ಅಂಕಣಗಳು

ಆಸ್ಕರ್‌ನ ವಿಚಾರಣೆ, ನಮ್ಮಲ್ಲೆಂದು ಇಂಥ ಸುಧಾರಣೆ?

ಆಸ್ಕರ್‌ನ ವಿಚಾರಣೆ, ನಮ್ಮಲ್ಲೆಂದು ಇಂಥ ಸುಧಾರಣೆ?
Published On :

ಕ್ರೀಡೆಯಲ್ಲಿ, ಅದರಲ್ಲೂ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿಯಿರುವವರಿಗೆ ಆಸ್ಕರ್ ಪಿಸ್ಟೋರಿಯಸ್ ಪರಿಚಿತ ಹೆಸರು. ಹುಟ್ಟುವಾಗಲೇ ಮಂಡಿ ಹಾಗೂ ಪಾದವನ್ನು ಬೆಸೆಯುವ ಮೂಳೆಯಿಲ್ಲದೇ ಹುಟ್ಟಿದವನೀತ (ಇದಕ್ಕೆ ಫಿಬ್ಯೂಲ್ ಎನ್ನುತ್ತಾರೆ). ಈ ಆನುವಂಶಿಕ ಕಾಯಿಲೆಯಿಂದಾಗಿ ಹನ್ನೊಂದು ತಿಂಗಳ ಮಗುವಾಗಿದ್ದಾಗಲೇ ಆಪರೇಷನ್‌ಗೆ ಒಳಗಾಗಿ ಎರಡೂ ಕಾಲುಗಳನ್ನು ಕಳೆದುಕೊಂಡ. ಕ್ರಮೇಣ ಕೃತಕ ಕಾಲುಗಳೊಂದಿಗೆ ನಡೆಯುವುದನ್ನು, ಓಡುವುದನ್ನೂ ಕಲಿತ. ವಿಕಲಾಂಗರಿಗೆ ಮೀಸಲಾದ ಪ್ಯಾರಾಲಿಂಪಿಕ್ಸ್ ಓಟಗಳಲ್ಲಿ ಅಗ್ರಗಣ್ಯನಾದ. ಕೊನೆಗೆ ಸಾಮಾನ್ಯರ ಒಲಿಂಪಿಕ್ಸ್‌ನಲ್ಲೂ ಭಾಗವಹಿಸಿ, ಅಭಿಮಾನಿಗಳಿಂದ  ಬ್ಲೇಡ್ ರನ್ನರ್ ಎಂಬ ಪ್ರೀತಿಯ ಬಿರುದನ್ನೂ ಗಳಿಸಿದ.  
ಅಂಥ ಆಸ್ಕರ್ ಪಿಸ್ಟೋರಿಯಸ್ ತನ್ನ ಬದುಕಿನ ಓಟದಲ್ಲಿ ಎಡವಿ, ಇವತ್ತು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ನ್ಯಾಯಾಲಯದಲ್ಲಿ ಗಳಗಳನೆ ಅಳುತ್ತಿದ್ದಾನೆ. ತನ್ನನ್ನು ಕೇಳಲಾಗುತ್ತಿರುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೇ ತಡವರಿಸುತ್ತಿದ್ದಾನೆ. ಮಾತು ಮಾತಿಗೂ ನನ್ನನ್ನು ಕ್ಷಮಿಸಿ ಎನ್ನುತ್ತಿದ್ದಾನೆ. ತನ್ನ ಪ್ರತಿವಾದಿ ವಕೀಲರು ತನ್ನ ವ್ಯಕ್ತಿತ್ವವನ್ನು ಎಳೆಎಳೆಯಾಗಿ ಬಿಡಿಸಿಡುತ್ತಿರುವುದನ್ನು ನೋಡಿ ಕನಲಿ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಆದರೆ ಇದ್ಯಾವುದೂ ನ್ಯಾಯಾಧೀಶರ ಮೇಲಾಗಲೀ, ಅವನಿಂದ ನಿಜ ಹೊರಡಿಸಲೇಬೇಕೆಂಬ ಹಟಕ್ಕೆ ಬಿದ್ದಿರುವ ಅವನ ಪ್ರತಿವಾದಿ ವಕೀಲರ ಮೇಲಾಗಲೀ ಅಥವಾ ಅವನೆದುರಿಗೇ ಕೂತು ಅವನ ಪ್ರತಿ ಮಾತನ್ನೂ ಕಿವಿಗೊಟ್ಟು ಆಲಿಸುತ್ತಿರುವ, ಅವನ ಕೈಲಿ ಸಾವಿಗೀಡಾದ ಅವನ ಗೆಳತಿ ರೀವಾ ಸ್ಟೀನ್ ಕ್ಯಾಂಪ್‌ಳ ತಾಯಿ, ಸಹೋದರಿಯರ ಮೇಲಾಗಲೀ ಯಾವ ಪರಿಣಾಮವನ್ನೂ ಬೀರುತ್ತಿಲ್ಲ. ಅವನ ದೈತ್ಯ ಪ್ರತಿಭೆಗೆ ಮರುಳಾಗಿದ್ದ ಅವನ ಅಭಿಮಾನಿಗಳು ಕೂಡ ಸತ್ಯವೇನೆಂದು ತಿಳಿಯುವ, ಸತ್ಯವನ್ನು ಮಾತ್ರ ಬೆಂಬಲಿಸುವ ಉತ್ಸುಕತೆಯಲ್ಲಿದ್ದಾರೆ.
ಆಸ್ಕರ್‌ನ ಎರಡೂ ಕಾಲುಗಳನ್ನು ಕತ್ತರಿಸಿ ತೆಗೆಯಲಾಗಿದ್ದರೂ ಕ್ರೀಡೆಯನ್ನು ಬಹಳವಾಗಿ ಪ್ರೋತ್ಸಾಹಿಸುತ್ತಿದ್ದ ಅವನ ತಂದೆ ತಾಯಿಯರು ಅವನಲ್ಲಿ ವಿಕಲಾಂಗನೆಂಬ ಭಾವನೆ ಬರುವುದಕ್ಕೇ ಬಿಡಲಿಲ್ಲ. ಸಣ್ಣ ಹುಡುಗನಾಗಿದ್ದಾಗಲೇ ಶಾಲೆಯ ರಗ್ಬಿ ಆಟದಲ್ಲಿ ಹಾಗೂ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವನು 17 ವರ್ಷ ತುಂಬುವ ಹೊತ್ತಿಗೆ ವಿಶ್ವ ದರ್ಜೆಯ ಓಟಗಾರನಾಗಿ ಮಾರ್ಪಟ್ಟಿದ್ದ. 2004ರಲ್ಲಿ ಗ್ರೀಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊಟ್ಟಮೊದಲ ಬಾರಿ ಭಾಗವಹಿಸಿ, 200ಮೀ ಓಟದಲ್ಲಿ ಚಿನ್ನ ಹಾಗೂ 100ಮೀ ಓಟದಲ್ಲಿ ಕಂಚಿನ ಪದಕವನ್ನು ಗೆದ್ದು ರಾತೋರಾತ್ರಿ ಪ್ರಸಿದ್ಧನಾದ. ಮುಂದೆ 2005ರಲ್ಲಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರೀಡಾಕೂಟದಲ್ಲಿನ ಗೆಲುವು, 2006ರ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 100ಮೀ, 200ಮೀ ಮತ್ತು 400ಮೀ ಓಟಗಳಲ್ಲಿ ಪಡೆದ ಚಿನ್ನದ ಪದಕಗಳು ಅವನನ್ನು ಪ್ಯಾರಾಲಿಂಪಿಕ್ಸ್ ಓಟದ ಸಾಮ್ರಾಜ್ಯದ ಅನಭಿಷಿಕ್ತ ದೊರೆಯನ್ನಾಗಿಸಿದವು.
2012ರಲ್ಲಿ ಲಂಡನ್‌ನಲ್ಲಿ ನಡೆದ ಸಾಮಾನ್ಯರ ಒಲಿಂಪಿಕ್ಸ್‌ಗೆ ಸೂಕ್ತ ತಯಾರಿ ನಡೆಸಿ, ಅರ್ಹತೆ ಗಿಟ್ಟಿಸಿ, ಸಾಮಾನ್ಯರೊಡನೆ ಸ್ಪರ್ಧಿಸಿದ ವಿಶ್ವದ ಮೊದಲ ವಿಕಲಾಂಗ ಓಟಗಾರನೆಂಬ ಹೆಗ್ಗಳಿಕೆಗೂ ಪಾತ್ರನಾದ.  ಅವನ ಈ ಅಸಾಮಾನ್ಯ ಸಾಧನೆಗೆ ಟೈಮ್ಸ್ ನಿಯತಕಾಲಿಕವು 2008ರ 100 ಅತ್ಯಂತ ಪ್ರಭಾವಶಾಲಿಯರ ಪಟ್ಟಿಯಲ್ಲಿ ಅವನನ್ನು ಸೇರಿಸಿದರೆ, ಗ್ಲಾಸ್ಗೋ ವಿಶ್ವವಿದ್ಯಾಲಯ ಅವನಿಗೆ ಗೌರವ ಡಾಕ್ಟರೇಟ್ ನೀಡಿತು. ಜೊತೆಗೇ ಹಲವು ಪ್ರಶಸ್ತಿ, ಸಮ್ಮಾನಗಳೂ ದೊರಕಿದವು. ನೈಕಿ, ಥಿಯರಿ ಮಗ್ಲರ್‌ನಂಥ ಬ್ರ್ಯಾಂಡ್‌ಗಳು ಅವನನ್ನು ತಮ್ಮ ಅಂಬಾಸಿಡರ್ ಮಾಡಿಕೊಂಡವು. ಬ್ಲೇಡ್‌ನಂತೆ ಕಾಣುವ ಕೃತಕ ಕಾಲುಗಳನ್ನು ಹಾಕಿಕೊಂಡು ಅಡೆತಡೆಯಿಲ್ಲದೇ ಓಡುತ್ತಿದ್ದ ಅವನನ್ನು ಜನರು ಪ್ರೀತಿಯಿಂದ, ಅಭಿಮಾನದಿಂದ  ಬ್ಲೇಡ್ ರನ್ನರ್ ಎಂದು ಕರೆದರು. ನವೆಂಬರ್ 2012ರಲ್ಲಿ ರೀವಾ ಸ್ಟೀನ್ 'ಕ್ಯಾಂಪ್‌' ಎಂಬ ಕಾನೂನು ಪದವೀಧರೆ ಹಾಗೂ ಮಾಡೆಲ್ ಜೊತೆಯಾದಳು. ಸರ್ವಜ್ಞನ ಮಾತಿನಂತೆ ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು ಎನ್ನುವ ಗಳಿಗೆ ಸನ್ನಿಹಿತವಾದಾಗ...
ಆಸ್ಕರ್ ತನ್ನ ಬದುಕಿಗೇ ಕೊಳ್ಳಿ ಇಟ್ಟುಕೊಂಡ!
2013ರ ಫೆಬ್ರುವರಿ 14ರ ಬೆಳಗಿನ ಜಾವ (ಪ್ರೇಮಿಗಳ ದಿನ). ತನ್ನ ಮನೆಯ ಬಾತ್‌ರೂಮಿನಲ್ಲಿದ್ದ ಗೆಳತಿ ರೀವಾಳ ಮೇಲೆ ಆಸ್ಕರ್ ಗುಂಡಿನ ಮಳೆಗರೆದ. ನಾಲ್ಕು ಗುಂಡುಗಳನ್ನು ತಿಂದ ರೀವಾ ಹೆಣವಾದಳು. ಪೊಲೀಸರು ಆಸ್ಕರ್‌ನನ್ನು ಬಂಧಿಸಿದರು. ಅವನ ಓಟದ ಬದುಕಿಗೆ ತೆರೆ ಬಿತ್ತು. ಕಳೆದ ಮಾರ್ಚ್ 3ರಿಂದ ಅವನ ಪ್ರಕರಣ ವಿಚಾರಣೆಗೆ ಬಂದಿದೆ. ಯಾರೋ ದರೋಡೆಕೋರ ಮನೆಯೊಳಗೆ ನುಗ್ಗಿದ್ದಾನೆಂದುಕೊಂಡು ನಾನು ಗುಂಡು ಹಾರಿಸಿದೆ. ಬಾತ್‌ರೂಮಿನಲ್ಲಿದ್ದುದು ರೀವಾ ಎಂಬುದು ಗೊತ್ತಿರಲಿಲ್ಲ. ಇದೊಂದು ಆಕಸ್ಮಿಕ ದುರ್ಘಟನೆ.... ಎಂದು ಆಸ್ಕರ್ ಬಿಕ್ಕುತ್ತಲೇ ಸಾಧಿಸುತ್ತಿದ್ದಾನೆ. ಅವನ ಪರವಾಗಿರುವ ವಕೀಲ ಬ್ಯಾರಿ ರೂಕ್ಸ್ ಇದನ್ನು ಅವನು ತಿಳಿಯದೇ ಮಾಡಿದ ಅಪರಾಧವೆಂದು ನಿರೂಪಿಸಲು 15ಕ್ಕೂ ಹೆಚ್ಚು ಸಾಕ್ಷಿಗಳನ್ನು ತಯಾರುಮಾಡಿಕೊಂಡಿದ್ದಾರೆ. ಪ್ರತಿವಾದಿ ವಕೀಲರಾದ,  ಪಿಟ್‌ಬುಲ್ ಎಂದೇ ಪ್ರಖ್ಯಾತರಾದ ಜೆರ್ರಿ ನೆಲ್ ಅವನ ವಾದವನ್ನು ಒಪ್ಪುತ್ತಿಲ್ಲ. ದೊಡ್ಡ ಸ್ಟಾರ್ ಆದರೂ ಯಾವುದೇ ವಿನಾಯಿತಿಯಿಲ್ಲದೇ "ನೀನು ಎಂಥ ಬೇಜವಾಬ್ದಾರ, ಸುಳ್ಳುಗಾರ ನೋಡು.." ಎಂದಾಗ ಆಸ್ಕರ್ ತಲೆತಗ್ಗಿಸುತ್ತಾನೆ. ನನ್ನನ್ನು ಕ್ಷಮಿಸಿ ಎನ್ನುತ್ತಾನೆ. ನ್ಯಾಯಾಧೀಶೆ ಕೆಲಕಾಲ ಕಲಾಪ ಮುಂದೂಡಿ ಅವನಿಗೆ ಚೇತರಿಸಿಕೊಳ್ಳಲು ಸಮಯ ನೀಡುತ್ತಾರೆ. ಮತ್ತೆ ನೆಲ್ ವಿಚಾರಣೆ ಶುರುಮಾಡಿ ಆಸ್ಕರ್‌ನ ಇತಿಹಾಸ ಕೆದಕಿದಾಗ ಅವನು  ತಲ್ಲಣಿಸುತ್ತಾನೆ. ಕೆಲ ತಿಂಗಳ ಹಿಂದೆಯಷ್ಟೇ ತುಂಬಿದ ಹೋಟೆಲೊಂದರಲ್ಲಿ ಟೇಬಲ್‌ನ ಅಡಿಯಲ್ಲಿ ಆಸ್ಕರ್ ತನ್ನ ಗೆಳೆಯನ ಪಿಸ್ತೂಲು ಚಲಾಯಿಸಿದ್ದೇಕೆ ಎಂದು ಕೇಳುತ್ತಾರೆ. ಟ್ರಿಗರ್ ತಾನಾಗೇ ಚಲಿಸಿದ್ದು, ನಾನು ಅದುಮಿದ್ದಲ್ಲ ಎಂದು ಅವನು ಹೇಳಿದಾಗ ಅವನನ್ನು ಕೆಕ್ಕರಿಸಿ ನೋಡುತ್ತಾರೆ ನೆಲ್. ನ್ಯಾಯಾಲಯಕ್ಕೆ ಮತ್ತೊಂದು ವಿಡಿಯೋ ತೋರಿಸುತ್ತಾರೆ. ಅದರಲ್ಲಿ ಪಿಸ್ತೂಲು ಹಿಡಿದ ಆಸ್ಕರ್ ಕಲ್ಲಂಗಡಿ ಹಣ್ಣೊಂದಕ್ಕೆ ಗುಂಡು ಹೊಡೆದು, ಅದು ಹೋಳಾಗುವುದನ್ನು ಕಂಡು, ಇದು ಮನುಷ್ಯನ ಮಿದುಳಿಗಿಂತ ಬಹಳ ಮೃದು ಎಂದು ಹೇಳುವ ಚಿತ್ರ ಮೂಡುತ್ತದೆ. ಅವನತ್ತ ತಿರುಗುವ ನೆಲ್, ರೀವಾಳ ತಲೆ ಸಿಡಿದು ಹೋಳಾಗಿದ್ದೂ ಹೀಗೆಯೇ, ನಿನಗೆ ಗೊತ್ತು ತಾನೆ ಎಂದು ಕೇಳಿದಾಗ ಅವನು ನಿರುತ್ತರನಾಗುತ್ತಾನೆ. ಹೀಗೆ ಅವನಿಗೆ ಸಂಬಂಧಿಸಿದ ಘಟನೆಗಳನ್ನು ಹೆಕ್ಕಿ ತೆಗೆದು ಅವನ ಹೃದಯವನ್ನು ಕಿವುಚಿ, ಅವನ ಮನಸನ್ನು ದಿನದಿನವೂ ಹುರಿದು ತಿನ್ನುತ್ತಾರೆ ನೆಲ್.
ದಕ್ಷಿಣ ಆಫ್ರಿಕಾದಲ್ಲಿ ನಮ್ಮಲ್ಲಿರುವಂತೆ ಹಲವು ಸದಸ್ಯರನ್ನೊಳಗೊಂಡ ನ್ಯಾಯಪೀಠ ಇಲ್ಲ. ಅಲ್ಲಿನ ವರ್ಣಭೇದ ನೀತಿಯ ಪ್ರಭಾವ ಹಾಗೂ ಪಳಿಯುಳಿಕೆಯಿಂದಾಗಿ ಅರ್ಹತೆಯಿರುವ ಯಾರೂ ಅದರ ಭಾಗವಾಗಲು ಬಯಸುವುದಿಲ್ಲ. ಆದ್ದರಿಂದ ಅದು 1969ರಲ್ಲೇ ರದ್ದಾಗಿ ಹೋಗಿದೆ. ಈಗ ಓರ್ವ ನಿಯುಕ್ತ ನ್ಯಾಯಾಧೀಶರೇ ಪ್ರಕರಣಗಳ ವಿಚಾರಣೆ ಪೂರೈಸುತ್ತಾರೆ. ಅವರಿಗೆ ತೀರ ಕ್ಲಿಷ್ಟ ಎನಿಸಿದ ಪಕ್ಷದಲ್ಲಿ ಅವರ ಸಹಾಯಕ್ಕೆ ಒಬ್ಬಿಬ್ಬರು ನಿರ್ಣಾಯಕರನ್ನು ಕೊಡಲಾಗುತ್ತದೆ. ಆಸ್ಕರ್‌ನ ಪ್ರಕರಣದಲ್ಲೂ ಹೀಗೇ ಆಗಿದೆ. ಮಸಿಪಾರ ಜೊತೆ ಇಬ್ಬರು ನಿರ್ಣಾಯಕರಿದ್ದಾರೆ. ಎಲ್ಲರೂ ಸೇರಿ ತೀರ್ಮಾನಕ್ಕೆ ಬರಬಹುದಾದರೂ ಶಿಕ್ಷೆ ಜಾರಿಗೊಳಿಸುವ ಹಕ್ಕಿರುವುದು ಮಸಿಪಾರಿಗೆ ಮಾತ್ರ. ಆಸ್ಕರ್‌ನ ಅಪರಾಧ ಸಾಬೀತಾದರೆ ಅವನಿಗೆ 25 ವರ್ಷ ಕಾರಾಗೃಹವಾಸದ ಶಿಕ್ಷೆ ಜಾರಿಯಾಗಲಿದೆ. ಅಪರಾಧಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿರಪರಾಧಿಗೆ ಶಿಕ್ಷೆಯಾಗದಿರುವುದು. ಅಂತಲೇ ತಮ್ಮ ಮಹತ್ತರ ಜವಾಬ್ದಾರಿಯ ಅರಿವಿರುವ ಮಸಿಪಾ ಪ್ರತಿಯೊಂದು ಸಾಕ್ಷಿಯನ್ನೂ, ಪ್ರತಿಯೊಂದು ಹೇಳಿಕೆ, ವಾದವಿವಾದವನ್ನೂ ಕೂಲಂಕಷವಾಗಿ ಪರಾಮರ್ಶಿಸುತ್ತಿದ್ದಾರೆ.
ಬರೀ ಮೂರು ವಾರಗಳಲ್ಲಿ ಮುಗಿದುಹೋಗಬಹುದು ಎಂದೆಣಿಸಿದ್ದ ವಿಚಾರಣೆಯ ಅವಧಿ ವಿಸ್ತರಿಸುತ್ತಲೇ ಸಾಗಿದೆ. ಈಗ ಮೇ ತಿಂಗಳಲ್ಲಿ ಅಂತ್ಯಗೊಳ್ಳಬಹುದಾದ ಸಾಧ್ಯತೆ ಗೋಚರಿಸಿದೆ. ಆಸ್ಕರ್ ತಪ್ಪು ಮಾಡಿದ್ದಾನೋ ಇಲ್ಲವೋ, ತೀರ್ಪು ಅವನ ಪರವಾಗಿ ಬರುತ್ತದೋ ಇಲ್ಲವೋ, ಆದರೆ ಈಗಾಗಾಲೇ ಬಹಳಷ್ಟು ಅಭಿಮಾನಿಗಳನ್ನು ಕಳೆದುಕೊಂಡಿದ್ದಾನೆ. ನ್ಯಾಯಾಲಯದ, ವಕೀಲರ ವೆಚ್ಚಗಳನ್ನು ಸರಿದೂಗಿಸಲು, ಇದ್ದ ತನ್ನ ಒಂದೇ ಮನೆಯನ್ನು ಮಾರಿಕೊಂಡಿದ್ದಾನೆ. ನೈಕಿ ಅವನನ್ನು ಹೊರಹಾಕಿದೆ. ದಿನವೂ ನ್ಯಾಯಾಲಯಕ್ಕೆ ಬಂದು ಕೂರುವ ಅವನ ಅಣ್ಣ ಹಾಗೂ ತಂಗಿಯ ಬೆಂಬಲದ ಹೊರತಾಗಿಯೂ ಅವನನ್ನು ಶೂನ್ಯ ದಟ್ಟವಾಗಿ ಆವರಿಸಿಕೊಂಡಿದೆ.
ಭಾರತೀಯರಾಗಿ ಈ ಪ್ರಕರಣವನ್ನು ನೋಡಿದಾಗ ನಮಗೆ ನಾಚಿಕೆಯೆನಿಸುತ್ತದೆ. ಪ್ರಭಾವಿ ವ್ಯಕ್ತಿಗಳ ವಲಯಕ್ಕೆ ಸೇರಿದೊಡನೆ ಬರುವ ಆನೆಬಲ ಎಲ್ಲ ಅಪರಾಧಗಳನ್ನೂ ಮುಚ್ಚಿಹಾಕುವ ನಮ್ಮ ದೇಶದಲ್ಲಿ ಈ ಮಟ್ಟದ ಪಾರದರ್ಶಕತೆ ಎಂದಾದರೂ ಬರಲು ಸಾಧ್ಯವೇ? ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಸತ್ತಾಗ ಸೀಳುನಾಯಿಗಳಂತೆ ಅಟ್ಟಿಸಿಕೊಂಡು ಓಡಿದ ನಮ್ಮ ಮಾಧ್ಯಮಗಳು ಆಮೇಲೆ ಬೇಟೆಯ ವಾಸನೆಯನ್ನೇ ಮರೆತು ಹಿಂತಿರುಗಿಬಿಟ್ಟವು. ಎಲ್ಲದಕ್ಕೂ ಸಿ.ಬಿ.ಐ.ನ ಕದ ತಟ್ಟಿಯೋ ಆರ್.ಟಿ.ಐ.ನ ಮೊರೆ ಹೊಕ್ಕೋ ನ್ಯಾಯ ಕೇಳಬೇಕಾದ ಪರಿಸ್ಥಿತಿಯಲ್ಲಿರುವ ನಾವು ಎಂದಿಗೆ ಇಷ್ಟು ನಿಷ್ಠುರರಾಗುವುದು? ವಿಶ್ವದ ಯಾವುದೇ ಮೂಲೆ, ಯಾವುದೇ ಘಟನೆಯಿಂದಾದರೂ ಸರಿ, ನಾವು ಕಲಿಯಬೇಕಾದ ಪಾಠ ಇನ್ನೂ ಬಹಳಷ್ಟಿದೆ!

-ಸಹನಾ ವಿಜಯಕುಮಾರ್  
ಹವ್ಯಾಸಿ ಲೇಖಕಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.