ಮೂಲಕ್ಕೆ ಮೂಲದ ಪೆಟ್ಟು, ಸಿದ್ದು ಅದೃಷ್ಟದ ಗುಟ್ಟು

ಅದೃಷ್ಟವೊಂದು ಗಟ್ಟಿಯಿದ್ದರೆ ದೇವರು ಕೂಡ ಏನೂ ಮಾಡಲಾರ. ಅದೇ ರೀತಿ ಅದೃಷ್ಟ...
Updated on: 

ಅದೃಷ್ಟವೊಂದು ಗಟ್ಟಿಯಿದ್ದರೆ ದೇವರು ಕೂಡ ಏನೂ ಮಾಡಲಾರ. ಅದೇ ರೀತಿ ಅದೃಷ್ಟ ಕೈ ಕೊಟ್ಟರೆ ಹಗ್ಗವೂ ಹಾವಾಗಿ ಕಾಡುತ್ತದೆ ಎನ್ನುವುದು ವಾಡಿಕೆಯ ಮಾತು.
ಹೌದು, ಕೆಲವೊಮ್ಮೆ ಈ ಮಾತು ಎಷ್ಟು ನಿಜ ಎಂದೆನಿಸಿಬಿಡುತ್ತದೆ. ಮನುಷ್ಯ ಎಷ್ಟೇ ಬುದ್ದಿವಂತನಿರಬಹುದು. ಆದರೆ ಆತ ಎಣಿಸಿದ್ದೆಲ್ಲವೂ ನಿಜವಾಗುವುದಿಲ್ಲ. ಅದೇ ರೀತಿ ಆತ ಎಣಿಸದ್ದು ಸಿಡಿಲಿನಂತೆ ಬಂದೆರಗಬಹುದು. ಇನ್ನೇನು ತಲೆ ಮೇಲೆ ಬಿದ್ದೇ ಬಿಟ್ಟಿತು ಎನ್ನುವ ಬಂಡೆಗಲ್ಲು ಕಣ್ಣ ಮುಂದೆಯೇ ಚುಪ್ಪಾಚೂರಾಗಿ ಹೋಗಬಹುದು. ಅಲ್ಲೆಲ್ಲೋ ದೂರದಲ್ಲಿ ಹೋಗುತ್ತಿದ್ದ ವಾಹನ ಇದ್ದಕ್ಕಿದ್ದಂತೆ ಮೈಮೇಲೆ ನುಗ್ಗಿ ಅನಾಹುತ ಮಾಡಿಬಿಡಬಹುದು. ಇವೆಲ್ಲವೂ ಅದೃಷ್ಟದಾಟದ ಅಪರಾವತಾರಗಳು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದೃಷ್ಟ ರಥದ ಸವಾರಿ ಇಷ್ಟೆಲ್ಲ ಪೀಠಿಕೆಯ ಮೂಲಬಿಂದು. ಪಕ್ಷ ಮತ್ತು ಸರಕಾರದ ಒಳ-ಹೊರಗೆ ಅವರ ವಿರುದ್ಧ ಮಡುಗಟ್ಟಿರುವ ಸುಳಿಗಳು ಒಂದೊಂದಾಗಿ ನಿವಾರಣೆ ಆಗುತ್ತಿವೆ. ಇಲ್ಲಿ ಸಿದ್ದರಾಮಯ್ಯ ಅವರ ತಂತ್ರ, ಶ್ರಮದಿಂದ ಒಂದಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತಿದ್ದರೆ, ಇನ್ನೊಂದಷ್ಟನ್ನು ಅವರ ಅದೃಷ್ಟವೇ ಅದೃಶ್ಯ ಮಾಡಿಸುತ್ತಿದೆ.
ನಿಜ, ಸಿದ್ದರಾಮಯ್ಯ ಅವರಿಗೆ ಪಕ್ಷದ ಹೊರಗೆ ಸಾಕಷ್ಟು ಶತ್ರುಗಳು ಇದ್ದಾರೆ. ಕ್ಷಣ, ಕ್ಷಣಕ್ಕೂ ಅವರನ್ನು ಹಣಿಯಬೇಕು ಎಂದು ಹವಣಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ರಾಜಕೀಯ ಹಾಗೂ ವೈಯಕ್ತಿಕ ದ್ವೇಷಾಸೂಯೆ ಅವರ ಸುತ್ತ ಶತ್ರುಗಳ ತಂಡವನ್ನೇ ಸೃಷ್ಟಿಸಿದೆ. ಆದರೆ ಅದಕ್ಕಿಂತಲೂ ಮಿಗಿಲಾದ ಶತ್ರುಗಳ ವ್ಯೂಹ ಪಕ್ಷದ ಒಳಗಿರುವುದು ದೊಡ್ಡ ಸವಾಲು. ಈ ಸವಾಲನ್ನು ಅನಾಯಾಸವಾಗಿ, ಅಪ್ರಯತ್ನಪೂರ್ವಕವಾಗಿ ಗೆಲ್ಲುತ್ತಿರುವುದು ಮತ್ತದೇ ಅವರ ಅದೃಷ್ಟದಾಟದ ಪ್ರತೀಕ.
ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಸಿದ್ದರಾಮಯ್ಯ ಅವರು ಸಾಕಷ್ಟು ಮುಜುಗರ, ಅಡೆತಡೆಗಳನ್ನು ಎದುರಿಸಿದ್ದು ಸುಳ್ಳಲ್ಲ. ಕೆಲವೊಂದನ್ನು ಅವರೇ ಮೈಮೇಲೆ ಎಳೆದುಕೊಂಡಿದ್ದರೆ, ಇನ್ನೂ ಕೆಲವು ಪಕ್ಷದ ಒಳಗಿನ ಅಸಹಿಷ್ಣುಗಳು ಸೃಷ್ಟಿಸಿದ್ದು. ಇದರಿಂದ ಗೊಂದಲಗಳು ಸಹ ನಿರ್ಮಾಣ ಆಗಿದ್ದು ಸುಳ್ಳಲ್ಲ. ಸಿದ್ದರಾಮಯ್ಯ ಸರಕಾರವನ್ನು ಒಂದು ಕಡೆ ಎಳೆದುಕೊಂಡು ಹೋಗಲು ನೋಡಿದರೆ, ಆಂತರಿಕ ಶತ್ರುಗಳು ಪಕ್ಷದ ಹೆಸರಿನಲ್ಲಿ ಇನ್ನೊಂದು ದಿಕ್ಕಿನಲ್ಲಿ ಸಾಗಿಸಲು ನೋಡುತ್ತಿದ್ದಾರೆ. ಈ ಬಗ್ಗೆ ನೋವು ಹಾಗೂ ಬೇಸರ ಅವರಿಗಿದೆ. ಆದರೆ ಅದೃಷ್ಟವೆಂಬುದು ಈ ಎರಡಕ್ಕೂ ದಿವ್ಯೌಷಧ ಆಗಿರುವುದೇ ಕೌತುಕದ ಸಂಗತಿ.
 ಬೆಂಗಳೂರಿಂದ ದಿಲ್ಲಿಗೆ ಎಷ್ಟೇ ದೂರುಗಳು ಬಂದರೂ ಹೈಕಮಾಂಡ್, ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರ ಮೇಲೆ ಬಹಳ ವಿಶ್ವಾಸ. ಸಿದ್ದರಾಮಯ್ಯ ಒಬ್ಬ ಜನನಾಯಕ ಹಾಗೂ ನುರಿತ ರಾಜಕಾರಣಿ ಎಂಬ ನಂಬುಗೆ ಅವರಿಗೆ ಬಂದಿದೆ. ವಿಧಾನಸಭೆ ಚುನಾವಣೆ ನಂತರದ ಲೋಕಸಭೆ ಮರು ಚುನಾವಣೆ ಹಾಗೂ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ದಡ ಮುಟ್ಟಿಸಿರುವುದು, ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಕಾರಣದಲ್ಲಿ ಪಕ್ಷದ ಮಾನ-ಮರ್ಯಾದೆ ಮೂರಾಬಟ್ಟೆ ಆಗುತ್ತಿರುವ ಸಂದರ್ಭದಲ್ಲಿ ಸಿಕ್ಕಿರುವ ಈ ಗೆಲುವು ಸಂಜೀವಿನಿ ಸ್ವರೂಪವಾಗಿ ಕಂಡಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಾಗಿಲಲ್ಲೇ ಇರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಅವರ ನಾಯಕತ್ವಕ್ಕೆ ಯಾವುದೇ ಮುಜುಗರ, ಬೇಸರ ಆಗುವಂಥ ವಾತಾವರಣ ಸೃಷ್ಟಿಗೆ ಆಸ್ಪದ ಕೊಡಬಾರದು ಎಂಬುದು ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್‌ನ ಸ್ಪಷ್ಟ ನಿಲುವು.
 ಹಾಗೆಂದು ಹೈಕಮಾಂಡ್‌ಗೆ ಸಿದ್ದರಾಮಯ್ಯ ವಿರುದ್ಧ ದೂರು ಸಲ್ಲಿಸುವವರಿಗೇನೂ ಕೊರತೆ ಇಲ್ಲ. ಆದರೆ ಹೈಮಾಂಡ್ ಕಿವಿಗೆ ಬಿದ್ದ ಈ ದೂರುಗಳನ್ನು ಗುಗ್ಗೆ ಮಾಡಿ ಹೊರತೆಗೆಯಲು ಕರ್ನಾಟಕದಿಂದ ಹೈಕಮಾಂಡ್ ಪ್ರತಿನಿಧಿಸುತ್ತಿರುವ ಒಂದು ವರ್ಗ ಯೋಜಿತವಾಗಿ, ಬಹಳ ನಾಜೂಕಿನಿಂದ ಕೆಲಸ ಮಾಡುತ್ತಿದೆ. ಕೇಂದ್ರ ಸಚಿವರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯ್ಲಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್. ಇಲ್ಲಿ ಒಂದು ತಮಾಷೆ ಇದೆ. ಸಿದ್ದರಾಮಯ್ಯ ಅವರ ಯೋಜನೆಗಳು, ಯೋಚನೆಗಳು, ಕಾರ್ಯವೈಖರಿಯನ್ನು ಟೀಕಿಸುವವರು, ಹೈಮಾಮಂಡ್‌ಗೆ ಚಾಡಿ ಹೇಳುವವರು ಮೂಲ ಕಾಂಗ್ರೆಸ್ಸಿಗರು. ಅದೇ ರೀತಿ ಸಿದ್ದರಾಮಯ್ಯ ಪರ ನಿಂತಿರುವವರು, ಹೈಕಮಾಂಡ್ ಕಿವಿಯಲ್ಲೇ ದೂರು ಕರಗುವಂತೆ ನೋಡಿಕೊಳ್ಳುತ್ತಿರುವವರು ಕೂಡ ಮೂಲ ಕಾಂಗ್ರೆಸ್ ನಾಯಕರೇ...!
ಹಾಗೆ ನೋಡಿದರೆ ಅಧಿಕಾರಕ್ಕೆ ಬಂದ ಹೊಸದರಲ್ಲೇ ಸಿದ್ದರಾಮಯ್ಯ ಅವರಿಗೆ ಅಂಕುಶ ಹಾಕಬೇಕು ಎನ್ನುವ ಸಲಹೆ ಹೈಕಮಾಂಡ್‌ಗೆ ಮೊದಲು ಅಪ್ಯಾಯಮಾನವಾಗೇ ಕಂಡಿತ್ತು. ಏಕೆಂದರೆ ಸಿದ್ದರಾಮಯ್ಯ ಮೊದಲಿನಿಂದಲೂ ಪಕ್ಷಕ್ಕಿಂತ ಮಿಗಿಲಾಗಿ ವೈಯಕ್ತಿಕ ವರ್ಚಸ್ಸು, ಛಾಪಿನಿಂದ ಗುರುತಿಸಿಕೊಂಡವರು. ಅವರ ನಾಯಕತ್ವದ ಸರಕಾರ ಸಿದ್ದರಾಮಯ್ಯ ಸರಕಾರ ಆಗುತ್ತದೆಯೇ ಹೊರತು ಕಾಂಗ್ರೆಸ್ ಸರಕಾರ ಆಗುವುದಿಲ್ಲ. ಹೀಗಾಗಿ ಅವರ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಅತೃಪ್ತರು ಹೇಳಿದಾಗ ಹೈಕಮಾಂಡ್ ಗೋಣು ಅಲ್ಲಾಡಿಸಿತು. ಎರಡು ಸಮಿತಿಗಳನ್ನು ರಚಿಸಿತು. ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಸಮಿತಿ ಹಾಗೂ ಸಮನ್ವಯ ಸಮಿತಿ ರಚನೆ ಹಿಂದೆ ಕೆಲಸ ಮಾಡಿದ್ದೇ ಅತೃಪ್ತರ ಅಂಕುಶ ಅಸ್ತ್ರ. ಇದರಿಂದ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಬೇಸರ ಆಯಿತು. ಪ್ರಣಾಳಿಕೆ ಅನುಷ್ಠಾನ ಸಮಿತಿಗೆ ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಹಾಗೂ ರಾಜ್ಯದ ಸಚಿವ ಹೆಚ್.ಕೆ. ಪಾಟೀಲ್ ಸೇರ್ಪಡೆ ಬಗ್ಗೆ ಬಹಿರಂಗ ಆಕ್ಷೇಪವೂ ವ್ಯಕ್ತವಾಯಿತು. ಏಕೆಂದರೆ ಪೂಜಾರಿ ಬಾಯಿಬಡಕರು. ಯೋಜನೆಗಳಿಗೆ ಗಡವು ವಿಧಿಸುತ್ತಾರೆ. ಮೇಷ್ಟ್ರು ತರಹ ವಿವರಣೆ ಕೇಳುತ್ತಾರೆ. ನಾಲಿಗೆಗೆ ಇತಿಮಿತಿ ಇಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರು ಮೂಲ ಕಾಂಗ್ರೆಸ್ ತತ್ವ ಪ್ರತಿಪಾದಕರು. ಸರಕಾರ ಜಾರಿಗೆ ತರುವ ಯೋಜನೆಗಳಿಗೆ ಸಿದ್ದರಾಮಯ್ಯ ಛಾಪು ಬೀಳದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅವುಗಳಿಗೆ ಕಾಂಗ್ರೆಸ್ ಮೊಹರು ಬೀಳುವಂತೆ ಮಾಡುತ್ತಾರೆ ಎನ್ನುವ ಭಯ ಅವರದು.
 ಅದೇ ರೀತಿ ಎಚ್.ಕೆ. ಪಾಟೀಲ್ ಬಗ್ಗೆ ಹೈಕಮಾಂಡ್‌ಗೆ ವಿಶ್ವಾಸ ಮತ್ತು ಗೌರವವಿದೆ. ಅವರು ತಮ್ಮ ಕ್ಷೇತ್ರದಲ್ಲಿ ಜಾರಿಗೆ ತಂದಿರುವು ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಅವರನ್ನು 20 ದಿನಗಳ ಕಾಲ ರಾಯ್ ಬರೇಲಿಗೆ ಕರೆಸಿಕೊಂಡು ಅಲ್ಲಿಯೂ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಇಷ್ಟೆಲ್ಲ ಸಂಪರ್ಕ ಇರುವ, ಪ್ರಭಾವ ಹೊಂದಿರುವ ಪಾಟೀಲರು ಸಮಿತಿಯಲ್ಲಿದ್ದು, ತಮ್ಮ ಮೇಲೆ ನಿಯಂತ್ರಣ ಸಾಧಿಸಬಹುದು ಎನ್ನುವ ಭಾವನೆ ಸಿದ್ದರಾಮಯ್ಯ ಬೆಂಬಲಿಗರದ್ದು. ಹೀಗಾಗಿ ಅವರು ಸಮಿತಿಯಲ್ಲಿ ಇರಬಾರದು ಎಂದು ಅವರೆಲ್ಲ ಬಯಸಿದ್ದರು.
 ದೆಹಲಿಯಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆಡುತ್ತಿರುವ 'ತ್ರಿಮೂರ್ತಿ' ನಾಯಕರು ಸಮನ್ವಯ ಸಮಿತಿ ರಚನೆ ಹಂತದಲ್ಲೇ ಗೊಂದಲ ಸೃಷ್ಟಿಯಾಗುವಂತೆ ನೋಡಿಕೊಂಡಿದ್ದಾರೆ. ಪಕ್ಷದಿಂದ ಇಬ್ಬರು ಹಾಗೂ ಸರಕಾರದಿಂದ ಇಬ್ಬರು ಸಮಿತಿಯಲ್ಲಿ ಇರಬೇಕು ಎಂಬ ಬಗ್ಗೆ ಗೊಂದಲ ಈಗಲೂ ಮುಂದುವರಿದಿದೆ. ಗೊಂದಲ ಮುಂದುವರಿದಷ್ಟೂ ದಿನ ಸಿದ್ದರಾಮಯ್ಯ ಬೆಂಬಲಿಗರಿಗೆ ನೆಮ್ಮದಿ.
 ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರ. ಲೋಕಸಭೆ ಮರುಚುನಾವಣೆ ಮುಗಿಯುತ್ತಿದ್ದಂತೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಸಂಪುಟ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಉಹುಂ ಆಗಲಿಲ್ಲ. ಉಪಮುಖ್ಯಮಂತ್ರಿ ಸ್ಥಾನ ಬಯಸಿರುವ ಪರಮೇಶ್ವರ್‌ಗೆ ಅವಕಾಶ ಕೊಟ್ಟರೆ ಸಂಪ್ರದಾಯಕ್ಕೆ ಚ್ಯುತಿ ಬರುತ್ತದೆ. ಸೋತವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಕಾಂಗ್ರೆಸ್ ಸಂಪ್ರದಾಯ ಅಲ್ಲ. ಅವರಿಗೆ ಕ್ಷೇತ್ರವೇ ಇಲ್ಲ. ವಿಧಾನ ಪರಿಷತ್ ಸದಸ್ಯರಾಗಿ ಮಾಡೋಣವೆಂದರೆ ಡಿಸೆಂಬರ್‌ವರೆಗೂ ಅವಕಾಶವಿಲ್ಲ ಎಂಬ ವಾದಕ್ಕೆ ಹೈಕಮಾಂಡ್ ಕಿವಿಯಾಗಿದೆ.
 ಅದೇ ರೀತಿ ಲೋಕಸಭೆ ಉಪಚುನಾವಣೆಯಲ್ಲಿ ಸಹೋದರ ಡಿ.ಕೆ. ಸುರೇಶ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಆಮೇಲೆ ನನ್ನನ್ನು ಮಂತ್ರಿ ಮಾಡಿ ಎಂದಿದ್ದ ಡಿ.ಕೆ. ಶಿವಕುಮಾರ್ ಅವರಿಗೂ ಹೈಕಮಾಂಡ್ ಕೈ ಎತ್ತಿರುವುದರ ಹಿಂದೆ ಸಿದ್ದರಾಮಯ್ಯ ಅವರ 'ದಿಲ್ಲಿ ಪ್ರತಿನಿಧಿಗಳ ತಂಡದ' ಕೈಚಳಕ ಕೆಲಸ ಮಾಡಿದೆ. ಪ್ರಭಾವಿ ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಸರಕಾರದೊಳಗೆ 'ಭಿನ್ನಮತದ ಅಂಗಡಿ'ಗೆ ಪರವಾನಗಿ ಕೊಟ್ಟಂತಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕಳಂಕದ ಆಧಾರದ ಮೇಲೆ ಅವರನ್ನು ಸಂಪುಟದಿಂದ ಹೊರಗಿಡಲಾಗಿತ್ತು. ಈಗೇನಾದರೂ ಅವರಿಗೆ ಅವಕಾಶ ಕೊಟ್ಟರೆ, ಅವರಂತೆಯೇ ಕಳಂಕದ ನೆಪದ ಮೇಲೆ ಹೊರಗಿಟ್ಟಿರುವ ರಮೇಶ್ ಕುಮಾರ್, ರೋಷನ್ ಬೇಗ್ ಹಾಗೂ ಡಿ.ಪಿ. ಇನಾಂದಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಈ ಉಸಾಬರಿಯೇ ಬೇಡ. ಸುಖಾಸುಮ್ಮನೆ ಮೈಮೇಲೆ ಕಂಬಳಿ ಹುಳ ಬಿಟ್ಟುಕೊಂಡಂತೆ ಆಗುತ್ತದೆ ಎನ್ನುವ ವಾದಕ್ಕೂ ಕಿವಿ ಕೊಟ್ಟಿರುವ ಹೈಕಮಾಂಡ್ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದೆ.
 ಹೌದು,  ಈ ಎಲ್ಲ ಕಡೆ, ಹೈಕಮಾಂಡ್‌ನ ಈ ಎಲ್ಲ ನಿಲುವುಗಳ ಹಿಂದೆ ಸಿದ್ದರಾಮಯ್ಯ ಅವರ ಪ್ರಯತ್ನ ಹೆಚ್ಚು ಇಲ್ಲ. ಇವೆಲ್ಲವನ್ನು ಮಾಡಿರುವವರು 'ತ್ರಿಮೂರ್ತಿ'ಗಳೇ. ಸಿದ್ದರಾಮಯ್ಯ ಅವರ ಅದೃಷ್ಟದ ಪ್ರತೀಕವಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಬರೀ ಇಷ್ಟೇ ಅಲ್ಲ. ಸಮನ್ವಯ ಸಮಿತಿ ರಚನೆ ಆಗುವ ಮೊದಲೇ ಕೆಲವು ಆಯಕಟ್ಟಿನ ಜಾಗಗಳಿಗೆ ನೇಮಕ ಮಾಡಬೇಕು. ಅಂದರೆ ದಿಲ್ಲಿಯಲ್ಲಿ ರಾಜ್ಯ ಸರಕಾರದ ಪ್ರತಿನಿಧಿ, ರಾಜಕೀಯ ಕಾರ್ಯದರ್ಶಿ, ಪ್ರಮುಖ ಇಲಾಖೆಗಳ ಉನ್ನತ ಸ್ಥಾನಗಳು ಈ ಪರಿಧಿಯಲ್ಲಿವೆ. ಅದೇ ರೀತಿ ಕೆಪಿಸಿಸಿ, ಅಧ್ಯಕ್ಷರ ಪ್ರಭಾವ ಕೆಲಸ ಮಾಡುವ ನಿಗಮ. ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಲೋಕಸಭೆ, ಚುನಾವಣೆ ಮುಗಿಯುವವರೆಗೂ ಮಾಡಬಾರದು ಎನ್ನುವುದು ಸಿದ್ದರಾಮಯ್ಯನವರ ಬಯಕೆ. ಇಲ್ಲೂ ಕೂಡ ಅವರು ಸದ್ಯಕ್ಕೆ ಯಶಸ್ವಿಯಾಗಿದ್ದಾರೆ.
 ಇದರ ಮಧ್ಯೆ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವಣ ಅಂತರ ದಿನೇ ದಿನೇ ಹೆಚ್ಚುತ್ತಿದೆ. ಲೋಕಸಭೆ ಮರುಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಪರಮೇಶ್ವರ್, ಡಿ.ಕೆ. ಶಿವಕುಮಾರ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಸಚಿವ ಸ್ಥಾನಾಕಾಂಕ್ಷಿಗಳು ದಿಲ್ಲಿಗೆ ದೌಡಾಯಿಸಿದರು. ಆದರೆ 'ತ್ರಿಮೂರ್ತಿ'ಗಳ ಪ್ರಭಾವದಿಂದ ಸಂಪುಟ ವಿಸ್ತರಣೆ ಆಗುವುದಿಲ್ಲ ಎಂಬ ಸುಳಿವು ಸಿಗುತ್ತಿದ್ದಂತೆ ಬೆಂಗಳೂರಿಗೆ ಬಂದ ಪರಮೇಶ್ವರ್ ಖಾಸಗಿ ಕಾರಣಕ್ಕೆ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯನವರು ಸಂಪರ್ಕ ಸಾಧಿಸಲು ಯತ್ನಿಸಿದಾಗ 'ಜ್ವರ' ಎಂದು ಜಾರಿಕೊಂಡಿದ್ದಾರೆ. ಪರಮೇಶ್ವರ್ ಅಲ್ಲಿಂದ ಬರುವ ವೇಳೆಗೆ ಸಿದ್ದರಾಮಯ್ಯ ಚೀನಾ ಪ್ರವಾಸ ಕೈಗೊಳ್ಳುತ್ತಾರೆ.
 ಇದೆಲ್ಲ ಪಕ್ಕಕ್ಕಿರಲಿ. ಸದ್ಯಕ್ಕೆ ಸಿದ್ದರಾಮಯ್ಯನವರ ಅದೃಷ್ಟ ಚೆನ್ನಾಗಿದೆ. ಹೊರಗೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮುಂದೊಡ್ಡಿದ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಅರಗಿಸಿಕೊಂಡ ಸಿದ್ದರಾಮಯ್ಯನವರು ಇದೀಗ ಪಕ್ಷದ ಒಳಗೂ ಒಂದೊಂದಾಗಿ 'ಚಕ್ರವ್ಯೂಹ'ಗಳನ್ನು ಬೇಧಿಸಿಕೊಂಡು ಮುನ್ನಡೆದಿದ್ದಾರೆ. ಮೂಲ ಕಾಂಗ್ರೆಸ್ಸಿಗರು ಪ್ರಯೋಗಿಸುತ್ತಿರುವ ಸರ್ಪಾಸ್ತ್ರಗಳಿಗೆ ಅದೇ ಮೂಲ ಕಾಂಗ್ರೆಸ್ಸಿನ 'ತ್ರಿಮೂರ್ತಿ'ಗಳ ಗರುಡಾಸ್ತ್ರ ಪ್ರತ್ಯಸ್ತ್ರವಾಗಿದೆ. ಅದೃಷ್ಟ ಬೆನ್ನಿಗಿದ್ದರೆ ಬಂಡೆಯೂ ಹತ್ತಿಯ ಹಾಸಿಗೆ ಆಗುತ್ತದೆ ಎನ್ನುವುದು ಇದೇ ಇರಬಹುದು.

ಲಗೋರಿ: ಅದೃಷ್ಟ ಒಂದೇ ಅಲ್ಲ ದುರಾದೃಷ್ಟ ಕೂಡ ನಿರಾಯಾಸವಾಗಿ ಬರಬಹುದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com