರಿಯಾದ ರಾಜ್ಯ ಚತ್ತೀಸ್‌ಗಡ. 2008-2012ರ ಅವಧಿಯಲ್ಲಿ ಇಲ್ಲಿ ಮಾವೋವಾದಿಗಳಿಂದ ಹತರಾದ ಭದ್ರತಾ ಸಿಬ್ಬಂದಿ ಸಂಖ್ಯೆ 400ಕ್ಕೂ ಹೆಚ್ಚು ಹಾಗೂ 550 ನಾಗರಿಕರು ನಕ್ಸಲ್ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಹೀಗೆ ಎಡಪಂಥೀಯ ಉಗ್ರವಾದವು ತನ್ನ ಕರಾಳ ಮುಖವನ್ನು ಹೊರಗೆಡವಿರುವ ಚತ್ತೀಸ್‌ಗಡದ ಬಸ್ತಾರ್ ಜಿಲ್ಲೆಯ ದಂತೇವಾಡವೆಂಬ ಮಾವೋವಾದಿ ಉಪಟಳದ ಪ್ರಾಂತ್ಯದಲ್ಲೇ ಜನಿಸಿದವರು ಮಹೇಂದ್ರ ಕರ್ಮ. ಇಂಥ ಕಟುವಾಸ್ತವದ ನೆಲದವರಾದ್ದರಿಂದಲೇ ಮಾವೋವಾದಿಗಳನ್ನು ಅವರದೇ ಮಾರ್ಗ ಉಪಯೋಗಿಸಿ ಬಗ್ಗುಬಡಿಯಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು ಕರ್ಮ. ಚುನಾವಣೆಯ ಕಣದಲ್ಲಿ ಅವರು ಗೆಲ್ಲಲಿ, ಸೋಲಲಿ ಆ ಪ್ರಾಂತ್ಯದಲ್ಲಿ ಅವರ ವರ್ಚಸ್ಸು ಅತಿ ಎತ್ತರದ ಮಟ್ಟದಲ್ಲೇ ಇರುತ್ತಿತ್ತು. ಮಾವೋವಾದಿಗಳ ವಿರುದ್ಧದ ಖಡಕ್ ನಿಲುವು ಹಾಗೂ ಹೋರಾಟಗಳಿಗಾಗಿ ಜನ ಅವರನ್ನು 'ಬಸ್ತಾರ್‌ನ ಹುಲಿ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
ಅವಿಭಜಿತ ಮಧ್ಯಪ್ರದೇಶದಲ್ಲಿ ಮಂತ್ರಿಯಾಗಿದ್ದವರು ಕರ್ಮ. 2000ನೇ ಇಸ್ವಿಯಲ್ಲಿ ಚತ್ತೀಸ್‌ಗಡ ರಾಜ್ಯ ರಚನೆಯಾದಾಗ ಅವರು ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿಯಾದರು. 2003ರಲ್ಲಿ ಕಾಂಗ್ರೆಸ್ ಅಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಸೋಲೊಪ್ಪಿದಾಗ ಕರ್ಮ, ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾದರು. 2008ರ ವಿಧಾನಸಭೆ ಚುನಾವಣೆಯನ್ನು ಅವರು ಸೋತಿದ್ದರಾದರೂ ಮಾವೋವಾದಿ ಹಿಂಸಾಗ್ರಸ್ತ ಬಸ್ತಾರ್‌ನ ಏಳು ಜಿಲ್ಲೆಗಳಲ್ಲಿ ಅವರ ವ್ಯಕ್ತಿತ್ವದ ವರ್ಚಸ್ಸು ಕುಂದಿರಲಿಲ್ಲ.
'ಅವರು ಮಾವೋವಾದಿಗಳ ವಿರುದ್ಧದ ಅನುಪಮ ಹೋರಾಟಗಾರ. ಅವರ ಹೋರಾಟವನ್ನು ನಾಡು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತದೆ' ಎಂದಿದ್ದಾರೆ ಚತ್ತೀಸ್‌ಗಡ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ರಮಣ್ ಸಿಂಗ್. ಈ ಹಿಂದೆಯೇ ಇವರನ್ನು ಮುಗಿಸುವುದಕ್ಕೆ ನಾಲ್ಕು ಬಾರಿ ಮಾವೋವಾದಿಗಳು ಯತ್ನಿಸಿದ್ದರು. ಆದರೂ ಕರ್ಮ ಅವರ ಧೋರಣೆಯಲ್ಲಿ ಏನೂ ಬದಲಾವಣೆಯಾಗಿರಲಿಲ್ಲ. 'ದೇಶದ ವೈರಿಗಳನ್ನು ಸುಮ್ಮನೇ ಬಿಡುವುದಿಲ್ಲ' ಎಂಬ ಸವಕಲು ಹೇಳಿಕೆಗಳನ್ನು ಕೊಡುವ ರಾಜಕಾರಣಿಗಳ ದಂಡೇ ಇದೆ. ಇವರ ಮಧ್ಯೆ ತಾವು ನಂಬಿದ ಹೋರಾಟಕ್ಕಾಗಿ ಪ್ರಾಣತೆತ್ತ ಮಹೇಂದ್ರ ಕರ್ಮ (62) ಅವರ ನೆನಪಿಗೆ ಕೃತಜ್ಞತೆಯ ಕಂಬನಿ ಇರಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com