ವೊಟ್ಟೆ ತುಂಬ ಗಡದ್ದಾಗಿ ವುಂಡ್ಬುಟ್ಟು ಮಲಗಿ ಗೊರ್ಕೆ ವೊಡಿತಾಯಿದ್ದೋನು ಮೈಲಾರಿ ನಡು ರಾತ್ರಿ ವೊಳ್ಗೆ ಇದ್ಕಿದ್ದಂಗೆ ಎದ್ದು ಕೂತ್ಕಂಬುಟ್ಟ.
'ಅಮ್ಮಿ ಏಳಮ್ಮಿ, ಪೆನ್ನು, ಪೇಪ್ರು ಕೊಡಮ್ಮಿ' ಅಂತ ಮಿಸ್ಸಸ್‌ನ ತಿವ್ದು ಎಬ್ಸಕ್ಕೆ ವೋದ. 'ಇದ್ಯಾಕೆ ಮೂದೇವಿ ಸರಿ ವೊತ್ನಾಗೆ ಏಳಮ್ಮಿ, ಏಳಮ್ಮಿ ಅಂತ ಜೀವ ತಿಂತಾಯಿರಾದು. ಸುಮ್ಕೆ ಬಿದ್ಕಳಕ್ಕೆ ಆಗಾಕಿಲ್ವಾ ?' ಅಂತು ಮಿಸ್ಸಸ್ಸು. 'ಆಯ್ಯೋ ಅದು ಅಂಗಲ್ಲ, ವಸಿ ಪೆನ್ನು, ಪೇಪ್ರು ತಕ್ಕೊಡು' ಅಂದ ಮೈಲಾರಿ.
'ಏನು, ಐಎಸ್ ಅಪೀಸರ್ರು, ಈಟೋತ್ನಾಗೆ ಪೆನ್ನು, ಪೇಪ್ರು ಹಿಡ್ಕಂಡು ಕೂತ್ಕಳಕ್ಕೆ. ಸುಮ್ಕೆ ಬಿದ್ಕತೀಯೋ, ಚಾಪೆ, ತಲೆದಿಂಬು ತಗ್ದು ಆಚ್ಗೆ ಹಾಕ್ಲೋ' ಅಂತ ಬಂತು ಆವಾಜು.
'ನಿಂದೊಳ್ಳೆ ಕಥೆ ಆಯ್ತಲ್ಲ, ವಸಿ ಹೋಂವರ್ಕ್ ಅದೆ ಮಾಡಾವ ಕೊಡಮ್ಮಿ' ಅಂದ ಮೈಲಾರಿ. 'ಇಸ್ಕೂಲ್ಗೆ ವೋಗೋ ವುಡ್ಗ ಕೆಟ್ಟೋಯ್ತ ಹೋಂವರ್ಕು ಮಾಡಕ್ಕೆ. ಯಾವ್ದಾರ ಕೆಟ್ ಕನ್ಸು ಬಿತ್ತಾ ಹೆಂಗೆ ?' ಅಂತ ಮಿಸ್ಸಸ್ಸು ಕೇಳ್ತು. 'ನಿನ್ನುನ್ನ ಕಟ್ಕಂಡ್ಮೇಕೆ ನಿದ್ದೇನೇ ಬತ್ತಾಯಿಲ್ಲ. ಇನ್ನ ಕನ್ಸು ಬ್ಯಾರೆ ಬತ್ತದೆ ಕನ್ಸು. ವೋಗಮ್ಮಿ ಪೆನ್ನು, ಪೇಪ್ರು ತಕ್ಕಂಡು ಬಾ' ಅಂತೇಳಿ ಮೈಲಾರಿ ಗುಡುಗ್ದ.
'ಅಯ್ಯೋ ಸಿವನೇ, ವತ್ತಾರೆಯಿಂದ ಚನ್ನಗಿತ್ತಲ್ಪಪ್ಪ ಈ ಮೂದೇವಿ. ಆ ಹಾಳು ಹುಣುಸೇ ಮರದತಾವ ವೋಬ್ಯಾಡ ಅಂದ್ರೂ ಕೇಳಂಗಿಲ್ಲ. ಅದ್ಯಾವ್ ಬಿಕ್ನಾಸಿ ದೆವ್ವ ಮೆಟ್ಕತೋ ಏನೋ? ಈವಯ್ಯನ ಜತ್ಯಾಗೇ ಆ ದೆವ್ವದ ಜತ್ಯಾಗೂ ಏಗ್ಬೇಕಲ್ಲಪ್ಪೋ' ಅಂತೇಳಿ ಮಿಸ್ಸಸು ವೋಗಿ ಪೆನ್ನು, ಪೆಪ್ರು ತಕ್ಕಂಡು ಬಂದು ಮೈಲಾರಿ ಮಖದ ಮ್ಯಾಲೆ ಬಡೀತು. ಈವಾಗೇಳು ಯಾಕ್ ಬೇಕು ಇದು? ಅಂತ ಕೇಳ್ತು.
'ಕೈ ಪಕ್ಸುದಾಗೆ ಇನ್ನೇಕೆ ಸುಮ್‌ಸುಮ್ಕೆ ಟಿಕೆಟ್ಟು ಕೊಡಾಕಿಲ್ವಂತೆ. ಇಸ್ಕೂಲ್ನಾಗೆ ಪರೀಕ್ಸೆ ನಡೆಯೋವಾಗ ಕೊಡ್ತರಲ್ಲ ಹಂಗೆ ಕೊಚ್ಚನ್ ಪೇಪ್ರು ಕೊಡ್ತರಂತೆ. ಅದುನ್ನು ತುಂಬಿ ಕಳ್ಸುದ್ರೆ ರಾವುಲ್ ಗಾಂಧಿ ನೋಡ್ತರಂತೆ. ಅಮ್ಯಾಲೆ ಟೆಕ್ಕೆಟ್ಟು ಕೊಡ್ತರಂತೆ' ಅಂದ ಮೈಲಾರಿ.
'ಮೊನ್ನೆ ಯಾವನೋ ಪುಡಾರಿ ನೇಣಾಕ್ಕಂಬುಟ್ನಲ್ಲ ಅವ್ನು ದೆವ್ವ ಆಬುಟ್ಟು ಮೆಟ್ಕಂಡಂಗೆ ಅದೆ. ಸುಮ್ಕೆ ಬಿದ್ಕತೀಯೋ. ಬೇವಿನ ಸೊಪ್ಪ ತಕ್ಕಂಡು ಬಂದು ರಪರಪಾಂತ ಬಡೀಲೋ' ಅಂತು ಮಿಸ್ಸಸ್ ಮೈಲಾರಿ. 'ನೀನು ಸುಮ್ಕೆ ಬಿದ್ಕ. ನಾನು ಕೊಚ್ಚನ್ ಪೇಪರ್ ತುಂಬಾದು ಹೆಂಗೆ ಅಂತ ಪ್ರಾಕ್ಟೀಸು ಮಾಡ್ಕಂತೀನಿ' ಅಂದ ಮೈಲಾರಿ. ಹಾಳಾಗೋಗು ಅಂತೇಳಿ ಮಿಸ್ಸಸ್ಸು ಮಖದ ಮ್ಯಾಲೆ ಕಂಬ್ಳಿ ಎಳ್ಕಂಡು ಮಲಿಕ್ಕತು.
ಮೈಲಾರಿ ಬರ್ದು ಬರ್ದು ಸುಸ್ತಾಗಿ ಹಂಗೇ ಮಲಿಕ್ಕಂಬುಟ್ಟ. ವತ್ತಾರೆ ಸೂರ್ಯ ನೆತ್ತಿಮ್ಯಾಲೆ ಬಂದ್ರೂವೆ ಮಲ್ಗೇ ಇದ್ದ. ಆವಾಗ ಅಮಾಸೆ ವುಡಿಕ್ಕಂಡು ಬಂದು ಮೈಲಾರಿ ಮೈಲಾರಿ ಅಂತ ಕೂಗಕ್ಕೆ ಸುರು ಮಾಡ್ಕಂಡ. 'ಅದುಕ್ಕೆ ದೆವ್ವ ಮೆಟ್ಕಂಡದೆ. ಇನ್ನಾ ಎದ್ದಿಲ್ಲ' ಅಂತು ಮೈಲಾರಿ ಮಿಸ್ಸಸ್ಸು.
'ಹೌದೇನವ್ವ, ನಿನ್ ಹಣೆಬರುಕ್ಕೆ ವೊಣೆ ಯಾರು ಬುಡು. ಅಲ್ಲ, ಜನುಗ್ಳೇ ಇವುಂತಾವ ಬರಕ್ಕೆ ಹೆದ್ರುತರೆ. ದೆವ್ವಗಳು ಬತ್ತಾವ?' ಅಂತ ಯೋಳ್ಕಂಡು ಬಂದ ಅಮಾಸೆ. ಆವಾಗ ಮೈಲಾರಿ ಬಾಯಿ ತುಂಬ ಆಕಳಿಸ್ಕಂಡು, ಕಣ್ಣು ವುಜ್ಕಂಡು ಎದ್ದ.
'ಇದ್ಯಾಕಲೇ ಮೈಲಾರಿ ರಾತ್ರಿಪೂರಾ ನಿದ್ದೆಗೆಟ್ಟು ಬರೀತಾಯಿದ್ದಂತೆ. ಯಾವ್ದಾರ ಪರೀಕ್ಷೆಗೆ ಕಟ್ಟೀದಿಯೇನ್ಲಾ ?' ಅಂತ ಅಮಾಸೆ ಕೇಳ್ದ. 'ಇಲ್ಲ ಕಣ್ಲಾ ಅಮಾಸೆ, ಮುಂದಿನ ಎಲೆಕ್ಸನ್ಗೆ ಟೆಕ್ಕೆಟ್ಟು ಬೇಕು ಅಂತಂದ್ರೆ ಐದು ಪೇಜು ಕೊಚ್ಚನ್ ಪೇಪ್ರು ಕಳುಸ್ತೀವಿ. ಅದನ್ನು ತುಂಬಿ ಕಳ್ಸಿ ಅಂತ ರಾವುಲ್ ಗಾಂಧಿ ಯೋಳವ್ರೆ. ಅದುನ್ನು ಪ್ರಾಕ್ಟೀಸು ಮಾಡ್ತಾಯಿದ್ದೆ' ಅಂದ ಮೈಲಾರಿ.
'ಅಲ್ಲಲೇ ನೀನು ಕನ್ನಡದಾಗೆ ಬರುದ್ರೆ ರಾವುಲ್‌ಗಾಂಧಿಗೆ ತಿಳೀತದಾ?' ಅಂತ ಅಮಾಸೆ ಕೇಳ್ದ. 'ಹೌದಲ್ಲಾ? ಈವಾಗ ಏನ್ಲಾ ಮಾಡಾದು ? ಅಲ್ಲ, ಕೊಚ್ಚನ್ ಪೇಪ್ರು ಯಾಕೆ ತುಂಬಿ ಕಳುಸ್ಬೇಕು ಅಂತೀನಿ. ಎಲೆಕ್ಸನ್ಗೂ, ಈ ಕೊಚ್ಚನ್ ಪೇಪ್ರುಗೂ ಏನ್ಲಾ ಸಂಬಂಧ?' ಅಂತ ಮೈಲಾರಿ ಕೇಳ್ದ.
'ಹೌದಪ್ಪ, ನೀನು ಎಷ್ಟು ಆಸ್ತಿ ಮಾಡ್ಕಂಡಿದ್ದೀಯ, ಜನ್ರು ದುಡ್ಡು ಎಷ್ಟು ವೊಡ್ಕಂಡಿದ್ದೀಯ, ತಲೆನಾಗೆ ಬುದ್ದಿ ಎಷ್ಟದೆ, ಲದ್ದಿ ಎಷ್ಟು ತುಂಬದೆ ಅಂತ ತಿಳ್ಯಾದು ಬ್ಯಾಡ್ವಾ? ಅದುಕ್ಕೆ ರಾವುಲ್‌ಗಾಂಧಿ ಈ ಐಡಿಯಾ ಮಾಡಿರಾದು. ಅದುಕ್ಕೆ ವೂರ್ನಾಗಿರೋ ಕೈ ಪಕ್ಸದ ಲೀಡ್ರುಸು ಈವಾಗ ಅಕ್ಷರಾಭ್ಯಾಸ ಸುರು ಮಾಡ್ಕಂಡವ್ರೆ' ಅಂದ ಅಮಾಸೆ. 'ಕೈ ಪಕ್ಸುದೋರು ಮೊದ್ಲು ಅಕ್ಷರಾಭ್ಯಾಸ ಮಾಡ್ಸಿ ಅಮ್ಯಾಲೆ ಕೊಚ್ಚನ್ ಪೇಪ್ರು ಕೊಡಾದು ವೊಳ್ಳೇದು' ಅಂತೇಳಿ ಮೈಲಾರಿ ಅರ್ಜೆಂಟು ಬತ್ತೀನಿರು ಅಂತ ವೋದ.
- ಕೆ.ವಿ.ಪ್ರಭಾಕರ್
prabhukolar@yahoo.com