ವಿಜ್ಞಾನಿಗಳು ನಮ್ಮನ್ನು ಮಂಗಳನತ್ತ ಎತ್ತಿಕೊಂಡು ಹೋದರೆ, ರಾಜಕಾರಣಿಗಳು ಪಾತಾಳಕ್ಕೆ ಕೊಂಡೊಯ್ಯುತ್ತಾರೆ. ದೇಶ ಮಂಗಳಕ್ಕೆ ಲಗ್ಗೆಯಿಟ್ಟರೂ, ನಮ್ಮ ರಾಜಕಾರಣಿಗಳಲ್ಲಿ ಯಾವುದೇ ಬದಲಾವಣೆ ಆಗಿ, ದೇಶಕ್ಕೆ ಮಂಗಳವಾಗುವುದು ಸಾಧ್ಯವಿಲ್ಲ ಅನಿಸುತ್ತಿದೆ.
ಏಕೆ ಹೀಗೆ ಹೇಳಬೇಕಾಗಿದೆಯೆಂದರೆ, ಎಲ್ಲಾ ಅಸ್ತ್ರಗಳನ್ನೂ ಪರಸ್ಪರ ಪ್ರಯೋಗಿಸಿಕೊಂಡ ರಾಜಕೀಯ ಪಕ್ಷಗಳು, ಈಗ ಸರ್ದಾರ್ ಪಟೇಲರ ಹೆಸರನ್ನು ಹಿಡಿದುಕೊಂಡು ಹೋಡೆದಾಡುತ್ತಿವೆ. ನರೇಂದ್ರ ಮೋದಿ, ಸರ್ದಾರ್ ಪಟೇಲ್ ತಮ್ಮವರೆಂದು ವಾದಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಅದಕ್ಕಾಗಿ ಪ್ರಪಂಚದ ಅತಿದೊಡ್ಡ ಪ್ರತಿಮೆಯನ್ನು ಸ್ಥಾಪಿಸಿ ಸಾಬೀತು ಪಡಿಸಿಕೊಳ್ಳಹೊರಟಿರುವುದು ತಪ್ಪು. ಮುಖ್ಯವಾಗಿ, ಈ ಮೂರ್ತಿಯ ಬಗ್ಗೆ ಉದ್ಭವವಾಗಿರುವ ರಾಜಕೀಯ, ದೇಶವನ್ನೇ ಇಬ್ಭಾಗಮಾಡಬಲ್ಲದು.
ನಮ್ಮದು ನಿಜಕ್ಕೂ ಮೂರ್ತಿಗಳ ಮೋಹಕ್ಕೆ ಬಿದ್ದ ದೇಶ. ಕುಳಿತ/ನಿಂತ/ ಕೈಬೀಸುತ್ತಿರುವ ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಇಂದಿರಾರ ಪ್ರತಿಮೆಗಳು ಎಲ್ಲಾ ಊರಿನಲ್ಲೂ ಕಾಣಿಸುತ್ತವೆ. ಒಂದೊಂದು ಪ್ರತಿಮೆಗಳಂತೂ "ಇದು ಯಾರದ್ದು?" ಎನ್ನುವ ಸಂಶಯ ಮೂಡಿಸುತ್ತವೆ. ವಿಧಾನಸೌಧದ ಮುಂದೆ ಪ್ರತಿಷ್ಠಾಪಿಸಲಾಗಿದ್ದ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಅವರನ್ನು ಹೋಲುತ್ತಲೇ ಇರಲಿಲ್ಲ. ವಿಧೌನಸೌಧದ ಆವರಣದಿಂದ ಅದನ್ನು ತೆರವುಗೊಳಿಸುವ ಮಜಬೂರಿಗೆ ಅಧಿಕಾರಿಗಳು ಬಿದ್ದರು. ಅದರ ಜಾಗಕ್ಕೆ ಬಂದ ಇನ್ನೊಂದು ಪ್ರತಿಮೆಯ ತಲೆಯ ಮೇಲಿನ ಪೇಟ ಚೆನ್ನಾಗಿತ್ತಾದರೂ, ಮುಖ ಬೇರೆ ಯಾರದ್ದೋ ಎನ್ನುವಂತಿತ್ತು. ಶಿಲ್ಪಕಲೆಗೆ ನಿಜಕ್ಕೂ ನ್ಯಾಯ ಒದಗಿಸಿದ ಮಹಾನ್ ಕಲಾವಿದರು ಹಲವರಿದ್ದಾರೆ. ದೇವಿಪ್ರಸಾದ್ ಚೌಧರಿಯವರ ದೆಹಲಿಯ ವೆಲ್ಲಿಂಗ್ಟನ್ ಕ್ರೆಸೆಂಟಿನಲ್ಲಿರುವ ದಂಡಿ ಯಾತ್ರೆಯ ಪ್ರತಿಮೆ, ಪಾಟ್ನಾದಲ್ಲಿನ ಯೋಧರ ಪ್ರತಿಮೆಗಳು ಅದ್ಭುತ ಎನಿಸುವಂತಿವೆ. ಸಂಸತ್ತಿನ ಗೇಟ್ ನಂಬರ್ 1ರ ಎದುರುಗಡೆಯಿರುವ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ನೋಡಿದಾಗ, ಪ್ರತಿಮೆ ರಾಮ್ ವನಜಿಯವರನ್ನು ಬಿಟ್ಟು ಬೇರೇ ಯಾರಿಂದಲೂ ಅಷ್ಟು ಸುಂದರವಾಗಿ ಗಾಂಧೀಜಿ ಮೂರ್ತಿ ರೂಪದಲ್ಲಿ ಮೂಡುತ್ತಲೇ ಇರಲಿಲ್ಲವೇನೋ ಅನಿಸುತ್ತದೆ.
ನರೇಂದ್ರ ಮೋದಿ ಮತ್ತು ರಾಜಕೀಯ ವಿಶ್ವದಲ್ಲಿರುವ ಇನ್ನಿತರ ನಾಯಕರಿಗೆ ಸೌಂದರ್ಯ ಪ್ರಜ್ಞೆ ಅಷ್ಟೊಂದಿಲ್ಲ. ಅದಕ್ಕಾಗಿ ಅವರುಗಳು ಕಳಪೆ ಪರ್ಯಾಯ ಮಾರ್ಗವನ್ನು ಅನುಸರಿಸುತ್ತಾರೆ. ದೊಡ್ಡ, ಪೊಳ್ಳು ಮೂರ್ತಿಗಳನ್ನು ನಿರ್ಮಿಸಲು ಮುಂದಾಗುತ್ತಾರೆ. ಈ ಬೃಹತ್ ಯೋಜನೆಗೆ ಸುಮಾರು 70, 000 ಜನರು ಜಾಗ ಕಳೆದುಕೊಂಡಿದ್ದಾರೆ. "ನಮ್ಮ ಪ್ರತಿಭಟನೆಯನ್ನು 'ಸುಮ್ಮನಾಗಿಸಲಾಯಿತು"' ಎನ್ನುತ್ತಾರೆ ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದವರು.
ಸರ್ದಾರ್ ಪಟೇಲರು "ನಿಜವಾದ ಜ್ಯಾತ್ಯತೀತರಾಗಿದ್ದರು", ಇನ್ನೊಂದೆಡೆ ಕಾಂಗ್ರೆಸ್ "ವೋಟ್ ಬ್ಯಾಂಕ್ ಜಾತ್ಯತೀತತೆಯನ್ನು" ಅನುಸರಿಸುತ್ತಿದೆ ಎನ್ನುವ ಮೂಲಕ ನರೇಂದ್ರ ಮೋದಿ ಸರ್ದಾರ್ ಪಟೇಲರ ಪ್ರತಿಮೆಯ ಹಿಂದಿರುವ ರಾಜಕೀಯವನ್ನು ಹೊರಗೆಡವಿದರು. ಎಲ್ಲಾ ಪಕ್ಷಗಳ ಕಥೆಯೂ ಅಷ್ಟೆ. ಬಿಜೆಪಿ "ವೋಟ್ ಬ್ಯಾಂಕ್ ಹಿಂದುತ್ವ" ದ ಹಿಂದೆ ಬಿದ್ದರೆ, ಮುಸ್ಲಿಂ ಪಕ್ಷಗಳು "ವೋಟ್‌ಬ್ಯಾಂಕ್ ಇಸ್ಲಾಂ"ನ ಹೆಗಲೇರಿವೆ. ಸಿಖ್ಖರು, ಕ್ರಿಶ್ಚಿಯನ್ನರು, ಭೂಮಿಹಾರಿಗಳು, ನಾಯರ್‌ಗಳು..ಎಲ್ಲರೂ ಇದೇ ದಂಧೆಯಲ್ಲಿ ತೊಡಗಿದ್ದಾರೆ. ಸರ್ದಾರ್ ಪಟೇಲರು ಗಾಂಧಿಯವರಷ್ಟೇ ಹಿಂದು ಧರ್ಮ ಪರಿಪಾಲಕರಾಗಿದ್ದಕೂ ಅವರೆಂದೂ ಧರ್ಮವನ್ನು
ರಾಜಕೀಯದಲ್ಲಿ ಬಿಟ್ಟುಕೊಂಡವರಲ್ಲ. ನಿಜ ಹೇಳಬೇಕೆಂದರೆ, ಕೋಮುವಾದಿ ಶಕ್ತಿಗಳನ್ನು ಬಗ್ಗುಬಡಿಯುವುದೇ ಇವರುಗಳ ಜೀವನದ ಉದ್ದೇಶವಾಗಿತ್ತು. ಹಾಗಾಗೇ ಒಂದು ವೇಳೆ ಮೋದಿಯೇನಾದರೂ, ಸರ್ದಾರ್ ಪಟೇಲರನ್ನು ತಮ್ಮವರೆಂದು ವಾದಿಸುವುದಾದರೆ, ಪಟೇಲರಂತೆಯೇ ಅವರೂ ಕೂಡ "ನಿಜಕ್ಕೂ ಜಾತ್ಯತೀತರಾಗಿ" ತೋರಿಸಬೇಕು. ಅದು ಅವರಿಂದ ಸಾಧ್ಯವೇ?
ಪಟೇಲರು ಪ್ರಧಾನಿ ಆಗಿದ್ದರೆ ನೆಹರೂಗಿಂತ ಉತ್ತಮವಾಗಿ ದೇಶವನ್ನು ಮುನ್ನಡೆಸುತ್ತಿದ್ದರು ಎಂದು ಮೋದಿ ಹೇಳುತ್ತಾರಾದರೂ, ತಮ್ಮ ಈ ಸರಳ ಸಿದ್ಧಾಂತದಲ್ಲಿ ಅಡಕವಾಗಿರುವ ಜಟಿಲತೆಯನ್ನು ಅವರು ಅರ್ಥಮಾಡಿಕೊಳ್ಳಬಲ್ಲರೇ? ಈ "ಆಗಿದ್ದರೆ" ಎನ್ನುವ ವಿಷಯದ ಮೇಲೆ ಪ್ರಪಂಚ ಇರುವವರೆಗೂ ಚರ್ಚೆ ಮಾಡಬಹುದು. ಸಿ. ರಾಜಗೋಪಾಲಾಚಾರಿ ಪ್ರಧಾನಮಂತ್ರಿಯಾಗಿದ್ದರೆ? ರಾಜೇಂದ್ರ ಪ್ರಸಾದ್ ಆಗಿದ್ದರೆ? ಇವರೆಲ್ಲರೂ ದೇಶವನ್ನು ಉತ್ತಮವಾಗೇ ನಡೆಸುತ್ತಿದ್ದರು. ಏಕೆಂದರೆ ಅವರ್ಯಾರಿಗೂ ನೆಹರೂರಂತೆ ತಮ್ಮ ಮನೆಯವರನ್ನು ರಾಜಕೀಯ ರಂಗದಲ್ಲಿ ಎಬ್ಬಿಸಿ ನಿಲ್ಲಿಸಬೇಕೆಂಬ ದೌರ್ಬಲ್ಯವಿರಲಿಲ್ಲ.
ಕಾಂಗ್ರೆಸ್‌ನಲ್ಲಿ ಅಭಿವೃದ್ಧಿಯಾದದ್ದು ಕೇವಲ ಕುಟುಂಬ ರಾಜಕಾರಣ. ಪ್ರಜಾಪ್ರಭುತ್ವದ ನಿಯಮಕ್ಕೆ ತದ್ವಿರುದ್ಧವಾದ ಅಭಿವೃದ್ಧಿಯಿದು. ಸ್ವಾತಂತ್ರ್ಯ ದೊರಕಿದಾಗ ಸಂಪ್ರದಾಯವಾದಿಗಳು ಮತ್ತು ಸಮಾಜವಾದಿಗಳ ಮಧ್ಯೆ ಸ್ಪಷ್ಟವಾದ ಭಿನ್ನತೆಯಿತ್ತು. ಕಾಂಗ್ರೆಸ್ ಸಮಾಜವಾದಿ ಪಕ್ಷದ ದಿಗಂತದಲ್ಲಿ ಜಯಪ್ರಕಾಶ್ ನಾರಾಯಣ್ ಮತ್ತು ಅಚ್ಯುತ್ ಪಟವರ್ಧನ್ ಅವರಿಂದ ಹಿಡಿದು ರಾಮ್ ಮನೋಹರ್ ಲೋಹಿಯಾ ಮತ್ತು ನರೇಂದ್ರ ದೇವಾರಂಥ ಮಿನುಗು ತಾರೆಗಳಿದ್ದವು. ಅವರನ್ನು ನೆಹರು ಬೆಂಬಲಿಸಲಿಲ್ಲ. ಸಮಾಜವಾದಿಯಾಗಿದ್ದ ನೆಹರು ಸಮಾಜವಾದದ ವಿರೋಧಿಗಳಾಗಿದ್ದ ಮೋರಾರ್ಜಿ ದೇಸಾಯಿ, ಎಸ್.ಕೆ. ಪಾಟೀಲ್ ಮತ್ತು ಜಗಜೀವನ್‌ರಾಮ್‌ರಂಥವರೊಂದಿಗೆ ಹೆಚ್ಚು ಆಪ್ತವಾದರು. ಎಸ್.ಕೆ. ಪಾಟೀಲ್ ಮತ್ತು ಜಗಜೀವನ್ ರಾಮ್ ಭಾರತವನ್ನು ವಿಚಿತ್ರ ನೀತಿಗಳ ಹುಚ್ಚಾಸ್ಪತ್ರೆಯಾಗಿ ಬದಲಾಯಿಸಿದರು. ಒಂದು ವೇಳೆ ಅವರು ಮತ್ತು ಜೆಪಿ ಭಾರತೀಯ ಸಮಾಜವಾದಿ ಪಕ್ಷದ ನೇತೃತ್ವ ವಹಿಸಿಕೊಂಡಿದ್ದರೆ ಹಾಗೂ ಪಟೇಲ್ ಮತ್ತು ರಾಜಗೋಪಾಲಾಚಾರಿ ಭಾರತೀಯ ಕನ್ಸರ್ವೇಟಿವ್ ಪಾರ್ಟಿಯನ್ನು ನಡೆಸಿದ್ದರೆ, ಆರೋಗ್ಯಕರ ವ್ಯವಸ್ಥೆಯೊಂದು ನಿರ್ಮಾಣವಾಗುತ್ತಿತ್ತು.
ಪಟೇಲರ ಬಗ್ಗೆ ಮಾತನಾಡಬೇಡ ಎಂದು ಮೋದಿಗೆ ಹೇಳಲು ಕಾಂಗ್ರೆಸ್‌ಗೆ ಈಗ ಯಾವ ನೈತಿಕ ಹಕ್ಕೂ ಇಲ್ಲ.
ಇಷ್ಟು ವರ್ಷ ಕಾಂಗ್ರೆಸ್ ಪಟೇಲರ ಹೆಸರನ್ನು ಅದುಮಿಡಲು ಪ್ರಯತ್ನಿಸಿದ್ದೇಕೆ? ಇಂದಿರಾ ಕುಟುಂಬದ ಗುಂಗಿಗೆ ಬಿದ್ದ ಕಾಂಗ್ರೆಸ್, ಪಟೇಲ್ ಮತ್ತು ನರಸಿಂಹ ರಾವ್ ಅವರ ಸಾಧನೆಯನ್ನು ಗುಂಡಿಯಲ್ಲಿ ಮುಚ್ಚಿಡಲು ಪ್ರಯತ್ನಿಸಿತು. ಆದರೆ ಅಂಥ ಮಹಾನ್ ಚೇತನಗಳ ಮಹತ್ವವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ನಿಜಕ್ಕೂ ಮಣ್ಣಿನಡಿ ಮುಚ್ಚಿಹೋಗುವುದು ಕುಟುಂಬ ರಾಜಕಾರಣವಷ್ಟೆ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣ ಅಸ್ವಾಭಾವಿಕವಾದದ್ದು. ಇದು ಎಷ್ಟು ಅಸ್ವಾಭಾವಿಕ ಎಂದರೆ, ನರೇಂದ್ರ ಮೋದಿ "ನಿಜವಾದ ಜಾತ್ಯತೀತತೆಯನ್ನು" ಹೊಗಳುತ್ತಿದ್ದಾರಲ್ಲಾ ಅದರಷ್ಟೆ!
- ಟಿಜೆಎಸ್ ಜಾರ್ಜ್