ಕೆಲವರಿರುತ್ತಾರೆ. ಅವರು, ಬದುಕಿನ ಯಾವುದೋ ತಿರುವಿನಲ್ಲಿ ತೀರಾ ಆಕಸ್ಮಿಕವಾಗಿ ಪರಿಚಯವಾಗುತ್ತಾರೆ. ಆತ್ಮೀಯರಾಗುತ್ತಾರೆ. ಆಮೇಲಿನ ದಿನಗಳಲ್ಲಿ, ಅವರ ಸಹವಾಸದ ಕಾರಣದಿಂದಲೇ ಅದುವರೆಗೂ ಒಂದು ಶಾಪದಂತೆ ಅಂಟಿಕೊಂಡಿದ್ದ ದುರ್ಗುಣವೊಂದು ನಮ್ಮನ್ನು ಬಿಟ್ಟು ಹೋಗುತ್ತದೆ. ಸ್ವಾರಸ್ಯವೆಂದರೆ, ನಮ್ಮಲ್ಲಿ ಆದ ಬದಲಾವಣೆಯ ಬಗ್ಗೆ ಹಾಗೂ ಆ ಬದಲಾವಣೆಗೆ ಕಾರಣವಾದವರ ಬಗ್ಗೆ ಹತ್ತು ಮಂದಿಯ ಮುಂದೆ ನಾವು ಹೇಳಿಕೊಳ್ಳುವುದೇ ಇಲ್ಲ. ಎಷ್ಟೋ ದಿನಗಳ ನಂತರ, ಬಂದಷ್ಟೇ ಆಕಸ್ಮಿಕವಾಗಿ 'ಆ ವ್ಯಕ್ತಿ' ನಮ್ಮ ಬದುಕಿಂದ ಎದ್ದು ಹೋಗಿ ಬಿಡುತ್ತಾರಲ್ಲ; ಆನಂತರದಲ್ಲಿ ಆತ/ಆಕೆ ಬಿಟ್ಟೂ ಬಿಡದೆ ನೆನಪಾಗುತ್ತಾಳೆ. ಈ ವಿಷಯವಾಗಿ ನನ್ನ ಅನುಭವ ಹೇಳಿ ಬಿಡುತ್ತೇನೆ ಕೇಳಿ. ಚಿಕ್ಕಂದಿನಿಂದಲೂ ನನಗೆ ಟೈಂಸೆನ್ಸ್ ಇರಲೇ ಇಲ್ಲ. ಪ್ರತಿ ಸಂದರ್ಭದಲ್ಲೂ ಲೇಟು, ಲೇಟು, ಲೇಟು ! ನನ್ನ ಈ ವರ್ತನೆಯಿಂದ ಬೇಸತ್ತ ಅಮ್ಮ ಐದಾರು ಬಾರಿ ಶಿಕ್ಷಿಸಿದಳು. ಆದರೆ, ನಾನಂತೂ ಬದಲಾಗಲಿಲ್ಲ.
ಐದರಿಂದ ಏಳನೇ ತರಗತಿಯವರೆಗೆ ಓದುವ ಸಂದರ್ಭದಲ್ಲಿ ಸ್ಕೂಲ್ಗೆ ವ್ಯಾನ್ನಲ್ಲಿ ಕಳಿಸಲಾಗುತ್ತಿತ್ತು. 'ನೋಡಿ ತಾಯಿ, ಒಟ್ಟು 25 ಮಕ್ಕಳಿವೆ. ನಾನು 25 ಮನೆಗಳ ಮುಂದೆಯೂ ವ್ಯಾನ್ ನಿಲ್ಲಿಸಬೇಕು. ದಯವಿಟ್ಟು 8 ಗಂಟೆಗೆ ಸರಿಯಾಗಿ ಮಗೂನ ರೆಡಿಮಾಡಿ' ಎಂದು ಡ್ರೈವರ್ ಮೊದಲೇ ಮನವಿ ಮಾಡಿದ್ದ. ಅಮ್ಮನೇನೋ ಅವನ ಆದೇಶ ಪಾಲಿಸಲು ಸಿದ್ಧಳಿದ್ದಳು. ಆದರೆ ನಾನು ದಿನವೂ ಯಾವುದಾದರೂ ಒಂದು ಕುಂಟು ನೆಪ ಮುಂದಿಟ್ಟು ಲೇಟ್ ಮಾಡಿಬಿಡುತ್ತಿದ್ದೆ. ಒಂದು ದಿನ ಸಾಕ್ಸ್ ಮಾಯವಾಗಿರುತ್ತಿತ್ತು. ಮತ್ತೊಂದು ದಿನ ಲಂಚ್ ಬಾಕ್ಸ್ ಹಾಳಾಗಿರುತ್ತಿತ್ತು. ಇನ್ನೊಂದು ದಿನ, ಹೋಂ ವರ್ಕ್ ಪುಸ್ತಕ ಟೇಬಲ್ ಮೇಲೇ ಉಳಿದಿರುತ್ತಿತ್ತು. ಕೆಲವೊಮ್ಮೆ, ಸ್ಕೂಲ್ ಡೈರಿಗೆ ಅಮ್ಮನ ಸಹಿ ಬಿದ್ದಿರುತ್ತಿರಲಿಲ್ಲ. ಇಂಥ ಸಂಗತಿಗಳೆಲ್ಲ ವ್ಯಾನ್ ಹತ್ತಿದ ಮರುಕ್ಷಣವೇ ನೆನಪಾಗಿ ಬಿಡುತ್ತಿದ್ದವು. ತಕ್ಷಣವೇ-'ಅಮ್ಮಾ, ಡೈರಿಗೆ ಸೈನ್ ಬಿದ್ದಿಲ್ಲಾ...ಟೈ ಕಟ್ಕೊಂಡಿಲ್ಲಾ... ಎಂದು ಚೀರಿ ವ್ಯಾನ್ನಿಂದ ಇಳಿದುಬಿಡುತ್ತಿದ್ದೆ. ಮನೆಯಿಂದ ಹಿಂದಿರುಗಲು ಕಡಿಮೆ ಅಂದರೂ 10 ನಿಮಿಷ ಬೇಕಾಗುತ್ತಿತ್ತು. ಪಾಪ, ವ್ಯಾನ್ನ ಡ್ರೈವರ್, ಅನ್ನಲಾಗದೆ, ಅನುಭವಿಸಲಾಗದೆ ಸುಮ್ಮನೇ ನಿಂತಿರುತ್ತಿದ್ದ.
ಈ ಹುಡುಗಿಗೆ, ಸಮಯ ಪಾಲನೆಯ ಮಹತ್ವವೇ ಗೊತ್ತಿಲ್ಲ ಎಂಬ ದೂರು, ಕಡೆಗೊಮ್ಮೆ ಹೆಡ್ಮಾಸ್ಟರ್ರನ್ನೂ ತಲುಪಿತು. ಅವರು ಛೇಂಬರಿಗೆ ಕರೆದು, ಕಳೆದು ಹೋದ ಹೊತ್ತು ಹಾಗೂ ಒಡೆದು ಹೋದ ಮುತ್ತು ಎಂದೆಂದೂ ಮತ್ತೆ ಸಿಗುವುದಿಲ್ಲ. ಅರ್ಥ ಮಾಡಿಕೋ. ಇನ್ನು ಮುಂದಾದರೂ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸ ಮಾಡಿ ಮುಗಿಸು ಅಂದರು. ಅಷ್ಟಕ್ಕೇ ಸುಮ್ಮನಾಗದೆ, ಕ್ಲಾಸ್ನಲ್ಲಿ ಒಂದು ಕಥೆಯನ್ನೂ ಹೇಳಿದರು. ಅದು ಹೀಗೆ: ಅದೊಮ್ಮೆ ಗಾಂಧೀಜಿ ಒಂದು ಸಭೆಯಲ್ಲಿ ಭಾಷಣ ಮಾಡಲು ಒಪ್ಪಿಕೊಂಡಿದ್ದರಂತೆ. ವಿಪರೀತ ಕೆಲಸಗಳ ಕಾರಣದಿಂದ ಅವರ ಪ್ರಯಾಣದಲ್ಲಿ ವಿಳಂಬ ಆಯಿತಂತೆ. ನಿಗದಿತ ಸ್ಥಳದಲ್ಲಿ ಇಳಿದು, ಸಭೆ ಎಲ್ಲಿ ನಡೆಯುತ್ತದೆ ಎಂದು ಕೇಳಿದಾಗ, ಇನ್ನೂ ಒಂದು ಮೈಲಿ ದೂರ ಹೋಗಬೇಕೆಂದು ತಿಳಿಯಿತಂತೆ. ಗಡಿಯಾರ ನೋಡಿಕೊಂಡರೆ, ಭಾಷಣ ಆರಂಭವಾಗಲು ಕೇವಲ 7 ನಿಮಿಷ ಬಾಕಿಯಿದೆ ಎಂದು ಗೊತ್ತಾದಾಗ, ತಕ್ಷಣವೇ ಓಡಲು ಆರಂಭಿಸಿದರಂತೆ ಗಾಂಧೀಜಿ. ಕೇವಲ 5 ನಿಮಿಷದಲ್ಲಿ ಒಂದು ಮೈಲಿ ದೂರವನ್ನು ಓಡಿ, ನಂತರದ ಎರಡೇ ನಿಮಿಷದಲ್ಲಿ ಭಾಷಣ ಆರಂಭಿಸಿದರಂತೆ...'
ಉಹುಂ, ಇಂಥ ಯಾವ ಉಪದೇಶಗಳೂ ನನ್ನನ್ನು ಬದಲಿಸಲಿಲ್ಲ. ಪರೀಕ್ಷೆಗೆ ಹೋಗುವ ಸಂದರ್ಭದಲ್ಲಿ ಸುಧಾರಿಸಿಕೊಂಡು, ಮಾತ್ರ ಸಮಯಕ್ಕೆ ಸರಿಯಾಗಿ ಎಕ್ಸಾಂ ಹಾಲ್ಗೆ ಹೋಗುತ್ತಿದ್ದೆ. ನಿಗದಿತ ಅವಧಿಯೊಳಗೆ ಉತ್ತರ ಬರೆದು ಮುಗಿಸುತ್ತಿದ್ದೆ ಎಂಬುದನ್ನು ಬಿಟ್ಟರೆ, ಮಿಕ್ಕೆಲ್ಲ ಸಂದರ್ಭಗಳಲ್ಲೂ ಸಮಯ ಪಾಲನೆ ಮಾಡದಿರುವುದೇ ನನ್ನ ಸ್ಪೆಷಾಲಿಟಿ ಎಂಬಂತೆ ವರ್ತಿಸುತ್ತಿದ್ದೆ. ಅದನ್ನು ಗಮನಿಸಿದ್ದ, ನನ್ನಿಂದಾಗಿ ಹಲವು ಬಾರಿ ತೊಂದರೆಗೂ ಈಡಾಗಿದ್ದ ಗೆಳತಿಯರು/ಬಂಧುಗಳು-ಅವಳನ್ನು ಎಲ್ಲಿಗೂ ಕರೆಯೋದೆ ಬೇಡ ಎಂದು ನಿರ್ಧರಿಸಿ ಬಿಟ್ಟಿದ್ದರು.
ಹೀಗಿರುವಾಗಲೇ, ಒಂದು ಕಾರ್ಯಕ್ರಮದಲ್ಲಿ ಆ ವಿವಿಐಪಿ ಮಹಿಳೆಯ ಪರಿಚಯವಾಯಿತು. ಅದೇನು ಕಾರಣವೋ ಕಾಣೆ: ಆಕೆ ನನ್ನನ್ನು ವಿಪರೀತ ಹಚ್ಚಿಕೊಂಡರು. ವಿವಿಐಪಿಗಳೊಂದಿಗೆ ಮಾತಾಡುವುದೇ ಸೌಭಾಗ್ಯ ಎಂದು ನಾನು ಭಾವಿಸಿದ್ದ ದಿನಗಳವು. 'ಆ ವಿವಿಐಪಿ ನಂಗೆ ಕ್ಲೋಸು ಫ್ರೆಂಡು. ಗೊತ್ತಾ' ಎಂದು ಗೆಳತಿಯರೊಂದಿಗೆ ಜಂಬ ಕೊಚ್ಚಿಕೊಂಡೆ. ಆಗಲೇ, ಆ ಹೆಂಗಸು ಹೆಸರಾಂತ ಹೋಟೆಲಿನಲ್ಲಿ ತಿಂಡಿಗೆ ಕರೆದದ್ದು. 9 ಗಂಟೆಗೆ ಸರಿಯಾಗಿ ಹೋಟೆಲ್ಗೆ ಬಾ ಎಂದಾಕೆ ಮೊದಲೇ ಹೇಳಿದ್ದರು. ನಾನು 9 ಗಂಟೆಗೆ ಸರಿಯಾಗಿ ಮನೆಬಿಟ್ಟೆ! ಹತ್ತು ನಿಮಿಷ ಕಳೆದಿರಲಿಲ್ಲ. ಆಕೆಯಿಂದ ಎಸ್ಸೆಮ್ಮೆಸ್ ಬಂತು: 'ಸಮಯಕ್ಕೆ ನೀನು ಬರದಿದ್ದರಿಂದ ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ. ಇನ್ನೊಂದು ದಿನ ಸಿಕ್ಕೋಣ. ಬೈ...
ಮುಖಕ್ಕೆ ಹೊಡೆದಂಥ ಈ ಅಭಿಪ್ರಾಯದಿಂದ ನಿಜಕ್ಕೂ ಶಾಕ್ ಆಯಿತು. ಎರಡನೇ ಸಂದರ್ಭದಲ್ಲಾದರೂ ಹೇಳಿದ ಸಮಯಕ್ಕೆ ಹೋಗಿ ಆಕೆಯನ್ನು ಮೆಚ್ಚಿಸಬೇಕು ಅಂದುಕೊಂಡೆ. ಟ್ರಾಫಿಕ್ನಲ್ಲಿ ಸಿಕ್ಕಿಕೊಂಡದ್ದರಿಂದ ಆಗಲೂ ಸಮಯ ಪಾಲಿಸಲು ಆಗಲೇ ಇಲ್ಲ. 'ಬೈ ಫಾರ್ ಟುಡೇ. ಮೀಟ್ ಯೂ ನೆಕ್ಸ್ಟ್ ಟೈಂ. ಮುಂದಿನ ಬಾರಿಯಾದರೂ ಸಮಯಕ್ಕೆ ಸರಿಯಾಗಿ ಬನ್ನಿ. ಎರಡು ಗಂಟೆ ಮುಂಚಿತವಾಗಿಯೇ ಮನೆ ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಾವು ಯಾರಿಗಾಗಿಯೂ ಕಾಯಬಾರದು. ನಮಗೋಸ್ಕರ ಮತ್ಯಾರೋ ಕಾಯುವಂತೆಯೂ ಆಗಬಾರದು... ಇಂಥವೇ ಹತ್ತಾರು ಸಾಫ್ಟ್ ಮಾತುಗಳಿಂದಲೇ ಆ ವಿಐಪಿ ಹೆಂಗಸು ನನ್ನ ಅಹಮಿಕೆಯನ್ನು ಇಂಚಿಂಚಾಗಿ ಕೊಂದು ಹಾಕಿದಳು.
ಹೇಗಾದರೂ ಸರಿ, ಆಕೆಯನ್ನು ಮೆಚ್ಚಿಸಬೇಕು ಎಂಬ ಹಠ ನನಗೆ ಬಂದುದೇ ಆಗ: ಆನಂತರದಲ್ಲಿ ಮೊದ ಮೊದಲು ಆಕೆಗೋಸ್ಕರ ಸಮಯ ಪಾಲಿಸುತ್ತಿದ್ದವಳು, ಕ್ರಮೇಣ ಅದನ್ನು ನನ್ನ ಬದುಕಿಗೂ ಅಳವಡಿಸಿಕೊಂಡೆ. ಏಕಾಏಕಿ ಎಂಬಂತೆ ನನ್ನಲ್ಲಿ ಆಗಿ ಹೋದ ಬದಲಾವಣೆ ಕಂಡು ಈಗ ಗೆಳತಿಯರೆಲ್ಲಾ ಬೆರಗಾಗಿದ್ದಾರೆ. 'ಟೈಂಸ್ ಆಫ್ ಇಂಡಿಯಾ' ಎಂದು ಬಿರುದನ್ನು ಕೊಟ್ಟಿದ್ದಾರೆ. ಸಮಯ ಪಾಲನೆಯ ವಿಷಯದಲ್ಲಿ 'ಅವಳನ್ನು' ಮೀರಿಸಲು ಸಾಧ್ಯವಿಲ್ಲ ಅನ್ನುತ್ತಿದ್ದಾರೆ. ನನ್ನಲ್ಲಿ, ಇಂಥದೊಂದು ಬದಲಾವಣೆಗೆ ಕಾರಣವಾದ ಆ ಹೆಂಗಸು, ಕಳೆದ ವರ್ಷ ವಿದೇಶಕ್ಕೆ ಹೋಗಿಬಿಟ್ಟರು. ಈಗ, ಬಿಟ್ಟೂ ಬಿಡದಂತೆ ಅವರ ನೆನಪು...
ಇಂಥ ಅಪರೂಪದ ಜನ ನಿಮ್ಮ ಬದುಕಲ್ಲೂ ಬಂದಿರಬಹುದು, ಅಲ್ವಾ?
-ನಾನು ಪ್ರಣತಿ