ಅಂಕಣಗಳು

ಉಪಗ್ರಹ ಆಧಾರಿತ ನೀರು ಸಂಗ್ರಹಣೆ, ಜಲಾನಯನ ಅಭಿವೃದ್ಧಿ

ಉಪಗ್ರಹ ಆಧಾರಿತ ನೀರು ಸಂಗ್ರಹಣೆ, ಜಲಾನಯನ ಅಭಿವೃದ್ಧಿ
Published On :

ಕಳೆದ ವಾರ ನಿಮಗೆ ತಂತ್ರಜ್ಞಾನದಿಂದ ಅಭಿವೃದ್ಧಿ ಶರವೇಗದಲ್ಲಿ ಸಾಧ್ಯ ಎಂದು ಹೇಳುತ್ತಿದ್ದೆ. ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಬೇಕಾದರೆ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಾಗಬೇಕು. ಸಂಪನ್ಮೂಲಗಳ ಬಳಕೆಗೆ ನಿಶ್ಚಿತವಾದ ಯೋಜನೆಗಳಿಲ್ಲದಿರುವುದರಿಂದ ಮತ್ತು ಮಿತಿಮೀರಿದ ಶೋಷಣೆಯಿಂದಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುವುದು, ಗಿಡ ಮರಗಳ ನಾಶ ಮತ್ತು ನೈಸರ್ಗಿಕ ಕೆರೆಗಳಲ್ಲಿ ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದೆ ಹೋಗುವುದನ್ನು ನಾವು ಕಾಣುತ್ತಿದ್ದೇವೆ. ಇಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಗೆ ಸಾಕಷ್ಟು ಭೂಮಿ ಇಲ್ಲದಿರುವುದು, ಸರಿಯಾದ ಮಳೆ ಇಲ್ಲದಿರುವುದು, ಭೂಮಿಯ ಬೇರೆ ಬೇರೆ ಸ್ವರೂಪ ಲಕ್ಷಣಗಳು, ಅಸಮರ್ಪಕ ನಿರ್ವಹಣೆ, ಸಾಂಪ್ರದಾಯಿಕ ಬೇಸಾಯ ಪದ್ಧತಿಗಳು, ಪದೇ ಪದೇ ಎದುರಾಗುವ ಬರಗಾಲ ಮುಂತಾದವುಗಳು ಬೇಸಾಯ ಮಾಡುವುದಕ್ಕೆ ಒಬ್ಬ ಸಾಮಾನ್ಯ ರೈತನಿಗೆ ಅಡಚಣೆಗಳಾಗಿ ಪರಿಣಮಿಸುತ್ತವೆ. ಅಲ್ಲದೆ ನಿಸರ್ಗದಲ್ಲಿ ಪ್ರತಿಯೊಂದು ಸಂಪನ್ಮೂಲಗಳೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ. ಆದುದರಿಂದ ಸಮಗ್ರ ಬೇಸಾಯ ಮತ್ತು ಜಲಾನಯನ ಅಭಿವೃದ್ಧಿಯಿಂದ ಮಾತ್ರ ಆಸರೆ ನೀಡುವ ಬೇಸಾಯ ಮಾಡಲು ಸಾಧ್ಯವಾಗುತ್ತದೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಇಡೀ ವಿಭಾಗದ ಭೂ ಸಂಪತ್ತನ್ನು ನಿರ್ವಹಿಸುವ ಬೃಹತ್ತಾದ ಕಾರ್ಯ ಚಟುವಟಿಕೆಗಳನ್ನು ತಾಂತ್ರಿಕ ಸಹಾಯದೊಂದಿಗೆ ಮಾತ್ರ ಚುರುಕಾಗಿ ಮಾಡಲು ಸಾಧ್ಯ ಎಂದು ನಿರ್ಧರಿಸಿದೆ. ಮೊದಲ ಆದ್ಯತೆ ಭೂಮಿಯ ಎಲ್ಲಾ ಮಾಹಿತಿಯೂ ತಂತ್ರಾಂಶದ ಮೂಲಕ ಅದರ ಅಂಕಿ ಅಂಶಗಳನ್ನು ವಿಶ್ಲೇಷಿಸಲು ಅನುಕೂಲವಾಗುವಂತೆ ಮಾಡಬೇಕು ಎಂದು ನಿರ್ಧರಿಸಿದೆ. ಅಂಕಿ ಅಂಶಗಳನ್ನು ವಿಶ್ಲೇಷಿಸಲು ನಕಾಶೆ ರೂಪದಲ್ಲಿ ಚಿತ್ರಣವನ್ನು ಉಪಯೋಗಿಸಿದರೆ, ಉತ್ತಮ ಆಡಳಿತಕ್ಕೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಯೋಜನೆಗಳನ್ನು ನಿರ್ವಹಿಸಲು ಅತಿ ಸುಲಭವಾಗುತ್ತದೆ ಎಂಬ ಅರಿವು ನನಗೆ ಮೂಡಿತು. ಇಂತಹ ಒಂದು ಪ್ರಯತ್ನವನ್ನು (ಈ ಹಿಂದೆ ಮಂಗಳೂರು ಜಿಲ್ಲಾ ಪಂಚಾಯತ್‌ನಲ್ಲಿ ಮಾಡಿದಂತೆ) ಗುಲ್ಬರ್ಗಾ ವಿಭಾಗದಲ್ಲಿ ಪ್ರಾರಂಭಿಸಿದೆ.
ಹೈದ್ರಾಬಾದ್ ಕರ್ನಾಟಕ ದೂರ ಸಂವೇದಿ ಕೇಂದ್ರದ ಮೂಲಕ ಈ ವಿಭಾಗದ ಭೂ, ಜಲ ಮತ್ತು ಮಣ್ಣಿನ ಬಗ್ಗೆ ಉಪಗ್ರಹ ಆಧಾರಿತ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸಲಾಯಿತು. ಈ ಕೇಂದ್ರದ ಮೂಲಕ 1:5000 ಅನುಪಾತದಲ್ಲಿ ಸೃಜಿಸಿರುವ ಭೂದೈಶಿಕ ದತ್ತಾಂಶ ಸಂಗ್ರಹ, ಭೂ ಬಳಕೆ, ಭೂಹೊದಿಕೆ, ಅರಣ್ಯ ಅಂತರ್ಜಲ ಸಂಭಾವ್ಯತೆ, ಭೂರೂಪಶಾಸ್ತ್ರ, ಮಣ್ಣು, ಸೂಕ್ಷ್ಮ ಜಲಾನಯನ, ಪಾಳುಭೂಮಿ, ಕ್ಷಾರೀಯ/ ಚೌಳು ಪ್ರದೇಶ ಮುಂತಾದವುಗಳನ್ನು ಗುರುತಿಸಲಾಯಿತು. ಅಲ್ಲದೆ ಕಂದಾಯ ಇಲಾಖೆಯವರಿಂದ ಸಂಗ್ರಹಿಸಿದ ಗ್ರಾಮವಾರು ಹಿಡುವಳಿ ಮಟ್ಟದ ಮಾಹಿತಿಯನ್ನು 1:4000 ಪ್ರಮಾಣದಲ್ಲಿ ನಕಾಶೆ ರೂಪದಲ್ಲಿ ಒದಗಿಲಾಯಿತು.
ಈ ಮಾಹಿತಿಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಸರ್ಕಾರಿ ಹಾಗೂ ಖಾಸಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು, ನೀರಿನ ಸಂರಕ್ಷಣೆ ಹಾಗೂ ಸಂಪರ್ಕ ರಸ್ತೆಗಳ ಸುಧಾರಣೆಯನ್ನು ಮಾಡಲು ಈ ಕೆಳಗಿನಂತೆ ಯೋಜನೆಗಳನ್ನು ತಯಾರಿಸಲಾಯಿತು.  
1) ಬಂಜರು ಭೂಮಿ ಅಭಿವೃದ್ಧಿ-1.72 ಲಕ್ಷ ಹೆಕ್ಟೇರ್ 2) ಕೆರೆಗಳ ಪುನಶ್ಚೇತನ-960 ಪೈಕಿ 450 ಕೆರೆಗಳು
3) ಜಲಾನಯನ ಅಭಿವೃದ್ಧಿ-4124 ಪೈಕಿ 1470 ಹಳ್ಳಿಗಳು 4) ರಸ್ತೆ ಸಂಪರ್ಕ-ಎಲ್ಲಾ ಹಳ್ಳಿಗಳಿಗೆ ತಾಲೂಕು ಕೇಂದ್ರದಿಂದ ಪಕ್ಕ ಕೂಡು ರಸ್ತೆ.
ನೀರು ನಮ್ಮ ಅಮೂಲ್ಯ ಆಸ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಯೋಜನೆಯಂತೆ ಸರ್ಕಾರದ ಆಯವ್ಯಯದಲ್ಲಿ ಇರುವ ಬೇರೆ ಬೇರೆ ಯೋಜನೆಗಳಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಅತಿಹೆಚ್ಚು ಪರಿಣಾಮ ನೀಡಲು ಕೆರೆಗಳ ಅಭಿವೃದ್ಧಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಮಳೆ ನೀರನ್ನು ಸಂಗ್ರಹಿಸಲು ನಮ್ಮ ರಾಜ್ಯದಲ್ಲಿ ಇದ್ದ ಹಳೇ ಕಾಲದ ಕೆರೆಗಳು ಈಗ ಹಾಳಾಗಿದ್ದುದು ಕಂಡು ಬಂದಿತು. ಅವುಗಳನ್ನು ಸಂರಕ್ಷಿಸುವುದು ಅಗತ್ಯವಾದ ಕಾರ್ಯವೆಂದು ಮನಗಂಡೆ. ದೂರ ಸಂವೇದಿ ಕೇಂದ್ರದ ವತಿಯಿಂದ ವಿಭಾಗದ ಎಲ್ಲಾ 964 ಕೆರೆಗಳನ್ನು ಗುರುತಿಸಲಾಯಿತು. 2006ರ ಉಪಗ್ರಹ ಮಾಹಿತಿಯಂತೆ ನೀರು ಸಂಗ್ರಹಣೆ ಆಗದೇ ಇರುವ 450 ಕೆರೆಗಳ ಪಟ್ಟಿ ಮಾಡಲಾಯಿತು.  
ಉಪಗ್ರಹ ಆಧಾರಿತ ಮಾಹಿತಿಯ ಪ್ರಕಾರ ಒಟ್ಟು 964 ಕೆರೆಗಳಲ್ಲಿ 450 ಕೆರೆಗಳನ್ನು ಪುನಶ್ಚೇತನಗೊಳಿಸಬೇಕಾಗಿದ್ದಿತು. ಬೀದರ್ ಜಿಲ್ಲೆಯಲ್ಲಿ 121 ಕೆರೆಗಳು ಇದ್ದು 54 ಕೆರೆಗಳನ್ನು ಪುನಶ್ಚೇತನಗೊಳಿಸಬೇಕಾಗಿತ್ತು. ಅಂತೆಯೇ ಗುಲ್ಬರ್ಗಾದ 388 ಕೆರೆಗಳಲ್ಲಿ 102, ರಾಯಚೂರಿನ 174 ಕೆರೆಗಳಲ್ಲಿ 170, ಬಳ್ಳಾರಿಯ 223 ಕೆರೆಗಳಲ್ಲಿ 96, ಕೊಪ್ಪಳದ 58 ಕೆರೆಗಳಲ್ಲಿ 28. ಈ 450 ಕೆರೆಗಳಲ್ಲಿ ನೀರು ಸಂಗ್ರಹಣೆ ಆಗದೇ ಇರುವ ಕಾರಣಗಳನ್ನು ಗುರುತಿಸಲಾಯಿತು. 271 ಕೆರೆಗಳಲ್ಲಿ ದಂಡುಗಳು ಒಡೆದು ಹೋಗಿದ್ದವು. 179 ಕೆರೆಗಳಲ್ಲಿ ಹೂಳು ತುಂಬಿರುವುದು ಒಂದು ಕಾರಣವಾದರೆ, ಮತ್ತೆ 39 ಕೆರೆಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿತ್ತು. ತಕ್ಷಣವೇ ಆ 39 ಅತಿಕ್ರಮಣಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಉದ್ಯೋಗ ಖಾತರಿ ಯೋಜನೆಯಲ್ಲಿ, ಒಡೆದು ದಂಡುಗಳ ದುರಸ್ತಿಗಾಗಿ ರು. ಐದು ಲಕ್ಷದಂತೆ 271 ಕೆರೆಗಳಿಗೆ ಖರ್ಚು ಮಾಡಿದಲ್ಲಿ ರು. ಹದಿಮೂರೂವರೆ ಕೋಟಿಯಲ್ಲಿ ಅ100 ಎಕರೆ/ ಪ್ರತಿ ಕೆರೆಯಂತೆ 27,000 ಎಕರೆ ನೀರಾವರಿ ಒದಗಿಸಬಹುದೆಂದು ಅಂದಾಜು ಮಾಡಲಾಯಿತು. ನಂತರದ ದಿನಗಳಲ್ಲಿ ಬಳ್ಳಾರಿಯ 86 ಕೆರೆಗಳು, ಗುಲ್ಬರ್ಗಾದ 58 ಕೆರೆಗಳು, ಕೊಪ್ಪಳದ 16 ಹಾಗೂ ಬೀದರ್‌ನ 54 ಕೆರೆಗಳನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು 214 ಕೆರೆ ದುರಸ್ಥಿಗೊಳಿಸಲು ಕ್ರಮ ಜರುಗಿಸಲಾಯಿತು. ಸಣ್ಣ ನೀರಾವರಿ ಇಲಾಖೆಯಿಂದ ಹೂಳು ತುಂಬಿದ ಬೀದರ್ (5), ಗುಲ್ಬರ್ಗಾ (22), ಮತ್ತು ಯಾದಗಿರಿ (11), ಒಟ್ಟು 38 ಕೆರೆ ಹೂಳೆತ್ತುವ ಯೋಜನೆ ಅನುಮೋದಿಸಲಾಯಿತು. ಹಾಗಾಗಿ 450 ಕೆರೆಗಳ ಪೈಕಿ 249 ಕೆರೆಗಳು ವಿವಿಧ ಯೋಜನೆಗಳಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಜರುಗಿಸಲಾಯಿತು. ಇದರಿಂದ ಲಕ್ಷಾಂತರ ಜನರಿಗೆ ಕುಡಿಯುವ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಯಿತು ಎಂಬ ವಿಷಯ ನನಗೆ ಬಹಳ ಸಮಾಧಾನ ತಂದಿತು. ಉಳಿದ ಕೆರೆಗಳನ್ನು ಮುಂದಿನ ವರ್ಷಗಳಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂಬ ಭರವಸೆ ನನಗಿದೆ.
ಜೊತೆ ಜೊತೆಯಲ್ಲೇ ಜಲಾನಯನ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನ ಹರಿಸಲಾಯಿತು. ಗುಲ್ಬರ್ಗಾ ವಿಭಾಗವನ್ನು 'ಬಿಸಿಲೂರು' ಎಂದು ಕರೆಯುತ್ತಾರೆ. ಈಗಾಗಲೇ 2811 ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟ ಕುಸಿದಿರುವುದು ಉಪಗ್ರಹ ಆಧಾರಿತ ಮಾಹಿತಿಯಿಂದ ಕಂಡು ಬಂದಿತು ಹಾಗೂ 753 ಹಳ್ಳಿಗಳಲ್ಲಿ ನೀರಿನ ಗುಣಮಟ್ಟದ ಕೊರತೆ ಇದೆ ಎಂದು ಗುರುತಿಸಲಾಯಿತು. ಇಲ್ಲಿ ಶೇಕಡಾ ಹದಿಮೂರರಷ್ಟು ನೀರಾವರಿ ಸೌಲಭ್ಯಗಳು ಇದ್ದು, ಬಾಕಿ ಭೂಮಿ ಮಳೆ ಆಧಾರಿತ ಕೃಷಿ ಹೊಂದಿರುತ್ತದೆ. ಆದುದರಿಂದ ರೈತರು ಒಂದೇ ಬೆಳೆಯನ್ನು ಮಳೆಗಾಲದಲ್ಲಿ ಬೆಳೆಯುತ್ತಾರೆ. ನಂತರ ಆ ಭೂಮಿಯನ್ನು ಖಾಲಿ ಬಿಡಬೇಕಾಗುತ್ತದೆ. ಅದೇ ರೀತಿ ಸುಮಾರು 1.72 ಲಕ್ಷ ಹೆಕ್ಟೇರ್ ಭೂಮಿ ಬಂಜರಾಗಿರುತ್ತದೆ.  ಅಲ್ಲದೆ, 2.41 ಲಕ್ಷ ಹೆಕ್ಟೇರ್‌ಗಳು ಅರಣ್ಯ ಎಂದು ಮೀಸಲಿದ್ದು ಯಾವುದೇ ಮರಗಳು ಇಲ್ಲವಾಗಿತ್ತು.  ಏಕೆಂದರೆ ನೀರಿನ ಅಭಾವವಿತ್ತು.  ಆದರೆ ಇಂತಹ ಮಳೆ ಆಧಾರಿತ ಪ್ರದೇಶದಲ್ಲಿ ಜಲಾನಯನ ಅಭಿವೃದ್ಧಿಯನ್ನು ಮಾಡಿದರೆ ಅಂರ್ತಜಲ ಹಾಗೂ ಮಳೆ ನೀರು ಸಂಗ್ರಹಣೆ ಮೂಲಕ ಕೃಷಿ ಭೂಮಿಯನ್ನು ಎರಡನೇ ಬೆಳೆಗೆ ಉಪಯೋಗಿಸಬಹುದಾಗಿದೆ ಎಂಬುದನ್ನು ವಿಶ್ಲೇಷಿಸಲಾಯಿತು.
ಪ್ರತಿ ವರ್ಷ ಕಂದಾಯ ಇಲಾಖೆ ವತಿಯಿಂದ ಬರಗಾಲ ಪರಿಹಾರಕ್ಕಾಗಿ ನೂರಾರು ಕೊಳವೆ ಬಾವಿಗಳನ್ನು ಕೊರೆಯಲಾಗುತ್ತದೆ ಮತ್ತು ಅಂತರ್ಜಲ ಕೊರತೆ ಇರುವಾಗ ಕುಡಿಯುವ ನೀರನ್ನು ದೂರದಿಂದ ಟ್ಯಾಂಕರುಗಳ ಮೂಲಕ ತರಿಸಿ ಕೊಟ್ಯಂತರ ರುಪಾಯಿ ಖರ್ಚು ಮಾಡಲಾಗುತ್ತಿತ್ತು. ಈ ಹಣವನ್ನು ಉಳಿಸಿ, ಬರಗಾಲಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಲು ಜಲಾನಯನ ಅಭಿವೃದ್ಧಿ ಯೋಜನೆಯನ್ನು ಇಡೀ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ವಿಸ್ತರಿಸಲು ಯೋಚಿಸಲಾಯಿತು. ತಾಲೂಕುವಾರು ಗಣಕೀಕೃತ ನಕಾಶೆಯ ಆಧಾರದ ಮೇಲೆ ಎಲ್ಲಾ ಯೋಜಿತ ನೀರಾವರಿ ಹಾಗೂ ಜಲಾನಯನ ಅಭಿವೃದ್ಧಿಗೊಂಡ ವಲಯಗಳನ್ನು ಹೊರತುಪಡಿಸಿ ಯಾವ ಹಳ್ಳಿಗಳಲ್ಲಿ ಇನ್ನೂ ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನ ಆಗಿರಲಿಲ್ಲವೋ, ಅವುಗಳನ್ನು ಆಯ್ಕೆ ಮಾಡಲಾಯಿತು. ಈ ವಿಭಾಗದಲ್ಲಿ 4124 ಹಳ್ಳಿಗಳ ಪೈಕಿ 1470 ಹಳ್ಳಿಗಳು ಜಲಾನಯನ ಆಧಾರಿತ ಅಭಿವೃದ್ಧಿಯಿಂದ ವಂಚಿತವಾಗಿರುವುದು ಕಂಡು ಬಂದಿತು.
ಈ ನಕಾಶೆಯನ್ನು ಬಳಸಿ ಯಾವ ಸರ್ವೇ ನಂಬರಿನಲ್ಲಿ ಯಾವ ಕಾಮಗಾರಿಯನ್ನು ಮಾಡಬೇಕಾಗಿರುತ್ತದೆ ಎಂದು ಇಸ್ರೋ ಯೋಜನೆ ಮೂಲಕ ನಮೂದಿಸಲಾಯಿತು. ವಿಶೇಷವಾಗಿ ಹಳ್ಳಗಳ ಮೇಲೆ ಸಣ್ಣ ಸಣ್ಣ ಚೆಕ್‌ಡ್ಯಾಮಗಳನ್ನು ಕಟ್ಟಿದರೆ ಮಳೆ ನೀರನ್ನು ಸಂಗ್ರಹಣೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿದು ಬಂದಿತು. ಈ ಹಳ್ಳಗಳನ್ನು ಕಂದಾಯ ಇಲಾಖೆಯ ಹಳೆ ನಕಾಶೆಗಳಲ್ಲಿ ತೋರಿಸಲಾಗಿತ್ತು. ಆದರೆ ಕಾಲಾಂತರದಲ್ಲಿ ಹಳ್ಳಗಳ ನೀರು ಹರಿಯುವ ದಿಕ್ಕು ಬದಲಾಗಿತ್ತು. ಅದುದರಿಂದ ಈ ಉಪಗೃಹ ಆಧಾರಿತ ನಕಾಶೆಗಳಿಂದ ಪಡೆದ ಮಾಹಿತಿಯಂತೆ ಹಳ್ಳಗಳ ವಸ್ತುಸ್ಥಿತಿಯನ್ನು ತಿಳಿದುಕೊಳ್ಳಲು ಸ್ಥಳ ಪರಿಶೀಲನೆ ಮಾಡಲಾಯಿತು. ಪ್ರತಿ ಹಳ್ಳಿಗೆ ಸುಮಾರು ರು. ಒಂದು ಕೋಟಿಯಂತೆ, ರು. 1470 ಕೋಟಿ ಹಣವನ್ನು ಜಲಾನಯನ ಅಭಿವೃದ್ಧಿಗಾಗಿ ನರೇಗಾ ಯೋಜನೆಯಲ್ಲಿ ಉಪಯೋಗಿಸಲು ಗ್ರಾಮ ಪಂಚಾಯತಿಗಳಿಗೆ ತಿಳಿಸಲಾಯಿತು. ಇದರಿಂದ ಮುಂಬರುವ ದಿವಸಗಳಲ್ಲಿ ಕುಡಿಯುವ ನೀರಿನ ಕೊರತೆ ಬಗೆಹರಿಸಲು ಹಾಗೂ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಮನಗಂಡು ಹರ್ಷಿತಳಾದೆ. 

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.