ಅಂಕಣಗಳು

ಬಿಕ್ಕಟ್ಟು ಪರಿಹರಿಸಲು, ಮಂದಿರಗಳ ಬಾಗಿಲು ತಟ್ಟಲಿದ್ದಾರೆಯೇ?

ಬಿಕ್ಕಟ್ಟು ಪರಿಹರಿಸಲು, ಮಂದಿರಗಳ ಬಾಗಿಲು ತಟ್ಟಲಿದ್ದಾರೆಯೇ?
Published On :

ತಿರುಪತಿ ದೇವಸ್ಥಾನ, ಶಿರಡಿ ಮಂದಿರ, ಸಿದ್ಧಿವಿನಾಯಕ ಮಂದಿರ ಮತ್ತು ಪದ್ಮನಾಭಸ್ವಾಮಿ ದೇವಾಲಯಗಳು ಚಿನ್ನದಿಂದಾಗಿ ಶ್ರೀಮಂತ ಮಂದಿರಗಳೆನಿಸಿಕೊಂಡಿವೆ. ಆ ಚಿನ್ನವನ್ನೆಲ್ಲ ಕರಗಿಸಿ ಹಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರ್‌ಬಿಐ ಯೋಚಿಸುತ್ತಿದೆ...

ತವ್ಲೀನ್ ಸಿಂಗ್ ಎಂಬ ಲೇಖಕಿಯ ಹೆಸರು ಕೇಳಿಯೇ ಇರುತ್ತೀರಿ. ಇವರು ಸೋನಿಯಾ ಗಾಂಧಿಯವರ ವಿರೋಧಿಯಂತೂ ಅಲ್ಲ. ಆದರೂ ಇಂಡಿಯನ್ ಎಕ್ಸಪ್ರೆಸ್‌ನಲ್ಲಿನ ತಮ್ಮ ಭಾನುವಾರದ ಅಂಕಣದಲ್ಲಿ(ಸೆ.1, 2013) 'ಲೆಟ್ಸ್ ಟಾಕ್ ಅಬೌಟ್ ಸೋನಿಯಾ'(ಸೋನಿಯಾರ ಬಗ್ಗೆ ಮಾತನಾಡೋಣ) ಎಂದಿದ್ದಾರೆ ತವ್ಲೀನ್. ಅವರ ಲೇಖನ ಶುರುವಾಗುವುದು ಹೀಗೆ...
'ದೆಹಲಿಯ ರಾಜಕೀಯದ ಮೇಲೆ ಅಪಶಕುನದ ಪ್ರಜ್ಞೆ ಆವರಿಸಿದೆ. ನೇಪಥ್ಯದಲ್ಲಿ ಪ್ರಧಾನಿ ಹುದ್ದೆ ನಿರ್ವಹಿಸಿದ ಸೋನಿಯಾ ಗಾಂಧಿ (ಹೆಸರಿಗಷ್ಟೇ ಮನಮೋಹನ್ ಸಿಂಗ್) ಕಳೆದೊಂದು ದಶಕದಲ್ಲಿ ಭಾರತದ ಅಭ್ಯುದಯದ ಕನಸನ್ನು ಕೊಂದು ಹಾಕಿದ್ದಾರೆ.'
---
ಇನ್ನು ಅದೇ ಪತ್ರಿಕೆಯ, ಅದೇ ಪುಟದಲ್ಲಿ ಪ್ರಕಟವಾದ ಇನ್ನೊಂದು ಲೇಖನದಲ್ಲಿ ಅಂಕಣಕಾರ ಮೇಘನಾದ ದೇಸಾಯಿ ಇದಕ್ಕಿಂತಲೂ ತೀವ್ರವಾಗಿ ಯುಪಿಎ ಸರ್ಕಾರದ ವಿರುದ್ಧ ಬರೆದಿದ್ದಾರೆ. ಅವರು ಹೇಳುತ್ತಾರೆ:
'ಭಾರತದ ಪ್ರಜಾಪ್ರಭುತ್ವದ ಅವಳಿ ಸ್ತಂಭಗಳೆಂದರೆ ಬಡತನ ಮತ್ತು ಭ್ರಷ್ಟಾಚಾರ. ಅವು ಪರಮಪೂಜ್ಯವಾದವು. ಹಾಗಾಗಿ, ಅವುಗಳಿಂದಾಗಿ ಆರ್ಥಿಕತೆ ಕುಸಿದಿದೆಯೆಂದರೆ ಏನು ಮಾಡುವುದಕ್ಕೂ ಸಾಧ್ಯವಿಲ್ಲ. ಬ್ಯಾಡ್ ಲಕ್!'
----
ಇನ್ನು "ರುಪಾಯಿಯ ಕುಸಿತವನ್ನು ತಡೆಯಲು ಪ್ರಯತ್ನಿಸುತ್ತಿರುವ ಪಾಲಿಸಿ ಮೇಕರ್‌ಗಳು, ಈಗ ಮಂದಿರಗಳ ಬಾಗಿಲು ತಟ್ಟಲು ಯೋಚಿಸುತ್ತಿದ್ದಾರೆ" ಎಂದು ಆಗಸ್ಟ್ 31ರಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿತ್ತು!
ಕಳೆದೊಂದು ತಿಂಗಳಿಂದ ಸಂಸತ್ತು ಮತ್ತು ಮಾಧ್ಯಮಗಳ ದೃಷ್ಟಿ ಭಾರತವನ್ನು ಮೆತ್ತಗೆ ಮಾಡುತ್ತಿರುವ ಆರ್ಥಿಕ ಕುಸಿತದತ್ತಲೇ ಕೇಂದ್ರಿತವಾಗಿದೆ. ಆ ಕುರಿತೇ ಬಹುತೇಕ ಚರ್ಚೆಗಳು ನಡೆದವು/ ನಡೆದಿವೆ. ಡಾಲರ್‌ಗೆ ಹೋಲಿಸಿದರೆ, ಭಾರತದ ರುಪಾಯಿಯ ಮೌಲ್ಯ ಆಘಾತಕಾರಿ ವೇಗದಲ್ಲಿ ಕೆಳಗೆ ಬೀಳುತ್ತಿದೆ! ಈಗಿನ ಇಂಥ ವಿಷಮಸ್ಥಿತಿಯ ಬಗ್ಗೆ ಚರ್ಚೆಯಾದಾಗಲೆಲ್ಲ ಕೆಲವು ರಾಜಕೀಯ ಪಂಡಿತರು 1991ರ ಪಿ.ವಿ. ನರಸಿಂಹರಾವ್ ಸರ್ಕಾರದ ವೇಳೆ ಎದುರಾದ ಬಿಕ್ಕಟ್ಟನ್ನು ನೆನಪುಮಾಡಿಕೊಳ್ಳುತ್ತಿದ್ದಾರೆ. ಆಗ ನರಸಿಂಹರಾವ್ ಸರ್ಕಾರ ಭಾರತದ 67 ಟನ್ ಚಿನ್ನವನ್ನು ಸಾಲದ ಪಾವತಿಗೆ ಆಧಾರವಾಗಿಟ್ಟು, 2.2 ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಪಡೆದುಕೊಂಡಿತ್ತು.
ಈಗ ಆಂಧ್ರ ಪ್ರದೇಶದ ತಿರುಪತಿ ದೇವಸ್ಥಾನ, ಮಹಾರಾಷ್ಟ್ರದ ಶಿರಡಿ ಮಂದಿರ, ಮುಂಬೈನ ಸಿದ್ಧಿವಿನಾಯಕ ಮಂದಿರ ಮತ್ತು ಕೇರಳದ ಪದ್ಮನಾಭಸ್ವಾಮಿ ದೇವಾಲಯಗಳು ಚಿನ್ನದ ಸಂಗ್ರಹದಿಂದಾಗಿ ರಾಷ್ಟ್ರದ ಅತ್ಯಂತ ಶ್ರೀಮಂತ ಮಂದಿರಗಳೆನಿಸಿಕೊಂಡಿವೆ. ಆ ಚಿನ್ನವನ್ನೆಲ್ಲ ಕರಗಿಸಿ ಹಣವಾಗಿ ಪರಿವರ್ತಿಸುವಂತೆ ಕೇಂದ್ರ ರಿಸರ್ವ್ ಬ್ಯಾಂಕ್ ಆ ಮಂದಿರಗಳ ಬಳಿ ತೆರಳಲು ಸಿದ್ಧತೆ ನಡೆಸಿದೆ.  
-----
ಆಗಸ್ಟ್ 30 ರಂದು ಸಂಸತ್ತಿನಲ್ಲಿನ ಬಿಜೆಪಿಯ 10 ಹಿರಿಯ ನಾಯಕರು (ಎರಡೂ ಸಭಾಸದನದ ವಿರೋಧ ಪಕ್ಷಗಳ ನಾಯಕರನ್ನೊಳಗೊಂಡು) ಮತ್ತು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ರಾಷ್ಟ್ರಪತಿಗಳನ್ನು ಭೇಟಿಯಾಗಿ, ಪ್ರಸ್ತುತ ಆರ್ಥಿಕ ಕುಸಿತದ ವಿದ್ಯಮಾನಗಳ ಕುರಿತು ಮನವಿಯೊಂದನ್ನು ಸಲ್ಲಿಸಿದೆವು. ಆಗ ನಾವು ಹೇಳಿದ್ದು ಹೀಗೆ:
"ಎಂದಿನಂತೆ ಭಾರತ ಸರ್ಕಾರ ತನ್ನ ತಪ್ಪಿನ ನಿರಾಕರಣೆಯಲ್ಲಿದೆ. ಈ ಬಿಕ್ಕಟ್ಟಿಗೆ ತನ್ನನ್ನು ಬಿಟ್ಟು ಉಳಿದೆಲ್ಲರ
ಮೇಲೆ ಅದು ಹೊಣೆ ಹೊರಿಸುತ್ತಿರುವುದು ನಿಜಕ್ಕೂ ಸರಿಯಲ್ಲ. ಅದು ವಿರೋಧ ಪಕ್ಷಗಳನ್ನು, ರಾಜ್ಯ ಸರ್ಕಾರಗಳನ್ನು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಾಗತಿಕ ಅಂಶಗಳನ್ನು ಆರ್ಥಿಕ ಬಿಕ್ಕಟ್ಟಿಗೆ ಹೊಣೆಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇನ್ನು ವಿತ್ತ ಸಚಿವ ಪಿ. ಚಿದಂಬರಂ ಅವರು ತಮ್ಮ ಪೂರ್ವಾದ ಸಚಿವರು (ಪ್ರಣಬ್ ಮುಖರ್ಜಿ)ಯ ಮೇಲೆ ಆರೋಪ ಹೊರಿಸಿ ಹೊಣೆಗೇಡಿತನದ ಮಿತಿಯನ್ನೇ ದಾಟಿ ಬಿಟ್ಟರು. ಇದನ್ನೆಲ್ಲವನ್ನೂ ಕೇಳಿಸಿಕೊಂಡ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಏನೂ ಸಂಭವಿಸಿಯೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ಕುಳಿತಿದ್ದರು. ಇಂದು ನಮ್ಮ ಆರ್ಥಿಕತೆ ಮತ್ತು ದೇಶವನ್ನು ಪೀಡಿಸುತ್ತಿರುವ ಬಿಕ್ಕಟ್ಟಿಗೆ ಮೂಲ ಕಾರಣ ಆತ್ಮವಿಶ್ವಾಸದ ಕೊರತೆ. ನಮ್ಮ ಸರ್ಕಾರಕ್ಕೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗುತ್ತಿಲ್ಲ, ಒಳ್ಳೆಯ ನಾಯಕತ್ವವನ್ನು ಕೊಡಲಾಗುತ್ತಿಲ್ಲ ಅಥವಾ ಭವಿಷ್ಯದತ್ತ ಒಂದು ಚಿಕ್ಕ ಬೆಳಕಿನ ಕಿರಣವನ್ನೂ ಬಿಡಲಾಗುತ್ತಿಲ್ಲ. ಅದು ಭ್ರಷ್ಟಾಚಾರದ ಬೃಹತ್ ರಾಡಿಯಲ್ಲಿ ಸಿಕ್ಕಿಬಿದ್ದಿದೆ. ಇನ್ನು ಅದೀಗ ಪ್ರಮುಖ ಫೈಲ್‌ಗಳನ್ನು ಕಣ್ಮರೆಮಾಡಿ ಪ್ರಮುಖ ಸಾಕ್ಷಿಯನ್ನು ನಾಶ ಪಡಿಸಲು ಯತ್ನಿಸುತ್ತಿದೆ. ಈ ಅನುಮಾನ ಈಗ ಸುಪ್ರೀಂ ಕೋರ್ಟ್‌ಗೂ ಬಂದಿದೆ.
 ನಿಷ್ಕ್ರಿಯಗೊಂಡ ಸರ್ಕಾರವನ್ನು, ಎಂದಿಗೂ ಮಾತನಾಡದ ಪ್ರಧಾನಿಯನ್ನು, ತಮ್ಮ ಸ್ಥಾನದಲ್ಲಿ ಹಿಂದಿದ್ದ ವ್ಯಕ್ತಿಯ ಮೇಲೆ ಹೊಣೆ ಹೊರಿಸಿ ನುಣುಚಿಕೊಳ್ಳುವ ವಿತ್ತ ಸಚಿವರನ್ನು, ಹಣ ಎಲ್ಲಿಂದ ಬರುತ್ತದೆ ಎನ್ನುವುದರ ಬಗ್ಗೆ ಕಿಂಚಿತ್ ಅರಿವಿಲ್ಲದ ಪ್ರಮುಖ ನಾಯಕಿಯನ್ನು ಮತ್ತು ಅಸಹಾಯಕವಾಗಿರುವ ಅಧಿಕಾರಿವರ್ಗವನ್ನು ನಂಬಿಕೊಂಡು ಕೂಡುವುದಕ್ಕೆ ದೇಶ ತಯಾರಿಲ್ಲ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅದು ಸಾಧ್ಯವೂ ಅಲ್ಲ.
ಈ ಸರ್ಕಾರದ ಮಂತ್ರಿಗಳಿಗೆ ಕಡಿವಾಣವೇ ಇಲ್ಲವಾಗಿದೆ. ಅವರೆಲ್ಲ ತಮ್ಮ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುಪಿಎಯೇತರ ಸರ್ಕಾರಗಳು ಮತ್ತು ವಿರೋಧ ಪಕ್ಷಗಳು ಚುಕ್ಕಾಣಿ ಹಿಡಿದಿರುವ ರಾಜ್ಯಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರದ ಸಂಬಂಧ ಲೆಕ್ಕಕ್ಕೇ ಇಲ್ಲದಂತಾಗಿದೆ. ದೇಶವನ್ನು ಕಾಡುತ್ತಿರುವ ಈ ಅನಿಶ್ಚಿತತೆಯನ್ನು ಕೊನೆಗಾಣಿಸಬೇಕೆಂದು ಕೇಳಿಕೊಳ್ಳಲು ನಾವು ನಿಮ್ಮ ಬಳಿ ಬಂದಿದ್ದೇವೆ. ಈ ಸರ್ಕಾರ ತಡಮಾಡದೆ, ಆದಷ್ಟು ಬೇಗ 'ಅವಧಿಗೆ ಮುನ್ನ ಚುನಾವಣೆ' ನಡೆಸಬೇಕು ಆದರೆ ಮುಂದಿನ ಮೂರು ತಿಂಗಳಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗಳ ನಂತರವಲ್ಲ ಎನ್ನುವುದನ್ನು ತಾವು ಆದೇಶಿಸಬೇಕು ಎಂದು ಪ್ರಾರ್ಥಿಸುತ್ತೇವೆ"

- ಎಲ್.ಕೆ. ಆಡ್ವಾಣಿ
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.