ಈ ಚುನಾವಣೆಯಲ್ಲಿ ಒಂದೇ ದೋಣಿ ಪಯಣಿಗರಿವರು!
120 ಕೋಟಿ ಜನ ಇರುವ ಭಾರತವನ್ನು 10 ವರ್ಷ ಕಾಲ ಪ್ರತಿನಿಧಿಸಿದ ಪ್ರಧಾನಿ ಮಹಾಚುನಾವಣೆಯಲ್ಲಿ ಸೈಲೆಂಟ್ ಮೋಡ್ನಲ್ಲೇ ಇರುತ್ತಾರೆ ಎಂದರೆ, ಇದಕ್ಕಿಂತ ವಿಪರ್ಯಾಸ ಮತ್ತೊಂದು ಇದೆಯೇ?
ಸಾರ್ವತ್ರಿಕ ಚುನಾವಣೆ ಐದನೇ ಹಂತದವರೆಗೂ ತಲುಪಿದೆ. ಇನ್ನು ಉಳಿದಿದ್ದು ನಾಲ್ಕೇ ಹಂತಗಳು. ಆದರೆ, ಇದುವರೆಗೂ ಪ್ರಧಾನಿ ಡಾ. ಸಿಂಗ್, "ಇಂಥ ಸ್ಥಳದಲ್ಲಿ, ಇಂಥ ರ್ಯಾಲಿಯಲ್ಲಿ ಮಾತನಾಡಿ, ಎದುರಾಳಿಗಳಿಗೆ ತಿರುಗೇಟು ನೀಡಿದರು. ತಮ್ಮ ಸಾಧನೆಗಳನ್ನು ಬಣ್ಣಿಸಿಕೊಂಡರು" ಎಂಬಂಥ ಒಂದೇ ಒಂದು ವರದಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ! 'ಎಲ್ಲ ಪ್ರಶ್ನೆಗಳಿಗೂ ತಮ್ಮ ಮೌನವೇ ಉತ್ತರ' ಎಂದುಕೊಂಡಿರುವ ಹಾಗಿದೆ. ಅದೇ ಮತ್ತೊಂದೆಡೆ, ಅವರ ಪ್ರಮುಖ ಎದುರಾಳಿ ನರೇಂದ್ರ ಮೋದಿ ಅವರು ಸದ್ಯಕ್ಕಂತೂ 'ಮಾತಿನಲ್ಲೇ ಮನೆ' ಕಟ್ಟುತ್ತಿದ್ದಾರೆ.
ಈವರೆಗೂ ಸಿಂಗ್ ಅವರು ಅಸ್ಸಾಂ, ಕೇರಳ, ಉತ್ತರ ಪ್ರದೇಶಗಳಲ್ಲಿನ ಕೆಲವು ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಅವರಿಂದ ಪ್ರಚಾರಕ್ಕೆ ಕಾಂಗ್ರೆಸ್ನ 35 ಅಭ್ಯರ್ಥಿಗಳು ಬೇಡಿಕೆಯಿಟ್ಟಿದ್ದಾರಂತೆ. ದಶಕಗಳ ಕಾಲ ಪ್ರಧಾನಿಯಾದವರಿಗೆ ಬೇಡಿಕೆ ಇಷ್ಟೇನಾ? ಅವರು ವೃತ್ತಿಪರ ರಾಜಕಾರಣಿಯಲ್ಲ. ಎದುರಾಳಿಯಂತೆ ಉತ್ತಮ ಭಾಷಣಕಾರರಲ್ಲ ಎಂದು ಕೆಲವರು ಅವರ ರಕ್ಷಣೆಗೆ ಮುಂದಾಗಬಹುದು. ಆದರೆ, ಒಬ್ಬ ನಾಯಕನಿಗೆ ತಾನು ಏನು, ತಾನು ಮಾಡಿದ ಕೆಲಸಗಳೇನು? ಎಂಬುದನ್ನು ಚುನಾವಣೆ ಸಮಯದಲ್ಲಿ ಜನರಿಗೆ ನೇರವಾಗಿ ಮುಟ್ಟಿಸುವಷ್ಟು ಬೇರೆ ಯಾವುದೇ ಸಮಯದಲ್ಲೂ ಸಾಧ್ಯವಿಲ್ಲ. ಇದೊಂದು ಸುವರ್ಣಾವಕಾಶ. ವಿಪಕ್ಷಗಳು ಸೋನಿಯಾ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಎಂದು ಟೀಕೆಗೆ ಮುಂದಾಗುತ್ತವೆಯೇ ಹೊರತು ಕೇವಲ ಸೋನಿಯಾ ಗಾಂಧಿ ಅಂತಲ್ಲ. ಇಂಥ ಸಂದರ್ಭದಲ್ಲಿ ಪ್ರಧಾನಿಯಾದವರು ತಮ್ಮನ್ನು ತುಂಬಾ ನೀಟಾಗಿ ಪ್ರೊಜೆಕ್ಟ್ ಮಾಡಿಕೊಳ್ಳಬಹುದಿತ್ತು.
"ತಮ್ಮ ಆಡಳಿತವನ್ನು ಇತಿಹಾಸ ವಿಮರ್ಶಿಸುತ್ತದೆ" ಎಂದು ಸಿಂಗ್ ಹಿಂದೊಮ್ಮೆ ಹೇಳಿದ್ದರು. ಹಾಗೊಂದು ವೇಳೆ ಇತಿಹಾಸ ವಿಮರ್ಶೆ ಮಾಡುವುದಾದರೆ, 'ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ' ಅಂತಲೇ ಇತಿಹಾಸದಲ್ಲಿ ದಾಖಲಾಗುತ್ತದೆ! ಈಗಿನ ಪರಿಸ್ಥಿತಿ ನೋಡಿ ಹೇಳುವುದಾದರೆ, ಸಿಂಗ್ ಅವರ 'ಇತಿಹಾಸ' ಹೇಳಿಕೆಯನ್ನು ಮುಂದುವರಿಸಿ, "ದೀರ್ಘ ಕಾಲದವರೆಗೂ ಪ್ರಧಾನಿಯಾಗಿದ್ದ ವ್ಯಕ್ತಿ ಸಾರ್ವತ್ರಿಕ ಚುನಾವಣೆಯಲ್ಲೂ ಹೇಳ ಹೆಸರಿಲ್ಲದಂತಿದ್ದರು" ಎಂದು ನೆನಪಿಟ್ಟುಕೊಳ್ಳಬಹುದು.
2009ರ ಚುನಾವಣೆಯಲ್ಲಿ ಕನಿಷ್ಠ ಎಲ್.ಕೆ.ಆಡ್ವಾಣಿ ಅವರಿಗಾದರೂ ಟಕ್ಕರ್ ಕೊಟ್ಟಿದ್ದರು ಸಿಂಗ್. ದುರ್ಬಲ ಪ್ರಧಾನಿ ಎಂದೇ ಟೀಕಿಸುತ್ತಿದ್ದ ಆಡ್ವಾಣಿ ಅವರಿಗೆ, ಮನಮೋಹನ್ ಸಿಂಗ್ ಅವರು ಕಂದಹಾರ ಪ್ರಕರಣವನ್ನು ಇಟ್ಟುಕೊಂಡು ಚುಚ್ಚಿದ್ದರು. ಅಮೆರಿಕ ಜತೆಗಿನ ಅಣು ಒಪ್ಪಂದವಿಟ್ಟುಕೊಂಡು ತಾವೆಷ್ಟು ಗಟ್ಟಿ ಎಂದು ಹೇಳಿದ್ದರು. ಆದರೆ, ಈ ಚುನಾವಣೆಯಲ್ಲಿ ಮಾತ್ರ ಮೌನವ್ರತ ಆಚರಿಸುತ್ತಿದ್ದಾರೆ! ಇದನ್ನು ಹೊರತುಪಡಿಸಿ ನೋಡುವುದಾದರೆ, ಕಾಂಗ್ರೆಸ್ನ ಒಳ ರಾಜಕಾರಣದಿಂದಲೂ ಸಿಂಗ್ ತುಂಬಾ ಸಕ್ರಿಯವಾಗಿ ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಕ್ಕಿಲ್ಲ. ರಾಹುಲ್ ಗಾಂಧಿಯನ್ನು ನೇತಾರನನ್ನಾಗಿಸುವ ಭರದಲ್ಲಿ ಸಿಂಗ್ ಅವರನ್ನು ಪಕ್ಕಕ್ಕೆ ತಳ್ಳಿರಬಹುದು. 2014ರ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ಅವರಿಗೆ ವಹಿಸಿರುವುದರಿಂದ ಸಿಂಗ್ ಅವರಿಗೆ ಯಾವುದೇ ಕೆಲಸ ಕೊಟ್ಟಿರಲಿಕ್ಕಿಲ್ಲ. ಪ್ರಧಾನಿ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಸರಿಯಾಗಿ ಬಿಂಬಿಸಲಿಲ್ಲ ಎಂಬ ನೋವು ಕಾಂಗ್ರೆಸ್ನ ಅನೇಕ ನಾಯಕರಲ್ಲಿ ಇರೋದು ಸುಳ್ಳಲ್ಲ. ಹಾಗಾಗಿ, ಸಹಜವಾಗಿಯೇ ಚುನಾವಣೆಯಲ್ಲಿ ಅಂಥ ಪ್ರಮುಖ ಪಾತ್ರವೇನೂ ಬೇಕಾಗಿಲ್ಲ ಎಂಬ ಮನೋಭಾವ ಇದ್ದಿರಬಹುದು. ಕೇವಲ 11 ತಿಂಗಳು ಪ್ರಧಾನಿಯಾಗಿದ್ದ ನಮ್ಮ ದೇವೇಗೌಡರು ಈಗಲೂ ಅದೇ ಹುಮ್ಮಸ್ಸಿನಲ್ಲಿ, ಅದೇ ಸಾಧನೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕೆಲವೇ ಕಾಲ ಪ್ರಧಾನಿಯಾದವರೆಗೆ ಈಗಲೂ ಮುಂಚೂಣಿಯಲ್ಲಿರುವ ತವಕ ಇರುವಾಗ 10 ವರ್ಷ ದೇಶವಾಳಿದ ವ್ಯಕ್ತಿಗೆ ಏಕಿಲ್ಲ?
ಹಾಗೆ ನೋಡಿದರೆ, ಬಿಜೆಪಿಯ ಎಲ್.ಕೆ.ಆಡ್ವಾಣಿಯವರ ಸ್ಥಿತಿಯೂ ಮನಮೋಹನ್ ಸಿಂಗ್ ಅವರಿಗಿಂತಲೂ ಭಿನ್ನವಾಗಿಲ್ಲ ಬಿಡಿ. 2009ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಅವರು ಈ ಬಾರಿ ಪ್ರಚಾರಕ್ಕೆ ಸಂಬಂಧಿಸಿದಂತೆ ನಗಣ್ಯವಾಗಿದ್ದಾರೆ. ಚುನಾವಣೆ ಏರುಗತಿಯಲ್ಲಿರುವ ಸಮಯದಲ್ಲಿ ಅವರ ರ್ಯಾಲಿಗಳು ಕೂಡಾ ಗಮನ ಸೆಳೆಯುವಷ್ಟು ಆಗಿಲ್ಲ. ಅವರ ರ್ಯಾಲಿಗಳು ಇದುವರೆಗೂ 'ಹೆಡ್ಡಿಂಗ್'ಗಳಾಗಿಲ್ಲ. ಟೀವಿಗಳ ಪ್ಯಾನಲ್ ಚರ್ಚೆಗಳಲ್ಲಿ 'ಹಾಟ್ ಟಾಪಿಕ್' ಆಗಿಲ್ಲ. ಏನಿದ್ದರೂ ನಮೋಮಯ. ಗಮನಿಸಬೇಕಾದ ಸಂಗತಿ ಎಂದರೆ, 2009ರ ಚುನಾವಣೆಯಲ್ಲಿ ಆಡ್ವಾಣಿ ಹೆಚ್ಚಾಗಿ ತಮ್ಮ ಭಾಷಣದಲ್ಲಿ ಬಳಸಿದ ಪದವೆಂದರೆ 'ದುರ್ಬಲ ಪ್ರಧಾನಿ'. ಎಂಥಾ ವಿಪರ್ಯಾಸ ನೋಡಿ, ಯಾರು ಮನಮೋಹನ್ರನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿಕೊಂಡು ಬಂದಿದ್ದರೋ ಅವರೇ ಪ್ರಸಕ್ತ ಚುನಾವಣೆಯಲ್ಲಿ ದುರ್ಬಲರಾಗಿ ಕಾಣಿಸುತ್ತಿದ್ದಾರೆ! ಏನು ಮಾಡೋದು, ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿಕೊಂಡು ಹೋಗಲೇಬೇಕು.
-ಮಲ್ಲಿಕಾರ್ಜುನ ತಿಪ್ಪಾರ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

