= ರಮೇಶ, ಒಂದು ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್. ಅವನ ಕೈ ಕೆಳಗೆ ಎಂಟು ಮಂದಿ ಕೆಲಸ ಮಾಡುತ್ತಾರೆ. ಆ ಕಂಪನಿಯಲ್ಲಿ ಸಂಬಳ ಚೆನ್ನಾಗಿದೆ. ಪಿ.ಎಫ್., ಬೋನಸ್, ಮೆಡಿಕಲ್ ಲೀವ್, ಕ್ಯಾಂಟೀನ್ ಸೌಲಭ್ಯ ಹಾಗೂ ರಜೆ ಸೇರಿದಂತೆ ಇತರೆ ಅನುಕೂಲಗಳೂ ಚೆನ್ನಾಗಿವೆ. ರಮೇಶ, ಬೆಂಗಳೂರಿನ ವಿಜಯನಗರದಲ್ಲಿ 12 ಲಕ್ಷ ರೂ.ಗೆ ಒಂದು ಮನೆಯನ್ನು ಲೀಸ್ಗೆ ಪಡೆದಿದ್ದಾನೆ. ಮೈಸೂರಿಗೆ ಸಮೀಪದಲ್ಲಿ ಒಂದು ಸೈಟನ್ನೂ ಖರೀದಿಸಿದ್ದಾನೆ. ಬ್ಯಾಂಕ್ನಿಂದ ಪಡೆದಿರುವ 20 ಲಕ್ಷ ರೂ.ಗಳ ಸಾಲವಿದೆ ಎಂಬುದನ್ನು ಬಿಟ್ಟರೆ, ಅವನದು ಹೊರೆಯೇ ಇಲ್ಲದ ಸಂತೃಪ್ತ ಬದುಕು. ಇಚ್ಛೆಯನರಿತು ಬದುಕುವ ಹೆಂಡತಿ ಇದ್ದಾಳೆ. ಹತ್ತು ಮಂದಿಗೆ ಇಷ್ಟವಾಗುವಂಥ ಮಕ್ಕಳಿವೆ. ಸಮಾಜದಲ್ಲಿ, ರಮೇಶನಿಗೆ ಒಂದು ಸ್ಥಾನಮಾನವೂ ಇದೆ. ಆದರೂ ರಮೇಶನಿಗೆ ನೆಮ್ಮದಿಯಿಲ್ಲ. ಕಾರಣ, ಅವನ ಜೊತೆಯಲ್ಲೇ ಓದಿಕೊಂಡ ಇಬ್ಬರು ಕೆಎಎಸ್ ಶ್ರೇಣಿಯ ಅಧಿಕಾರಿಗಳಾಗಿದ್ದಾರೆ. ಇನ್ನೊಂದಿಬ್ಬರು ಅಮೆರಿಕಾದಲ್ಲಿದ್ದಾರೆ. ಅವರ ಬಳಿ ಕಾರ್ಗಳಿವೆ. ಬಂಗಲೆಗಳನ್ನು ಅಣಕಿಸುವಂಥ ಮನೆಗಳಿವೆ. ಇದನ್ನೆಲ್ಲ ಸುಮ್ಮನೆ ನೆನಪಿಸಿಕೊಂಡರೂ ಸಾಕು, ರಮೇಶ ಖಿನ್ನನಾಗುತ್ತಾನೆ. ಜತೆಗೇ ಆಡಿದವರು, ಜೊತೆಯಲ್ಲಿಯೇ ಓದಿದವರು, ಜೊತೆಯಲ್ಲಿಯೇ ಬೆಳೆದವರು ಈಗ ನನಗಿಂತ ಚೆನ್ನಾಗಿದ್ದಾರಲ್ಲ ಎಂಬ ಒಂದೇ ಒಂದು ಯೋಚನೆ ಅವನನ್ನು ಹಣ್ಣಾಗಿಸುತ್ತವೆ. ಆಗಲೇ, ನಾನೂ ಅವರಂತೆಯೇ ಇದ್ದಿದ್ದರೆ... ಎಂದು ಯೋಚಿಸಿ ರಮೇಶ ನಿಟ್ಟುಸಿರಾಗುತ್ತಾನೆ.
= ಗೌರಿಯ ಗಂಡ ಬಿಜಿನೆಸ್ಮನ್. 'ವ್ಯವಹಾರ ಮಾಡುವವರು ಗ್ರಾಹಕರ ಕಣ್ಣಿಗೆ ಶ್ರೀಮಂತರಂತೆ ಕಾಣಿಸಿಕೊಳ್ಳಬೇಕು. ಕೆಲಸ ಆಗಬೇಕಾದಾಗ ನಯವಾಗಿ, ಆದ ನಂತರ ಒರಟಾಗಿ ವರ್ತಿಸಬೇಕಾದದ್ದು ನಮ್ಮ ವೃತ್ತಿ ಧರ್ಮ' ಅನ್ನುತ್ತಾನೆ. ಆದರೆ, ಮನೆಯೊಳಗೆ ಮಾತ್ರ- ಅಮ್ಮಾವ್ರ ಗಂಡ! ಪ್ರತಿ ತಿಂಗಳ ಆದಾಯವನ್ನೂ ಹೆಂಡತಿಯ ಕೈಲಿಡುತ್ತಾನೆ. ಹೇಳಿ ಕೇಳಿ ಬಿಜಿನೆಸ್ಮನ್ ನೋಡಿ: ಹಾಗಾಗಿ, ಕೆಲವೊಮ್ಮೆ ಕೈ ಬಿಗಿ ಹಿಡಿದು ಖರ್ಚು ಮಾಡುತ್ತಾನೆ. ಅನಗತ್ಯವಾಗಿ ಖರ್ಚು ಮಾಡಬೇಡ ಎಂದು ಹೆಂಡತಿಯನ್ನೂ ಎಚ್ಚರಿಸುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಸಿಡಿಮಿಡಿ, ಅಸಮಾಧಾನ, ತಾತ್ಸಾರ. 'ಪಕ್ಕದ್ಮನೆ ಪಂಕಜಾಳ ಗಂಡನನ್ನು ನೋಡಿ ಕಲಿತುಕೊಳ್ರೀ. ಮೊನ್ನೆ ಅವಳು ಅದೂ ಇದೂ ಮಾತಾಡ್ತಾ, ಸೀರೆ ತಗೋಬೇಕಿತ್ತು ಅಂದಳಂತೆ. ಆತ ಮರುಮಾತಾಡದೆ ಆರು ಸಾವಿರ ರೂಪಾಯಿ ಕೊಟ್ಟು ಹೋಗಿಬಿಟ್ಟನಂತೆ. ನೀವೂ ಇದೀರ ದಂಡಕ್ಕೆ. ಆರು ಸಾವಿರ ಕೇಳಿದ್ರೆ ಮೂರು ಸಾವಿರ ಕೊಡ್ತೀರ. ಆಮೇಲಾದ್ರೂ ಸುಮ್ನಿರ್ತೀರಾ? ಸೀರೆಗೆ ಎರಡು ಸಾವಿರದ ಎಂಟುನೂರು ಕೊಟ್ಟಿದ್ದೀಯ. ಬಾಕಿ 200 ರೂಪಾಯಿ ಎಲ್ಲಿ ಎಂದು ಲೆಕ್ಕ ಕೇಳ್ತೀರ. ಎಷ್ಟು ಹೇಳಿದ್ರೆ ತಾನೆ ಏನುಪಯೋಗ? ನನ್ನ ಹಣೇಲಿ ಬರೆದಿದ್ದೇ ಇಷ್ಟು ಎಂದೆಲ್ಲಾ ಅವಾಗವಾಗ ಜೋರು ಮಾಡುತ್ತಾಳೆ. ಚುಚ್ಚಿ ಮಾತಾಡುತ್ತಾಳೆ. ಸ್ವಾರಸ್ಯವೆಂದರೆ, ಗೌರಿಯ ಬಳಿ 26 ಭರ್ಜರಿ ಸೀರೆಗಳಿವೆ. ಅವುಗಳನ್ನೆಲ್ಲ ಉಟ್ಟುಕೊಂಡು ಮೆರೆಯಬೇಕೆಂಬ ಆಸೆ ಅವಳಿಗೆ ಖಂಡಿತ ಇಲ್ಲ. ಆದರೆ, ಸಂಸಾರದ ವಿಷಯಕ್ಕೆ ಬಂದಾಗ, ಆಕೆಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತದೆ. ಪಕ್ಕದ ಮನೆಯವಳಿಗೆ ಸಿಕ್ಕಿದಂಥ ಗಂಡನೇ ನನಗೂ ಸಿಗಬಾರದಿತ್ತೇ ಎಂಬ ಚಡಪಡಿಕೆ ಎದ್ದೆದ್ದು ಕುಣಿಯುತ್ತದೆ.
= ಅದು ರಾಜ್ಯದ ಅತ್ಯುತ್ತಮ ವಿದ್ಯಾಕೇಂದ್ರ ಎಂದು ಹೆಸರಾದ ಶಾಲೆ. ಅಲ್ಲಿ ಮಕ್ಕಳಿಗೆ ಮಾತ್ರವಲ್ಲ, ಪೋಷಕರಿಗೂ ಸಂದರ್ಶನ ನಡೆಸಲಾಗುತ್ತಿತ್ತು. ಇಬ್ಬರೂ ಪಾಸ್ ಆದರೆ ಮಾತ್ರ ಸೀಟು. ಅಲ್ಲಿ ಡೊನೇಷನ್ ಹೆಚ್ಚು ನಿಜ. ಆದರೆ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಸಿಗುತ್ತಿತ್ತು. ಅದೇ ಶಾಲೆಯಲ್ಲಿ, ಎಂಟನೇ ತರಗತಿಗೆ ಸೇರಿಕೊಂಡಿದ್ದಾಳೆ ಪ್ರಿಯಾಂಕಾ. ತನ್ನ ಸ್ಕೂಲ್ನಿಂದ ಅರ್ಧ ಕಿಲೋಮೀಟರ್ ದೂರವಿರುವ ಇನ್ನೊಂದು ಶಾಲೆಯ ಮೇಲೆ ಅವಳಿಗೆ ಮೋಹ. ಆಕೆ ಅಪ್ಪನ ಬಳಿ ಮುಖ ಊದಿಸಿಕೊಂಡು ಹೇಳುತ್ತಾಳೆ: 'ಪಪ್ಪಾ, ನಂಗೆ ಈ ಸ್ಕೂಲು ಇಷ್ಟವಿಲ್ಲ. ಆ ಸ್ಕೂಲ್ ಇಷ್ಟ. ಅಲ್ಲಿ ಹೋಂ ವರ್ಕ್ ಕೊಡಲ್ಲ ಗೊತ್ತಾ? ಮಂತ್ಲೀ ಟೆಸ್ಟ್ ಕೂಡ ಇಲ್ವಂತೆ. ಹಾಗಿದ್ರೂ ಅಲ್ಲಿ ಎಲ್ಲರಿಗೂ 'ಎ' ಗ್ರೇಡ್ ಕೊಡ್ತಾರಂತೆ. ಮುಂದಿನ ವರ್ಷ ನನ್ನನ್ನು ಅಲ್ಲಿಗೇ ಸೇರಿಸಿ'.
= ರವೀಂದ್ರ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿವೆ. ಅವನಿಗೆ 20 ಸಾವಿರ ರೂಪಾಯಿ ಸಂಬಳವಿದೆ. ಅವನೊಂದಿಗೇ ಇರುವ, ಐದು ವರ್ಷದ ಸೀನಿಯಾರಿಟಿ ಹೊಂದಿರುವ ಸಹೋದ್ಯೋಗಿಗೆ 26 ಸಾವಿರವಿದೆ. ಸಂಬಳ ಮಾತ್ರವಲ್ಲ, ಜವಾಬ್ದಾರಿ ಕೂಡ ಜಾಸ್ತಿ ಇದೆ. ಆದರೆ ರವೀಂದ್ರನಿಗೆ ಇದೇನೂ ಕಾಣಿಸುತ್ತಿಲ್ಲ. ಜೊತೆಯಲ್ಲೇ ಇರುವ ಗೆಳೆಯನಿಗೆ, ನನಗಿಂತ ಒಂದೋ ಎರಡೋ ಕೆಲಸವನ್ನು ಹೆಚ್ಚಾಗಿ ಮಾಡುವವನಿಗೆ 6 ಸಾವಿರ ಹೆಚ್ಚು ಸಂಬಳ ಎಂಬುದಷ್ಟೇ ಅವನಿಗೆ ಪದೇ ಪದೆ ನೆನಪಾಗುತ್ತಿದೆ. ಆಗೆಲ್ಲ ಗೆಳೆಯರೊಂದಿಗೆ ರವೀಂದ್ರ ಹೇಳಿಕೊಳ್ಳುವುದುಂಟು: ಆ ನನ್ಮಗ ಏನು, ಅವನ ಕೆಪ್ಯಾಸಿಟಿ ಎಂಥಾದ್ದು ಅಂತ ನನಗೆ ಗೊತ್ತಿಲ್ವಾ? ಅವನು ದಿನಾಲೂ ಬಾಸ್ಗೆ ಬಕೆಟ್ ಹಿಡೀತಾನೆ. ಹಾಗಾಗಿ ಸಂಬಳ ಜಾಸ್ತಿ ಇದೆ...
ತಾನು ಹೇಳುತ್ತಿರುವ ಮಾತಿನಲ್ಲಿ ಸತ್ಯಾಂಶವಿಲ್ಲ ಎಂದು ರವೀಂದ್ರನಿಗೇ ಚೆನ್ನಾಗಿ ಗೊತ್ತಿದೆ.ಈಗ ಸಿಗುತ್ತಿರುವ ಸಂಬಳದಿಂದ ತಾನು ಮಹಾರಾಜನಂತೆ ಬದುಕುತ್ತಿದ್ದೇನೆಂಬ ಅರಿವೂ ಅವನಿಗಿರುತ್ತದೆ. ಆದರೂ, ಅಸೂಯೆಯ ಕೈಗೆ ಬುದ್ಧಿ ಕೊಟ್ಟು ಏನೇನೋ ವಟಗುಡುತ್ತಿರುತ್ತಾನೆ.
= ಸೊಸೆಯ ಮೇಲೆ ದಿನಕ್ಕೊಂದು ಹೊಸ ಆರೋಪ ಮಾಡದಿದ್ದರೆ ಪಾರ್ವತಮ್ಮನವರಿಗೆ ಸಮಾಧಾನವೇ ಇಲ್ಲ. ಅವರ ದೃಷ್ಟಿಯಲ್ಲಿ ಸೊಸೆ ಕೂತರೂ ತಪ್ಪು. ನಿಂತರೂ ತಪ್ಪು. 'ನನ್ನ ಮಗನಿಗೆ ಏನೂ ಗೊತ್ತಾಗುವುದಿಲ್ಲ. ಅಂಥವನನ್ನು ಇವಳು ಬುಟ್ಟಿಗೆ ಹಾಕ್ಕೊಂಡಿದ್ದಾಳೆ' ಎಂಬುದು ಅವರ ದೂರು. ಸೊಸೆಯ ತವರಿನ ಬಗ್ಗೆಯೂ ಪಾರ್ವತಮ್ಮನವರಿಗೆ ಸದಭಿಪ್ರಾಯವಿಲ್ಲ. ಹೀಗೆ ಅಸಮಾಧಾನವಾದಾಗಲೆಲ್ಲ, ತಮ್ಮ ಬಂಧುಗಳ ಮನೆಗೆ ಹೋಗಿ ಸೊಸೆಯಾಗಿ ಬಂದಿರುವವಳನ್ನು ಅವರು ನೆನಪಿಸಿಕೊಳ್ಳುತ್ತಾರೆ. 'ಅಂಥವಳನ್ನು ಸೊಸೆಯಾಗಿ ಪಡೆಯಲು ಪುಣ್ಯ ಮಾಡಿರಬೇಕು' ಅನ್ನುತ್ತಾರೆ. ಈ ಮಾತಿನ ಹಿಂದೆ, ಆ ಹುಡುಗಿಯೊಂದಿಗೇ ವರದಕ್ಷಿಣೆಯ ರೂಪದಲ್ಲಿ ಬಂದ ನಾಲ್ಕು ಲಕ್ಷ ರೂ. ನಗದು, ಒಂದು ಸೈಟು, 10 ತೊಲ ಬಂಗಾರ... ಎಲ್ಲವೂ ಸೇರಿರುತ್ತದೆ. ಹೀಗೆ, ದೊಡ್ಡದೊಂದು ಗಂಟಿನೊಂದಿಗೇ ಬಂದ ಹುಡುಗಿ, ಅತ್ತೆಯ ಮನೆಯಲ್ಲಿ ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾಳೆ ಎಂಬ ಅರಗಿಸಿಕೊಳ್ಳಲಾಗದ ಸಂಗತಿಯನ್ನು ಪಾರ್ವತಮ್ಮನವರು ಮರೆತುಬಿಡುತ್ತಾರೆ. ಬಿಸಿಲು ಕುದುರೆಯ ಹಿಂದೆ ಬಿದ್ದ ಕಾರಣದಿಂದ, ಸೊಸೆಯಲ್ಲಿರುವ ಸದ್ಗುಣಗಳೂ ಅವರಿಗೆ ಕಾಣಿಸುವುದೇ ಇಲ್ಲ. ತನ್ನ ಬೈಗುಳವನ್ನು ಮೌನವಾಗಿ ಸಹಿಸಿಕೊಂಡು, ಪ್ರೀತಿಯಿಂದಲೇ ಉಪಚಾರಕ್ಕೆ ನಿಲ್ಲುವ ಸೊಸೆಯ ವರ್ತನೆಯಲ್ಲೂ ಅವರು ತಪ್ಪನ್ನೇ ಹುಡುಕುತ್ತಾರೆ!
= ಹೆಂಡತಿ ಸ್ವಲ್ಪ ಫ್ಯಾಷನಬಲ್ ಆಗಿಲ್ಲ ಎನ್ನುವುದು ಮೈಕೇಲ್ನ ಚಿಂತೆಗೆ ಕಾರಣ. ಅವಳು ತೆಳ್ಳಗಿದ್ದಾಳೆ. ಬೆಳ್ಳಗೂ ಇದ್ದಾಳೆ. ಸೈಡ್ ಆ್ಯಂಗಲ್ನಿಂದ ನೋಡಿದರೆ ಧಾರಾವಾಹಿಗಳಲ್ಲಿ ನಟಿಸುವ ಹೀರೋಯಿನ್ಗಳಂತೆಯೇ ಕಾಣುತ್ತಾಳೆ. ಆದರೆ ಅವಳಿಗೆ ರೋಮಾನ್ಸ್ನಲ್ಲಿ ಆಸಕ್ತಿಯಿಲ್ಲ. ಬೆಳಿಗ್ಗೆ ಎದ್ದವಳೇ ಗಂಡನಿಗೆ ಕಾಫಿ ಮಾಡಿಕೊಟ್ಟು ಅಡುಗೆ ಮನೆ ಸೇರಿ ಬಿಡುತ್ತಾಳೆ. ನಂತರ ಪಾತ್ರೆ ತೊಳೆಯುವುದು, ಕಸಗುಡಿಸಿ, ಮನೆ ಒರೆಸುವುದು, ಬಟ್ಟೆ ಒಗೆಯುವುದು, ಪೂಜೆ, ತಿಂಡಿ, ಆಪ್ತರಿಗೆ ಫೋನ್ ಮಾಡುವುದು... ಇಂಥ ಕೆಲಸಗಳಲ್ಲೇ ಸಮಯ ಸರಿದು ಹೋಗುತ್ತದೆ. ಈ ಮಧ್ಯೆಯೇ ಆಗಾಗ್ಗೆ ಸರಸವಾಡಲು ಮೈಕೇಲ್ ಟ್ರೈ ಮಾಡುತ್ತಾನೆ, ನಿಜ. ಇವಳೋ, ಅವನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಹೋಗಲಿ, ರಾತ್ರಿಯಾದರೂ ಅವನ ಸರಸಕ್ಕೆ, ರಸಿಕತೆಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶವಿದೆಯಾ ಅಂದರೆ ಅದೂ ಇಲ್ಲ. ಇವನು ಮನ್ಮಥ ರಾಜನಂತೆ ಹತ್ತಿರ ಹೋದರೆ-'ಅಯ್ಯೋ, ಏನ್ರೀ, ಇದು ಅಸಹ್ಯಾ... ನಂಗೆ ಸ್ವಲ್ಪಾನೂ ಇಷ್ಟವಾಗಲ್ಲಪ್ಪ' ಅಂದೇ ಬಿಡುತ್ತಾಳೆ. ಇಲ್ಲವಾದರೆ, ಬೆಳಗ್ಗಿಂದ ಒಂದೇ ಸಮನೆ ಕೆಲಸ ಮಾಡಿದೀನಿ. ವಿಪರೀತ ಸುಸ್ತಾಗಿದೆ. ನಾನು ಆ ರೂಂನಲ್ಲಿ ಮಲ್ಕೋತೇನೆ. ದಯವಿಟ್ಟು ಡಿಸ್ಟರ್ಬ್ ಮಾಡಬೇಡಿ ಎಂದು ಹೇಳಿ ಹೋಗಿಯೇ ಬಿಡುತ್ತಾಳೆ. ಅಂಥ ಸಂದರ್ಭದಲ್ಲೆಲ್ಲ ಮೈಕೇಲ್ಗೆ ಪಕ್ಕದ್ಮನೆಯ ವೈಯ್ಯಾರಿ ನೆನಪಿಗೆ ಬರುತ್ತಾಳೆ. ಹೊಕ್ಕಳು ಕಾಣುವಂತೆ ಸೀರೆಯುಟ್ಟು ಅವಳು ವಾಕಿಂಗ್ ಹೋಗುವುದನ್ನು, ಎಲ್ಲರೊಂದಿಗೂ ಬೋಲ್ಡ್ ಆಗಿ ಮಾತಾಡುವುದನ್ನು ಮೈಕೇಲ್ನೇ ಪ್ರತ್ಯಕ್ಷ ಕಂಡಿದ್ದಾನೆ. ಎಷ್ಟೋ ಬಾರಿ, ನನಗೂ ಅಂಥ ಹೆಂಡ್ತಿ ಸಿಗಬಾರದಿತ್ತೆ ಎಂದು ಯೋಚಿಸುತ್ತಾನೆ. ಹೆಂಗಸರು, ಅದರಲ್ಲೂ ಗೃಹಿಣಿ ಅನ್ನಿಸಿಕೊಂಡವರು ಹಾಗೆಲ್ಲ ಬೋಲ್ಡ್ ಆಗಿ ವರ್ತಿಸಿದರೆ ಅದರಿಂದ ಒಳ್ಳೆಯದಾಗುವ ಬದಲು ಕೆಟ್ಟದ್ದೇ ಆಗುತ್ತದೆ ಎಂಬುದು ಮೈಕೇಲ್ಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೂ, ಇಲ್ಲದ್ದರ ಕಡೆಗೇ ಅವನ ಧ್ಯಾನ...
= ರಂಗಪ್ಪನೂ, ರಾಜೇಗೌಡರೂ ನಿವೃತ್ತ ನೌಕರರು, ಹಿರಿಯ ನಾಗರೀಕರು. ಇಬ್ಬರಿಗೂ ಪೆನ್ಶನ್ ಬರುತ್ತಿದೆ. ಇಬ್ಬರೂ, ಹುಟ್ಟೂರಿನಲ್ಲಿ ವಾಸವಿದ್ದಾರೆ. ದಿನವೂ ಹತ್ತಿರದ ಪೇಟೆಗೋ, ಮಾರ್ಕೆಟ್ಟಿಗೋ ಹೋಗಿ ಬರುವುದು ಅವರ ದಿನಚರಿ. ಆಟೋದವರಿಗೆ ಹೆಚ್ಚು ಕಾಸು ಕೊಡಲು ಅವರು ಸಿದ್ಧರಿಲ್ಲ. ಹಾಗಾಗಿ ಬಸ್ಗೆ ಹೋಗಬೇಕು. ಹೆಚ್ಚಿನ ವಯಸ್ಸು ಮತ್ತು ಸೋಮಾರಿತನದ ಕಾರಣದಿಂದ, ಪ್ರತಿ ದಿನವೂ ಅವರು ನಿಲ್ದಾಣಕ್ಕೆ ಬರುವ ಹೊತ್ತಿಗೆ ಬಸ್ ಹೊರಟಿರುತ್ತದೆ. ಹೋಲ್ಡಾನ್, ಹೋಲ್ಡಾನ್ ಎಂದು ಕೂಗುತ್ತಾ ಓಡೋಡಿ ಬಂದು ಬಸ್ ಹತ್ತುತ್ತಾರೆ. ನಂತರ, ಸದ್ಯ, ಬಸ್ ಸಿಕ್ತಲ್ಲ ಎಂದು ಖುಷಿ ಪಡುವುದಿಲ್ಲ. ಬದಲಿಗೆ, ಏನ್ ರಶ್ ಕಣ್ರೀ ಎಂದು ರಾಗ ಎಳೆಯುತ್ತಾರೆ. ಹೀಗೇ ಹತ್ತು ನಿಮಿಷ ಕಳೆದಿರುವುದಿಲ್ಲ. ಆಗಲೇ ಈ ಇಬ್ಬರಿಗೂ, ಥತ್ ಸೀಟೇ ಸಿಗಲಿಲ್ಲ ಎಂಬ ಚಿಂತೆ ಶುರುವಾಗುತ್ತದೆ. ನಂತರದ 15 ನಿಮಿಷದಲ್ಲಿ ರಷ್ ಕಡಿಮೆಯಾಗಿ ಇಬ್ಬರಿಗೂ ಸೀಟು ಸಿಗುತ್ತದೆ. ಈ ಪುಣ್ಯಾತ್ಮರು ಆಗಲಾದರೂ ಸುಮ್ಮನಾಗುವುದಿಲ್ಲ. ಛೆ, ಕಿಟಕಿ ಪಕ್ಕದ ಸೀಟ್ ಸಿಗಲಿಲ್ಲವಲ್ಲ; ಇಬ್ಬರಿಗೂ ಒಂದೇ ಕಡೆಯಲ್ಲಿ ಸೀಟ್ ಸಿಗಲಿಲ್ಲವಲ್ಲ, ಈಗ ಸಿಕ್ಕಿರುವ ಸೀಟ್ ಕಲ್ಲಿನಷ್ಟು ಗಟ್ಟಿಯಾಗಿದೆಯಲ್ಲ... ಎಂದು ಚಡಪಡಿಸಲು ಶುರು ಮಾಡುತ್ತಾರೆ.
= ಅದೊಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿರುವ ದಂಪತಿಗೆ ಇಬ್ಬರು ಮಕ್ಕಳು. ಒಂದು ಹೆಣ್ಣು, ಒಂದು ಗಂಡು. ಇಬ್ಬರೂ ಕಾಲೇಜಿಗೆ ಸೇರಿದ್ದಾರೆ. ಮಗಳಿಗೆ ಮೊಬೈಲ್ನ ಮೇಲೆ ಆಸೆ. ಮಗನಿಗೆ ಮೊಬೈಕ್ನ ಕನಸು. ಮಕ್ಕಳ ಮನಸ್ಸಿಗೆ ನೋವಾಗದಿರಲಿ ಎಂಬ ಆಸೆಯಿಂದಲೇ ತಾವು ಕೂಡಿಟ್ಟಿದ್ದ ಹಣವನ್ನೆಲ್ಲ ಹೊಂದಿಸಿ, ಮೊಬೈಲ್ ಕೊಡಿಸುತ್ತಾರೆ. ಮೊಬೈಕ್ ಕೊಡಿಸಲೂ ಪ್ರಯತ್ನಿಸುತ್ತಾರೆ. ಅವರ ಸಂಕಟ ಮಕ್ಕಳಿಗೆ ಅರ್ಥವಾಗದ್ದೇನೂ ಅಲ್ಲ. ಆದರೂ, ಮೊಬೈಲ್ನಲ್ಲಿ ಚೆಂದದ ಕ್ಯಾಮರಾ ಇಲ್ಲ, ಮೊಬೈಕು ಸೆಕೆಂಡ್ ಹ್ಯಾಂಡ್ ಎಂಬ ಕಾರಣಗಳನ್ನೂ ಮುಂದಿಟ್ಟು ಅವರು ಹೆತ್ತವರೊಂದಿಗೇ ವಾದಕ್ಕೆ ನಿಲ್ಲುತ್ತಾರೆ. ಈ ಮೊಬೈಲ್-ಮೊಬೈಕ್ ಖರೀದಿಗೆ ಹಣ ಹೊಂದಿಸಲು ಅಪ್ಪ-ಅಮ್ಮನಿಗೆ ಅದೆಷ್ಟು ಕಷ್ಟವಾಗಿರಬಹುದು, ಹಣ ಸಾಕಾಗದೆ ಹೋದಾಗ ಅವರು ಗೆಳೆಯ / ಗೆಳತಿ, ಅಥವಾ ಸಂಬಂಧಿಕರ ಮುಂದೆ ದೈನೇಸಿಯಂತೆ ನಿಂತು ಹೇಗೆ ಪ್ರಾರ್ಥಿಸಿರಬಹುದು? ಆ ಸಂದರ್ಭದಲ್ಲಿ ಒಂದಿಬ್ಬರು 'ನಮ್ಮಲ್ಲಿ ದುಡ್ಡಿಲ್ಲಾರೀ...' ಎಂದು ನಿಷ್ಟುರವಾಗಿ ಹೇಳಿದಾಗ, ಅವಮಾನದಿಂದ ಹೇಗೆ ಕುಗ್ಗಿ ಹೋಗಿರಬಹುದು ಎಂದು-ಹೆಚ್ಚಿನ ಮಕ್ಕಳು ಯೋಚಿಸುವುದೇ ಇಲ್ಲ. ಸ್ವಾರಸ್ಯವೆಂದರೆ, ಪೋಷಕರಿಗೆ ಹೀಗೆಲ್ಲ ದಬಾಯಿಸಿ ಮಾತಾಡುವ ಮಕ್ಕಳ ಅಸಹನೆಗೆ-ತಮಗೆ ಸಿಕ್ಕಿರುವ ಮೊಬೈಲ್ ಅಥವಾ ಮೊಬೈಕ್ ಚೆನ್ನಾಗಿಲ್ಲ ಎಂಬುದಕ್ಕಿಂತ, ನಮ್ಮಲ್ಲಿ ಇಲ್ಲದ ವಸ್ತು, ಸಹಪಾಠಿಗಳ ಬಳಿ ಇದೆ ಎಂಬ ಹೊಟ್ಟೆ ಕಿಚ್ಚೇ ಕಾರಣವಾಗಿರುತ್ತದೆ.!
ಯಾಕೆ ಹೀಗಾಗುತ್ತದೆ? ಹೆಚ್ಚಿನ ಸಂದರ್ಭಗಳಲ್ಲಿ, ಇರುವುದೆಲ್ಲವನ್ನು ಬಿಟ್ಟು ಇಲ್ಲದ್ದಕ್ಕೇ ಈ ಹಾಳು ಮನಸು ಹಾತೊರೆಯುವುದೇಕೆ ಎಂಬ ಪ್ರಶ್ನಗೆ 'ಇದಮಿತ್ಥಂ' ಎಂಬಂಥ ಉತ್ತರವಿಲ್ಲ. ಆದರೆ ಅಂಥದೊಂದು ತಹತಹಕ್ಕೆ ನಮ್ಮೊಳಗಿನ ಆಸೆಯೇ... ಅಲ್ಲಲ್ಲ, ದುರಾಸೆಯೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಮನುಷ್ಯ ಅಂದ ಮೇಲೆ ಎಲ್ಲರೂ ಒಂದೇ ರೀತಿ ಬದುಕಲು ಸಾಧ್ಯವಿಲ್ಲ. ಡಿಗ್ರಿ ಮಾಡಿದವರಿಗೆಲ್ಲ ಸಮಾನ ವೇತನದ ನೌಕರಿ ಸಿಗುವುದಿಲ್ಲ ಎಂಬುದು ಎಷ್ಟು ಸತ್ಯವೋ, ಐದು ಬೆರಳುಗಳೂ ಒಂದೇ ಸಮ ಇರುವುದಿಲ್ಲ ಎಂಬುದೂ ಅಷ್ಟೇ ಸತ್ಯ. ಒಬ್ಬ ವ್ಯಕ್ತಿ, ಆತ ರಾಜಕುಮಾರನೇ ಆಗಿದ್ದರೂ, ಆತನಿಗೂ ಬಯಸಿದ್ದೆಲ್ಲವೂ ಸಿಗಲಿಕ್ಕೆ ಸಾಧ್ಯವೇ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆಪಡುತ್ತಾರೆ. ಹೀಗೆ ಆಸೆಪಡುವ ಸಂದರ್ಭದಲ್ಲಿ, ಚಿಕ್ಕಂದಿನಿಂದಲೂ ಬಾಯಿಪಾಠ ಮಾಡಿಕೊಂಡಿದ್ದ- 'ಪಾಲಿಗೆ ಬಂದದ್ದೇ ಪಂಚಾಮೃತ', 'ಕೈಗೆಟುಕದ ದ್ರಾಕ್ಷಿ ಯಾವತ್ತೂ ಹುಳಿ' ಎಂಬಂಥ ಮಾತುಗಳು ಮರೆತೇ ಹೋಗಿರುತ್ತದೆ.
ಪರಿಣಾಮವಾಗಿಯೇ, ಎಲ್ಲರೂ 'ಆಸೆ' ಎಂಬ ಮೋಹಿನಿಯ ಹಿಂದೆ ಬೀಳುತ್ತಾರೆ. ಈ ಮಾತಿಗೆ ವೇದಾಂತ ಬೋಧಕರೂ ಹೊರತಲ್ಲ. ಈ ದೇಹ ನಶ್ವರ, ನಾಳೆಯ ಬದುಕಿನ ಬಗ್ಗೆ ಯಾರಿಗೂ ಗ್ಯಾರಂಟಿಯಿಲ್ಲ ಎಂದು ಉಪದೇಶ ಮಾಡುವಾತ, ಮಾತಿನ ಮಧ್ಯೆ ಆಕಸ್ಮಿಕವಾಗಿ ತನ್ನ ಬೋಳು ತಲೆಯನ್ನು ಸವರಿಕೊಂಡು, ಎದುರು ಕೂತವನ ಹಿಪ್ಪಿ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಅವನಿಗೆ ಇರುವಂಥ ಜೊಂಪೆ ಜೊಂಪೆ ಕೂದಲು ನನಗೂ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಯೋಚನೆ ಅವನನ್ನು ಆವರಿಸಿಕೊಂಡಿರುತ್ತದೆ. ಆ ಕ್ಷಣದಲ್ಲಿ, ತನ್ನ ಪ್ರತಿ ಮಾತಿಗೂ ಪರವಶರಾಗುವ ಸಾವಿರಾರು ಜನ, ಆ ಮಾತುಗಾರಿಕೆಯ ಕಾರಣದಿಂದಲೇ ಸಮಾಜದಲ್ಲಿ ತನಗೆ ದೊರಕಿರುವ ಸ್ಥಾನಮಾನ, ಎಲ್ಲವನ್ನೂ ಆತ ಮರೆತುಬಿಡುತ್ತಾನೆ. ಬಗೆಬಗೆಯ ಸಂಕಟಗಳಿಂದ ನೊಂದಿರುವ, ಬದುಕಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿರುವ ಸಾವಿರಾರು ಮಂದಿಗೆ ಸಮಾಧಾನ ಹೇಳುವ ಅವನ ಮನಸ್ಸೂ, ಎಟುಕದ ದ್ರಾಕ್ಷಿಗೇ ಕೈ ಚಾಚಿರುತ್ತದೆ.
ಅಂದ ಹಾಗೆ, ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಕೇಜಿಗಟ್ಟಲೆ ಒಡವೆ ಹೊಂದಿದ್ದರೂ, ಪಕ್ಕದ ಮನೆಯಾಕೆಯ ಹೊಸ ನೆಕ್ಲೇಸ್ ಕಂಡು, ಅಂಥದು ನನ್ನಲ್ಲಿಲ್ಲ ಎಂದು ಚಡಪಡಿಸುವ ಹೆಂಡತಿ, ಮಾವನ ಕೃಪೆಯಿಂದಲೇ ನೌಕರಿ ಪಡೆದರೂ, ನಿಮ್ಮಪ್ಪ ಒಂದು ಸೈಟ್ ಕೊಡಿಸಲಿಲ್ಲವಲ್ಲೇ ಎಂದು ಹೆಂಡತಿಯನ್ನು ಹಂಗಿಸುವ ಗಂಡ, ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣಕ್ಕೇ ಮದುವೆಗೆ ಒಪ್ಪದೆ, ಬೆಂಗಳೂರಿನಲ್ಲಿರುವ ಗಂಡೇ ಬೇಕು ಎಂದು ಹಠ ಹಿಡಿಯುವ ಹುಡುಗಿ, ಗಾಳಿ ಸುದ್ದಿಗಳನ್ನೇ ನಿಜವೆಂದು ಭಾವಿಸಿ ನಾವೂ ಅಂಥ ಕಡೆಯೇ ಬದುಕಬೇಕಿತ್ತು. ಕೆಲಸ ಮಾಡಬೇಕಿತ್ತು ಎಂದು ಆಸೆಪಡುವ ನಾವು- ನೀವು, ಅವರು-ಇವರು...ಸದಾ ಇಲ್ಲದ್ದರ ಕುರಿತು ಯೋಚಿಸುವವರೇ.
ಹೇಳಿ: ಈ ಸಮಸ್ಯೆಗೆ ಏನಾದರೂ ಪರಿಹಾರವಿದೆಯಾ?
-ಎ.ಆರ್. ಮಣಿಕಾಂತ್
armanikanth@gmail.com