ನಾವೆಲ್ಲ ಬದಲಾವಣೆ ವಿರೋಧಿಸೋದು ಯಾಕಂದ್ರೆ...
ಗುಡ್. ಗುಡ್. ಸಿಕ್ಕಾಪಟ್ಟೆ ಜನ ನಮ್ಮನ್ನು ಬಯ್ತಿದಾರೆ. ಹತ್ತು ವರ್ಷ ಹಗರಣಗಳಲ್ಲೇ ಹೂತುಹೋದ ಪಕ್ಷವನ್ನು ಬೆಂಬಲಿಸುತ್ತಿದ್ದಾರಲ್ಲಾ ಎಂಬ ಸಿಟ್ಟು ಅವರೆಲ್ಲರದ್ದು. ನಮಗೆ ಇದು ತುಂಬ ಖುಷಿ ಕೊಟ್ಟಿರುವ ವಿದ್ಯಮಾನ. ನಮ್ಮನ್ನು ಯಾರಾದರೂ ಗಮನಿಸಬೇಕು, ಅದು ಮುಖ್ಯ. ಏಕೆಂದರೆ ಪುಸ್ತಕ ಬರೆದು ಚಿಂತನೆಗೆ ಹಚ್ಚಿಸಿ, ಆ ಮೂಲಕ ಸುದ್ದಿಯಾಗುವ ಸಾಮರ್ಥ್ಯವನ್ನು ನಾವು ಯಾವತ್ತೋ ಕಳೆದುಕೊಂಡುಬಿಟ್ಟಿದ್ದೇವೆ. ಹೀಗಾಗಿ ಬಯ್ದೋ, ಚೀರಿಯೋ, ಅಬ್ಬರಿಸಿಯೋ ನಾವು ಮುಖಪುಟಕ್ಕೆ ಬರುತ್ತೇವೆ. ನಾವು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇವೆ ಅಂದಾಕ್ಷಣ ಬಿಜೆಪಿಯವರು ಭಾರಿ ಗಲಿಬಿಲಿಗೆ ಬಿದ್ದು ನಮ್ಮನ್ನು ವಿರೋಧಿಸಿ ಹೇಳಿಕೆ ಕೊಟ್ಟರು. ನಮಗೇನು ಖುಷಿಯಾಯಿತು ಅಂತೀರಾ? ಅವರು ನಮ್ಮನ್ನು ಸೀರಿಯಸ್ ಆಗಿ ತಗೋಂಡ್ರಲ್ಲ ಅಂತ ನಮಗೇ ನಗುಬಂತು. ಅದಕ್ಕೂ ಮೊದಲು ಒಳಗೊಳಗೇ ಆತಂಕವಾಗಿತ್ತು.
ಏಕಂದ್ರೆ ಬಿಜೆಪಿಯ ಬುದ್ಧಿವಂತರ್ಯಾರಾದರೂ, 'ಅವರು ಕಾಂಗ್ರೆಸ್ಗೆ ಬೆಂಬಲ ಕೊಟ್ಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಈ ಮೂಲಕ ಲೂಟಿಕೋರರೊಂದಿಗೆ ಅಂಥ ಮನಸ್ಥಿತಿಯವರೇ ಕೈಜೋಡಿಸುತ್ತಾರೆ ಎಂಬುದನ್ನು ಬುದ್ಧಿಜೀವಿಗಣ ಸಾಬೀತು ಮಾಡಿದೆ. ಇವರು ಬರೆದ ಪುಸ್ತಕ ಓದುವವರು ದಿಕ್ಕಿಲ್ಲ ಎಂದೇ ಸರ್ಕಾರಿ ಪೋಷಿತ ಅಕಾಡೆಮಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಸಮಾಜಕ್ಕೆ ಏನೂ ಉಪಯೋಗವಾಗದ ಕೆಲಸ ಮಾಡುತ್ತ ಅಥವಾ ಕೆಲಸ ಮಾಡುತ್ತಿದ್ದೇವೆಂದು ತೋರಿಸಿಕೊಳ್ಳುತ್ತ ಬದುಕು ಕಟ್ಟಿಕೊಂಡಿದ್ದಾರೆ. ಇಂಥವರ ಮನವಿಗೆ ಜನ ಮತ ಕೊಡುವುದು ಹಾಗಿರಲಿ, ಈ ಯೂಸ್ಲೆಸ್ ಫೆಲೊಗಳೆಲ್ಲ ಸೇರಿಕೊಂಡಿದ್ದಾರಲ್ಲ ಅಂತ ಕೊಡಲಿರುವ ಮತವನ್ನೂ ಬೇರೆಯವರಿಗೆ ಚಲಾಯಿಸುವ ಸಾಧ್ಯತೆ ಅಧಿಕವಾಗಿದೆ' ಎಂದುಬಿಟ್ಟಿದ್ದರೆ ಪೇಚಿಗಿಟ್ಟುಕೊಳ್ಳುತ್ತಿತ್ತು. ಹಾಗೆ ಮಾಡದೇ ಇದ್ದಿದ್ದಕ್ಕೆ ಅವರಿಗೆ ಧನ್ಯವಾದಗಳು ಸಲ್ಲುತ್ತವೆ!
ಭ್ರಷ್ಟಾಚಾರ, ಗಡಿ ರಕ್ಷಣೆ, ಕಾನೂನು- ಸುವ್ಯವಸ್ಥೆ ಇವೆಲ್ಲವನ್ನೂ ನಮ್ಮ ಬಳಿ ಚರ್ಚಿಸುವುದಕ್ಕೆ ಬರಬೇಡಿ. ಅಷ್ಟೆಲ್ಲ ಅಧ್ಯಯನ ಮಾಡುವ ಅರ್ಹತೆ ನಮಗಿದ್ದರೆ ನಾವೇಕೆ ಆಯುಷ್ಯಪರ್ಯಂತ ಸರ್ಕಾರಿ ಕೃಪಾಛತ್ರವನ್ನು ಬಯಸುತ್ತಿದ್ದೆವು? ಬೇಕಾದರೆ ನಾಳೆಯೇ ಪಾಕಿಸ್ತಾನ, ಚೀನಾ ಸೇರಿಕೊಂಡು ನಮ್ಮ ದೇಶವನ್ನು ವಶಪಡಿಸಿಕೊಂಡರೂ ನಮ್ಮ ನಿಲವು ಅಚಲ. 'ಈ ದೇಶದಲ್ಲಿ ಕೋಮುವಾದವಿದೆ. ಅದರ ಎದುರು ಎಲ್ಲ ಸಮಸ್ಯೆಗಳೂ ನಶ್ವರ.' ಆ್ಯಕ್ಚುವಲಿ, ನಾವು ಕಾಂಗ್ರೆಸ್ ಬೆಂಬಲಿಸುತ್ತೇವೆ ಅಂತೇನೂ ಅಲ್ಲ. 'ಸೆಕ್ಯುಲರ್' ಎಂಬ ಹಣೆಪಟ್ಟಿಯ ಎಲ್ಲರನ್ನೂ ಬೆಂಬಲಿಸುತ್ತೇವೆ. ಏಕೆಂದರೆ ದೇಶದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಹೆಚ್ಚು ಆಳ್ವಿಕೆ ಮಾಡಿರುವವರು ಇವರೇ. ನಮ್ಮಂಥವರು ನಯಾಪೈಸೆ ಕೆಲಸ ಮಾಡದೇ ಕುಳಿತು ತಿನ್ನುವುದಕ್ಕೆ ಬೇಕಾದ ಅಕಾಡೆಮಿಗಳು, ವೈಟ್ ಕಾಲರ್ ಸರ್ಕಾರಿ ಹುದ್ದೆಗಳನ್ನು ಸೃಷ್ಟಿಸಿರುವವರು ಇವರೇ. ಹೀಗಾಗಿ ಇವರು ಬದಲಾದರೆ ವ್ಯವಸ್ಥೆ ಬದಲಾಗಿಬಿಡುತ್ತದೆ. ಆಗ ನಮ್ಮಂಥವರಿಗೆ ಸಂಚಕಾರ!
ಮೇಲ್ವರ್ಗದವರನ್ನು ಬಯ್ಯುವುದೇ ನಮ್ಮ ಹಿಂದಿನ ಸಾಹಿತ್ಯದ ಹಾಗೂ ಇಂದಿನ ಮೈಕ್ ಕೃಷಿಯ ಬಂಡವಾಳ. ದಲಿತರು, ಹಿಂದುಳಿದವರು ಇವರನ್ನೆಲ್ಲ ಕತ್ತಲಲ್ಲಿರಿಸಿ ತಾವು ಬದುಕುವುದೇ 'ಬ್ರಾಹ್ಮಣಶಾಹಿ', 'ಯಥಾಸ್ಥಿತಿವಾದಿ' ವರ್ಗದ ಹುನ್ನಾರ ಎಂಬ ನಮ್ಮ ಪ್ರತಿಪಾದನೆ ಒಂದು ಕಾಲದಲ್ಲಿ ಪ್ರಸ್ತುತವಾಗಿತ್ತು. ಈಗ ಅಪ್ರಸ್ತುತವಾದರೂ ನಾವು ಹಚ್ಚಿದ ರೋಷದ ಕಾವು ಆರಲು ಕೊಡದಂತೆ ಮಾಡುತ್ತಿದ್ದೇವೆ. ಏಕೆಂದರೆ ಅಧಿಕಾರಕೇಂದ್ರ ಬದಲಾಗಬಾರದು ಎಂಬ ನೈಜ 'ಯಥಾಸ್ಥಿತಿವಾದಿ'ಗಳು ನಾವೇ ಆಗಿದ್ದೇವೆ. ಸರ್ಕಾರಿ ಸವಲತ್ತನ್ನು ಭೋಗಿಸುವುದಕ್ಕೆ ನಮ್ಮದೇ 'ಪೌರೋಹಿತ್ಯ'ಗಣವನ್ನು ಸಾಹಿತ್ಯ-ಚಿಂತನೆಗಳ ಹೆಸರಲ್ಲಿ ಕಟ್ಟಿಕೊಂಡಿದ್ದೇವೆ. ದಲಿತರು, ಶ್ರಮ ವರ್ಗದವರು ಕಟ್ಟಿದ ತೆರಿಗೆ ಹಣದಲ್ಲಿ ನಾವು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರೆ ಅದೇನು ಖುಷಿ ಆಗುತ್ತೆ ಗೊತ್ತಾ? ಡಾಲರ್ಸ್ ಕಾಲೋನಿಯಲ್ಲಿ ಕುಳಿತು ದಲಿತ ಚಿಂತನೆ ಮಾಡುತ್ತ, ಫ್ಯಾಷನ್ ಗುರುಗಳೆಂಬ ಸಮಾಜದ ಉನ್ನತ ಶ್ರಮವರ್ಗದ ಜತೆಗೂಡಿ, ಮಧ್ಯರಾತ್ರಿವರೆಗೆ ಕುಡಿಯುವುದಕ್ಕೆ ಅವಕಾಶ ಬೇಕೆಂದು ಗಾಂಧಿ ಪ್ರತಿಮೆ ಎದುರು ಮಾಡಿದ ಹೋರಾಟಗಳನ್ನೆಲ್ಲ ಸಮಾಜ ಗಮನಿಸದಿದ್ದರೆ ಹೇಗೆ?
ಹೋಗಲಿ, ಆ ಆಡ್ವಾಣಿಯಾದರೂ ಪ್ರಧಾನಿಯಾಗಬಹುದಿತ್ತು. ಶ್ರಮ ಸಂಸ್ಕೃತಿಯ ಬೆಲೆ ಗೊತ್ತಿರುವ ಗಾಣಿಗ ಸಮುದಾಯದ ವ್ಯಕ್ತಿಯೊಬ್ಬ ಈ ದೇಶದ ಪ್ರಧಾನಿಯಾಗಿ, ಆತನ ನೀತಿಗಳಿಂದ ದುಡಿಮೆಗೆ ಮಾತ್ರ ಬೆಲೆ ಬರುವಂತಾದರೆ? ಇವನ್ನೆಲ್ಲ ಸಹಿಸೋಕಾಗುತ್ತೇನ್ರೀ?
-ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

