ಜನಸಂಪನ್ಮೂಲ ಭರಪೂರ, ದುಡಿಯುವ ಕೈಗಳಿಗೆ ಮಾತ್ರ ತತ್ವಾರ
ಮನೆ ಅಂಗಡಿ ಮುಂಗಟ್ಟು ಯಾವುದೋ ಒಂದನ್ನು ಕಟ್ಟಿಸುತ್ತಿರುತ್ತೇವೆ. ಆದರೆ ಕೆಲಸ ತ್ವರಿತಗತಿಯಲ್ಲಿ ಆಗುತ್ತಿರುವುದಿಲ್ಲ. ಕಾರಣ ಲೇಬರ್ ಪ್ರಾಬ್ಲಂ. ಹೋಟಲ್ಗೆ ಹೋಗಿರುತ್ತೇವೆ, ಸರ್ವೀಸಿಗೆ ಬೇಸತ್ತು ಶಪಿಸುತ್ತಾ ಮಾಲೀಕನನ್ನು ತರಾಟೆಗೆ ತೆಗೆದುಕೊಂಡ್ರೆ ಅವರು ಕೊಡೋ ಸಮಜಾಯಿಷಿಯೆಂದರೆ ಲೇಬರ್ ಪ್ರಾಬ್ಲಂ!
ಮನೆಯಲ್ಲಿ ನಾನಾ ಶ್ರಮಯುಕ್ತ ಕೆಲಸಗಳಿಗೆ ನುರಿತ ಕೆಲಸಗಾರರು ಸಿಗದೇ ಸಮಸ್ಯೆಯನ್ನು ಅನುಭವಿಸುತ್ತಿರುತ್ತೇವೆ. ಅರ್ಧಕ್ಕೇ ನಿಂತುಹೋದ ದೊಡ್ಡ ಕಾಮಗಾರಿಗಳಲ್ಲಿ ಹೆಚ್ಚಿನವಕ್ಕೆ ಕಾರಣ ಹಣಕಾಸಿನ ಕೊರತೆ ಅಲ್ಲ, ಬದಲಿಗೆ ಕಾರ್ಮಿಕರ ಸಮಸ್ಯೆ. ಭಾರತ ದೇಶ ಜಗತ್ತಿನಲ್ಲೇ ಸಮೃದ್ಧ ಮಾನವ ಸಂಪನ್ಮೂಲ ಹೊಂದಿರುವ ಶ್ರೇಯಸ್ಸನ್ನು ಪಡೆದಿದೆ ನಿಜ. ಆದರೆ ಈ ಅಂಕಿಅಂಶ ಕೇವಲ ಕಾಗದಗಳಲ್ಲಿ ಮಾತ್ರ ಸೀಮೀತವಾಗಿದ್ದು ಈ ಸಂಪನ್ಮೂಲದ ಸದ್ವಿನಿಯೋಗವಾಗಿ ಶ್ರೇಯಸ್ಸು ಲಭಿಸಿಲ್ಲ ಎಂಬುದು ವಿಷಾದದ ಸಂಗತಿ.
ಕೃಷಿ, ಕಟ್ಟಡ ಕಾಮಗಾರಿ, ಹೋಟೆಲ್ ಉದ್ಯಮ, ಹಾಗೂ ಇನ್ನಿತರ ದೈಹಿಕ ಶ್ರಮ ಬೇಡುವ ಹಲವಾರು ಕ್ಷೇತ್ರಗಳನ್ನು ಕಾರ್ಮಿಕರ ಸಮಸ್ಯೆ ಅತಿಯಾಗಿ ಕಾಡುತ್ತಿದೆ.
ವ್ಯವಸಾಯ: ಕೃಷಿಯನ್ನೇ ಜೀವನಾಧಾರದ ಕಸುಬನ್ನಾಗಿ ಮಾಡಿಕೊಂಡಿರುವವರನ್ನು ಕೇಳಲಾಗಿ ಈ ಸಮಸ್ಯೆಯ ಗಂಭೀರ ಸ್ವರೂಪ ಗೊತ್ತಾಗುತ್ತದೆ. ವ್ಯವಸಾಯವನ್ನು ನಂಬಿ ಬದುಕಿದ ಕುಟುಂಬಗಳೇನಕ ಇವತ್ತು ತಮ್ಮ ಮೂಲವನ್ನೇ ತ್ಯಜಿಸಿ ಬೇರೆ ಉದ್ಯೋಗದತ್ತ ಮುಖಮಾಡಿದ್ದನ್ನು ನೋಡಿದ್ದೇವೆ. ವ್ಯವಸಾಯವೆಂಬುದು ಸಮುದಾಯದೊಡಗೂಡಿ ಮಾಡುವ ಕಾಯಕ. ಕುಟುಂಬ ಸದಸ್ಯರೆಲ್ಲರೂ ಕೈಜೋಡಿಸಿದರೂ ನೀಗದಷ್ಟು ಕೆಲಸ ಅಲ್ಲಿರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ ಅಲ್ಲಲ್ಲಿ ಮಾತ್ರ ಜತನದಿಂದ ವ್ಯವಸಾಯ ಮುಂದುವರಿಸಿಕೊಂಡು ಬಂದ ಉದಾಹರಣೆಗಳಿವೆಯೇ ಹೊರತು ಬಹುತೇಕ ಕೃಷಿ ಅವಲಂಬಿತ ಕುಟುಂಬಗಳು ಕೃಷಿಯಿಂದಲೇ ವಿಮುಖವಾಗಿಬಿಟ್ಟಿವೆ. ಕೋರು ಲಾವಣಿ ರೂಪದಲ್ಲಿ ಊರಿನ ನಂಬಿಗಸ್ತರಿಗೆ ಕೊಟ್ಟು ಬಂದ ಪೀಕಿನಲ್ಲಿಷ್ಟು ಅಂತ ಮಾತಾಡಿ ಕೈತೊಳೆದುಕೊಂಡುಬಿಟ್ಟಿದ್ದಾರೆ. ನಗರದ ಆಸುಪಾಸಿನ ಹಳ್ಳಿಗಳಲ್ಲಂತೂ ಬಹುಪಾಲು ಜನ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮ ದರಕ್ಕೆ ಫಲವತ್ತಾದ ಕೃಷಿಭೂಮಿಯನ್ನು ಮಾರಿಕೊಂಡು ಅದೇ ಮೊತ್ತವನ್ನು ಖರ್ಚುಮಾಡುತ್ತಾ ಕಾಲಹಾಕುತ್ತಿದ್ದಾರೆ. ಇವತ್ತಿನ ಆಹಾರ ಬೇಡಿಕೆ ಮತ್ತು ಪೂರೈಕೆ ಪ್ರಮಾಣದಲ್ಲಿ ವ್ಯತ್ಯಯಕ್ಕೂ ಇವೇ ಕಾರಣ. ಪದವಿಯೊಂದನ್ನು ಪೂರೈಸಿದೆ ಎಂದ ಮಾತ್ರಕ್ಕೆ ಕೃಷಿಯ ಕಡೆಯಿಂದ ವಿಮುಖರಾಗಿಬಿಡುವುದು ಇಂದಿನ ಪೀಳಿಗೆಯ ಯುವಕರ ಧೋರಣೆ. ಇವೆಲ್ಲವುಗಳಿಗೆ ಮುಖ್ಯ ಕಾರಣ ಕೃಷಿಕೆಲಸಕ್ಕೆ ಬೇಕಾಗುವ ನುರಿತ ಅನುಭವಿ ಕೆಲಸಗಾರರು ಬೇರೆ ಕೆಲಸಗಳಿಗೆ ಮುಖಮಾಡಿಬಿಟ್ಟಿದ್ದಾರೆ ಅಥವಾ ಅವರೆಲ್ಲರಿಗೂ ಶ್ರಮಯುಕ್ತ ಕೆಲಸ ಸಾಕೆನಿಸಿದೆ. ಸಕಾಲಕ್ಕೆ ಮಳೆಬಾರದೆ ಮಳೆಯಾಧಾರಿತ ಪ್ರದೇಶಗಳಲ್ಲಿ ಅದರ ಉತ್ಪನ್ನ ಕ್ರಮೇಣವಾಗಿ ಕ್ಷೀಣಿಸುತ್ತಾ ಇರುವುದು ಇವರು ಆಸಕ್ತಿ ಕಳೆದುಕೊಂಡಿರುವುದಕ್ಕೆ ಇನ್ನೊಂದು ಪ್ರಮುಖ ಕಾರಣ. ಪರಸ್ಪರ ಸಹಕಾರ ಮನೋಭಾವದಿಂದ ಒಬ್ಬರ ಕೆಲಸ ಮುಗಿಸಿ ಇನ್ನೊಬ್ಬರ ಕೆಲಸಗಳಿಗೆ ಹೆಗಲುಕೊಟ್ಟು ಸಾಂಗವಾಗಿ ಕೆಲಸಗಳನ್ನೆಲ್ಲ ಮುಗಿಸುತ್ತಿದ್ದ ಕಾಲ ಮರೆಯಾಗಿ ಹೋಗಿದೆ. ಯಾಕೆಂದರೆ ಕೆಲವು ಮನೆಗಳಲ್ಲಿ ಮಾತ್ರ ಈಡೀ ಕುಟುಂಬ ಕೃಷಿ ಕೆಲಸಗಳಿಗೆ ಸಮರ್ಪಿಸಿಕೊಂಡರೆ ಇನ್ನೂ ಕೆಲವು ಮನೆಗಳಲ್ಲಿ ಅದಾಗಲೇ ಈ ಕಸುಬನ್ನು ಮರೆತು ತುಂಬಾ ದಿನಗಳಾಗಿ ಹೋಗಿವೆ.
ರಿಯಲ್ ಎಸ್ಟೇಟ್ ಮತ್ತು ಕಟ್ಟಡ ಕಾಮಗಾರಿ ಉದ್ಯಮ: ಇಲ್ಲಿ ಅನುಭವಿಸುತ್ತಿರುವ ಸಮಸ್ಯೆ ಎಂದರೆ ಕಟ್ಟಡ ಕಾರ್ಮಿಕರ ಕೊರತೆ. ಈ ಕ್ಷೇತ್ರದ ಉದ್ಯಮಿಗಳು ಹೇಳುವ ಪ್ರಕಾರ ವರ್ಷವೊಂದಕ್ಕೆ ನಮ್ಮ ದೇಶದಲ್ಲಿ ಸುಮಾರು 40 ಲಕ್ಷದಷ್ಟು ವಿವಿಧ ವಿಭಾಗಗಳಲ್ಲಿ ನುರಿತ ಕೆಲಸಗಾರರಾರ ತಂತ್ರಜ್ಞರು, ಸರ್ವೇದಾರರು, ಎಂಜಿನಿಯರ್ಗಳು, ಪ್ರೊಜೆಕ್ಟ್ ಮ್ಯಾನೇಜರ್ಗಳು, ಮುಖ್ಯವಾಗಿ ನುರಿತ ಮೂಲ ಕೆಲಸಗಾರರು ಬೇಕು. ಊರಲ್ಲೇ ಇದ್ದು ಶ್ರಮರಹಿತವಾಗಿ ಆರಾಮದಾಯಕ ಕೆಲಸದ ಖಾತ್ರಿ ಭತ್ಯೆ ಮತ್ತು ಸಬ್ಸಿಡಿ ದರದಲ್ಲಿ ಆಹಾರ ಸಾಮಗ್ರಿಗಳು ದೊರೆಯುತ್ತಿರಬೇಕಾದರೆ ನುರಿತ ಕೆಲಸಗಾರರು ಕಟ್ಟಡ ನಿರ್ಮಾಣದಂಥ ಶ್ರಮ ಬೇಡುವ ಕೆಲಸಗಳು ಹೆಚ್ಚಿನ ಭತ್ಯೆ ಸಿಕ್ಕರೂ ಬೇಡವೆನ್ನುತ್ತಿದ್ದಾರೆ. ಕಟ್ಟಡ ನಿರ್ಮಾಣ ನಿರ್ವಹಣೆ ಮಾಡುವ ರಿಯಲ್ ಎಸ್ಟೇಟ್ ಡೆವಲಪರ್ಸ್ ಸಂಘಟನೆಯ ದಾಖಲೆ ಪ್ರಕಾರ ಅಲ್ಲಿ ಶೇ.40 ರಷ್ಟು ಕಾರ್ಮಿಕ ಕೊರತೆಯನ್ನು ಅವರು ಅನುಭವಿಸುತ್ತಿದ್ದಾರೆ ಮತ್ತು ಈ ಮೂಲಕ ಸಾಕಷ್ಟು ಕಾಮಗಾರಿಗಳು ಅತ್ಯಂತ ನಿಧಾನವಾಗಿ ಮತ್ತು ಹಲವಾರು ಬಾರಿ ಕೈತಪ್ಪಿ ಹೋಗಿವೆ ಎನ್ನುವುದು ನುರಿತ ಉದ್ಯಮಿಗಳ ಅಂಬೋಣ.
ಕಾರ್ಮಿಕ ಕೊರತೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಪ್ರಚಲಿತ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಕೆಲ ಯೋಜನೆಗಳನ್ನು. ಮೇಲ್ನೋಟಕ್ಕೆ ಯೋಜನೆಗಳು ಸಾಮಾನ್ಯ ಜನರ ಕಳಕಳಿಗೆ ಅಂತ ಕಂಡುಬಂದರೂ ಅದರಲ್ಲಿ ಕಳಕಳಿಗಿಂತ ಮತಬ್ಯಾಂಕ್ ರಾಜಕಾರಣವೆಂಬ ಅಡ್ಡ ವಾಸನೆ ಮೂಗಿಗೆ ಬಡಿಯುತ್ತಾ ಹೋಗುತ್ತದೆ. ಕೆಳವರ್ಗ ಮತ್ತು ತೀರಾ ಬಡವರ್ಗ ಎಂದು ಗುರುತಿಸಲ್ಪಟ್ಟ ಸಮುದಾಯಕ್ಕೆ ಶ್ರಮವಹಿಸಿ ದುಡಿಯುವ ಅವಕಾಶಗಳನ್ನು ಕಲ್ಪಿಸುವ ಬದಲು ಶ್ರಮರಹಿತರನ್ನಾಗಿಸಿ ಓಲೈಕೆ ರಾಜಕಾರಣಕ್ಕೆ ಮುಂದಾಗಿರುವುದು ಸ್ಪಷ್ಟ. ಅತಿ ಕಡಿಮೆ ದರದಲ್ಲಿ ಮೂಲ ಆಹಾರ ಸಾಮಗ್ರಿ ವಿತರಿಸುವುದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಳ್ಳಿಗಳಲ್ಲಿ ವಾಸವಿರುವ ಬಡವರ್ಗದ ಜನರಿಗೆ ವರ್ಷಕ್ಕೆ 100 ದಿನಗಳ ಖಾತ್ರಿ ಉದ್ಯೋಗ ಕೂಲಿ ಕೊಡುವುದು, ನಿರುದ್ಯೋಗ ಭತ್ಯೆ ಇತ್ಯಾದಿ ಯೋಜನೆಗಳ ಮೂಲ ಉದ್ದೇಶ ಸಮಂಜಸವಾಗಿದ್ದರೂ ಅದರ ಸಾಧಕ ಬಾಧಕಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.
ಅನೇಕ ರಾಜ್ಯಗಳಲ್ಲಿ ಈಗಾಗಲೇ ನಡೆದಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ಕಾರ್ಡ್ ದೊರೆತು ಕಾರ್ಯ ಮಾಡುತ್ತಿರುವ ಹಾಗೂ ಕೆಲವೆಡೆ ಅಸಮರ್ಪಕ ನಿರ್ವಹಣೆಯಿಂದ ಕಾರ್ಯ ಮಾಡದೇ ಇದ್ದರೂ ಖಾಯಂ ಕೂಲಿ ಪಡೆಯುತ್ತಿರುವವರು ಇದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇದು 2006ರಲ್ಲಿ 200 ಜಿಲ್ಲೆಗಳಲ್ಲಿ ಪ್ರಾರಂಭಗೊಂಡು 2010ರ ಹೊತ್ತಿಗೆ 5.26 ಕೋಟಿ ಕುಟುಂಬದವರು ಉದ್ಯೋಗ ಖಾತ್ರಿಯ ಫಲಾನುಭವಿಗಳಾದರು. 2011ರಲ್ಲಿ ಇದಕ್ಕೆ ಮೀಸಲಾಗಿಟ್ಟಿದ್ದ ಬಜೆಟ್ 40,100 ಕೋಟಿ ರೂಪಾಯಿಗಳು ಮಾತ್ರ ಈ ಯೋಜನೆ ಸದುದ್ದೇಶದಿಂದ ಕೂಡಿದ್ದರೂ ಈಗಿನ ನಿರ್ವಹಣೆ ನೋಡಲಾಗಿ ದೇಶಕ್ಕೆ ಆದ ಪ್ರಯೋಜನ ಅಷ್ಟಕಷ್ಟೆ. ದೊಡ್ಡ ಮೊತ್ತದ ಬಜೆಟ್ ಅನ್ನು ನುಂಗಿದ ಇದು ಜನರಲ್ಲಿ ಹೆಚ್ಚಿನದನ್ನು ದುಡಿದು ಗಳಿಸುವ ಆಸಕ್ತಿಯನ್ನು ಕಳೆಯುವುದಕ್ಕೆ ಪ್ರಮುಖ ಕಾರಣವಾಯಿತೆನ್ನುವುದು ವಿಪರ್ಯಾಸ. ಬೇರೆ ಬೇರೆ ಕ್ಷೇತ್ರಗಳನ್ನು ತಾವೇ ಹುಡುಕಿಕೊಂಡು ದಿನವಹಿ ಆದಾಯವನ್ನು ಹೆಚ್ಚಿಸುವುದರತ್ತ ವಿವೇಚನೆ ಮಾಡಿ ಕೆಲಸ ಮಾಡುತ್ತಿದ್ದ ಅವರನ್ನು ಅವುಗಳಿಂದ ವಿಮುಖವಾಗುವಂತೆ ಮಾಡಿಬಿಟ್ಟಿತು. ಇದೇ ಕಾರಣದಿಂದ ಅವರು ಬಿಟ್ಟು ಬಂದ ಕೃಷಿ, ಕಟ್ಟಡ ಕಾಮಗಾರಿ ಮತ್ತಿತರೇ ಶ್ರಮಯುಕ್ತ ಕೆಲಸ ಬೇಡುವ ಕ್ಷೇತ್ರಗಳು ಕಾರ್ಮಿಕರ ಕೊರತೆಯಿಂದ ಬಳಲುವಂತಾಯಿತು.
ಈ ಯೋಜನೆಗಳಿಂದ ಅವರ ಜೀವನ ಮಟ್ಟ ಹೆಚ್ಚಾಗಿರುವುದರ ಕುರಿತೇನೂ ಆಶಾದಾಯಕ ಚಿತ್ರಣಗಳು ಸಿಗುತ್ತಿಲ್ಲ. ಅತಿ ಕಡಿಮೆದರದಲ್ಲಿ ಆಹಾರ ಸಾಮಗ್ರಿ ಪೂರೈಕೆ ಮಾಡುವ ಯೋಜನೆಯಿಂದಲೂ ಸಮಾಜದ ಅರ್ಥವ್ಯವಸ್ಥೆ ಏರುಪೇರಾಗಿರುವುದರಲ್ಲಿ ಸಂಶಯವಿಲ್ಲ. ಈ ಯೋಜನೆಗಳನ್ನು ಫಲಾನುಭವಿಗಳು ಸ್ವಾಗತಿಸಿದರೂ ಕೃಷಿಯಾಧಾರಿತ ಕುಟುಂಬಗಳು, ಅನೇಕ ಸಣ್ಣ ಮತ್ತು ಬೃಹತ್ ಉದ್ಯಮದವರು ಇದನ್ನು ವಿರೋಧಿಸಲು ಪ್ರಾರಂಭಿಸಿದ್ದಾರೆ. ಅನೇಕರು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಹಿಂದೇಟು ಹಾಕುತ್ತಿರುವುದು ಬಂಡವಾಳಕ್ಕೆ ಹೆದರಿ ಅಲ್ಲ, ಉದ್ಯಮ ನಡೆಸಲು ಬೇಕಾಗುವ ಮೂಲ ಕೆಲಸಗಾರರ ಕೊರತೆಗೆ ಹೆದರಿ.
ಮಹತ್ವಾಕಾಂಕ್ಷಿ ಯೋಜನೆಯಾದ 'ನರೇಗಾ' ದಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಿದರೆ ಕೆಲಸಗಾರರ ಕೊರತೆಯನ್ನು ಬಹುಪಾಲು ನೀಗಿಸಬಹುದು. ಈಗಿರುವ ಯೋಜನೆಯಲ್ಲೇ ಕೆಲ ಸಣ್ಣ ಕೈಗಾರಿಕೆಗಳನ್ನು ಸೇರಿಸಿದರೆ, ಹಾಗೂ ನುರಿತರಲ್ಲದ ದುಡಿಯಲು ಶಕ್ತರಿರುವ ವರ್ಗವನ್ನು ತರಬೇತಿ ನೀಡಿ ಅವರನ್ನು ಕೆಲ ಕೆಲಸಗಳಿಗೆ ನುರಿತ ಕಾರ್ಮಿಕರನ್ನಾಗಿಸಿದರೆ, ಭತ್ಯೆ ನೀಡಿದಕ್ಕಿಂತ ಹೆಚ್ಚಿನ ಪ್ರೋಡಕ್ಟಿವಿಟಿ ಪಡೆಯಬಹುದು. ತರಬೇತಿ ಮುಗಿಸಿದ ನೌಕರನ ದಿನವಹಿ ಆದಾಯ ಹೆಚ್ಚಿ ಜೀವನದ ಗುಣಮಟ್ಟದಲ್ಲೂ ಸುಧಾರಣೆ ಕಂಡುಬರುವುದು. ಕೃಷಿ ಕೆಲಸಗಳು ಜೋರಾಗಿ ನಡೆಯುವ ಹಂತದಲ್ಲಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೃಷಿಕೆಲಸಗಳಿಗೆ ಹೋಗುವಂತೆ ಅವರನ್ನು ಪ್ರೋತ್ಸಾಹಿಸುವುದನ್ನು ಮಾಡಬಹುದು.
ನಮ್ಮಲ್ಲಿ ಬೇರೂರಿರುವ ವಿಚಿತ್ರ ಮನೋಸ್ಥಿತಿಯೆಂದರೆ ಕೆಲಸಗಳ ಪ್ರಕಾರಗಳಲ್ಲಿರುವ ತಾರತಮ್ಯ. ಯಾವ ಕೆಲಸಗಳೂ ಕೀಳಲ್ಲ ಎಂಬುದನ್ನು ಮನಗಾಣಬೇಕು. ನಮ್ಮ ಕಾಲಕ್ಕೆ ಈ ಕಸುಬು ಮುಗಿದುಹೋಗಲಿ, ಮಕ್ಕಳು ಶ್ರಮರಹಿತ ಕಸುಬು ನೋಡಿಕೊಳ್ಳಲಿ ಎನ್ನುವ ಹಿರಿಯರ ಮನೋಭಾವ ಬದಲಾಗಬೇಕು. ಇರುವ ಕೆಲಸದಲ್ಲಿ ಹೊಸ ಅವಿಷ್ಕಾರ, ಹೊಸತನ, ಉತ್ಪಾದನೆ ಹೆಚ್ಚಿಸುವುದಕ್ಕೆ ಮಾಡಬೇಕಾದ ಸಣ್ಣ ಪುಟ್ಟ ಮಾರ್ಪಾಟುಗಳನ್ನು ಮಾಡಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರಬೇಕು.
ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕೆ ಹೊರತು ದುಡಿಯುವವರ ಸಂಖ್ಯೆ ಕಡಿಮೆಯಾಗಬಾರದು. ವೋಟ್ಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು, ಸರ್ಕಾರ ಭರಪೂರ ಯೋಜನೆಗಳನ್ನು ಜಾರಿಗೊಳಿಸುವ ಮೊದಲು ಸಂಪನ್ಮೂಲ ಕ್ರೋಢಿಕರಣದ ಬಗ್ಗೆ ಹೆಚ್ಚು ಗಮನವಹಿಸುವುದಕ್ಕೆ ಇದು ಸಕಾಲ.
- ಡಾ. ಅಶೋಕ ಪಾಟೀಲ
ಪ್ರಾಧ್ಯಾಪಕರು
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

