ಅಂಕಣಗಳು

ಪೆರಿಯಾರ್ ತಮಿಳುನಾಡಿನಲ್ಲಿ ಬಿತ್ತಿದ ದ್ವೇಷ ಸಾಕು!

ಪೆರಿಯಾರ್ ತಮಿಳುನಾಡಿನಲ್ಲಿ ಬಿತ್ತಿದ ದ್ವೇಷ ಸಾಕು!
Published On :

18ನೇ ತಾರೀಕಿನ ಪುಟ 5 ರಲ್ಲಿ ಸುದ್ದಿಯೊಂದು ಪ್ರಕಟವಾಗಿತ್ತು. ಕರ್ನಾಟಕ 'ವಿಚಾರವಾದಿಗಳ ವೇದಿಕೆ' 'ಪೆರಿಯಾರ್‌' ಪ್ರಶಸ್ತಿ ಕೊಟ್ಟಿದೆ. ಮೊದಲನೆಯದಾಗಿ, ಆ ಪೆರಿಯಾರ್ ಎಂಬಾತ ಯಾರು? ಇ.ವಿ. ರಾಮಸ್ವಾಮಿ ನಾಯಕರ್ ಎಂಬ ತಮಿಳುನಾಡಿನಲ್ಲಿ ಹುಟ್ಟಿದ ಶ್ರೀಮಂತ ಕನ್ನಡಿಗ. ದ್ರಾವಿಡ ರಾಜಕೀಯದ ಅತ್ಯಂತ ಉನ್ನತ ಮಟ್ಟದ ಲಾಂಛನ. ಆದರೆ ಸ್ವಲ್ಪ ಒಳ ಹೊಕ್ಕು ಆತನ ಬಗ್ಗೆ ಓದಿದರೆ, ಅತಿ ಹೆಚ್ಚು ಜಾತಿ ದ್ವೇಷ, ಹಿಂದು ವಿರೋಧಿ ವಿಷ, ಮತ್ತು ಭಾರತ ವಿರೋಧಿ ಮನುಷ್ಯ ಎಂದು ತಿಳಿಯುತ್ತದೆ. ಈ ಮನುಷ್ಯನ ಜಾತಿ ದ್ವೇಷ ಎಷ್ಟು ಮಟ್ಟಕ್ಕೆ ಇತ್ತೆಂದರೆ, 'ಒಂದು ರಸ್ತೆಯಲ್ಲಿ ಒಬ್ಬ ಬ್ರಾಹ್ಮಣ ಮತ್ತು ಒಂದು ಸರ್ಪವನ್ನು ಕಂಡರೆ ಮೊದಲು ಆ ಬ್ರಾಹ್ಮಣನನ್ನು ಕೊಲ್ಲಿ' ಎಂದು ಹೇಳಿದ್ದ. ಈತ ಹಿಂದು ದೇವರ ಬಗ್ಗೆ ಉಪಯೋಗಿಸಿದ ಹೊಲಸು ಮತ್ತು ಹಿಂಸಾತ್ಮಕ ಭಾಷೆಯಂತೂ, ಅತಿ ನಿಂದನೀಯ. 1947, ಜುಲೈ 13ರಂದು ಪೆರಿಯಾರ್ ಅವರ ದ್ರಾವಿಡ ರಾಜಕೀಯ ಗುಂಪು, ಭಾರತದಿಂದ ಬೇರೆಯಾಗಿ ಒಂದು 'ದ್ರಾವಿಡ ನಾಡು' ಎಂಬ ದೇಶ ಬೇಕು ಎಂದು ಆಗ್ರಹ ಮಾಡಿತ್ತು. ಅದೃಷ್ಟವಶಾತ್, ಭಾರತವನ್ನು ಒಡೆದ ಮೊಹಮ್ಮದ್ ಅಲಿ ಜಿನ್ನಾ ಕೂಡ, ಈ ಪೆರಿಯಾರ್ ಗುಂಪಿಗೆ ಸಹಾಯ ಮಾಡಲು ನಿರಾಕರಿಸಿದ. ಜಾತಿ ದ್ವೇಷವನ್ನು ಮಹತ್ತರವಾಗಿ ಬಿತ್ತಿದ, ಭಾರತವನ್ನು ಒಡೆಯಲು ಪ್ರಯತ್ನಿಸಿದ ಪೆರಿಯಾರ್ ಎಂಬ ವ್ಯಕ್ತಿಯ ಹೆಸರಿನಲ್ಲಿ 'ವಿಚಾರ ವೇದಿಕೆ ಪ್ರಶಸ್ತಿ' ಕೊಡುತ್ತಾರೆ ಎಂಬುದು ಎಂಥ ದುಃಖದ ಸಂಗತಿ.
ಇನ್ನು, ಅಂಥ 'ವಿಚಾರ ವೇದಿಕೆ'ಯಲ್ಲಿ ಪ್ರಸ್ತಾಪವಾದ ಮುತ್ತುಗಳು 1) ಹಿಂದು ಧರ್ಮದಲ್ಲಿ ಎಂದಿಗೂ ಸಮಾನತೆ ದೊರೆಯುವುದು ಅಸಾಧ್ಯ 2) ಢುಂಢಿ ಕೃತಿ ನಮ್ಮಲ್ಲಿರುವ ಅವೈಜ್ಞಾನಿಕ ಚಿಂತನೆಗಳನ್ನು ಸಮಾಜಕ್ಕೆ ತೋರುವ ಪ್ರಯತ್ನ 3) ಪೂಜೆಯೇ ಕಾಯಕ ಎಂಬ ಪರಿಸ್ಥಿತಿ ಇದೆ 4) ಕೇದಾರನಾಥದಲ್ಲಿ ಜನರನ್ನು ರಕ್ಷಿಸಬೇಕಾದ ದೇವರುಗಳೇ ಪ್ರವಾಹದಲ್ಲಿ ಕೊಚ್ಚಿ ಹೋದರು! 5) ಸ್ವಾಮೀಜಿಗಳಿಗೆ ಪೂಜನೀಯ ಎಂದು ಹೇಳಲು ಮನಸ್ಸಾಗುತ್ತಿಲ್ಲ 6) ಕೋಮು ಗಲಭೆಯಿಂದ ಹೆಚ್ಚು ಜೀವಹಾನಿಯಾದ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ವಸುದೈವ ಕುಟುಂಬಕಂ ಎಂದು ಹೇಳುವ, ಪ್ರಪಂಚದ ಏಕೈಕ ಧರ್ಮ ನಮ್ಮದು. ನೀವು ಪಶ್ಚಿಮ ಏಷ್ಯಾದಲ್ಲಿ ಹುಟ್ಟಿದ ಮತಗಳನ್ನು ಒಮ್ಮೆ ನೋಡಿ. 'ನಮ್ಮ ಮಾರ್ಗದಲ್ಲಿ ನಡೆಯದಿದ್ದರೆ, ಘೋರ ನರಕ' ಎನ್ನುತ್ತಾರೆ. ಅದು ನಿಜವಾದ ಅಸಮಾನತೆಯ ಪ್ರತೀಕ. ಎಲ್ಲ ಪೂಜಾ ಮಾರ್ಗಗಳೂ ಒಂದೇ ಸತ್ಯದ ಕಡೆಗೆ ಹೋಗುತ್ತವೆ ಎಂದು ಹೇಳುವ ಹಿಂದು ಧರ್ಮ ಈ ಪೆರಿಯಾರ್ ಪ್ರಿಯರಿಗೆ ಅಸಮಾನತೆಯ ಧರ್ಮವಾಗಿ ಕಾಣಿಸಿತೇ?
ಆ ಢುಂಢಿ ಕೃತಿ ಅವೈಜ್ಞಾನಿಕ ಚಿಂತನೆಗಳನ್ನು ಸಮಾಜಕ್ಕೆ ತೋರುವ ಪ್ರಯತ್ನವೇ? ದಯವಿಟ್ಟು ಕೆಲವು ದಿನಗಳ ಹಿಂದೆ ಪ್ರಕಟವಾದ ಚಿದಾನಂದ ಮೂರ್ತಿ ಅವರ ಲೇಖನ ಓದಿ ಸ್ವಾಮಿ. ಅಂಥ ದ್ವೇಷಪೂರ್ಣ ಕಾದಂಬರಿಯನ್ನು ಬೇರೆ ಮತದ ಅಥವಾ ಕೋಮಿನ ಬಗ್ಗೆ ಬರೆದಿದ್ದರೆ, ಪರಿಸ್ಥಿತಿಯೇ ಬೇರೆ ಅಗುತ್ತಿತ್ತು.
ಇನ್ನು, ಪೂಜೆಯೇ ಕಾಯಕ ಎಂಬ ಬಗ್ಗೆ. ಪೂಜೆ ಮಾಡುವುದು ಮನಸ್ಸಿನ ಶುದ್ಧಿಗಾಗಿ. ಆತ್ಮ ಶುದ್ಧಿಗಾಗಿ. ಭಗವಂತನ ಸೇವೆ ಮಾಡಲಿಕ್ಕೆ. ನಮ್ಮ ಸಮಾಜ, ವಿವೇಕಾನಂದರು ಹೇಳಿದ ರೀತಿಯಲ್ಲಿ ನಡೆದರೆ ಅದ್ಭುತವಾಗಿ ಅಭಿವೃದ್ಧಿ ಅಗುತ್ತದೆ. 'ಹಸಿದ ಮನುಷ್ಯನಿಗೆ, ಅಧ್ಯಾತ್ಮ ಬೋಧನೆ ನಿರುಪಕಾರಿ' ಎನ್ನುತ್ತಾರೆ ವಿವೇಕಾನಂದರು.
ಇನ್ನು ಕೇದಾರನಾಥದ ಪ್ರವಾಹದ ಬಗ್ಗೆ. ಹಿಂದು ಪರಂಪರೆ ಮತ್ತು ಶಾಸ್ತ್ರದಲ್ಲಿ, ಕರ್ಮದ ಬಗ್ಗೆ ಅತಿ ಆಳವಾದ ಅಧ್ಯಯನ ನಡೆದಿದೆ. ಒಂದು ಬಾರಿ ಕೇದಾರನಾಥದ ಬಗ್ಗೆ ಹೇಳಿಕೆ ನೀಡಿದ ಮಹಾನುಭಾವರು, ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಕ್ರಿಯಾಮಯ ಕರ್ಮಗಳ ಬಗ್ಗೆ ಒಂದೆರಡು ಪುಟ ತಿರುವಿ ಹಾಕಲಿ ಎಂದು ಹಾರೈಕೆ. ಆ ಭಗವಾನ್ ಕೃಷ್ಣನಿಗೇ ಈ ಭೂಲೋಕದಲ್ಲಿ ಕರ್ಮದ ಬಂಧನದಿಂದ ಬಿಡುಗಡೆ ಇರಲಿಲ್ಲ. ಇನ್ನು ನಮ್ಮಂಥ ಹುಲು ಮಾನವರಿಗೆ? ಇನ್ನೊಂದು ಮಾತು. ನೈಸರ್ಗಿಕ ವಿಕೋಪಕ್ಕೆ, ಧರ್ಮ, ಭಾಷೆ ಅಥವಾ ದೇಶದ ಚಿಂತನೆ ಇಲ್ಲ. ಪ್ರಕೃತಿ ಮಾತೆ ಕೊಪಗೊಂಡಾಗ, ಎಲ್ಲರಿಗೂ ಒಂದೇ ಉತ್ತರ ಆಕೆಯಿಂದ!
ಇನ್ನು ಸ್ವಾಮೀಜಿಗಳಿಗೆ ಪೂಜನೀಯ ಎಂದು ಹೇಳಲು ಮನಸ್ಸಾಗುತ್ತಿಲ್ಲ ಎನ್ನುವ ಬಗ್ಗೆ. ಕರ್ನಾಟಕದಲ್ಲಿ, ಸಾವಿರಾರು ಮಠಗಳಿವೆ. ಸಾವಿರಾರು ವರ್ಷದ ನಮ್ಮ ಸಂಸ್ಕೃತಿ ಉಳಿದಿರುವುದೇ ಸ್ವಾಮಿಗಳಿಂದ, ಮಠಗಳಿಂದ, ಭಕ್ತರಿಂದ ಮತ್ತು ಅವರ ನಿಸ್ವಾರ್ಥ ಸೇವೆಯಿಂದ. ಪೆರಿಯಾರ್ ಅಂತಹ ಜಾತಿ ದ್ವೇಷ ಮಾಡಿದವರಿಂದಲ್ಲ. ಯಾರೋ ಒಂದಿಬ್ಬರು 'ಸ್ವಯಂಘೋಷಿತ' ಸ್ವಾಮಿಗಳಿಂದ ತಪ್ಪಾದರೆ ನಿಸ್ವಾರ್ಥ ಸೇವೆ ಮಾಡುವ ಸಾವಿರಾರು ಸ್ವಾಮೀಜಿಗಳಿಗೆ ದಯವಿಟ್ಟು ಅವಮಾನ ಮಾಡಬೇಡಿ.
ಕೋಮು ಗಲಭೆಯಿಂದ ಸತ್ತವರ ಸಂಖ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ ಎಂಬ ಬಗ್ಗೆ. ಈ ಅಂಕಿ ಸಂಖ್ಯೆ ಏನಾದ್ರು ಪೆರಿಯಾರ್ ಮುತ್ತಿನ ಪೆಟ್ಟಿಗೆಯಿಂದ ಸಿಕ್ಕಿದ್ದಾ? ಮಾತಾಡುವಾಗ ಸ್ವಲ್ಪ ಎಚ್ಚರಿಕೆ ಇರಲಿ 'ವಿಚಾರವೇದಿಕೆ' ಬಂಧುಗಳಿಗೆ. ಕೇಂದ್ರ ಗೃಹ ಮಂತ್ರಾಲಯದ ಅಂಕಿ ಸಂಖ್ಯೆಗಳ ಪ್ರಕಾರ, 2005 ಮತ್ತು 2013ರ ನಡುವಿನ ಕೋಮುಗಲಭೆಗಳಲ್ಲಿ  ಭಾರತದಲ್ಲಿ 1006 ಮಂದಿ ಮರಣ ಹೊಂದಿದ್ದಾರೆ. ಅದರಲ್ಲಿ 260  ಉತ್ತರ ಪ್ರದೇಶದಲ್ಲಿ (ಈ ತಿಂಗಳ ಗಲಭೆಗೆ ಮುಂಚೆ), ಮಧ್ಯ ಪ್ರದೇಶದಲ್ಲಿ 159 ಮತ್ತು  ಮಹಾರಾಷ್ಟ್ರದಲ್ಲಿ 134. ಕರ್ನಾಟಕ ಇವೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಶಾಂತಿಯುತ ರಾಜ್ಯ. ಯಾಕೆ ಸ್ವಾಮಿ ಇಂತಹ ಸುಳ್ಳು ಪ್ರಚಾರ ಮಾಡುತ್ತೀರಾ?
ಹಿಂದು ವಿರೋಧಿ, ಧರ್ಮ ವಿರೋಧಿ ವೇದಿಕೆಗಳಿಂದ ಸಮಾಜ ಒಡೆಯುತ್ತದೆ. ಜನರು ತಮಗಿಷ್ಟವಾದ ಸಂಪ್ರದಾಯ ಪಾಲಿಸಿ ಮುಂದುವರೆಯಲಿ ಬಿಡಿ. ಆ ಪೆರಿಯಾರ್ ತಮಿಳು ನಾಡಿನಲ್ಲಿ ಬಿತ್ತಿದ ದ್ವೇಷ ಸಾಕು. ನಮ್ಮ ರಾಜ್ಯಕ್ಕೆ ಯಾಕೆ ಅದನ್ನು ಆಮದು ಮಾಡುತ್ತಿದ್ದೀರ? ಶಾಂತಿ ಮಂತ್ರ ಒಮ್ಮೆ ಓದಿ, ನೆಮ್ಮದಿಯಾಗಿ ನಿದ್ದೆ ಮಾಡಿ!

- ಕಿರಣ್ ಕುಮಾರ್ ಎಸ್., ಬೆಂಗಳೂರು
kirankumars@hotmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.