ಅಂಕಣಗಳು

ಕಣ್ಣಿಲ್ಲದಿದ್ದರೇನಂತೆ ಕನಸುಗಳಂತೂ ಇವೆಯಲ್ಲ?

ಕಣ್ಣಿಲ್ಲದಿದ್ದರೇನಂತೆ ಕನಸುಗಳಂತೂ ಇವೆಯಲ್ಲ?
Published On :

ಕತ್ತಲ ಪ್ರಪಂಚದ ಲಿಪಿಕಾರ ಫ್ರಾನ್ಸ್ ದೇಶದ ಲೂಯಿಸ್ ಬ್ರೈಲ್ ಹಾಗೂ ಅಂಧರು ಬಳಸುವ ಬಿಳಿಕೋಲಿನ ಹರಿಕಾರ ಇಂಗ್ಲೆಂಡಿನ ಡಾ. ರಿಚರ್ಡ್ ಹೂವರ್ ಅವರನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಬದುಕುತ್ತಿರುವ ದೃಷ್ಟಿ ಚೇತನ ವ್ಯಕ್ತಿ ತಾನೇ ಮರೆಯಲು ಸಾಧ್ಯ? ವಿಶ್ವಕ್ಕೆ ವಿಶ್ವವೇ ತಲೆಬಾಗುವ ಈ ಇಬ್ಬರು ಮಹಾಪುರುಷರಲ್ಲಿ ಲೂಯಿಸ್ ಚೈತನ್ಯದ ಸಂಕೇತವಾದರೆ, ಹೂವರ್ ಚಲನಶೀಲತೆಯ ಸಂಕೇತವಾಗಿ ದೃಷ್ಟಿ ಚೇತನರ ಪಾಲಿಗೆ ನಿಲ್ಲುತ್ತಾರೆ.
ಬದುಕಿಗೆ ಕ್ರಿಯಾಶೀಲತೆ ಎಷ್ಟು ಮುಖ್ಯವೋ, ಬದುಕಿರುವವನಿಗೆ ಚಲನಶೀಲತೆಯೂ ಅಷ್ಟೇ ಮುಖ್ಯ. ಇಲ್ಲಿ ಚಲನಶೀಲತೆ ಎಂದರೆ ನಿಘಂಟಿನ ಅರ್ಥದ "ಚಲನೆ" ಮಾತ್ರ. ಈ ಚಲನಶೀಲತೆಯನ್ನು ಬದುಕಿರುವ ಯಾವ ಜೀವಿಯಾದರೂ ಒಲ್ಲೆನೆಂದೀತೆ? ಆದರೂ ಸೃಷ್ಟಿಯ ಕ್ರಿಯಾ ವೈಪರೀತ್ಯದಿಂದಾಗಿ ಹುಟ್ಟಿಕೊಂಡ ವಿಶ್ವದ ಅಂಧ ಸಮುದಾಯವು ಎರಡನೇ ಜಾಗತಿಕ ಮಹಾಯುದ್ಧದವರೆಗೂ ಸ್ವತಂತ್ರ ಚಲನಶೀಲತೆಯನ್ನೇ ಕಳೆದುಕೊಂಡು ಬದುಕಿದ್ದಿತ್ತು ಎಂಬುದು ಅರಗಿಸಿಕೊಳ್ಳಲಾಗದ ಕ್ರೂರ ಸತ್ಯ ಮತ್ತು ವಿಶ್ವದ ದುರಂತ ಕೂಡ ಹೌದು.
ನಿತ್ಯವೂ ಬದುಕಿಗೆ ಹೊಸತನವನ್ನು ತುಂಬಿಕೊಳ್ಳುವುದಿರಲಿ, ಹೊಸ ಜಾಗಗಳಿಗೂ ಬೇಡ, ಕಡೆ ಪಕ್ಷ ತನಗೆ ಚಿರಪರಿಚಿತವಿರುವ ಜಾಗಗಳಿಗೂ ಸ್ವತಂತ್ರವಾಗಿ ಹೋಗಿಬರಲಾಗದ ಅಂಧ ವ್ಯಕ್ತಿಯಿಂದ ಯಾವ ಕ್ರಿಯಾಶೀಲತೆಯನ್ನು ಕಾಯ್ದುಕೊಳ್ಳಲು ಸಾಧ್ಯ? ಮನಸ್ಸಿನ ಲವಲವಿಕೆ ದೇಹದ ಚಲನಶೂನ್ಯತೆಯ ಮೇಲೆ ಯಾವ ಮಟ್ಟದ ಪ್ರಭುತ್ವವನ್ನು ಸಾಧಿಸಬಲ್ಲದು? ಗಿಡ ಮರಗಳಂತೆ ನಿಂತಲ್ಲೇ ಪಸರಿಸಿ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯವೇ? ಇವನೂ ಮನುಷ್ಯನೇ. ಕಣ್ಣುಗಳಿಲ್ಲದಿದ್ದರೂ ಕನಸುಗಳಂತೂ ಇದ್ದೇ ಇವೆಯಲ್ಲ! ಇಂಥ ಅದೆಷ್ಟೋ ಅಸಂಖ್ಯಾತ ಜೀವಗಳ ಹೊಯ್ದಾಟಕ್ಕೆ ಕೊನೆಗೂ ಸಮಾಧಾನ ದೊರೆತದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ.
ಯುದ್ಧದಿಂದ ಯಾರಿಗೆ ಲಾಭವಾಯಿತೋ ತಿಳಿಯದು. ಆದರೆ ಅಂಧರಿಗಂತೂ ನಿಶ್ಚಿತ ಲಾಭವೇ ಆಯಿತು. ಮಿಲಿಟರಿಯ ಗುಪ್ತಚರರು ಶತ್ರುಗಳಿಗೆ ಅರ್ಥವಾಗದಿರಲೆಂದು ಪರಸ್ಪರ ಕತ್ತಲಲ್ಲಿ ಬೆರಳ ಸ್ಪರ್ಶದಿಂದ ಸಂಕೇತಗಳ ಮೂಲಕ ಅರ್ಥಮಾಡಿಕೊಳ್ಳಬಹುದಾದ ಒಂದು ವಿಚಿತ್ರ ಲಿಪಿಯನ್ನು ಬಳಸುತ್ತಿದ್ದರೆಂದು ಓದಿದ್ದ ಲೂಯಿಸ್ ಕತ್ತಲ ಪ್ರಪಂಚದ ಲಿಪಿಕಾರನಾದ. ಅಂತೆಯೇ ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮಂದಿ ಸೈನಿಕರು, ತಮ್ಮ ಕಣ್ಣುಗಳನ್ನು ಕಳೆದುಕೊಂಡು ನಿಸ್ಸಹಾಯಕರಾಗಿ ಕಡೆಗೆ ಓಡಾಡುವ ಅನಿವಾರ್ಯತೆಯಿಂದ ಬಡಗಿಗಳನ್ನು ಆಶ್ರಯಿಸಲು ಮುಂದಾದದ್ದನ್ನು ಕಂಡ ಹೂವರ್ ಆ ಬಡಗಿಗೊಂದು ಆಕಾರ ಕೊಟ್ಟ.
ಇಂಥ ಸಾರ್ಥಕ ಪ್ರಯತ್ನದ ಫಲವೇ ಇಂದು ಅಂಧ ಸಮುದಾಯದ ಆತ್ಮವಿಶ್ವಾಸದ ಸಂಕೇತವಾಗಿರುವ ಬಿಳಿಕೋಲು. ಇದರ ಆವಿಷ್ಕಾರದ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 15 ರಂದು ಇಡೀ ವಿಶ್ವದ ಅಂಧ ಸಮುದಾಯವು ಅಂತಾರಾಷ್ಟ್ರೀಯ ಬಿಳಿಕೋಲು ದಿನಾಚರಣೆಯನ್ನು ಆಚರಿಸಿ ಕೃತಾರ್ಥಗೊಳ್ಳುತ್ತದೆ.
ಈ ಬಿಳಿಕೋಲು ಅಂಧರ ಜೀವನದ ಸಂಗಾತಿ. ಕೋಲನ್ನು ಹಿಡಿದ ಕೈಗಳಿಗೆ ಇನ್ನಿಲ್ಲದ ಆತ್ಮಸ್ಥೈರ್ಯ. ತಾನು ತಲುಪಬೇಕಾಗಿರುವ ಗುರಿಯನ್ನು ಮುಟ್ಟೇ ತೀರುತ್ತೇನೆಂಬ ನಂಬಿಕೆ. ಕೇವಲ ಜಡವಸ್ತುವಾಗಿರುವ ಒಂದು ಬಿಳಿಕೋಲು ಇಲ್ಲಿ ಜೀವಕ್ಕೆ ಜೀವಂತಿಕೆಯನ್ನು ನೀಡಬಹುದಾದರೆ ಎಲ್ಲ ಅಂಗಗಳನ್ನು ಪಡೆದ ನೀವೇಕೆ ದೃಷ್ಟಿ ವಿಕಲರನ್ನು ಕಂಡಾಗ ದೃಷ್ಟಿ ಶೂನ್ಯರಾಗಬೇಕು?
ನಿಮಗೆ ತಿಳಿದಿರಲಿ: ಅಂಧರು ಬಳಸುವ ಬಿಳಿಕೋಲು ಅಥವಾ ವಾಕಿಂಗ್ ಸ್ಟಿಕ್ ಯಾವುದೇ ಮಂತ್ರ ದಂಡವಲ್ಲ. ನೀವು ಕಲ್ಪಿಸಿಕೊಳ್ಳಬಹುದಾದ ಯಾವ ಮ್ಯಾಜಿಕ್ ಸಾಮರ್ಥ್ಯವೂ ಅದಕ್ಕಿಲ್ಲ. ಹೆಚ್ಚೆಂದರೆ, ಇದನ್ನು ಬಳಸುವ ಸಂದರ್ಭಗಳಲ್ಲಿ ತನಗೆ ತಾಗುವ ಕಂಬಗಳ, ಹಳ್ಳ ತಿಟ್ಟುಗಳ ಬಗೆಗೆ ಮಾತ್ರ ಮಾಹಿತಿ ನೀಡಬಲ್ಲದು. ಆದರೆ ರಸ್ತೆಗಳ ಇಕ್ಕೆಲಗಳಲ್ಲಿ, ಪಾರ್ಕಿಂಗ್ ಇರಲಿ ಇಲ್ಲದಿರಲಿ ಆರಾಮಾಗಿ ಅಡ್ಡಾದಿಡ್ಡಿ ನಿಂತ ವಾಹನಗಳು, ಫುಟ್‌ಪಾತ್ ಮೇಲೆ ಮನಸೋ ಇಚ್ಛೆ ಹರಡಿಕೊಂಡಿರುವ ಅಂಗಡಿಗಳು, ತಲೆ ಅಥವಾ ಮುಖದ ಭಾಗಗಳಿಗೆ ತಾಗುವಂತೆ ಬಾಗಿರುವ ಮರದ ಕೊಂಬೆಗಳು, ಚಪ್ಪಡಿ ಮುರಿದು ಬಾಯಿ ತೆರೆದುಕೊಂಡು ಮಲಗಿರುವ ಚರಂಡಿಗಳಿಂದ ತೊಂದರೆ ಅನುಭವಿಸದಿರಲು ಅಥವಾ ವಿಳಾಸದ ಬಗೆಗೆ ತಟ್ಟನೆ ಸಂಕೇತಗಳನ್ನು ರವಾನಿಸಬಲ್ಲ ಯಾವ ವ್ಯವಸ್ಥೆಯೂ ಇರುವುದಿಲ್ಲ.  ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮರ್ಪಕ ರೀತಿಯಲ್ಲಿ ಯಾವ ಪ್ರಯೋಗಗಳೂ ನಡೆದಿಲ್ಲ. ಒಂದು ವೇಳೆ ಅಂಥ ಆವಿಷ್ಕಾರಗಳು ನಡೆದದ್ದೇ ಆದರೂ ಸಾಮಾನ್ಯ ಅಂಧನ ಕೈಗೆಟುಕುವ ನಂಬಿಕೆಯೂ ಇಲ್ಲ. ಹೆಚ್ಚೆಂದರೆ, ವಿಕಲಚೇತನರಿಗಾಗಿ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾ ವ್ಯಾಪಾರಿ ಕೇಂದ್ರಗಳಾಗುತ್ತಿರುವ ಸಂಘ ಸಂಸ್ಥೆಗಳ ರಿಸೋರ್ಸ್ ರೂಂಗಳಲ್ಲಿ ಕುಳಿತು, ಬಂದ ದಾನಿಗಳ ಮುಂದೆ ಪ್ರದರ್ಶನದ ವಸ್ತುವಾಗಬಹುದು.
ಇದೇನೇ ಇರಲಿ, ಬಿಳಿಕೋಲು ಮುಖ್ಯವಾಗಿ ಎಂತಹುದೇ ಜನ ನಿಬಿಡ ಪ್ರದೇಶದಲ್ಲಿ ದೃಷ್ಟಿಚೇತನರನ್ನು ಜನಸಾಮಾನ್ಯರು ಕೂಡಲೇ ಗುರುತಿಸುವಂತೆ ಮಾಡುತ್ತದೆ. ಇದು ಅಂಧರ ಹೆಗ್ಗುರುತೂ ಹೌದು.  ರಸ್ತೆ ದಾಟುವಾಗ, ನಿಗದಿತ ಸ್ಥಳ ಸಿಗದೆ ಹುಡುಕಾಡುವಾಗ ಬಸ್ಸುಗಳನ್ನು ಹತ್ತಿ ಸೀಟಿಗಾಗಿ ಪರದಾಡುವಾಗ ನಿಮ್ಮ ಸಹಾಯ ಹಸ್ತ ಚಾಚಿ. ನೀವು ಕುಳಿತಿರಬಹುದಾದ ಸೀಟುಗಳನ್ನು ಬಿಟ್ಟುಕೊಡುವಷ್ಟು ಅನುಕಂಪಪೂರಿತ ಔದಾರ್ಯವೇನೂ ಬೇಡ. ವಿಕಲಚೇತನರಿಗೆ ಮೀಸಲಿರಬಹುದಾದ, ಇಲ್ಲ ಖಾಲಿ ಇರುವ ಆಸನಗಳನ್ನು ತೋರಿಸುವ ಸೌಜನ್ಯವನ್ನು ತೋರಿದರೆ ಅಷ್ಟೇ ಸಾಕು. ಆಗ ಹುಟ್ಟುವ ಕೃತಜ್ಞತಾಭಾವವನ್ನು ಮನಸಾರೆ ಅನುಭವಿಸಿ. ಕಾಲೇಜು, ಕಛೇರಿ...ಹೀಗೆ ನಿತ್ಯಬದುಕಿನ ಅನಿವಾರ್ಯತೆಯಿಂದಾಗಿ ಅಂಧರು ಅಲೆದಾಡುವ ವಾತಾವರಣವಿರುತ್ತದೆ. ಈ ಸಂದರ್ಭದಲ್ಲಿ ಎಷ್ಟೋ ಬಾರಿ ರಸ್ತೆಗಳನ್ನು ದಾಟುವಾಗಲೋ ಅಥವಾ ಇನ್ನಾವುದೋ ಕಾರಣಕ್ಕಾಗಿ ಅವರು ನಿಮ್ಮ ಸಹಾಯವನ್ನು ಕೋರಬಹುದು. ಆಗ ನೀವು ಕೈ ಹಿಡಿಯುವ ಮನಸ್ಸಿಲ್ಲದೇ, ಕೇಳಿಸಿಯೂ ಕೇಳಿಸದಿರುವಂತೆ ಹೋಗಿರಲಿಕ್ಕೂ ಸಾಕು. ನಿಮ್ಮಲ್ಲಿ ಬಹಳಷ್ಟು ಹೃದಯವಂತ ಜನ ತಮ್ಮ ತುರ್ತನ್ನು ಬದಿಗಿರಿಸಿ ಸಹಾಯಹಸ್ತವನ್ನು ನೀಡಿರಲೂಬಹುದು. ಇಂಥ ಭಿನ್ನ ಅನುಭವಗಳು ಅಂಧರ ಪಾಲಿಗೆ ಮಾಮೂಲು.
ವಾಕಿಂಗ್ ಸ್ಟಿಕ್ ಹಿಡಿದು ಹೋಗುತ್ತಿರುವವನ ಹಿಂದೆ ಎಷ್ಟೋ ಬಾರಿ, ಈತ ಹೇಗೆ ನಡೆಯುತ್ತಾನೆ, ರಸ್ತೆಗಳನ್ನು ಹೇಗೆ ದಾಟುತ್ತಾನೆ, ಹೇಗೆ ಸ್ಥಳಗಳನ್ನು ಗುರುತಿಸುತ್ತಾನೆ ಎನ್ನುವ ಅರ್ಥಹೀನ ಕುತೂಹಲದಲ್ಲಿ ಆತನ ಆ ಕ್ಷಣದ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗದೆ ಸದ್ದಿಲ್ಲದಂತೆ ಹಿಂಬಾಲಿಸುವ, ಸನ್ನೆಗಳ ಮೂಲಕ ಉದ್ಗಾರ ವ್ಯಕ್ತಪಡಿಸುವ ವಿಲಕ್ಷಣ ಆನಂದವನ್ನು ಅನುಭವಿಸುವ ಅನಾಗರಿಕ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರ ನಡುವೆ ನಾವಿದ್ದೇವೆ. ಹಿಂಬಾಲಿಸಿ ಮುದುಡಿಸುವ ಬದಲು ಭುಜದ ಮೇಲೆ ಕೈ ಇರಿಸಿ ಸಹಚಾರಿಯಾಗುವ ಹೃದಯವಂತಿಕೆ ಎಷ್ಟು ಮಂದಿಗಿದೆ?
ಅಂಧರ ಚಲನವಲನಗಳ ಬಗೆಗೆ ಅರಿವಿಲ್ಲದೆ ಸಮಾಜಕ್ಕೆ ನಿಜವಾದ ಅರ್ಥದಲ್ಲಿ ಅರಿವು ಮೂಡಿಸಬೇಕಾದ ದೃಷ್ಟಿಚೇತನರ ಸಂಘ ಸಂಸ್ಥೆಗಳು ಯಾರಿಂದಲೋ ವಂತಿಗೆ ಸಂಗ್ರಹಿಸಿ ಪ್ರತಿ ವರ್ಷವೂ ಚಾಚೂ ತಪ್ಪದಂತೆ ಬಿಳಿಕೋಲುಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿವೆ. ವಾಕಿಂಗ್ ಸ್ಟಿಕ್ ವಿತರಿಸುವ ಕಾರ್ಯದಲ್ಲಿ ಪೈಪೋಟಿಗೆ ಬಿದ್ದಿರುವ ಸಂಘ ಸಂಸ್ಥೆಗಳು ಕೇವಲ ಇದಿಷ್ಟನ್ನೇ ಪ್ರಗತಿ ಎಂದು ಭಾವಿಸುತ್ತಿವೆಯೇ ಅಥವಾ ಅಂಧರಿಗೆ ಇಷ್ಟು ಕೊಟ್ಟರೆ ಸಾಕು ಎಂಬ ಉದಾಸೀನತೆಯೋ? ಇದಕ್ಕೆ ಅವೇ ಉತ್ತರಿಸಬೇಕು.
ಪ್ರಚಾರಕ್ಕಾಗಿ ಹುಟ್ಟಿಕೊಂಡ ಕ್ಲಬ್ಬುಗಳು ಸಹ ಅಂಗವಿಕಲರ 'ಸೇವಾ'  ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಬಿಳಿಕೋಲನ್ನು, ಕೈಗಡಿಯಾರವನ್ನು, ಕಡೆಗೆ ಕೂಲಿಂಗ್ ಗ್ಲಾಸ್‌ಗಳನ್ನು ಬೆರಳೆಣಿಕೆಯ ವಿಕಲಚೇತನರಿಗೆ ಕೊಟ್ಟು ಫೋಟೋ ತೆಗೆಸಿಕೊಂಡು ಬಂಡವಾಳ ಮಾಡಿಕೊಳ್ಳುವ ಕರುಣಾಮಯಿಗಳೂ ಇದ್ದಾರೆ!
ವಾಕಿಂಗ್ ಸ್ಟಿಕ್‌ಗಳನ್ನು ಉಚಿತವಾಗಿ ಕೊಡುವವರಿದ್ದರೆ ಅಲ್ಲಿ ಬಹುತೇಕ ನಮ್ಮ ಎಲ್ಲಾ ಅಂಧ ಮಿತ್ರರೂ ಹಾಜರಿರುತ್ತಾರೆ. ಈ ಸಮುದಾಯದ ಈ ಬಗೆಯ ಯಾಚಕ ಸಂಸ್ಕೃತಿಯೇ ಸಂಘಸಂಸ್ಥೆಗಳಿಗೆ, ಕ್ಲಬ್‌ಗಳಿಗೆ ಬಂಡವಾಳವಾಗುತ್ತಿದೆ ಎಂಬ ಸತ್ಯವನ್ನು ಅಂಗವಿಕಲ ಸಮುದಾಯಗಳು ಅರ್ಥಮಾಡಿಕೊಳ್ಳಬೇಕಿದೆ. ಯಾವುದೇ ಒಂದು ಮುಗ್ಧ ಸಮುದಾಯವನ್ನು, ದುರ್ಬಲರನ್ನು ಮೇಲೆತ್ತುವ ಗೋಜಿಗೆ ಹೋಗದೆ ಸದಾ ಅಂತರವನ್ನು ಕಾಯ್ದುಕೊಳ್ಳುತ್ತಾ ಆ ಮೂಲಕ ತನ್ನ ಪ್ರಭುತ್ವವನ್ನು ಸ್ಥಾಪಿಸುತ್ತಾ ಬಂದಿರುವವರು ಮೊದಲು ಆಂತರಿಕ ಬದಲಾವಣೆಯನ್ನು ಕಂಡುಕೊಳ್ಳಬೇಕಾಗಿದೆ. ಒಂದು ಬಿಳಿಕೋಲಿಗಾಗಿ ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವವರು ಒಂದು ಸಲಕ್ಕೆ ಎಷ್ಟು ಕೋಲುಗಳನ್ನು ಬಳಸಲು ಸಾಧ್ಯ ಎಂಬುದನ್ನು ಯೋಚಿಸಬೇಕಾಗುತ್ತದೆ. ಸಂಘ ಸಂಸ್ಥೆಗಳಿಗೆ ಕೇವಲ ನಗರ ಪ್ರದೇಶಗಳ ದಾನಿಗಳು ಮಾತ್ರವೇ ಕಾಣಿಸಬಾರದು. ಗ್ರಾಮಾಂತರ ಭಾಗದ ಜನಸಾಮಾನ್ಯರಿಗೆ ವಿಕಲಚೇತನರ ಜೀವನಕ್ರಮ ಹಾಗೂ ಅವರು ಬಳಸುವ ಪರಿಕರಗಳ ಬಗೆಗೆ ಅರಿವು ಮೂಡಿಸುವ ಕೆಲಸವಾಗಬೇಕು. ಆ ಭಾಗದ ವಿಕಲಚೇತನ ಸಮುದಾಯವನ್ನು ಪುನಶ್ಚೇತನಗೊಳಿಸುವ ಕಾರ್ಯವು ಅಲ್ಲಿನ ಶೇಕಡಾವಾರು ಅನುದಾನದ ಪರಿಮಿತಿಗಷ್ಟೇ ಸೀಮಿತವಾಗಬಾರದು.
ವಿಶ್ವದ ಒಂದು ಇಡೀ ಸಮುದಾಯದ ಚಲನಶೂನ್ಯತೆಯನ್ನು ಹೋಗಲಾಡಿಸಿ ಸ್ವಾತಂತ್ರ್ಯ ಹಾಗೂ ಸ್ವಾವಲಂಬಿ ಸಂಚರಣೆಗೆ ನಾಂದಿಯಾದ ಬಿಳಿಕೋಲಿನ ಹರಿಕಾರ ಡಾ. ರಿಚರ್ಡ್ ಹೂವರ್ ಹಾಗೂ ಆತ ಆಸರೆಯಾಗಿ ಬಿಟ್ಟು ಹೋದ ಬಿಳಿಕೋಲಿಗೆ ಅಂಧ ಸಮುದಾಯದ ಅಂತರಾಳದ ನಮನ.

- ಮುದುಗೆರೆ ರಮೇಶ್‌ಕುಮಾರ್,
ಕರ್ನಾಟಕ ಅಂಧರ ವಿಮೋಚನಾ ವೇದಿಕೆ
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.