ನೆಹರು ಪರ್ವದಲ್ಲಿ ನೆಲಕಚ್ಚಿದ ಗಾಂಧಿ ತತ್ವ

ತಮಾಷೆಯ ಸಂಗತಿಯೆಂದರೆ ನೆಹರು ಮತ್ತು ಗಾಂಧೀಜಿಯ ನಡುವೆ ಯಾವ ವಿಷಯದಲ್ಲೂ ಸಾಮ್ಯತೆ ಇರಲಿಲ್ಲ. ಮಹಾತ್ಮಾ ಗಾಂಧಿ ಅಹಿಂಸಾವ್ರತವನ್ನು ಹಿಡಿದಿದ್ದರೆ ನೆಹರು ಲಕ್ಷ ಲಕ್ಷ ಜನರನ್ನು ಕಗ್ಗೊಲೆ ಮಾಡಿದ ಲೆನಿನ್ ಹಾಗೂ ಸ್ಟಾಲಿನ್ರನ್ನು ಆರಾಧಿಸುತ್ತಿದ್ದರು...
ಮತ್ತೆ ಮಕ್ಕಳ ದಿನಾಚರಣೆ ಬಂದಿದೆ. ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ನೆಹರು ಅವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಿ ಎಂದು ಘೋಷಿಸಿದ ದಿನ ಅದು. ಮಕ್ಕಳೊಂದಿಗಿದ್ದಾಗ ತಮ್ಮ ಸ್ಥಾನ, ಪದವಿ ಎಲ್ಲವನ್ನೂ ಮರೆತು ಅವರೊಡನೆ ಬೆರೆಯುವ ತಾದಾತ್ಮ್ಯಗುಣ ಅವರದಾಗಿತ್ತು. ಜಪಾನ್ನ ಮಕ್ಕಳು ಆನೆಯ ಬೊಂಬೆಯನ್ನು ಕಳುಹಿಸಿಕೊಡಿ ಎಂದರೆ ಅವರು ಜೀವಂತ ಆನೆಯನ್ನೇ ಕಳುಹಿಸಿಕೊಟ್ಟು ಅನುಪಮ ಪ್ರೇಮವನ್ನು ಮೆರೆದಿದ್ದರು. ಅಂತಹ ನೆಹರು ಭಾರತದ ಪ್ರಥಮ ಪ್ರಧಾನ ಮಂತ್ರಿಯಾಗಿ ಹದಿನಾರು ವರ್ಷಗಳ ಕಾಲ ಭಾರತವನ್ನು ಆಳಿದರೂ ಭಾರತದ ಮೂಲ ನೆಲೆ, ಬೆಲೆಯನ್ನು ಕಂಡುಕೊಂಡು ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿಲ್ಲ. ರಾಜಕೀಯವಾಗಿ, ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ತಪ್ಪು ಹೆಜ್ಜೆಗಳನ್ನು ಇಟ್ಟರು.
ಗಾಂಧೀಜಿ, ಪ್ರಜೆಗಳ ಮನಸ್ಸನ್ನು ಅರಿತು ಅವರ ಕ್ಷೇಮಕ್ಕಾಗಿ ನಡೆಸುವ ರಾಜ್ಯವ್ಯವಸ್ಥೆಯನ್ನು ರಾಮರಾಜ್ಯ ಎಂದು ಕರೆದರು. "ಹಾಗೆಂದರೆ ಏನು?" ಎಂದು ಕೇಳುವಷ್ಟು ಅಜ್ಞಾನ ನೆಹರೂರಲ್ಲಿ ತುಂಬಿಕೊಂಡಿತ್ತು. "ಲೋಕವನ್ನು ನಡೆಸುವ ದಿವ್ಯ ಶಕ್ತಿಯೊಂದಿದೆ" ಅದು "ದೇವರು" ಎಂದು ಗಾಂಧೀಜಿ ಹೇಳಿದರೆ. "ಆ ದೇವರ ಅವಶ್ಯಕತೆಯಿಲ್ಲ" ಎಂದು ಹೇಳುವ ನಾಸ್ತಿಕರಾಗಿದ್ದರು ಅವರು. ಮಹಾತ್ಮರು ನಡಸುತ್ತಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಕುರಿತು "ಈ ಪ್ರಾರ್ಥನೆಯಿಂದ ಏನಾದರೂ ಪ್ರಯೋಜನವಿದೆಯೇ?" ಎಂದು ಕೇಳುವ ಸಿನಿಕರಾಗಿದ್ದರು ನೆಹರು. ಇವಕ್ಕೆಲ್ಲ ಕಾರಣ ಇಷ್ಟೆ- ನೆಹರೂ ಅವರಿಗೆ ಹಿಂದು ಧರ್ಮದ ಪರಿಚಯವೇ ಇಲ್ಲವಾಗಿತ್ತು. ನಮ್ಮ ಸಂಸ್ಕೃತಿಯ ಆಧಾರ ಸ್ತಂಭವಾದ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಾಗವತ, ಗೀತೆ, ಪುರಾಣ, ಇತರ ಕಾವ್ಯಗಳು, ಇತಿಹಾಸಗಳು...ಯಾವುದರ ಅರಿವೂ ಅವರಿಗಿರಲಿಲ್ಲ. ಆರಂಭದ ವರ್ಷಗಳಲ್ಲಿ ಅವರು ಶಾಲೆಗೂ ಹೋಗದೆ ಮನೆಯಲ್ಲೇ ಒಬ್ಬ ಆಂಗ್ಲ ಉಪಾಧ್ಯಾಯರಿಂದ ಪಾಠ ಹೇಳಿಸಿಕೊಂಡಿದ್ದು, ಅನಂತರ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದರು.
ಆದರೆ ಅವರಲ್ಲಿ ಒಂದು ಗುಣವಿತ್ತು. ಅದು ಅವರ ಜ್ಞಾನ ದಾಹ. ಹತ್ತೆಂಟು ತಲೆಮಾರುಗಳಿಗೆ ಸಾಕಾಗುವಷ್ಟು ಆಸ್ತಿ ಮಾಡುವ, ಹಣ ದೋಚುವ, ದೇಶವನ್ನು ಕೊಳ್ಳೆಹೊಡೆಯುವುದರ ಹೊರತು ಬೇರೆ ಯಾವುದರಲ್ಲೂ ಆಸಕ್ತಿಯಿರದ ಇಂದಿನ ರಾಜಕಾರಣಿಗಳಂತೆ ಅವರಿರಲಿಲ್ಲ. ನಮ್ಮ ದೇಶದ ಬಗ್ಗೆ ತಿಳಿಯುವ ಕುತೂಹಲ ಅವರಲ್ಲಿ ಬೆಳೆಯಿತು. ಅದರಿಂದಾಗಿಯೇ ಅವರು ಅಧ್ಯಯನಕ್ಕೆ ತೊಡಗಿದರು. ಅದರ ಫಲವೇ 'Discovery of India" ಪುಸ್ತಕ.
ಆದರೂ ನೆಹರೂರ ಅಹಂಕಾರದ ನಡವಳಿಕೆ, ಅತೀವ ಕೋಪ, ರಾಜನೀತಿಜ್ಞರು, ವಿದ್ವಾಂಸರು, ರಾಷ್ಟ್ರ ಭಕ್ತರನ್ನು ಅವಗಣಿಸುವ ಗುಣ, ಐಷಾರಾಮೀ ಬದುಕು, ಸಿಗರೇಟು, ಮದ್ಯಪಾನ, ಅತಿಯಾದ ಆಂಗ್ಲ ವ್ಯಾಮೋಹ, ಭಾರತಕ್ಕೆ ಹೊಂದದ ಕಮ್ಯುನಿಸ್ಟ್ ತತ್ವವನ್ನು ಜಾರಿಗೆ ತರುವ ತವಕ, ಆತುರದ ನಿರ್ಧಾರ, ದ್ವಂದ್ವ ನೀತಿ ಮುಂತಾದವುಗಳಿಂದ ಇಡೀ ದೇಶವೇ ಹಳಿತಪ್ಪಿತು.
ನೆಹರು ಭಾರತದ ಪ್ರಧಾನ ಮಂತ್ರಿಯಾಗುವುದಕ್ಕೆ ಮೂಲ ಕಾರಣ ಗಾಂಧೀಜಿ. ಸರ್ವರೀತಿಯಿಂದಲೂ ದೇಶದ ಪ್ರಥಮ ಪ್ರಧಾನಮಂತ್ರಿಯಾಗುವುದಕ್ಕೆ ಅರ್ಹರಾಗಿದ್ದ ಪಟೇಲರನ್ನು ಕಡೆಗಣಿಸಿ ನೆಹರು ಅವರಿಗೇ ಮನ್ನಣೆ ನೀಡಿದರು.
ಪಟೇಲರು ಮತ್ತು ಸುಭಾಶ್ಚಂದ್ರ ಬೋಸರಿಗಿಂತ ಹೆಚ್ಚು ಮುಂದುವರಿಯುವುದರಲ್ಲಿ ನೆಹರು ಅವರಿಗೆ ವೈಯಕ್ತಿಕ ಯೋಗ್ಯತೆ, ನಡತೆ, ಸೌಭಾಗ್ಯ ಎಷ್ಟು ಸಹಾಯ ಮಾಡಿದವೋ ಅಷ್ಟೇ ಸಹಾಯ ಈ ಇಬ್ಬರು ಹಿರಿಯರ ಆಶೀರ್ವಾದದಿಂದಲೂ ಉಂಟಾಯಿತು (ಸಾಕ್ಷಿ ಪರ್ವ- ಡಾ. ಎಸ್.ಎಲ್. ಭೈರಪ್ಪ). ಇಲ್ಲಿ ಆಶೀರ್ವಾದವೆಂದರೆ ಸಹಾಯ, ಒತ್ತಾಸೆಗಳೆಂದು ಅರ್ಥ. ತಂದೆ ಮೋತಿಲಾಲರಿಗಿದ್ದಂಥ ಪುತ್ರವ್ಯಾಮೋಹಕ್ಕೆ ಸಮನಾದ ವ್ಯಾಮೋಹವು ಜವಾಹರರ ಮೇಲೆ ಗಾಂಧೀಜಿಗೂ ಇತ್ತು. ಪ್ರಧಾನಮಂತ್ರಿ ಪದವಿಗೆ ಪಟೇಲರ ಹೆಸರು ಮತ್ತೆ ಮತ್ತೆ ಕೇಳಿಬರುತ್ತಿದ್ದಾಗ ಗಾಂಧೀಜಿ ಪಟೇಲರನ್ನು ಪಕ್ಕಕ್ಕೆ ಕರೆದು "ಮುಳ್ಳಿನ ಕಿರೀಟವನ್ನು ನೀನೇ ಧರಿಸಬೇಕೆಂದು ನಾನು ಜವಾಹರಲಾಲರಿಗೆ ಹೇಳಿದ್ದೇನೆ. ದೇಶದ ಸಲುವಾಗಿ ಅವರು ಒಪ್ಪಿದ್ದಾರೆ" ಎಂದು ಹೇಳಿದ್ದರು.
ತಮಾಷೆಯ ಸಂಗತಿಯೆಂದರೆ ನೆಹರು ಮತ್ತು ಗಾಂಧೀಜಿಯ ನಡುವೆ ಯಾವ ವಿಷಯದಲ್ಲೂ ಸಾಮ್ಯತೆ ಇರಲಿಲ್ಲ. ಗಾಂಧೀಜಿ ಮದ್ಯಪಾನ ನಿರ್ಮೂಲನೆಗೆ ಪಣ ತೊಟ್ಟಿದ್ದರು, ಶುದ್ಧ ಸಸ್ಯಾಹಾರಿಯಾಗಿದ್ದರು, ಸಿಗರೇಟು ಸೇದುತ್ತಿರಲಿಲ್ಲ, ಗ್ರಾಮಾಭ್ಯುದಯದಲ್ಲಿ ಅಕ್ಕರೆಯುಳ್ಳವರಾಗಿದ್ದರು, ನಿತ್ಯ ಜೀವನದಲ್ಲಿ ಕಠೋರ ಶಿಸ್ತನ್ನು ಆಳವಡಿಸಿಕೊಂಡಿದ್ದರು. ಔದ್ಯೋಗೀಕರಣವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಉಪವಾಸ, ಅಹಿಂಸೆ, ಮುಂತಾದವನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಂಡಿದ್ದರು. ಇದಾವುದರಲ್ಲಿಯೂ ನೆಹರೂಗೆ ನಂಬಿಕೆಯಿರಲಿಲ್ಲ. ಹೊರದೇಶದಿಂದ ತಂದ ಸ್ಕಾಚ್ ವಿಸ್ಕೀಗಳೇ ಅವರಿಗೆ ಬೇಕಾಗಿದ್ದವು. ಮಾಂಸಾಹಾರವಿಲ್ಲದೇ ಅವರ ಊಟ ಪೂರ್ಣಗೊಳ್ಳುತ್ತಿರಲಿಲ್ಲ, ಸಿಗರೇಟು ಸೇದುತ್ತಿದ್ದರು, ಸರಳತೆ, ನಿರಾಡಂಬರತೆಯ ಅರ್ಥವೇ ಅವರಿಗೆ ಗೊತ್ತಿರಲಿಲ್ಲ. ಅಲಿಗಢ ಪೈಜಾಮ ಮತ್ತು ಶೇರ್ವಾನಿ ಅದರ ಎಡಭಾಗಕ್ಕೆ ಎದೆಯ ಮೇಲೆ ಆಗತಾನೆ ಅರಳಿದ ಗುಲಾಬಿ ಹೂವು ಸಿಕ್ಕಿಸಿಕೊಳ್ಳುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ!
ಎಲ್ಲದಕ್ಕಿಂತ ಹೆಚ್ಚಾಗಿ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಯೂರೋಪಿಯನ್ನರ ಮನೋಧರ್ಮವನ್ನು ರೂಢಿಸಿಕೊಂಡಿದ್ದರು. ಮಹಾತ್ಮಾ ಗಾಂಧಿ ಅಹಿಂಸಾವ್ರತವನ್ನು ಹಿಡಿದಿದ್ದರೆ ನೆಹರು ಲಕ್ಷ ಲಕ್ಷ ಜನರನ್ನು ಕಗ್ಗೊಲೆ ಮಾಡಿದ ಲೆನಿನ್ ಹಾಗೂ ಸ್ಟಾಲಿನ್ರನ್ನು ಆರಾಧಿಸುತ್ತಿದ್ದರು!
ಕಮ್ಯೂನಿಸ್ಟ್ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡಿದ್ದ ನೆಹರು, ಕೊನೆಯವರೆಗೂ ಅದರಿಂದ ಹೊರಗೆ ಬರಲೇ ಇಲ್ಲ. "ಸಾಕ್ಷಿ ಪರ್ವ"ದಲ್ಲಿ ಡಾ. ಎಸ್.ಎಲ್. ಭೈರಪ್ಪ ಹೀಗೆ ಹೇಳುತ್ತಾರೆ- "ಯಾವುದೇ ವ್ಯಕ್ತಿಯ ತಲೆಗೆ ಒಂದು ಐಡಿಯಾಲಜಿಯ ಹುಳ ಹೊಕ್ಕರೆ ಅದರಿಂದ ಬಿಡಿಸಿಕೊಂಡು ಸ್ವಂತ ದೃಷ್ಟಿಯಿಂದ ಜೀವನವನ್ನು ನೋಡುವುದು, ಜೀವನಾನುಭವದಿಂದ ಜೀವನವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಐಡಿಯಾಲಜಿಯಿಂದ ಬಿಡಿಸಿಕೊಳ್ಳಲು ವ್ಯಕ್ತಿಗೆ ಪ್ರಖರವಾದ ಸ್ವಂತ ಬುದ್ಧಿ ಇರಬೇಕು. ಇದನ್ನು ನಮ್ಮ ಸಾಹಿತ್ಯ ಪ್ರಪಂಚದಲ್ಲಿ ನೋಡುತ್ತೇವೆ. ನವ್ಯ, ಬಂಡಾಯ, ದಲಿತ, ಮಾರ್ಕ್ಸ್, ಸ್ತ್ರೀವಾದ ಮೊದಲಾದ ಯಾವುದಾದರೂ ಐಡಿಯಾಲಜಿಗಳಿಗೆ ಪಕ್ಕಾದವರು ಅದರಿಂದ ಬಿಡಿಸಿಕೊಂಡು ತಾವು ಅನುಭವಿಸಿದ ಜೀವನದಿಂದ ಅರ್ಥೈಸಿಕೊಂಡು ಸಾಹಿತ್ಯ ರಚಿಸಲು ಸ್ವಂತ ಆಲೋಚನಾ ಶಕ್ತಿ ಬೇಕು. ಇದೇ ಮಾತು ಪ್ರತಿಯೊಂದು ದೇಶದ ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು, ಸಮಾಜ ಸುಧಾರಕರು, ಚಿಂತಕರು ಮೊದಲಾದವರಿಗೂ ಅನ್ವಯವಾಗುತ್ತದೆ"
ಇನ್ನು ಭಾರತೀಯ ಭಾಷೆಗಳ ಮೇಲೆ ಅವರಿಗೆ ಒಲವೇ ಇರಲಿಲ್ಲ. ಹಿಂದಿಯಲ್ಲಿ ವಿಜ್ಞಾನದ ಪದಗಳೇ ಇಲ್ಲ. ಸಂಸ್ಕೃತ ಕೇವಲ ಹಿಂದು ಧರ್ಮದ ಭಾಷೆ. ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇಂಗ್ಲಿಷ್ ಭಾಷೆಯಲ್ಲಷ್ಟೇ ಇದೆ ಎಂಬ ಅಪಕಲ್ಪನೆಗಳು ಅವರಲ್ಲಿ ಮನೆಮಾಡಿದ್ದವು. ತಮಗೆ ಇಂಗ್ಲಿಷ್ನ ಮೇಲೆ ಇದ್ದ ವ್ಯಾಮೋಹದ ಹಿನ್ನೆಲೆಯಲ್ಲಿ ಇಂಗ್ಲಿಷೇ ಭಾರತದ ರಾಷ್ಟ್ರಭಾಷೆಯಾಗಬೇಕು ಎಂದು ಅವರು ಪಟ್ಟು ಹಿಡಿದಿದ್ದೂ ಇದೆ! ಮುಸ್ಲಿಮರೊಡನೆ ತಮಗಿರುವ ಆತ್ಮೀಯ ಒಡನಾಟದಿಂದಾಗಿ ಉರ್ದುವಿಗೆ ಮಾತ್ರ ಇನ್ನಿಲ್ಲದ ಪ್ರಾಶಸ್ತ್ಯ ನೀಡಿದ್ದೂ ಇದೆ. ಭಾರತೀಯ ಮುಸ್ಲಿಮರು ಬೇಡಿದ "ಷರಿಯತ್ ಕಾನೂನು" ಜಾರಿಗೆ ಬಂದಿದ್ದೇ ನೆಹರು ಕಾಲದಲ್ಲಿ. ಮುಸ್ಲಿಮರಿಗೊಂದು, ಕ್ರಿಶ್ಚಿಯನ್ನರಿಗೊಂದು ಎಂಬ ಕಾನೂನು ಸೃಷ್ಟಿಯಾಗಿದ್ದೇ ಅವರ ಆಡಳಿತದಲ್ಲಿ. ಜಾತಿಗೊಂದು, ಜನಾಂಗಕ್ಕೊಂದು ಕಾನೂನು ಸೃಷ್ಟಿಯಾದರೆ ದೇಶ ವಿಘಟನೆಗೊಳ್ಳುತ್ತದೆಯೆಂದು ವಿವೇಕ ಹೇಳಿದ, ಎಚ್ಚರಿಸಿದ ರಾಜಾಜಿ, ಶ್ಯಾಮ್ಪ್ರಸಾದ ಮುಖರ್ಜಿಯಂಥವರ ಮಾತನ್ನು ನೆಹರು ಕೇಳಲೇ ಇಲ್ಲ.
ಸ್ವಾತಂತ್ರ್ಯಾನಂತರ ಪಟೇಲರು ರಾಜ್ಯಗಳ ವಿಲೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ್ದರು. ಕಾಶ್ಮೀರ ವಿಲೀನವನ್ನು ಮಾತ್ರ ತಾವೇ ಮಾಡುವುದಾಗಿ ಹೇಳಿದ ನೆಹರು ಅದನ್ನು ಇನ್ನಿಲ್ಲದ ಕಗ್ಗಂಟನ್ನಾಗಿ ಮಾಡಿಬಿಟ್ಟರು.
ಭಾರತದ ಮೇಲೆ ಚೀನಾ ಮಾಡಿದ ಆಕ್ರಮಣದ ವಿಚಾರವಂತೂ ಕೇಳುವುದೇ ಬೇಡ. ಅದೊಂದು ಹಾಸ್ಯಾಸ್ಪದ ಮತ್ತು ಅಷ್ಟೇ ನೋವಿನ ಸಂಗತಿ ಕೂಡಾ. ನೆಹರು ಅವರ ಭೊಳೆತನ ಚೀನಾ ಭಾರತದ ಮೇಲೆ ಆಕ್ರಮಣ ಮಾಡುವುದಕ್ಕೆ ಬಹು ಸುಲಭದ ಹಾದಿಯನ್ನು ಮಾಡಿಕೊಟ್ಟಿತು. ಅಕ್ಸಾಯ್ ಚಿನ್ ಪ್ರದೇಶದುದ್ದಕ್ಕೂ ಚೀನಾ ರಾಷ್ಟ್ರೀಯ ಹೆದ್ದಾರಿ ನಿರ್ಮಿಸತೊಡಗಿದಾಗಲೇ ಅದರ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಜನರಲ್ ತಿಮ್ಮಯ್ಯನವರ ಮಾತನ್ನು ಧಿಕ್ಕರಿಸಿಬಿಟ್ಟರು ನೆಹರು. ಮುಂದೆ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಭಾರತ ಯುದ್ಧ ಮಾಡುವ ಸ್ಥಿತಿಯಲ್ಲೇ ಇರಲಿಲ್ಲ. ಅಂಥ ದಯನೀಯ ಸ್ಥಿತಿಯಲ್ಲೂ ನೆಹರೂ "ಭಾರತ ಎಂತಹ ಯುದ್ಧವನ್ನೂ ಎದುರಿಸಬಲ್ಲದು. ಅದಕ್ಕೆ ಅಷ್ಟು ಸಾಮರ್ಥ್ಯವಿದೆ" ಎಂದು ಸುಳ್ಳು ಹೇಳಿ ಜನತೆಯ ಕಣ್ಣಿಗೆ ಮಣ್ಣೆರಚಿದರು.
1954ರಲ್ಲಿ ಚೀನಾ ಟಿಬೇಟನ್ನು ನುಂಗಿ ಟಿಬೇಟನ ಧರ್ಮಗುರು ದಲೈಲಾಮಾ ಹಾಗೂ ಅವರ ಜತೆಗಿನ 80,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತು. ಆಗ ಅಮೆರಿಕ ಹಾಗೂ ಯುರೋಪ್ ಭಾರತಕ್ಕೆ ಸಹಾಯ ಮಾಡಲು ಸಿದ್ಧವಾಗಿದ್ದವು. ಆದರೆ ಅವರ ಸಹಾಯವನ್ನು ನಿರಾಕರಿಸಿದ ನೆಹರು ಹೇಳಿದ್ದೇನು ಗೊತ್ತೆ? "ಸುಮ್ಮನೆ ನಿರ್ಧಾರ ಕೈಗೊಳ್ಳಬಾರದು. ಇತಿಹಾಸವನ್ನೂ ಗಮನಿಸಬೇಕು. ಹಾಗೆ ನೋಡಿದರೆ ಟಿಬೆಟ್ ಸ್ವತಂತ್ರವಾಗಿರುವುದು ಚೀನಾದ ಸಾರ್ವಭೌಮತೆಗೆ ಧಕ್ಕೆಯಿದ್ದಂತೆ. ಹೀಗಾಗಿ ಅದು ಟಿಬೆಟ್ ತನ್ನದೆನ್ನುವುದರಲ್ಲಿ ಅರ್ಥವಿದೆ." ಇಂತಹ ಎಷ್ಟೋ ಅವಗಢಗಳು ನೆಹರು ಕಾಲದಲ್ಲಿ ನಡೆದವು.
ನೆಹರು, ಗಾಂಧೀಜಿಯ ಕೃಪಾ ಕಟಾಕ್ಷದಿಂದ ಸಂದರ್ಭ ನಿರ್ಮಿತ ನಾಯಕರಾಗಿ ಪ್ರಧಾನಿಯಾದರೇ ಹೊರತು ನಿಜ ನಾಯಕತ್ವದಿಂದ ಅವರು ಪ್ರಧಾನಿಯಾಗಲಿಲ್ಲ.
"ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಾದಿಯ ಉಮೇದುವಾರಿಕೆಯಂದ ನೀನು ಹಿಂದೆ ಸರಿ" ಎಂದು ಗಾಂಧೀಜಿ ಪಟೇಲರಿಗೆ ಹೇಳಿದಾಗಲೇ ಮುಂದಿನ ಪ್ರಧಾನಿ ನೆಹರು ಎಂದು ನಿರ್ಣಯವಾಗಿಹೋಯಿತು. "ಗಾಂಧೀಜಿ ತಮ್ಮ ನಿಷ್ಠ ಸೈನಿಕನನ್ನು ಮುದ್ದು ಮುಖದ ನೆಹರೂಗೆ ಮತ್ತೊಮ್ಮೆ ಬಲಿಕೊಟ್ಟರು" ಎಂದು ಬಾಬು ರಾಜೇಂದ್ರ ಪ್ರಸಾದರು ನೋವಿನಿಂದ ಹೇಳಿದಾಗಲೇ ನಮ್ಮ ದೇಶ ಯಾವ ದಿಕ್ಕಿನತ್ತ ಸಾಗಲಿದೆ ಎನ್ನುವುದು ಎಲ್ಲರಿಗೂ ತಿಳಿದುಹೋಯಿತು.
- ಗ.ನಾ. ಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


