ಬದಲಾಗಬೇಕಿದೆ ದೋಷದರ್ಶಿಯಾಗಿ ಉಳಿದ ಬದುಕು!
ಸುಮಾರು ಎರಡು ವರ್ಷ ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಒಂದು ವಿಷಯವನ್ನು ಅರ್ಥ ಮಾಡಿಕೊಂಡೆ. ಸರ್ಕಾರ ಎಷ್ಟು ಒಳ್ಳೆಯ ಯೋಜನೆಗಳನ್ನು ತಂದಿದ್ದರೂ ಸಹ ಸಿಬ್ಬಂದಿಗಳು ಹಾಗೂ ನಾಗರಿಕರು ಅದನ್ನು ಅರಿತುಕೊಳ್ಳದೆ ಹೋದರೆ ಜನರ ಜೀವನದ ಗುಣಮಟ್ಟದಲ್ಲಿ ನಿರ್ಧಾರಿತ ಪರಿಣಾಮ ಉಂಟಾಗುವುದಿಲ್ಲ. ಪ್ರತಿವರ್ಷ ಕೊಟ್ಯಂತರ ರುಪಾಯಿ ಖರ್ಚು ಮಾಡುತ್ತಿರುವಾಗ ಅಪೇಕ್ಷಿತ ಪರಿಣಾಮ ದೊರಕದಿದ್ದರೆ ನಿಜವಾಗಿ ಸಮಾಧಾನ ಸಿಗುವುದಿಲ್ಲ.
ಆ ಸಮಯದಲ್ಲಿ ನಾನು ರಾತ್ರಿ ಮಲಗಿ ಕಣ್ಣು ಮುಚ್ಚಿದರೆ ಸಾಕು, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಆ್ಯಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯ, ಈ ರೀತಿ ಹಲವಾರು ಮಹಿಳೆಯರ ಸಮಸ್ಯೆಗಳ ಚಿತ್ರಗಳು ಮನಸ್ಸಿನ ಪರದೆಯ ಮೇಲೆ ಹಾದು ಹೋಗುತ್ತಿದ್ದವು. ನನ್ನ ಅಂತಃಸಾಕ್ಷಿ ಪದೇ ಪದೇ ನನ್ನನ್ನು ಮಾಡಬೇಕಾದ ಕೆಲಸಗಳ ಬಗ್ಗೆ ಎಚ್ಚರಿಸುತ್ತಿತ್ತು.
ಹಾಗಾಗಿ ಸರ್ಕಾರಿ ಯೋಜನೆಗಳ ಪರಿಚಯ ನಗರ ಮತ್ತು ಹಳ್ಳಿಗಳಲ್ಲಿ ಎಲ್ಲ ವರ್ಗದ ಮಹಿಳೆಯರಿಗೆ ಇದೆಯೇ ಎಂದು ತಿಳಿಯಲು ನಿರ್ಧರಿಸಿದೆ. ಅಂತೆಯೇ ಒಂದು ಸಮೀಕ್ಷೆಯನ್ನು ನಡೆಸಿದೆ. ನನಗೆ ತಿಳಿದು ಬಂದ ಮಾಹಿತಿಯ ಪ್ರಕಾರ ಶೇಕಡಾ ಮೂವತ್ತಕ್ಕೂ ಕಡಿಮೆ ಪ್ರಮಾಣದಲ್ಲಿ ಮಹಿಳೆಯರಿಗೆ ಯೋಜನೆಗಳ ಅರಿವು ಇತ್ತು. ಆದುದರಿಂದ ಮೂಲಭೂತವಾಗಿ ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಅರಿವು ಮೂಡಿಸುವುದು ನನ್ನ ಮೊದಲ ಆದ್ಯತೆ ಎಂದು ನಿರ್ಧರಿಸಿದೆ. ವಿಷಯಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹಳ ಹಿರಿದು. ಒಂದು ದಿನ ಪತ್ರಿಕೆ, ಒಂದು ರೇಡಿಯೋ/ ಟಿ.ವಿ. ಕಾರ್ಯಕ್ರಮ, ಲಕ್ಷಾಂತರ ಜನರಿಗೆ ಏಕಕಾಲದಲ್ಲಿ ತಲುಪುವುದರಿಂದ ವಿಷಯ ವಿನಿಮಯ ಸುಲಭವಾಗುತ್ತದೆ.
ಈ ಬಗ್ಗೆ ನಮ್ಮ ವಾರ್ತಾ ಮತ್ತು ಪ್ರಚಾರ ಇಲಾಖೆಯನ್ನು ಸಂಪರ್ಕಿಸಿ ಒಂದು ಬೃಹತ್ ಪ್ರಚಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಕೋರಿದೆ. ಅವರು ಸರ್ಕಾರದ ಪರವಾಗಿ ಮಾಧ್ಯಮ ಮಿತ್ರರನ್ನೆಲ್ಲಾ ಸಂಪರ್ಕಿಸಿ ಅವರಿಂದ ಯಾವ ರೀತಿ ಸಹಾಯ ದೊರಕಬಹುದು ಎಂದು ವಿಶ್ಲೇಷಿಸಿದರು. ಮಾಧ್ಯಮದಲ್ಲಿ ಒಂದು ಜಾಹೀರಾತನ್ನು ಕೊಡಬೇಕೆಂದರೆ ಲಕ್ಷಾಂತರ ರುಪಾಯಿ ಬೇಕು. ಅಷ್ಟು ಹಣ ನಮ್ಮ ಯೋಜನೆಯಲ್ಲಿ ಇರುವುದಿಲ್ಲ. ಆಗ ನಾನು ವೈಯುಕ್ತಿಕವಾಗಿ ಮಾಧ್ಯಮದ ಕೆಲವು ಮುಖ್ಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಅವರಿಗೆ ನಮ್ಮ ಸಮಾಜದಲ್ಲಿ ಇರುವ ಗಂಭೀರ ಪರಿಸ್ಥಿತಿಗಳ ಬಗ್ಗೆ ಅಂಕಿ ಅಂಶಗಳನ್ನು ತೋರಿಸಿ ಮನವೊಲಿಸಿದೆ. ಖಾಸಗಿ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯ ಮಾದರಿಯಲ್ಲಿ ಮಾಧ್ಯಮ ಮಿತ್ರರು ಎಲ್ಲ ರೀತಿಯ ಪ್ರಚಾರಕ್ಕೂ ಉತ್ತಮ ಸಹಕಾರದೊಂದಿಗೆ ಶೇಕಡಾ ಹದಿನೈದರಷ್ಟು ದರದಲ್ಲಿ ಮಾತ್ರ ಪ್ರಚಾರ ಕೊಡುವುದಾಗಿ ಆಶ್ವಾಸನೆಯನ್ನಿತ್ತರು. ವಿಶೇಷವಾಗಿ ದಿನ ಪತ್ರಿಕೆಗಳಲ್ಲಿ ಪ್ರತಿ ದಿನ ಮೊದಲ ಪುಟದ ಕೆಳಗಿನ ಭಾಗದಲ್ಲಿ ಅಂಕಿ ಅಂಶಗಳ ಮೂಲಕ ಮಹಿಳೆಯರು, ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಎದುರಿಸುವ ಸಮಸ್ಯೆಗಳು ಹಾಗೂ ಅವರಿಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಪ್ರತಿಯೊಬ್ಬ ಸಾಮಾನ್ಯ ನಾಗರಿಕ ಯಾವ ರೀತಿ ಈ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ವಿಷಯದ ಬಗ್ಗೆ ಪ್ರೇರಣೆ ನೀಡುವುದು ಎಂದು ನಿರ್ಧರಿಸಲಾಯಿತು. ಏಕೆಂದರೆ ಮಾಹಿತಿ ಯಾರಿಗೆ ಅವಶ್ಯಕವೋ ಅವರು ಈ ಪತ್ರಿಕೆಗಳನ್ನು ಓದುವುದಿಲ್ಲ. ಓದಿದವರು ಈ ಬಗ್ಗೆ ಎಲ್ಲಾ ಗೊತ್ತಿದ್ದರೂ ಏನೂ ಮಾಡುವುದಿಲ್ಲ. ಎಲ್ಲವನ್ನೂ ಸರ್ಕಾರ ಮಾಡಲಿ ಎಂಬ ಭಾವನೆ ಇದ್ದರೆ ಸಮಾಜದಲ್ಲಿ ಬದಲಾವಣೆ ಆಗುವುದಿಲ್ಲ. ಉದಾಹರಣೆಗೆ ಒಂದು ಮಗು ಭಿಕ್ಷೆ ಬೇಡುತ್ತಾ ಇರುವುದು ವಾಹನ ಸಂಚಾರದ ಸಿಗ್ನಲ್ಲುಗಳಲ್ಲಿ ತಮಗೆ ಕಂಡರೆ ತಾವು ಕೇವಲ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ತಿಳಿಸಬೇಕು ಅಷ್ಟೆ. ಉಳಿದ ಕೆಲಸ, ಅಂದರೆ ಮಗುವನ್ನು ರಕ್ಷಿಸಿ, ಬಾಲ ಮಂದಿರಕ್ಕೆ ಕರೆದುಕೊಂಡು ಹೋಗುವುದು ಸರ್ಕಾರ ಹಾಗೂ ಸರ್ಕಾರದ ಸಹಯೋಗಿ ಸಂಸ್ಥೆಗಳು ಮಾಡುವ ಕೆಲಸ. ತಮ್ಮ ಸಹಾಯದಿಂದ ಈ ಒಳ್ಳೆಯ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಅದೇ ರೀತಿ ಯಾರಾದರೂ ಮಹಿಳೆಯ ಮೇಲೆ ಅತ್ಯಾಚಾರ ಅಥವಾ ಶೋಷಣೆ ಆಗುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ ಮಹಿಳಾ ಸಹಾಯವಾಣಿ 1092 ಅನ್ನು ಸಂಪರ್ಕಿಸಬೇಕು. ಆ ಭಾಗದ ಸರ್ಕಾರೇತರ ಸಂಸ್ಥೆಗಳ ಮೂಲಕ ಆಗ ರಕ್ಷಣೆ ದೊರಕಿಸುವ ಕೆಲಸವಾಗುತ್ತದೆ. ಬಹಳಷ್ಟು ಸಲ ಸಮಾಜದಲ್ಲಿ ಶೋಷಣೆಗಳು ನಡೆಯುವುದನ್ನು ನಾವು ಗಮನಿಸುತ್ತೇವೆ, ಏನಾದರೂ ಮಾಡಬೇಕು ಎಂದು ಅನಿಸುತ್ತದೆ, ಆದರೆ ಹೇಗೆ ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಇದರಲ್ಲಿ ಸಿಕ್ಕಿಹಾಕಿಕೊಳ್ಳಲು ನಮ್ಮ ಹತ್ತಿರ ಸಮಯವೂ ಇರುವುದಿಲ್ಲ. ಹಾಗಾಗೇ ಇಂಥ ಸರಳ ವಿಧಾನಗಳನ್ನು ಅನುಸರಿಸಿ, ನಮ್ಮ ಜವಾಬ್ದಾರಿಯನ್ನು ನಿಭಾಯಿಸಿದರೆ ದುಷ್ಕರ್ಮಿಗಳನ್ನು ಉತ್ತಮ ನಾಗರಿಕ ಸಮಾಜದಿಂದ ಓಡಿಸಿ, ಜೈಲಿಗೆ ಕಳುಹಿಸಬಹುದು. ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಕಾನೂನಿನ ಸಹಾಯ ಪಡೆಯಬಹುದು. ಆಗ ಸಮಾಜದ ಪಿಡುಗುಗಳ ಬಗ್ಗೆ ಗೊಣಗುತ್ತಾ ಕೇವಲ ದೋಷದರ್ಶಿಗಳಾಗಿ ಬದುಕ ಬೇಕಾಗುವುದಿಲ್ಲ.
ಈಗ ಬಹಳ ಮುಖ್ಯವಾದ ಕೆಲಸ ನನ್ನ ಮುಂದಿತ್ತು. ಪ್ರಚಾರಕ್ಕೆ ಹೂಡಿದ ಹಣ ಸದುಪಯೋಗವಾಗಬೇಕು. ಯಾವ ಯಾವ ರೀತಿಯಲ್ಲಿ ಪ್ರಚಾರವನ್ನು ಹಮ್ಮಿಕೊಂಡರೆ ಹಳ್ಳಿ ಮತ್ತು ನಗರ, ಎರಡರಲ್ಲೂ ಉಪಯೋಗವಾಗುತ್ತದೆ ಎಂಬುದನ್ನು ರೂಪಿಸಲು ವಾರಗಟ್ಟಲೆ ತಲೆ ಕೆಡಿಸಿಕೊಂಡು, ಹಲವಾರು ನಿಪುಣರ ಜೊತೆ ಚರ್ಚಿಸಿ, ಸಂಬಂಧಪಟ್ಟ ಅಧಿಕಾರಿಗಳು, ಸಂಘ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಿ, ಈ ಕೆಳ ಕಂಡ ನಿರ್ಧಾರಕ್ಕೆ ಬಂದೆ.
ಟಿ ಪತ್ರಿಕೆ, ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಸಲಕರಣೆಗಳನ್ನು ಬಳಸಿ ಸಾಮಾಜಿಕ ಪಿಡುಗುಗಳಾದ ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ಅಪೌಷ್ಟಿಕತೆಯ ತೊಂದರೆಗಳು, ಹುಟ್ಟಿದ ಮಗುವಿನ ಆರೈಕೆ, ಹುಟ್ಟಿದ ಮಗುವಿಗೆ ಹಾಲುಣಿಸುವುದು ಹೇಗೆ, ಗರ್ಭಿಣಿ ಮತ್ತು ಬಾಣಂತಿಯರ ಆರೈಕೆ, ಪೌಷ್ಟಿಕ ಆಹಾರದ ಮಹತ್ವ, ಬೆಳೆಯುತ್ತಿರುವ ಹೆಣ್ಣು ಮಕ್ಕಳು ತಿಳಿದುಕೊಳ್ಳಬೇಕಾದ ಆರೋಗ್ಯ ಮತ್ತು ನೈರ್ಮಲ್ಯದ ವಿಷಯಗಳು, ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳ ಪ್ರಾಮುಖ್ಯ, ಹೆಣ್ಣು ಮಗುವನ್ನು ದೇವದಾಸಿ ಪದ್ಧತಿಗೆ ದೂಡುವುದು, ಮಹಿಳೆಯರ ಮೇಲಿನ ದೌರ್ಜನ್ಯ, ಅಂಗವಿಕಲತೆಯನ್ನು ಗುರುತಿಸುವ ಬಗೆ, ಏಡ್ಸ್ಬಗ್ಗೆ ಮಾಹಿತಿ, ಮುಂತಾದವುಗಳ ಬಗ್ಗೆ ಅರಿವು ಮೂಡಿಸುವುದು.
-ಇಂಥಹ ವಿಷಯಗಳ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿ ಅಂಗನವಾಡಿ ಕೇಂದ್ರಗಳಲ್ಲಿ, ಸಮುದಾಯ ಭವನಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಮತ್ತಿತರ ಶೈಕ್ಷಣಿಕ ಸ್ಥಳಗಳಲ್ಲಿ, ಅಂಗನವಾಡಿ ಮೇಲ್ವಿಚಾರಕರ ಮೂಲಕ ಕಡೇ ಪಕ್ಷ ತಿಂಗಳಿಗೆ ಒಮ್ಮೆಯಾದರೂ ಪ್ರದರ್ಶನ ಮಾಡುವುದು.
- ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಮುದ್ರಿಸಿ, ಎಲ್ಲಾ ಜನಪ್ರತಿನಿಧಿಗಳ ಕಚೇರಿಗಳಿಗೆ, ಎಲ್ಲಾ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಕಚೇರಿಗಳಿಗೆ, ಶಾಲೆಗಳಲ್ಲಿ ಒಂಭತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಇಂಜಿನಿಯರಿಂಗ್ ಮತ್ತಿತರ ಕಾಲೇಜುಗಳಿಗೆ, ಯಾವುದೇ ಪ್ರದರ್ಶನಗಳು ನಡೆಯುತ್ತಿದ್ದರೆ ಆ ಸ್ಥಳಗಳಲ್ಲಿ ಹಂಚುವುದು.
- ಈ ವಿಷಯಗಳ ಬಗ್ಗೆ ದೊಡ್ಡ ದೊಡ್ಡ ಭಿತ್ತಿ ಪತ್ರಗಳನ್ನು ಮುದ್ರಿಸಿ, ಅಂಗನವಾಡಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಸಮುದಾಯ ಭವನಗಳಲ್ಲಿ, ಪ್ರದರ್ಶನ ನಡೆಯುವ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಜನಸಂಚಾರವಿರುವ ಸ್ಥಳಗಳನ್ನು ಗಮನಿಸಿ ಪ್ರದರ್ಶಿಸುವುದು. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಮುದಾಯಗಳಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಮಾಹಿತಿ ನೀಡುವುದು.
- ಶಾಲಾ ಕಾಲೇಜುಗಳಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ, ಪ್ರದರ್ಶನ, ನಾಟಕ, ಮುಂತಾದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡು, ವಿಜೇತರಿಗೆ ಬಹುಮಾನ ವಿತರಿಸುವುದು.
- ಹಳ್ಳಿಗಳಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೌಷ್ಟಿಕ ಆಹಾರ, ಮಕ್ಕಳ ಆರೈಕೆ, ಮುಂತಾದ ವಿಷಯಗಳ ಬಗ್ಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ನಡೆಸುವುದು.
-ಪ್ರತಿ ಗ್ರಾಮ ಪಂಚಾಯತಿ ಸಭೆಗಳಲ್ಲೂ ಕಡ್ಡಾಯವಾಗಿ ಈ ವಿಷಯಗಳ ಬಗ್ಗೆ ಚರ್ಚಿಸುವುದು.
ರೇಡಿಯೋಗಳಲ್ಲಿ ಚರ್ಚೆ, ನಾಟಕ, ಹಾಡುಗಳನ್ನು ಏರ್ಪಡಿಸುವುದು. ಕಲಾವಿದರ ಸಹಕಾರದೊಂದಿಗೆ ಬೀದಿ ನಾಟಕಗಳನ್ನು ಆಡಿಸುವುದು. ಟಿ.ವಿ. ಮಾಧ್ಯಮಗಳಲ್ಲಿ ಚರ್ಚೆಗಳ ಮೂಲಕ ಮಾಹಿತಿ ನೀಡುವುದು. ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೊದಲು ಸಂಬಂಧಪಟ್ಟ ಸಿಬ್ಬಂದಿಗಳಿಗೆ ಮಾನಸಿಕ ತಯಾರಿ ನೀಡಬೇಕಾಗುತ್ತದೆ. ಈ ಕೆಲಸಗಳೆಲ್ಲಾ ಅವರು ನಿಯಮಿತವಾಗಿ ಮಾಡುವ ಕೆಲಸಗಳಿಗಿಂತ ಹೆಚ್ಚು ಸಮಯವನ್ನು ಕೊಟ್ಟು, ಉತ್ಸಾಹ ಮತ್ತು ಉತ್ತಮ ಮನೋಭಾವವನ್ನು ಹೊಂದಿ ಮಾಡಬೇಕಾಗಿತ್ತು. ಯಾವ ಹಂತದಲ್ಲೂ ಉತ್ಸಾಹ ಕುಗ್ಗಬಾರದು. ಇದು ಬಹು ದೊಡ್ಡ ಸವಾಲು.
ಸುಮಾರು ಒಂದು ತಿಂಗಳ ಕಾಲ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಯಿತು. ನಂತರದ ದಿನಗಳಲ್ಲಿ ಪ್ರಚಾರದ ಪ್ರಭಾವದ ಬಗ್ಗೆ ಸಮೀಕ್ಷೆ ನಡೆಸಿದಾಗ ವಿಷಯಗಳು ಶೇಕಡಾ ಎಂಭತ್ತೈದು ಪ್ರಮಾಣದಲ್ಲಿ ಜನರಿಗೆ ತಲುಪಿದುದು ಕಂಡು ಬಂದಿತು. ಸಾರ್ಥಕ ಭಾವ ಮನದಲ್ಲಿ ಮೂಡಿತು. ಈ ಲೇಖನದ ಮೂಲಕ ದಿನ ಪತ್ರಿಕೆ, ಶ್ರವ್ಯ ಮತ್ತು ದೃಶ್ಯ ಮಾಧ್ಯಮದ ಮಿತ್ರರಿಗೆ ನಾನು ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ. ಎಲ್ಲಾ ಒಳ್ಳೆಯ ಕೆಲಸಗಳಿಗೆ ಅವರುಗಳು ಬೆನ್ನೆಲುಬಾಗಿ ನಿಂತು ಸಹಕಾರವನ್ನು ನೀಡಿದ್ದಾರೆ. ಸಮಾಜದಲ್ಲಿ ಉತ್ತಮ ಶಕ್ತಿಗಳು ಒಂದುಗೂಡಿದರೆ ದುಷ್ಟ ಶಕ್ತಿಗಳನ್ನು ಸುಲಭವಾಗಿ ಬಗ್ಗು ಬಡಿಯಬಹುದು. ಅಲ್ಲವೇ?
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

