ಅಂಕಣಗಳು

ನೂತನ ಉಪನ್ಯಾಸಕರನ್ನು ಕಾಡುತ್ತಿರುವ ಬಿ.ಇಡಿ ಭೂತ

Published On :

ಕರ್ನಾಟಕ ಲೋಕಸೇವಾ ಆಯೋಗವು 2009ರ ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ 2,665 ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಂಡಿತು. ಸೇವೆಗೆ ಸೇರಿದ ನಾಲ್ಕು ವರ್ಷಗಳಲ್ಲಿ ಬಿ.ಇಡಿ ಪದವಿ ಪಡೆಯಬೇಕು ಎಂಬ ಷರತ್ತು ನೇಮಕಾತಿ ಆದೇಶದಲ್ಲಿತ್ತು.  2,665 ಉಪನ್ಯಾಸಕರ ಪೈಕಿ 1,682 ಉಪನ್ಯಾಸಕರ ಪ್ರೊಬೆಷನರಿ ಅವಧಿ ತೃಪ್ತಿಕರ ಎಂದು ಈವರೆಗೂ ಘೋಷಿಸಿಲ್ಲ. ಏಕೆಂದರೆ ಅವರಿಗೆ ಬಿ.ಇಡಿ ಪದವಿ ಇಲ್ಲ. ಬಿ.ಇಡಿ ಪದವಿ ಹೊಂದಿರುವ 983 ಮಂದಿಯ ಪ್ರೊಬೆಷನರಿ ಅವಧಿ ತೃಪ್ತಿಕರವಾಗಿದೆ ಎಂದು ಘೋಷಿಸಲಾಗಿದೆ. ಆದರೆ ಉಳಿದ 1,682 ಮಂದಿ 2011ರ ಸೆಪ್ಟೆಂಬರ್‌ನಲ್ಲಿಯೇ ಪ್ರೊಬೆಷನರಿ ಅವಧಿ ಮುಕ್ತಾಯಗೊಳಿಸಿದ್ದರೂ ಬಿ.ಇಡಿ ಪದವಿ ಇಲ್ಲ ಎಂಬ ಕಾರಣದಿಂದ ಅಧಿಕೃತವಾಗಿ ಘೋಷಿಸಿಲ್ಲ. ಪರಿಣಾಮ ಇವರು ವಾರ್ಷಿಕ ವೇತನ ಬಡ್ತಿ, ವರ್ಗಾವಣೆಯಿಂದ ವಂಚಿತರಾಗಿದ್ದಾರೆ.  ಕೆಲವು ಉಪನ್ಯಾಸಕರು ನಿಧನರಾಗಿದ್ದು, ಅವರ ಕುಟುಂಬಗಳಿಗೆ ಕನಿಷ್ಠ ಸೌಲಭ್ಯಗಳು ಕೂಡ ಸಿಗದೇ ಪರಿತಪಿಸುತ್ತಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಇತಿಹಾಸದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆಯಾದ ಮೊದಲ ತಂಡ ಇದು. ಇವರಲ್ಲಿ ಶೇ.80 ರಷ್ಟು ಮಂದಿ, ಪಿಎಚ್.ಡಿ, ಎಂ.ಫಿಲ್, ಮೊದಲಾದ ಉನ್ನತ ಶಿಕ್ಷಣ ಪಡೆದಿದ್ದಾರೆ. ಅಲ್ಲದೇ ನೆಟ್, ಸ್ಲೆಟ್ ಪರೀಕ್ಷೆ ಪಾಸು ಮಾಡಿಕೊಂಡವರೂ ಇದ್ದಾರೆ.
ನೇಮಕಾತಿ ಸಂಬಂಧ ಹೊರಡಿಸಿದ ಅಧಿಸೂಚನೆಯಲ್ಲಿ ಇಲ್ಲದೇ ನಂತರ ಅಳವಡಿಸಿದ ಈ ಅವೈಜ್ಞಾನಿಕ ಷರತ್ತಿನಿಂದ ನಮ್ಮನ್ನು ಅಭದ್ರತೆಯ ಕೂಪಕ್ಕೆ ತಳ್ಳಲಾಗಿದೆ ಎಂಬುದು ಈ ಉಪನ್ಯಾಸಕರ ಆರೋಪವಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನಕ್ಕೆ (ಆರ್‌ಎಂಎಸ್‌ಎ) ಒಳಪಡುವುದರಿಂದ ಹೊಸದಾಗಿ ನೇಮಕಗೊಳ್ಳುವ ಉಪನ್ಯಾಸಕರು ಬಿ.ಇಡಿ ಪದವಿ ಹೊಂದಬೇಕು ಎಂದು ಎನ್‌ಸಿಟಿಇ ಆದೇಶ ಹೊರಡಿಸಿರುವುದು 2011ರ ನವೆಂಬರ್‌ನಲ್ಲಿ. ಹಾಗಾಗಿ ಬಿ.ಇಡಿ ಪದವಿ ಪಡೆಯಬೇಕು ಎಂಬ ಷರತ್ತು ಅನ್ವಯವಾಗುವುದು 2011ರ ನಂತರ ನೇಮಕಾತಿಯಾಗುವ ಉಪನ್ಯಾಸಕರಿಗೆ ಮಾತ್ರ. 2009 ರಲ್ಲಿ ನೇಮಕಗೊಂಡವರಿಗೆ ಬಿ.ಇಡಿ ಪದವಿ ಪಡೆಯಬೇಕು ಎಂಬ ಷರತ್ತು ವಿಧಿಸಿ, ಬ್ರೊಬೆಷನರಿ ಅವಧಿ ಘೋಷಣೆ ಮಾಡದಿರುವುದು ಸರಿಯಲ್ಲ ಎಂಬುದು ಅವರ ವಾದ.
2009 ರಲ್ಲಿ ಆಯ್ಕೆಯಾಗಿರುವ ಉಪನ್ಯಾಸಕರಿಗೆ ಬಿ.ಇಡಿ ಪದವಿ ಪಡೆಯಲು ಅನೇಕ ತಾಂತ್ರಿಕ ಮತ್ತು ಶೈಕ್ಷಣಿಕ ಅಡತಡೆಗಳಿವೆ. ವಾಣಿಜ್ಯಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ವಿಷಯಗಳ ಉಪನ್ಯಾಸಕರು ಬಿ.ಇಡಿ ಪದವಿ ಪಡೆಯಲು ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಅವಕಾಶ ಇಲ್ಲ. ಹಾಗೆಯೇ ಕೆಲವರು ವಯಸ್ಸಿನ ಆಧಾರದ ಮೇಲೆ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಹಳ ಜನರು ಪದವಿಯಲ್ಲಿ ಶೇ.50ಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ. ಇವರೆಲ್ಲಾ ಈಗ ಬಿ.ಇಡಿ ಪಡೆಯಲು ಸಾಧ್ಯವಿಲ್ಲ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 2010ರ ಸೆ.30 ರಂದು ಹೊರಡಿಸಿರುವ ಆದೇಶದ ಪ್ರಕಾರ, ಈಗಾಗಲೇ ಪಿಯುಸಿ ಉಪನ್ಯಾಸಕರಾಗಿ ನೇಮಕವಾಗಿ, ಬಿ.ಇಡಿ ಇಲ್ಲದವರಿಗೆ ಮೂರರಿಂದ ನಾಲ್ಕು ತಿಂಗಳ ಇಂಡೆಕ್ಷನ್ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದರು. ಆದರೆ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ 2012ರ ಜು.28ರಂದು ಸುತ್ತೋಲೆ ಹೊರಡಿಸಿ, ಎಲ್ಲಾ ಉಪನ್ಯಾಸಕರಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯಿಂದ ಬಿ.ಇಡಿಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದರು. ಅದು ಕೂಡ ಕಾರ್ಯರೂಪಕ್ಕೆ ಬಾರಲಿಲ್ಲ.
ಆದರೆ ಈಗ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು, ಬಿ.ಇಡಿ ಇಲ್ಲದ ಪಿಯು ಉಪನ್ಯಾಸಕರು ವೇತನರಹಿತ ರಜೆಯ ಮೇಲೆ ತೆರಳಿ, ಕಡ್ಡಾಯವಾಗಿ ಬಿ.ಇಡಿ ಪದವಿ ಪಡೆಯಬೇಕು. ಇಲ್ಲದಿದ್ದಲ್ಲಿ ಸೇವೆಯಿಂದ ವಜಾಗೊಳಿಸುವ ಬೆದರಿಕೆ ಹಾಕಿದ್ದಾರೆ.
ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಪುನರ್ ಸಂಘಟನೆ ಕುರಿತು ದೆಹಲಿಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತದ ರಾಷ್ಟ್ರೀಯ ವಿವಿಯ ಕುಲಪತಿ ಪ್ರೊ.ಆರ್. ಗೋವಿಂದ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಪ್ರೊ. ಗೋವಿಂದ ವರದಿಯ ಪ್ರಕಾರವೂ, ಪ್ರಥಮ ಮತ್ತು ದ್ವಿತೀಯ ಪಿಯುಸಿ 11 ಹಾಗೂ 12ನೇ ತರಗತಿಗಳಾಗಿ, ಪದವಿಪೂರ್ವ ಕಾಲೇಜು ಉನ್ನತ ಪ್ರೌಢಶಾಲೆಯಾಗುತ್ತದೆ. ಸ್ನಾತಕೋತ್ತರ ಪದವಿಯುಳ್ಳ ಉಪನ್ಯಾಸಕರಿಗೆ ಬಿ.ಇಡಿ ಕಡ್ಡಾಯಬೇಕು. ಮುಂದಿನ ದಿನಗಳಲ್ಲಿ ಎಲ್ಲರಿಗೂ ಬಿ.ಇಡಿ ಕಡ್ಡಾಯವಾಗಬೇಕು ಎಂದು ಹೇಳಿದೆ. 9, 10ನೇ ತರಗತಿಗಳಿಗೆ ಬೋಧಿಸುವವರು ಸ್ನಾತಕೋತ್ತರ ಪದವೀಧರರಾಗಿರಬೇಕು. ಉನ್ನತ ಪ್ರೌಢಶಾಲೆಯ ಶಿಕ್ಷಕರಿಗೆ ಬಿ.ಇಡಿ ಅಥವಾ ಸಮಾನ ಸರ್ಟಿಫಿಕೇಟ್ ಪದವಿ ಪಡೆಯಲು ಉತ್ತೇಜನ ನೀಡಬೇಕು. ಬಿ.ಇಡಿ ತರಬೇತಿ ಹೊಂದದ ಉನ್ನತ ಪ್ರೌಢಶಾಲಾ ಶಿಕ್ಷಕರಿಗೆ ಕಿರು ಅವಧಿಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ಲಸ್ 2 ತರಗತಿಗಳಿಗೆ ಯಾವ ನಿರ್ದಿಷ್ಟ ತರಬೇತಿ ಕಾರ್ಯಕ್ರಮವೂ ಇಲ್ಲ. ಆದ್ದರಿಂದ ಡಿಎಸ್‌ಇಆರ್‌ಟಿ ಇದಕ್ಕಾಗಿ ಪ್ರತ್ಯೇಕ ವಿಭಾಗ ತೆರೆದು, ಶಿಕ್ಷಕರ ತರಬೇತಿ ಅವಶ್ಯಕತೆಗಳಿಗೆ ಗಮನ ನೀಡಲು ಶಿಫಾರಸ್ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ಆದ್ದರಿಂದ ಸರ್ಕಾರ ಆರ್‌ಎಂಎಸ್ ಹಾಗೂ ನಬಾರ್ಡ್‌ದಿಂದ ದೊರೆಯುವ ಅನುದಾನದ ಕಡೆ ಮಾತ್ರ ಗಮನಹರಿಸದೇ ಪಿಯು ಕಾಲೇಜುಗಳಿಗೆ 2009 ರಲ್ಲಿ ನೇಮಕವಾಗಿ ಬಿ.ಇಡಿ ಇಲ್ಲದೇ ತ್ರಿಶಂಕು ಸ್ಥಿತಿಗೆ ದೂಡಲ್ಪಟ್ಟಿರುವ, ಅಭದ್ರತೆಯಿಂದ ನರಳುತ್ತಿರುವ ಉಪನ್ಯಾಸಕರ ವಿಚಾರದ ಬಗ್ಗೆಯೂ ಗಮನಹರಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಉಪನ್ಯಾಸಕರು ಈ ವಿಷಯವನ್ನು ತಂದಿದ್ದಾರೆ.  ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ, ಸಮಸ್ಯೆ ಪರಿಹರಿಸುವ ಭರವಸೆ ಸಿಕ್ಕಿದೆ. ಪ್ರೊ.ಗೋವಿಂದ ವರದಿಯ ಪ್ರಕಾರ, ಕಿರು ತರಬೇತಿ ನೀಡಿಯೋ ಇಲ್ಲವೇ ವೇತನಸಹಿತ ಬಿ.ಇಡಿ ತರಬೇತಿಗೆ ನಿಯೋಜಿಸುವ ಮೂಲಕ ಸಮಸ್ಯೆ ಬಗೆಹರಿಸಬಹುದು. ದೂರದ ಪಶ್ಟಿಮ ಬಂಗಾಳದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿ.ಇಡಿ ಮಾದರಿಯ ತರಬೇತಿ ನೀಡುವ ಸಂಬಂಧ ಅಲ್ಲಿನ ಸರ್ಕಾರ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿಡೆ. ಅದೇ ರೀತಿ 1682 ಮಂದಿಯ ವಿಚಾರದಲ್ಲೂ ರಾಜ್ಯ ಸರ್ಕಾರ ನಿರ್ಧಾರ ಮಾಡಬೇಕಿದೆ. ಈ ರೀತಿ ಮಾಡಿದಲ್ಲಿ 2013 ರಲ್ಲಿ ನೇಮಕವಾಗಿ ಬಿ.ಇಡಿ ಇಲ್ಲದವರಿಗೂ ಅನುಕೂಲವಾಗಲಿದೆ.

- ಅಂಶಿ ಪ್ರಸನ್ನಕುಮಾರ್, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.