ಒಬ್ಬರಿಗೆ ಸರ್ಕಾರದ ಬೆಂಬಲ, ಇನ್ನೊಬ್ಬರಿಗೆ ನಾಮದ ಬಲ

ಮನಸ್ಸು ಮಾಡಬೇಕಾದವರು ಮತದಾರರು. ಅವರ ಆಸ್ಥೆ ನಿರೀಕ್ಷೆಗೆ ನಿಲುಕದ್ದು..
ಒಬ್ಬರಿಗೆ ಸರ್ಕಾರದ ಬೆಂಬಲ, ಇನ್ನೊಬ್ಬರಿಗೆ ನಾಮದ ಬಲ
Updated on: 

ಚುನಾವಣಾ ಕಣದಲ್ಲಿರುವ ಎಲ್ಲರ ಆಸೆಯೂ ಗೆಲುವೇ ಆಗಿರುತ್ತದೆ. ಆದರೆ, ಮನಸ್ಸು ಮಾಡಬೇಕಾದವರು ಮಾತ್ರ ಮತದಾರರು. ಅವರ ಆಸ್ಥೆ ಅಭ್ಯರ್ಥಿಗಳ ನಿರೀಕ್ಷೆಗೆ ನಿಲುಕದ್ದು ಎಂಬುದು ಬೇರೆ ಮಾತು. ಗೆಲ್ಲಲೇಬೇಕು ಎಂಬ ಕಾರಣಕ್ಕೆ ಒಂದೊಂದು ರಾಜಕೀಯ ಪಕ್ಷವೂ ಒಂದೊಂದು ತಂತ್ರದ ಮೊರೆ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ ತಂತ್ರಗಳ ಸಾಮ್ಯತೆ ಕೂಡ ಇರಬಹುದು. ಇಲ್ಲಿಯೂ ಕೂಡ ಆಯಾ ಪಕ್ಷಗಳ ತಾಕತ್ತು ಮುಖ್ಯ ಪಾತ್ರ ವಹಿಸುತ್ತದೆ.

ದೇಶದೆಲ್ಲೆಡೆ ಕಬ್ಬಿಣದ ಎರಕದಂತೆ ಭಗಭಗ ಎನ್ನುತ್ತಿರುವ ಸಂಸತ್ ಚುನಾವಣೆ ಕಾವು ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳನ್ನು ಜೋಲಿ ಹೊಡಿಸುತ್ತಿದೆ. ಚುನಾವಣೆಗೆ ಮೂರು ದಿನ ಮಾತ್ರ ಬಾಕಿ ಉಳಿದಿರುವ ರಾಜ್ಯದ ಕೆಲವೆಡೆ ಬಿಸಿಲ ಝಳ ನಲ್ವತ್ತು ಡಿಗ್ರಿ ಸೆಲ್ಸಿಯಸ್ ದಾಟಿದೆ. ಆದರೆ ಚುನಾವಣೆಯ ಒಳ ಮತ್ತು ಹೊರ ತಾಲೀಮಿನ ಭರಾಟೆ ಸಹರಾ ಮರುಭೂಮಿ ತಾಪಮಾನವನ್ನೂ ಹಿಂದಿಕ್ಕಿದೆ.
ಹೌದು, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಭ್ರಷ್ಟಾಚಾರ, ಅನಾಚಾರ ವಿಷಯಗಳಿಂದ ಹಿಡಿದು ಪತ್ನಿ, ಉಪಪತ್ನಿ, ಮಕ್ಕಳು, ಅಪ್ಪ-ಅಮ್ಮ, ಸಹೋದರ, ಸಹೋದರಿ ಸಂಬಂಧಗಳವರೆಗೂ ನಾನಾ ವಿಚಾರಗಳು ಪ್ರಚಾರದ ಅಸ್ತ್ರಗಳಾಗಿವೆ. ಜಾತಿ, ಧರ್ಮ, ಕುಲ, ಕಸುಬು, ಗುಣ, ಲಕ್ಷಣ - ಹೀಗೆ ಬೇಕಾದ, ಬೇಡವಾದ ಸಂಗತಿಗಳು ಅಭ್ಯರ್ಥಿಗಳ ವಾದ-ಪ್ರತಿವಾದದ ಇತಿಮಿತಿಗಳನ್ನು ದಾಟಿ ಮತದಾರರ ಬುದ್ಧಿಶಕ್ತಿಗೆ ಸವಾಲೊಡ್ಡಿವೆ.
ಅರ್ಹತೆ, ಯೋಗ್ಯತೆ, ತಾಕತ್ತು, ದೌರ್ಬಲ್ಯ ಏನೇ ಇರಲಿ ನೀವು ಯಾವುದೇ ಪಕ್ಷದ ಮುಖಂಡರನ್ನು ಕೇಳಿ ನೋಡಿ ತಮ್ಮ ಪಕ್ಷ ಅತ್ಯಧಿಕ ಸ್ಥಾನ ಗಳಿಸುವುದು ಖಚಿತ ಎಂಬ ಉತ್ತರ ಸಿಗುತ್ತದೆ. ಆದರೆ, ಇದಕ್ಕೆ ಆಧಾರ ಏನೆಂಬುದನ್ನು ಸಾಕ್ಷ್ಯ ಸಮೇತ ನೀಡಲು ಯಾವ ಪಕ್ಷಕ್ಕೂ ಆಗುವುದಿಲ್ಲ. ಹೆಚ್ಚೆಂದರೆ ವಿರೋಧಿ ಪಾಳೆಯದ ಹುಳುಕುಗಳನ್ನು ಮುಂದೆ ಮಾಡುತ್ತಾರೆ. ಆದರೆ, ಅದೇ ಕಾಲಕ್ಕೆ ತಮ್ಮ ಸಾಧನೆಗಳನ್ನು ವಿವರಿಸಲು ವಿಫಲರಾಗುತ್ತಾರೆ. ರಾಜ್ಯದಲ್ಲಿ ಬಿಜೆಪಿ 20ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಆ ಪಕ್ಷದ ಮುಖಂಡರು ಹೇಳಿಕೊಳ್ಳುತ್ತಾರೆ. ಅದೇ ರೀತಿ ತಾವೂ ಕೂಡ 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬುಟ್ಟಿಗೆ ಹಾಕಿಕೊಳ್ಳವುದಾಗಿ ಕಾಂಗ್ರೆಸ್ ಹೇಳುತ್ತದೆ. ಜೆಡಿಎಸ್ 12 ಸ್ಥಾನ ಗೆಲ್ಲುತ್ತದಂತೆ, ಆಮ್ ಆದ್ಮಿ ಐದಾರು ಸ್ಥಾನ ಕಬಳಿಸುತ್ತದಂತೆ. ಪಕ್ಷೇತರರು ತಾವೇನೂ ಕಡಿಮೆ ಇಲ್ಲ ಎನ್ನುತ್ತಾರೆ. ಹೀಗೆ ಎಲ್ಲರೂ ಹೇಳಿಕೊಳ್ಳುವುದನ್ನು ನೋಡಿದರೆ ಅಥವಾ ಕೇಳಿದರೆ ರಾಜ್ಯದಲ್ಲಿ ಒಟ್ಟಾರೆ 60 ಸ್ಥಾನಗಳು ಅವುಗಳಿಗೆ ಸಿಗಬೇಕು. ಆದರೆ ಇಲ್ಲಿರುವುದು 28 ಲೋಕಸಭೆ ಕ್ಷೇತ್ರಗಳು ಮಾತ್ರ. ಹಾಗಾದರೆ ಉಳಿದ 32 ಸ್ಥಾನಗಳನ್ನು ಎಲ್ಲಿಂದ ತರಬಹುದು? ಗೊತ್ತಿಲ್ಲ.
ಇರಲಿ ಪಾಪ. ಚುನಾವಣಾ ಕಣದಲ್ಲಿರುವ ಎಲ್ಲರ ಆಸೆಯೂ ಗೆಲುವೇ ಆಗಿರುತ್ತದೆ. ಆದರೆ, ಮನಸ್ಸು ಮಾಡಬೇಕಾದವರು ಮಾತ್ರ ಮತದಾರರು. ಅವರ ಆಸ್ಥೆ ಅಭ್ಯರ್ಥಿಗಳ ನಿರೀಕ್ಷೆಗೆ ನಿಲುಕದ್ದು ಎಂಬುದು ಬೇರೆ ಮಾತು. ಗೆಲ್ಲಲೇಬೇಕು ಎಂಬ ಕಾರಣಕ್ಕೆ ಒಂದೊಂದು ರಾಜಕೀಯ ಪಕ್ಷವೂ ಒಂದೊಂದು ತಂತ್ರದ ಮೊರೆ ಹೋಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ ತಂತ್ರಗಳ ಸಾಮ್ಯತೆ ಕೂಡ ಇರಬಹುದು. ಇಲ್ಲಿಯೂ ಕೂಡ ಆಯಾ ಪಕ್ಷಗಳ ತಾಕತ್ತು ಮುಖ್ಯ ಪಾತ್ರ ವಹಿಸುತ್ತದೆ.
ಹೊರ ನೋಟಕ್ಕೆ ಕತ್ತೆ ಕಿರುಬನಂತೆ ಕಚ್ಚಾಡುವವರು ಒಳಗೊಳಗೆ ಮಾವನ ಮನೆಯ ಅಳಿಯತನ ಅನುಭವಿಸುವವರಂತೆ ವರ್ತಿಸುತ್ತಿರುತ್ತಾರೆ. ಅಲ್ಲಿ ಪ್ರೀತಿ ಇರಲಿ ಅಥವಾ ದ್ವೇಷ ಇರಲಿ ಅದರ ಸುತ್ತ ಹೊರ ಮತ್ತು ಒಳ ಒಪ್ಪಂದಗಳು ಸುತ್ತಾಡುತ್ತಿರುತ್ತವೆ. ತಮ್ಮ ಎದುರಾಳಿಯನ್ನು ಮಣಿಸಲು ಯಾವ ಪಕ್ಷದವರು, ಯಾವ ಪಕ್ಷದವರ ಜತೆ ಕೈ ಜೋಡಿಸುತ್ತಾರೆ, ಯಾರು ಯಾರಿಗೆ ಸುಪಾರಿ ಕೊಡುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವೇ ಇಲ್ಲ. ಎಲ್ಲ ತಂತ್ರ, ಕುತಂತ್ರಗಳ ಪರಿಣಾಮವಾಗಿ ಚುನಾವಣೆ ಕಣದಲ್ಲಿರುವವರು ಕೊನೆಯ ಕ್ಷಣದಲ್ಲಿ ಗಾಯಬ್ ಆಗುತ್ತಾರೆ. ಕೆಲವರು ಉಮೇದುವಾರಿಕೆಯನ್ನೇ ಮಾರಾಟ ಮಾಡಿಕೊಂಡರೆ ಇನ್ನು ಕೆಲವರು ಸ್ವಾಭಿಮಾನವನ್ನು ಅಡಮಾನಕ್ಕೆ ಇಡುತ್ತಾರೆ. ಹಣಕಾಸುವಾದ ಹಾಗೂ ಅವಕಾಶವಾದ ರಾಜಕಾರಣದ ಮುಂದೆ ಅವರ ವ್ಯಕ್ತಿತ್ವ, ಗೌರವ ಗೌಣವಾಗುತ್ತದೆ. ಕೆಲವರಿಗೆ ಅಭ್ಯರ್ಥಿತನ ಎಂಬುದು ಹಣಕಾಸು ಮಾಡಿಕೊಳ್ಳುವ ಕಸುಬಾಗುತ್ತದೆ. ಈ ಕಸುಬೇ ಪ್ರಧಾನವಾಗಿ ಮಾನ, ಮರ್ಯಾದೆ ಕಿಮ್ಮತ್ತು ಕಳೆದುಕೊಳ್ಳುತ್ತವೆ. ಮತದಾನದ ಹೊಸ್ತಿಲಲ್ಲಿ ರಾಜ್ಯದ ನಾನಾ ಕಡೆ ನಡೆದಿರುವ ಘಟನೆಗಳನ್ನು ಅವಲೋಕಿಸಿದರೆ ಈ ಮಾತು ಅದೆಷ್ಟು ಸತ್ಯ ಎಂದೆನಿಸುತ್ತದೆ.
ಚುನಾವಣೆಯ ಮುಖ್ಯ ಗುರಿ ಗೆಲುವು ಎಂಬುದೇನೋ ಸರಿ. ಹೊಟ್ಟೆ ಪಕ್ಷದ ದಿವಂಗತ ರಂಗಸ್ವಾಮಿಯಿಂದ ಹಿಡಿದು ರಾಹುಲ್ ಗಾಂಧಿವರೆಗೂ, ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಅವರಿಂದ ಹಿಡಿದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿವರೆಗೂ ಕಣಕ್ಕಿಳಿದಿರುವ, ಮುಂದೆ ಕಣಕ್ಕಿಳಿಯಲಿರುವ ಎಲ್ಲ ಅಭ್ಯರ್ಥಿಗಳಿಗೂ ಗೆಲುವೇ ಮೂಲಮಂತ್ರ. ಆತ್ಮವಿಶ್ವಾಸ ಇದ್ದವರು ಅನ್ಯ ಕ್ರಮಗಳನ್ನು ಬದಿಗೊತ್ತಿ ಮತದಾರರ ಕೃಪಾಕಟಾಕ್ಷದಿಂದ ಗೆದ್ದು ಬರುತ್ತಾರೆ. ಆದರೆ, ಆತ್ಮವಿಶ್ವಾಸ ಇಲ್ಲದವರು ಕುತಂತ್ರಗಳ ಮೊರೆ ಹೋಗುತ್ತಾರೆ. ಗೆಲ್ಲಬೇಕು ಎಂಬ ಏಕೈಕ ಕಾರಣಕ್ಕೆ ಏನು ಬೇಕಾದರೂ ಮಾಡುತ್ತಾರೆ.
ಪ್ರಸ್ತುತ ರಾಜ್ಯದ ಕೆಲವೆಡೆ ಕೆಲವರು ಕೊನೆಯ ಕ್ಷಣಗಳಲ್ಲಿ ಕಣದಿಂದ ಹಿಂದೆ ಸರಿದು ಅನ್ಯ ಪಕ್ಷಗಳ ಅಂಗಳದಲ್ಲಿ ವಿಜೃಂಭಿಸಿರುವುದು ಇದಕ್ಕೊಂದು ಜ್ವಲಂತ ಸಾಕ್ಷಿ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯಕ ಅಂತಿಮ ಕ್ಷಣದಲ್ಲಿ ಚುನಾವಣಾ ಕಣದಿಂದ ನಿವೃತ್ತಿಯಾದದ್ದು ಇದಕ್ಕೊಂದು ತಾಜಾ ನಿದರ್ಶನ. ಪಕ್ಷದ ಮುಖಂಡರು ಹಣಕಾಸು ನೆರವು ನೀಡಲಿಲ್ಲ ಎಂಬ ಕಾರಣ ಕೊಟ್ಟು ಅವರು ಕಣದಿಂದ ಹೊರ ನಡೆದಿದ್ದಾರೆ. ಕಣಕ್ಕೆ ಇಳಿಯುವಾಗ ಅವರಿಗೆ ಆತ್ಮವಿಶ್ವಾಸಕ್ಕಿಂತ ಹಣಕಾಸಿನ ಅವಲಂಬನೆಯೇ ಮುಖ್ಯವಾಗಿತ್ತು ಎಂಬುದು ಇಲ್ಲಿ ಗೋಚರಿಸುತ್ತದೆ.
ಉತ್ತರ ಕನ್ನಡದಲ್ಲಿ ಹಬ್ಬಿರುವ ಗಾಳಿ ಸುದ್ದಿಗಳು ಶಿವಾನಂದ ನಾಯಕ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಪರವಾಗಿ ಹಿಂದೆ ಸರಿದಿದ್ದಾರಂತೆ. ಇನ್ನು ಕೆಲವರ ಪ್ರಕಾರ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಅವರಿಗೆ ನೆರವಾಗಲು ತಟಸ್ಥರಾದರಂತೆ. ಅವರು ಯಾವ ಅಭ್ಯರ್ಥಿ ಪರ ಹೋದರೋ ಬಿಟ್ಟರೋ ಅದು ಬೇರೆ ಪ್ರಶ್ನೆ. ಆದರೆ, ಅವರು ಹಿಂದೆ ಸರಿಯಲು 'ಹಣಕಾಸು' ವಿಚಾರವೇ ಪ್ರಧಾನ ಪಾತ್ರ ವಹಿಸಿದ್ದು ಎಂಬುದು ಸುಳ್ಳಲ್ಲ. ಇದಕ್ಕೆ ಅವರ ಮಾತೇ ಸಾಕ್ಷಿ.
ಅದೇ ರೀತಿ ಬೇರೆ ಬೇರೆ ಕಡೆ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಮುಖಂಡರು ಅಂತಿಮ ಕ್ಷಣದಲ್ಲಿ ಕಾಲಿಗೆ ಬುದ್ಧಿ ಹೇಳಿದ್ದಾರೆ. ಬೆಳಗಾವಿಯ ಜೆಡಿಎಸ್ ಅಭ್ಯರ್ಥಿ ನಾಸೀರ್ ಭಗವಾನ್ ಉಮೇದುವಾರಿಕೆ ತ್ಯಾಗ ಮಾಡಿ ಸಿದ್ದರಾಮಯ್ಯ ಬಗಲಲ್ಲಿ ನಿಂತರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡದಲ್ಲಿ 35,000 ಮತ ಗಳಿಸಿದ್ದ ಅಮೃತ್ ದೇಸಾಯಿ ಇದೀಗ ಪ್ರಹ್ಲಾದ್ ಜೋಶಿ ಪರ ನಿಂತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಇಸ್ಮಾಯಿಲ್ ತಮಟಗಾರ ನಿನ್ನೆ ಮೊನ್ನೆಯಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಬೆನ್ನ ಹಿಂದೆ ಓಡಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಟಿಕೆಟ್ ಸಿಗದೆ ನಿರಾಶೆಗೊಂಡ ಮಲ್ಲಿಕಾರ್ಜುನಪ್ಪ ಅವರನ್ನು ಕಾಂಗ್ರೆಸ್ ಬರಸೆಳೆದು ಅಪ್ಪಿಕೊಂಡಿದೆ. ಇಲ್ಲಿ ಮುಖ್ಯ ವಿಚಾರವೆಂದರೆ ಈ ರೀತಿ ಅಂತಿಮ ಕ್ಷಣದಲ್ಲಿ ಕಾಲ್ಕಿತ್ತವರೆಲ್ಲರೂ ಜೆಡಿಎಸ್‌ಗೆ ಸೇರಿದವರು.
ಇರಲಿ, ಇನ್ನು ಪ್ರಮುಖ ಪಕ್ಷಗಳು ಕೈ ಎತ್ತುಕೊಂಡು ಹೊರಟಿರುವ ವಿಚಾರಗಳನ್ನು ನೋಡೋಣ. ರಾಷ್ಟ್ರಮಟ್ಟದ ಚುನಾವಣಾ ಓಟದಲ್ಲಿ ಮುಂದಿರುವ ಬಿಜೆಪಿ ಅಯೋಧ್ಯ, ಹಿಂದುತ್ವ, ನರೇಂದ್ರ ಮೋದಿ ಅಲೆ, ಕೇಂದ್ರ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಹೊರಟಿದೆ. ನಿಜ, ಕೇಂದ್ರ ಸರ್ಕಾರ ಹಲವಾರು ಹಗರಣಗಳಿಂದ ಹೈರಾಣಾಗಿರುವುದು ಸುಳ್ಳಲ್ಲ. ಈ ಸರ್ಕಾರದ ಯಾವ ಮೂಲೆಗೆ ಕೈ ಹಾಕಿದರೂ ಬರೀ ಭ್ರಷ್ಟಾಚಾರದ ಮಸಿ ಮೆತ್ತಿಕೊಳ್ಳುತ್ತದೆ. 2ಜಿ ಹಗರಣದಿಂದ ಹಿಡಿದು ಆಗಸ್ತಾ ವೆಸ್ಟ್‌ಲ್ಯಾಂಡ್, ರಕ್ಷಣಾ ಹೆಲಿಕಾಪ್ಟರ್ ಖರೀದಿ ಹಗರಣದವರೆಗೂ ಭ್ರಷ್ಟಾಚಾರ ಸುಳಿಯದ ಕ್ಷೇತ್ರವೇ ಇಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ.
ಬಿಜೆಪಿ ರಾಷ್ಟ್ರಮಟ್ಟದಲ್ಲಿ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಹೊರಟಿದೆಯೋ ಅದೇ ವಿಚಾರಗಳು ರಾಜ್ಯದಲ್ಲಿ ಆ ಪಕ್ಷಕ್ಕೆ ತಿರುಗುಮುರುಗಾಗಿದೆ. ಗಣಿ ಅಕ್ರಮ, ಡಿನೋಟಿಫಿಕೇಷನ್ ಈ ಹಿಂದೆ ಆಳ್ವಿಕೆ ನಡೆಸಿದ ಬಿಜೆಪಿ ನೇತಾರರಿಗೆ ಜೈಲಿನ ದರ್ಶನ ಮಾಡಿಸಿದೆ. ಕೆಲವರು ಅಲ್ಲಿಂದ ನೇರವಾಗಿ ಮನೆಗೆ ಹೋಗಿದ್ದರೆ ಇನ್ನು ಕೆಲವರು ಜೈಲಿನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ಜತೆಗೆ ಅತ್ಯಾಚಾರ ಹಾಗೂ ವಿಧಾನಸಭೆ ಅಧಿವೇಶನದಲ್ಲಿ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ ಕೆಲವು ಮಂತ್ರಿಗಳನ್ನು ಮಾಜಿಗಳನ್ನಾಗಿಯೂ ಮಾಡಿದೆ. ಅದೆಲ್ಲ ಏನೇ ಇರಲಿ, ಆಗೆಲ್ಲ ಸರ್ಕಾರ ಮತ್ತೆ ಪಕ್ಷದ ಆಂತರಿಕ ಮತ್ತು ಬಹಿರಂಗ ಭಿನ್ನಾಭಿಪ್ರಾಯಗಳು ಪಕ್ಷವನ್ನು ಮೂರು ಭಾಗಗಳಾಗಿ ವಿಂಗಡಿಸಿತ್ತು. ಇದೀಗ ನರೇಂದ್ರ ಮೋದಿ ಅವರ ಅಲೆಯಲ್ಲಿ ನಿಗದಿತ ಪಕ್ಷಗಳೆಲ್ಲ ಈಗ ಒಂದಾಗಿವೆ. ಪಕ್ಷದಲ್ಲಿ ಮನಸ್ಸು ಕೆಡಿಸಿಕೊಂಡಿದ್ದವರೆಲ್ಲ ಹಳೆಯದನ್ನು ಮರೆತು ಒಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಈ ಪಕ್ಷಕ್ಕೆ ಪ್ರಬಲವಾಗಿ ಬೆಂಬಲಕ್ಕೆ ಬಂದಿರುವುದು ನರೇಂದ್ರ ಮೋದಿಯವರ ಹೆಸರು ಮತ್ತು ಅಲೆ.
ಕರ್ನಾಟಕದಲ್ಲಿ ಒಂದು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಆಡಳಿತ ವಿರೋಧಿ ಅಲೆಯೇ ದೊಡ್ಡ ಸವಾಲು. ರಾಜ್ಯದಲ್ಲಿ ಬಿಜೆಪಿಗೆ ನರೇಂದ್ರ ಮೋದಿ ಅಲೆ ನೆರವಿಗೆ ಬಂದಿದೆಯೋ ಅದೇ ರೀತಿ ರಾಷ್ಟ್ರಮಟ್ಟದಲ್ಲಿ ಹೆಸರು ಕೆಡಿಸಿಕೊಂಡಿರುವ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಸರ್ಕಾರದ ಅಸ್ತಿತ್ವವೇ ಆತ್ಮರಕ್ಷಣೆಯಾಗಿ ಪರಿಣಮಿಸಿದೆ. ಹೀಗಾಗಿ ಇಲ್ಲಿ ಬಿಜೆಪಿ ಮತ್ತೆ ಕಾಂಗ್ರೆಸ್ ನಡುವೆ ಖುಲ್ಲಂಖುಲ್ಲಾ ಯುದ್ಧ. ಇಲ್ಲಿ ಯಾರು ಹೆಚ್ಚು, ಯಾರು ಕಡಿಮೆ ಎಂದು ಹೇಳಲಾಗದಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿಯ ಗುಣ, ಅವಗುಣಗಳೇ ಚುನಾವಣೆಯ ಸಾಧನ. ಇವರಿಬ್ಬರ ಚುನಾವಣಾ ತಂತ್ರದ ಭಾಗವಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಹಾಗೂ ಮುಖಂಡರನ್ನು ಕಳೆದುಕೊಂಡಿರುವ ಜ್ಯಾತ್ಯತೀತ ಜನತಾ ದಳದ ಸ್ಥಿತಿ ಶೋಚನೀಯವಾಗಿದೆ.
ಒಟ್ಟಾರೆ ರಾಜಕೀಯ ಪರಿಸ್ಥಿತಿಗಳ ಸಂಘರ್ಷಕ್ಕೆ ಅಸ್ತ್ರವಾಗಿರುವ ರಾಜ್ಯದ ಪ್ರಮುಖ ಪಕ್ಷಗಳು ಒಂದಿಲ್ಲೊಂದು ಹೆಸರು ಮತ್ತು ತಂತ್ರದ ಮೊರೆ ಹೋಗಿವೆ. ನರೇಂದ್ರ ಮೋದಿ ಹೆಸರಿನಲ್ಲಿ ತನ್ನ ಕಳಂಕ ತೊಳೆದುಕೊಳ್ಳಲು ಬಿಜೆಪಿ ಹೊರಟಿದೆ. ಸಂಘಟನೆ ಮೂಲಕ ಪಕ್ಷದ ಪುನಶ್ಚೇತನ ಸಾಧ್ಯವಾಗದ ಹಿನ್ನೆಲೆಯಲ್ಲಿ ಮೋದಿ ಅಲೆ ಆಪದ್ಬಾಂಧವನಂತೆ ಬಂದಿದೆ. ಹೀಗಾಗಿ ಬಿಜೆಪಿಗೆ ಮೋದಿ ನಾಮಬಲವೇ ಆತ್ಮಬಲ. ಅವರ ಹೆಸರಿನ ಅಡಿ ಹೆಸರು ಕಳೆದುಕೊಂಡು ಪಕ್ಷದ ಮುಖದಲ್ಲಿ ಕಮಲ ಅರಳಿಸಲು ಅವರೆಲ್ಲರೂ ಸಜ್ಜಾಗಿದ್ದಾರೆ. ಅದೇ ರೀತಿ ಕೇಂದ್ರದ ಯುಪಿಎ ಸರ್ಕಾರದ ನಕಾರಾತ್ಮಕ ಅಂಶಗಳನ್ನು ರಾಜ್ಯದಲ್ಲಿ ಒಂದು ವರ್ಷ ಪೂರೈಸಿರುವ ಸಿದ್ದರಾಮಯ್ಯ ಸರ್ಕಾರ ತನ್ನ ಜನಪ್ರಿಯ ಯೋಜನೆಗಳ ಮೂಲಕ ಪಡೆದುಕೊಳ್ಳಲು ಹೊರಟಿದೆ. ಕಾಂಗ್ರೆಸ್ ಕೈಯಲ್ಲಿ ಅಧಿಕಾರವಿದೆ, ಹಣ ಇದೆ, ಕೇವಲ ಒಂದು ವರ್ಷಪೂರೈಸಿರುವುದರಿಂದ ಈ ಚುನಾವಣೆ ಜನಮತಗಣನೆ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ, ಸಮಬಲದ ಹೋರಾಟ ಎಂದು ಹೇಳಬಹುದು. ಇವರಿಬ್ಬರ ನಡುವೆ ಜೆಡಿಎಸ್ ತನ್ನ ಅಸ್ತಿತ್ವ ರಕ್ಷಣೆಗೆ ಸೆಣಸಬೇಕಿರುವುದು ಸುಳ್ಳಲ್ಲ.
ಲಗೋರಿ: ಪ್ರತಿಬಾರಿಯೂ ಇಬ್ಬರ ಜಗಳದಿಂದ ಮೂರನೆಯವನಿಗೆ ಲಾಭವಾಗದು!

-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com