ಟೆಡ್ಡಿಬೇರ್ ಪಡೆದ ಮಕ್ಕಳಲ್ಲಿ ದೇವರ ಕಂಡಳು ಟೇಲರ್

ಆ ಹುಡುಗಿಯ ಹೆಸರು ಟೇಲರ್ ಮೇರಿ ಕ್ರಾಬ್ ಟ್ರೀ. ಆಕೆ, ಅಮೆರಿಕಾದ ಕ್ಯಾಲಿಫೋರ್ನಿಯಾ...
ಟೆಡ್ಡಿಬೇರ್ ಪಡೆದ ಮಕ್ಕಳಲ್ಲಿ ದೇವರ ಕಂಡಳು ಟೇಲರ್
Updated on: 

ಆ ಹುಡುಗಿಯ ಹೆಸರು ಟೇಲರ್ ಮೇರಿ ಕ್ರಾಬ್ ಟ್ರೀ. ಆಕೆ, ಅಮೆರಿಕಾದ ಕ್ಯಾಲಿಫೋರ್ನಿಯಾಕ್ಕೆ ಹತ್ತಿರವಿರುವ ಸ್ಯಾನ್‌ಡಿಯಾಗೋ ನಗರದ ನಿವಾಸಿ. 7 ವರ್ಷದ ಅವಳು, ಆಗಷ್ಟೇ ಸ್ಕೂಲ್‌ಗೆ ಸೇರಿಕೊಂಡಿದ್ದಳು. ಅಂದಮೇಲೆ ಕೇಳಬೇಕೆ? ದಿನವೂ ಮನೆಗೆ ಬಂದ ತಕ್ಷಣ ಟೀಚರ್‌ಗಳು ಹೇಳಿಕೊಟ್ಟಿದ್ದನ್ನೆಲ್ಲಾ ಅಮ್ಮನಿಗೆ ವರದಿ ಮಾಡುತ್ತಿದ್ದಳು. ಅಂಥ ಹುಡುಗಿ, ಅದೊಂದು ಮಧ್ಯಾಹ್ನ ಅಮ್ಮನೊಂದಿಗೆ ಮಾತೇ ಆಡದೇ ಕತ್ತರಿ, ಸ್ಪ್ರಿಂಗ್, ಪ್ಲಾಸ್ಟಿಕ್ ಪಟ್ಟಿಗಳು ಹಾಗೂ ಪೆಯಿಂಟ್ ಬಾಕ್ಸನ್ನು ಎದುರಿಗಿಟ್ಟುಕೊಂಡು ಪ್ಲಾಸ್ಟಿಕ್ ಕತ್ತರಿಸುತ್ತಾ, ಸ್ಪ್ರಿಂಗ್‌ಗಳನ್ನು ಬಗ್ಗಿಸುತ್ತಾ ಕೂತುಬಿಟ್ಟಳು. ಅದನ್ನು ಕಂಡು ಟೇಲರ್‌ಳ ತಾಯಿ ಟ್ರಿಸಿಯಾ ತನಗೆ ತಾನೇ ಹೇಳಿಕೊಂಡಳು: 'ಸ್ಕೂಲ್‌ನಲ್ಲಿ ಯಾವುದೋ ಹೊಸ ಪ್ರಯೋಗದ ಬಗ್ಗೆ ಹೇಳಿಕೊಟ್ಟಿರಬೇಕು. ಅದನ್ನೇ ಈಗ ಮಾಡಿ ತೋರಿಸಲು ಕೂತಿದ್ದಾಳೆ ಅನ್ಸುತ್ತೆ. ನೋಡೋಣ. ಅದೇನು ಮಾಡ್ತಾಳೋ ಮಾಡಲಿ...'
ಹೀಗೇ ಒಂದು ಗಂಟೆ ಕಳೆಯಿತು. ಅಷ್ಟು ಹೊತ್ತೂ ತನ್ನದೇ ಕೆಲಸದಲ್ಲಿ ಮುಳುಗಿದ್ದ ಟೇಲರ್ ಕಡೆಗೊಮ್ಮೆ ಖುಷಿಯಿಂದ ತಲೆಯೆತ್ತಿದಳು. ಅವಳ ಕೈಯಲ್ಲಿ ಹೇರ್ ಕ್ಲಿಪ್ ಇತ್ತು. ಅದನ್ನೇ ಮೆಚ್ಚುಗೆಯಿಂದ ನೋಡುತ್ತಾ-'ಮಮ್ಮೀ, ಇದಕ್ಕೆ ಯಾವ ಕಲರ್ ಹಚ್ಚಲಿ ಎಂದು ಪ್ರಶ್ನಿಸಿದಳು. ಆ ಕಡೆಯಿಂದ ಉತ್ತರ ಬರುವ ಮೊದಲೇ ಕೆಂಪು ಬಣ್ಣದ ಡಬ್ಬಿಯೊಳಕ್ಕೆ ಬ್ರಷ್ ಅದ್ದಿದಳು. ಮುಂದಿನ ಹದಿನೈದು ನಿಮಿಷದಲ್ಲಿ, ಅವಳು ತಾನೇ ಕೈಯಾರೆ ತಯಾರಿಸಿದ ಹೇರ್ ಕ್ಲಿಪ್, ಒಂದಷ್ಟು ಹೊತ್ತು ಬಿಸಿಲಿನಲ್ಲಿ ಮೈ ಒಣಗಿಸಿಕೊಂಡು ತಲೆಗೇರಲು ಸಿದ್ಧವಾಗಿತ್ತು. ಆಗ, ತನ್ನನ್ನೇ ಹೆಮ್ಮೆಯಿಂದ ನೋಡುತ್ತಿದ್ದ ಅಮ್ಮನನ್ನು ಗಮನಿಸಿ ಹೇಳಿದಳು:'ಮಮ್ಮೀ, ನಾಳೆಯಿಂದ ಈ ಥರದ ಕ್ಲಿಪ್‌ಗಳನ್ನು ಮಾಡಿ ಮಾರ್ಲಾ?'
'ಛೆ, ಛೆ, ಮಾರೋದೆಲ್ಲ ಯಾಕಮ್ಮ? ನಿಂಗೆ ಎಷ್ಟು ಬೇಕೋ ಅಷ್ಟು ಮಾಡಿಕೋ ಸಾಕು' ಅಂದಳು ಟ್ರಿಸಿಯಾ.
'ಹಾಗಲ್ಲ ಮಮ್ಮೀ, ಹೇರ್‌ಕ್ಲಿಪ್‌ನ ಮಾರಿದ್ರೆ ದುಡ್ಡು ಬರ್ತದೆ ಅಲ್ವಾ?'
'ದುಡ್ಡು ಕೊಡಲಿಕ್ಕೆ ನಾವಿಲ್ವೇನೇ? ನಿಮ್ ಡ್ಯಾಡಿಗೆ ಕೇಳು, ಕೊಡ್ತಾರೆ...'
'ಮಮ್ಮೀ, ಹೀಗೆ ಸಂಪಾದಿಸೋ ದುಡ್ಡು ನನ್ನ ಖರ್ಚಿಗಲ್ಲ ಮಮ್ಮೀ...'
'ಮತ್ತೆ? ಯಾಕೆ ಆ ದುಡ್ಡು?'
'ಮಮ್ಮಿ, ಏನ್ಗೊತ್ತಾ? ಕ್ಲಿಪ್ ಮಾರಿದ್ರೆ ಒಂದಷ್ಟು ದುಡ್ಡು ಸಿಗುತ್ತೆ ಅಲ್ವಾ? ಅದರಿಂದ ಒಂದು ಟೆಡ್ಡಿ ಬೇರ್ ತಗೊಂಡು ನನ್ನ ಫ್ರೆಂಡ್‌ಗೆ ಕೊಡ್ಬೇಕು ಅಂತ ಆಸೆ. ಪಾಪ, ಅವ್ಳು ಆಸ್ಪತ್ರೇಲಿದಾಳೆ... ಅವಳಿಗೆ ಕ್ಯಾನ್ಸರಂತೆ.'
ಮಗಳ ಮಾತು ಕೇಳುತ್ತಿದ್ದಂತೆಯೇ ಟ್ರಿಸಿಯಾಗೆ ಕಣ್ತುಂಬಿ ಬಂತು. ಹೇಗೆ ಪ್ರತಿಕ್ರಿಯಿಸುವುದೋ ಗೊತ್ತಾಗದೆ ಆಕೆ ಚಡಪಡಿಸುತ್ತಿದ್ದಾಗಲೇ ಟೇಲರ್ ಮಾತು ಮುಂದುವರಿಸಿದಳು: 'ಮಮ್ಮಿ, ನಾನು ದಿನಾಲೂ ಒಂದಷ್ಟು ಹೇರ್‌ಕ್ಲಿಪ್ ಮಾರ್ತಾ ಬಂದ್ರೆ 50 ಟೆಡ್ಡಿ ಬೇರ್ ತಗೊಳ್ಳೋಕೆ ಆಗುವಷ್ಟು ಹಣ ಹೊಂದಿಸಬಹುದು ಅಲ್ವಾ? ಯಾಕಂದ್ರೆ, ನನ್ನ ಫ್ರೆಂಡ್ ಇದಾಳಲ್ಲ; ಅದೇ ಆಸ್ಪತ್ರೇಲಿ ಕ್ಯಾನ್ಸರ್‌ನಿಂದ ಬಳಲ್ತಾ ಇರುವ 50ಕ್ಕೂ ಹೆಚ್ಚು ಮಕ್ಕಳಿವೆ. ಅವರಿಗೆಲ್ಲಾ ಒಂದೊಂದು ಟೆಡ್ಡಿಬೇರ್ ಕೊಡಬೇಕು ಅಂತ ಆಸೆ ಮಮ್ಮೀ...'
ಉಹುಂ, ಅದು ಏಳು ವರ್ಷದ ಹುಡುಗಿಯೊಬ್ಬಳು ಆಡುವಂಥ ಮಾತಾಗಿರಲಿಲ್ಲ. ಚಿಕ್ಕ ಪುಟ್ಟದ್ದಕ್ಕೆಲ್ಲ ಹಠ ಹಿಡಿಯುತ್ತಾ ತರಲೆ ಮಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಟೇಲರ್, ತುಂಬಾ ಭಿನ್ನವಾಗಿ ಯೋಚಿಸಿದ್ದಳು. ಮಗಳ ಕನಸು ನನಸಾಗುತ್ತೋ ಇಲ್ಲವೋ ಎಂಬುದರ ಬಗ್ಗೆ ಟ್ರಿಸಿಯಾ ಯೋಚಿಸಲಿಲ್ಲ. ಮಗಳ ಪ್ರಬುದ್ಧ ಯೋಚನೆಯೇ ಅವಳಲ್ಲಿ ರೋಮಾಂಚನ ಉಂಟು ಮಾಡಿತ್ತು. ಆಕೆ ತಕ್ಷಣವೇ ಹೇಳಿದಳು: ಕ್ಲಿಪ್‌ಗಳನ್ನು ಮಾರಿ ಐವತ್ತಲ್ಲ, ನೂರು ಟೆಡ್ಡಿ ಬೇರ್‌ಗೂ ದುಡ್ಡು ಹೊಂದಿಸಬಹುದು ಮಗಳೇ. ನಾಳೆಯಿಂದಾನೇ ಕೆಲ್ಸ ಶುರು ಮಾಡು. ನಿಂಗೆ ಹೆಲ್ಪರ್ ಥರಾ ನಾನೂ ಇರ್ತೀನಿ. ಆದ್ರೆ ಕ್ಲಿಪ್‌ಗಳನ್ನು ಮಾರುವ ಕೆಲಸ ಮಾತ್ರ ನನ್ನದು...'
ಇದಿಷ್ಟೂ ಮಾತುಕತೆ ನಡೆದದ್ದು 1997ರ ಅಕ್ಟೋಬರಿನಲ್ಲಿ. ಅದೇ ತಿಂಗಳು ಶುರುವಾಗಿದ್ದೇ ಟೇ-ಬೇರ್ ಕಂಪನಿ. 'ಟೇ' ಎಂಬುದು ಟೇಲರ್‌ಳ ಹೆಸರಿನ ಶಾರ್ಟ್ ಫಾರಂ. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಟೆಡ್ಡಿ ಬೇರ್ ಕೊಡಬೇಕು ಎಂಬ ದಿವ್ಯ ಯೋಚನೆಯೊಂದು ಏಳು ವರ್ಷದ ಟೇಲರ್‌ಗೆ ಬಂದದ್ದು ಹೇಗೆಂದರೆ-ಈ ಹುಡುಗಿಯ ಇಬ್ಬರು ಅಜ್ಜಿಯರೂ ಕ್ಯಾನ್ಸರ್‌ನಿಂದಲೇ ಮೃತಪಟ್ಟರು. ಪುಟ್ಟ ಹುಡುಗಿಯ ಪುಟಾಣಿ ಮನಸ್ಸು ಈ ದುರ್ಘಟನೆಯನ್ನು ಮರೆಯುವ ಮೊದಲೇ ಸಹಪಾಠಿಯೊಬ್ಬಳು ಅದೇ ಕ್ಯಾನ್ಸರ್‌ಗೆ ತುತ್ತಾಗಿ ಆಸ್ಪತ್ರೆ ಸೇರಿದ ಸುದ್ದಿ ಬಂದಿತ್ತು. ಸೋಂಕು ಹರಡಬಹುದು ಎಂಬ ಕಾರಣದಿಂದ ಆಸ್ಪತ್ರೆಗೆ ಬಂದವರೆಲ್ಲ ಮಾಸ್ಕ್ ಕಟ್ಟಿಕೊಂಡೇ ಮಾತಿಗೆ ಶುರುವಿಡುತ್ತಿದ್ದರು. ಮಕ್ಕಳ ಮುಂದೆ ಕೂತ ಪೋಷಕರು, ಮಾತಾಡುವ ಬದಲು ಬಿಕ್ಕಳಿಸುತ್ತಿದ್ದರು. ಅಲ್ಲಿ ಮಕ್ಕಳನ್ನು ನಗಿಸುವವರಾಗಲಿ, ಅವರಿಗೆ ಸಮಾಧಾನ ಹೇಳುವವರಾಗಲಿ ಇರಲೇ ಇಲ್ಲ. ಅದನ್ನು ಕಂಡಾಗಲೇ ಏಳೇ ಏಳು ವರ್ಷದ ಟೇಲರ್ ಮೇರಿ ಕ್ರಾಬ್‌ಟ್ರೀಗೆ ಅನಿಸಿದ್ದು: ಆಸ್ಪತ್ರೇಲಿರುವ ಎಲ್ಲ ಮಕ್ಕಳಿಗೂ ಒಂದೊಂದು ಟೆಡ್ಡಿಬೇರ್ ಕೊಟ್ಟರೆ, ಅವರ ಮೊಗದಲ್ಲಿ ಖಂಡಿತ ನಗು ಅರಳುತ್ತೆ. ರಾತ್ರಿ ಹೊತ್ತು ಟೆಡ್ಡಿಯನ್ನೇ ತಬ್ಬಿಕೊಂಡು ಮಲಗಿಕೊಂಡರೆ, ಆ ಮಕ್ಕಳಿಗೆ ಎಂಥದೋ ಧೈರ್ಯ, ಖುಷಿ ಜೊತೆಯಾಗುತ್ತೆ...'
ಮಗಳ ಈ ಯೋಜನೆ ಯಶಸ್ಸು ಕಾಣುತ್ತೆ ಎಂದು ಟ್ರಿಸಿಯಾಗೆ ನಂಬಿಕೆಯಿರಲಿಲ್ಲ. ತೀರಾ ಚಿಲ್ಲರೆ ಬೆಲೆಯ ಹೇರ್ ಕ್ಲಿಪ್‌ಗಳನ್ನು ಮಾರಿ ಒಂದೆರಡಲ್ಲ, 50 ಟೆಡ್ಡಿಬೇರ್‌ಗಳನ್ನು ಖರೀದಿಸುವುದು ಹುಡುಗಾಟದ ಮಾತಲ್ಲ ತಾನೆ? ಏಕೆಂದರೆ, ಹೇರ್ ಕ್ಲಿಪ್‌ಗಳನ್ನು ಮಾರಲು ಅವರಿಗೆ ಅಂಗಡಿಯಿರಲಿಲ್ಲ. ವ್ಯಾಪಾರದಲ್ಲಿ ಅನುಭವವೂ ಇರಲಿಲ್ಲ. ಆದರೆ, ಹಾಗೆಲ್ಲ ಹೇಳಿ ಮಗಳಿಗೆ ನಿರಾಶೆ ಮಾಡಲು ಟ್ರಿಸಿಯಾಗೆ ಇಷ್ಟವಿರಲಿಲ್ಲ. ಸಾಕಷ್ಟು ಹೇರ್‌ಕ್ಲಿಪ್ ತಯಾರಿಸಿ ಅವುಗಳನ್ನೆಲ್ಲಾ ಮಗಳ ಮುಂದಿಟ್ಟು-'ಹೋಗಿ ಮಾರಾಟ ಮಾಡಿಕೊಂಡು ಬಾ. ನಿಂಗೆ ಗೆಲುವಾಗಲಿ' ಎಂದಳು. ಅಂದಿನಿಂದ, ಶಾಲೆ ಮುಗಿಸಿದ ತಕ್ಷಣವೇ ಸೂಪರ್‌ಬಜಾರ್‌ಗಳ ಮುಂದೆ ಹೇರ್‌ಕ್ಲಿಪ್‌ಗಳ ಮಾರಾಟಕ್ಕೆ ನಿಲ್ಲುವುದು ಟೇಲರ್‌ಳ ಕೆಲಸವಾಯಿತು. ಏಳು ವರ್ಷದ ಈ ಹುಡುಗಿಯ ವ್ಯಾಪಾರ ಕಂಡು ಹಲವರಿಗೆ ಅಚ್ಚರಿ, ಅನುಮಾನ. ಆ ಕುರಿತು ಟೇಲರ್ ತಲೆಕೆಡಿಸಿಕೊಳ್ಳಲಿಲ್ಲ. ಎದುರು ನಿಂತವರಿಗೆಲ್ಲ ತನ್ನ ಆಸೆ, ಕನಸುಗಳ ಬಗ್ಗೆ ಹೇಳಿಕೊಂಡಳು. ಹೆಲ್ಪ್ ಮಿ ಪ್ಲೀಸ್ ಎಂದು ಪ್ರಾರ್ಥಿಸಿದಳು.
ಕೆಲದಿನಗಳ ನಂತರ ಈ ಪುಟ್ಟ ಹುಡುಗಿಯ ದೊಡ್ಡ ಆಸೆ ಪತ್ರಿಕೆಗಳಿಗೆ ಗೊತ್ತಾಯಿತು. ಟೇಲರ್‌ಳ ಮುಗ್ಧತೆ ಮತ್ತು ಪ್ರಾಮಾಣಿಕತೆ ಎಲ್ಲ ಪತ್ರಕರ್ತರ ಕರುಳು ತಾಕಿತು. ಪರಿಣಾಮ, ಟೇಲರ್‌ಳ ಬಗ್ಗೆ ವಿಶೇಷ ವರದಿಗಳು ಪ್ರಕಟವಾದವು. ಈ ಹುಡುಗಿ ತಯಾರಿಸಿದ ಹೇರ್‌ಕ್ಲಿಪ್‌ಗಳನ್ನು ಖರೀದಿಸಲು ಪ್ರಾಯೋಜಕರೂ ಮುಂದೆ ಬಂದರು. ಪರಿಣಾಮ, ಕೆಲವೇ ದಿನಗಳಲ್ಲಿ 50 ಟೆಡ್ಡಿ ಬೇರ್ ಖರೀದಿಗೆ ಅಗತ್ಯವಿದ್ದಷ್ಟು ಹಣ ಸಂಗ್ರಹವಾಗಿಯೇ ಬಿಟ್ಟಿತು. ಮೊದಲ ಟೆಡ್ಡಿ ಬೇರ್‌ನೊಂದಿಗೆ ಗೆಳತಿಯ ಮುಂದೆ ನಿಂತಳು ಟೇಲರ್. ಹಾಸಿಗೆಯಲ್ಲಿದ್ದ ಆ ಹುಡುಗಿ ಛಕ್ಕನೆ ಮೇಲೆದ್ದು, ಮಾತಾಡದ ಆ ಗೊಂಬೆಯೇ ತನ್ನ ಜೀವವೇನೋ ಎಂಬಂತೆ ಅದನ್ನು ಬಾಚಿ ತಬ್ಬಿಕೊಂಡಿತು. ನಂತರ ಸ್ವಲ್ಪ ಹೊತ್ತು ಮಾತಾಡಿ, ಟೆಡ್ಡಿಯನ್ನು ತಬ್ಬಿಕೊಂಡೇ ನಿದ್ರೆಗೆ ಜಾರಿತು. ಟೇಲರ್‌ಳಿಂದ ಟೆಡ್ಡಿಬೇರ್‌ಗಳನ್ನು ಉಡುಗೊರೆಯಾಗಿ ಪಡೆದ ಉಳಿದ ಮಕ್ಕಳ ಸ್ಥಿತಿಯೂ ಬೇರೆ ಇರಲಿಲ್ಲ. ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಲ್ಲಿ ಅಮ್ಮನೊಂದಿಗೆ ಮನೆ ತಲುಪಿದ ಸ್ವಲ್ಪ ಹೊತ್ತಿಗೇ, ಅದೇ ಕ್ಯಾನ್ಸರ್ ಆಸ್ಪತ್ರೆಯಿಂದ ಟೇಲರ್‌ಗೆ ಸುದ್ದಿ ಬಂತು: 'ಮತ್ತಷ್ಟು ಟೆಡ್ಡಿ ಬೇರ್‌ಗಳು ಬೇಕು. ಅವುಗಳನ್ನು ತಬ್ಬಿಕೊಳ್ಳಲು ಮತ್ತಷ್ಟು ಮಕ್ಕಳು ಕಾಯುತ್ತಿವೆ...'
ಮರುದಿನದಿಂದ ಮತ್ತೆ ಸೂಪರ್ ಬಜಾರ್‌ನ ಮುಂದೆ ಹೇರ್ ಕ್ಲಿಪ್‌ಗಳನ್ನು ಮಾರಲು ಬಂದಳು ಟೇಲರ್. ಅವಳ ನಿಸ್ವಾರ್ಥ ಸೇವೆಯನ್ನು ಪತ್ರಿಕೆಗಳು ಮುಕ್ತಕಂಠದಿಂದ ಹೊಗಳಿದವು. ಪರಿಣಾಮ ಟೇಲರ್ ವಾಸವಿದ್ದಳಲ್ಲ: ಆ ಏರಿಯಾದಿಂದ 50ಕ್ಕೂ ಹೆಚ್ಚು ಮಕ್ಕಳು  ಹೇರ್‌ಕ್ಲಿಪ್ ತಯಾರಿಸುವ ಕೆಲಸಕ್ಕೆ ಬಂದವು. ಎಲ್ಲರ ನೆರವಿನಿಂದ ತಯಾರಾದ ಹೇರ್‌ಕ್ಲಿಪ್‌ಗಳನ್ನು ಗುಡ್ಡೆ ಹಾಕಿಕೊಂಡು -'ಈ ಹೇರ್‌ಕ್ಲಿಪ್‌ಗಳನ್ನು ಖರೀದಿಸಿ. ಕ್ಯಾನ್ಸರ್ ಇರುವ ಮಕ್ಕಳಿಗೆ ಟೆಡ್ಡಿಬೇರ್ ಖರೀದಿಸಲು ನೆರವಾಗಿ' ಎಂಬ ಬ್ಯಾನರ್ ಮುಂದಿಟ್ಟುಕೊಂಡು ಸೂಪರ್ ಮಾರ್ಕೆಟ್‌ಗಳ ಮುಂದೆ ನಿಲ್ಲುತ್ತಿದ್ದಳು ಟೇಲರ್. ಅದೊಂದು ಸಂಜೆ ಮಧ್ಯ ವಯಸ್ಕ ಆಂಟಿಯೊಬ್ಬಳು ಟೇಲರ್‌ಳನ್ನೇ ಹುಷಾರಾಗಿ ಗಮನಿಸಿದಳು. ಈ ಹುಡುಗಿ ಎಮೋಷನಲ್ ಮಾತುಗಳ ಮೂಲಕ ದುಡ್ಡು ಮಾಡಿಕೊಂಡು ಅದನ್ನು ಮತ್ತಾವುದಕ್ಕೋ ಬಳಸ್ತಾಳೆ ಎಂಬ ಗುಮಾನಿ ಆಕೆಗಿತ್ತು. ಟೇಲರ್‌ಳ ಮುಂದೆ ನಿಂತ ಆಕೆ ನಿಷ್ಠುರ ದನಿಯಲ್ಲಿ ಕೇಳಿದಳು: 'ನಿಜ ಹೇಳು. ಹೀಗೆ ದುಡಿದಿದ್ದನ್ನು ಏನು ಮಾಡ್ತೀಯ? ಹೀಗೆ ಸಿಗುವ ದುಡ್ಡಿಂದ ಏನು ತಗೋತೀಯ?'
ಟೇಲರ್ ತುಂಬ ಸಂಭ್ರಮದಿಂದಲೇ ತನ್ನ ಕನಸುಗಳ ಬಗ್ಗೆ, ಕೆಲಸದ ಬಗ್ಗೆ ಹೇಳಿಕೊಂಡಳು. ಅಷ್ಟಕ್ಕೇ ನಿಲ್ಲಿಸದೆ, ತನಗೆ ಯಾರೆಲ್ಲಾ ನೆರವಾಗಿದ್ದಾರೆ, ಈವರೆಗೆ ಎಷ್ಟು ಹಣ ಸಂಗ್ರಹವಾಗಿದೆ, ಎಷ್ಟು ಖರ್ಚಾಗಿದೆ, ಟೆಡ್ಡಿ ಬೇರ್‌ಗಳನ್ನು ಯಾವ್ಯಾವ ಆಸ್ಪತ್ರೆಗೆ ಹಂಚಲಾಗಿದೆ ಎಂದೂ ವಿವರಿಸಿದಳು. ಗಣ್ಯರಿಂದ, ಟೆಡ್ಡಿ ಪಡೆದ ಮಕ್ಕಳಿಂದ ತನಗೆ ಬಂದ ಮೆಚ್ಚುಗೆಯ ಪತ್ರಗಳನ್ನು ತೋರಿಸಿದಳು. ನಂತರ, ನೀವೂ ಒಂದು ಹೇರ್ ಕ್ಲಿಪ್ ತಗೊಳ್ಳಿ ಆಂಟಿ, ಪ್ಲೀಸ್... ಅಂದಳು. ಒಂದೆರಡಲ್ಲ, ಹತ್ತು ಹೇರ್‌ಕ್ಲಿಪ್‌ಗಳನ್ನು ಖರೀದಿಸಿದ ಆ ಹೆಂಗಸು, ಮರುಕ್ಷಣವೇ ಕುಸಿದು, ಟೇಲರ್‌ಳನ್ನು ಬಾಚಿ ತಬ್ಬಿಕೊಂಡು ಹೇಳಿದಳು: ಕಂದಾ, ನೀನು ಆರು ತಿಂಗಳ ಮುಂಚೆ ನನಗೆ ಸಿಗಬಾರದಿತ್ತಾ? ನನ್ನ ಎಂಟು ವರ್ಷದ ಮಗ ಐದು ತಿಂಗಳ ಹಿಂದೆ ಕ್ಯಾನ್ಸರಿನಿಂದ ಸತ್ತು ಹೋದ. ನಿನ್ನ ಟೆಡ್ಡಿ ಬೇರ್ ಸಿಕ್ಕಿದ್ರೆ ಅವನು ತುಂಬಾ ಖುಷಿಪಡ್ತಿದ್ದ...'
ನಂತರದ ದಿನಗಳಲ್ಲಿ ಟೇಲರ್‌ಳ ಬಳಗ ದೊಡ್ಡದಾಗುತ್ತಾ ಹೋಯಿತು. ಆಕೆಯ ಟೇ-ಬೇರ್ ಕಂಪನಿಗೆ ಒಂದು ಭಾವನಾತ್ಮಕ ನೆಲೆಗಟ್ಟು ಸಿಕ್ಕಿಬಿಟ್ಟಿತು. ಹೇರ್‌ಕ್ಲಿಪ್‌ಗಳನ್ನು ಖರೀದಿಸುವುದು ಅಮೆರಿಕನ್ನರ ಪಾಲಿಗೆ ಕರ್ತವ್ಯವೇ ಆಯಿತು. ಕೆಲವು ಮಕ್ಕಳು ತಾವೂ ಹೇರ್‌ಕ್ಲಿಪ್ ತಯಾರಿಸಿ ಅದನ್ನು ಟೇಲರ್‌ಳ ವಿಳಾಸಕ್ಕೆ ತಲುಪಿಸಿದರು. ಉದ್ಯಮಿಗಳು, 'ಹೇರ್‌ಕ್ಲಿಪ್ ಬೇಡ. ದುಡ್ಡು ಕೊಡ್ತೇವೆ ತಗೋ' ಎಂದರು. ಉಹುಂ, ನಾನು ಯಾರಿಂದಲೂ ದಾನ ಪಡೆಯಲಾರೆ. ಸೇವೆಯೊಂದೇ ನನ್ನ ಗುರಿ. ನನ್ನೊಂದಿಗೆ ಕೈ ಜೋಡಿಸುವ ಆಸೆಯಿದ್ದರೆ ಹೇರ್‌ಕ್ಲಿಪ್ ಖರೀದಿಸಿ ಎಂದಳು ಟೇಲರ್. ಮಗಳ ಹೆಸರಿಗೆ ಬಂದ ಪ್ರತಿಯೊಂದು ಪೈಸೆಗೂ ಟೇಲರ್‌ಳ ತಂದೆ ಲೆಕ್ಕ ಬರೆದು, ಅದನ್ನು ವರ್ಷ ವರ್ಷವೂ ಸಾರ್ವಜನಿಕರ ಮುಂದಿಟ್ಟ. ವ್ಯವಹಾರದಲ್ಲಿನ ಈ ಪಾರದರ್ಶಕತೆ, ಟೇ-ಬೇರ್ ಕಂಪನಿಯ ಮೇಲಿದ್ದ ನಂಬಿಕೆಯನ್ನು ಮತ್ತಷ್ಟು ಗಟ್ಟಿ ಮಾಡಿತು. ಟೇಲರ್‌ಳ ಹೆಸರು, ಕ್ಯಾಲಿಫೋರ್ನಿಯಾದ ಗಡಿದಾಟಿ ಅಮೆರಿಕದ ಮೂಲೆಮೂಲೆಯನ್ನೂ ತಲುಪಿತು. ಕ್ಯಾನ್ಸರ್‌ಪೀಡಿತ ಮಕ್ಕಳಿಗೆ ಖುದ್ದಾಗಿ ಟೆಡ್ಡಿಬೇರ್ ವಿತರಿಸುವಂತೆ ಅಮೆರಿಕದ ನೂರಕ್ಕೂ ಹೆಚ್ಚು ಆಸ್ಪತ್ರೆಗಳಿಂದ ಕರೆ ಬಂತು. ಪರಿಣಾಮ, ಆಸ್ಪತ್ರೆಯಲ್ಲಿದ್ದ ಮಕ್ಕಳನ್ನು ತಲುಪಿದ ಟೆಡ್ಡಿಬೇರ್‌ಗಳ ಸಂಖ್ಯೆ 1000ದ ಗಡಿ ದಾಟಿತು. ಈ ಸೇವಾ ಕಾರ್ಯದ ಮಧ್ಯೆ ಟೇಲರ್ ಓದುವುದನ್ನು ಮರೆಯಲಿಲ್ಲ. ಯೌವನಕ್ಕೆ ಕಾಲಿಡುವ ವೇಳೆಗೆ ಆಕೆ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಕ್ರೀಡಾಪಟುವಾದಳು. ಅಪ್ಪನಿಂದ ಪಾಕೆಟ್‌ಮನಿ ಪಡೆದೇ ಡಿಗ್ರಿ ಮುಗಿಸಿದಳು.
ವೈದ್ಯಕೀಯ ಆವಿಷ್ಕಾರಗಳು ಮುಂದುವರಿದಂತೆಲ್ಲಾ ಕ್ಯಾನ್ಸರ್‌ಗೆ ತಕ್ಕಮಟ್ಟಿಗೆ ಕಡಿವಾಣ ಹಾಕಲೂ ಈಗ ಸಾಧ್ಯವಾಗಿದೆ. ಹಾಗಾಗಿ ಈ ದಿನಗಳಲ್ಲಿ ಟೆಡ್ಡಿಬೇರ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗಿರಬಹುದು. ಆದರೆ, ಟೇ-ಬೇರ್ ಕಂಪನಿಯ ನಿಸ್ವಾರ್ಥ ಸೇವೆ ನಿಂತಿಲ್ಲ. ಈವರೆಗೂ 30 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಟೇ-ಬೇರ್‌ನ ಟೆಡ್ಡಿಗಳು ತಲುಪಿವೆ. ಜೊತೆಗಿರುವುದು, ತಮ್ಮ ಜೀವದ ಮತ್ತೊಂದು ಭಾಗವೇನೋ ಎಂಬಂಥ ಮಮತೆಯಿಂದ ಕ್ಯಾನ್ಸರ್‌ಪೀಡಿತ ಮಕ್ಕಳು ಟೆಡ್ಡಿಯನ್ನು ತಬ್ಬಿಕೊಂಡಿವೆ. ಕ್ಯಾನ್ಸರ್ ಗೆದ್ದ ಮಕ್ಕಳು ಟೇಲರ್‌ಳ ನೆನಪಿಗೆಂದು ಟೆಡ್ಡಿಯನ್ನು ಮನೆಗೆ ಹೊತ್ತೊಯ್ದಿವೆ. ಕೆಲವರು, ಮಕ್ಕಳೊಂದಿಗೆ, ಟೆಡ್ಡಿಗಳನ್ನೂ ಕಾಫಿನ್ ಬಾಕ್ಸ್‌ನಲ್ಲಿಟ್ಟು ಸಂಸ್ಕಾರ ಮಾಡಿದ್ದಾರೆ. ಮಕ್ಕಳು ಮಾತ್ರವಲ್ಲ, ಕ್ಯಾನ್ಸರ್‌ಪೀಡಿತ ಅಜ್ಜ-ಅಜ್ಜಿಯರೂ, ನಮಗೊಂದು ಟೆಡ್ಡಿಬೇರ್ ತಂದುಕೊಡಿ. ಅದನ್ನು ತಬ್ಬಿಕೊಂಡು ಮಲಗಿದ್ರೆ ಏನೋ ಸಮಾಧಾನ ಎಂದು ಮಕ್ಕಳ ಮುಂದೆ ಹೇಳಿಕೊಂಡಿದ್ದಾರೆ. ಟೆಡ್ಡಿಗಳು ತಲುಪಿದ ಮರುದಿನವೇ- 'ಮಗಳೇ, ನಿನ್ನ ಸೇವೆ ಮುಂದುವರಿಯಲಿ. ನಿನಗೆ ಥ್ಯಾಂಕ್ಸ್ ಅಂಡ್ ಥ್ಯಾಂಕ್ಸ್‌' ಎಂದು ಟೇಲರ್‌ಗೆ ಪತ್ರ ಬರೆದಿದ್ದಾರೆ.
ಅಂದ ಹಾಗೆ, ಈ ಹುಡುಗಿ ಟೆಡ್ಡಿಬೇರ್‌ಗಳನ್ನು ಕ್ಯಾನ್ಸರ್‌ಪೀಡಿತರಿಗೆ ಕೊಡುತ್ತಾಳಲ್ಲ, ಅದರಲ್ಲೇ ಒಂದು ವಿಶೇಷವಿದೆ. ಪ್ರತಿಯೊಂದು ಟೆಡ್ಡಿಯನ್ನೂ ಆಕರ್ಷಕ ಪ್ಯಾಕ್‌ನಲ್ಲಿ ತುಂಬಲಾಗಿರುತ್ತದೆ. ಅದರ ಮೇಲೆ ಮುದ್ದಾದ ಅಕ್ಷರಗಳಲ್ಲಿ ಅದನ್ನು ಪಡೆವ ಮಗುವಿನ ಹೆಸರು ಬರೆದು, ಬೇಗ ಹುಷಾರಾಗು, ಯಾವಾಗ್ಲೂ ಖುಷಿಯಾಗಿರು ಎಂಬ ಸಂದೇಶವನ್ನೂ ಜೊತೆಗಿಟ್ಟು ತನ್ನ ಬಳಗದ ಮಕ್ಕಳೊಂದಿಗೆ ಆಸ್ಪತ್ರೆಗೆ ಹೋಗುತ್ತಾಳೆ ಟೇಲರ್. ಅಲ್ಲಿನ ಮಕ್ಕಳ ಮುಂದೆ ನಿಂತು-ಟೆಡ್ಡಿ ಬೇರ್‌ನ ಪ್ಯಾಕ್ ಮಾಡಿದ್ದು ಯಾರು? ಕವರ್‌ಗೆ ಫಳಫಳ ಹೊಳೆವ ಹಾಳೆ ತಂದಿದ್ದು ಯಾರು? ಸಂದೇಶವಾಗಿರುವ ಮುದ್ದು ಅಕ್ಷರಗಳ ಒಡೆಯರು ಯಾರು ಎಂದೆಲ್ಲಾ ವಿವರಿಸುತ್ತಾಳೆ. ನಂತರ- ನಿನ್ನ ಒಳಿತಿಗಾಗಿ ನಾವೆಲ್ರೂ ಪ್ರಾರ್ಥಿಸ್ತಾ ಇರ್ತೇವೆ. ನೀನು ಖುಷಿಯಾಗಿರು, ಗೆಲುವಾಗಿರು, ನೆಮ್ಮದಿಯಾಗಿರು ಎಂದು ಸಮಾಧಾನ ಹೇಳುತ್ತಾಳೆ. ಉಹುಂ, ನಾನು ಖಂಡಿತ ಮಹತ್ವದ್ದೇನೂ ಮಾಡಿಲ್ಲ. ಕ್ಯಾನ್ಸರ್‌ನಿಂದ ಕಂಗಾಲಾದ ಮಕ್ಕಳ ಮೊಗದಲ್ಲಿ ಮಂದಹಾಸ ತರಬೇಕು ಎಂಬ ಆಸೆಯಿತ್ತು. ಅದರಲ್ಲಿ ಯಶಸ್ಸು ಕಂಡಿದ್ದೀನಿ. ಆಸ್ಪತ್ರೆಯಲ್ಲಿರುವ ಮಕ್ಕಳಿಗಾಗಿ ಇನ್ನೂ 1000 ಟೆಡ್ಡಿಗಳನ್ನು ಕೊಡಲಿಕ್ಕೂ ನಾನು ರೆಡಿ ಅನ್ನುತ್ತಾಳೆ.
ಟೇ-ಬೇರ್ ಕಂಪನಿಯ ಬಳಗದಲ್ಲೀಗ 3000 ಮಕ್ಕಳಿದ್ದಾರೆ. ಅವರಿಗೆ, ವಾರಕ್ಕೊಮ್ಮೆ ತರಗತಿ ನಡೆಸುವ ಟೇಲರ್, ಅಲ್ಲಿ ಹೇರ್‌ಕ್ಲಿಪ್ ತಯಾರಿಸುವುದನ್ನು ಹೇಳಿಕೊಡ್ತಾಳೆ. ನಂತರದಲ್ಲಿ ಮಕ್ಕಳ ಕೌಶಲ ಹೇರ್‌ಕ್ಲಿಪ್ ಆಗಿ ಆನಂತರದಲ್ಲಿ, ಟೆಡ್ಡಿಯಾಗಿ ಬದಲಾಗುತ್ತದೆ. ಟೇಲರ್‌ಳ ನಿಸ್ವಾರ್ಥ ಸೇವೆ ಅಮೆರಿಕದಲ್ಲಿ ಮನೆಮಾತು. ಸಿಎನ್‌ಎನ್ ಚಾನೆಲ್ ಈಕೆಯನ್ನು ಸಂದರ್ಶಿಸಿದೆ. ಎಲ್ಲ ಪತ್ರಿಕೆಗಳೂ ಟೇಲರ್‌ಳ ಸೇವೆಯ ಬಗ್ಗೆ ಪುಟಗಟ್ಟಲೆ ಬರೆದಿವೆ. ಹೇರ್‌ಕ್ಲಿಪ್‌ಗಳ ಮಾರಾಟದಿಂದ ಬಂದ ಹಣ ಟೆಡ್ಡಿಗಳ ಖರೀದಿಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಟೇಲರ್‌ಳ ಜತೆಗಿದ್ದ ಮಕ್ಕಳು ಸನ್‌ಗ್ಲಾಸ್‌ಗಳನ್ನು ತಯಾರಿಸಿ, -'ಟೇ, ನಿನ್ನ ಬೆಂಬಲಕ್ಕೆ ನಾವಿದ್ದೇವೆ, ಹೆದರಬೇಡ ಎಂದಿದ್ದಾರೆ. ಹೇರ್‌ಕ್ಲಿಪ್ ಖರೀದಿಸಲೆಂದೇ ನೂರಾರು ಮೈಲಿ ದೂರದಿಂದ ಬಂದವರಿದ್ದಾರೆ. ಹೇರ್‌ಕ್ಲಿಪ್ ಕೊಂಡವರು, ಟೆಡ್ಡಿಯನ್ನು ಪಡೆದವರು- ಎರಡೂ ಕಡೆಯಲ್ಲಿ ಕಾಣುವುದು ಧನ್ಯತಾ ಭಾವ. ಅದನ್ನು ನೆನೆದು ಟೇಲರ್ ಹೇಳುತ್ತಾಳೆ: ದೇವರು ಕಾಣಿಸೋದಿಲ್ಲ ಅಂತಾರಲ್ಲ; ಅದು ಸುಳ್ಳು. ಹೇರ್‌ಕ್ಲಿಪ್ ಖರೀದಿಸುವ, ಟೆಡ್ಡಿಯನ್ನು ಪಡೆಯುವವರ ರೂಪದಲ್ಲಿ ದೇವರು ನನಗೆ ಮೇಲಿಂದ ಮೇಲೆ ಕಾಣಿಸ್ತಾನೇ ಇರ್ತಾನೆ.
ಟೇಲರ್‌ಳಿಂದ ನಾವೆಲ್ಲಾ ಕಲಿಯಬೇಕಾದ್ದು ಬಹಳಷ್ಟಿದೆಯಲ್ಲವೇ?

- ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com