ಕನ್ನಡ ಕುಲದ ಮರೆವಿನ ಪರದೆ ಸರಿಯಲಿ

ಪ್ರತಿ ಸಲದಂತೆ ಈ ವರ್ಷವೂ ರಾಜ್ಯೋತ್ಸವ ಬಂದಿದೆ. ಉತ್ಸವ ನಮ್ಮನ್ನು ಸಂಭ್ರಮದಲ್ಲಿ ಮುಳುಗುವಂತೆ ಮಾಡುವ ಪ್ರಕ್ರಿಯೆಗಳಲ್ಲಿ ಒಂದು. ಇಂಥ ಉತ್ಸವಗಳಲ್ಲಿ ಸಡಗರಕ್ಕೇ ಪ್ರಮುಖ ಸ್ಥಾನ. ಹಬ್ಬ, ಜಾತ್ರೆ, ಮದುವೆ, ನಾಮಕರಣ ಮೊದಲಾದವುಗಳಂತೆ ಸಕಲ ಆಪ್ತೇಷ್ಟರು ಒಂದೆಡೆ ಕಲೆತು, ತಮ್ಮ ಸಂತೋಷವನ್ನು ಹಂಚಿಕೊಳ್ಳುವ ಸುಸಂದರ್ಭ. ಖಾಸಗಿ ಸಮಾರಂಭಗಳಲ್ಲಾಗಲಿ, ಸಾಂಸ್ಕೃತಿಕ ಆಚರಣೆಗಳಲ್ಲಾಗಲಿ ಸೇರುವ ಜನಮಾನಸದಲ್ಲಿ ಚಿಂತನೆಯ ನೆಲೆ ಇರುವುದಿಲ್ಲ ಎಂದೇ ಹೇಳಬೇಕು. ಆದರೆ, ಕನ್ನಡ ರಾಜ್ಯೋತ್ಸವ ಸಮಾರಂಭಗಳಾಗಲಿ, ಸಾಹಿತ್ಯ ಸಮ್ಮೇಳನಗಳಾಗಲಿ ಹಾಗಲ್ಲ. ಅಲ್ಲೂ ಸಂಭ್ರಮಾಚರಣೆಗಳು ಇರುತ್ತವೆ. ಅವು ಊಟಕ್ಕೆ ಉಪ್ಪಿನಕಾಯಿಯಂತೆ ಚಿಂತನೆಯ ತಲೆಬಿಸಿಯಲ್ಲಿ, ಅದನ್ನು ಪರಿಹರಿಸಿಕೊಳ್ಳಲೋಸುಗ ವ್ಯವಸ್ಥ್ಥೆಗೊಳ್ಳುವ ಗಾಯನ, ನರ್ತನ, ಹಾಸ್ಯ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕೇ ಹೊರತು ಅವೇ ಪ್ರಧಾನ ಭೂಮಿಕೆಯಾಗಬಾರದು.
ಕನ್ನಡಕ್ಕೆ 2500 ವರ್ಷಗಳ ಭವ್ಯ, ಚಿಂತನಶೀಲ, ಸ್ಫೂರ್ತಿದಾಯಕ, ಜನಮುಖಿ ಆಲೋಚನೆಯ ಸುದೀರ್ಘ ಇತಿಹಾಸವಿದೆ. ಜಗತ್ತಿಗೆ ಮಾರ್ಗದರ್ಶಕವಾಗಬಲ್ಲ ಹಲವಾರು ಸುಸಂದೇಶಗಳು ಕನ್ನಡ ಸಾಹಿತ್ಯದ ಇತಿಹಾಸದುದ್ದಕ್ಕೂ ಹೊಮ್ಮಿರುವುದನ್ನು ದಟ್ಟವಾಗಿ ಕಾಣಬಹುದು. ಅದು ನಿರಂತರ ಬೆಳಗುವ ಹಣತೆಯಂತೆ ಎಲ್ಲ ಕಾಲಕ್ಕೂ ನಮಗೆ ಉತ್ಸಾಹವನ್ನು ತುಂಬಿಕೊಂಡು ಬಂದಿದೆ. ಇಷ್ಟು ಶ್ರೀಮಂತವಾದ, ಸಮೃದ್ಧವಾದ, ಪ್ರಾಚೀನವಾದ ಭಾಷೆ ನಮ್ಮದಾಗಿರುವುದರಿಂದಲೇ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ, ಗೌರವಾದರಗಳು ಲಭ್ಯವಾಗಿರುವುದು. ಸಮಕಾಲೀನ ಸಾಹಿತಿಗಳೂ ತಮ್ಮ ವಿವೇಕಪೂರ್ಣ ಸತ್ವಯುತ ಹಾಗೂ ಸತ್ವಯುತ ಸಾಹಿತ್ಯ ಕೃಷಿ ಮೂಲಕ ನಾಡಿನ, ರಾಷ್ಟ್ರದ, ಜಗತ್ತಿನ ಗಮನವನ್ನು ಕನ್ನಡದ ಕಡೆಗೆ ಸೆಳೆಯುತ್ತಲೇ ಬಂದಿದ್ದಾರೆ. ಅಂಥ ಪ್ರತಿಭಾಸಂಪನ್ನರಾದ ಸಾಹಿತ್ಯಾರಾಧಕರಿಂದಾಗಿ ನಮ್ಮ ನಾಡಿಗೆ, ನುಡಿಗೆ ಆ ಮೂಲಕ ಸಮಸ್ತ ಕನ್ನಡಿಗರಿಗೆ ಗೌರವ ಸಂದಿರುವುದು ಕನ್ನಡ ಸಾಹಿತಿಗಳ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಗೌರವ ತಂದುಕೊಟ್ಟಿರುವ ಈ ಕಾಲಘಟ್ಟದಲ್ಲಿ ನಮ್ಮನ್ನು ಭಾರತದ ಎಲ್ಲ ಭಾಷಿಕ ಕುಲಗಳು ಬೆರಗುಗಣ್ಣಿನಿಂದ ನೋಡುತ್ತಿವೆ. ಆದರೆ, ಕನ್ನಡ ಭಾಷಿಕ ಕುಲದವರಾದ ನಾವು ನಮ್ಮ ಕನ್ನಡದ ಹಿರಿಮೆ, ಗರಿಮೆಗಳನ್ನು ಮರೆತು ಕನ್ನಡ ಭಾಷಿಕ ಅವಸರ್ಪಿಣಿಗೆ ನಾವೇ ಕಾರಣವಾಗಿದ್ದೇವೆ ಎಂಬುದು ಕಹಿಯಾದರೂ ಸತ್ಯ.
ಹೌದು. ನಮ್ಮ ಭಾಷೆ ಅತ್ಯಂತ ಪ್ರಾಚೀನವಾದುದು ನಿಜ. ಶಾಸ್ತ್ರೀಯ ಸ್ಥಾನ ಲಭಿಸಿರುವುದೂ ಸತ್ಯ. ಎಂಟು ಜ್ಞಾನಪೀಠಿಗಳಿರುವುದೂ ಅಷ್ಟೇ ದಿಟ. ಇವಿಷ್ಟರಿಂದಲೇ ನಾವು ತೃಪ್ತಿಪಟ್ಟುಕೊಂಡು ಕೈಕಟ್ಟಿ ಕುಳಿತರೆ ಸಾಕೆ? ಹೊಸದಾಗಿ ಆಲೋಚಿಸಬೇಡವೆ? ನಮ್ಮ ನಾಡು, ನುಡಿ, ನೆಲ, ಜಲ, ಬದುಕು, ಸಂಸ್ಕೃತಿ, ಸಾಹಿತ್ಯಗಳ ಕುರಿತು ಚಿಂತಿಸುವುದು ಬೇಡವೆ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಕನ್ನಡಿಗನೂ, ಕನ್ನಡತಿಯೂ ಕೇಳಿಕೊಳ್ಳಬೇಕು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದರೆ ಯಾರೂ ಯಾವುದಕ್ಕೂ ಆತಂಕಪಡುವ ಅಗತ್ಯವಿಲ್ಲ. ಮೈತುಂಬ ಸಾಲ ಮಾಡಿಕೊಂಡಿರುವವನಿಗೆ ನೆಮ್ಮದಿಯ ಬದುಕು ಹೇಗೆ ಅಸಾಧ್ಯವೋ, ರೋಗದ ಗೂಡಾದ ದೇಹದ ಬಗೆಗೆ ಹೇಗೆ ಎಚ್ಚರವನ್ನು ವಹಿಸಿ, ಅವು ದೇಹಬಿಟ್ಟು ಹೋಗುವಂತೆ ಕಾಳಜಿ ವಹಿಸುತ್ತೇವೋ ಹಾಗೆಯೇ ನಮ್ಮ ಭಾಷೆ ಮತ್ತು ಬದುಕಿಗೆ ಒದಗಿರುವ ಆತಂಕಗಳು, ಸಮಸ್ಯೆಗಳು, ಯಾವುವು ಅವುಗಳ ಆಳ ಅಗಲವೇನು? ಅವುಗಳ ಪರಿಹಾರಕ್ಕೆ ಉಪಾಯಗಳೇನು? ಎಂದು ಚಿಂತಿಸಬೇಕಾದ ಜರೂರು ಈಗ ನಮ್ಮ ಮುಂದಿದೆ. ಹಾಗೆ ಮಾಡುವುದು ನಮ್ಮ ಕರ್ತವ್ಯವೂ ಹೌದು.
ಏಕೆಂದರೆ ನಮ್ಮ ಪೂರ್ವಿಕರು ಹೇಗೆ ಕನ್ನಡವನ್ನು ಕಾಲಕಾಲಕ್ಕೆ ಜತನದಿಂದ ಕಾಪಾಡಿಕೊಂಡು, ಅದಕ್ಕೆ ಒದಗಿದ ಗಂಡಾಂತರಗಳನ್ನು ದೂರಮಾಡಿಕೊಂಡು, ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಂಡು ನಮ್ಮ ಭಾಷೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ರಕ್ಷಿಸಿಟ್ಟು ಹೋಗಿದ್ದಾರೋ ಅದನ್ನು ನಾವು ಅಷ್ಟೇ ಜೋಪಾನವಾಗಿ ಉಳಿಸಿ, ಬೆಳೆಸಿ, ಅದರ ರೋಗಗಳನ್ನು ನಿವಾರಿಸಿ ಮುಂದಿನ ತಲೆಮಾರುಗಳಿಗೆ ಬಿಟ್ಟುಹೋಗಬೇಕಾದ ಗುರುತರವಾದ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬ ಭಾಷಿಕ, ಸಾಹಿತ್ಯಕ, ಸಾಂಸ್ಕೃತಿಕ ಪ್ರಜ್ಞೆ ಕನ್ನಡಿಗರಾದ ನಮ್ಮೆಲ್ಲರಲ್ಲೂ ಮೂಡುವುದು ಇಂದಿನ ಜರೂರಾಗಿದೆ. ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ, ಘೋರ ಅಪರಾಧವಾಗುವುದೆಂಬ ಅರಿವು ಪ್ರತಿಯೊಬ್ಬ ಕನ್ನಡಿಗ, ಕನ್ನಡತಿಯಲ್ಲೂ ಇರಬೇಕು. ಇಲ್ಲದಿದ್ದರೆ ಬೆಳೆಸಿಕೊಳ್ಳಬೇಕು. ಈ ಬಗೆಯ ಅರಿವಿನ ಕೊರತೆಯ ಫಲವಾಗಿಯೇ ನಮ್ಮ ಭಾಷೆ-ಬದುಕಿಗೆ ಆಘಾತಕಾರಿಯಾದ ಆತಂಕಗಳು ಎದುರಾಗಿರುವುದು. ನಮ್ಮಲ್ಲಿರುವ ಭಾಷಿಕ ಹಾಗೂ ಸಾಂಸ್ಕೃತಿಕ, ವಿಸ್ಮೃತಿಯೇ ಎಲ್ಲ ಸಮಸ್ಯೆಗಳಿಗೂ ರಾಜಮಾರ್ಗವನ್ನು ನಿರ್ಮಿಸಿ ಕೊಟ್ಟಿದೆ. ಮರೆವಿನ ಪರದೆಯನ್ನು ಸರಿಸಿ ಅರಿವಿನ ಹೆದ್ದಾರಿಯಲ್ಲಿ ಸಾಗಬೇಕಾದರೆ ರಾಜ್ಯೋತ್ಸವ ಸಮಾರಂಭಗಳು ಉತ್ಸವಗಳ ಸೀಮಿತ ನೆಲೆಗಳಿಂದ ಚಿಂತನೆಯ ವಿಶಾಲ ವೇದಿಕೆಗಳಾಗಿ ರೂಪುಗೊಳ್ಳುವುದು ಅನಿವಾರ್ಯ. ಭಾಷಿಕ ಕುಲಗಳ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಆಡಳಿತ ಯಂತ್ರ ನಿದ್ರಾವಸ್ಥೆಗೆ ಜಾರಿರುವ ವರ್ತಮಾನದಲ್ಲಿ ಭಾಷಿಕ ಸಮುದಾಯ ನಿರಾಶೆಯ ನೆರಳಿನಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಅದರಿಂದ ಬಿಡುಗಡೆ ಪಡೆಯಬೇಕಾದರೆ ಸಾಮುದಾಯಿಕ ಎಚ್ಚರ ಅತ್ಯಂತ ಮಹತ್ವದ್ದಾಗಿದೆ.
ನಮ್ಮಲ್ಲಿ ಎಷ್ಟೋ ಮಂದಿಗೆ ಕನ್ನಡಕ್ಕಿರುವ ಸಮಸ್ಯೆಗಳಾವುವು ಎಂಬ ತಿಳುವಳಿಕೆಯೇ ಇಲ್ಲ. ಅಂಥ ಮುಗ್ಧರು ನಮ್ಮ ಕನ್ನಡಿಗರು. ಕನ್ನಡಿಗರಿಗೆ ಬದುಕೇ ದೊಡ್ಡ ಸಮಸ್ಯೆಯಾಗಿರುವಾಗ ಇತರ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನವನ್ನೂ ಮಾಡುವುದಿಲ್ಲ. ತಿಳಿಸುವ ಪ್ರಯತ್ನಗಳೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇಂದು ಕನ್ನಡ ಭಾಷೆ ಮತ್ತು ಕನ್ನಡಿಗರ ಬದುಕಿಗೆ ಎದುರಾಗಿರುವ ಸವಾಲುಗಳನ್ನು ಅವಲೋಕಿಸಿದರೆ ದಿಗಿಲು ಹುಟ್ಟುತ್ತದೆ. ಶೈಕ್ಷಣಿಕವಾಗಿ ಕನ್ನಡವನ್ನು ಮೂಲೆಗುಂಪು ಮಾಡುವ ಹುನ್ನಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದೇ ಕನ್ನಡಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಏಕರೂಪದ ಸಮಾನ ಶಿಕ್ಷಣ ನೀತಿ ಜಾರಿಗೊಳ್ಳುವ ಅಗತ್ಯತೆಯನ್ನು ಕುರಿತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಏಕರೂಪ ಸಮಾನ ಶಿಕ್ಷಣ ನೀತಿ ಯಾವುದು ಎಂಬ ಗೊಂದಲದಲ್ಲಿ ಕನ್ನಡಿಗನಿದ್ದಾನೆ. ಒಂದೆಡೆ ರಾಜ್ಯ ಸರ್ಕಾರ ಮಾತೃಭಾಷಾ ಮಾಧ್ಯಮ ಶಿಕ್ಷಣ ನೀತಿಯ ಪರವಾಗಿದೆ. ನ್ಯಾಯಾಲಯಗಳಲ್ಲೂ ಅದನ್ನು ಪ್ರತಿಪಾದಿಸಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದೆ. ಅದನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರವೂ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹೇಳಿರುವ ಏಕರೂಪ ಸಮಾನ ಶಿಕ್ಷಣ ನೀತಿ ಯಾವುದು ರಾಜ್ಯ ಸರ್ಕಾರದ ಮಾತೃಭಾಷಾ ಮಾಧ್ಯಮ ನೀತಿಯೋ? ಕೇಂದ್ರ ಸರ್ಕಾರದ ಶೈಕ್ಷಣಿಕ ನೀತಿಯೋ? ಅನುದಾನ ರಹಿತ ಶಾಲೆಗಳು ಅಥವಾ ಅಂತಾರಾಷ್ಟ್ರೀಯ ಶಾಲೆಗಳ ಮಾದರಿಯೋ? ಯಾವುದು ಸಮಾನ ಶಿಕ್ಷಣ ನೀತಿಯಾಗಬೇಕು ಎಂಬ ಬಗೆಗೆ ಗೊಂದಲಗಳು ನಿರ್ಮಾಣವಾಗಿವೆ. ಮತ್ತೊಂದೆಡೆ ರಾಜ್ಯ ಸರ್ಕಾರ ಈಗಲೂ ಎಲ್ಲ ಬಗೆಯ ಶಾಲೆಗಳನ್ನು ತೆರೆಯಲು ಅನಿಯಂತ್ರಿತವಾಗಿ ಅನುಮತಿಯನ್ನು ನೀಡುತ್ತಿದೆ. ಇದರಿಂದ ಸಮಸ್ಯೆಗಳಿಗೆ ಮತ್ತಷ್ಟು ಅವಕಾಶವನ್ನು ಕಲ್ಪಿಸಿಕೊಟ್ಟಂತಾಗುತ್ತದೆ.
ಸೇವಾಕ್ಷೇತ್ರವಾಗಿದ್ದ ಶಿಕ್ಷಣವು ವಾಣಿಜ್ಯೀಕರಣಗೊಂಡಿದ್ದು ಜನರಲ್ಲಿ ತಪ್ಪು ಕಲ್ಪನೆಯನ್ನು ಬಿತ್ತಲಾಗುತ್ತಿದೆ. ಆತಂಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರವನ್ನು ನಡೆಸುವ ಮಂತ್ರಿಗಳಾಗಲಿ, ಅಧಿಕಾರಿಗಳಾಗಲಿ ಕನ್ನಡವನ್ನು ರಕ್ಷಿಸುವುದಕ್ಕಿಂತ ತಾವು ಅಧಿಕಾರದಲ್ಲಿರುವಾಗ ಎಷ್ಟು ಹಣ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿರುವುದರಿಂದ ವಾಮಮಾರ್ಗಗಳನ್ನು ಹಿಡಿದು ಕನ್ನಡ ಮಾಧ್ಯಮ ಶಾಲೆಗಳಿಗೆ ಗಂಡಾಂತರವನ್ನು ತಂದೊಡ್ಡಿದ್ದಾರೆ. ಇವರೆಲ್ಲ ಕನ್ನಡಿಗರೇ ಎಂಬುದು ದುಃಖದ ಸಂಗತಿ. ಆಡಳಿತ ಭಾಷೆಯಾಗಿ ಕನ್ನಡವನ್ನು ಜಾರಿಗೊಳಿಸದೆ ಅಸಡ್ಡೆಯನ್ನು ತೋರುತ್ತಿರುವುದರಿಂದ ಕನ್ನಡ ಮೂಲೆಗುಂಪಾಗುವ ಅಪಾಯಕ್ಕೆ ಗುರಿಯಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಭಾಷಾವಾರು ರಾಜ್ಯಗಳ ರಚನೆಯಾದುದೇ ಆಯಾ ರಾಜ್ಯಭಾಷೆಗಳನ್ನು ರಕ್ಷಿಸಿಕೊಳ್ಳಬೇಕೆಂಬ ಘನ ಉದ್ದೇಶದಿಂದ. ಆ ಉದ್ದೇಶವನ್ನು ಸಾಧಿಸಲು ಅರ್ಧ ಶತಮಾನವಾದರೂ ಸಾಧ್ಯವಾಗಲಿಲ್ಲ ಎಂಬುದು ಸತ್ಯ. ಈ ಪರಿಸ್ಥಿತಿಗೆ ಕೇವಲ ಆಡಳಿತಶಾಹಿ ಮಾತ್ರ ಕಾರಣವೇ ಎಂದರೆ ಅಹುದು ಎಂದು ಧೈರ್ಯವಾಗಿ ಹೇಳಬಹುದಾದರೂ ಅಷ್ಟೇ ಹೊಣೆಗಾರಿಕೆ ಸಾಮಾನ್ಯ ಕನ್ನಡಿಗರ ಮೇಲಿದೆ ಎಂಬುದು ಸುಳ್ಳಲ್ಲ.
ನೆರೆಹೊರೆಯವರ ತಮ್ಮ ಭಾಷೆ ಮತ್ತು ಭಾಷಿಕ ಕುಲದ ಹಿತಕ್ಕೆ ಮಾರಕವಾಗದ ರೀತಿಯಲ್ಲಿ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ಸರ್ಕಾರ ಕೇವಲ ಸುತ್ತೋಲೆಗಳನ್ನು ಹೊರಡಿಸಿ ಕನ್ನಡವನ್ನು ಆಡಳಿತದಲ್ಲಿ ಜಾರಿಗೊಳಿಸಿ ಎಂದು ವಿನಂತಿಸುತ್ತಿದೆ. ಅದರ ಬದಲು ಕಾನೂನನ್ನು ಮಾಡಿ, ಆ ಕಾನೂನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ನೀಡಿದರೆ ತಂತಾನೆ ಕನ್ನಡ ಅನುಷ್ಠಾನಕ್ಕೆ ಬರುತ್ತದೆ. ಆಧುನಿಕ ತಂತ್ರಜ್ಞಾನಗಳಲ್ಲಿ ಕನ್ನಡದ ಬಳಕೆ ಮಾಡದೆ ಆಂಗ್ಲಭಾಷೆಯಲ್ಲೇ ಎಲ್ಲವನ್ನೂ ನಿರ್ವಹಿಸಲು ತೊಡಗಿರುವುದರಿಂದ ಸಹಜವಾಗಿಯೇ ಕನ್ನಡಕ್ಕೆ ಹಿನ್ನಡೆಯಾದಂತಾಗಿದೆ. ರಾಜ್ಯ ಸರ್ಕಾರದ ಎಲ್ಲ ಹಂತದ ಕಚೇರಿ, ಶಿಕ್ಷಣ ಸಂಸ್ಥೆಗಳು, ನ್ಯಾಯಾಲಯಗಳು ಮೊದಲಾದ ಎಲ್ಲ ಇಲಾಖೆಗಳು ಕನ್ನಡದಲ್ಲೇ ವ್ಯವಹಾರ ನಡೆಸುವಂತೆ ಕ್ರಮಕೈಗೊಳ್ಳಬೇಕು. ಕನ್ನಡ ಸ್ನಾತಕೋತ್ತರ ಪದವಿ ಪಡೆದವರನ್ನು ಕನ್ನಡ ಅನುಷ್ಠಾನ ಅಧಿಕಾರಿಗಳನ್ನಾಗಿ ನೇಮಿಸಿ, ಅವರು ಕನ್ನಡದ ಅನುಷ್ಠಾನದ ಮೇಲೆ ನಿಗಾ ಇಡುವಂತೆ ನಿಯುಕ್ತಿಗೊಳಿಸಬೇಕು. ಒಂದು ವೇಳೆ ಅಂಥ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ ಸೇವೆಯಿಂದಲೇ ವಜಾ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವವರಿಗೆ ರಾಜ್ಯ ಸರ್ಕಾರ ಉದ್ಯೋಗ ಭದ್ರತೆಯ ಬಗೆಗೆ ಭರವಸೆಯನ್ನು ನೀಡಬೇಕು. ರಾಜ್ಯ ಸರ್ಕಾರ ಮೊದಲು ತನ್ನ ಎಲ್ಲ ನೇಮಕಾತಿಗಳಲ್ಲಿ ಕನ್ನಡಿಗರನ್ನೇ ಆದ್ಯತೆಯ ಮೇಲೆ ನೇಮಕ ಮಾಡಿಕೊಳ್ಳಬೇಕು. ಅದು ನಿಗಮ, ಮಂಡಳಿ, ಮಹಾನಗರ ಪಾಲಿಕೆಗಳು, ನಗರಸಭೆಗಳಂಥ ಸ್ಥಳೀಯ ಸಂಸ್ಥೆಗಳಲ್ಲೂ ಅನುಷ್ಠಾನಗೊಳ್ಳಬೇಕು. ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಶೇ.80ರಷ್ಟು ಹುದ್ದೆಗಳನ್ನು ನೀಡಬೇಕೆಂಬ ಷರತ್ತಿನೊಡನೆ ಅನುಮತಿಯನ್ನು ನೀಡಬೇಕು. ಒಂದು ವೇಳೆ ಆ ನಿಯಮವನ್ನು ಯಾವುದಾದರೂ ಕಂಪನಿ ಅಥವಾ ಕಾರ್ಖಾನೆ ಮೀರಿದರೆ ಅಥವಾ ಉಲ್ಲಂಘಿಸಿದರೆ ಅಂಥ ಸಂಸ್ಥೆಯ ಪರವಾನಗಿಯನ್ನೇ ರದ್ದುಗೊಳಿಸುವ ದಿಟ್ಟತನವನ್ನು ಸರ್ಕಾರ ತೋರಬೇಕಾಗಿದೆ. ಇದು ಸಾಧ್ಯವಾಗದಿದ್ದರೆ ಜನರಲ್ಲಿ ಕನ್ನಡದ ಬಗೆಗೆ ಲವಲೇಶವೂ ಪ್ರೀತಿ ಹುಟ್ಟುವುದಿಲ್ಲ. ಆಗ ಭಾಷೆಗೂ ಬೆಲೆ ಬರುವುದಿಲ್ಲ. ಇಂಥ ದಿಟ್ಟತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರುವರೆಂಬ ಆಶಾಭಾವನೆ ಕೆಲವರಲ್ಲಾದರೂ ಇದೆ. ಅದು ಬೇಗ ನಿಜವಾಗಲಿ. ಕನ್ನಡದ ಸೌಧ ಸುಭದ್ರವಾಗಲಿ. ಕನ್ನಡಿಗರು ಚಿರಕಾಲ ಅಭಿಮಾನಧನರಾಗಿ ಬಾಳುವಂತಾಗಲಿ. ಆ ಮೂಲಕ ಕನ್ನಡಕ್ಕೆ ಅವಸರ್ಪಿಣಿ ಕಾಲ ದೂರಾಗಿ ಉತ್ಸರ್ಪಿಣಿಯು ವಿಜೃಂಭಿಸಲಿ.
- ಡಾ. ಕೋ.ವೆಂ. ರಾಮಕೃಷ್ಣೇಗೌಡ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


