ದೇವರನ್ನು ಕೆತ್ತುವ ಕೈಗೆ ರಕ್ಷಣೆ ಬೇಕು, ಭಿಕ್ಷೆಯಲ್ಲ
"ಯಾವುದೇ ಸಮುದಾಯಕ್ಕೆ ಸಂಘಟನಾ ಪ್ರಜ್ಞೆ ಬರುವವರೆಗೆ ರಾಜಕೀಯ ಸ್ಥಾನಮಾನ ಸಿಗುವುದಿಲ್ಲ ಎನ್ನುವುದು ಸತ್ಯ, ಆದರೆ ನಾವೀಗ ಹಕ್ಕು ಕೇಳುವ ಹಂತ ತಲುಪಿದ್ದೇವೆ. ವಿಶ್ವಕರ್ಮ ಸಮಾಜ ರಾಜಕೀಯ ಪ್ರಾತಿನಿಧ್ಯ ಕೇಳುತ್ತಿದೆ ಎನ್ನುವ ಕಾರಣಕ್ಕೆ ನಾವು ಅಹಿಂದ ವ್ಯಾಪ್ತಿಯಿಂದ ಹೊರಗಿದ್ದೇವೆ ಎಂದರ್ಥವಲ್ಲ" ಎನ್ನುತ್ತಾರೆ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ, ಕೆ.ಪಿ. ನಂಜುಂಡಿ.
ರಾಜ್ಯದಲ್ಲಿ ಅಹಿಂದ ಹೋರಾಟ ನಿರಂತರವಾಗಿರಬೇಕೆಂದು ನೀವು ಪ್ರತಿಪಾದಿಸುತ್ತೀರಾ?
ಹೌದು. ಅಹಿಂದ ಒಂದು ನಿರಂತರ ಪ್ರಕ್ರಿಯೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ವರ್ಗದ ಪ್ರಶ್ನಾತೀತ ನಾಯಕ. ಅವರು ಮುಖ್ಯಮಂತ್ರಿಯಾದ ತಕ್ಷಣಕ್ಕೆ ಅಹಿಂದ ಹೋರಾಟ ಕೊನೆಯಾಗಬಾರದು. ಮೊದಲನೆಯದಾಗಿ ಅಹಿಂದ ಸಿದ್ದರಾಮಯ್ಯನವರು ಕಷ್ಟಪಟ್ಟು ಕಟ್ಟಿದ ವೇದಿಕೆ. ಎರಡನೆಯದಾಗಿ ರಾಜ್ಯದಲ್ಲಿ ಇನ್ನು ಹಲವು ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಾನ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಅದು ಮುಂದುವರಿಯಬೇಕು. ಖುದ್ದು ಸಿದ್ದರಾಮಯ್ಯನವರೇ ಹಿಂದುಳಿದ ಜಾತಿಗಳ ಸಮಾವೇಶಕ್ಕೆ ಒಪ್ಪಿಗೆ ನೀಡಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿರುವುದರಿಂದ ಸಂಘಟನೆ ಜವಾಬ್ದಾರಿ ಹೊರಲು ಅವರಿಗೆ ಸಾಧ್ಯವಾಗದಿದ್ದರೂ, ರಕ್ಷಣೆ ಇರುತ್ತದೆ ಎಂಬ ಭರವಸೆ ಇದೆ.
ಹಾಗಾದರೆ ವಿಶ್ವಕರ್ಮ ಸಮುದಾಯವನ್ನು ಸಂಘಟಿಸಿದ ನಿಮ್ಮ ಬೆಂಬಲ ಅಹಿಂದಕ್ಕೆ ಇದೆಯೇ ?
ಹೌದು. ವಿಶ್ವಕರ್ಮ ಜನಾಂಗದವರೂ ಹಿಂದುಳಿದ ವರ್ಗಕ್ಕೆ ಸೇರಿದವರು. ನಾವು ಅಹಿಂದದಲ್ಲಿ ಒಂದು. ನಾವು ಅವರೊಟ್ಟಿಗೆ ಇದ್ದೇವೆ. ಆದರೆ ನಮ್ಮ ಸಮುದಾಯವನ್ನು ಒಟ್ಟಿಗೆ ಸೇರಿಸುವುದಕ್ಕೆ 13 ವರ್ಷ ಬೇಕಾಯಿತು. ಈಗ ನಾವು ರಾಜಕೀಯ ಪ್ರಾತಿನಿಧ್ಯವನ್ನು ಕೇಳುತ್ತಿದ್ದೇವೆ. ಹಾಗಂತ ನಾವು ಅಹಿಂದ ವ್ಯಾಪ್ತಿಯಿಂದ ಹೊರಗಿದ್ದೇವೆ ಎಂದು ಭಾವಿಸಬೇಕಿಲ್ಲ. ನಮ್ಮ ಹಕ್ಕಿನ ಜತೆಗೆ 103 ಹಿಂದುಳಿದ ಜಾತಿಗಳ ಹಕ್ಕಿಗಾಗಿ, ಜಾತಿ ಗಣತಿಗಾಗಿ ಆಗ್ರಹಿಸಿ ಅಕ್ಟೋಬರ್ 16ರಂದು ವಿನೂತನ ಕಾರ್ಯಕ್ರಮ ಆಯೋಜಿಸಿದ್ದೇನೆ. ಅದರಲ್ಲಿ ಅಹಿಂದ ವರ್ಗದ ಎಲ್ಲ ನಾಯಕರೂ ಇರುತ್ತಾರೆ.
ಹಾಗಾದರೆ ನೀವು ಹಿಂದುಳಿದ ವರ್ಗದಲ್ಲಿ ಬಹುಸಂಖ್ಯಾತರೋ, ಅಲ್ಪಸಂಖ್ಯಾತರೋ ?
ನಾವು ಈ ಹಿಂದೆ ಸಂಘಟಿತರಾಗಿರಲಿಲ್ಲ. ಹೀಗಾಗಿ ಅಲ್ಪಸಂಖ್ಯಾತರ ಹಾಗೆ ಕಾಣುತ್ತಿದ್ದೆವು. ಆದರೆ ಕಳೆದ 13 ವರ್ಷಗಳಲ್ಲಿ ವಿಶ್ವಕರ್ಮರಲ್ಲಿ ಸಂಘಟನಾ ಪ್ರಜ್ಞೆ ಬೆಳೆದಿದೆ. ಪಂಚ ಕಸುಬು ಮಾಡುವ ನಾವೆಲ್ಲರೂ ಒಂದಾಗುತ್ತಿದ್ದೇವೆ. ನನ್ನ ಪ್ರಕಾರ ವಿಶ್ವಕರ್ಮರು ಈ ನಾಡಿನ ಎರಡನೇ ದೊಡ್ಡ ಹಿಂದುಳಿದ ಜಾತಿ.
ಆದರೆ ಇದನ್ನು ಯಾರೂ ಒಪ್ಪುತ್ತಿಲ್ಲವಲ್ಲ ? ಇದೊಂದು ಪಿತೂರಿಯೇ ?
ಇದನ್ನು ನಾನು ಪಿತೂರಿ ಎನ್ನಲಾರೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆ ರೀತಿ ವರ್ತಿಸುತ್ತಿವೆ. ನಂಜುಂಡಿ ಬೆಳೆಯುತ್ತಿದ್ದಾನೆ ಎಂಬ ಕಾರಣಕ್ಕೋ, ಇನ್ನೊಂದು ಸಮುದಾಯ ಸವಲತ್ತಿನಲ್ಲಿ ಪಾಲು ಕಿತ್ತುಕೊಳ್ಳಬಹುದೆಂಬ ಭಯಕ್ಕೋ ವಿಶ್ವಕರ್ಮರ ಸಂಖ್ಯಾ ಬಾಹುಳ್ಯವನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ ನಾವು ಇದೆಲ್ಲವನ್ನು ಮೀರಿ ನಿಲ್ಲುತ್ತೇವೆ. ತಾತ್ಕಾಲಿಕವಾಗಿ ನಮಗೆ ರಾಜಕೀಯ ಸ್ಥಾನಮಾನ ಸಿಗದೇ ಇರಬಹುದು. ಅವರು ಹೇಳುವ ಪ್ರಕಾರ ನಮ್ಮ ಸಮುದಾಯದ ಜನಸಂಖ್ಯೆ ನಾವು ಹೇಳಿದಷ್ಟು ಇಲ್ಲದೇ ಇರಬಹುದು. ಆದರೆ ಇದೆಲ್ಲದಕ್ಕೂ ಒಂದು ದಿನ ಉತ್ತರ ಸಿಗುತ್ತದೆ.
ಅದು ಯಾವಾಗ ? ಬರಿ ಆಶಾವಾದವೇ ?
ಇಲ್ಲ. ಜಾತಿವಾರು ಗಣತಿಯಾದಾಗ ಯಾವ ಸಮುದಾಯದವರು ಎಷ್ಟು ಸಂಖ್ಯೆಯಲ್ಲಿ ಇದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಲಭಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಜಾತಿವಾರು ಜನಗಣತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಅವರು ಅತಿ ದೊಡ್ಡ ಹಿಂದುಳಿದ ಜಾತಿಯವರಾದರೂ ಸರ್ವರಿಗೂ ಸಮಬಾಳು, ಸಮಪಾಲು ತತ್ವದಲ್ಲಿ ನಂಬಿಕೆ ಹೊಂದಿದ್ದಾರೆ. ಜಾತಿವಾರು ಗಣತಿಯಾದರೆ ಜನಸಂಖ್ಯೆ ಆಧಾರದ ಮೇಲೆ ಸಮಾಜದ ಧ್ವನಿ ಅಡಗಿಸುವ ಪ್ರಯತ್ನವೂ ನಿಲ್ಲುತ್ತದೆ.
ಹಾಗಾದರೆ ರಾಜ್ಯದ ಬದಲಾದ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗದರಿಗೆ ಸವಲತ್ತು ಸಿಗುತ್ತಿದೆಯೇ ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸವಲತ್ತನ್ನು ಬಳಸಿಕೊಳ್ಳುವ ಶಕ್ತಿ ಸಣ್ಣ ಸಣ್ಣ ಜಾತಿಗೆ ಬೇಕು. ರಾಜ್ಯದಲ್ಲಿ 103 ಹಿಂದುಳಿದ ಜಾತಿಗಳಿವೆ. ಆದರೆ ಮೂರರಿಂದ ನಾಲ್ಕು ಜಾತಿಯವರು ಮಾತ್ರ ಎಲ್ಲ ರೀತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರತಿ ಜಾತಿಯಲ್ಲೂ ನಾಯಕತ್ವ ಸೃಷ್ಟಿಯಾದಾಗ ಪರಿಸ್ಥಿತಿ ಸುಧಾರಿಸುತ್ತದೆ.
ವಿಶ್ವಕರ್ಮರಲ್ಲಿ ನಾಯಕತ್ವ ಸೃಷ್ಟಿಯಾಗಲು ಬಿಟ್ಟಿರಲಿಲ್ಲವೇ ?
ನಾಯಕತ್ವ ಸೃಷ್ಟಿಯಾಗಲು ಬಿಟ್ಟಿರಲಿಲ್ಲ ಎಂಬುದನ್ನು ನಾನು ಒಪ್ಪಲಾರೆ. ನಮಗೆ ರಾಜಕೀಯ ಸ್ಥಾನಮಾನ ಮಾತ್ರ ಸಿಕ್ಕಿಲ್ಲ. ಆದರೆ ಸಂಘಟನೆ ಇದೆ. ಹದಿಮೂರು ವರ್ಷದ ಹಿಂದೆ ರಾಜ್ಯದಲ್ಲಿ ವಿಶ್ವಕರ್ಮ ಎಂಬ ಹೆಸರು ಇರಲಿಲ್ಲ. ಎಷ್ಟೋ ಅಧಿಕಾರಿಗಳಿಗೆ ಪಂಚಕಸುಬು ಮಾಡುವವರು ವಿಶ್ವಕರ್ಮರು ಎಂಬುದು ಗೊತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಮಗೆ ಅಧಿಕಾರ ನೀಡದೇ ರಾಜಕೀಯವಾಗಿ ತುಳಿಯಬಹುದು. ಆದರೆ ಸಂಘಟನೆಯನ್ನು ಮುರಿಯುವುದು ಅಸಾಧ್ಯ. ಯಾವುದೇ ಸಮುದಾಯಕ್ಕೆ ಸಂಘಟನಾ ಪ್ರಜ್ಞೆ ಬರುವವರೆಗೆ ರಾಜಕೀಯ ಸ್ಥಾನಮಾನ ಸಿಗುವುದಿಲ್ಲ ಎಂಬುದಂತೂ ಸತ್ಯ. ಈಗ ನಾವು ಹಕ್ಕು ಕೇಳುವ ಹಂತ ತಲುಪಿದ್ದೇವೆ.
ಆದರೆ ಕಾಂಗ್ರೆಸ್ ನಿಮ್ಮನ್ನು ಗುರುತಿಸಿಲ್ಲ, ಪ್ರಾತಿನಿಧ್ಯ ನೀಡಿಲ್ಲ.
ಅದು ಸುಳ್ಳು. ವಿಶ್ವಕರ್ಮರು ಸಂಘಟಿತರಾಗುವುದಕ್ಕೆ ಕಾಂಗ್ರೆಸ್ನ ಕೊಡುಗೆಯೂ ಇದೆ. ನೋಡಿ ಈಗ ನನ್ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದ್ದಾರೆ. ಕಳೆದ 13 ವರ್ಷಗಳಿಂದ ನಮ್ಮ ಸಂಘಟನೆಗೆ ಪಕ್ಷದ ಬೆಂಬಲವಿದೆ. ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಯಾವುದೋ ಹುದ್ದೆಗೆ ನನ್ನನ್ನು ನೇಮಕ ಮಾಡಿಲ್ಲ ಎಂದ ಮಾತ್ರಕ್ಕೆ ಪಕ್ಷ ನಮ್ಮ ಜತೆಗಿಲ್ಲ ಎನ್ನಲಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಸಭಾ ಸ್ಥಾನಕ್ಕೆ ಒಬ್ಬರ ಹೆಸರನ್ನು ಸೂಚಿಸಬೇಕಿತ್ತು. ನಾನು ಒಬ್ಬ ಆಕಾಂಕ್ಷಿಯಾಗಿದ್ದೆ ನಿಜ. ಆದರೆ ಹರಿಪ್ರಸಾದ್ ಅವರಿಗೆ ಕೊಟ್ಟಿದ್ದನ್ನು ವಿರೋಧಿಸಿಲ್ಲ. ಮುಂದಿನ ದಿನಗಳಲ್ಲಿ ನನಗೂ ಅವಕಾಶವಿದೆ ಎಂದು ನಂಬಿದ್ದೇನೆ.
ಹಾಗಾದರೆ ನಿಮಗೆ ಮೋಸವಾಗಿದೆ ಅನ್ನಿಸಿಲ್ಲವೇ ?
ಪಕ್ಷದಿಂದ ಹಾಗೂ ಸರ್ಕಾರದಿಂದ ನನಗೆ ಮೋಸವಾಗಿದೆ ಎಂದು ಅನ್ನಿಸಿಲ್ಲ. ಆದರೆ ನನಗೆ ಅವಕಾಶ ಕೊಡಬಹುದಿತ್ತು ಎಂಬ ಭಾವ ಕಾಡಿದೆ. ಬೇರೆಯವರಿಗೆ ಅವಕಾಶ ನೀಡಿದಾಗ ಪಕ್ಷಕ್ಕೆ ಅವರ ಅನಿವಾರ್ಯತೆ ಬೇರೆ ರೀತಿಯಲ್ಲಿ ಇರಬಹುದು ಎಂದು ಸಮಾಧಾನಪಟ್ಟುಕೊಂಡಿದ್ದೇನೆ. ಅರ್ಹತೆ ಇರುವವರನ್ನು ಗುರುತಿಸಿ ಪ್ರಾತಿನಿಧ್ಯ ನೀಡದೇ ಇರುವುದು ಪಕ್ಷದ ತಪ್ಪಲ್ಲ. ಅದು ನಾಯಕತ್ವದ ತಪ್ಪು. ಮುಖವಾಡ ಧರಿಸಿದವರಿಗೆ ಮಣೆ ಹಾಕುವುದು ನಾಯಕರ ಬಲಹೀನತೆಯನ್ನು ತೋರಿಸುತ್ತದೆ. ಅಂಥ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಇಲ್ಲ ಎಂಬುದು ನನ್ನ ಭಾವನೆ. ನನ್ನನ್ನು ಒಳಗೊಂಡಂತೆ ಅವಕಾಶ ವಂಚಿತರಿಗೆ ಸ್ಥಾನಮಾನ ಲಭಿಸುತ್ತದೆ ಎಂಬ ವಿಶ್ವಾಸವಿದೆ.
ಹಾಗಾದರೆ ನಂಜುಂಡಿ ಅವರ ವಿಶ್ವಕರ್ಮರ ಸಂಘಟನೆ ಉದ್ದೇಶ ಅಧಿಕಾರದ ಬಯಕೆಯಿಂದಲ್ಲ.
ಅಲ್ಲ. ಚದುರಿ ಹೋಗಿದ್ದ ನಾವು ಗಟ್ಟಿಯಾಗಬೇಕಿತ್ತು. ನಮ್ಮ ಪಂಚ ಕಸುಬನ್ನು ಉಳಿಸಬೇಕಿತ್ತು, ಸಮುದಾಯದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿತ್ತು. ಆ ನಿಟ್ಟಿನಲ್ಲಿ ನಾವು ಯಶಸ್ವಿಯಾಗಿದ್ದೇವೆ. ವಿಶ್ವಕರ್ಮ ಸಮುದಾಯದವರಿಗೆ ರಾಜಕೀಯ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ದೇವರನ್ನು ಕೆತ್ತುವ ಕೈಗೆ ರಕ್ಷಣೆ ಬೇಕೆ ವಿನಾ ಭಿಕ್ಷೆಯಲ್ಲ. ನಾವು ಭಾರತೀಯ ನಾಗರಿಕತೆಯ ಮುಖವನ್ನು ಜಗತ್ತಿಗೆ ಅನಾವರಣಗೊಳಿಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದವರು ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆ ಹೋಗುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಸಮುದಾಯದ ಪ್ರತಿಭಾವಂತರಿಗೆ ಆರ್ಥಿಕ ನೆರವು ಬೇಕಿದೆ. ಈ ಕಾರಣಕ್ಕಾಗಿಯೇ ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಬಹಿರಂಗವಾಗಿ ಬೆಂಬಲಿಸಿದ್ದೆವು. ಅದಕ್ಕೆ ಪ್ರತಿಯಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸರ್ಕಾರ ರಚಿಸಿದೆ. ಮುಂದಿನ ಲೋಕಸಭೆ ಚುನಾವಣೆ ಸಮಯದಲ್ಲೂ ನಾವು ಪಕ್ಷದ ಜತೆಗೆ ಇರುತ್ತೇವೆ. ಇದರಲ್ಲಿ ಅನುಮಾನ ಬೇಡ.
- ರಾಘವೇಂದ್ರ ಭಟ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

