ಅಂಕಣಗಳು

ಎಟಿಎಂ ಭದ್ರತೆಯಲ್ಲಿ ತಂತ್ರಜ್ಞಾನ ರೂಢಿಸಿಕೊಳ್ಳುವುದೆಂದು?

ಎಟಿಎಂ ಭದ್ರತೆಯಲ್ಲಿ ತಂತ್ರಜ್ಞಾನ ರೂಢಿಸಿಕೊಳ್ಳುವುದೆಂದು?
Published On :

ಕಳೆದ ಹಲವು ದಿನಗಳಿಂದ ಸುದ್ದಿ ಮಾಡುತ್ತಿರುವ ಎಟಿಎಮ್ನಲ್ಲಿ ಸುರಕ್ಷತೆಯ ವೈಫಲ್ಯಕ್ಕೆ ಸೆಕ್ಯೂರಿಟಿ ಇಲ್ಲದ್ದನ್ನು ದೂರಲಾಗುತ್ತಿದೆ. ನಿಜ ಏನೆಂದರೆ ಎಟಿಎಮ್ಗಳಿಗೆ ಮಾನವ ಸುರಕ್ಷತೆಯ ಅಗತ್ಯವೇ ಇಲ್ಲ. ವ್ಯಕ್ತಿ ಇಲ್ಲದೆಯೂ ಸುರಕ್ಷತೆ ಕೈಗೊಳ್ಳುವ ಬಗ್ಗೆ ಅನುಸರಿಸದ ಅಪಾಯಕಾರಿ ನಿರ್ಲಕ್ಷ್ಯದಿಂದಾಗೇ ನಮ್ಮಲ್ಲಿ ಹಾಡು ಹಗಲೇ ನಿರ್ದಯ ಹಲ್ಲೆ, ಕ್ರೈಂ ಘಟಿಸುತ್ತಿದೆ. ಇದರ ಬಗ್ಗೆ ನೈಜ ತಿಳವಳಿಕೆ ಇಲ್ಲದ ಸರ್ಕಾರ ಮತ್ತು ಪೊಲೀಸು ಈಗಲೂ ಸೌಲಭ್ಯ ಅಭಿವೃದ್ಧಿಯತ್ತ ಯೋಚಿಸದೆ ಶಟರ್ ಎಳೆಯುವ ಕೆಲಸಕ್ಕೆ ಕೈಹಾಕಿವೆ. ಇದರಿಂದ ಆಧುನಿಕ ತಾಂತ್ರಿಕತೆ ಇದ್ದೂ ಗ್ರಾಹಕರಿಗೆ ತೊಂದರೆಯೇ ವಿನಃ ಉಪಯೋಗವೇನೂ ಇಲ್ಲ.
ಎಟಿಎಮ್ಗಳನ್ನು ಸ್ಥಾಪಿಸುವಲ್ಲಿಂದ ಹಿಡಿದು ಅದರ ಸುರಕ್ಷತೆಯ ಎಲ್ಲಾ ಹಂತಗಳಲ್ಲೂ ನಮ್ಮಲ್ಲಿ ಅವೈಜ್ಞಾನಿಕ ಪದ್ಧತಿಯನ್ನೇ ಅನುಸರಿಸಿದ್ದು ಬಹುದೊಡ್ಡ ಲೋಪ. ಎಲೆಕ್ಟ್ರಾನಿಕ್ಸ್ ಸರ್ವೆಲನ್ಸ್ ಕಂಪನಿಗಳೊಂದಿಗೆ ಸ್ಥಾಪನೆ ಮತ್ತು ನಿರ್ವಹಣೆಯ ಕಾಂಟ್ರ್ಯಾಕ್ಟ್ ಅನ್ನು ದೀರ್ಘಾವಧಿಯಲ್ಲಿ ಮಾಡಿಕೊಳ್ಳುವುದರೊಂದಿಗೆ ತುಂಬಾ ಕಡಿಮೆ ಖರ್ಚಿನಲ್ಲಿ ಸಂಪೂರ್ಣ ಸುರಕ್ಷತೆ ಜಾರಿಗೊಳಿಸಬಹುದು. ಅದೂ ಸೆಕ್ಯೂರಿಟಿಯವರನ್ನು ನಿಯಮಿಸದೆಯೇ ನಿರ್ವಹಿಸಬಹುದಾಗಿದೆ. ಹೇಗಿದ್ದರೂ ಬ್ಯಾಂಕುಗಳು ಎಲ್ಲದಕ್ಕೂ ಗ್ರಾಹಕರಿಂದ ಹಣವನ್ನು ವಾರ್ಷಿಕವಾಗಿ ವಸೂಲು ಮಾಡುತ್ತವೆ. (1993 ನವಂಬರ್ 4  ಮ್ಯಾಂಚೆಸ್ಟರ್ನಲ್ಲಿ ಕಂಪ್ಯೂಟರ್ನ ಸರ್ವ ಸುರಕ್ಷತೆಯನ್ನು ಭೇದಿಸಿದರೂ ಹಣವನ್ನು ಖಾಲಿ ಮಾಡಿ ಬ್ಯಾಗಿಗೆ ತುಂಬಿಕೊಳ್ಳುವ ಕೊನೆ ಕ್ಷಣದಲ್ಲಿ, ಆ ಅರೆಯ ಬುಡದಿಂದ ಶಾಕ್ ಉತ್ಪತ್ತಿಯಾಗಿ ಕಳ್ಳರು ಅಲ್ಲೆ ಸಿಕ್ಕಿ ಬಿದ್ದಿದ್ದರು)
ವಿದೇಶಗಳಲ್ಲಿ ತಾಂತ್ರಿಕವಾಗಿ ವಿನ್ಯಾಸಿಸಿರುವ ಎಟಿಎಮ್ ಕೌಂಟರ್ಗಳು ಹೀಗೆ ಕಾರ್ಯ ನಿರ್ವಹಿಸುತ್ತವೆ ಎಂದರೆ,  ವ್ಯಕ್ತಿಯೊಬ್ಬ ಬಾಗಿಲ ಅರೆಯಲ್ಲಿ ಕಾರ್ಡ್ ಪಂಚ್ ಮಾಡುವ ಮೂಲಕ ಒಳ ಬರುತ್ತಿರುವ ವ್ಯಕ್ತಿಯ ದೃಢೀಕರಣ ಮಾಡಿ ಮೊದಲ ಹಂತದ ಸುರಕ್ಷತೆಯನ್ನು ಕೊಟ್ಟರೆ, ಒಮ್ಮೆ ಒಬ್ಬ ವ್ಯಕ್ತಿ ಮಾತ್ರ ಒಳ ಹೋಗುವಂತೆ ಬಾಗಿಲ ಮೇಲಿದ್ದ ಸೆನ್ಸಾರ್, ಏಣಿಸುವ ಮೂಲಕ ಒಬ್ಬನೆ ಇರುವುದನ್ನು ಖಾತ್ರಿಪಡಿಸುತ್ತದೆ. ಮೂರನೆಯ ಹಂತ ಕ್ಯಾಮೆರಾ/ ಸೆನ್ಸಾರ್ ಸುರಕ್ಷೆ. ಇದು ಘಟನೆ ನಡೆದ ನಂತರ ಅರೋಪಿಯನ್ನು ಹುಡುಕುವ ಕಾರಣಕ್ಕಾಗಿ ಅಲ್ಲ. ಅದು ನಡೆಯುವ ಮೊದಲೆ ಸುರಕ್ಷತಾ ವಿಧಾನವಾಗಿ ಕಾರ್ಯ ನಿರ್ವಹಿಸಬೇಕು. ಕೌಂಟರ್ಗಳಲ್ಲಿ ಎದುರಿಗೇ ಇರುವ ಕ್ಯಾಮೆರಾ ಕಣ್ಣಿನಲ್ಲಿ ದೃಷ್ಟಿಯನ್ನು ಸೇರಿಸುತ್ತಿದ್ದಂತೆ ಅದು ನೈಜ ಕಾರ್ಡುದಾರನೇ ಎಂದು ಮೊದಲು ಗುರುತಿಸುತ್ತದೆ. ಮೊದಲ ಹಂತದಲ್ಲಿ ಕಾರ್ಡು ನೀಡಿದ್ದ ಮಾಹಿತಿಯನ್ನು ಲೆಕ್ಕಹಾಕಿದ್ದ ಕಂಪ್ಯೂಟರ್, ರೆಟಿನಾ ಸ್ಕ್ಯಾನ್ ಮಾಡುವವರೆಗೂ ಪ್ರತಿ ಹಂತದ ಪರಿಚಯಗಳನ್ನು ಲೆಕ್ಕ ಹಾಕುತ್ತಲೆ ಇರುತ್ತದೆ. ಇಷ್ಟಾಗಿ ಕಾರ್ಡು ಪರಿಚಯ, ಅದರ ಪ್ರಕಾರ ಒಬ್ಬನೆ ಒಳ ಬಂದಿದ್ದಾನೆ, ಬಂದಿರುವಾತನ ರೆಟಿನಾ ಇದೇ ಕಾರ್ಡ್ನವನದ್ದು ಎಂದು ತೃಪ್ತಿಕರ ಫಲಿತಾಂಶವಾದ ಮೇಲೆ ಎದುರಿನ ಕಂಪ್ಯೂಟರ್ ಸ್ಕ್ರೀನ್ ತಾನಾಗೇ ಬೆಳಗುತ್ತದೆ.
ಇಲ್ಲಿ ಮೊದಲಿನ ಎರಡು ಸುರಕ್ಷತಾ ವಿಧಾನವನ್ನು ಯಾಮಾರಿಸಿದರೂ ರೆಟಿನಾ ಸ್ಕ್ಯಾನ್ ಮಾಡದೆ ಕಂಪ್ಯೂಟರ್ ಆರಂಭಗೊಳ್ಳುವುದಿಲ್ಲ. ಇದರೊಂದಿಗೆ ಅಕಸ್ಮಾತ್ ಇನ್ಯಾರಾದರೂ ಕಾರ್ಡುದಾರನ ಹೊರತುಪಡಿಸಿ ರೂಮಿನೊಳಗೆ ಇದ್ದರೆ ಕ್ಯಾಮೆರಾ ಸಂದಿನಲ್ಲೆ ಇರುವ ರೆಟಿನಾ ಮತ್ತು ಫೇಸ್ ಡಿಟೆಕ್ಟರುಗಳು ಗುರುತಿಸಿ ಕೂಡಲೆ ಎಲ್ಲಾ ಕಡೆಯಿಂದಲೂ ಸುರಕ್ಷಾ ಕವಚ ಭದ್ರಗೊಂಡುಬಿಡುತ್ತವೆ. ಇನ್ನು ಇದೆಲ್ಲಾ ಆದ ಮೇಲೆ ಸ್ಕ್ರೀನ್ ಬಂದರೂ ಅದು ರ್ಯಾಂಡಮ್ ಆಗಿ ಸುರಕ್ಷಾ ಪದ್ಧತಿಯನ್ನು ಬಳಸುತ್ತದೆ. ಕೆಲವರಿಗೆ ರೆಟಿನಾ ಸ್ಕ್ಯಾನ್ ನಂತರವೂ ಪಾಮ್ ಪ್ರಿಂಟ್ ಕೇಳಿದರೆ ಮಗದೊಬ್ಬರಿಗೆ ಥಂಭ್ ಇಂಪ್ರೆಶನ್ಗೆ ಬೆರಳು ಒತ್ತು ಎನ್ನುತ್ತದೆ. ಮುಂದಿನವನಿಗೆ ಎದುರಿಗಿನ ಅರೆಯಲ್ಲಿ ಸಂಪೂರ್ಣ ಕೈಯ್ಯನ್ನೆ ಇಡಲು ಸೂಚಿಸುತ್ತದೆ. ಇಷ್ಟೆಲ್ಲಾ ಆದ ಮೇಲೆ ಪಿನ್ ನಂಬರ್ ಒತ್ತುವ ಸಹಜ ಕ್ರಿಯೆ ಆರಂಭವಾಗುತ್ತದೆ.
ಇವೆಲ್ಲದರ ಮಧ್ಯೆ ಯಾವುದೇ ಒಂದು ಹಂತದಲ್ಲಿ ಸುರಕ್ಷತೆಯ ಬಗ್ಗೆ ಸಣ್ಣ ಸಂಶಯ ಬಂದರೂ ಮರು ವಿಧಾನ ಬಳಕೆ ಮಾಡಿ ಎಲ್ಲವನ್ನು ಪುನರಾವರ್ತಿಸುವಂತೆ ಕೇಳುತ್ತದೆ. ಅದಕ್ಕೂ ಮೀರಿ ನೀವು ಯಾಮಾರಿಸಲು ಯತ್ನಿಸಿದರೆ ಊರೆಲ್ಲಾ ಕೆಳುವಂತೆ ಸೈರನ್ ಬಾರಿಸುತ್ತದೆ. ಸೈರನ್ ಬಾರಿಸುತ್ತಿದ್ದಂತೆ ಕ್ಯಾಮೆರಾ ಸಂದಿನಲ್ಲಿರುವ ಸೆನ್ಸಾರ್ಗಳು ಪರಿಸ್ಥಿತಿಯನ್ನು ಅವಲೋಕಿಸಿ ಯಾವ ಸುರಕ್ಷತೆಯ ಹಂತವನ್ನು ಜಾರಿಗೊಳಿಸಬೇಕೆಂದು ಸ್ವತಃ ನಿರ್ಣಯಿಸುತ್ತದೆ. ಅದೇ ವೇಳೆಗೆ ಅದರಲ್ಲಿ ಮೊದಲೇ ತುಂಬಿಸಿಡಲಾದ ನಂಬರಿಗೆ ಸತತ ಕರೆಗಳು ಹೋಗುತ್ತವೆ. ಅದು ಪೊಲೀಸು, ಬ್ಯಾಂಕ್ ಅಧಿಕಾರಿ, ವೈದ್ಯಾಧಿಕಾರಿ ಹೀಗೆ ಹಲವಾರು ಏಜೆನ್ಸಿಗಳು ಭಾಗಿಯಾಗಿರುತ್ತವೆ. ಅಕಸ್ಮಾತ್ ಬೆಂಕಿಯ ಸಾಧ್ಯತೆ ಇದ್ದರೆ ಫೈರ್ಬ್ರಿಗೇಡಿಗೂ ಕರೆ ರವಾನೆಯಾಗತೊಡಗುತ್ತದೆ. ಗುಂಡು ಹಾರಾಟ ನಡೆದರೆ, ಅದರ ಗನ್ ಪೌಡರ್ ವಾಸನೆಯಿಂದ ಒಳಗಿದ್ದವರೆಲ್ಲಾ ಅಲ್ಲೆ ಪ್ರಜ್ಞೆ ತಪ್ಪುವಂತೆ ಅಳವಡಿಸಲಾದ ಪೈಪಿನಿಂದ ಸ್ಮೋಕ್ ಬರುತ್ತದೆ. ಬೆಂಕಿ ಆರಲು ಮೇಲಗಡೆ ಇರುವ ಸ್ಪ್ರೇಯರಿನಿಂದ ಯಾವ ರೀತಿಯ ಬೆಂಕಿ ಎಂಬ ಆಧಾರದಲ್ಲಿ ತುಂತುರು ಅಥವಾ ಫೋಮ್ ಸ್ಪ್ರೇ ಆಗುತ್ತದೆ. ರಕ್ತ ಹರಿದಲ್ಲಿ ಅದರ ವಾಸನೆಯನ್ನು ಗುರುತಿಸುವ ಸೆನ್ಸಾರ್ಗಳು ಕೂಡಲೆ ವೈದ್ಯ ಮತ್ತು ಅಂಬುಲೆನ್ಸ್ ಎಚ್ಚರಿಸುವ ಕರೆಯನ್ನು ಆರಂಭಿಸುತ್ತವೆ. ಕೌಂಟರ್ ಮಿಶಿನ್ನ ಸಾಧ್ಯವಾದಷ್ಟೂ ಎಲ್ಲಾ ಭಾಗದಲ್ಲೂ ಕರೆಂಟು ಪ್ರವಹಿಸುತ್ತದೆ. ಒಳಗಿದ್ದವರಾರೂ ಯಾವ ಹಂತದಲ್ಲೂ ತಪ್ಪಿಸಿಕೊಳ್ಳುವ ಅವಕಾಶ ಉಳಿಯುವುದೇ ಇಲ್ಲ. ನೆಗೆಟಿವ್ ಪ್ರೆಶರ್ ಉಂಟಾಗುವ ಮೂಲಕ,  ಗಾಜು ಒಡೆಯುವ ಮುನ್ನವೇ ಪ್ರವಹಿಸುವ ಸಾಂದರ್ಭಿಕ ವಿಷಾನಿಲ ಇದ್ದವರನ್ನೆಲ್ಲಾ ಮೂರ್ಛೆಗೊಳಿಸಿರುತ್ತದೆ. ಇದರೊಂದಿಗೆ ಇದಕ್ಕೆ ಬ್ಯಾಟರಿಯ ಸತತ ಎರಡು ಗಂಟೆಗಳ ಬ್ಯಾಕ್ಅಪ್ ಇರುತ್ತದೆ. ಕರೆಂಟು ಹೋಗುತ್ತಿದ್ದಂತೆ ಅದನ್ನೂ ನಿರ್ದಿಷ್ಟ ಏಜೆನ್ಸಿಗೆ ಸೂಚನೆ ಕಳಿಸುವುದರೊಂದಿಗೆ ಬ್ಯಾಟರಿ ನಿಯಂತ್ರಣ ಕಳೆದುಕೊಳ್ಳತೊಡಗಿದರೆ, ಸಂಪೂರ್ಣ ಸುರಕ್ಷಾ ವಿಧಾನವಾಗಿ ಕೌಂಟರ್ ಒಳ ಭದ್ರತಾ ವ್ಯವಸ್ಥೆಯನ್ನು ಸ್ವತಃ ಅಳವಡಿಸಿಕೊಂಡು ಯಾವ ಕಾರ್ಡುದಾರನಿಗೂ ಯಾವ ಸೇವೆಯನ್ನೂ ನೀಡದೆ ಬಾಗಿಲೆ ತೆರೆಯದೆ ತಟಸ್ಥವಾಗಿ ಬಿಡುತ್ತದೆ.
ಇವೆಲ್ಲಾ ಕೇವಲ ಪ್ರಾಥಮಿಕ ಸೌಲಭ್ಯವಾದರೆ ಇನ್ನೂ ಮುಂದುವರೆದಿರುವ ಕೆಲವು ಕಂಪೆನಿಗಳು ಅತ್ಯುತ್ತಮ ಮಟ್ಟದ ಸೇವೆಯನ್ನು ನೀಡುತ್ತಿವೆ. ಕೆಲವೊಂದು ಎಟಿಎಮ್ಗಳಲ್ಲಿ ಹಲ್ಲೆಯಾಗುವ ಸಂದರ್ಭದಲ್ಲಿ ಆಂಗಿಕ ಚಲನವಲನವನ್ನು ಗುರುತಿಸಿಯೇ ಇದ್ದಕ್ಕಿದ್ದಂತೆ, ಕಾರಿನಲ್ಲಿ ಏರ್ಬ್ಯಾಗ್ ಆತುಕೊಳ್ಳುವಂತೆ ಸಂದು ಸಂದುಗಳಲ್ಲೆಲ್ಲಾ ಏರ್ಬ್ಯಾಗ್ ಆವರಿಸಿ, ಕ್ಷಣಾರ್ಧದಲ್ಲಿ ಕೋಣೆಯ ಗೋಡೆಗೆ ತಳ್ಳಿ ಅದುಮಿಡುತ್ತದೆ. ಹೀಗೆ ಹಲವು ಹಂತದಲ್ಲಿ ಸ್ವಯಂ ಸುರಕ್ಷೆಯ ವಿಧಾನಗಳನ್ನು ದೀರ್ಘಾವಧಿಯ ಸೇವೆಯ ಮೇರೆ ಒಪ್ಪಂದಕ್ಕೆ ಒಳಪಟ್ಟರೆ ತುಂಬಾ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಸಾಧ್ಯವಿದೆ. ಕಾರಣ ಚಾವಿ ತೆರೆಯದೆ ಸುಖಾ ಸುಮ್ಮನೆ ಬಾಗಿಲು ನೂಕಿದರೆ ಭಯಂಕರವಾಗಿ ಬೊಬ್ಬೆ ಇಡುವಂತಹ ಅಟೊಮ್ಯಾಟಿಕ್ ಡಿವೈಸ್ಗಳು ಇವತ್ತು ಕೇವಲ ಮೂರ್ನಾಲ್ಕು ಡಾಲರ್ನಲ್ಲಿ ಲಭ್ಯವಿದೆ. ಇವುಗಳ ಜೀವಾವಧಿ ದಶಕ.
ಇದೆಲ್ಲದರೊಂದಿಗೆ ವಿದೇಶದಲ್ಲಿ ಎಟಿಎಮ್ ಅನ್ನು ಪ್ರತ್ಯೇಕ ಕೋಣೆಯಲ್ಲಿ ಸ್ಥಾಪಿಸುವುದನ್ನು ನಿಲ್ಲಿಸಿ ದಶಕಗಳೆ ಕಳೆದಿವೆ. ಅಲ್ಲೆಲ್ಲಾ ದೊಡ್ಡ ಮಾಲ್ಗಳ ಮಧ್ಯೆ, ಜನನಿಭಿಡ ಪ್ರದೇಶ, ಹೊಟೇಲ್, ರೈಲು ನಿಲ್ದಾಣದ ಸುರಕ್ಷಾಧಿಕಾರಿಯ ಕೋಣೆ ಇತ್ಯಾದಿಗಳಲ್ಲಿ ಸ್ಥಾಪಿಸುತ್ತಾರೆ. 'ನಾಗೈಚು ಕೌಂಟಿ' ಎನ್ನುವ ಅತ್ಯಂತ ಎತ್ತರದ ಅಪಾಯಕಾರಿ ಪ್ರದೇಶದಲ್ಲಿ 'ಅಗ್ರಿಕಲ್ಚರ್ ಬ್ಯಾಂಕ್ ಆಫ್ ಚೀನಾ' ತನ್ನ ಎಟಿಎಮ್ ಸ್ಥಾಪಿಸಿ ಇಂತಹದ್ದೆ ತಾಂತ್ರಿಕತೆಯ ನೆರವಿನಿಂದ ದಕ್ಕಿಸಿಕೊಂಡಿದೆ.
ಶುರು ಶುರುವಿನಲ್ಲಿ ಸೌಲಭ್ಯವನ್ನು ಪೂರೈಸಿದ ಬ್ಯಾಂಕುಗಳು ನಂತರದಲ್ಲಿ ನಿರಂತರ ನಿರ್ವಹಣೆ ಮಾಡುವಲ್ಲಿ ವಿಫಲವಾದವು. ಕೆಲ ಬ್ಯಾಂಕುಗಳಂತೂ ಪ್ರವೇಶ ಹಂತದ ಸುರಕ್ಷತೆಯನ್ನೇ ಪೂರೈಸುತ್ತಿಲ್ಲ. ಎಟಿಎಮ್ ಅನ್ನು ಹೇಗೆ ಸುರಕ್ಷಿತವಾಗಿ ನಿರ್ವಹಿಸಬೇಕು, ರಕ್ಷಿಸಿಕೊಳ್ಳಬೇಕೆನ್ನುವುದನ್ನು 1969 ರಲ್ಲಿ ಎಟಿಎಮ್ ಆರಂಭವಾದಾಗಲೆ ಒಂದು ಅನುಸೂಚಿಯನ್ನು ಹೊರಡಿಸಲಾಗಿತ್ತು. (ಇದು ಕಾಲಕಾಲಕ್ಕೆ ಮರು ಪರಿಶೀಲನೆಯೂ ಆಗುತ್ತಿದೆ ವೀದೇಶಗಳಲ್ಲಿ)
ನಮ್ಮಲ್ಲಿ ಅಳವಡಿಕೆ-ನಿರ್ವಹಣೆ ಎನ್ನುವ ಒಡಂಬಡಿಕೆಯ ಮೇರೆಗೆ ಸರ್ವೆಲೆನ್ಸ್ ಕಂಪೆನಿಗಳೊಂದಿಗೆ ಒಪ್ಪಂದ ಬದಲಾಗಿ ಸ್ಥಳೀಯ ತಂತ್ರಜ್ಞರಿಗೆ ಬುಲಾವ್ ಕೊಟ್ಟರು. ಖರ್ಚು ಕಡಿಮೆ ಎಂದು. ಲೋಕಲ್ ತಾಂತ್ರಿಕತೆ ಎಟಿಎಮ್ಗಳಲ್ಲಿ ಅಳವಡಿಕೆಯಾಗಿ ಪರಿಣಾಮಕಾರಿಯಾಗಿ ಕಾರ್ಯವನ್ನೂ ನಿರ್ವಹಿಸಿದವು. ಆದರೆ ಮರು ನಿರ್ವಹಣೆ ಮಾಡುವಲ್ಲಿ ತೋರಿದ ನಿರ್ಲಕ್ಷ್ಯ ಇವತ್ತು ಪ್ರಾಣ ಹರಣವಾಗುಷ್ಟರ ಮಟ್ಟಿಗೆ ಕಾರಣವಾಗಿದೆ. ವಿದೇಶದಲ್ಲಿ ನಡೆವ ಎಟಿಎಮ್ ಸಂಬಂಧಿ ಅಪರಾಧಗಳು ಶೇ0.01 ದಾಟಿಲ್ಲ. ಅದೂ ಹಣಕ್ಕಾಗಿ ಅಲ್ಲ. ವೈಯಕ್ತಿಕ ಸೇಡಿಗಾಗಿ ವ್ಯಕ್ತಿ ಎಟಿಎಮ್ನಲ್ಲಿದ್ದಾಗ ಅದರ ರೂಮು ಸಮೇತ ಹುಡಿ ಹಾರಿಸಿದ ಉದಾಹರಣೆಗಳಿವೆ.
ನಮ್ಮಲ್ಲಿ ಕ್ಯಾಮೆರಾ ಇದ್ದರೂ ಅದನ್ನು ಅಳವಡಿಸಿರುವ ಜಾಗವೇ ಅವೈಜ್ಞಾನಿಕ. ಅದರಲ್ಲಿ ಮುಖವೇ ಬಂದಿರುವುದಿಲ್ಲ. ಘಟನೆ ಜರುಗಿದ ನಂತರ ಅಪರಾಧಿಯನ್ನು ಹಿಡಿಯಲಷ್ಟೆ ವಿನಃ ಪ್ರಾಣ ಉಳಿಸಲು ಯಾವ ಉಪಯೋಗವೂ ಆಗುವುದಿಲ್ಲ. ಅದೂ ಕಡಿಮೆ ರೆಸ್ಯುಲೂಶನ್ನಿಂದಾಗಿ ಸ್ಪಷ್ಟತೆ ಮೊದಲೆ ಇಲ್ಲ. ಯಾಕೆ ಮಾನವ ರಹಿತ ಸುರಕ್ಷಾ ವಿಧಾನ ನಮ್ಮಲ್ಲೂ ಯೋಚಿಸಬಾರದು?

- ಸಂತೋಷಕುಮಾರ ಮೆಹೆಂದಳೆ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.