ಅಂಕಣಗಳು

ಇಷ್ಟಕ್ಕೂ ಸಂಸದರಿಂದ ನಾವು ಬಯಸ ಬೇಕಿರುವುದು ಏನನ್ನು?

ಇಷ್ಟಕ್ಕೂ ಸಂಸದರಿಂದ ನಾವು ಬಯಸ ಬೇಕಿರುವುದು ಏನನ್ನು?
Published On :

ಸರ್ ನಮ್ ಮನಿ ಮುಂದ್ ಹಂದಿ ಸತ್‌ಬಿದ್ ಎರಡ್ ದಿನ ಆತ್ರಿ. ತೆಗೆಯಾಕ್ ಯಾರ್ ಇಲ್ರಿ. ಮಹಾನಗರ ಪಾಲಿಕೆಗೆ ಪೋನ್ ಹಚ್ಚಿದ್ರೂ ಬಂದಿಲ್ ನೋಡ್ರಿ. ನೀವಾದ್ರೂ ಏನಾದ್ರೂ ಮಾಡ್ರಿ. ಪಾಲಿಕೆ ಅವ್ರಿಗೆ ಒಂದ್ ಮಾತ್ ಹೇಳ್ರಿ!
ನಾನು ದಿಲ್ಲಿಯಲ್ಲಿದ್ದಾಗ ಒಬ್ಬ ಸಂಸದರ ಜತೆ ಕುಳಿತಿದ್ದೆ. ಅವರಿಗೆ ಬಂದ ದೂರವಾಣಿ ಕರೆಯಿದು! ಆ ಸಂಸದರ ಹೆಸರು ಪ್ರಹ್ಲಾದ ಜೋಶಿ.
ಸರ್ ನಮ್ಗೂ ನಮ್ಮ ಪಕ್ಕದ ಮನೆಯವರಿಗೂ ಜಗಳ. ನಮ್ಮ ಮನೆಯ ನಡುವೆ ಇರೋದು ಚಿಕ್ಕ ಕಾಂಪೌಂಡ್. ಆತ ಕಾಂಪೌಂಡ್ ಪಕ್ಕದಲ್ಲೇ ದನ ಕಟ್ಟಿ ಹಾಕುತ್ತಾನೆ. ಅದು ಯಾವಾಗಲೂ ನಮ್ಮ ಜಾಗದಲ್ಲೇ ಸಗಣಿ ಹಾಕುತ್ತದೆ. ಅವರ ಮನೆ ದನದ ಸಗಣಿ ನಾವು ತೆಗೆಯುವಂತಾಗಿದೆ. ದಯವಿಟ್ಟು ಸಮಸ್ಯೆ ಪರಿಹರಿಸಿ!
ಇದು ಇನ್ನೊಬ್ಬ ಸಂಸದರ ಬಳಿ ಸಮಸ್ಯೆ ಹೊತ್ತು ಬಂದ ಪ್ರಜೆಯೊಬ್ಬರ ಅಳಲು!
ನಾವು ನಮ್ಮ ಸಂಸದರನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಅವರಿಂದ ನಾವು ಏನನ್ನು ನಿರೀಕ್ಷಿಸುತ್ತಿದ್ದೇವೆ? ಒಬ್ಬ ಕಾರ್ಪೊರೇಟರ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯನಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದೇವೆಯೇ? ಅಥವಾ ಒಬ್ಬ ಸಂಸದ ಬಂದು ನಮ್ಮ ಮನೆ ಎದುರಿಗೆ ಬಿದ್ದ ಹಂದಿ ತೆಗೆಸಬೇಕು, ಕೊಳೆತು ನಾರುವ ಕಸ ಎತ್ತಿಸಬೇಕು, ಚರಂಡಿ ಸರಿಮಾಡಿಸಬೇಕು, ರಸ್ತೆ ಮಾಡಿಸಿಕೊಡಬೇಕು ಎಂದು ಬಯಸುತ್ತಿದ್ದೇವೆಯೇ? ಹಾಗಾದರೆ ಕಾರ್ಪೊರೇಟರ್, ಮೇಯರ್, ಗ್ರಾಮಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು, ಶಾಸಕರೆಲ್ಲ ಯಾಕೆ ಬೇಕು? ಒಬ್ಬ ಸಂಸದ ಸಾಕಲ್ಲವೇ?
ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ ಈಗ ಎಲ್ಲೆಡೆ ಲೋಕಸಭೆ ಚುನಾವಣೆ ಚರ್ಚೆ. ಯಾರನ್ನೇ ಕೇಳಿ ಅವರ ಸಂಸದರ ಬಗ್ಗೆ ಸಮಾಧಾನವಿಲ್ಲ. ನಮ್ಮ ನಿರೀಕ್ಷೆಗೆ ತಕ್ಕನಾಗಿ ಕೆಲಸ ಮಾಡಿಲ್ಲ ಎಂಬ ಕೊರಗು. ಪ್ರಯೋಜನವಿಲ್ಲ ದೂರು.
ಉತ್ತರ ಕನ್ನಡದ ಅನಂತ ಕುಮಾರ ಹೆಗಡೆ ಗೆದ್ದ ಮೇಲೆ ಎಲ್ಲೂ ಬಂದಿಲ್ಲ. ಜನರ ಜತೆ ಸಂಪರ್ಕ ಇರಿಸಿಕೊಂಡಿಲ್ಲ. ಮಾತಾಡಿಸಲ್ಲ ಎಂಬ ದೂರಿದೆ. ಇದೇ ಜನ ಶಾಸಕರು ನಮ್ಮೂರಿಗೆ ಎಷ್ಟು ಬಾರಿ ಬಂದಿದ್ದಾರೆ? ಜಿಲ್ಲಾ ಪಂಚಾಯತ್ ಸದಸ್ಯರು ಎಷ್ಟು ಬಾರಿ ಬಂದಿದ್ದಾರೆ ಎಂಬುದನ್ನು ಮರೆತಿರುತ್ತಾರೆ. ಒಬ್ಬ ಸಂಸದನಿಗೆ ಕನಿಷ್ಠ 5-6 ಶಾಸಕರ ಕ್ಷೇತ್ರದ ವ್ಯಾಪ್ತಿ ಇರುತ್ತದೆ. ಗರಿಷ್ಠ 10 ಶಾಸಕರ ಕ್ಷೇತ್ರದ ವ್ಯಾಪ್ತಿ ಹೊಂದಿರುವ ಸಂಸದರೂ ಇದ್ದಾರೆ. ಹೀಗಿರುವಾಗ ಆತ ಉಳಿದ ದಿನ ಬಿಡಿ, ಪ್ರಚಾರಕ್ಕೇ ಕ್ಷೇತ್ರದ ಎಲ್ಲ ಊರುಗಳಿಗೆ ಹೋಗಲಾಗುವುದಿಲ್ಲ. ಇದೇ ಉತ್ತರ ಕನ್ನಡದ ಜನ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ 'ಬರೀ ಮದುವೆ, ಮುಂಜಿ, ತೊಟ್ಟಿಲುತುಮ್ಮಣ ಓಡಾಡಿಕೊಂಡಿರುತ್ತಾರೆ' ಎಂದು ಟೀಕಿಸುತ್ತಾರೆ! ಬಂದರೂ ಟೀಕೆ, ಬಾರದಿದ್ದರೂ ಟೀಕೆ!
ಚಾಮರಾಜನಗರದ ಧ್ರುವನಾರಾಯಣ ಅವರು ಮಾಧ್ಯಮ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ 5ನೇ ಸ್ಥಾನದಲ್ಲಿದ್ದಾರೆ. ನಾನು ದಿಲ್ಲಿಯಲ್ಲಿದ್ದಾಗ ಗಮನಿಸಿದಂತೆಯೂ ಅವರೊಬ್ಬ ಸಮರ್ಥ ಸಂಸದ. ಸದಾ ಏನಾದರೊಂದು ಫೈಲ್ ಹಿಡಿದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಓಡಾಡುತ್ತಲೇ ಇರುತ್ತಾರೆ. ಅವರ ಬಗ್ಗೆಯೂ ಕ್ಷೇತ್ರದಲ್ಲಿ ಅಸಮಾಧಾನ ಇದ್ದೇ ಇದೆ.
ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಅತ್ಯಂತ ಸರಳ ಜೀವನ ಶೈಲಿಯ ವ್ಯಕ್ತಿ. ವಿವಾದವಿಲ್ಲ, ಅವ್ಯವಹಾರವಿಲ್ಲ, ದೊಡ್ಡ ಆಸ್ತಿಯೂ ಇಲ್ಲ. ಒಂದು ಮಾಧ್ಯಮ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೇಶದ ಸಂಸದರಲ್ಲಿ ನಳಿನ್‌ಗೆ 24ನೇ ಸ್ಥಾನ ಸಿಕ್ಕರೆ, ಇನ್ನೊಂದರಲ್ಲಿ 6ನೇ ಸ್ಥಾನ ಲಭಿಸಿದೆ. ಹೀಗಿದ್ದೂ ಮೊನ್ನೆ ದಕ್ಷಿಣ ಕನ್ನಡದವರೊಬ್ಬರಿಗೆ ಕರೆ ಮಾಡಿದಾಗ ಏನು ಮಾಡಿದ್ದಾರೆ ಎಂದು ಅವರಿಗೆ ಮತ ಹಾಕಬೇಕು? ಎಂದು ಪ್ರಶ್ನಿಸಿದರು. ನಾನು ಸುಮ್ಮನೆ ನಕ್ಕೆ.
ಅವರು ಏನು ಮಾಡಿದ್ದಾರೆ ಎಂಬುದಕ್ಕಿಂತ ಅವರು ಏನು ಮಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಯಾಕೆಂದರೆ ಸಂಸದನೊಬ್ಬ ನಮ್ಮೂರಿಗೆ ರಸ್ತೆ ಮಾಡಿಸಿಕೊಡಬೇಕು. ನೀರಿನ ಸಮಸ್ಯೆ ಬಗೆಹರಿಸಬೇಕು. ನಮ್ಮೂರಿಗೆ ಏನೂ ಮಾಡಿಲ್ಲ ಹೀಗೆ ಸಣ್ಣ ಸಣ್ಣ ಕಾರಣಕ್ಕೆ ನಮ್ಮ ಸಂಸದರನ್ನು ಟೀಕಿಸುತ್ತಿರುತ್ತೇವೆ. ನಾನು ಕೊಟ್ಟಿರುವುದು ಕೆಲವು ಉದಾಹರಣೆಗಳಷ್ಟೇ. ನೀವು ಯಾವುದೇ ಭಾಗಕ್ಕೆ ಹೋಗಿ ಸಂಸದರ ಬಗ್ಗೆ ದೂರುಗಳು, ಅಸಮಾಧಾನ ಕೇಳಿಬರುತ್ತದೆ.
ಇರುವುದು ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದಿದ್ದು ಇದಕ್ಕೇ ಇರಬೇಕು. ಇದ್ದವರು ಸರಿ ಇಲ್ಲ, ಹೊಸಬರು ಬರಬೇಕು. ಅವರು ಇವರಿಗಿಂತ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ. ಬದಲಾವಣೆ ಬಯಸುತ್ತೇವೆ. ಬದಲಾವಣೆ ಬಯಸಲೇಬಾರದು ಮತ್ತೆ ಮತ್ತೆ ಅವರನ್ನೇ ಆರಿಸಬೇಕು ಎಂದಲ್ಲ. ಆದರೆ ಅವರನ್ನು ಅಳೆಯುವ ಮಾನದಂಡ ಬದಲಾಗಬೇಕು. ಸಂಸದನೊಬ್ಬನನ್ನು ಊರಿಗೆ ಬಂದಿಲ್ಲ, ನಮ್ಮೂರಿಗೆ ಏನೂ ಮಾಡಿಲ್ಲ, ನಮ್ಮೂರ ದೇವಸ್ಥಾನಕ್ಕೆ ಹಣ ಕೊಟ್ಟಿಲ್ಲ ಎಂಬ ಚಿಕ್ಕ ಚಿಕ್ಕ ಮಾನದಂಡದಿಂದ ಅಳೆಯುವುದು ಸರಿಯಲ್ಲ ಎಂಬುದಷ್ಟೇ ನನ್ನ ಅಭಿಪ್ರಾಯ. ಇದಕ್ಕೆ ಕಾರಣಗಳೂ ಇವೆ.
ಒಮ್ಮೆ ಸಂಸದರ ಜಾಗದಲ್ಲಿ ನಿಂತು ಅಥವಾ ಅವರ ದೃಷ್ಟಿಕೋನದಿಂದ ವಿಚಾರಮಾಡಿ. ಅವರಿಗೆ ವರ್ಷಕ್ಕೆ 1ಕೋಟಿ ಪ್ರದೇಶಾಭಿವೃದ್ಧಿ ನಿಧಿ ಇತ್ತು. 4 ವರ್ಷದ ಹಿಂದೆ ಅದನ್ನು ರು. 2 ಕೋಟಿಗೆ ಏರಿಸಿದರು. ಕಳೆದೊಂದು ವರ್ಷದಿಂದ ಅದನ್ನು 5 ಕೋಟಿಗೆ ಏರಿಸಲಾಗಿದೆ. ಈಗಿನ ನಿಧಿಯನ್ನೇ ಲೆಕ್ಕಹಾಕಿದರೆ ಒಬ್ಬ ಸಂಸದನಿಗೆ 5ವರ್ಷದಲ್ಲಿ 25ಕೋಟಿ ಪ್ರದೇಶಾಭಿವೃದ್ಧಿ ನಿಧಿ ಸಿಗುತ್ತದೆ. ಒಬ್ಬ ಸಂಸದನಿಗೆ 5-6 ಶಾಸಕರ ಕ್ಷೇತ್ರಗಳಿರುತ್ತವೆ. ಇಷ್ಟು ದೊಡ್ಡ ಕ್ಷೇತ್ರಕ್ಕೆ 25 ಕೋಟಿ ಯಾವ ಲೆಕ್ಕ? ಒಂದೊಂದು ಶಾಸಕರ ಕ್ಷೇತ್ರಕ್ಕೆ 1 ಕೋಟಿ ಕೂಡ ಸಿಗದು. ಈಗ ಯಾವ ಯೋಜನೆಯೂ 1 ಕೋಟಿಗಿಂತ ಕಡಿಮೆ ಇರುವುದು ಅಪರೂಪ. ಅದರ ನಡುವೆ ಚುನಾವಣೆಯಲ್ಲಿ ಸಹಾಯ ಮಾಡಿದವರ ಪ್ರದೇಶ, ಪ್ರಭಾವಿ ಕಾರ್ಯಕರ್ತರ ಪ್ರದೇಶ, ಇನ್ಯಾವುದೋ ಜಾತಿಯ ಸಮುದಾಯಭವನಕ್ಕೆ ಹಣ ಕೊಡಬೇಕು.
ಇಂಥದ್ದೊಂದು ಸಮಸ್ಯೆ ಗಂಭೀರವಾಗಿದೆ. ಇದನ್ನು ಪರಿಹರಿಸಲೇಬೇಕು ಎಂದು ನಿರ್ಧರಿಸಿ ಸಂಸದರು ಅವರಿಗೆ ಇಷ್ಟವಾದ ಕೆಲಸಕ್ಕೆ ಮನಬಂದಷ್ಟು ಹಣ ಕೊಡುವಂತಿಲ್ಲ. ಅದಕ್ಕೂ ಕೆಲವು ನಿಬಂಧನೆಗಳಿವೆ. ಇವುಗಳ ನಡುವೆಯೇ ಅವರು ಕೆಲಸ ಮಾಡಬೇಕಾಗುತ್ತದೆ.
ಇನ್ನು ಯೋಜನೆಗಳು. ಒಬ್ಬ ಸಂಸದ ಎಷ್ಟೇ ಪ್ರಭಾವಿಯಾಗಿದ್ದರೂ, ಕೆಲಸ ಮಾಡುವವನಾಗಿದ್ದರೂ ಕೇಂದ್ರ ಸರ್ಕಾರದಿಂದ ಯಾವುದೇ ಯೋಜನೆಯನ್ನು ನೇರವಾಗಿ ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡುಬರಲು ಸಾಧ್ಯವಿಲ್ಲ. ಯೋಜನೆ ಬಗ್ಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಹೋಗಬೇಕು. ಅದು ಕೇಂದ್ರ ಸರ್ಕಾರದ ನಿಯಮಗಳಿಗೆ ಅನುಗುಣವಾಗಿರಬೇಕು. ಅಂದರೆ ಮಾತ್ರ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡುತ್ತದೆ. ಅನುಮತಿ ನೀಡಿದ ನಂತರವೂ  ರಾಜ್ಯ ಸರ್ಕಾರ ಈ ಸಂಸದರ ಪ್ರದೇಶದಲ್ಲೇ ಮೊದಲು ಕೆಲಸ ಆರಂಭಿಸಬೇಕೆಂಬ ನಿಯಮವಿಲ್ಲ. ತನ್ನ ಕ್ಷೇತ್ರವ್ಯಾಪ್ತಿಗೆ ಇದು ಅತ್ಯಂತ ಮುಖ್ಯ ಯೋಜನೆ ಎಂದಾದರೆ ಸಂಸದರು ಹೆಚ್ಚೆಂದರೆ ಕೇಂದ್ರ ಸಚಿವರನ್ನು, ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗೆ ಬೇಗ ಅನುಮೋದನೆ ನೀಡುವಂತೆ ಒತ್ತಾಯಿಸಬಹುದು.
ಇನ್ನು ಕೇಂದ್ರ ಸರ್ಕಾರಕ್ಕೇ ಸಂಬಂಧಿಸಿದ ವಿಭಾಗಗಳಾದ ಹೆದ್ದಾರಿ ಮುಂತಾದ ವಿಭಾಗಗಳಿಗಾದರೆ ಸಂಸದರು ಸ್ವಲ್ಪ ಹೆಚ್ಚು ಒತ್ತಡ ಹೇರಬಹುದು. ಉದಾಹರಣೆಗೆ ಶಿರಾಡಿ ಘಾಟ್. ಅಷ್ಟು ಹಾಳಾದರೂ ಏನೂ ಮಾಡಲಿಲ್ಲ ಎಂದು ದೂರುವವರಿದ್ದರು. ಈ ಬಗ್ಗೆ ಸಂಸದ ಹೆಚ್ಚೆಂದರೆ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಬಹುದು. ಕೇಂದ್ರ ಸಚಿವರನ್ನು ಪದೇ ಪದೇ ಒತ್ತಾಯಿಸಬಹುದು. ಇದೆಲ್ಲವನ್ನೂ ಮೀರಿದರೆ ಅಧಿವೇಶನದಲ್ಲಿ ಧರಣಿ, ಗದ್ದಲ ಮಾಡಬಹುದು. ಹಾಗೆ ಮಾಡುವಾಗಲೂ ದೇಶದಲ್ಲಿ ಶಿರಾಡಿಯಂತಹ ಸುಮಾರು ಘಾಟಿಗಳಿವೆ ಎಂಬುದನ್ನು ನಾವು ಮರೆಯಬಾರದು. ಅಥವಾ ಇಂತಹ ಘಾಟಿಗಳಿಗಿಂತ ಮುಖ್ಯವಾದ ಸಂಗತಿಯೊಂದನ್ನು ಪಕ್ಷ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶ ಹೊಂದಿರಬಹುದು. ಆಗ ಇಲ್ಲ ನಾನು ಶಿರಾಡಿ ಘಾಟ್ ಅಥವಾ ಇನ್ಯಾವುದೋ ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಧರಣಿ ನಡೆಸುತ್ತೇನೆ ಎಂದು ಹೇಳಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲೆಲ್ಲ ಸಂಸದ ಅನಿವಾರ್ಯವಾಗಿ ಸುಮ್ಮನಿರಬೇಕಾಗುತ್ತದೆ. ಕೆಲವೊಮ್ಮೆ ಧರಣಿ ಮಾಡಿದರೂ ಪ್ರಯೋಜನವಾಗುವುದಿಲ್ಲ.
ನಮ್ಮ ಪ್ರದೇಶದ ಜಿಲ್ಲಾ ಪಂಚಾಯತ್ ಸದಸ್ಯ, ನಮ್ಮ ಶಾಸಕರು 5 ವರ್ಷದಲ್ಲಿ ಎಷ್ಟು ಸಾರಿ ಭೇಟಿ ನೀಡುತ್ತಾರೆ? ಹೆಚ್ಚೆಂದರೆ 2-3 ಬಾರಿ. ಅಂತಹ 5-6 ಶಾಸಕರ ಕ್ಷೇತ್ರ ವ್ಯಾಪ್ತಿಹೊಂದಿರುವ ಸಂಸದರು ಎಷ್ಟು ಸಾರಿ ಬಂದಾರು?
ಜನ ಒಂದು ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ ನಾವು ಸಂಸದರನ್ನು ಆರಿಸುವುದು ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಹೊರತು ಚರಂಡಿ, ರಸ್ತೆ, ತೋಡು ಅಭಿವೃದ್ಧಿ ಮಾಡಲು ಅಲ್ಲ. ನಾವು ಆಯ್ಕೆ ಮಾಡಿದ ಸಂಸದರು ನಮ್ಮ ಕ್ಷೇತ್ರಕ್ಕಿಂತ ಹೆಚ್ಚಾಗಿ ದೇಶಕ್ಕೆ ಕೊಡುಗೆ ನೀಡಲು ಸಮರ್ಥರಾಗಿರಬೇಕು. ನಮ್ಮ ಗಡಿ, ಸೈನಿಕರು, ರಾಷ್ಟ್ರೀಯತೆ, ದೇಶಾಭಿಮಾನ, ದೇಶದ ಆರ್ಥಿಕ ವ್ಯವಸ್ಥೆ, ಆಂತರಿಕ ಭದ್ರತೆ, ದೂರದೃಷ್ಟಿಯ ಯೋಜನೆಗಳು ಇಂತಹ ಸಂಗತಿಗಳ ಬಗ್ಗೆ ನಾವು ಅವರಿಂದ ಉತ್ತಮ ಕೊಡುಗೆಗಳನ್ನು ನಿರೀಕ್ಷಿಸಬೇಕೇ ಹೊರತು, ಗಟಾರ, ರಸ್ತೆ, ಕಸ ತೆಗೆಯುವ ಕೆಲಸಗಳನ್ನಲ್ಲ. ಇಂತಹ ಕೆಲಸಗಳನ್ನು ಮಾಡಲೆಂದೇ ಮಹಾನಗರ ಪಾಲಿಕೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಿವೆ. ಇನ್ನೂ ಸ್ವಲ್ಪ ದೊಡ್ಡ ಕೆಲಸವಾದರೆ ಶಾಸಕರಿದ್ದಾರೆ.
ಸಂಸದರನ್ನು ಆರಿಸುವಾಗ ರಾಷ್ಟ್ರದ ಸಂಗತಿಗಳು ನಮಗೆ ಪ್ರಮುಖವಾಗಬೇಕೇ ಹೊರತು, ಸ್ಥಳೀಯ ಸಮಸ್ಯೆಗಳಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕವೂ ನಾವು ಇದನ್ನು ಅರ್ಥಮಾಡಿಕೊಂಡಿಲ್ಲ. ಇದರ ಪರಿಣಾವಾಗಿಯೇ ನಾವು ಸಣ್ಣ ಸಣ್ಣ ಸಂಗತಿಗಳಿಗೆ ಸಂಸದರನ್ನು ದೂರುತ್ತಿದ್ದೇವೆ. ಸರಿಯಾಗಿ ಅರ್ಥಮಾಡಿಕೊಂಡರೆ ಬಹುಶಃ ನಾವು ಅವರನ್ನು ಅಳೆಯುವ ರೀತಿ ಬದಲಾಗಬಹುದು.
ಒಳ್ಳೆಯ ಸಂಸದರು ಎಂದುಕೊಂಡಿರುವವರ ಕುರಿತೂ ಇಂತಹ ದೂರುಗಳನ್ನು ಕೇಳಿದಾಗೆಲ್ಲ, ಊಟಮಾಡುವಾಗ ಮೈಮೇಲೆ ಬೀಳಿಸಿಕೊಂಡಿದ್ದನ್ನು ಬೇರೆಯವರು ಒರೆಸಿಕೊಡಬೇಕಾದ ಸ್ಥಿತಿಯಲ್ಲಿರುವವರನ್ನೂ ನಾವು ಸಂಸದರಾಗಿ ಹೇಗೆ ಆಯ್ಕೆ ಮಾಡಿದೆವು ಎಂಬುದು ನನಗೆ ಅಚ್ಚರಿಯಾಗಿ ಕಾಡುತ್ತದೆ.

-ವಿನಾಯಕ ಭಟ್ಟ, ಮೂರೂರು
vakradanta@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.