ಅಂಕಣಗಳು

ಕಚೇರಿಯಲ್ಲಿ ಕಿರುಕುಳ ತಪ್ಪಿಸಲು ಕಾನೂನು ನೆರವು

ಕಚೇರಿಯಲ್ಲಿ ಕಿರುಕುಳ ತಪ್ಪಿಸಲು ಕಾನೂನು ನೆರವು
Published On :

ಕಳೆದ ವಾರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯೋಜನೆಗಳ ವ್ಯಾಪಕ ಪ್ರಚಾರದ ಬಗ್ಗೆ ನಿಮಗೆ ಹೇಳುತ್ತಿದ್ದೆ. ಪ್ರಚಾರ ಆರಂಭವಾದ ಒಂದು ವಾರದಲ್ಲೇ ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರ ಗುಂಪೊಂದು ನನ್ನ ಕಚೇರಿಗೆ ಬಂದು ಮಾತನಾಡಲು ಅಪೇಕ್ಷಿಸಿದರು. ತಮ್ಮ ಸಂಸ್ಥೆಗೆ ಬಂದು ಮಹಿಳೆಯರು ಮತ್ತು ಪುರುಷರೂ ಸೇರಿದಂತೆ ಸುಮಾರು ಮುನ್ನೂರು ಜನರನ್ನು ಉದ್ದೇಶಿಸಿ "ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳವನ್ನು ತಡೆಯುವುದು ಹೇಗೆ" ಎಂಬ ವಿಷಯದ ಬಗ್ಗೆ ಮಾತನಾಡುವಂತೆ ಕೋರಿದರು. ಅವರ ಸಂಸ್ಥೆಯಲ್ಲಿ ಅವರ ಸಹೋದ್ಯೋಗಿಯೊಬ್ಬಳು ಇತ್ತೀಚೆಗೆ ಮೇಲಧಿಕಾರಿ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳೆಂದೂ, ಇವರೆಲ್ಲರಿಗೂ ಮೊದಲೇ ಕಿರುಕುಳದ ವಿಷಯ ತಿಳಿದಿತ್ತೆಂದೂ, ಆದರೆ ಮೇಲಧಿಕಾರಿಯೇ ಹೀಗೆ ಮಾಡುತ್ತಿರುವಾಗ ಏನು ಮಾಡುವುದು ಎಂಬ ಅರಿವು ಇಲ್ಲದೆ ಇದ್ದುದಾಗಿಯೂ, ಆದರೆ ಅಷ್ಟರಲ್ಲೇ ತಮ್ಮ ಸಹೋದ್ಯೋಗಿ ತನ್ನ ಮೇಲೇ ತಪ್ಪನ್ನು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳೆಂದು ತಿಳಿಸಿದರು. ತಾವು ಮೊದಲೇ ಯಾವುದಾದರೂ ಪರಿಹಾರವನ್ನು ಕಂಡುಕೊಂಡಿದ್ದರೆ ತಮ್ಮ ಸಹೋದ್ಯೋಗಿಯ ಪ್ರಾಣವನ್ನು ಉಳಿಸಬಹುದಾಗಿತ್ತು ಎಂದು ಪೇಚಾಡಿದರು. ಇತ್ತೀಚೆಗೆ ಪತ್ರಿಕೆಗಳಲ್ಲಿ ಸರ್ಕಾರ ಲೈಂಗಿಕ ಕಿರುಕುಳದ ವಿರುದ್ಧವಾಗಿ ಪ್ರಚಾರ ಕೊಡುತ್ತಿರುವುದನ್ನು ಕಂಡು, ಸ್ವಲ್ಪ ಧೈರ್ಯ ಬಂತೆಂದೂ, ಅದಕ್ಕಾಗಿ ನಾವು ತಮ್ಮನ್ನು ಹುಡುಕಿಕೊಂಡು ಬಂದುದಾಗಿಯೂ ಹೇಳಿದರು. ವಿದ್ಯಾವಂತರು ಕೆಲಸ ಮಾಡುವ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೇ ಈ ಸ್ಥಿತಿಯಿದ್ದರೆ, ಅವಿದ್ಯಾವಂತರು ಕೆಲಸ ಮಾಡುವ ಅಸಂಘಟಿತ ಜಾಗಗಳಲ್ಲಿನ ಮಹಿಳೆಯರ ಪಾಡೇನು ಎಂಬ ಆಲೋಚನೆ ಮೂಡಿತು.
ಆ ಸಭೆಯನ್ನು ಉದ್ದೇಶಿಸಿ ಮಾತನಾಡಿದಾಗ ನನ್ನನ್ನು ಆಶ್ಚರ್ಯಗೊಳಿಸಿದ ಸಂಗತಿಯೆಂದರೆ, ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪ್ರತಿಯೊಂದು ಸರ್ಕಾರಿ ಅಥವಾ ಖಾಸಗಿ ಕಚೇರಿಯಲ್ಲಿಯೂ ದೂರು ಸಮಿತಿ ರಚನೆ ಕಡ್ಡಾಯವೆಂಬುದೇ ತಿಳಿದಿರಲಿಲ್ಲ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ, ಕಾನೂನಿನ ಪ್ರಕಾರ ಅವರ ಸಂಸ್ಥೆಯಲ್ಲಿಯೂ ಸಮಿತಿ ಇದೆಯೆಂದು ಹೇಳಿದರು. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಯಾವುದೇ ಮಾಹಿತಿಯನ್ನೂ ಕೊಟ್ಟಿರಲಿಲ್ಲ! ಸಮಿತಿಗೆ ಕಡ್ಡಾಯವಾಗಿ ಮಹಿಳೆಯೇ ಅಧ್ಯಕ್ಷಳಾಗಿರಬೇಕು ಎಂಬ ಪ್ರಶ್ನೆಯನ್ನು ಎತ್ತಿದಾಗ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿರುವವರ ಪತ್ನಿಯೂ ಅಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಆ ಜವಾಬ್ದಾರಿಯನ್ನು ಕೊಡಲಾಗಿತ್ತು. ಅರ್ಧದಷ್ಟು ಸದಸ್ಯರು ಮಹಿಳೆಯರೇ ಆಗಿರಬೇಕೆಂಬ ನಿಯಮಕ್ಕೆ ಅನುಸಾರವಾಗಿ ಹಲವರ ಹೆಸರನ್ನು ಹಾಕಿಕೊಳ್ಳಲಾಗಿತ್ತು, ಆದರೆ ಆ ಮಹಿಳೆಯರಿಗೆ ತಾವು ಸಮಿತಿಯ ಸದಸ್ಯರು ಎಂಬ ಅರಿವೇ ಇರಲಿಲ್ಲ. ಕಾನೂನಿನ ನಿಯಮಗಳೇನು, ತಮ್ಮ ಜವಾಬ್ದಾರಿಯೇನು ಎಂಬ ಅರಿವೂ ಅವರಿಗೆ ಇರಲಿಲ್ಲ. ಹಾಗೆಂದರೆ ಕಾನೂನು ಪಾಲನೆ ಕೇವಲ ಕಣ್ಣೊರಸುವುದಕ್ಕೆ ಮಾತ್ರವೇ ಎಂಬ ಪ್ರಶ್ನೆ ನನ್ನ ಮನದಲ್ಲಿ ಸುಳಿಯಿತು. ಅಂದಿನಿಂದ ಯಾವುದೇ ಮಹಿಳೆ ನನ್ನ ಬಳಿ ಮಾತನಾಡಲು ಬಂದರೂ ಮಹಿಳೆಯರ ಬಗೆಗಿನ ಕಾನೂನುಗಳ ಮಾಹಿತಿಯ ಕೈಪಿಡಿಯನ್ನು ಅವರಿಗೆ ಕೊಟ್ಟು ಕಳುಹಿಸುತ್ತೇನೆ.
ನಮ್ಮ ಭಾರತದ ಸಂವಿಧಾನದಲ್ಲಿ ಪರಿಚ್ಛೇಧ 14 ಮತ್ತು 15 ರಂತೆ ಮಹಿಳೆಯರಿಗೆ ಸಮಾನ ಹಕ್ಕನ್ನೂ, ಪರಿಚ್ಛೇಧ 21 ರಲ್ಲಿ ಮಹಿಳೆಯರಿಗೆ ಗೌರವದಿಂದ ಜೀವನ ಮಾಡುವ ಹಕ್ಕನ್ನು ಕೊಡಲಾಗಿದೆ. 1997 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾದ ವಿಶಾಖಾ ಪ್ರಕರಣದಲ್ಲಿಯೇ ಈ ವಿಷಯದ ಬಗ್ಗೆ ಮಾರ್ಗದರ್ಶನ ಸೂತ್ರಗಳನ್ನು ನೀಡಿತ್ತು. ಅದರ ಅನುಸಾರದಂತೆ ಇದೀಗ ಏಪ್ರಿಲ್ 2013 ರಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿರೋಧ, ನಿಷೇಧ ಮತ್ತು ನಿವಾರಣೆ) ಕಾಯಿದೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕಾಯಿದೆಯಡಿಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರು, ಆಸ್ಪತ್ರೆಗಳ ಮಹಿಳಾ ಸಿಬ್ಬಂದಿ, ಅಂಗಡಿ ಮುಂತಾದ ಕಡೆಗಳಲ್ಲಿ ಕೆಲಸ ಮಾಡುವವರು, ಮನೆಗೆಲಸದವರೂ ಸಹ ಸೇರುತ್ತಾರೆ. ವಯೋವುತಿಯಾಗಲೀ, ಸ್ಥಾನಮಾನಗಳಾಗಲೀ ಲೆಕ್ಕಕ್ಕೆ ಬರುವುದಿಲ್ಲ. ಅಂದರೆ ಇದು ಎಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ. ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಖಾಸಗಿ ಸಂಸ್ಥೆಗಳು, ಸಂಘಟಿತ ಮತ್ತು ಅಸಂಘಟಿತ ಉದ್ಯೋಗದ ಸ್ಥಳಗಳು, ನರ್ಸಿಂಗ್ ಹೋಂಗಳು, ಶೈಕ್ಷಣಿಕ ಸಂಸ್ಥೆಗಳು, ಕ್ರೀಡಾ ಸಂಸ್ಥೆಗಳು, ಆಟದ ಮೈದಾನಗಳು, ಕ್ರೀಡೆಗೆ ಸಂಬಂಧಿಸಿದ ಸಂಕೀರ್ಣಗಳು, ಉದ್ಯೋಗಿಗಳು ಓಡಾಡುವ ಎಲ್ಲಾ ಸಂಬಂಧಿತ ಜಾಗಗಳು, ಅವರು ಚಲಿಸುವ ವಾಹನಗಳೂ ಕೂಡ ಇದರಲ್ಲಿ ಸೇರುತ್ತದೆ. ಕಾಯಿದೆಗೆ ಅನುಸಾರವಾಗಿ ಸಮಿತಿಗಳನ್ನು ರಚಿಸದಿದ್ದಲ್ಲಿ ರು. ಐವತ್ತು ಸಾವಿರದವರೆಗಿನ ದಂಡವನ್ನು ತೆರಬೇಕಾಗುತ್ತದೆ. ದೂರು ಸಮಿತಿಗೆ ಮಹಿಳೆಯೇ ಅಧ್ಯಕ್ಷಳಾಗಿರಬೇಕು. ಕನಿಷ್ಠ ಹತ್ತು ಸದಸ್ಯರಿರಬೇಕು. ಅದರಲ್ಲಿ ಅರ್ಧದಷ್ಟು ಮಹಿಳೆಯರಾಗಿರಬೇಕು. ಈ ವಿಷಯದ ಬಗ್ಗೆ ಅರಿವು ಇರುವ ಸರ್ಕಾರೇತರ ಸಂಘ ಅಥವಾ ಸಂಸ್ಥೆಯ ಒಬ್ಬ ಸದಸ್ಯರು ಇರಬೇಕು. ವಿಚಾರಣೆ ತೊಂಭತ್ತು ದಿನಗಳೊಳಗಾಗಿ ನಡೆಯಬೇಕು. ವಿಚಾರಣೆಯ ವರದಿಯನ್ನು ಅರವತ್ತು ದಿನಗಳಲ್ಲಿ ಸಲ್ಲಿಸಬೇಕು. ಸಾಕ್ಷಿ ಸಂಗ್ರಹಣೆಗೆ ಸಮಿತಿಗೆ ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಕೊಡಲಾಗಿದೆ. ದೂರು ನೀಡಿದವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕಿರುಕುಳದ ಬಗ್ಗೆ ಪ್ರತ್ಯಕ್ಷ ಸಾಕ್ಷಿಯನ್ನು ಒದಗಿಸುವಂತೆ ಒತ್ತಾಯಿಸಬಾರದು. ಏಕೆಂದರೆ ಇಂಥ ಘಟನೆಗಳು ನಡೆಯುವುದೇ ಯಾರೂ ಇಲ್ಲದಿರುವಾಗಲೇ. ದೂರು ನೀಡಿದವರಿಗೆ ಮಾತನಾಡಲು ಮೊದಲು ಅವಕಾಶ ಕೊಡಬೇಕು. ದೂರು ಕೊಟ್ಟವರು ಸಂಧಾನ ಮಾಡಿಕೊಳ್ಳಲು ಇಚ್ಛಿಸಿದರೆ ವಿಚಾರಣೆಗೆ ಮೊದಲು ಅದಕ್ಕೆ ಅವಕಾಶವಿದೆ. ವಿಚಾರಣೆಯಲ್ಲಿ ಆರೋಪವನ್ನು ಸಂದೇಹಕ್ಕೆ ಆಸ್ಪದವಿಲ್ಲದಂತೆ ರುಜುವಾತು ಪಡಿಸುವ ಅಗತ್ಯವಿಲ್ಲ. ಇಡೀ ವಿಚಾರಣೆಯ ಪ್ರಕ್ರಿಯೆ ಮಾನವೀಯತೆಯಿಂದ ಕೂಡಿರಬೇಕು.
ಮೊಬೈಲುಗಳಲ್ಲಿ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸುವುದನ್ನು ಕೂಡ ಈ ಕಾಯಿದೆಯ ಅಡಿಯಲ್ಲಿಯೇ ಗಮನಿಸಲಾಗುತ್ತದೆ. ಇದರ ಬಗ್ಗೆ ಕನ್ನಡದ ಚಲನಚಿತ್ರದ ಅಭಿನೇತ್ರಿ ರಾಗಿಣಿ ದ್ವಿವೇದಿಯವರು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದನ್ನು ತಾವೆಲ್ಲರೂ ಓದಿರಬಹುದು.
ತಾವು ಉದ್ಯೋಗ ಮಾಡುವ ಸ್ಥಳಗಳಲ್ಲಿ ಈ ದೂರು ಸಮಿತಿಗಳನ್ನು ರಚಿಸಿಲ್ಲದಿದ್ದರೆ, ಅದರ ಮಾಹಿತಿಯನ್ನು ಎಲ್ಲರಿಗೂ ಕಡ್ಡಾಯವಾಗಿ ತಿಳಿಸಿಲ್ಲದಿದ್ದರೆ, ದೂರುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ಕರ್ನಾಟಕ ಮಹಿಳಾ ಆಯೋಗಕ್ಕೆ ತಕ್ಷಣವೇ ದೂರು ಸಲ್ಲಿಸಬಹುದು.
ಕೆಲವರು ಹೇಳುತ್ತಾರೆ, ಕೆಲಸದ ಜಾಗದಲ್ಲಿ ಕಿರುಕುಳವಿದ್ದರೆ ಕೆಲಸಕ್ಕೆ ಯಾಕೆ ಹೋಗಬೇಕು ಎಂದು. ಆದರೆ ಇಂದು ಮಹಿಳೆಯರು ಅನಿವಾರ್ಯವಾಗಿ ಮನೆ ಬಿಟ್ಟು ದುಡಿಯಲು ಹೊರಗೆ ಹೋಗಬೇಕಾಗಿದೆ. ಇಲ್ಲವಾದಲ್ಲಿ ಮನೆಯ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಅವರು ಗಳಿಸುತ್ತಿರುವ ಸಂಪಾದನೆಯಿಂದ ಇಡೀ ಕುಟುಂಬವೇ ಪ್ರಯೋಜನ ಪಡೆಯುತ್ತದೆ. ಆದರೆ ಮಹಿಳೆ ಮಾತ್ರ ಏಕೆ ಎಲ್ಲ ರೀತಿಯಲ್ಲಿ ಬಲಿಪಶುವಾಗಬೇಕು? ಅವಳಿಗೆ ಸಂರಕ್ಷಣೆ ಕೊಡುವವರು ಯಾರು? ಕೇವಲ ಕಾನೂನು ಇದ್ದರೆ ಸಾಲದು, ಅದನ್ನು ತಿಳಿದು ಉಪಯೋಗಿಸುವುದು ಮುಖ್ಯ. ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತಿರಬೇಕು. ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಬಹುದು. ಆದರೆ ಅದಕ್ಕಾಗಿ ಧೃತಿಗೆಡಬೇಕಿಲ್ಲ. ಅವರ ನೆರವಿಗೆ ಸರ್ಕಾರ ಮತ್ತು ಕಾನೂನು ಸದಾ ಸಿದ್ಧವಿದೆ.
ಅದೇ ರೀತಿ ನಾಗರಿಕರು ತಮ್ಮ ಜವಾಬ್ದಾರಿಯನ್ನು ತಿಳಿಯಬೇಕು. ಕೆಲಸದ ಪರಿಸರ ಕೆಲಸ ಮಾಡುವುದಕ್ಕೆ ಮಾತ್ರ ಇರುವುದು. ಆ ಸಮಯದಲ್ಲಿ ಈ ರೀತಿ ದುರ್‌ವ್ಯವಹಾರಗಳಿಂದ ಇಡೀ ಕಚೇರಿಯ ವಾತಾವರಣವನ್ನು ಹಾಳು ಮಾಡುವುದು ಸರಿಯಲ್ಲ. ಇಂಥ ದುಷ್ಕರ್ಮಿಗಳನ್ನು ಎಲ್ಲ ನೌಕರರೂ ಸೇರಿ ಸರಿಪಡಿಸಬೇಕು. ಸಮಿತಿಯ ಮುಂದೆ ಈ ವಿಷಯವನ್ನು ತಂದು ಇನ್ನು ಮುಂದೆ ಈ ರೀತಿ ಅಗದ ಹಾಗೆ ನೋಡಕೊಳ್ಳಬೇಕು. ಕಚೇರಿಯ ಕೆಲಸ ದೇವರ ಕೆಲಸ ಅಂತ ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಈ ದೇವಾಲಯಗಳಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವ ಅಂಶ ಅತ್ಯಂತ ವಿಷಾದನೀಯ. ಇದು ನಮ್ಮ ಸಾಮಾಜಿಕ ಮಾನಸಿಕತೆಯನ್ನು ಪ್ರದರ್ಶಿಸುತ್ತದೆ. ಸಾಮಾಜಿಕವಾಗಿ ನಾವು ಹಿಂದೆ ಬಿದ್ದರೆ ಆರ್ಥಿಕವಾಗಿ ಮುಂದುವರೆಯುವುದು ಹೇಗೆ?  ಶಿಸ್ತಿನಿಂದ ನಮ್ಮ ಹಾಗೂ ದೇಶದ ಅಭಿವೃದ್ಧಿಯನ್ನು ಸಾಧಿಸೋಣ.

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.