ಅಂಕಣಗಳು

ಶ್ರೇಯಸ್ಸು ಸಲ್ಲಬೇಕಾದದ್ದು ರಾಹುಲ್‌ಗಲ್ಲ, ರಾಷ್ಟ್ರಪತಿಗೆ!

Published On :

ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಸುಗ್ರೀವಾಜ್ಞೆ ಮತ್ತು ಮಸೂದೆಯನ್ನು ಹಿಂತೆಗೆದುಕೊಳ್ಳಲು ಕ್ಯಾಬಿನೆಟ್ ನಿರ್ಧರಿಸುತ್ತಿದ್ದಂತೆಯೇ, ಯುಪಿಎ ಸರ್ಕಾರದ ಅನಾಕರ್ಷಕ ಇತಿಹಾಸದಲ್ಲಿನ ಮತ್ತೊಂದು ಕೊಳಕು ಅಧ್ಯಾಯ ಕೊನೆಗೊಂಡಿದೆ. ಬಹುತೇಕ ಮಾಧ್ಯಮಗಳು ಈ ವಿದ್ಯಮಾನವನ್ನು 'ರಾಹುಲ್ ಗಾಂಧಿಯವರ ಗೆಲುವು' ಎಂದು ಬಣ್ಣಿಸುತ್ತಿರುವುದು ನೋಡಿದರೆ, ಅವು ಯಾವ ಮಟ್ಟಕ್ಕೆ ಬಾಲಿಶವಾಗಿ ವರ್ತಿಸುತ್ತಿವೆ ಎನ್ನುವುದು ಅರ್ಥವಾಗುತ್ತದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕದ ಅಧ್ಯಕ್ಷ ಒಬಾಮ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್‌ರೊಂದಿಗೆ ಮಾತುಕತೆ ಮುಗಿಸಿ ಅಮೆರಿಕದಿಂದ ಹಿಂದಿರುಗುವಾಗ, ಸುಗ್ರೀವಾಜ್ಞೆ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯ ಕುರಿತು ತಮ್ಮ ಕ್ಯಾಬಿನೆಟ್‌ನೊಂದಿಗೆ ಚರ್ಚಿಸುವುದಾಗಿ ಹೇಳಿದರು. ಇಷ್ಟಕ್ಕೂ ರಾಹುಲ್ ತಮ್ಮ ಮೂರೂವರೆ ನಿಮಿಷದ ಭಾಷಣದಲ್ಲಿ ಹೇಳಿದ್ದೇನು? ಈ ಸುಗ್ರೀವಾಜ್ಞೆ 'ಸಂಪೂರ್ಣ ಅವಿವೇಕ'ತನದಿಂದ ಕೂಡಿದೆ  ಮತ್ತು ಅದು 'ಹರಿದು ಎಸೆಯಲು ಅರ್ಹವಾಗಿದೆ' ಎಂದು.
ಮನಮೋಹನ್ ಸಿಂಗ್ ಅವರು ತಮ್ಮ ಕ್ಯಾಬಿನೆಟ್‌ನೊಂದಿಗೆ ಚರ್ಚಿಸುವಂಥದ್ದೇನಿದೆ ರಾಹುಲ್‌ರ ಈ ಆಕ್ರೋಶದಲ್ಲಿ?
ಆದಾಗ್ಯೂ ಈ ಸುಗ್ರೀವಾಜ್ಞೆ ಏಕೆ ಸರಿಯಾಗಿಲ್ಲ ಎಂಬ ಬಗ್ಗೆ ರಾಹುಲ್ ಒಂದೂ ವಾದವನ್ನೂ ಮುಂದಿಟ್ಟಿಲ್ಲ. ಇನ್ನೊಂದೆಡೆ ಸೆ. 26 ರ ಸಂಜೆಯಂದು ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಮ್ಮ ಹಲವು ನಾಯಕರೊಂದಿಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿದೆವು. ಈ ಸುಗ್ರೀವಾಜ್ಞೆ ಅಸಂವಿಧಾನಿಕ ಮತ್ತು ಅಕ್ರಮವಷ್ಟೇ ಅಲ್ಲದೆ ಅನೈತಿಕವೂ ಆದದ್ದು ಎನ್ನುವ ಕುರಿತು ನಾಲ್ಕು ಪುಟಗಳ ಮನವಿಯನ್ನು ನಾನು ರಾಷ್ಟ್ರಪತಿಗಳಿಗೆ ಸಲ್ಲಿಸಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಶಿಕ್ಷೆಗೊಳಗಾದ ಶಾಸಕರು ಮತ್ತು ಸಂಸದರನ್ನು ರಕ್ಷಿಸುವ ಈ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅಂಗೀಕಾರ ನೀಡಿದ್ದು ಸೆ. 24ರಂದು. ಈ ಕುರಿತ ಪ್ರತಿಪಕ್ಷದ ಪ್ರತಿಕ್ರಿಯೆ ಸುಷ್ಮಾ ಸ್ವರಾಜ್ ಅವರ ಟ್ವೀಟ್‌ನ ಮುಖಾಂತರ ಹೊರಬಿತ್ತು. ಬಿಜೆಪಿ ಈ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತದೆ ಎಂದವರು ಬರೆದರು. ಇದಾದ ನಂತರ ಅವರು ನನ್ನನ್ನು ಭೇಟಿಯಾದರು ಮತ್ತು ಈ ಸುಗ್ರೀವಾಜ್ಞೆಗೆ ಸಹಿ ಹಾಕಬಾರದೆಂದು ರಾಷ್ಟ್ರಪತಿಗಳನ್ನು ವಿನಂತಿಸಲು ನಾವು ನಿರ್ಧರಿಸಿದೆವು. ಕೂಡಲೇ ಸುಷ್ಮಾ ಅವರು ರಾಷ್ಟ್ರಪತಿಗಳ ಭೇಟಿಗೆ ಅನುಮತಿ ಕೋರಲು ಮುಂದಾದಾಗ, ಪ್ರಣಬ್ ಮುಖರ್ಜಿ ಪುದುಚೆರಿಗೆ ಹೋಗಿರುವುದಾಗಿಯೂ, ಸೆ. 26 ರಂದು ಸಂಜೆ 4 ಗಂಟೆಗೆ ಹಿಂದಿರುಗಲಿದ್ದಾರೆ ಎಂಬುದು ತಿಳಿಯಿತು.
ಆ ದಿನ ನಾವು ಅವರನ್ನು 5.30ಕ್ಕೆ ಭೇಟಿ ಮಾಡಿ ಸುಮಾರು 45 ನಿಮಿಷಗಳವರೆಗೆ ಮಾತನಾಡಿದೆವು. ಮಾತುಕತೆಯ ನಂತರ, ಪರಿಸ್ಥಿತಿಯ ಅರಿವು ಅವರಿಗಾಗಿದೆ ಮತ್ತು ಸುಗ್ರೀವಾಜ್ಞೆಗೆ ಅವರು ಸಹಿಹಾಕುವುದಿಲ್ಲ ಎನ್ನುವುದು ನಮಗೆ ಅರ್ಥವಾಯಿತು.
ಇದಾದ ಕೆಲವೇ ಕ್ಷಣಗಳಲ್ಲಿ ಅವರು ಶಿಂದೆ, ಸಿಬಲ್ ಮತ್ತು ಕಮಲ್‌ನಾಥ್ ಅವರಿಗೆ ಬರಹೇಳಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗತೊಡಗಿತು. ನಾವಂದುಕೊಂಡ ರೀತಿಯಲ್ಲೇ ಪ್ರಣಬ್ ಮುನ್ನಡಿಯಿಡುತ್ತಿದ್ದಾರೆ ಎನ್ನುವುದು ನಮಗೆ ಸ್ಪಷ್ಟವಾಯಿತು. ಪ್ರಣಬ್ ಮುಖರ್ಜಿಯವರು ಈ ಸುಗ್ರೀವಾಜ್ಞೆಗೆ ಸಹಿ ಹಾಕುವುದಕ್ಕೆ ತಯಾರಿಲ್ಲ ಎನ್ನುವುದು ಆಗ ಈ ಮಂತ್ರಿಗಳಿಗೆ ಗೊತ್ತಾಗಿದೆ. ಒಂದು ವೇಳೆ ರಾಷ್ಟ್ರಪತಿಗಳು ಸಹಿ ಹಾಕದೆ ವಾಪಸ್ ಕಳುಹಿಸಿದರೆ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನುವುದನ್ನು ಮನಗಂಡ ಮಂತ್ರಿಗಳು, ಕೂಡಲೇ ಎಚ್ಚೆತ್ತುಕೊಂಡರು.
ಬಹುಷಃ ಈ ಘಟನೆ ನಡೆದ ನಂತರವೇ ಸೋನಿಯಾ ಗಾಂಧಿಯವರು, ಸರ್ಕಾರಕ್ಕಾದ ಹಾನಿಯನ್ನು ಸರಿಪಡಿಸುವ ಕೆಲಸಕ್ಕೆ ರಾಹುಲ್‌ರನ್ನು ಕಳುಹಿಸಬೇಕು ಎಂದು ಯೋಚಿಸಿರಬಹುದು. ಆದರೆ ಈ ಕೆಲಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ರಾಹುಲ್‌ಗೆ ಯಾರೂ ಹೇಳಿಕೊಟ್ಟಿರಲಿಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ. "ಸರ್ಕಾರ ತಾನು ತೆಗೆದುಕೊಂಡಿರುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು" ಎಂದವರು ಹೇಳಿದ್ದರೂ ಸಾಕಿತ್ತು. ಆದರೆ ಹಾಗೆ ಮಾಡಲಿಲ್ಲ. ಈ ಕುರಿತು ಅ. 3ರಂದು "ಇಂಡಿಯನ್ ಎಕ್ಸಪ್ರೆಸ್‌" ಪತ್ರಿಕೆ 'ಔ್ಟಡ್ಝಟ್ಜಿ ಋಛ್ಛಜ' ಎನ್ನುವ ಕಟು ಶೀರ್ಷಿಕೆಯಡಿಯಲ್ಲಿ ಸಂಪಾದಕೀಯ ಬರೆಯಿತು. "ರಾಹುಲ್ ಗಾಂಧಿ ಗೆದ್ದಿರಬಹುದು, ಆದರೆ ಯುಪಿಎದ ಅಧಿಕಾರವನ್ನು ಅವರು ತುಸು ಹೆಚ್ಚಾಗೇ ಅಳಿಸಿ ಹಾಕಿದ್ದಾರೆ" ಎಂಬ ಉಪಶೀರ್ಷಿಕೆ ನೀಡಿತ್ತು.
ಹೀಗಾಗಿ, ರಾಹುಲ್‌ರ 'ನಾನ್‌ಸೆನ್ಸ್‌' ನಿಂದೆ ಕೇವಲ ಪ್ರಧಾನಿ ಮತ್ತು ಯುಪಿಎದ ಮಂತ್ರಿಗಳಿಗಷ್ಟೇ ಅನ್ವಯವಾಗುವುದಿಲ್ಲ. ಸೋನಿಯಾ ಗಾಂಧಿಯವರೂ ಇದರಲ್ಲಿ ಜವಾಬ್ದಾರಿ ಹೊರಬೇಕಾಗುತ್ತದೆ. ಭಾರತಕ್ಕೆ ಹಿಂದಿರುಗುತ್ತಿದ್ದ ತಮ್ಮ ವಿಶೇಷ ವಿಮಾನದಲ್ಲಿ ಎನ್‌ಡಿಟಿವಿಯ ಬರ್ಖಾದತ್‌ರೊಂದಿಗೆ ಮಾತನಾಡಿದ ಮನಮೋಹನ್ ಸಿಂಗ್ ಅವರು, "ಈ ಸುಗ್ರೀವಾಜ್ಞೆಗೆ ಸೆ. 21ರಂದು ಸೋನಿಯಾ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಪ್ಪಿಗೆ ದೊರಕಿತ್ತು" ಎಂದು ಒತ್ತುಕೊಟ್ಟು ಹೇಳಿದ್ದಾರೆ. ಇಂಥ ಅನೈತಿಕ ಮತ್ತು ಅಕ್ರಮ ಸುಗ್ರೀವಾಜ್ಞೆ ಜಾರಿಯಾಗದೇ ಇರುವಂತೆ ನೋಡಿಕೊಂಡ ಶ್ರೇಯಸ್ಸು ಕೇವಲ ಪ್ರಣಬ್ ಮುಖರ್ಜಿಯೊಬ್ಬರಿಗೆ ಮಾತ್ರ ಸಲ್ಲಬೇಕು. ರಾಷ್ಟ್ರಪತಿಯಾಗಿ ನೇಮಕವಾದ ಎಲ್ಲಾ ಕಾಂಗ್ರೆಸ್ ನಾಯಕರಂತೆಯೇ ಪ್ರಣಬ್ ಕೂಡ ರಬ್ಬರ್ ಸ್ಟಾಂಪ್ ಆಗಿ ಉಳಿಯಲಿದ್ದಾರೆ ಎಂದು ಭಾವಿಸಿದ್ದ ಯುಪಿಎ ಸರ್ಕಾರ ಈಗ ಉಗುಳು ನುಂಗಿಕೊಳ್ಳುತ್ತಿದೆ.
----
ಇಂಡಿಯನ್ ಎಕ್ಸಪ್ರೆಸ್‌ನ ಆ ಲೇಖನ ಕೊನೆಗೊಳ್ಳುವುದು ಹೀಗೆ: ಮನಮೋಹನ್ ಸಿಂಗ್ ತಾವು ಹುದ್ದೆ ತ್ಯಜಿಸುವುದಿಲ್ಲ ಎನ್ನುವುದನ್ನಂತೂ ಸ್ಪಷ್ಟಪಡಿಸಿದ್ದಾರೆ. ಆದರೆ ಅವರು ಹುದ್ದೆಯಲ್ಲಿದ್ದರೂ ಇಲ್ಲದಂತಿದ್ದಾರೆ ಎನ್ನುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಈ ಸುಗ್ರೀವಾಜ್ಞೆಯ ಮೇಲೆ ಹರಿಹಾಯ್ದಿದ್ದಾರಾದರೂ, ಅದಕ್ಕೆ ತಮ್ಮದೇ ಆದ ಕಾರಣವನ್ನು ಅವರು ಕೊಟ್ಟಿಲ್ಲ. ಆಡಳಿತದ ಬಗೆಗಿನ ಅವರ ನಿಲುವೇನು ಎನ್ನುವುದೂ ಅಪರಿಚಿತವಾಗೇ ಉಳಿದಿದೆ. ಆದರೆ ಸರ್ಕಾರದ ನಿರ್ಧಾರಗಳನ್ನು ಭಂಗ ಮಾಡುವ ಅವರ ಸಾಮರ್ಥ್ಯವಂತೂ ಹೊರಬಿದ್ದಿದೆ. ಇನ್ಮುಂದೆಯಂತೂ ಅವರ ಮೌನ ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಡಲಿದೆ. ಈ ನಡೆಯಿಂದಾಗಿ ಮುಂಬರಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ ಎಂಬ ವಿಷಯ ಏನೇ ಇದ್ದರೂ, ಸರ್ಕಾರ ಮುಖಭಂಗ ಅನುಭವಿಸಿದೆ ಎಂಬುದಂತೂ ಸುಳ್ಳಲ್ಲ.

- ಎಲ್. ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.