ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ, ಬೇಡ ದಯಾಭಿಕ್ಷೆ
ದೆಹಲಿ ಅತ್ಯಾಚಾರ ಪ್ರಕರಣವನ್ನು 'ಅಪರೂಪದಲ್ಲಿ ಅಪರೂಪ'ದ ಪ್ರಕರಣವೆಂದು ದೆಹಲಿಯ ಸಾಕೇತ್ ನ್ಯಾಯಾಲಯ ತೀರ್ಪಿತ್ತಿದೆ. ಹತ್ಯಾಚಾರ ಎಸಗಿದ ಪಾತಕಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮೂಲಕ ಕಠಿಣ ಸಂದೇಶ ನೀಡಿರುವುದೇನೋ ಸರಿ. ಆದರೆ ಭಾರತದಲ್ಲಿ ಶಿಕ್ಷೆ ಪ್ರಕಟವಾದಾಗಿನಿಂದ ಶಿಕ್ಷೆಗೆ ಗುರಿಪಡಿಸುವವರೆಗಿನ ಸಮಯ ಸುಧೀರ್ಘವಾಗುತ್ತಿರುವುದೇ ವಿಪರ್ಯಾಸ. ಸಾವನ್ನು ಮುಂದೂಡಲೋ ಅಥವಾ ಸಾವಿನ ದವಡೆಯಿಂದ ಮುಕ್ತವಾಗಲೋ ಉಚ್ಚ ನ್ಯಾಯಾಲಯ, ಸವೋಚ್ಚ ನ್ಯಾಯಾಲಯ, ನಂತರ ಕ್ಷಮಾದಾನ ಹೀಗೆ ಸಾಕಷ್ಟು ಅವಕಾಶಗಳು ಪಾತಕಿಗಳ ಮುಂದಿವೆ. ದೇಶದ ಒಕ್ಕೊರಲಿನ ಆಕ್ರೋಶವನ್ನೂ, ಅಪರಾಧಿಗಳ ಪೈಶಾಚಿಕ ಕೃತ್ಯವನ್ನೂ ಗಮನಿಸಿ ಕೆಳ ನ್ಯಾಯಾಯಲದ ತೀರ್ಪನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೂ, ರಾಷ್ಟ್ರಪತಿಯವರ ಕ್ಷಮಾದಾನ ಪ್ರಕ್ರಿಯೆ ಹಲವು ವರ್ಷಗಳನ್ನೇ ತೆಗೆದುಕೊಳ್ಳುತ್ತದೆ. ಕೊನೆಯಲ್ಲಿ ಅಪರಾಧಿ ಮರಣದಂಡನೆಯ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಯೂ ಇರುತ್ತದೆ!
ಮರಣದಂಡನೆಯಂತಹ ಶಿಕ್ಷೆ ವಿಧಿಸಬೇಕಾದರೆ ಅದು ಅಪರೂಪದಲ್ಲಿ ಅಪರೂಪದ ಪ್ರಕರಣಗಳಿಗೆ ಮಾತ್ರ ಎಂದು 1983ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆನಂತರ ದೇಶದ ಎಲ್ಲಾ ನ್ಯಾಯಾಲಯಗಳೂ ಅಂತಹ ಪ್ರಕರಣಗಳಿಗೆ ಮಾತ್ರ ಗಲ್ಲುಶಿಕ್ಷೆ ವಿಧಿಸುತ್ತಾ ಬಂದಿವೆ. ದ್ವಂದ್ವವಿರುವುದೇ ಇಲ್ಲಿ. ನ್ಯಾಯಾಲಯಗಳೇ ಮರಣದಂಡನೆ ಶಿಕ್ಷೆ ವಿಧಿಸಿದ ಮೇಲೂ ಕ್ಷಮಾದಾನ ಕೋರುವ ಅವಕಾಶ ನೀಡುವುದೇಕೆ? ಕ್ಷಮಾದಾನದ ಮನವಿಯ ಪರಿಶೀಲನೆಯನ್ನು ವರ್ಷಗಳ ಕಾಲ ಮುಂದೂಡುತ್ತಿದ್ದರೆ ಪಾತಕಲೋಕಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುವುದಿಲ್ಲವೇ? ಮಾನವೀಯತೆಯ ಮುಖವಾಡದಲ್ಲಿ ಕ್ಷಮಾದಾನ ನೀಡಿಬಿಟ್ಟರೆ ನ್ಯಾಯಾಲಯದ ತೀರ್ಪಿಗೆ ಬೆಲೆ ನೀಡಿದಂತಾಗುವುದೆ ಅಥವಾ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿದಂತಾಗುವುದೆ? ಯಾವ ಯಾವ ಪ್ರಕರಣಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ನ್ಯಾಯಾಲಯ ಕೂಲಂಕಶವಾಗಿ ಪರಿಶೀಲಿಸಿ ತೀರ್ಪಿತ್ತ ನಂತರವೂ ಅಪರಾಧಿಗಳು ಗಲ್ಲುಶಿಕ್ಷೆಯಿಂದ ಪಾರಾದ ಅಥವಾ ಹಲವು ವರ್ಷಗಳ ತರುವಾಯ ಗಲ್ಲುಶಿಕ್ಷೆಗೆ ಗುರಿಯಾದ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ.
2008ರಲ್ಲಿ 163 ಜನರ ಸಾವಿಗೆ ಕಾರಣವಾದ ಅಜ್ಮಲ್ ಕಸಬ್ಗೆ ಗಲ್ಲುಶಿಕ್ಷೆಯಾಗಿದ್ದು ಐದು ವರ್ಷಗಳ ನಂತರ. 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿ ಪೊಲೀಸರ ಸಾವಿಗೂ, ಸಂಸತ್ತಿನ ಪಾವಿತ್ರ್ಯಕ್ಕೂ ಧಕ್ಕೆ ತಂದ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದು 2013ರಲ್ಲಿ. ಇವು ತೀರ್ಪಿತ್ತ ಸುಧೀರ್ಘ ಸಮಯದ ನಂತರ ಶಿಕ್ಷೆಗೆ ಗುರಿಯಾದ ಪ್ರಕರಣಗಳಾದರೆ, ನಿಕಟಪೂರ್ವ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್, 30 ಅಪರಾಧಿಗಳಿಗೆ ಗಲ್ಲುಶಿಕ್ಷೆ ತಪ್ಪಿಸಿದ್ದರು. ಅವರು ಕ್ಷಮಾದಾನ ನೀಡುವಾಗ ಅಪರಾಧಿಗಳ ಪೈಶಾಚಿಕ ಕೃತ್ಯಗಳನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಕ್ಷಮಾದಾನ ಪಡೆದವರೇನೂ ಸಾಮಾನ್ಯ ಅಪರಾಧವೆಸಗಿದವರಲ್ಲ. ಅತ್ಯಾಚಾರ, ಅಪಹರಣ, ಸಾಮೂಹಿಕ ಹತ್ಯೆ, ಮಹಿಳೆ-ಮಕ್ಕಳ ಹತ್ಯೆ ಇಂತಹ ಪೈಶಾಚಿಕ ಕೃತ್ಯಗಳ ಹಿನ್ನೆಲೆಯುಳ್ಳವರು. ಗರ್ಭಿಣಿ ನಾದಿನಿ ಮತ್ತು ಸೋದರ ಸೊಸೆಯನ್ನು ಕೊಲೆಗೈದಿದ್ದ ಜೈಕುಮಾರ್, 5 ಲಕ್ಷ ಹಣಕ್ಕಾಗಿ ಬಾಲಕನ ಅಪಹರಣ ಮಾಡಿ ಚಿತ್ರಹಿಂಸೆ ಮಾಡಿ ಕೊಲೆಗೈದ ಮೋಹನ್ ಮತ್ತು ಗೋಪಿ, ಕಾಳಿ ದೇವಿಯ ಪೂಜೆಗೆಂದು 9 ವರ್ಷದ ಬಾಲಕ ಮತ್ತು ತನ್ನ ಸೋದರನ ಶಿರಚ್ಛೇದ ಮಾಡಿದ ಸುಶೀಲ್ ಶರ್ಮ, ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆಗೈದ ಸಾಧು ಬಾಬುರಾವ್ ಸೇರಿದಂತೆ ಒಟ್ಟು ಮೂವತ್ತು ಜನ ನಿಷ್ಕರುಣಿಗಳಿಗೆ ಕ್ಷಮಾದಾನ ದೊರೆತಿತ್ತು. ಈ ಎಲ್ಲಾ ಪ್ರಕರಣಗಳನ್ನೂ ಅಪರೂಪದಲ್ಲಿ ಅಪರೂಪದ ಕೃತ್ಯಗಳೆಂದು ಹೇಳಿಯೇ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆದರೆ ಅವರಿಗೆಲ್ಲ ಸಲೀಸಾಗಿ ಕ್ಷಮಾದಾನ ದೊರೆಯಿತು.
ಇವರಿಗೆಲ್ಲ ಕ್ಷಮಾದಾನ ನೀಡಿದಾಗ ಅಷ್ಟೇನು ವಿರೋಧ ವ್ಯಕ್ತವಾಗಲಿಲ್ಲ. ಕಾರಣ ಅದಾಗಲೇ ಅವರು ಮಾಡಿದ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಿಂದ ದೂರವಾಗಿದ್ದವು. ಪ್ರತಿಭಾ ಪಾಟೀಲ್ ಅವರು ಅಪರಾಧ ಜರುಗಿದ ಸಮಯದಲ್ಲಿ ಅವರಿಗೆ ಕ್ಷಮಾದಾನ ನೀಡಿದ್ದರೆ ಭಾರೀ ವಿರೋಧವನ್ನೇ ಎದುರಿಸಬೇಕಾಗಿತ್ತು. ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ಹಲವು ವರ್ಷಗಳ ಕಳೆದ ನಂತರ ಕ್ಷಮಾದಾನದ ಅರ್ಜಿ ಪರಿಶೀಲನೆಗೆ ಬಂದು, ಶಿಕ್ಷೆಯಿಂದ ವಿನಾಯಿತಿಯೂ ದೊರೆಯಿತು. ಏಷಿಯನ್ ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಪ್ರಕಾರ ಅಪರೂಪದ ಪ್ರಕರಣಗಳೆಂದು ಪರಿಗಣಿಸಿ 2001ರಿಂದ 2011ರವರೆಗೆ ಸುಮಾರು 1400 ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಕ್ಷಮಾದಾನ, ಅಪರಾಧಿಗಳ ಪರವಾದ ಅಸ್ತ್ರವಾಗುತ್ತಿದೆಯೇ ಎಂಬ ಅನುಮಾನ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಕಾಡುತ್ತದೆ. ಶಿಕ್ಷೆ ನೀಡುವುದು ಅಪರಾಧಕ್ಕಾಗಿ ಮಾತ್ರವಲ್ಲ, ಮುಂದೆ ಅಪರಾಧಗಳಾಗದಂತೆ ಸಮಾಜಕ್ಕೆ ಎಚ್ಚರಿಕೆ ನೀಡಲೂ ಸಹ. ತಿಳಿಯದೇ ಮಾಡಿದ ತಪ್ಪುಗಳಿಗೆ ಕ್ಷಮಾದಾನ ನೀಡುವುದು ಮಾನವೀಯತೆಯ ದೃಷ್ಟಿಯಿಂದ.
ಪ್ರಾಚೀನ ಕಾಲದಲ್ಲಿ ಅತಿಕ್ರಮ ಪ್ರವೇಶ ಮಾಡುವ ಅಥವಾ ಸೈನ್ಯದ ನಿಯಮಗಳನ್ನು ಉಲ್ಲಂಘಿಸುವ ಸೈನಿಕರನ್ನು ಗಲ್ಲಿಗೇರಿಸುವ ಪರಿಪಾಠವಿತ್ತು. ಕ್ರಿ.ಪೂ. 403ರ ನಂತರ ರೋಮನ್ನರು ಗಲ್ಲುಶಿಕ್ಷೆಗೆ ವಿನಾಯಿತಿ ನೀಡುವುದನ್ನು ಆರಂಭಿಸಿದರು. ಇದೇ ಕ್ಷಮಾದಾನ ಸಂಪ್ರದಾಯಕ್ಕೆ ಬುನಾದಿ ಆಯಿತು. ಸೈನ್ಯದಲ್ಲಿದ್ದವರಿಗೆ ವಿಚಾರಣೆಯ ಮೂಲಕ ಕ್ಷಮಾದಾನ ನೀಡುತ್ತಿದ್ದರೆ, ಸಾರ್ವಜನಿಕ ಜೀವನದಲ್ಲಿದ್ದವರು ತಪ್ಪು ಮಾಡಿದಾಗ ಗಲ್ಲು ಶಿಕ್ಷೆ ವಿಧಿಸಬೇಕೆ ಬೇಡವೇ ಎಂದು 6000 ಪ್ರಜೆಗಳಿಂದ ಗುಪ್ತ ಮತದಾನದ ಮೂಲಕ ಅಭಿಪ್ರಾಯ ಕೇಳಲಾಗುತ್ತಿತ್ತು. ತದನಂತರವಷ್ಟೇ ಶಿಕ್ಷೆ ಜಾರಿಯಾಗುತ್ತಿತ್ತು. ಕಾಲಾನುಕ್ರಮದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮಹಾರಾಣಿ ದಯೆ ತೋರುವ ಸಂಪ್ರದಾಯ ಬೆಳೆಸಿಕೊಂಡರು. ಕ್ಷಮಾದಾನ ನೀಡುವ ಬಗ್ಗೆ 'ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ದ ಹೋಮ್ ಡಿಪಾರ್ಟ್ಮೆಂಟ್'ನಿಂದ ಸಲಹೆ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತಿದ್ದರು. ಬ್ರಿಟಿಷರು ಶತಮಾನಗಳಷ್ಟು ಕಾಲ ಭಾರತವನ್ನಾಳಿದುದರಿಂದ ಇಲ್ಲಿಯೂ ಕ್ಷಮಾದಾನ ನೆಲೆಯೂರಿತು. ಸ್ವಾತಂತ್ರ್ಯಾನಂತರ ಇಂಗ್ಲೆಂಡ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನಗಳಲ್ಲಿನ ಕ್ಷಮಾದಾನ ಪದ್ಧತಿಯನ್ನು ಅಧ್ಯಯನ ಮಾಡಿ, ಭಾರತದ ಒಕ್ಕೂಟ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಸಂವಿಧಾನದ 72 ಮತ್ತು 161ನೇ ಅನುಚ್ಛೇದಗಳಲ್ಲಿ ಅಳವಡಿಸಲಾಗಿದೆ. ನ್ಯಾಯಾಲಯ ನೀಡುವ ಗಲ್ಲುಶಿಕ್ಷೆಯನ್ನು ಮಾಫಿ ಮಾಡಬೇಕಾಗಿ ಅಥವಾ ಶಿಕ್ಷೆ ಕಡಿತಗೊಳಿಸಬೇಕಾಗಿ ಅಪರಾಧಿಯು ಮನವಿ ಸಲ್ಲಿಸಬಹುದಾಗಿದೆ. ಗೃಹ ಇಲಾಖೆಯ ವರದಿಯ ಮೇರೆಗೆ ಕ್ಯಾಬಿನೆಟ್, ಗಲ್ಲು ಶಿಕ್ಷೆ ನೀಡಲು ಅಥವಾ ಮಾಫಿ ಮಾಡಲು ಸಕಾರಣಗಳೊಂದಿಗೆ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸುತ್ತದೆ. ತದನಂತರ ರಾಷ್ಟ್ರಪತಿ ತಮ್ಮ ವಿವೇಚನೆಯಂತೆ ತೀರ್ಮಾನ ಕೈಗೊಳ್ಳಬಹುದಾಗಿದೆ.
1995ರಲ್ಲಿ ಸೇಲಂನ ಆಟೋ ಶಂಕರ್ ಮತ್ತು 2004ರಲ್ಲಿ ಧನಂಜಯ ಚಟರ್ಜಿಯ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡು ನೇಣಿಗೇರಿಸುವಾಗ ತೀವ್ರ ಸಾರ್ವಜನಿಕ ಚರ್ಚೆಗಳಾದವು. 9 ಜನರನ್ನು ಕೊಂದಿದ್ದ ಕಾಲಿಸ್ತಾನ್ ಲಿಬರೇಷನ್ ಫೋರ್ಸ್ನ ದೇವಿಂದರ್ ಸಿಂಗ್, 1993ರಲ್ಲಿ 21 ಜನ ಪೋಲಿಸರನ್ನು ಕೊಂದಿದ್ದ ವೀರಪ್ಪನ್ನ ನಾಲ್ಕು ಜನ ಸಹಚರರು, ಮಂಗಳೂರಿನಲ್ಲಿ ತನ್ನ ಕುಟುಂಬದವರನ್ನೇ ಕೊಂದ ಪ್ರವೀಣ್ ಕುಮಾರ್ ಸೇರಿದಂತೆ ಅನೇಕರ ಕ್ಷಮಾದಾನ ಅರ್ಜಿಗಳು ಮುಕ್ತಿಗಾಗಿ ಕಾದುಕುಳಿತಿವೆ.
1981ರಿಂದ ಇಲ್ಲಿಯವರೆಗೆ 90ಕ್ಕೂ ಹೆಚ್ಚು ಅರ್ಜಿಗಳು ಕ್ಷಮಾದಾನ ಕೋರಿಕೆಗೆ ಸಲ್ಲಿಕೆಯಾಗಿವೆ. ಶಂಕರ್ ದಯಾಳ್ ಶರ್ಮ ರಾಷ್ಟ್ರಪತಿಯಾಗಿದ್ದಾಗ ಸಲ್ಲಿಕೆಯಾದ 14 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದರು. ಕೆ.ಆರ್.ನಾರಾಯಣನ್ 10ರಲ್ಲಿ ಒಬ್ಬರಿಗೆ ಮಾತ್ರ ಕ್ಷಮಾದಾನ ನೀಡಿದ್ದರು. ನಂತರ ಅಬ್ದುಲ್ ಕಲಾಂ ಅವರಿಗೆ ಸಲ್ಲಿಕೆಯಾದ 25 ಮನವಿಗಳಲ್ಲಿ ಒಬ್ಬರಿಗೆ ಮಾತ್ರ ಕ್ಷಮಾದಾನ ನೀಡಿದ್ದರು. ಅತಿ ಹೆಚ್ಚು ಅಂದರೆ 35 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದು ಪ್ರತಿಭಾ ಪಾಟೀಲ್ ಒಬ್ಬರೆ. ಕ್ಷಮಾದಾನ ನೀಡಿರುವ 35 ಜನರಿಂದ ಹತ್ಯೆಗೊಳಗಾದವರಲ್ಲಿ 22 ಮಕ್ಕಳು ಮತ್ತು ಮಹಿಳೆಯರಿದ್ದರು.
ಮಾನವೀಯತೆಯ ದೃಷ್ಟಿಯಿಂದ ಮರಣ ದಂಡನೆ ಸರಿಯಲ್ಲದಿದ್ದರೂ, ಶಿಕ್ಷೆಗೆ ಗುರಿಯಾದವರು ಎಸಗಿದ ತಪ್ಪುಗಳು ಕ್ಷಮೆಗಂತೂ ಅರ್ಹವಲ್ಲ. ಸಮಾಜಘಾತುಕ ಘಟನೆಗಳು ಜನರ ಮನಸ್ಸಿನಲ್ಲಿರುವಾಗಲೇ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದರೆ ಮನಸೋ ಇಚ್ಛೆ ವರ್ತಿಸುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಮೇಲ್ಮನವಿ, ಕ್ಷಮಾದಾನ ಎಂದು ಹೀಗೆ ಅಪರಾಧಿಗಳಿಗೆ ಕಾಲದೂಡಲು ಅವಕಾಶ ಮಾಡಿಕೊಡುತ್ತಿದ್ದರೆ, ಕಾನೂನಿನ ಮೇಲೆ ಗೌರವವಾಗಲಿ, ಶಿಕ್ಷೆಯ ಭಯವಾಗಲಿ ಇಲ್ಲವಾಗುತ್ತದೆ. ಹಾಗಾಗೇ ಈ ಸಮಯದಲ್ಲೇ ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಿದರೆ ತೀರ್ಪಿಗೂ ಒಂದು ಬೆಲೆ ಬಂದಂತಾಗುತ್ತದೆ. ಇಲ್ಲವಾದಲ್ಲಿ ಮುಂದೊಂದು ದಿನ ಈ ಪಾತಕಿಗಳೂ ಕ್ಷಮಾದಾನಕ್ಕೆ ಅರ್ಹರೆನಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
- ಗೋಪಾಲಕೃಷ್ಣ. ಸಿ
gkckm31@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

