ಅಂಕಣಗಳು

ನೆಹರು ಆಕ್ಷೇಪಕ್ಕೆ ಮುನ್ಶಿಯವರ ಪತ್ರದ ಅಸ್ತ್ರ

Published On :

ಈ ಹಿಂದಿನ ನನ್ನ ಅಂಕಣವೊಂದರಲ್ಲಿ, ಸರ್ದಾರ್ ಪಟೇಲರು ಹಾಗೂ ಅವರ ಆಪ್ತ ಸಹೋದ್ಯೋಗಿ ವಿಪಿ ಮೆನನ್ ಅವರು ಲಾರ್ಡ್ ಮೌಂಟ್‌ಬ್ಯಾಟನ್ ಅವರೊಂದಿಗೂಡಿ ಭಾರತದೊಳಗೆ ರಾಜ್ಯಗಳ ವಿಲೀನ ಪ್ರಕ್ರಿಯೆಗೆ ಮಾಡಿದ ಪ್ರಯತ್ನವನ್ನು ವಿವರವಾಗಿ ವಿಶ್ಲೇಷಿಸಿದ್ದೆ. ಆ ಲೇಖನಕ್ಕೆ ಆಧಾರವಾಗಿ ನಾನು ಆಗಿನ ಸಂಪುಟ ಕಾರ್ಯದರ್ಶಿ ವಿಪಿ ಮೆನನ್ ಅವರ ಎರಡು ಪುಸ್ತಕಗಳನ್ನು ಉಲ್ಲೇಖಿಸಿದ್ದೆ. ಜತೆಯಲ್ಲಿಯೇ ಅಲೆಕ್ಸ್ ವೊನ್ ಟುಂಜಲ್‌ಮನ್ ಎಂಬ ವಿದೇಶಿ ಮಹಿಳೆ ಬರೆದಿರುವ ಇತ್ತೀಚಿನ ಪುಸ್ತಕ, 'ಇಂಡಿಯನ್ ಸಮ್ಮರ್: ದ ಸಿಕ್ರೇಟ್ ಹಿಸ್ಟರಿ ಆಫ್ ದ ಎಂಡ್ ಆಫ್ ಆ್ಯನ್ ಎಂಪೈರ್‌' ಅನ್ನೂ ಉಲ್ಲೇಖಿಸಿದ್ದೆ. ಮೆನನ್ ಅವರ ಎರಡು ಪುಸ್ತಕಗಳಾದ, 'ಇಂಟಿಗ್ರೇಷನ್ ಆಫ್ ದ ಇಂಡಿಯನ್ ಸ್ಟೇಟ್ಸ್‌' ಹಾಗೂ 'ದ ಟ್ರಾನ್ಸ್‌ಫರ್ ಆಫ್ ಪವರ್‌'ಗಳನ್ನು ನಾನು ಪುಸ್ತಕಪ್ರೇಮಿಗಳು ಸಿಕ್ಕಾಗಲೆಲ್ಲ ತಪ್ಪದೇ ಓದಿ ಎಂದು ಒತ್ತಾಯಿಸುತ್ತಿರುತ್ತೇನೆ.
ಆ ಅಂಕಣದ ಕೊನೆ ತುಣಕನ್ನು 'ಪಯೋನೀರ್‌' ಪತ್ರಿಕೆಯ ವರದಿಯನ್ನು ಆಧರಿಸಿ ಬರೆದಿದ್ದೆ. ಹೈದರಾಬಾದ್ ವಿಮೋಚನೆಗೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ನೆಹರು ಹಾಗೂ ಪಟೇಲರ ನಡುವೆ ಆಗಿದ್ದ ಮಾತಿನ ಸಮರವನ್ನು ಉಲ್ಲೇಖಿಸಿದ್ದ ವರದಿ ಅದು. ರಜಾಕಾರರನ್ನು ಒಳಗೊಂಡ ಹೈದರಾಬಾದ್ ನಿಜಾಮನ ಖಾಸಗಿ ಸೇನೆಯು ನಾಗರಿಕರ ಮೇಲೆ ಹಿಂಸಾಚಾರಕ್ಕೆ ಇಳಿದಿದ್ದರ ವರದಿ ಬರುತ್ತಲೇ ಸರ್ದಾರ್ ಪಟೇಲರು ಸೇನಾ ಕಾರ್ಯಾಚರಣೆ ಪ್ರಸ್ತಾಪಿಸಿದರು. ಇದನ್ನು ವಿರೋಧಿಸಿದ ನೆಹರು ಅವರು ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದಂತೆ ಹೈದರಾಬಾದ್ ವಿಷಯವನ್ನು ಅಲ್ಲಿಗೆ ಒಪ್ಪಿಸುವ ಇಂಗಿತ ಹೊಂದಿದ್ದರು. 1947ರ ಐಎಎಸ್ ಅಧಿಕಾರಿ ಎಂಕೆಕೆ ನಾಯರ್ ಅವರ ಪುಸ್ತಕ 'ನೋ ಇಲ್ ಫೀಲಿಂಗ್ಸ್ ಟುವರ್ಡ್ಸ್ ಎನಿಬಡಿ' ಆಧಾರವಾಗಿರಿಸಿಕೊಂಡು ಪಯೋನೀರ್‌ನ ಚೆನ್ನೈ ವರದಿಗಾರ ಈ ವರದಿ ಮಾಡಿದ್ದರು.
ಈ ಬಗ್ಗೆ ವಾಗ್ಯುದ್ಧವಾಗುತ್ತಲೇ ಸಿಟ್ಟಿನಿಂದ ಸರ್ದಾರ್ ಪಟೇಲರು ಸಭೆಯಿಂದಲೇ ಹೊರನಡೆದರು. ಕೊನೆಗೂ 1948ರ ಸೆಪ್ಟೆಂಬರ್ 13ರಂದು ಸೇನಾ ಕಾರ್ಯಾಚರಣೆ ನಡೆಸಲಾಯಿತು. ಸೆಪ್ಟೆಂಬರ್ 18ಕ್ಕೆ ಮುಕ್ತಾಯವಾದ ಆಪರೇಷನ್ ಪೋಲೊ ಎಂಬ ಆ ಯಶಸ್ವಿ ಕಾರ್ಯಾಚರಣೆ ಇದೀಗ ಇತಿಹಾಸ. ಇದನ್ನೇ ವರದಿ ಸಾರಿತ್ತು.
ಆ ಬಗ್ಗೆ ಬರದಾಗಿನಿಂದಲೂ ಆ ಪುಸ್ತಕಕ್ಕಾಗಿ ಹುಡುಕುತ್ತಿದ್ದೆ. ಆದರೆ ಯಾವ ಪುಸ್ತಕದಂಗಡಿಯಲ್ಲೂ ನನಗದು ಕಾಣಸಿಗಲಿಲ್ಲ. ಅದರ ಕೃತಿಕಾರ ಈಗ ಬದುಕಿಲ್ಲ ಎಂಬುದನ್ನು ಕೇಳಿದ್ದೇನೆ. ನಿಮಗೇನಾದರೂ ಆ ಪುಸ್ತಕ ದೊರೆತರೆ ತಿಳಿಸಿ.
ಇರಲಿ. ಸೆಪ್ಟೆಂಬರ್ 25ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನೋತ್ಸವವಾಗಿತ್ತು. ಬಿಜೆಪಿಯಲ್ಲಿ ಎರಡು ಪ್ರಮುಖ ವಿದ್ಯಮಾನಗಳು ಈ ದಿನದೊಂದಿಗೆ ಬೆಸೆದುಕೊಂಡಿದ್ದು, ಅವನ್ನೆಂದೂ ಮರೆಯಲಾಗದು. ಮೊದಲನೆಯದು 1990ರಲ್ಲಿ ನಾನು ಸೋಮನಾಥದಿಂದ ಅಯೋಧ್ಯೆಯವರೆಗೆ ಮೊದಲ ರಥಯಾತ್ರೆ ಮಾಡಿದ್ದು. ಎರಡನೆಯದು ಇತ್ತೀಚೆಗೆ ಭೋಪಾಲದಲ್ಲಿ ನಡೆದ ರ್ಯಾಲಿಯಲ್ಲಿ ಆರುಲಕ್ಷಕ್ಕೂ ಹೆಚ್ಚುಮಂದಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ದಾಖಲೆ ಬರೆದಿದ್ದು. ನವೆಂಬರ್ 25ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದಲ್ಲಿ 53 ಸಾವಿರ ಮತಗಟ್ಟೆಗಳನ್ನು ಈ ಕಾರ್ಯಕರ್ತರು ನಿರ್ವಹಿಸಲಿದ್ದಾರೆ.
ಸೋಮನಾಥ ದೇವಾಲಯದ ಮರು ನಿರ್ಮಾಣವಾದ ಮೇಲೆ ಸರ್ದಾರ್ ಪಟೇಲರು ಅದರ ಪ್ರಾರಂಭೋತ್ಸವದಲ್ಲಿ ಪಾಲುಗೊಳ್ಳಲಿದ್ದರು. ಆದರೆ 1950ರ ಡಿಸೆಂಬರ್ 15ರಂದು ಅವರು ತೀರಿಕೊಂಡುಬಿಟ್ಟರು. ದೇವಾಲಯದ ಪೂಜಾವಿಧಿಗಳ ಮರು ಆರಂಭಕ್ಕೆ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಆಗಮಿಸಿದ್ದರು. ಅವರೂ ಸಹ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು ಎಂಬ ನೆಹರು ಅವರ ಫರ್ಮಾನನ್ನು ವಿರೋಧಿಸಿ ಬಂದಿದ್ದರು. ಇದು ಸರ್ದಾರ್ ಪಟೇಲರಿಗೆ ಎದುರಾಗಿದ್ದ ವಿರೋಧಕ್ಕಿಂತ ತೀರ ಭಿನ್ನವಾದದ್ದೇನೂ ಅಲ್ಲವಾದ್ದರಿಂದ ಅದನ್ನಿಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗುತ್ತದೆ.
ಜುನಾಗಢದ ನವಾಬನು ತಾನು ಪಾಕಿಸ್ತಾನ ಸೇರುವೆನೆಂದು ಘೋಷಿಸಿದ ಬೆನ್ನಲ್ಲೇ ಅಲ್ಲಿಗೆ ಭೇಟಿ ಕೊಟ್ಟ ಮೊದಲಿಗರು ಸರ್ದಾರ್ ಪಟೇಲರು. ಜನಾಕ್ರೋಶಕ್ಕೆ ಹೆದರಿದ ನವಾಬ ನಂತರ ಪಾಕಿಸ್ತಾನಕ್ಕೆ ಪೇರಿಕಿತ್ತ. ಜನರಿಂದ ಸರ್ದಾರ್ ಪಟೇಲರಿಗೆ ಹರ್ಷೋದ್ಗಾರಗಳ ಸ್ವಾಗತ ಸಿಕ್ಕಿತು. ಆ ಜನ ಸಮಾವೇಶದ ನಡುವೆಯೇ ಪಟೇಲರು- ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿದ್ದ ಸೋಮನಾಥ ದೇವಾಲಯವನ್ನು ಮರು ನಿರ್ಮಾಣ ಮಾಡಿ ಜ್ಯೋತಿರ್ಲಿಂಗ ಪ್ರತಿಷ್ಠಾಪಿಸುವ ಘೋಷಣೆ ಹೊರಡಿಸಿದರು.
ದೆಹಲಿಗೆ ಹಿಂತಿರುಗುತ್ತಲೇ ಸರ್ದಾರರು ಈ ನಡೆಗೆ ಗಾಂಧೀಜಿ ಆಶೀರ್ವಾದವನ್ನು ಪಡೆದುಕೊಂಡರು. ಪಂಡಿತ್ ನೆಹರು ಹಾಗೂ ಅವರ ಸಂಪುಟವೂ ಇದಕ್ಕೆ ಅನುಮೋದನೆ ನೀಡಿತು. ಸರ್ಕಾರವೇ ಜೀರ್ಣೋದ್ಧಾರದ ಖರ್ಚನ್ನೆಲ್ಲ ವಹಿಸಿಕೊಳ್ಳುವುದಾಗಿಯೂ ನಿರ್ಧಾರವಾಯಿತು. ಆ ನಿರ್ಧಾರ ಹೊರಬಿದ್ದ ಸಂಜೆಯೇ ಸರ್ದಾರ್ ಪಟೇಲ್, ಡಾ. ಮುನ್ಶಿ ಹಾಗೂ ಎನ್‌ವಿ ಗಾಡ್ಗಿಳ್ ಅವರು ಗಾಂಧೀಜಿ ಬಳಿ ತೆರಳಿ ವಿದ್ಯಮಾನವನ್ನು ವಿವರಿಸಿದರು. ಸಂಪುಟ ನಿರ್ಧಾರವನ್ನು ಗಾಂಧೀಜಿ ಸ್ವಾಗತಿಸಿದರು. ಆದರೆ ಸರ್ಕಾರದ ಬದಲಿಗೆ ಜನರೇ ವೆಚ್ಚ ಭರಿಸುವಂತಾಗಲಿ ಎಂದು ಬಯಸಿದರು.
1948ರಲ್ಲಿ ಗಾಂಧೀಜಿಯವರ ಹತ್ಯೆಯಾಯಿತು. ಡಿಸೆಂಬರ್ 1950ರಲ್ಲಿ ಸರ್ದಾರ್ ಪಟೇಲರೂ ತೀರಿಕೊಂಡರು. ಇಬ್ಬರು ಹಿರಿಯರು ಗತಿಸುತ್ತಲೇ ನೆಹರು ತಮ್ಮ ಧೋರಣೆಯನ್ನೇ ಬದಲಿಸಿಕೊಂಡರು. 1951ರಲ್ಲಿ ಸಂಪುಟ ಸಭೆಯೊಂದು ಮುಗಿದ ತಕ್ಷಣವೇ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಮುನ್ಶಿಯವರನ್ನು ಕರೆಸಿಕೊಂಡ ಪ್ರಧಾನಿ ನೆಹರು, 'ನೀವು ಸೋಮನಾಥವನ್ನು ಮರು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿರುವುದು ಸರಿ ಬರುತ್ತಿಲ್ಲ. ಅದು ಹಿಂದೂ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ' ಎಂದರು. ಆಗ ಏನೂ ಉತ್ತರ ಹೇಳದ ಮುನ್ಶಿಯವರು ನಂತರ ವಿವರವಾದ ಪತ್ರವೊಂದನ್ನು ಬರೆದರು. 'ಪಿಲಿಗ್ರಿಮೇಜ್ ಟು ಫ್ರೀಡಂ' ಎಂಬ ಪ್ರಸಿದ್ಧ ಪುಸ್ತಕದಲ್ಲಿ ಈ ಪತ್ರವನ್ನು ಮುದ್ರಿಸಲಾಗಿದೆ. ಅವರು ನೆಹರು ಅವರಿಗೆ ಬರೆದಿದ್ದರು.
'ನಿನ್ನೆ ನೀವು ಹಿಂದೂ ಪುನರುಜ್ಜೀವನದ ಬಗ್ಗೆ ಹೇಳಿದಿರಿ. ಸೋಮನಾಥದ ಬಗ್ಗೆ ನನ್ನನ್ನೇ ಗುರಿ ಮಾಡಿ ನೀವು ಹೇಳಿದ್ದರಿಂದ ನನ್ನ ಯಾವ ಅಭಿಪ್ರಾಯಗಳನ್ನೂ ಮರೆಮಾಚುವ ಪ್ರಶ್ನೆ ಇಲ್ಲ. ಭಾರತದಲ್ಲಿರುವ ಸಾಮೂಹಿಕ ಪ್ರಜ್ಞೆಯು ಸೋಮನಾಥದ ಮರು ನಿರ್ಮಾಣದಲ್ಲಿ ಸರ್ಕಾರ ತೊಡಗಿಕೊಳ್ಳುವುದನ್ನು ಸಂತೋಷದಿಂದ ಒಪ್ಪಿಕೊಂಡಿದೆ ಎಂಬುದನ್ನು ನಾನು ಖಂಡಿತವಾಗಿ ಹೇಳಬಲ್ಲೆ. ಸರ್ಕಾರ ಮಾಡುತ್ತಿರುವ ಇತರ ಎಷ್ಟೋ ಕೆಲಸಗಳಿಗಿಂತ ಇದು ಉತ್ತಮವಾದದ್ದು.
ದೇವಾಲಯವನ್ನು ಹರಿಜನರ ಪ್ರವೇಶಕ್ಕೆ ತೆರೆದಿರಿಸುವ ನಿರ್ಧಾರ ಹಿಂದೂ ಸಮುದಾಯದ ಕೆಲ ಕಟ್ಟರ್‌ವಾದಿಗಳಲ್ಲಿ ಅಸಂತೋಷ ತಂದಿರಬಹುದು. ಆದರೆ ಟ್ರಸ್ಟ್‌ನ ಉದ್ದೇಶ ಸ್ಪಷ್ಟವಿದೆ. ಸೋಮನಾಥ ದೇವಾಲಯವನ್ನು ಹಿಂದೂ ಸಮುದಾಯದ ಎಲ್ಲರಿಗೂ ಮುಕ್ತವಾಗಿರಿಸುವುದಷ್ಟೇ ಅಲ್ಲದೆ ಹಿಂದೂ ಅಲ್ಲದ ಸಂದರ್ಶಕರಿಗೂ ಮುಕ್ತವಾಗಿರಿಸಲಾಗುವುದು.'
ಪತ್ರದ ಕೊನೆಯಲ್ಲಿ ಮುನ್ಶಿ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅವರು ಬರೆದಿದ್ದರು- 'ಗತದ ಕುರಿತ ನನ್ನ ನಂಬಿಕೆಗಳೇ ವರ್ತಮಾನದಲ್ಲಿ ಕೆಲಸ ಮಾಡುವ ಕಸುವನ್ನೂ ಭವಿಷ್ಯತ್ತಿನ ದೃಷ್ಟಿಯನ್ನೂ ದಯಪಾಲಿಸಿವೆ. ನಮ್ಮಿಂದ ಭಗವದ್ಗೀತೆಯನ್ನು ಕಿತ್ತುಕೊಳ್ಳುವ, ಕೋಟ್ಯಂತರ ಮಂದಿ ದೇವಾಲಯಗಳಲ್ಲಿ ಇರಿಸಿರುವ ನಂಬಿಕೆಯನ್ನು ಕೀಳಾಗಿ ನೋಡಿ ಬದುಕನ್ನು ವಿವರ್ಣಗೊಳಿಸುವ ಸ್ವಾತಂತ್ರ್ಯ ಭಾರತಕ್ಕೆ ಸಿಕ್ಕಿದೆ ಎಂದಾದರೆ ನಾನದಕ್ಕೆ ಬೆಲೆ ಕೊಡಲಾರೆ. ಸೋಮನಾಥದ ಮರು ನಿರ್ಮಾಣದ ಅವಕಾಶದಲ್ಲಿ ನಾನು ಭಾಗಿಯಾಗಲಿಕ್ಕಿರುವುದು ನನಗೊಲಿದ ಭಾಗ್ಯ. ಜನರಿಗೆ ಧರ್ಮದ ಪರಿಕಲ್ಪನೆ ನೀಡಿ ಅವರ ಪ್ರಜ್ಞೆಯನ್ನು ಬಲಗೊಳಿಸಿದ ದೇವಾಲಯವು ಮರಳಿ ಆ ತಾಕತ್ತನ್ನು ಪಡೆದುಕೊಳ್ಳಲಿದೆ ಎಂಬುದು ನನಗೆ ಖಾತ್ರಿಯಿದೆ.' ಇದನ್ನು ಓದಿದ ಅಧಿಕಾರಿ ವಿಪಿ ಮೆನನ್ ಅವರು ಮುನ್ಶಿಯವರಿಗೆ ಬರೆಯುತ್ತಾರೆ- 'ನಿಮ್ಮ ಮಾಸ್ಟರ್‌ಪೀಸ್ ಓದಿದೆ. ನಿಮ್ಮ ಅಭಿಪ್ರಾಯದ ಪರ ಬಾಳುವ, ಸಮಯ ಬಂದರೆ ಅದಕ್ಕಾಗಿ ಪ್ರಾಣ ಕೊಡುವುದಕ್ಕೆ ನಾನು ಬದ್ಧನಾಗಿರುತ್ತೇನೆ.'
ಕೊನೆತುಣುಕು: ಸೋಮನಾಥ ದೇವಾಲಯ ಸಿದ್ಧವಾದಾಗ ಮುನ್ಶಿಯವರು ರಾಷ್ಟ್ರಪತಿ ರಾಜೇಂದ್ರ ಪ್ರಸಾದರನ್ನು ಆಹ್ವಾನಿಸಿದರು. ಅವರು ಒಪ್ಪುವುದಿಲ್ಲವೇನೋ ಎಂಬ ಅಂಜಿಕೆ ಇದ್ದೇ ಇತ್ತು. ಆದರೆ ತಕ್ಷಣಕ್ಕೆ ಬರಲೊಪ್ಪಿದ ರಾಜೇಂದ್ರ ಪ್ರಸಾದರು, 'ಮಸೀದಿ ಅಥವಾ ಚರ್ಚ್‌ಗೆ ಆಹ್ವಾನಿಸಿದ್ದರೂ ನಾನು ಬರುತ್ತಿದ್ದೆ. ಭಾರತದ ಧರ್ಮ ನಿರಪೇಕ್ಷತೆ ನಿಜ ಅರ್ಥವೇ ಇದು. ಧರ್ಮವೇ ಇಲ್ಲದ ಸರ್ಕಾರ ಅಂತಲೂ ಅಲ್ಲ ಅಥವಾ ಧರ್ಮವಿರೋಧಿಯಾಗಿರಬೇಕು ಎಂದೂ ಇಲ್ಲ' ಎಂದಿದ್ದರು.
ರಾಷ್ಟ್ರಪತಿಯವರ ಈ ನಿರ್ಧಾರಕ್ಕೂ ನೆಹರು ವಿರೋಧ ವ್ಯಕ್ತಪಡಿಸಿದರು. ಆದರೆ ರಾಜೇಂದ್ರ ಪ್ರಸಾದರು ಆಕ್ಷೇಪಕ್ಕೆ ಮಣಿಯಲಿಲ್ಲ.  

- ಎಲ್. ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.