ಅಂಕಣಗಳು

ಸ್ವಚ್ಛತೆಗೆ ತಂತ್ರಜ್ಞಾನ ಅಳವಡಿಕೆಗೆ ಚೌಕಾಶಿಯಿಲ್ಲ

Published On :

ತಮ್ಮ ತವರೂರಾದ ಹುಲಕೋಟಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸುವ ಮೂಲಕ ಮಾದರಿಯೆನಿಸಿಕೊಂಡ ಎಚ್. ಕೆ. ಪಾಟೀಲರ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಇರುವುದು ಜನರು ಅಭಿವೃದ್ಧಿಯ ಬಗ್ಗೆ ಭರವಸೆ ಇಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ. ಶೌಚಾಲಯ ಸಮಸ್ಯೆ, ಕುಡಿಯುವ ನೀರಿನ ತೊಂದರೆಗಳನ್ನು ನೀಗಿಸಿ ನೈರ್ಮಲ್ಯ ಕಾಪಾಡುವುದೇ ತಮ್ಮ ಆದ್ಯತೆ ಎಂದಿರುವ ಅವರು, ಆ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಯೋಜನೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

*     ಬಯಲು ಮಲ ವಿಸರ್ಜನೆ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ?
ಬಯಲು ಬಹಿರ್ದೆಸೆ ಸಮಾಜದ ಅಗೌರವದ ಸಮಸ್ಯೆಯಾಗಿದೆ. ಬಯಲು ಬಹಿರ್ದೆಸೆ ಮುಕ್ತಗೊಳಿಸಬೇಕು ಎಂದಾದರೆ ಕುಟುಂಬಕ್ಕೊಂದು ಶೌಚಾಲಯ ಅಗತ್ಯ. ಅನಿವಾರ್ಯವಾದಲ್ಲಿ ಸಾಮೂಹಿಕ ಶೌಚಾಲಯವನ್ನು ನಿರ್ಮಾಣ ಮಾಡಬೇಕಾದ ಅಗತ್ಯವಿದೆ. ಈ ಕುರಿತು ಮಾತುಗಳನ್ನು ಕಡಿಮೆ ಮಾಡಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ. ರಾಜ್ಯ ಸರ್ಕಾರ ಕುಟುಂಬಕ್ಕೊಂದು ಶೌಚಾಲಯ ನಿರ್ಮಾಣ ಕಡ್ಡಾಯ ಎಂಬ ನಿರ್ಣಯ ತಂದಿದೆ. ಇದರ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯಾದ್ಯಂತ 56 ಲಕ್ಷ ಶೌಚಾಲಯಗಳ ಅಗತ್ಯವಿದೆ. ಇದು ನಮ್ಮ ಎದುರಿಗಿರುವ ಬಹುದೊಡ್ಡ ಗುರಿ. ಇದಕ್ಕೆ ತಗುಲುವ ಮೊತ್ತವೂ ಬಹುದೊಡ್ಡ ಮಟ್ಟದ್ದು. ಆದರೂ ಅದರ ನಿರ್ಮಾಣಕ್ಕೆ ನಾವು ಮುಂದಾಗುತ್ತಿದ್ದೇವೆ. ಮೊದಲನೇ ಹಂತದಲ್ಲಿ ಈ ವರ್ಷ ಆರು ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ.

*     ಆರು ಲಕ್ಷ ಶೌಚಾಲಯ ಕಟ್ಟುವ ಘೋಷಣೆ ಮಾಡಿದ್ದೀರಿ. ರಾಜ್ಯದ ಹಲವು ಕಡೆ  ನೀರಿಗೆ ಬರವಿದೆ. ಶೌಚಾಲಯ ನಿರ್ವಹಣೆ ಹೇಗೆ?
ಎಲ್ಲಿ ನೀರಿದೆ ಅಲ್ಲಿ ಶೌಚಾಲಯವನ್ನು ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತೆ. ಎರಡನೇ ಹಂತದಲ್ಲಿ ನೀರಿಗೆ ಬರವಿರುವ ಪ್ರದೇಶಗಳಲ್ಲಿ ಪ್ರಥಮ ಆದ್ಯತೆಯಾಗಿ ನೀರಿನ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ನೀರಿನ ನಿರ್ವಹಣೆ ಸಮರ್ಪಕವಾದ ನಂತರದಲ್ಲಿ ಶೌಚಾಲಯ ನಿರ್ಮಿಸಲಾಗುವುದು. ಈ ಕುರಿತು ಮಾಹಿತಿ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

*     ನದಿ, ಹೊಳೆ, ಹಳ್ಳಗಳ ದಂಡೆಯಲ್ಲಿ ಮನೆ ಕಟ್ಟಿಕೊಂಡವರ ಶೌಚಾಲಯಗಳ ತ್ಯಾಜ್ಯ ಅದೇ ನೀರಿಗೆ ಬಿಡಲಾಗುತ್ತದೆ. ತಡೆ ಹೇಗೆ?
ಪ್ರಾದೇಶಿಕ ಸಮಸ್ಯೆಗಳಾದ ಇವುಗಳಿಗೆ ಪರಿಹಾರ ಹುಡುಕಬೇಕಿದೆ. ಪರಿಹಾರ ಹುಡುಕಲಾಗುವುದು. ಆಯಾ ಪ್ರದೇಶಕ್ಕೆ ತಕ್ಕಂತೆ ಸಮಸ್ಯೆಗಳು ಬದಲಾಗುತ್ತವೆ. ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಈ ಸಮಸ್ಯೆ ಉದ್ಭವವಾಗಿದೆ. ಈ ಸಮಸ್ಯೆಗೆ ಮೂಲ ಕಾರಣ ಹುಡುಕಲಾಗುತ್ತದೆ. ಎಲ್ಲಿ ಲೋಪವಾಗಿದೆಯೋ ಎನ್ನುವುದನ್ನು ಮನಗಂಡು ಅದನ್ನು ಸರಿಪಡಿಸಲು ಆದ್ಯತೆ ನೀಡಲಾಗುತ್ತದೆ.

*     ಮಲೆನಾಡು, ಕರಾವಳಿ ಪ್ರದೇಶಗಳ ಪ್ರವಾಸಿ ತಾಣಗಳು ಶೌಚಾಲಯಗಳ ಕೊರತೆಯನ್ನೆದುರಿಸುತ್ತಿವೆ. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗಿದೆಯೇ?
ಪ್ರವಾಸಿ ತಾಣಗಳು ಶೌಚಾಲಯ, ಮೂತ್ರಾಲಯ ಕೊರತೆಯನ್ನಷ್ಟೇ ಎದುರಿಸುತ್ತಿಲ್ಲ. ಜೊತೆಯಲ್ಲಿ ಬಚ್ಚಲುಮನೆ ಕೊರತೆಯೂ ಜ್ವಲಂತವಾಗಿದೆ. ಈ ಕುರಿತು ಯಾರೊಬ್ಬರೂ ಧ್ವನಿಯೆತ್ತಿಲ್ಲ. ಶೌಚಾಲಯಗಳಷ್ಟೇ ಗಂಭೀರವಾದ ಸಮಸ್ಯೆ ಬಚ್ಚಲುಮನೆ ಕೊರತೆ. ಹಾಗಾಗಿ ಅಗತ್ಯವಿರುವಲ್ಲಿ ಬಚ್ಚಲುಮನೆ ನಿರ್ಮಾಣವನ್ನೂ ಕೈಗೊಳ್ಳಲಾಗುತ್ತದೆ. ಶೌಚಾಲಯಗಳಿಗೆ ಹೊಂದಿಕೊಂಡೇ ಬಚ್ಚಲುಮನೆ ಕಟ್ಟುವ ಯೋಜನೆ ರೂಪಿಸಲು ಸರ್ಕಾರ ಚಿಂತನೆ ಮಾಡುತ್ತಿದೆ. ಪ್ರಮುಖ ತಾಣಗಳಾದ ಹಂಪಿ, ಬಾದಾಮಿ, ಬಿಜಾಪುರ, ಐಹೊಳೆ, ಪಟ್ಟದಕಲ್ಲು, ಬಿಜಾಪುರ, ಬಾಗೇವಾಡಿ, ಯಾಣ, ಗೋಕರ್ಣ, ಮುರ್ಡೇಶ್ವರ ಹಾಗೂ ಜಲಪಾತದ ಸ್ಥಳಗಳು ಇರುವ ಸ್ಥಳದಲ್ಲಿ ಶೌಚಾಲಯ, ಸ್ನಾನಗ್ರಹ, ಮೂತ್ರಿಗಳ ಸಮಸ್ಯೆ ತೀವ್ರವಾಗಿದೆ. ಇವುಗಳನ್ನು ಬಗೆ ಹರಿಸಲು ವಿಶೇಷ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ.

*     ಪ್ರಮುಖ ದೇವಾಲಯಗಳು ಗ್ರಾ.ಪಂ ವ್ಯಾಪ್ತಿಯಲ್ಲೇ ಹೆಚ್ಚಾಗಿವೆ. ಅಂಥಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಇದ್ದರೂ ಸಮರ್ಪಕ ನಿರ್ವಹಣೆಯಿಂದ ನಾರುವ ಸ್ಥಿತಿಯಲ್ಲಿವೆ.
ಉತ್ತರಕನ್ನಡವಿರಬಹುದು, ಬಾಗಲಕೋಟೆ, ಗದಗ, ಬಳ್ಳಾರಿ ಈ ಭಾಗಗಳಲ್ಲಿ ವಿಶೇಷವಾಗಿ ಪ್ರವಾಸಿ ತಾಣಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ನಗರದ ಶೌಚಾಲಯ ಸಮಸ್ಯೆ ಬೇರೆ ಗ್ರಾಮೀಣ ಶೌಚಾಲಯಗಳ ಸಮಸ್ಯೆ ಬೇರೆ. ಆದರೆ ಶೌಚಾಲಯಗಳ ಸ್ವಚ್ಛತೆಗಾಗಿ ತಂತ್ರಜ್ಞಾನವನ್ನು ತರಬೇಕಾದ ಅಗತ್ಯವಿದೆ. ಕಾಯಿನ್ ಹಾಕಿದರೆ ಬಾಗಿಲು ತೆರೆದುಕೊಳ್ಳುವ, ಉಪಯೋಗಿಸಿದ ನಂತರ ಸ್ವಚ್ಛಮಾಡಿಕೊಳ್ಳುವ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಅದನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಬಹುತೇಕ ಹಳ್ಳಿಗಳಲ್ಲಿ ಬಯಲು ಬಹಿರ್ದೆಸೆ, ನಿಂತು ಬಹಿರ್ದೆಸೆ ಮಾಡುವಂತಹ ಪರಿಸ್ಥಿತಿ, ನರಕ ಯಾತನೆಯಿದೆ. ವಯಸ್ಸಾದವರಿಗೆ ಕುಳಿತು ಶೌಚ ಮಾಡಲು ಆಗುವುದಿಲ್ಲ. ಅಂತವರು ನಿಂತು ಬಹಿರ್ದೆಸೆ ಮಾಡುವುದು ಅನಿವಾರ್ಯ. ಅಂತಹವರಿಗೆ ಪರಿಹಾರ ಕೊಡಲು ಸಾಧ್ಯವೇ ಇಲ್ಲವೇ? ಯುರೋಪಿಯನ್ ಕಮೋಡ್ ಅದಕ್ಕೆ ಪರಿಹಾರ. ಅದನ್ನು ಗ್ರಾಮೀಣ ಭಾಗಕ್ಕೆ ಕೊಡಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಪ್ರತಿ ಗ್ರಾಮಗಳಲ್ಲಿರುವ ಶೌಚಾಲಯಗಳಲ್ಲಿ 2 ಯುರೋಪಿಯನ್ ಕಮೋಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತದೆ.

*     ಗ್ರಾಮೀಣ ಪ್ರದೇಶಗಳಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಅಶುದ್ಧ ನೀರು, ಶುದ್ಧ ನೀರಿಗೆ ಸೇರುತ್ತಿದೆ.
ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದನ್ನು ಉಪಯುಕ್ತ ವಸ್ತುಗಳನ್ನಾಗಿ ಮಾಡುವ ಪ್ರಯತ್ನಗಳು ಆಗಬೇಕಿದೆ. ಅದಕ್ಕಾಗಿಯೇ ನನ್ನೆಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇನೆ. ತ್ಯಾಜ್ಯಮುಕ್ತ, ವ್ಯಸನಮುಕ್ತ ಹಾಗೂ ಋಣಮುಕ್ತ ಗ್ರಾಮವಾಗಬೇಕು ಇದು ನಮ್ಮ ಗ್ರಾಮೀಣಾಭಿವೃದ್ಧಿಯ ಕಲ್ಪನೆ. ಇದುವರೆಗಿನ ಗ್ರಾಮೀಣಾಭಿವೃದ್ಧಿ ಎನ್ನುವುದನ್ನು ಪುನರ್ ವ್ಯಾಖ್ಯಾನ ಮಾಡಬೇಕಾದ ಅವಶ್ಯಕತೆಯಿದೆ. ಜನರ ಬದುಕಿನ ಗುಣಮಟ್ಟವನ್ನು ಮೇಲಕ್ಕೆತ್ತರಿಸಿ ಬದುಕು ಸಹನೀಯವಾಗುವ ಹಾಗೆ ಸಂತೋಷದ ಬದುಕಾಗುವ ಹಾಗೆ ನಾವು ಮಾಡಬೇಕಾಗಿದೆ.

*     ಹಳ್ಳಿಗಳು ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗಿವೆ. ತಾವು ಗದಗದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಯಶಸ್ವಿಯಾಗಿದ್ದೀರಿ. ಅದನ್ನೇ ರಾಜ್ಯಕ್ಕೂ ಪರಿಚಯಿಸುತ್ತೀರಾ?
ಈಗಾಗಲೇ ನಾವು ಗ್ರಾಮಾಂತರ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು 1000 ಘಟಕಗಳನ್ನು ಇದೇ ವರ್ಷ ಸ್ಥಾಪಿಸಬೇಕೆಂದು ನಿರ್ಣಯಿಸಿದ್ದೇವೆ. ಅದಕ್ಕೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳ, ಬೇಕಾಗಿರುವ ಸಾಧನಗಳನ್ನು ಸಂಗ್ರಹಿಸಲು ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಗೊಂಡಿದೆ. ಈ ಸಂಖ್ಯೆಗಿಂತ ಹೆಚ್ಚಿನ ಘಟಕವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ.

*     ಕೊಳವೆ ಬಾವಿಗಳನ್ನು ವ್ಯಾಪಕವಾಗಿ ಕೊರೆಯಲಾಗಿದೆ. ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವ ಅಂತರ ನಿಯಮ ಗಾಳಿಗೆ ತೂರಲಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿತಗೊಂಡು ಬರಗಾಲಕ್ಕೆ ಕಾರಣವಾಗಿದೆ. ಇಲಾಖೆ ಯಾವ ಕ್ರಮ ಕೈಗೊಂಡಿದೆ?
ಬರದ ಸಂದರ್ಭದಲ್ಲಿ, ಅನಿವಾರ್ಯ ಸಂದರ್ಭಗಳಲ್ಲಿ ನಾವು ಆ ನಿಯಮಾವಳಿಗಳನ್ನು ಸ್ವಲ್ಪ ಸಡಿಲಿಸಿರಬಹುದು. ಆದಾಗ್ಯೂ ಅಂತರ್ಜಲ ಕಡಿಮೆಯಾಗುವುದನ್ನು ನಿಲ್ಲಿಸಬೇಕಾದರೆ ನಾವು ಮಳೆಕೊಯ್ಲನ್ನು ಮಾಡಬೇಕು. ಅದರ ಮೂಲಕ ನಾವು ಹೆಚ್ಚು ಹೆಚ್ಚು ಅಂತರ್ಜಲ ಕಡಿಮೆಯಾಗದ ಹಾಗೆ ನಮ್ಮೆಲ್ಲ ಪ್ರಯತ್ನ ಮಾಡಬೇಕಾಗಿದೆ.

*     ರಾಜ್ಯದ ಬಹುತೇಕ ಕೆರೆಗಳು ಹೂಳು ತುಂಬಿವೆ. ಇದರಿಂದಾಗಿಯೂ ಕುಡಿಯುವ ನೀರಿನ ಬರ ಉಂಟಾಗುತ್ತಿದೆ. ಕೈಗೊಂಡಿರುವ ಕ್ರಮಗಳೇನು?
ರಾಜ್ಯಾದ್ಯಂತ 36 ಸಾವಿರ ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಕೆರೆಗಳು ಹೂಳುತುಂಬಿಕೊಂಡಿವೆ. 18 ಸಾವಿರ ಕೆರೆಗಳು ಸಂಪೂರ್ಣ ನಿರ್ಜೀವವಾಗಿವೆ. ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಪ್ರಾರಂಭಿಕ ಹಂತದಲ್ಲಿ 12 ಸಾವಿರ ಕೆರೆಗಳ ಪುನಶ್ಚೇತನ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ವರ್ಷ 6 ಸಾವಿರ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸ ಪ್ರಾರಂಭಿಸಲಾಗಿದೆ. ಪ್ರತಿ ಗ್ರಾಮಗಳಲ್ಲಿ 1 ಅಥವಾ 2 ಕೆರೆಗಳ ಪುನಶ್ಚೇತನ ಕೆಲಸವನ್ನು ಕೈಗೊಳ್ಳಲಾಗುವುದು. ಜಿ.ಪಂ, ತಾ.ಪಂ, ಕಂದಾಯ ಇಲಾಖೆಗಳ ಸಹಕಾರದೊಂದಿಗೆ ಕೆರೆ, ಕಟ್ಟೆ, ಕಲ್ಯಾಣಿ, ನದಿಮೂಲಗಳ ಅತಿಕ್ರಮಣ ತೆರವಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಬರ ನೀಗಿಸುವ ದೃಷ್ಟಿಯಿಂದ ನೀರು ಕಾಲುವೆ ಒತ್ತುವರಿಯಾಗಿದ್ದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ನೀರು ಸಂಗ್ರಹದ ಹೆಚ್ಚಿನ ಜವಾಬ್ದಾರಿಯನ್ನು ಪಂಚಾಯತಿಗಳಿಗೆ ನೀಡಲಾಗುತ್ತದೆ.

*     ಜಲಮೂಲ ಮತ್ತು ಜಲ ಸಂವರ್ಧನೆಗೆ ವಿಶೇಷ ಪ್ರಯತ್ನ ಅಗತ್ಯವಿದೆ ಎನ್ನಿಸುವುದಿಲ್ಲವೇ?
ಜಲಮೂಲ ಮತ್ತು ಜಲಸಂವರ್ಧನೆಗೆ ನಮ್ಮ ಇಲಾಖೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡುತ್ತದೆ. ಇಂಗುಗುಂಡಿಗಳ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ. ಇರುವ ಕೆರೆ, ಕಟ್ಟೆ, ನದಿ ಮೂಲಗಳ ತಾಣಗಳನ್ನು ಗುರುತಿಸಿ ಅವುಗಳಿಗೆ ಹಾನಿಯಾಗದಂತೆ ಕ್ರಮ ಜರುಗಿಸಲಾಗುವುದು. ಮಳೆಗಾಲದ ನೀರು ಹಿಡಿದಿಡುವ ಕುರಿತಂತೆ ಇನ್ನಷ್ಟು ಹೆಚ್ಚಿನ ಗಮನ ನೀಡಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಇಂಗುಗುಂಡಿ ನಿರ್ಮಾಣವೂ ಸೇರಿದಂತೆ ನೀರು ಸಂಗ್ರಹಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತದೆ. ಮಣ್ಣು ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ಮೂರು ವರ್ಷಗಳಿಂದ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ. ಅತ್ಯಂತ ಪ್ರಮುಖವಾಗಿದ್ದ ಈ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟ. ಆ ಕಾರಣಕ್ಕಾಗಿ ಯೋಜನೆಯ ನಿಯಮಾವಳಿಯನ್ನು ಬಿಗಿಗೊಳಿಸಲಾಗುತ್ತಿದೆ. ಯೋಜನೆ ರೂಪಿಸುವುದಕ್ಕಾಗಿಯೇ ಇರುವ ಪ್ಲಾನಿಂಗ್ ಕಮಿಷನ್ ನಿಷ್ಕ್ರಿಯವಾಗಿದೆ. ಅವುಗಳನ್ನು ವ್ಯವಸ್ಥಿತಗೊಳಿಸಲು ಪಂಚಾಯತ್‌ಪರಿಷತ್ತಿನ ಪುನರ್ ನಿರ್ಮಾಣ ಮಾಡಲಾಗುತ್ತದೆ. ಅ.2ರಂದು ಇದಕ್ಕೆ ಚಾಲನೆ ನೀಡಲಾಗುತ್ತದೆ.

*    ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿಯಿರುವ ಕಾರಣಕ್ಕಾಗಿ ಸಮರ್ಪಕ ಕಾರ್ಯ ನಿರ್ವಹಣೆಯಾಗುತ್ತಿಲ್ಲ.
ಇಲಾಖೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಕಾಲಿಯಿದೆ. ಈ ವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ಪಂಚಾಯತದ ಪಿಡಿಒಗಳ ನೇಮಕಾತಿಯೂ ಆಗಿಲ್ಲ. ಪಂಚಾಯತ ಪಿಡಿಒಗಳ ಕೊರತೆಯೂ ದೊಡ್ಡ ಪ್ರಮಾಣದಲ್ಲಿದೆ. ಅವರನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ. ನಿಂತುಹೋಗಿರುವ ಮುಂಭಡ್ತಿ ಕ್ರಿಯೆಯನ್ನು ಪುನರಾರಂಭಿಸಲಾಗುವುದು. ಕಳೆದ 10 ವರ್ಷಗಳಲ್ಲಿ ಇಲಾಖೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅವುಗಳನ್ನು ಸುವ್ಯವಸ್ಥಿತಗೊಳಿಸುವ ಕೆಲಸವನ್ನು ಮಾಡುತ್ತಿದ್ದೇನೆ.


- ವಿಶ್ವಾಮಿತ್ರ ಹೆಗಡೆ, ಕನ್ನಡಪ್ರಭ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.