ವಿಶ್ವಮಾನವ ವಾಲ್ಮೀಕಿ ಒಂದು ಜನಾಂಗಕ್ಕೆ ಸೀಮಿತವಲ್ಲ
ಕರುನಾಡಿನ ಸಾಂಸ್ಕೃತಿಕ ಮಣ್ಣಿನಲ್ಲಿ, ಬುಡಕಟ್ಟು ಜನರ ಸೆಲೆಯಲ್ಲಿ ಅ.18ರಂದು ಮಹರ್ಷಿ ವಾಲ್ಮೀಕಿ ಜಯಂತಿ ರಾಜ್ಯಾದ್ಯಂತ ನಡೆಯುತ್ತದೆ.
ಮೊದಲೆಲ್ಲಾ ಕೇವಲ ನಾಯಕ ಜನಾಂಗದವರೇ ಸೇರಿ ಆಚರಿಸುತ್ತಿದ್ದ ಈ ಜಯಂತಿಯ ಜವಾಬ್ದಾರಿಯನ್ನು ರಾಜಕೀಯ ಕಾರಣಗಳಿಗಾಗಿ ಸರ್ಕಾರವೇ ಹೊತ್ತಿದೆ. ಇಷ್ಟಾದರೂ ವಾಲ್ಮೀಕಿ ಜಯಂತಿ ಎನ್ನುವುದು ಕೇವಲ ನಾಯಕ ಜನಾಂಗದವರದ್ದೇ ಜನಜಾತ್ರೆಯಾಗಿರುವುದು ಅಚ್ಚರಿಯೇನಲ್ಲ. ಬಸವ ಜಯಂತಿಯನ್ನು ಲಿಂಗಾಯಿತರು, ಕನಕ ಜಯಂತಿಯನ್ನು ಕುರುಬರು, ಅಂಬೇಡ್ಕರ್ ಜಯಂತಿಯನ್ನು ದಲಿತರೇ ಅಧಿಕ ಸಂಖ್ಯೆಯಲ್ಲಿ ಆಚರಿಸುವುದು ನಿಜಕ್ಕೂ ಶೋಚನೀಯ. ಬುದ್ಧ, ಬಸವ, ಏಸು, ಪೈಗಂಬರ್ ಇವರನ್ನೆಲ್ಲಾ ಒಂದು ಜಾತಿಗೆ ಸೀಮಿತಗೊಳಿಸುವುದು ಮಹಾದ್ರೋಹ. ಇಂತಹ ಜಾತಿ ಜಾತ್ರೆ, ಮಹಾಪುರುಷರ ಜಯಂತಿಗಳಿಂದ ಸಂಬಂಧಪಟ್ಟ ಜನಾಂಗದ ಅಭಿವೃದ್ಧಿಗಾದರೂ ಎಷ್ಟರಮಟ್ಟಿಗೆ ಸಹಾಯವಾದೀತೆಂಬ ಪ್ರಶ್ನೆ ಕಾಡದಿರದು. ಇಂಥ ಜಯಂತಿಗಳು ಕಾಲ ಕಾಲಕ್ಕೆ ನಡೆದು ತಮ್ಮ ತಮ್ಮ ಜಾತಿ ಬಲದ ಪ್ರದರ್ಶನವಾಗಿ ಜಾತೀಯತೆ ತಲೆ ಎತ್ತಲು ಕಾರಣವಾಗುತ್ತಿದೆಯಷ್ಟೆ.
ಮಹರ್ಷಿ ವಾಲ್ಮೀಕಿ ನಾಯಕ ಜನಾಂಗ ಹೆಮ್ಮೆಪಡುವಂತಹ ಐತಿಹ್ಯ ಹೊಂದಿರುವುದು ಅಭಿಮಾನದ ಸಂಗತಿ. ವಾಲ್ಮೀಕಿಯಂತಹ ಮಹರ್ಷಿ, ವಿಶ್ವಮಾನವ ನಮ್ಮವನು ಎಂಬ ಹೆಮ್ಮೆ ಈ ಜನಾಂಗಕ್ಕಿದೆ. ದಟ್ಟಡವಿಯಲ್ಲಿದ್ದು ದಾರಿಹೋಕರ ತಲೆ ಹೊಡೆದು ಜೀವನ ಸಾಗಿಸುತ್ತಿದ್ದಂತಹ ಮಹಾಕ್ರೂರಿಯಾಗಿದ್ದ ಈತ ಒಮ್ಮೆ ದಾರಿಯಲ್ಲಿ ಬಂದ ಸಪ್ತ ಋಷಿಗಳನ್ನೂ ಬಿಡಲಿಲ್ಲವಂತೆ. ಆದರೆ ಅವರ ತಪಸ್ಸಿನ ಪ್ರಭಾವದಿಂದಾಗಿ ವಾಲ್ಮೀಕಿ ಸಂಸ್ಕಾರಗೊಡನೆಂಬುದು ಐತಿಹ್ಯ. ಒಮ್ಮೆ ಕ್ರೌಂಚ ಪಕ್ಷಿಗಳೆರಡು ಪ್ರಣಯದಾಟದಲ್ಲಿದ್ದಾಗ ಒಂದಕ್ಕೆ ಬಾಣ ತಗುಲಿ ವಿಲವಿಲನೆ ಒದ್ದಾಡಿ ಅಸುನೀಗಿದ್ದನ್ನು ಅದರ ಸುತ್ತ ಪರಿತಪಿಸುತ್ತಾ ಹಾರಾಡುತ್ತಿದ್ದ ಹೆಣ್ಣು ಪಕ್ಷಿಯ ವೇದನೆಯನ್ನು ಕಂಡು ರತ್ನಾಕರನ ಮನಃ ಪರಿವರ್ತನೆಯಾಯಿತು. ಆಗ ಕ್ರೌರ್ಯದ ಜಾಗದಲ್ಲಿ ಕಾರುಣ್ಯ ತುಂಬಿಕೊಂಡಿತು. ಜನರ ತಲೆ ಒಡೆದು ಬದುಕುತ್ತಿದ್ದವನ ಬದುಕಿನಲ್ಲಿ ಸಾಹಿತ್ಯ ಬೆಳೆಯಿತು. ಕಾಠಿಣ್ಯ ತುಂಬಿ ತುಳುಕುತ್ತಿದ್ದ ಅವನ ಮನ ಕಾವ್ಯದ ಕಡಲಾಯಿತು. ಇದೇ ಪ್ರಸಂಗ ರಾಮಾಯಣದಂತಹ ಸರ್ವೋತ್ಕೃಷ್ಟ, ಸಾರ್ವಕಾಲಿಕ, ಸರ್ವ ಪೂಜ್ಯನೀಯ ಗ್ರಂಥ ರಚನೆಗೆ ನಾಂದಿ ಹಾಡಿತು.
ರತ್ನಾಕರ ಹೆಚ್ಚಿನ ಜ್ಞಾನ ಸಂಪಾದನೆಗೆ ಅವಿರತ ತಪಗೈದ. ಅವನ ಸುತ್ತಲೂ ವಲ್ಮೀಕ (ಹುತ್ತ) ಬೆಳೆಯಿತು. ರಾಮಧ್ಯಾನದಲ್ಲಿ ನಿರತನಾದ ಅವನನ್ನು ಪುನಃ ಸಪ್ತ ಋಷಿಗಳೇ ಬಂದು ಎಚ್ಚರಿಸಿ ವಲ್ಮೀಕದಿಂದ ಈಚೆ ತಂದು ವಾಲ್ಮೀಕಿ ಎಂದೇ ನಾಮಕರಣ ಮಾಡಿದರು. ಸ್ವತ- ಬ್ರಹ್ಮನೇ ಬಂದು ರಾಮಾಯಣ ಮಹಾಕಾವ್ಯವನ್ನು ಛಂದೋಬದ್ಧವಾಗಿ ಶ್ಲೋಕಗಳ ರೂಪದಲ್ಲಿ ರಚಿಸಲು ಸೂಚಿಸಿದ. ನಾರದಮುನಿಗಳು ಅವನಿಗೆ ರಾಮಾಯಣ ದರ್ಶನ ಮಾಡಿಸುತ್ತಾರೆ. ನಂತರ ವಾಲ್ಮೀಕಿ ಶ್ರೀಮದ್ ರಾಮಾಯಣವನ್ನು ಕಣ್ಣಿಗೆ ಕಟ್ಟುವಂತೆ ರಚಿಸಿದ.
ಶ್ರೀರಾಮಚಂದ್ರನೇ ಸೀತಾಮಾತೆಯನ್ನು ಸಂಶಯಿಸಿ ಕಾಡಿಗಟ್ಟಿದಾಗ ಆಕೆ ಗರ್ಭವತಿಯಾಗಿದ್ದಳು. ಆಕೆಗೆ ನೆಲೆ ನೀಡಿದವನು ವಾಲ್ಮೀಕಿ. ವಾಲ್ಮೀಕಿ ಕುಟೀರವೇ ಆಕೆಗೆ ತವರುಮನೆಯಾಯಿತು. ಅಲ್ಲಿಯೇ ಆಕೆಯ ಬಾಣಂತನವಾಗಿ ಲವ-ಕುಶರ ಜನನವಾಯಿತು. ಲವ-ಕುಶರಿಗೆ ಶ್ರೀರಾಮ ಚರಿತೆಯನ್ನು ಕಲಿಸಿದ ವಾಲ್ಮೀಕಿ ಅದನ್ನು ಶ್ರೀರಾಮನೆದುರು ಹಾಡಿಸಿದ. ಪುನಃ ತಂದೆ ಮಕ್ಕಳನ್ನು, ಗಂಡ ಹೆಂಡತಿಯನ್ನು ಒಂದುಗೂಡಿಸಿದ ಹೆಂಗರಳಿನವ ವಾಲ್ಮೀಕಿ. ಶ್ರೀರಾಮಚಂದ್ರನ ಸರಳತೆ, ಪ್ರಾಮಾಣಿಕತೆ, ಮಾತಿಗೆ ತಪ್ಪದ ನುಡಿ ನಿಷ್ಠುರತೆ, ಜನಹಿತವನು ಬಾಳಗುರಿಯಂತೆ ಭಾವಿಸಿದ ಪ್ರಜಾ ಪರಿಪಾಲಕನಂತೆ, ಶ್ರೀರಾಮನನ್ನು ಚಿತ್ರಿಸಿದ ವಾಲ್ಮೀಕಿ, ಕೆಣಕಿದವರನ್ನು ಸಂಹರಿಸುವ ಪರಾಕ್ರಮಿ ಎಂಬಂತೆಯೂ ವರ್ಣಿಸಿದ್ದಾನೆ. ಶ್ರೀರಾಮ ಕಾಡಿನಲ್ಲಿ ಅನುಭವಿಸಿದ ವನವಾಸವನ್ನು ವಾಲ್ಮೀಕಿ ನೈಜವಾಗಿ ಸೃಷ್ಟಿಸಿದ್ದಾನಲ್ಲದೆ ಗೊಂಡಾರಣ್ಯವನ್ನೇ ಕಣ್ಮುಂದೆ ತರುತ್ತಾನೆ. ಆತನಿಗೆ ಪ್ರಾಣಿಪಕ್ಷಿಗಳಲ್ಲಿ ಅಪಾರ ಕರುಣೆ, ಹೀಗಾಗಿ ಚಿತ್ರವಿಚಿತ್ರ ಪ್ರಾಣಿ ಪಾತ್ರಗಳ ಸೃಷ್ಟಿ. ಕೋತಿ ತಲೆಯ, ಮಾನವ ದೇಹದ ಹನುಮಂತ, ಮಾತನಾಡುವ ಜಟಾಯು ಪಕ್ಷಿ, ವಾಲಿ ಸುಗ್ರೀವರೆಂಬ ಕೋತಿರಾಜರು ಜೊತೆಗೆ ಅಬಾಲ ವೃದ್ಧರಾದಿಯಾಗಿ ಎಲ್ಲರ ಮನಸೆಳೆವ ಹತ್ತು ತಲೆಯ ರಾವಣ. ಅವನ ಅಟ್ಟಹಾಸ, ಮಾಯಾವಿ ಜಿಂಕೆಯ ಚಮತ್ಕಾರ, ಶೂರ್ಪನಖಿ, ಲಂಕಿಣಿಯರ ಮಾಯಾ ಜಾಲ, ಕುಂಭಕರ್ಣನ ಗಾಢನಿದ್ರೆ ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳಿಂದ ರಾಮಾಯಣವನ್ನು ಶೃಂಗರಿಸಿದ್ದಾನೆ.
ಸಂಬಂಧಗಳ ಬಂಧ: ಮಗನೆಂದರೆ ಶ್ರೀರಾಮಚಂದ್ರನಂತಿರಬೇಕು, ತಮ್ಮನೆಂದರೆ ಲಕ್ಷ್ಮಣನಂತಿರಬೇಕು ಎಂಬ ಮಾತಿದೆ. ಹೆಂಡತಿಯೆಂದರೆ ಸೀತೆಯಂತಿರಬೇಕೆಂಬ ಮಾತೂ ಜನಜನಿತ. ಏಕೆಂದರೆ ರಾಜಕುಮಾರಿಯಾದ ಆಕೆ, ನಾರುಮಡಿಯುಟ್ಟು ಗಂಡನ ಜೊತೆ ರಾಜ್ಯ ಕೋಶ ತೊರೆದು ಕಾಡಿಗೆ ಹೊರಟ ಮಹಾಸಾಧ್ವಿ.
ಗಂಡನ ಸುಖದಲ್ಲಷ್ಟೇ ಅಲ್ಲ ಕಷ್ಟದಲ್ಲೂ ಹೆಂಡತಿ ಪಾಲುದಾರಳು ಎಂಬುದನ್ನು ಮನವರಿಕೆ ಮಾಡಿಕೊಟ್ಟ ಆದರ್ಶ ಮಹಿಳೆ. ದೇವರ ದೇವ, ಮರ್ಯಾದಾ ಪುರುಷೋತ್ತಮ, ಶ್ರೀರಾಮದೇವನನ್ನು ಸೃಷ್ಟಿಸಿದ ಮಹಾದೇವ ವಾಲ್ಮೀಕಿಯ ರಾಮಾಯಣವನ್ನು ಓದದವರಿಲ್ಲ. ಓದದಿದ್ದರೂ ರಾಮಾಯಣದ ಕಥೆ ಗೊತ್ತಿಲ್ಲದವರು ಇಲ್ಲವೇ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಬಾಯಿಂದ ಬಾಯಿಗೆ ಹರಿದಾಡಿಸಿದ ಅನಕ್ಷರಸ್ಥಭಕ್ತರಿಗೆ ರಾಮಾಯಣವನ್ನು ಅಜರಾಮಗೊಳಿಸಿದ ಕೀರ್ತಿ ಸಲ್ಲುತ್ತದೆ.
ವಾಲ್ಮೀಕಿ ರಾಮಾಯಣದ ಪ್ರೇರಣೆಯಿಂದ ದೇಶದ ಅನೇಕ ಭಾಷೆಗಳಲ್ಲಿ ಈ ಮಹಾಕಾವ್ಯ ರಚನೆಯಾಗಿದೆ. ತೊರವೆ ರಾಮಾಯಣ, ತುಳಸಿ ರಾಮಾಯಣ, ಜೈನ ರಾಮಾಯಣ, ಪರ್ಷಿಯನ್ ಭಾಷೆಯಲ್ಲಿ ಕೂಡ ರಚಿಸಲ್ಪಟ್ಟಿದೆ. ಅಷ್ಟೇ ಏಕೆ ರಾಷ್ಟ್ರಕವಿ ಕುವೆಂಪು ಅವರಿಗೆ "ರಾಮಾಯಣ ದರ್ಶನಂ" ಬರೆಯಲು ಸ್ಪೂರ್ತಿ ನೀಡಿದ್ದೂ ವಾಲ್ಮೀಕಿ ರಾಮಾಯಣ. ಅದರಿಂದಾಗಿ ಕುವೆಂಪು ಅವರು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು.
ವಾಲ್ಮೀಕಿಯಷ್ಟೇ ಅಲ್ಲ ನಾಯಕ ಜನಾಂಗದಲ್ಲಿ ಸ್ಮರಿಸಬೇಕಾದ ಇನ್ನೂ ಅನೇಕ ಪುರಾಣ ಪುರುಷರು ವೀರ ಪರಾಕ್ರಮಿಗಳು, ಸ್ವತಂತ್ರಹೋರಾಟಗಾರರು ಇದ್ದಾರೆಂಬುದು ಹೆಮ್ಮೆಯ ಸಂಗತಿ. ಚಿತ್ರದುರ್ಗವನ್ನು ಆಳಿದ ವೀರ ಪಾಳೆಯಗಾರರ ಚರಿತ್ರೆಯೇ ರೋಚಕ. ಅವರಲ್ಲಿ ಮತ್ತಿ ತಿಮ್ಮಣ್ಣ ನಾಯಕ, ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ, ಹೆಬ್ಬುಲಿ ಹಿರೇ ಮದಕರಿ ನಾಯಕ, ಗಂಡುಗಲಿ ಮದಕರಿನಾಯಕ ಅಗ್ರಗಣ್ಯರು. ಹೈದರಾಲಿ ನವಾಬನಂತಹ ಅತುಳ ಪರಾಕ್ರಮಿ ನಾಲ್ಕು ಬಾರಿ ದಂಡೆತ್ತಿ ಬಂದರೂ ಹೊಡೆದೋಡಿಸಿ ಕುತಂತ್ರಕ್ಕೆ ಬಲಿಯಾದ ಗಂಡುಗಲಿ ಮದಕರಿ, ದುರ್ಗದ ಐಸಿರಿ. ಅಷ್ಟೇ ಅಲ್ಲ, ಕಂಪ್ಲಿಯ ಕಂಪಿಲರಾಯ, ತರೀಕೆರೆಯ ಸರ್ಜಾ ಹನುಮಪ್ಪ ನಾಯಕ, ವಿಜಯನಗರದ ಎಚ್ಚಮ ನಾಯಕ, ಹರಪನಹಳ್ಳಿಯ ಸೋಮಶೇಖರ ನಾಯಕ, ಮುಸ್ಲೀಮರಿಗೆ ನೆಲ ಬಿಟ್ಟು ಕೊಡದೆ ಹೋರಾಡಿದ ರಣಕಲಿಗಳು. ಬ್ರಿಟಿಷರ ವಿರುದ್ಧ ಸೆಣಸಿ ರಕ್ತ ತರ್ಪಣವನ್ನಿತ್ತವರು ರಾಜಾ ಸುರಪುರದ ವೆಂಕಟಪ್ಪ ನಾಯಕ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ಸಿಂಧೂರ ಲಕ್ಷ್ಮಣನ ಕಥೆಯೂ ರೋಮಾಂಚಕ.
ಐತಿಹ್ಯಕ್ಕೆ ಬಂದರೆ ಜಗತ್ತಿಗೆ ಕಣ್ಣಾದ ಕಪಾಲೇಶ್ವರನಿಗೇ ಕಣ್ಣುದಾನ ಮಾಡಿದ ಮೊದಲ ನೇತ್ರದಾನಿ ಬೇಡರ ಕಣ್ಣಪ್ಪ. ತನ್ನ ಹೆಬ್ಬೆರಳನ್ನೇ ಗುರುಕಾಣಿಕೆಯಾಗಿ ನೀಡಿದ ಏಕಲವ್ಯ ಇಂದಿಗೂ ಅಮರ. ಹಗಲಿರುಳು ಶ್ರೀರಾಮನಿಗಾಗಿ ಕಾದುಕುಳಿತು, ರಾಮನ ಆಗಮನವಾದೊಡನೆ ಎಂಜಲು ಹಣ್ಣುಗಳನ್ನು ನೀಡಿದ ಪರಮ ಮುಗ್ಧೆ ಶಬರಿ. ಧರ್ಮದ ಹಾದಿಯಲ್ಲಿ ನಡೆದ ಧರ್ಮವ್ಯಾಧ ಹೀಗೆ ನೆನೆಯುತ್ತಾ ಹೋದರೆ "ಎಂದರೋ ಮಹಾನುಭಾವುಲು". ಇವರೆಲ್ಲಾ ಶಕ್ತಿ - ಭಕ್ತಿಗಳ ಸಂಗಮವಾಗಿದ್ದರು.
ನಾಯಕ ಎಂದರೆ ಮುಂದಾಳು ಎಂದರ್ಥ. ಇಂಥ ಅದ್ಭುತ ಇತಿಹಾಸ ಹೊಂದಿರುವ ನಾಯಕರು ಇಂದೇನಾಗಿದ್ದಾರೆ? ಕೋಟೆ ಕೊತ್ತಲಗಳನ್ನು ಕಟ್ಟಿ ಆಳುತ್ತಿದ್ದ ಜನಾಂಗವಿಂದು ಕುರಿಮೇಕೆ ಮೇಯಿಸುತ್ತಿದ್ದಾರೆ. ಕೂಲಿ ಮಾಡುತ್ತಿದ್ದಾರೆ. ಕತ್ತಿ ಕಠಾರಿಗಳು ಅಟ್ಟಕ್ಕೆ ಸೇರಿ ಧೂಳು ತಿನ್ನುತ್ತಿವೆ. ಗಲ್ಲಿ ಮೀಸೆಗಳು ಹೊಟ್ಟೆಗಿಲ್ಲದೇ ಜೇಬಲ್ಲಿ ಕಾಸಿಲ್ಲದೇ ಸೊರಗಿವೆ. ಶಕ್ತಿ ಭಕ್ತಿಗಳ ದಾಸರಾಗಿದ್ದವರು ಪಥ ಬದಲಿಸಿದ್ದಾರೆ. ಈ ಸಮುದಾಯದಲ್ಲಿ ವಿದ್ಯಾವಂತರು ಕಡಿಮೆ. ರಾಜಕೀಯ ಪ್ರಜ್ಞೆಯಂತೂ ತೀರಾ ವಿರಳ. ರಾಜ್ಯದಲ್ಲಿ ಸುಮಾರು 68 ಲಕ್ಷದಷ್ಟು ನಾಯಕ ಸಮುದಾಯದವರಿದ್ದರೂ ಒಗ್ಗಟ್ಟಿಲ್ಲ. ಶಾಸಕ, ಮಂತ್ರಿಗಳಾಗಿದ್ದು ವಿರಳ. ಅಸಲಿಗೆ ನಾಯಕ ಜನಾಂಗದಲ್ಲಿ ನಾಯಕರಾದರೂ ಎಲ್ಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ನಾಯಕರಲ್ಲೀಗ 17 ಮಂದಿ ಶಾಸಕರಿದ್ದಾರೆ. ಸತೀಶ ಜಾರಕಿಹೊಳಿ ಮಂತ್ರಿಯಾಗಿದ್ದರೂ ಮಂಕಾಗಿದ್ದಾರೆ. ಜನಾಂಗಕ್ಕೀಗ ಗುರುಗಳೂ ಇದ್ದಾರೆನ್ನಿ. ಅವರು ಅಡ್ಡಪಲ್ಲಕ್ಕಿ ಉತ್ಸವ, ಅದ್ಧೂರಿ ಮೆರವಣಿಗೆ, ಜಾತಿ ಸಮ್ಮೇಳನಗಳಿಂದ ದೂರ ಉಳಿದು ವಿದ್ಯಾಲಯ, ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಶೈಕ್ಷಣಿಕವಾಗಿ ಜನಾಂಗವನ್ನು ಬಲಗೊಳಿಸಬೇಕಿದೆ. ವೈಚಾರಿಕ ನೆಲೆಯಲ್ಲಿ ನಿಂತು ಚಿಂತಿಸಿ ಜನಾಂಗಕ್ಕೆ ಮೌಲ್ಯಯುತ ಕೊಡುಗೆ ನೀಡಬೇಕಿದೆ. ಇಂತಹ ಜನಪದ ಕಾರ್ಯಗಳಿಗೆ ಜನತೆ, ಜನಾಂಗದ ಪ್ರತಿನಿಧಿಗಳು, ಕೈಜೋಡಿಸುವ ಧಾರಾಳತನ ತೋರಿಸಬೇಕಿದೆ. ಈಗಿನ ಸಂದರ್ಭದಲ್ಲಿ ಸರಿಯಾದ ನಾಯಕರೇ ಇಲ್ಲದ ನಾಯಕ ಜನಾಂಗವನ್ನು ಸಂರಕ್ಷಿಸುವಂತಹ ನಾಯಕನನ್ನು ವಾಲ್ಮೀಕಿ ಮಹರ್ಷಿ ಪ್ರಸಾದಿಸಲಿ, ಶೂರ ಜನಾಂಗಕ್ಕೆ ಶುಭವಾಗಲಿ.
- ಡಾ.ಬಿ.ಎಲ್.ವೇಣು, ಚಿತ್ರದುರ್ಗ
blvenu9@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

