ಕೇಂದ್ರೀಯ ಪಠ್ಯಕ್ರಮದಲ್ಲಿ ಗೋಜಲಾಗಿರುವ ಪ್ರೌಢಶಾಲಾ ಗಣಿತ
ರಾಷ್ಟ್ರೀಯ ಪಠ್ಯಕ್ರಮ 2005ರ ಆಧಾರದಲ್ಲಿ ಸಿದ್ದಪಡಿಸಲಾದ ಕೇಂದ್ರೀಯ ಪಠ್ಯಕ್ರಮದ ಪಠ್ಯಪುಸ್ತಕಗಳು ಕಳೆದ ಸಾಲಿನಿಂದ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಳವಡಿಸಲ್ಪಟ್ಟಿದೆ. ಪ್ರೌಢಶಾಲೆಗಳಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಗಳಿಗೆ ಹೊಸ ಕ್ರಮದ ಪಠ್ಯಪುಸ್ತಕಗಳು ಬಂದಿವೆ. ಅಂತೆಯೇ ಅಭ್ಯಾಸಗಳು ನಡೆಯುತ್ತಿವೆ.
ಗಣಿತ ಪಠ್ಯ ಪುಸ್ತಕವೊಂದು ಹೇಗಿರಬಾರದು ಎಂಬುದಕ್ಕೆ ಪ್ರಸ್ತುತ ಜಾರಿಯಲ್ಲಿರುವ ಎಂಟು ಮತ್ತು ಒಂಬತ್ತನೇ ತರಗತಿಯ ಗಣಿತ ಪಠ್ಯಪುಸ್ತಕ ಅತ್ಯುತ್ತಮ ನಿದರ್ಶನ ಎಂದರೆ ಅತಿಶಯೋಕ್ತಿ ಅಲ್ಲ. ಪಠ್ಯಕ್ರಮದಲ್ಲಿ ಅಂತಹ ಬದಲಾವಣೆ ಇಲ್ಲದಿದ್ದರೂ ವಿಷಯಗಳನ್ನು ಪ್ರಸ್ತುತಪಡಿಸಿದ ವಿಧಾನ ಹಾಗೂ ಕಠಿಣತೆಗಳು ಆ ವಯೋವಾನದ ವಿದ್ಯಾರ್ಥಿಗಳಿಗೆ ಸೂಕ್ತವಾಗಿಲ್ಲ ಎಂಬುದು ತಟ್ಟನೆ ತಿಳಿಯುತ್ತದೆ. ಅವೈಜ್ಞಾನಿಕವಾಗಿ, ಶೈಕ್ಷಣಿಕ ಮನೋವಿಜ್ಞಾನದ ಕನಿಷ್ಠ ಜ್ಞಾನವೂ ಇಲ್ಲದೇ ಪಠ್ಯ-ಪುಸ್ತಕ ರಚಿಸಲಾಗಿದೆ. ಗಣಿತ ಕಲಿಕೆಯ ಮೂಲ ಉದ್ದೇಶವನ್ನೇ ಮರೆತು, ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಭ್ರಮೆಯಿಂದ ಪುಸ್ತಕ ರಚಿಸಲಾಗಿದೆ. ಈ ಅಂಶಗಳನ್ನು ಸ್ಪಷ್ಟಪಡಿಸಲು ಅನೇಕ ಉದಾಹರಣೆಗಳನ್ನು ನೀಡಬಹುದಾದರೂ ಒಂದೆರಡನ್ನು ಇಲ್ಲಿ ದಾಖಲಿಸುತ್ತೇನೆ.
ಕರಣಿಗಳು ಎಂಬ ಅಧ್ಯಾಯದಲ್ಲಿ ಕರಣಿಗಳನ್ನು ಸಂಕ್ಷಪ್ತರೂಪಕ್ಕೆ ತರುವಾಗ ನೀಡಿದ ಪ್ರಥಮ ಉದಾಹರಣೆ 34,560 ವಿದ್ಯಾರ್ಥಿಗಳಿಗೆ ಇದೊಂದು ಬ್ರಹತ್ ಸಮಸ್ಯೆಯೇ. ಇದರ ಬದಲು 12, 18, 54 ಇತ್ಯಾದಿ ಸರಳ ಉದಾಹರಣೆಗಳನ್ನು ನೀಡಿ ಕರಣಿಗಳನ್ನು ಸಂಕ್ಷಿಪ್ತಗೊಳಿಸುವ ವಿಧಾನವನ್ನು ಮನದಟ್ಟು ಮಾಡಿ ನಂತರ ಕಠಿಣ ಸಮಸ್ಯೆಗಳನ್ನು ತೆಗೆದುಕೊಳ್ಳಬೇಕಾದುದು ಅವಶ್ಯವಲ್ಲವೇ?
ಬೀಜ ಗಣಿತದ ನಿರ್ಬಂಧಿತ ನಿತ್ಯಸಮೀಕರಣ, ಅಪವರ್ತಿಸುವಿಕೆ ಅಧ್ಯಾಯಗಳಲ್ಲಿ ಸರಳವಾದ ಸಮಸ್ಯೆಗಳ ಬದಲಾಗಿ ಅತಿ ಕ್ಲಿಷ್ಟವಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳ ಮಟ್ಟವನ್ನು ಪರಿಗಣಿಸದೆ ನೀಡಲಾಗಿದೆ. ನಿತ್ಯಸಮೀಕರಣ ಮತ್ತು ನಿರ್ಭಂದಿತ ಸಮೀಕರಣಗಳನ್ನು ಅವ್ಯವಸ್ಥಿತವಾಗಿ ನೀಡಿರುವುದರಿಂದ, ಹಿಂದಿನ ಪಠ್ಯಕ್ರಮದಲ್ಲಿ ವಿದ್ಯಾರ್ಥಿ ಪಡೆಯಬಹುದಾಗಿದ್ದ ಜ್ಞಾನ ಹಾಗೂ ಜ್ಞಾನದ ಬಳಕೆಯ ಕೌಶಲ್ಯವನ್ನು ಇಲ್ಲಿ ಪಡೆಯುವ ಸಾಧ್ಯತೆ ಇಲ್ಲ.
ಎಂಟು ಮತ್ತು ಒಂಭತ್ತನೇ ತರಗತಿಯ ರೇಖಾಗಣಿತ ಪ್ರಮೇಯ ಹಾಗೂ ಹೇಳಿಕೆಗಳ ಸಾಧನೆಯಂತೂ ನೀರಸವಾದ ಕಾದಂಬರಿಯಂತಿದೆ. ಗಣಿತ ಶಾಸ್ತದಲ್ಲಿ ಪ್ರಮೇಯಗಳ ಸಾಧನೆಗೆ ಸ್ಪಷ್ಟವಾದ ಚೌಕಟ್ಟಿದೆ. ತಿಳಿದಿರುವ ಅಂಶಗಳಿಂದ ತಿಳಿಯದಿರದ ಅಂಶಗಳ ಕಡೆಗೆ ಹಂತಹಂತವಾಗಿ ಅದು ಬೆಳವಣಿಗೆ ಹೊಂದಬೇಕು. ಪ್ರತಿ ಹಂತದಲ್ಲೂ ಕಾರಣ ನೀಡಬೇಕು. ಆಗ ಶಿಕ್ಷಕರ ಪೂರಕ ಪ್ರಶ್ನೆಗಳಿಂದ ವಿದ್ಯಾರ್ಥಿಗಳ ತಾರ್ಕಿಕ ಸಾಮರ್ಥ್ಯದ ಬೆಳವಣಿಗೆಯಾಗುತ್ತಾ ಸಾಗುತ್ತದೆ. ಈ ಎಲ್ಲಾ ಅಂಶಗಳದತ್ತ ಅಲ್ಲಿ ದಿವ್ಯ ನಿರ್ಲಕ್ಷ್ಯ ತಾಳಲಾಗಿದೆ.
ಎಂಟನೇ ತರಗತಿಯ ಸ್ವಯಂ ಸಿದ್ಧಗಳು ಅಧ್ಯಾಯದಲ್ಲಿ ಸ್ವಯಂ ಸಿದ್ಧಗಳನ್ನು ಯೂಕ್ಲಿಡ್ ಯಾವ ರೀತಿ ಹೇಳಿದ್ದಾನೋ ಅದೇ ಶಬ್ದಗಳನ್ನು ಬಳಸಿ ಹೇಳಲು ಬಯಸಿದಂತಿದೆ. (ಉದಾ: ಸ್ವಯಂ ಸಿದ್ಧ 5). ಆ ಸ್ವಯಂ ಸಿದ್ಧಗಳನ್ನು ಸರಳವಾಗಿ ಎಲ್ಲಾ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವಂತೆ ಉದಾಹರಣೆಯೊಂದಿಗೆ ವಿವರಿಸಬಹುದು. ಹಿಂದಿನ ಪಠ್ಯ ಪುಸ್ತಕದಲ್ಲಿ ಅದೇ ರೀತಿಯಲ್ಲಿ ವಿವರಿಸಲ್ಪಟ್ಟಿದೆ. ಆದರೆ ಅಲ್ಲಿ ಸರಳವಾಗಿ ನಿರೂಪಿಸಲ್ಪಟ್ಟಿದ್ದನ್ನೇ ಇಲ್ಲಿ ಕ್ಲಿಷ್ಟಗೊಳಿಸಲಾಗಿದೆ. ಸರಳ ಅಂಶಗಳನ್ನು ಸಂಕೀರ್ಣಗೊಳಿಸಿರುವುದೇ ಹೊಸ ಪಠ್ಯಪುಸ್ತಕದ ವಿಶೇಷತೆಯೇ?
ಪ್ರತಿ ಅಧ್ಯಾಯದಲ್ಲಿ ನೀಡಿರುವ ಸಮಸ್ಯೆಗಳು ಅಧ್ಯಾಯದ ಕಲಿಕೆಯ ಅಂಶಗಳನ್ನು ದೃಢೀಕರಿಸುದಕ್ಕಿಂತಲೂ, ಕಲಿಕಾಂಶಗಳ ಆಧಾರದ ಮೇಲೆ ಹೆಚ್ಚಿನ ಸಾಮರ್ಥ್ಯವನ್ನು ಅಪೇಕ್ಷಿಸುತ್ತವೆ. ಆದರೆ ಕಲಿಕಾಂಶಗಳನ್ನು ದೃಢೀಕರಿಸದೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಅವಕಾಶ ನೀಡದೆ ಕಠಿಣ ಸಮಸ್ಯೆಗಳನ್ನು ಮಾತ್ರ ನೀಡಿರುವುದು ಮನೋವೈಜ್ಞಾನಿಕವಾಗಿ ಸಮರ್ಥನೀಯವಲ್ಲ.
ವಿದ್ಯಾರ್ಥಿಗಳು ತಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಿಕೊಳ್ಳಲು ಕ್ಲಿಷ್ಟತೆ ಹಾಗೂ ಅಗಾಧತೆ ಅವಶ್ಯಕವಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಮೂಲ ವಿಷಯದ ಪರಿಕಲ್ಪನೆ ಹಾಗೂ ಸರಳ ಸಮಸ್ಯೆಗಳ ಅರಿವಿಲ್ಲದೆಯೇ ಜ್ಞಾನದ ಪರಿಧಿ ಹಿಗ್ಗಿಸಿಕೊಳ್ಳಲು ಬಯಸುವುದು ವಿಫಲ ಯತ್ನವಾಗುತ್ತದೆ. ಅಂಗಳದಲ್ಲೂ ಹಾರದವ ಆಕಾಶಕ್ಕೆ ಜಿಗಿದಂತೆ!
ಪ್ರಸ್ತುತ ಪಠ್ಯವನ್ನು ಆಧಾರವಾಗಿಟ್ಟುಕೊಂಡು ಆ ಅಧ್ಯಾಯವನ್ನು ಭೋದಿಸಿದರೆ ವಿದ್ಯಾರ್ಥಿಗಳಲ್ಲಿನ ಕಲಿಕೆಯ ಪರಿಣಾಮ ಹಿಂದಿನ ಪಠ್ಯಕ್ರಮ ಆಧರಿಸಿದ ಭೋದನೆಯ ಪರಿಣಾಮಕ್ಕಿಂತ ಕಡಿಮೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಪಠ್ಯಪುಸ್ತಕದ ನ್ಯೂನತೆಗಳು ಸಾಮಾನ್ಯ ವಿದ್ಯಾರ್ಥಿಗಳಿಗೆ, ಅದರಲ್ಲೂ ಗ್ರಾಮೀಣ ಭಾಗದವರಿಗೆ ಶಾಪವಾಗುವುದು ಖಂಡಿತ. ಅತಿ ಬುದ್ದಿವಂತ ವಿದ್ಯಾರ್ಥಿಗಳು ಪಠ್ಯಕ್ಕೆ ಹೊಂದಿಕೊಳ್ಳಬಹುದು. ಅವರ ಸಂಖ್ಯೆ ತೀರಾ ಕಡಿಮೆ. ಸಾಮಾನ್ಯ ಹಾಗೂ ನಿಧಾನ ಕಲಿಕೆಯ ಬಹುಸಂಖ್ಯಾತ ವಿದ್ಯಾರ್ಥಿಗಳು ಪಠ್ಯಪುಸ್ತಕದ ಅವ್ಯವಸ್ಥಿತ ಸರಣಿಗೆ ಹೊಂದಿಕೊಳ್ಳಲಾರರು. ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ತಲುಪಲಾರರು. ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ, ಕೈ ತೊಳೆದುಕೊಳ್ಳುತ್ತಾರೆ. ಅವರಿಗೆ ಅದು ಅನಿವಾರ್ಯ ಕೂಡಾ. ಆದರೆ ರಾಜ್ಯಮಟ್ಟದ ಪರೀಕ್ಷೆಗಳಲ್ಲಿ ಬಹುಸಂಖ್ಯಾತ ಸಾಮಾನ್ಯ ವಿದ್ಯಾರ್ಥಿಗಳು ಸೋಲಬಹುದು. ಅಲ್ಲಿಯೂ ಅವರು ಹೇಗೋ ಉತ್ತೀರ್ಣರಾದರೂ, ಮೂಲ ಅಂಶಗಳನ್ನು ಪ್ರೌಢಶಾಲೆಗಳಲ್ಲಿ ಸರಿಯಾಗಿ ಅರಿಯದೆ, ಪದವಿ ಪೂರ್ವ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೋತು ಸಂಕಟಪಡುವುದು ಅನಿವಾರ್ಯವಾಗುತ್ತದೆ.
ಹತ್ತನೇ ತರಗತಿ ಉತ್ತೀರ್ಣರಾದ ಎಲ್ಲರೂ ಮುಂದಿನ ಅಧ್ಯಯನದಲ್ಲಿ ಗಣಿತವನ್ನು ಅಭ್ಯಾಸ ಮಾಡದೆಯೂ ಇರಬಹುದು. ಎಲ್ಲಾ ವಿದ್ಯಾರ್ಥಿಗಳಿಗೂ ಗಣಿತ ಹಾಗೂ ವಿಜ್ಞಾನದ ಒಂದಿಷ್ಟು ಸಾಮಾನ್ಯ ಅಂಶಗಳು ಅವಶ್ಯ. ಆದರೆ ಪ್ರಸ್ತುತ ಪಠ್ಯಪುಸ್ತಕ ಪ್ರತಿಯೊಬ್ಬರೂ ಗಣಿತದಲ್ಲಿ ವಿಶೇಷ ಜ್ಞಾನವನ್ನು ಹೊಂದಿರಲೇಬೇಕೆಂದು ಅಪೇಕ್ಷಿಸುವಂತೆ ಕಂಡುಬರುತ್ತದೆ.
ಹಿಂದಿನ ಪಠ್ಯಪುಸ್ತಕವು, ಸಾಮಾನ್ಯ ವಿದ್ಯಾರ್ಥಿಗಳು ಸಹ ಕನಿಷ್ಠ ಕಲಿಕಾ ಹಂತ ತಲುಪುವಂತೆ ರಚಿಸಲ್ಪಟ್ಟಿದ್ದು, ನಂತರದಲ್ಲಿ ವಿದ್ಯಾರ್ಥಿಗಳು ವಯೋವಾನಕ್ಕೆ ಅನುಗುಣವಾಗಿ ಜ್ಞಾನವನ್ನು ಹೆಚ್ಚಿಸಿಕೊಂಡು ಮುಂದುವರಿಯುತ್ತಿದ್ದರು. ಆದರೆ ಈ ಪಠ್ಯಪುಸ್ತಕ ಅದಕ್ಕೆ ತದ್ವಿರುದ್ಧ. ವಿದ್ಯಾರ್ಥಿ, ಶಿಕ್ಷಕ ಹಾಗೂ ಅಧಿಕಾರಿ ವರ್ಗಕ್ಕೆ ಪಠ್ಯಪುಸ್ತಕಗಳೇ ಭಗವದ್ಗೀತೆ. ಈ ಪಠ್ಯಪುಸ್ತಕ ಪರೀಕ್ಷಾ ದೃಷ್ಟಿಯಿಂದ ರಚಿತವಾಗಿಲ್ಲ ಎಂದು ಮುನ್ನುಡಿಯಲ್ಲಿ ಹೇಳಲಾಗಿದೆ. ಹಾಗಾದರೆ ಪರೀಕ್ಷೆಗಳೇ ಇಲ್ಲದೆ ಕಲಿಕೆ ಸಾಗುತ್ತದೆಯೇ ಅಥವಾ ಪರೀಕ್ಷೆಗಾಗಿ ಬೇರೆ ಪಠ್ಯಪುಸ್ತಕ ಒದಗಿಸಲಾಗುವುದೇ ಅಥವಾ ಹತ್ತಾರು ಪ್ರಕಾಶನಗಳ ಗೈಡುಗಳೇ ಪರೀಕ್ಷಾ ಪುಸ್ತಕಗಳೇ ತಿಳಿಯದು. ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಜಾರಿಗೊಳಿಸಲಾಗಿದೆಯಾದರೂ ಅದರಲ್ಲಿ ಅನೇಕ ದೋಷಗಳಿವೆ. ಆಚರಣೆಯಲ್ಲಿ ಬರುವಾಗ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತವೆ. ಈ ಪಠ್ಯಕ್ರಮದಲ್ಲಿ ಪರೀಕ್ಷೆ ಎದುರಿಸುವಾಗ ವಿದ್ಯಾರ್ಥಿ ಹೆಚ್ಚಿನ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಸಾಮಾನ್ಯ ವಿದ್ಯಾರ್ಥಿಗಳ ಹಿತವನ್ನು ಪಠ್ಯದಲ್ಲಿಯೇ ಕಡೆಗಣಿಸಿರುವಾಗ ಪರೀಕ್ಷೆಗಳಲ್ಲಿ ಕಾಯಲಾಗುತ್ತದೆ ಎಂಬ ಭರವಸೆ ಇಲ್ಲ. ಒತ್ತಡ ಕಡಿಮೆಗೊಳಿಸಿ, ಕಲಿಕೆ ಸಂತಸದಾಯಕವಾಗಬೇಕೆಂಬ ಇಲಾಖೆಯ ಸದಾಶಯಕ್ಕೂ ಜಾರಿಗೊಂಡ ಪಠ್ಯಪುಸ್ತಕಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ!
ಬುದ್ಧಿವಂತ ವಿದ್ಯಾರ್ಥಿಗಳು ತಮ್ಮದೇ ಆದ ವೇಗದಲ್ಲಿ ಕಲಿಯುತ್ತಾರೆ. ಅವರ ಜ್ಞಾನದ ಹಸಿವನ್ನು ನೀಗಿಸಲು ಶಿಕ್ಷಕರು, ಪಾಲಕರು ಬೇರೆ ಬೇರೆ ರೀತಿಯಲ್ಲಿ ಸಹಕರಿಸಬಹುದು. ಅವರಿಗೆ ಅವಶ್ಯ ಸೌಲಭ್ಯ ನೀಡಬೇಕಾಗಿರುವುದು ಎಲ್ಲರ ಕರ್ತವ್ಯ. ಭೌಗೋಳಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದ ಸಾಮಾನ್ಯ ವಿದ್ಯಾರ್ಥಿಯಾಗಿದ್ದುಕೊಂಡು, ನಂತರದಲ್ಲಿ ಬೆಳವಣಿಗೆ ಹೊಂದಬಲ್ಲ ಬಲುದೊಡ್ಡ ವಿದ್ಯಾರ್ಥಿ ಸಮೂಹವನ್ನು ಪಠ್ಯಪುಸ್ತಕ ರಚನೆಯ ಸಂದರ್ಭದಲ್ಲಿ ಕಡೆಗಣಿಸಿರುವುದು ಅಪಾಯಕಾರಿ ಬೆಳವಣಿಗೆ.
ಕೇಂದ್ರೀಯ ಅಥವಾ ಅಂತಾರಾಷ್ಟ್ರೀಯ ಎನ್ನುವುದಕ್ಕಿಂತಲೂ ನಿರ್ದಿಷ್ಟ ವಯಸ್ಸಿನ ವಿದ್ಯಾರ್ಥಿ ಜೀರ್ಣಿಸಿಕೊಳ್ಳಬಲ್ಲ, ವಿದ್ಯಾರ್ಥಿ ಸ್ನೇಹಿ ಹಾಗೂ ಕಲಿಕಾ ಉದ್ದೇಶ ಈಡೇರಿಸಿಕೊಳ್ಳಬಲ್ಲ ಪಠ್ಯಪುಸ್ತಕದ ಅವಶ್ಯವಿದೆ. ಆದುದರಿಂದ ಪ್ರಸ್ತುತ ಜಾರಿಯಲ್ಲಿರುವ ಪಠ್ಯಪುಸ್ತಕವನ್ನು ಪರಿಷ್ಕರಿಸಲೇಬೇಕಾದ ಅನಿವಾರ್ಯತೆ ಇದೆ. ನಿಧಾನ ಕಲಿಕೆಯ, ಸಾಮಾನ್ಯ ಹಾಗೂ ಬುದ್ಧಿವಂತ ವಿದ್ಯಾರ್ಥಿಗಳೆಲ್ಲರ ಹಿತವನ್ನು ಕಾಪಾಡಬಲ್ಲಂತೆ ಪಠ್ಯಪುಸ್ತಕ ಬದಲಾಗಬೇಕಾಗಿದೆ.
ಶಿಕ್ಷಣ ತಜ್ಞರು ಹಾಗೂ ಮುಖ್ಯವಾಗಿ ಅನುಭವಿ ಸಮಾಜಮುಖಿ ಶಿಕ್ಷಕರ ಸಲಹೆಗಳನ್ನು ಪಡೆದು ಶೀಘ್ರವಾಗಿ ಗಣಿತ ಪಠ್ಯಪುಸ್ತಕವನ್ನು, ಶಿಕ್ಷಣ ಇಲಾಖೆ ಪರಿಷ್ಕರಿಸುವುದು ಅಗತ್ಯ. ಹಾಗೆಯೇ ಮುಂದಿನ ವರ್ಷ ಜಾರಿಗೊಳ್ಳಲಿರುವ 10ನೇ ತರಗತಿಯ ಪಠ್ಯಪುಸ್ತಕವನ್ನು ವಿದ್ಯಾರ್ಥಿ ಸ್ನೇಹಿ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ರಚಿಸುವಂತೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆಂದು ಆಶಿಸೋಣ.
- ಗಣಪತಿ ಶಿರೂರು, ಭಟ್ಕಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

