ಪಟೇಲರನ್ನು ಕೆತ್ತಿಟ್ಟಿರುವ ಆಪ್ತ ಪುಸ್ತಕ

ಭಾರತೀಯ ಸಿನಿಮಾಕ್ಕೆ ನೂರು ವರ್ಷ ತುಂಬಿದ್ದನ್ನು ಸಂಭ್ರಮಿಸುತ್ತ 'ಆರ್ಗನೈಸರ್' ನಿಯತಕಾಲಿಕವು ಹಿಂದಿನ ವಾರ ದೀಪಾವಳಿ ವಿಶೇಷಾಂಕವನ್ನು ತಂದಿತು. ಅದರಲ್ಲಿ ನನ್ನ ಸಂದರ್ಶನವನ್ನು ಪ್ರಮುಖವಾಗಿ ಪ್ರಕಟಿಸಲಾಗಿದೆ.
ಎರಡು ವರ್ಷಗಳ ಹಿಂದೆ ನನ್ನ ಬ್ಲಾಗ್ ಬರಹಗಳನ್ನು ಸಂಕಲಿಸಿ ಪುಸ್ತಕವೊಂದನ್ನು ಹೊರತಂದಾಗ ಖ್ಯಾತ ಪತ್ರಕರ್ತ ಎಂ. ಜೆ. ಅಕ್ಬರ್ ಅವರಿಗೆ ಮುನ್ನುಡಿ ಬರೆದುಕೊಡುವಂತೆ ವಿನಂತಿಸಿದ್ದೆ. ಅದನ್ನು ಮನ್ನಿಸಿದ ಅವರು ಮನೋಜ್ಞ ಬರಹವನ್ನೇ ನೀಡಿದರು. ನಾಲ್ಕು ಪುಟಗಳ ಬರಹದ ಕೊನೆಯ ಪ್ಯಾರಾದಲ್ಲಿ ಹೀಗೆ ಬರೆದಿದ್ದರು- 'ಆಡ್ವಾಣಿಯವರ ವೃತ್ತಿಜೀವನಕ್ಕೆ ಸಂಬಂಧಿಸಿ ಎಲ್ಲ ಪ್ರಶ್ನೆಗಳಿಗೂ ಈ ಪುಸ್ತಕ ಉತ್ತರ ನೀಡುವುದಿಲ್ಲ. ಆದರೆ ಒಂದಂಶವನ್ನಂತೂ ದೃಢಪಡಿಸುತ್ತದೆ. ಕೇಂದ್ರ ಸರ್ಕಾರದಲ್ಲಿ ಎರಡು ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಹಾಗೂ ವಾಜಪೇಯಿ ಸರ್ಕಾರದಲ್ಲಿ ಗೃಹಮಂತ್ರಿಯಾಗಿ. ಗೃಹಮಂತ್ರಿಯಾಗಿದ್ದಾಗ ಅವರ ಮನಸ್ಸು ಅಲ್ಲಿದ್ದರೂ ಹೃದಯ ವಾರ್ತಾ ಮತ್ತು ಪ್ರಸಾರ ಇಲಾಖೆಯತ್ತ ತುಡಿಯುತ್ತಿತ್ತು.'
ವಾಸ್ತವದಲ್ಲಿ ನಾನು ಎಂ. ಜೆ. ಅಕ್ಬರ್ ಅವರನ್ನು ಭೇಟಿ ಮಾಡಿದ್ದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವನಾಗಿದ್ದಾಗಲೇ. ಅದೂ ಪಾಕಿಸ್ತಾನದಲ್ಲಿ. ಅಕ್ಬರ್ ಅವರು ಈಗಲೂ ನನ್ನ ಬ್ಲಾಗ್ ಓದುತ್ತಿರುತ್ತಾರೆ ಎಂಬುದಕ್ಕೆ ಅಕ್ಷರದೋಷಗಳಾದಾಗ ಅವರು ಅದನ್ನು ನನ್ನ ಗಮನಕ್ಕೆ ತರುವುದೇ ಸಾಕ್ಷಿ. ಸರ್ದಾರ್ ಪಟೇಲರು ನೆಹರು ಅವರೊಂದಿಗೆ ಭೇದ ಹೊಂದಿದ್ದರು ಎಂಬ ವಿಚಾರದ ಕುರಿತ ಬ್ಲಾಗ್ ಬರಹಗಳನ್ನು ಓದಿ, ಅವರು ನನಗೆ ಈ ನಿಟ್ಟಿನಲ್ಲಿ ಪುಸ್ತಕವೊಂದನ್ನು ಓದುವಂತೆ ಪ್ರೇರೇಪಿಸಿದರು. ಬಾಲರಾಜ್ ಕೃಷ್ಣ ಅವರು ಬರೆದಿರುವ 'ಇಂಡಿಯಾಸ್ ಬಿಸ್ಮಾರ್ಕ್: ಸರ್ದಾರ್ ವಲ್ಲಭಬಾಯ್ ಪಟೇಲ್' ಎಂಬ ಪುಸ್ತಕವನ್ನು ಕರಮ್ಸದ್ನ ಸರ್ದಾರ್ ಪಟೇಲ್ ಟ್ರಸ್ಟ್ ಪ್ರಕಟಿಸಿದೆ. ಆ ಪುಸ್ತಕದ ಕೆಲ ಭಾಗವನ್ನು ಇಲ್ಲಿ ಉದ್ದರಿಸುತ್ತಿದ್ದೇನೆ. ತಮ್ಮ ವಿರುದ್ಧ ಪ್ರಯೋಗಿಸಲಾದ ಕಟುಶಬ್ದಗಳಿಗೆ ಪ್ರತಿಭಟಿಸಿ ಸರ್ದಾರರು ನೆಹರು ಅವರ ಸಂಪುಟ ಸಭೆಯಿಂದ ಎದ್ದುಹೋದ ಘಟನೆಯನ್ನು ಈ ಪುಸ್ತಕ ದೃಢೀಕರಿಸುತ್ತದಷ್ಟೇ ಅಲ್ಲ, ವಿ. ಪಿ. ಮೆನನ್ ಸಹ ಆ ಸಭೆಯಿಂದ ಎದ್ದು ಹೋಗಿದ್ದರು ಎಂದು ದಾಖಲಿಸಿದೆ.
ಇಂಡಿಯಾಸ್ ಬಿಸ್ಮಾರ್ಕ್ ಪುಸ್ತಕದಲ್ಲಿದೆ: 'ಪ್ರಜಾಪ್ರಭುತ್ವ ಮಾದರಿಯಲ್ಲಿ ಪೊಲೀಸ್ ಕಾರ್ಯಾಚರಣೆಗೆ ಸಂಪುಟದ ಒಪ್ಪಿಗೆ ಬೇಕಾಗುತ್ತದೆ. ಈ ವಿಷಯದಲ್ಲಿ ನೆಹರು ಅವರ ಅಸಮ್ಮತಿಯನ್ನು ಮೀರುವುದಕ್ಕೆ ಪಟೇಲರು ಭಾರಿ ಪ್ರಯತ್ನವನ್ನೇ ಮಾಡಿದರು. ನೆಹರು ಅಧ್ಯಕ್ಷರಾಗಿದ್ದ ರಕ್ಷಣಾ ಕಮಿಟಿಯ ಮೀಟಿಂಗ್ ಒಂದರಲ್ಲಿ ಎಂಥ ಸಂಘರ್ಷ ಎದುರಾಯಿತೆಂದರೆ ಪಟೇಲರು ಸಭೆಯಿಂದಲೇ ಎದ್ದುಹೋದರು. ಬಾಂಬೆಯ ರೋಟರಿ ಮೀಟಿಂಗ್ನಲ್ಲಿ ನಂತರ ವಿ. ಪಿ. ಮೆನನ್ ಅವರು ಹೇಳಿದ್ದೆಂದರೆ- ಪಟೇಲರ ಸೀಟು ಖಾಲಿಯಾಗಿರುವುದನ್ನು ನೋಡಿ ನಾನೂ ಎದ್ದುಹೋದೆ ಎಂದು. ಇದರಿಂದ ತುಸು ಅದೀರರಾದ ನೆಹರು ತಮ್ಮ ಪ್ರತಿರೋಧವನ್ನು ಸಡಿಲಿಸಿದರು. ನಂತರ ನಡೆದ ಸಭೆಯಲ್ಲಿ ಗವರ್ನರ್ ಜನರಲ್ ರಾಜಗೋಪಾಲಾಚಾರಿ, ಪ್ರಧಾನಿ ಹಾಗೂ ಗೃಹ ಸಚಿವರು ಮತ್ತು ಕಾರ್ಯದರ್ಶಿ ವಿ. ಪಿ. ಮೆನನ್ ಇದ್ದರು. ಅಲ್ಲಿಯೇ ಹೈದರಾಬಾದ್ ವಿಮೋಚನೆಗೆ ಸೇನೆ ಕಳುಹಿಸುವ ನಿರ್ಧಾರವಾಯಿತು.
ಆನಂತರವೂ ಪಟೇಲರು ನೆಹರು ಮುನಿಸನ್ನು ಎದುರಿಸುತ್ತಿರಬೇಕಾಯಿತು. ಭಾರತ ಸೇನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ರಾಯ್ ಬೌಷರ್ ಅವರು, 'ಭಾರತದ ಆಂತರಿಕ ಭದ್ರತೆಗೆ ಅಪಾಯ ತಂದೊಡ್ಡುವ ಈ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದೇ ಒಳ್ಳೆಯದು' ಎಂದು ನೆಹರು ಬಳಿ ತಿದಿ ಊದುವುದರಲ್ಲಿ ಯಶಸ್ವಿಯಾದರು. ಸೆಪ್ಟೆಂಬರ್ 12ರ ತಡರಾತ್ರಿ ನೆಹರು ಜತೆ ಹೀಗೆಲ್ಲ ಮಾತಾಡಿ ಮುಗಿಸಿದ ಬೌಷರ್ ನಂತರ ಪಟೇಲರಿಗೆ ಅರ್ಧರಾತ್ರಿಯಲ್ಲಿ ಫೋನಾಯಿಸಿ ನಿದ್ದೆಯಿಂದೆಬ್ಬಿಸಿದರು. ಮಿಲಿಟರಿ ದಾಳಿಗೆ ಪ್ರತಿಯಾಗಿ ಬಾಂಬೆ ಹಾಗೂ ಅಹಮದಾಬಾದ್ಗಳ ಮೇಲೆ ವೈಮಾನಿಕ ದಾಳಿ ಆಗಿಬಿಡಬಹುದಾದ್ದರಿಂದ ಕಾರ್ಯಾಚರಣೆ ಕೈಬಿಡುವುದೇ ಲೇಸು ಎಂದರು. ಆಗ, ಮಹಾಯುದ್ಧದಲ್ಲಿ ಲಂಡನ್ ಅನುಭವಿಸಿದ ಮುಖಭಂಗವನ್ನು ಬೌಷರ್ಗೆ ನೆನಪಿಸಿಕೊಟ್ಟ ಪಟೇಲರು, ಬಾಂಬೆ ಮತ್ತು ಅಹಮದಾಬಾದ್ಗಳು ಎಂಥದೇ ದಾಳಿಯನ್ನು ಎದುರಿಸುವುದಕ್ಕೂ ಸಿದ್ಧವಾಗಿವೆ, ಅದರ ಚಿಂತೆ ಬೇಡ ಎಂದು ತಿರುಗೇಟು ನೀಡಿದರು.'
ಜನರಲ್ ಬೌಷರ್ ಬಗ್ಗೆ ಕೆ. ಎಂ. ಮುನ್ಶಿಯವರೂ ಬರೆದಿದ್ದಾರೆ. 'ಉದ್ದಕ್ಕೂ ಬೌಷರ್ ಹಿಂಜರಿಕೆಯಿಂದಲೇ ಇದ್ದರು. ಹೈದರಾಬಾದ್ ಸೇನೆಯ ಸಾಮರ್ಥ್ಯವನ್ನು ಹೆಚ್ಚು ಅಂದಾಜಿಸಿ ಅವರು ಹೆದರಿದ್ದರು. ತಮ್ಮದೇ ಸೇನೆಯ ಸಾಮರ್ಥ್ಯ ಹಾಗೂ ಸರ್ದಾರ್ ಪಟೇಲರ ತಾಕತ್ತಿನ ಬಗ್ಗೆ ಅವರಿಗೆ ಅಪನಂಬಿಕೆ ಇತ್ತು. ಭಾರತದ ಅಸ್ತಿತ್ವಕ್ಕೇ ಕುತ್ತು ತಂದಿದ್ದ ರಜಾಕರರ ಹಾವಳಿಯನ್ನು ಯಾವುದೇ ಬೆಲೆ ತೆತ್ತಾದರೂ ಮಟ್ಟಹಾಕಬೇಕು ಎಂದು ಬೌಷರ್ಗೆ ತುಡಿತವಿರಲೇ ಇಲ್ಲ.' ಎಚ್ವಿಆರ್ ಐಯ್ಯಂಗಾರ್ ಬರೆದಂತೆ, 'ಸರ್ದಾರರು ಈ ವಿಷಯದಲ್ಲಿ ಸರಿಯಾಗಿದ್ದರು ಎಂದೇ ಇತಿಹಾಸ ತೀರ್ಪು ನೀಡುತ್ತದೆ.' ನೆಹರು ಸಹ ನಂತರದಲ್ಲಿ ಇದೇ ಸರಿ ಎಂದು ಸಹಮತ ಹೊಂದಿದರು.
ಭಾರತೀಯ ಸೇನೆ ಸೆಪ್ಟೆಂಬರ್ 13ರಂದು ಹೈದರಾಬಾದ್ಗೆ ನುಗ್ಗಿತು. ಕಾರ್ಯಾಚರಣೆಯನ್ನು ಆಪರೇಷನ್ ಪೊಲೊ ಎಂದು ಹೆಸರಿಸಲಾಗಿತ್ತು. ಕಾರ್ಯಾಚರಣೆ 108 ಗಂಟೆಗಳಿಗೆ ಸೀಮಿತವಾಗಿತ್ತು. 'ಇಂಟಿಗ್ರೇಷನ್ ಆಫ್ ದಿ ಇಂಡಿಯನ್ ಸ್ಟೇಟ್ಸ್' ಎಂಬ ಪುಸ್ತಕದಲ್ಲಿ ವಿ. ಪಿ. ಮೆನನ್ ಅವರು ಆಪರೇಶನ್ ಪೊಲೊವನ್ನು ವಿವರವಾಗಿ ಬಣ್ಣಿಸಿದ ಮೇಲೆ ಬರೆದಿರುವ ಉಪಸಂಹಾರ ಇದು: 'ನಿಜಾಮನ ಪ್ರಧಾನಿಯಾದ ಲೈಕ್ ಅಲಿ ಹಾಗೂ ಆತನ ಸಂಪುಟ ಸೆಪ್ಟೆಂಬರ್ 17ರಂದು ರಾಜಿನಾಮೆ ಸಲ್ಲಿಸಿತು. ಪೊಲೀಸ್ ಕಾರ್ಯಾಚರಣೆ ಶುರುವಾಗುತ್ತಲೇ ಗೃಹಬಂಧನಕ್ಕೆ ಒಳಗಾಗಿದ್ದ ನಿಜಾಮ, ಕೆ.ಎಂ. ಮುನ್ಶಿಯವರಿಗೆ ಮಾಹಿತಿ ಕಳುಹಿಸಿ ತನ್ನ ಸೇನೆಗೆ ಶರಣಾಗುವುದಕ್ಕೆ ಸೂಚಿಸಿರುವುದಾಗಿ ತಿಳಿಸಿದ. ಮುನ್ಶಿಯವರು ಇದನ್ನು ಸರ್ಕಾರಕ್ಕೆ ತಿಳಿಸಿದರು. ಸೆಪ್ಟೆಂಬರ್ 18ರಂದು ಮೇಜರ್ ಜನರಲ್ ಚೌಧರಿ ಅವರು ಮಿಲಿಟರಿ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದರು.ಲೈಕ್ ಅಲಿಯ ಸಂಪುಟವನ್ನು ಗೃಹ ಬಂಧನದಲ್ಲಿ ಇರಿಸಲಾಯಿತು. ಸೆ.19ರಂದು ರಿಜ್ವಿ ಬಂಧನಕ್ಕೆ ಒಳಗಾದ. ಕಾರ್ಯಾಚರಣೆ ಒಟ್ಟಾರೆ ಅವಧಿಯಲ್ಲಿ ಭಾರತದ ಯಾವ ಭಾಗದಲ್ಲೂ ಕೋಮುಗಲಭೆ ಹೊತ್ತಿಕೊಳ್ಳಲಿಲ್ಲ. ಹೈದರಾಬಾದ್ನ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಸಂಭ್ರಮಾಚರಣೆಗಳು ಶುರುವಾದವು. ಭಾರತ ಸರ್ಕಾರವನ್ನು ಅಭಿನಂದಿಸಿ ದೇಶದ ಎಲ್ಲ ಭಾಗಗಳಿಂದ ಸಂದೇಶಗಳು ಹರಿದುಬಂದವು.'
ಕೊನೆ ತುಣುಕು: 1958ರಲ್ಲಿ ನಮ್ಮ ಪಕ್ಷ ದೆಹಲಿ ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತಾಗ ಬಹಳ ದುಃಖವಾಗಿತ್ತು. ಆ ದುಃಖವನ್ನು ಮರೆಯುವುದಕ್ಕೆ ನಾನು ಮತ್ತು ಅಟಲ್ಜಿ, ಪಕ್ಷದ ಕಚೇರಿಯ ಹತ್ತಿರವೇ ಇದ್ದ ಚಿತ್ರಮಂದಿರಕ್ಕೆ ಹೋದೆವು. ಇಂಪೀರಿಯಲ್ ಥಿಯೇಟರ್ನಲ್ಲಿ ನಾವು ನೋಡಿದ್ದ ಚಿತ್ರ, 'ಫಿರ್ ಸುಭಹ್ ಹೋಗಿ'. ರಾಜ್ ಕಪೂರ್- ಮಾಲಾ ಸಿನ್ಹಾ ಅಭಿನಯದ ಚಿತ್ರ ದಾಸ್ತೋವ್ಸ್ಕಿಯ ಕ್ರೈಮ್ ಆ್ಯಂಡ್ ಪನಿಶ್ಮೆಂಟ್ ಕಾದಂಬರಿ ಆಧರಿಸಿದ್ದಾಗಿತ್ತು. ಸಾಹಿರ್ ಲುಧಿಯನ್ವಿ ಅದ್ಭುತವಾಗಿ ಹಾಡು ಬರೆದಿದ್ದರು: ಆ ಬೆಳಗು ಮತ್ತೆ ಬರಲಿದೆ/ ದುಃಖದ ಮೋಡ ಸರಿದು, ಸುಖದ ಸಾಗರ ಹೊಳೆವುದು/ ಅಂಬರವು ಕುಣಿಯಲಿದೆ, ಭುವಿಯು ಹಾಡಲಿದೆ/ ಆ ಬೆಳಗು ಮತ್ತೆ ಬರಲಿದೆ... ಎಂಬರ್ಥದ ಹಾಡದು. ಅದಾಗಿ 30 ವರ್ಷಗಳ ನಂತರ ಅಟಲ್ಜಿ 1998ರಲ್ಲಿ ಪ್ರಧಾನಿಯಾದಾಗ ನಾನು ಹಳೆಯದನ್ನು ನೆನಪಿಸಿಕೊಂಡು ಅವರ ಬಳಿ ಹೇಳಿದೆ- 'ಆ ಬೆಳಗು ಬಂದಿದೆ, ನಾವೇ ಅದನ್ನು ಕರೆತಂದಿದ್ದೇವೆ.'
- ಎಲ್. ಕೆ. ಆಡ್ವಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


