ಅಂಕಣಗಳು

ಶೌಚಾಲಯವನ್ನೂ ಸಂಕುಚಿತ ದೃಷ್ಟಿಯಿಂದ ನೋಡುವುದೇಕೆ?

Published On :

ಯಾರ ಹೃದಯದಲ್ಲಿ ಧರ್ಮದ ಬಲವಿದೆಯೋ, ಆ ವ್ಯಕ್ತಿ ಮಾತ್ರ ದೇವರ ಪೂಜೆಯ ವಾಸ್ತವಿಕ ಸತ್ಯವನ್ನು ಆತ್ಮವಿಶ್ವಾಸದಿಂದ ವ್ಯಾಖ್ಯಾನ ಮಾಡಬಲ್ಲ. ಕೆಲವು ವರ್ಷಗಳ ಹಿಂದೆ ನಾವು 'ಧರ್ಮಕ್ಷೇತ್ರೇ ಕುರುಕ್ಷೇತ್ರೇ' ಎನ್ನುವ ವಿಶೇಷಾಂಕವನ್ನು ಹೊರತಂದಾಗ, ಮೊದಲ ಪುಟದಲ್ಲಿ ಕಾಶಿಯ ಡೋಮರಾಜ(ಸ್ಮಶಾನದ ವ್ಯವಸ್ಥೆಯನ್ನು ನೋಡಿಕೊಳ್ಳುವವನು)ನ ಮನೆಯಲ್ಲಿ ಪುರಿಯ ಶಂಕರಾಚಾರ್ಯರು ಮತ್ತು ಅಶೋಕ್ ಸಿಂಘಾಲ್ ಅವರು ಊಟ ಮಾಡುತ್ತಾ ಕುಳಿತಿರುವ ಚಿತ್ರವನ್ನು ಪ್ರಕಟಿಸಿದ್ದೆವು. ಅದನ್ನು ನೋಡಿದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಫೋನ್ ಮಾಡಿ ನಮಗೆ ಅಭಿನಂದನೆಗಳನ್ನು ಸೂಚಿಸಿದ್ದರು. ಕಾಶೀ ವಿಶ್ವನಾಥ ಮಂದಿರದ ಅವ್ಯವಸ್ಥೆ, ಹೊಲಸು, ಗಂಗಾ ತಟದಲ್ಲಿ ಪೂಜಾರಿಗಳು/ ಜನರು ಹರಡುವ ಕಸದ ಬಗ್ಗೆ ಟೀಕಿಸಿ ನಾನು ಸಂಪಾದಕೀಯ ಬರೆದಾಗ ಬಹಳಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ನನಗೆ ಬಂದಿದ್ದವು.  
ದೇವಾಲಯಗಳಿಗಿಂತ ಹೆಚ್ಚಿನ ಆದ್ಯತೆ ಶೌಚಾಲಯಗಳ ನಿರ್ಮಾಣಕ್ಕೆ ಕೊಡಬೇಕು ಎನ್ನುವ ನರೇಂದ್ರ ಮೋದಿಯವರ ಮಾತು ಈಗ ಎಲ್ಲಡೆಯೂ ಚರ್ಚೆಯಾಗುತ್ತಿದೆ. ಆದರೆ ಅವರು ಆ ರೀತಿ ಮಾತನಾಡುವ ಮೂಲಕ ಹಿಂದುತ್ವದ ಸುಧಾರಣಾವಾದಿ ಗುಣವನ್ನು ಎತ್ತಿ ಹಿಡಿದಿದ್ದಾರೆ ಎನ್ನುವುದನ್ನು ಯಾರೂ ಗಮನಿಸುತ್ತಿಲ್ಲ.
150 ವರ್ಷಗಳ ಹಿಂದೆಯೂ ನರೇಂದ್ರ(ವಿವೇಕಾನಂದ)ರು- "ಗೀತೆ ಓದುವುದಕ್ಕಿಂತ ಮುಂಚೆ ಫುಟ್‌ಬಾಲ್ ಆಡುವುದು ಒಳಿತು" ಎಂದು ಯುವಕರು ನೆರೆದಿದ್ದ ಸಭೆಯಲ್ಲಿ ಹೇಳಿದ್ದರು. ಆಗ ಕೆಲವು ಮೂರ್ಖಶಿಖಾಮಣಿಗಳು ಅವರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ವಿವೇಕಾನಂದರು ಗೀತೆಯನ್ನು ಫುಟ್‌ಬಾಲ್‌ಗಿಂತಲೂ ಕೀಳು ಎಂದು ಭಾವಿಸುತ್ತಾರೆ ಎಂದು ತಮ್ಮದೇ ವ್ಯಾಖ್ಯಾನ ನೀಡಿ ಹುಯಿಲೆಬ್ಬಿಸಿದರು. ನಮ್ಮ ಉಪನಿಷತ್ತು ಕೂಡ "ಶರೀರ ಮಾಧ್ಯಮೇಣ ಧರ್ಮ ಸಾಧನಮ್‌" ಎಂದು ಹೇಳುತ್ತದೆ. ದುರ್ಬಲ, ಅಸ್ವಸ್ಥ ದೇಹಕ್ಕೆ ಧರ್ಮದ ಮೇಲೆ, ದೇಶದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಆರ್‌ಎಸ್‌ಎಸ್‌ನ ಸಂಸ್ಥಾಪಕ ಡಾ. ಹೆಡಗೇವಾರ್ ಕೂಡ ಹೇಳುತ್ತಿದ್ದರು. ಹಾಗಾಗೇ ಅವರು ಭಕ್ತಿ ಕಲಿಸುವುದಕ್ಕಾಗಿ ಶಾರೀರಿಕ ವ್ಯಾಯಾಮ, ಯೋಗ ಮತ್ತು ಕ್ರೀಡೆಗಳನ್ನು ಸಂಘದಲ್ಲಿ ಪ್ರಾರಂಭಿಸಿದರು. ಶರೀರ ಸಬಲ ಮತ್ತು ಸ್ವಚ್ಛವಾಗಿದ್ದರೆ ಮಾತ್ರ ಏಕಾಗ್ರತೆಯಿಂದ ದೇವ ಮತ್ತು ದೇಶ ಸೇವೆಯಲ್ಲಿ ತೊಡಗಬಹುದು.  
ಅಂತಾರಾಷ್ಟ್ರೀಯ ಸ್ತರದಲ್ಲಿ ಹಿಂದು ಸಮಾಜದಲ್ಲಿ ಜಾಗೃತಿ ಮೂಡಿಸಿದವರಲ್ಲಿ ಸ್ವಾಮಿ ನಾರಾಯಣ ಸಂಪ್ರದಾಯ ಅವರ ಹೆಸರೂ ಬಹುವಾಗಿ ಕೇಳಿಬರುತ್ತದೆ. ಪ್ರಪಂಚದಾದ್ಯಂತ ಅತಿ ಹೆಚ್ಚು ಹಿಂದು ಮಂದಿರಗಳನ್ನು ಸ್ಥಾಪಿಸಿರುವ ಅವರು, ಹಿಂದು ಸಮಾಜದ ಹೊಸ ಪೀಳಿಗೆಗೆ ಧರ್ಮದ ಮೂಲ ತತ್ವಗಳ ಜೊತೆ ಜೊತೆಗೆ,  ಅನಿಷ್ಟ ಪದ್ಧತಿಗಳ ವಿರುದ್ಧ ಸಂಘರ್ಷಕ್ಕಿಳಿಯುವಂತೆಯೂ ಕರೆಕೊಡುತ್ತಾರೆ. "ಇದೆಲ್ಲಕ್ಕಿಂತಲೂ ಮೊದಲು, ಸ್ವಚ್ಛತೆಗೆ ಹೆಚ್ಚು ಒತ್ತುಕೊಡಿ" ಎಂದು ಹೇಳುವುದನ್ನು ಮಾತ್ರ ಅವರು ಮರೆಯುವುದಿಲ್ಲ. ದೇಶದಲ್ಲಿನ ಯಾವುದೇ ಸ್ವಾಮಿ ನಾರಾಯಣ ಮಂದಿರಕ್ಕೆ ನೀವು ಭೇಟಿ ಕೊಡಿ. ಅಲ್ಲಿ ಸ್ವಚ್ಛ ಮತ್ತು ಸುಗಂಧಿತ ಪರಿಸರ  ಇರುತ್ತದೆ. ಇನ್ನು ಸಿಖ್ಖರ ಗುರುದ್ವಾರಗಳಲ್ಲಿ, ಜೈನ ಮಂದಿರಗಳಲ್ಲಿ, ಲದ್ದಾಖ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ಬೌದ್ಧ ಮಂದಿರಗಳಲ್ಲೂ ಸ್ವಚ್ಛತೆಗೇ ಮೊದಲ ಆದ್ಯತೆ ಕೊಡಲಾಗುತ್ತದೆ. ಎಲ್ಲೆಲ್ಲಿ ಹಿಂದು ಸಮಾಜದ ಪತನವಾಗಿದೆಯೋ, ಅಲ್ಲೆಲ್ಲ, ವ್ಯಾಪಾರಿ ಬುದ್ಧಿಯ ಭ್ರಷ್ಟ ಪೂಜಾರಿಗಳು, ಕಸ ತುಂಬಿದ ಪುಷ್ಕರಣಿಗಳು ಮತ್ತು ನಿಷ್ಕಾಳಜಿಯ ಜನರಿದ್ದರು ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ.
ಸನಾತನ ವೈದಿಕ ಪರಂಪರೆಯನ್ನು ಸುರಕ್ಷಿತವಾಗಿಡಬೇಕಾದರೆ, ಇಂಥ ಅನಿಷ್ಟಗಳ ವಿರುದ್ಧ ಮಾತನಾಡಲೇ ಬೇಕಾಗುತ್ತದೆ. ಕಳೆದ ಶತಮಾನದಲ್ಲಿ 'ಪಾಖಂಡ ಖಂಡಿನೀ' ಪತಾಕೆ ಹಿಡಿದು ಮಹರ್ಷಿ ದಯಾನಂದರು,  ಮತಾಂತರದ ಮೂಲಕ ಹಿಂದು ಸಮಾಜವನ್ನು ಛಿದ್ರಗೊಳಿಸಲು ಹೊರಟಿದ್ದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಿಂದ ನಮ್ಮ ಧರ್ಮವನ್ನು ರಕ್ಷಿಸಿದರು. ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ, ಲೋಕಮಾನ್ಯ ತಿಲಕ್,  ಅರವಿಂದ ಮತ್ತು ಮಹಾತ್ಮಾ ಗಾಂಧೀಜಿಯವರು ಇದೇ ಪರಂಪರೆಯ ಧ್ವಜವಾಹಕರು. ಅನ್ಯ ಧರ್ಮಗಳ ಜನರಂತೆ ಹಿಂದುಗಳು ಮತಾಂಧರಲ್ಲ. ಹಿಂದು ಮಹಾಪುರುಷರು ಮತ್ತು ಋಷಿಗಳು ಸ್ಪಷ್ಟವಾಗಿ ಹೇಳಿದ್ದಾರೆ- "ಉತ್ತಮವಾಗಿ ಜೀವನ ನಡೆಸಿ, ತಂದೆ-ತಾಯಿಯ ಸೇವೆ ಮಾಡಿ, ನಿಷ್ಕಲ್ಮಶ ಹೃದಯದಿಂದ ಕೆಲಸಗಳನ್ನು ಮಾಡಿ, ಮೋಕ್ಷ ಪಡೆಯುವುದಕ್ಕೆ ಇಷ್ಟೇ ಸಾಕು ಬೇರೇನೂ ಬೇಕಿಲ್ಲ" ಎಂದು.
ಒಂದು ಪೌರಾಣಿಕ ಕಥೆಯೊಂದು ಈ ಸಮಯದಲ್ಲಿ ನೆನಪಾಗುತ್ತಿದೆ. ಒಂದಾನೊಂದು ಕಾಲದಲ್ಲಿ ರಾಜನೊಬ್ಬನಿದ್ದನಂತೆ. ಆತ ಯಾರನ್ನೂ ಹಿಂಸಿಸದೆ, ಶುದ್ಧ ಜೀವನ ನಡೆಸಿದ್ದರಿಂದ, ಸತ್ತ ಮೇಲೆ ಆತನಿಗೆ ಸ್ವರ್ಗಕ್ಕೆ ಕರೊದೊಯ್ಯಲಾಯಿತು. ಮಾರ್ಗ ಮಧ್ಯೆ ರಾಜ ಕುಳಿತಿದ್ದ ವಿಮಾನ ನರಕದ ಮೇಲಿಂದ ಹಾದು ಹೋಗುತ್ತಿದ್ದಾಗ, ನರಕದಲ್ಲಿದ್ದವರು ಜೋರಾಗಿ ಕೂಗತೊಡಗಿದರು. ರಾಜ ಇಣುಕಿ ನೋಡಿದ. ಆಗ ವ್ಯಕ್ತಿಯೊಬ್ಬ 'ಹೇ ರಾಜನ್, ಇನ್ನು ಸ್ವಲ್ಪ ಹೊತ್ತು ನಿಮ್ಮ ವಿಮಾನ ಇಲ್ಲೇ ಇರಲಿ. ಏಕೆಂದರೆ ನಿಮ್ಮನ್ನು ಸ್ಪರ್ಷಿಸಿ ನಮ್ಮ ಬಳಿ ಬರುತ್ತಿರುವ ಗಾಳಿ ಬಹಳ ಆಹ್ಲಾದಕರವಾಗಿದೆ. ನಮ್ಮ ನೋವೆಲ್ಲ ಒಮ್ಮೇಲೆ ಶಮನವಾಗುತ್ತಿವೆ. ನಮ್ಮ ದುಃಖ ಕಡಿಮೆಯಾಗುತ್ತಿದೆ." ಇದನ್ನು ಕೇಳಿದ್ದೇ ರಾಜ ಸ್ವರ್ಗಕ್ಕೆ ಹೋಗುವುದನ್ನು ನಿರಾಕರಿಸಿಬಿಟ್ಟ ಮತ್ತು ಹೇಳಿದ- "ನನಗೆ ಸ್ವರ್ಗ ಬೇಡ, ರಾಜ್ಯ ಬೇಡ, ಮೋಕ್ಷವೂ ಬೇಡ. ನೋವಿನಿಂದ ತತ್ತರಿಸುತ್ತಿರುವ ಜನರ ರಕ್ಷಣೆ ಮಾಡುವ ಅವಕಾಶ ಕೊಡಿ" ಅವನ ಮಾತನ್ನು ಕೇಳಿದ ಶ್ರೀಹರಿ ಆತನಿಗೆ ಮತ್ತು ನರಕವಾಸಿಗಳಿಗೆ ಮೋಕ್ಷ ಪ್ರದಾನ ಮಾಡಿದ ಎಂಬುವ ಮೂಲಕ ಆ ಕಥೆಯ ಅಂತ್ಯವಾಗುತ್ತದೆ.  ಹಿಂದು ಧರ್ಮದ ಸಾರ ಮತ್ತು ಸಂದೇಶ ಬಹಳ ಸರಳವಾಗಿದೆ. ಹಿಂದುವೊಬ್ಬ ಸುಧಾರಣವಾದಿಯಾಗಿರದಿದ್ದರೆ ಆತ ಧಾರ್ಮಿಕನಾಗಿರಲಾರ! ಜೀವನ ಮೌಲ್ಯಗಳಿಗೆ ಘಾಸಿಯಾಗದಂತೆ ಸಮಯಕ್ಕೆ ತಕ್ಕಂತೆ ನಂಬಿಕೆಗಳನ್ನು, ಆಚರಣೆಗಳನ್ನು ಬದಲಿಸುತ್ತಾ ಬಂದ ಅನೇಕ ಮಹಾನ್ ಪುರುಷರಿಂದಾಗಿಯೇ ಹಿಂದು ಧರ್ಮ ಬದುಕುಳಿದಿದೆ.
ಹಾಗೆಯೇ ದೇವಾಲಯಕ್ಕೆ ಕಾಲಿಡುವ ಮೊದಲು ವ್ಯಕ್ತಿಯೊಬ್ಬ ಪರಿಶುಭ್ರನಾಗಿರಲೇಬೇಕು. ಹೊಲಸು ಬಟ್ಟೆ, ಚಪ್ಪಲಿ ಧರಿಸಿ ಯಾರಾದರೂ ದೇವಾಲಯವನ್ನು ಪ್ರವೇಶಿಸುತ್ತಾರೆಯೇ? ಹೊಸ/ ಸ್ವಚ್ಛ ಬಟ್ಟೆ ಧರಿಸಿ ಗುಡಿಯೊಳಗೆ ಪ್ರವೇಶಿಸುವುದೇ ಸರಿಯೆಂಬುದು ಎಲ್ಲರಿಗೂ ಗೊತ್ತು. ಎಲ್ಲಾ ಧರ್ಮಗಳಲ್ಲೂ ಈ ಗುಣವನ್ನು ಗಮನಿಸಬಹುದು. ಮಸೀದಿಯೊಳಗೂ ಕೂಡ ಕೈ ಕಾಲು ತೊಳೆದುಕೊಂಡೇ ಒಳಗೆ ಹೋಗುತ್ತಾರೆ. ಹಾಗಾಗೇ ನರೇಂದ್ರ ಮೋದಿಯವರ ಮಾತನ್ನು ಈ ಹಿನ್ನೆಲೆಯಲ್ಲಿ ನೋಡಬೇಕೇ ಹೊರತು, ಸಂಕುಚಿತ ದೃಷ್ಟಿಕೋನದಿಂದಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಕಲಿತದ್ದನ್ನು ಅವರು ಹೇಳಿದ್ದಾರಷ್ಟೆ. ಇದರಲ್ಲಿ ತಪ್ಪು ಅನ್ನಿಸುವಂಥದ್ದೇನಿದೆಯೋ ತಿಳಿಯುತ್ತಿಲ್ಲ?

- ತರುಣ್ ವಿಜಯ್
tarunvijay2@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.