ಅಂಕಣಗಳು

ಆ ನೆತ್ತರ ಅಧ್ಯಾಯ ಇಂದಿಗೂ ಪ್ರಸ್ತುತ

ಆ ನೆತ್ತರ ಅಧ್ಯಾಯ ಇಂದಿಗೂ ಪ್ರಸ್ತುತ
Published On :

'ಬ್ಲಡ್ ಟೆಲಿಗ್ರಾಮ್: ನಿಕ್ಸನ್, ಕಿಸ್ಸಿಂಜರ್ ಆ್ಯಂಡ್ ಅ ಫಾರ್‌ಗಾಟನ್ ಜಿನೊಸೈಡ್‌' ಎಂಬ ಪುಸ್ತಕವೊಂದು ನಿರ್ಣಾಯಕ ಸಮಯದಲ್ಲೇ ಹೊರಬಿದ್ದಿದೆ. ಗ್ಯಾರಿ ಬಾಸ್ ಅವರು ಬರೆದಿರುವ ಈ ಪುಸ್ತಕ, ಅಮೆರಿಕದ ವಿದೇಶಿ ನೀತಿಯ ಕರಾಳ ಪುಟಗಳನ್ನು ತೆರೆದಿಡುತ್ತದೆ.
1970-71ರ ಕಾಲಘಟ್ಟದಲ್ಲಿ ಆಗಿನ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆಯು ನಡೆಸಿದ ಬರ್ಬರ ಮಾರಣಹೋಮವನ್ನು ಅಮೆರಿಕದ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಹಾಗೂ ಅಮೆರಿಕದ ಮಾಜಿ ಗೃಹ ಸಚಿವ ಹೆನ್ರಿ ಕಿಸ್ಸಿಂಜರ್ ಮುಗುಮ್ಮಾಗಿ ಬೆಂಬಲಿಸಿದ ಬಗೆ ಎಂಥದ್ದು ಎಂಬುದನ್ನು ಕೆಲವು ಅವರ್ಗೀಕೃತ ದಾಖಲೆಗಳ ಆಧಾರದಲ್ಲಿ ಈ ಕೃತಿ ತೆರೆದಿಡುತ್ತದೆ.
ಬಾಂಗ್ಲಾದೇಶದ ಸಂಸ್ಥಾಪಕ ಎಂದು ಗುರುತಿಸಲಾಗುವ ಶೇಖ್ ಮುಜಿಬುರ್ ರೆಹಮಾನ್ ಅವರ ಮಗಳು ಹಾಗೂ ಈಗ ಬಾಂಗ್ಲಾದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಶೇಖ್ ಹಸೀನಾ ಅವರನ್ನು ಬರಲಿರುವ 2014ರ ಚುನಾವಣೆಯಲ್ಲಿ ಹೇಗಾದರೂ ಹಣಿಯಬೇಕು ಎಂಬ ಹವಣಿಕೆಯಲ್ಲಿ ಕಾರ್ಯನಿರತರಾಗಿದ್ದಾರೆ ಬೇಗಮ್ ಖಲೀದಾ ಜಿಯಾ. ಬಾಂಗ್ಲಾದ ಮಾಜಿ ಅಧ್ಯಕ್ಷೆಯಾಗಿರುವ ಈಕೆ, ಹತ್ಯೆಯಾಗಿಹೋದ ಆ ದೇಶದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್‌ರ ಹೆಂಡತಿ. ಖಲೀದಾ ಜಿಯಾ ಅಲ್ಲಿನ ಮೂಲಭೂತವಾದಿ ಜಿಹಾದಿಗಳನ್ನು ಪ್ರತಿನಿಧಿಸಿದರೆ, ಶೇಖ್ ಹಸೀನಾ ಭಾರತ ಸ್ನೇಹಿ ಸರ್ಕಾರವನ್ನು ಹೊಂದಿರುವವಳು. ಶೇಖ್ ಹಸೀನಾ ಆಡಳಿತದಲ್ಲಿ ಭಾರತದೆಡೆಗೆ ನಿರ್ದೇಶಿಸಿದ್ದ ಜಿಹಾದಿ ಭಯೋತ್ಪಾದನೆಗೆ ಕಡಿವಾಣ ಬಿದ್ದಿದೆ.
1970ರ ಪಾಕ್ ಚುನಾವಣೆಯಲ್ಲಿ (ಆಗಿನ್ನೂ ಬಾಂಗ್ಲಾದೇಶವಾಗಿರಲಿಲ್ಲ) ಶೇಖ್ ಮುಜಿಬುರ್ ರೆಹಮಾನ್ ಅವರ ಅವಾಮಿ ಲೀಗ್ ಅಭೂತಪೂರ್ವ ವಿಜಯವನ್ನು ದಾಖಲಿಸಿತು. ಆದರೆ ಪಶ್ಚಿಮ ಪಾಕಿಸ್ತಾನದ ಸೇನಾ ವರಿಷ್ಠರು ಹಾಗೂ ರಾಜಕಾರಣಿಗಳು ಸೇರಿಕೊಂಡು ಮುಜಿಬುರ್ ಅವರನ್ನು ಬಂಧಿಸಿದರು. ಐದು ಲಕ್ಷಕ್ಕೂ ಹೆಚ್ಚು ಮಂದಿ ಪೂರ್ವ ಪಾಕಿಸ್ತಾನದ ಬಂಗಾಳಿ ಜನರನ್ನು ಸೇನೆ ನಿರ್ದಯವಾಗಿ ಕೊಚ್ಚಿ ಹಾಕಿತು! ನಿರಾಶ್ರಿತರಾದವರು ಸುಮಾರು ಒಂದು ಕೋಟಿ ಮಂದಿ. ಪೂರ್ವ ಪಾಕಿಸ್ತಾನದಲ್ಲಿ ಹಳ್ಳಿಗೆ ಹಳ್ಳಿಯನ್ನೇ ದಹಿಸಲಾಯಿತು. ಅಲ್ಪಸಂಖ್ಯಾತರಾಗಿದ್ದ ಹಿಂದೂಗಳೇ ಈ ಎಲ್ಲ ದಾಳಿಗಳ ಗುರಿಗಳಾಗಿದ್ದರು.
ಲಕ್ಷಾಂತರ ಮಂದಿ ಭಾರತಕ್ಕೆ ನಿರಾಶ್ರಿತರಾಗಿ ಹರಿದುಬಂದರು. ಎಕನಾಮಿಸ್ಟ್ ಪತ್ರಿಕೆ ಆ ಬಗ್ಗೆ ಬರೆದಂತೆ- 'ವಿಶಿಷ್ಟ ಅಲ್ಪಸಂಖ್ಯಾತರಾಗಿದ್ದ ಹಿಂದೂಗಳನ್ನು ನಾಮಾವಶೇಷಗೊಳಿಸುವ, ದೇಶ ಬಿಡಿಸುವ ಕಾರ್ಯ ಆರಂಭವಾಯಿತು. ಕಿಸ್ಸಿಂಜರ್ ಸಲಹೆಯಂತೆ ನಿಕ್ಸನ್, ಪಾಕ್ ಸೇನೆಗೆ ಮಿಲಿಟರಿ ವಿಮಾನಗಳು ಹಾಗೂ ಇತರ ಪರಿಕರಗಳನ್ನು ಕಳುಹಿಸಿಕೊಟ್ಟರು. ಅದು ಅಮೆರಿಕದ ಕಾನೂನುಗಳಿಗೆ ವಿರುದ್ಧವೆಂದು ಗೊತ್ತಿದ್ದೂ ಅವರು ಈ ಕ್ರಮಗಳಿಗೆ ಮುಂದಾದರು. ಪೂರ್ವ ಪಾಕಿಸ್ತಾನದ ಬಂಡುಕೋರರು ಪಾಕ್ ಸೇನೆ ವಿರುದ್ಧ ಹೋರಾಡುವುದಕ್ಕೆ ಭಾರತ ಸಹಕರಿಸುತ್ತಿರುವುದನ್ನು ಅಡ್ಡಿಪಡಿಸಲೆಂದು ಅಮೆರಿಕದ ಯುದ್ಧನೌಕೆಗಳನ್ನು ಬಂಗಾಳಕೊಲ್ಲಿಗೆ ಕಳುಹಿಸಿಕೊಟ್ಟರು. ಅತಿರೇಕದ ಪರಮಾವಧಿ ಏನೆಂದರೆ, ಭಾರತದ ಗಡಿಗಳಿಗೆ ನಿಮ್ಮ ಸೇನೆಯನ್ನು ಕಳುಹಿಸಿ ಎಂದು ಗೌಪ್ಯವಾಗಿ ಚೀನಾವನ್ನು ಕೇಳಿಕೊಂಡರು ನಿಕ್ಸನ್!
ನರಮೇಧ ನಡೆಯುತ್ತಿದೆ ಎಂಬುದು ಗೊತ್ತಿದ್ದೂ ನಿಕ್ಸನ್ ಹಾಗೂ ಕಿಸ್ಸಿಂಜರ್ ಪಾಕಿಸ್ತಾನದ ಪರ ನಿಂತುಕೊಂಡರು. ಈ ಬಗ್ಗೆ ಅಮೆರಿಕದ ರಾಜತಾಂತ್ರಿಕರೇ ಸರ್ಕಾರಕ್ಕೆ ನಿರಂತರವಾಗಿ ವರದಿ ಕಳುಹಿಸಿದ್ದನ್ನು ಬಾಸ್ ಅವರ ಪುಸ್ತಕವು ಪ್ರಮುಖವಾಗಿ ಉಲ್ಲೇಖಿಸುತ್ತದೆ. ಪೂರ್ವ ಪಾಕಿಸ್ತಾನದಲ್ಲಿದ್ದ ಪ್ರಮುಖ ರಾಜತಾಂತ್ರಿಕ ಅರ್ಚರ್ ಬ್ಲಡ್ ಅವರು ಅಲ್ಲಿ ನಡೆಯುತ್ತಿದ್ದ ರಕ್ತಪಾತದ ಬಗ್ಗೆ ವಿವರವಾದ, ನಿಯಮಿತ ವರದಿಗಳನ್ನು ನಿಕ್ಸನ್ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. 'ಆಯ್ದ ಮಾರಣಹೋಮ'ವೊಂದು ಇಲ್ಲಿ ನಡೆಯುತ್ತಿದೆ ಎಂದೇ ಅವರು ಎಚ್ಚರಿಸಿದ್ದರು. ಬ್ಲಡ್ ಹಾಗೂ ಅವರ ಇತರ ರಾಜತಾಂತ್ರಿಕ ಸಹೋದ್ಯೋಗಿಗಳೆಲ್ಲ ಅಮೆರಿಕವು ಪಾಕ್ ಆಡಳಿತಗಾರರಿಗೆ ಸಹಾಯ ಮಾಡುವುದನ್ನು ವಿರೋಧಿಸಿದ್ದರು. ಢಾಕಾದ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 20 ಮಂದಿ ರಾಜತಾಂತ್ರಿಕರು ಈ ನಿಟ್ಟಿನಲ್ಲಿ ತಮ್ಮ ದೇಶ ಅಮೆರಿಕವು ಅನುಸರಿಸುತ್ತಿರುವ ನೀತಿಗೆ  ವಿರೋಧವನ್ನು ದಾಖಲಿಸಿ ಟೆಲಿಗ್ರಾಮ್ ಕಳುಹಿಸಿಕೊಟ್ಟರು. (ಪುಸ್ತಕಕ್ಕೆ 'ಬ್ಲಡ್ ಟೆಲಿಗ್ರಾಮ್‌' ಎಂಬ ಶೀರ್ಷಿಕೆ ನೀಡಿರುವುದು ಇದೇ ಆಧಾರದಲ್ಲಿ). ಈ ವಿರೋಧದಿಂದ ತಮ್ಮ ವೃತ್ತಿಗೆ ಅನಾನುಕೂಲವಾಗುತ್ತದೆ ಎಂದು ಗೊತ್ತಿದ್ದೂ ಈ ರಾಜತಾಂತ್ರಿಕರು ತಮ್ಮ ಮನದಿಂಗಿತವನ್ನು ಧೈರ್ಯದಿಂದ ಅಭಿವ್ಯಕ್ತಿಸಿದ್ದರು. ಈ ವಿರೋಧದಿಂದ ಅಮೆರಿಕ ತನ್ನ ನೀತಿಯನ್ನೇನೂ ಬದಲಿಸಿಕೊಳ್ಳಲಿಲ್ಲ. ಆದರೆ ಈ ಟೆಲಿಗ್ರಾಮ್ ಒಂದು ಐತಿಹಾಸಿಕ ದಾಖಲೆಯಾಗಿ ಉಳಿಯಿತು.
ಕೆಲವೇ ಸ್ನೇಹಿತರನ್ನು ಹೊಂದಿದ್ದ ನಿಕ್ಸನ್‌ಗೆ ಅದು ಹೇಗೊ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಯಾಹ್ಯಾ ಖಾನ್ ಆಪ್ತನಾಗಿಬಿಟ್ಟಿದ್ದ. ವಿರೋಧಾಭಾಸ ಎಂಬಂತೆ, ಜನರ ನಡುವಿಂದ ಬಂದ ಭಾರತದ ನಾಯಕಿ ಇಂದಿರಾ ಗಾಂಧಿ ಅವರ ಬಗ್ಗೆ ನಿಕ್ಸನ್‌ಗೆ ಇನ್ನಿಲ್ಲದ ತಾತ್ಸಾರ!'
ವಾಟರ್‌ಗೇಟ್ ಹಗರಣದಲ್ಲೇ ನಿಕ್ಸನ್‌ಗೆ ಮುಖಭಂಗವಾಗಿದೆಯಾದರೂ ಪೂರ್ವ ಪಾಕಿಸ್ತಾನದ ನರಮೇಧದಲ್ಲೂ ಅವರು ಎಷ್ಟು ಕೆಟ್ಟದಾಗಿ ನಡೆದುಕೊಂಡರೆಂಬ ಬಗ್ಗೆ ಇನ್ನಷ್ಟೇ ಚರ್ಚೆಗಳಾಗಬೇಕಿವೆ. ಈ ಪಾಪಕಾರ್ಯದಲ್ಲಿ ಕಿಸ್ಸಿಂಜರ್ ಪಾಲೂ ಇದೆ. ಬಾಸ್ ಪುಸ್ತಕ ಹೇಳುವಂತೆ ಒಂದು ಹಂತದಲ್ಲಿ ಕಿಸ್ಸಿಂಜರ್ ತುಸು ಅಳುಕು ವ್ಯಕ್ತಪಡಿಸಿದ್ದರು. 'ನಿರಾಶ್ರಿತರ ಮೇಲೆ ಯುದ್ಧಕ್ಕೆ ಹೋಗುವುದು ತರವಲ್ಲ' ಎಂದು ನಿಕ್ಸನ್‌ಗೆ ಹೇಳಿದಾಗ, ಆ ಮನುಷ್ಯ ಕೊಟ್ಟ ನೀಚ ಪ್ರತಿಕ್ರಿಯೆ ಹೀಗಿತ್ತು- 'ಭಾರತವನ್ನು ತಹಬಂದಿಯಲ್ಲಿ ಇಡಬೇಕಾದರೆ ಸಾಮೂಹಿಕ ಹಸಿವೊಂದು ನರ್ತಿಸಬೇಕಿರುವ ಅಗತ್ಯವಿದೆ.'
ವಿಯೆಟ್ನಾಂ ಯುದ್ಧ ಮುಕ್ತಾಯಗೊಳ್ಳುವಲ್ಲಿ ಮಧ್ಯಸ್ಥಿಕೆ ವಹಿಸಿದರೆಂಬ ಕಾರಣಕ್ಕೆ 1973ರಲ್ಲಿ ಕಿಸ್ಸಿಂಜರ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. 1980ರ ಕಾಲಘಟ್ಟದಲ್ಲಿ ಕಿಸ್ಸಿಂಜರ್‌ನನ್ನು ಜಾಗತಿಕ ಮುತ್ಸದ್ಧಿ ಎಂದು ಹೊಗಳಿದ್ದೇ ಹೊಗಳಿದ್ದು. ಆತನ ಸಂಸ್ಥೆ, 'ಕಿಸ್ಸಿಂಜರ್ ಅಸೋಸಿಯೇಟ್ಸ್‌' ಪ್ರಧಾನಿ, ಅಧ್ಯಕ್ಷರುಗಳಿಗೆ ಸಲಹೆ ನೀಡುತ್ತಿತ್ತು. ಜಾಗತಿಕವಾಗಿ ಹಲವು ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗಿಯಾದ ಕಿಸ್ಸಿಂಜರ್, ಭಾರತದ ಸಮ್ಮೇಳನಗಳಲ್ಲೂ ಪಾಲ್ಗೊಂಡು ಲಾಭ ಮಾಡಿಕೊಂಡ. ಆತನ ಅಂಕಣಗಳನ್ನು ಜಗತ್ತಿನ ಹಲವು ಪತ್ರಿಕೆಗಳು ಬಳಸಿಕೊಳ್ಳುತ್ತಿದ್ದವು. ಈತನ ಕರಾಳ ಮುಖ ಅರಿವಿಲ್ಲದೇ ನನ್ನ ವ್ಯಾಪ್ತಿಯ ನಿಯತಕಾಲಿಕದಲ್ಲೂ ಆತನ ಅಂಕಣಗಳನ್ನು ಬಳಸಿಕೊಂಡಿದ್ದಕ್ಕೆ ನನಗೀಗ ವಿಷಾದವೆನಿಸುತ್ತಿದೆ.
***
ಈ ಎಲ್ಲ ವಿವರಗಳು ಈಗೇಕೆ ಪ್ರಸ್ತುತ ಎಂದಿರಾ? ಜನವರಿ 2014ರ ಚುನಾವಣೆಯನ್ನು ಶೇಖ್ ಹಸೀನಾ ಸೋತಿದ್ದೇ ಆದರೆ ಖಲೀದಾ ಜಿಯಾಳ ಇಸ್ಲಾಂ ತೀವ್ರವಾದಿ ಆಡಳಿತ ಶುರುವಾಗಿಬಿಡುತ್ತದೆ. ಪಾಕಿಸ್ತಾನದೊಂದಿಗೆ ಗಡಿಯಲ್ಲಿ ನಾವು ಏನೆಲ್ಲ ಸಮಸ್ಯೆ ಅನುಭವಿಸುತ್ತಿದ್ದೇವೆಯೋ ಆ ತಲೆಬೇನೆ ಇಲ್ಲೂ ಪ್ರಾರಂಭವಾಗುತ್ತದೆ. ಹೀಗಾಗಿ ಶೇಖ್ ಹಸೀನಾ ಅವರ ಕೈ ಬಲಪಡಿಸುವ ಎಲ್ಲ ಕಾರ್ಯಗಳನ್ನೂ ಭಾರತವು ತ್ವರಿತಗೊಳಿಸಬೇಕು. ಬಾಂಗ್ಲಾದೇಶದೊಂದಿಗೆ ಸಣ್ಣಮಟ್ಟದ ಗಡಿ ವಿವಾದಗಳಿವೆ. ಅವನ್ನು ಸೌಹಾರ್ದ- ಹೊಂದಾಣಿಕೆ ತಳಹದಿಯಲ್ಲಿ ಬಗೆಹರಿಸಿಕೊಳ್ಳುವುದು ಒಳಿತು. ಈ ನಿಟ್ಟಿನಲ್ಲಿ ಮಂಡಿತವಾದ 'ಇಂಡಿಯಾ-ಬಾಂಗ್ಲಾದೇಶ್ ಲ್ಯಾಂಡ್ ಬೌಂಡ್ರಿ ಅಗ್ರಿಮೆಂಟ್‌'ಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಬಾರದಿತ್ತು. ತೀಸ್ತಾ ನೀರು ಹಂಚಿಕೆ ವಿಷಯದಲ್ಲಿ ಮಮತಾ ಬ್ಯಾನರ್ಜಿ ನಿಲವು ಶೇಕ್ ಹಸೀನಾರನ್ನು ಕಸಿವಿಸಿಗೀಡುಮಾಡಿತ್ತು. ಆ ವಿಚಾರ ಸಂಕೀರ್ಣವಾದದ್ದು. ಆದರೆ ಗಡಿಕ್ಯಾತೆ ಅಂಥ ಗಂಭೀರದ್ದೇನಲ್ಲ. ಹೀಗಾಗಿ ಡಿಸೆಂಬರ್ 5ಕ್ಕೆ ಚಳಿಗಾಲದ ಸಂಸತ್ ಅಧಿವೇಶನ ಆರಂಭವಾದಾಗ ಈ ಬಗ್ಗೆ ಮತ್ತೆ ಚರ್ಚೆ ನಡೆದು, ಕ್ಷುಲ್ಲಕ ರಾಜಕೀಯ ಧೋರಣೆಗಳಿಂದ ಬಿಜೆಪಿ ಹೊರಬಂದು ಒಪ್ಪಂದವನ್ನು ಬೆಂಬಲಿಸುವ ಕೆಲಸ ಆಗಬೇಕಿದೆ.
1971ರಲ್ಲಿ ಎಲ್ಲ ಸಂಚುಗಳ ಎದುರಿಸಿ ಭಾರತವು ಹೇಗೆ ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಬೆಂಬಲಿಸಿತ್ತೋ, ಅದೇ ತೀವ್ರತೆಯಲ್ಲಿ ಬಾಂಗ್ಲಾದೇಶದ ಇವತ್ತಿನ ಶೇಖ್ ಹಸೀನಾ ಅವರ ಸರ್ಕಾರವನ್ನೂ ಬಲಗೊಳಿಸಬೇಕಿದೆ.

(ಟೈಮ್ಸ್ ಬ್ಲಾಗ್‌ನ ಲೇಖನವನ್ನು ಲೇಖಕರ ಅನುಮತಿ ಮೇರೆಗೆ ಪ್ರಕಟಿಸಲಾಗಿದೆ)

- ಮಿನ್ಹಾಜ್ ಮರ್ಚೆಂಟ್
ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.