

ಪ್ರಧಾನಿ ಮನಮೋಹನ್ ಸಿಂಗ್ ಅವರ 'ಮಾತು ಮತ್ತು ಮೌನ'- ಈಗ ಎಲ್ಲೆಡೆ ವ್ಯಾಪಕ ಚರ್ಚೆಗೆ ಒಳಗಾಗಿರುವ ವಿಷಯ. ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಬರೆದಿರುವ 'ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಹಾಗೂ ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ. ಪಾರಖ್ ವಿರಚಿತ 'ಕ್ರುಸೇಡರ್ ಆರ್ ಕಾನ್ಸ್‌ಪಿರೇಟರ್, ಕೋಲ್ಗೆಟ್ ಅಂಡ್ ಅದರ್ ಟ್ರೂತ್ಸ್' ಕೃತಿಗಳಲ್ಲಿ ಪ್ರಧಾನಿಯವರ ಮೌನವೇ ಪ್ರಧಾನ ವಸ್ತುವಾಗಿರುವ ಹಿನ್ನೆಲೆಯಲ್ಲಿ ಈ ಚರ್ಚೆಗೆ ಇನ್ನಿಲ್ಲದ ಮಹತ್ವ ಬಂದಿದೆ. ಹಾಗೆ ನೋಡಿದರೆ, ಕಳೆದ ಹತ್ತು ವರ್ಷಗಳಲ್ಲಿ ಮೌನವೇ ಪ್ರಧಾನಿಯವರ ಮಾತಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಮನಮೋಹನ್ ಸಿಂಗ್ ಸದಾ ಮೌನವಾಗಿರುತ್ತಾರೆ. ಒಂದೊಮ್ಮೆ ಅವರು ಮಾತಾಡಿದರೆ ಅದು 'ಮಿತಭಾಷಿಕನ' ಪರಿಧಿಯನ್ನು ದಾಟುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ಮಾತಾಡಬೇಕೆಂದರೆ ಅಥವಾ ಏನನ್ನಾದರೂ ತೀರ್ಮಾನ ತೆಗೆದುಕೊಳ್ಳಬೇಕೆಂದರೆ ಈ ಕೆಲಸವನ್ನು ಒಂದೋ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮಾಡುತ್ತಾರೆ. ಇಲ್ಲವೇ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡುತ್ತಾರೆ. ಸಹಿ ಹಾಕಿ ಠಸ್ಸೆ ಹೊಡೆಯುವುದೊಂದೇ ಪ್ರಧಾನಿಯವರ ಕೆಲಸ ಎಂಬುದು ಜನಜನಿತ ಮಾತು. ಆದರೆ ಈ ಮಾತಿಗೆ ವಿಶೇಷತೆ ಬಂದಿರುವುದು ಸಂಜಯ್ ಬಾರು ಹಾಗೂ ಪಾರಖ್ ಕೃತಿಗಳಿಂದ.
ಹಾಗಾದರೆ ರಾಜಕೀಯದಲ್ಲಿ ಮಾತಿಗೆ ಎಷ್ಟು ಮಹತ್ವ? ರಾಜಕಾರಣಿ ಆದವನು ಎಷ್ಟು ಮಾತಾಡಬೇಕು? ಎಷ್ಟು ಮಾತಾಡಬಾರದು? ಅಧಿಕಾರದಲ್ಲಿ ಇದ್ದವನು ಎಷ್ಟು ಮಾತಾಡಬೇಕು? ಅಧಿಕಾರದಲ್ಲಿ ಇಲ್ಲದವನು ಎಷ್ಟು ಮಾತುಗಳನ್ನು ಉದುರಿಸಬೇಕು? ಹೆಚ್ಚು ಮಾತಾಡದವನು ಕೆಲಸ ಮಾಡಲು ಆಗುವುದಿಲ್ಲವೇ? ಮಾತಾಡುತ್ತಲೇ ಕೆಲಸ ಮಾಡಬೇಕೇ? ಕೆಲಸಕ್ಕಿಂತ ಹೆಚ್ಚು ಮಾತಾಡಬೇಕೇ? ಒಬ್ಬರ ಮಾತನ್ನು ಮತ್ತೊಬ್ಬರು ಆಡುವುದು ಎಷ್ಟು ಸರಿ? ಅವರವರ ಮಾತನ್ನು ಅವರವರೇ ಆಡಬೇಕೇ..? ರಾಜಕೀಯ ತಂತ್ರಗಾರಿಕೆಯಲ್ಲಿ ಮಾತಿನ ಸ್ಥಾನ, ಸ್ವರೂಪ ಏನು? ಬಾಯಿಗೆ ಬಂದಂತೆ ಮಾತಾಡಿ ಅಧಿಕಾರ ಗಳಿಸಿಕೊಂಡವರೆಷ್ಟು? ಅಧಿಕಾರ ಕಳೆದುಕೊಂಡವರೆಷ್ಟು? ಮಾತು ಹೇಗಿರಬೇಕು? ಹೇಗಿರಬಾರದು?- ಇವೇ ಮೊದಲಾದ ಸಂಗತಿಗಳು ಈಗ ಚರ್ಚೆಗೆ ವಸ್ತುವಾಗಿವೆ. ಈ ಚರ್ಚೆ ಸ್ಫೋಟದ ಮೂಲ ಮತ್ತದೇ ಮನಮೋಹನ್ ಸಿಂಗ್ ಅವರ ಮೌನ.
ಹೌದು, ಮಾತಿಲ್ಲದೇ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬುದು ಸತ್ಯ, ಹಾಗಂತ ಮಾತೇ ರಾಜಕೀಯ ಆಗುವುದಿಲ್ಲ. ಒಬ್ಬ ರಾಜಕಾರಣಿಯಾಗಿ ಬೆಳೆಯಬೇಕಾದರೆ ಮಾತೇ ಬಂಡವಾಳ ಆಗುತ್ತದೆ. ಈಗ ಸಿಕ್ಕಾಪಟ್ಟೆ ಬಂಡವಾಳ ಇದ್ದವರೆಲ್ಲ ರಾಜಕಾರಣಿಗಳಾಗಿದ್ದಾರೆ ಎಂಬುದು ಬೇರೆ ಮಾತು. ಆದರೆ ಬಹುತೇಕ ರಾಜಕಾರಣಿಗಳು ತಮ್ಮ ಬೆಳವಣಿಗೆಗೆ ಜನರನ್ನು ಸೂಜಿಗಲ್ಲಿನಂತೆ ಸೆಳೆವ ಮಾತುಗಳ ಮೊರೆ ಹೋಗುತ್ತಾರೆ. ಒಂದೇ ಕೆಲಸ ಮಾಡಿ ಅದನ್ನು ಹತ್ತಾಗಿ ಬಿಂಬಿಸುತ್ತಾರೆ. ಹಾಗೆ ಹತ್ತಾಗಿ ಬಿಂಬಿಸಲು ಅವರಿಗೆ ಮಾತು ನೆರವಿಗೆ ಬರುತ್ತದೆ. ಇದು ಸುಳ್ಳೇ ಆದರೂ ಆ ಸುಳ್ಳು ಹೇಳಲು ಮತ್ತದೇ ಮಾತೇ ಬೇಕಲ್ಲವೇ? ಅದೇ ರೀತಿ ಮಾಡಿದ ಕೆಲಸವನ್ನೂ ಜನರಿಗೆ ತಿಳಿಸಲು ಕೂಡ ಮಾತು ಬೇಕಾಗುತ್ತದೆ. ಹೀಗಾಗಿ ಅದು ಸಕಾರಾತ್ಮಕವೋ, ನಕಾರಾತ್ಮಕವೋ, ರಾಜಕೀಯದಲ್ಲಿ ಮಾತೇ ಪ್ರಧಾನ ಎಂಬುದಂತೂ ಎಲ್ಲರೂ ಒಪ್ಪುವ ಮಾತೇ.
ಹಾಗಾದರೆ ಎಷ್ಟು ಮಾತಾಡಬೇಕು? ಎಷ್ಟು ಮಾತಾಡಬಾರದು? ಏನು ಮಾತಾಡಬೇಕು? ಏನು ಮಾತಾಡಬಾರದು ಎಂಬುದಷ್ಟೇ ಮುಖ್ಯವಾಗುತ್ತದೆ. ಜತೆಗೆ ಸಮಯ ಹಾಗೂ ಸಂದರ್ಭ ಕೂಡ ರಾಜಕೀಯದಲ್ಲಿ ಮಾತಿನ ಜತೆಗೆ ಪ್ರಧಾನ ಪಾತ್ರ ವಹಿಸುತ್ತದೆ. ಈ ದೇಶದ ಸಾರ್ವಭೌಮತ್ವ ಪ್ರತೀಕವಾದ ಅತ್ಯುನ್ನತ ಸ್ಥಾನ ಪ್ರಧಾನಮಂತ್ರಿ ಹುದ್ದೆ ವಹಿಸಿರುವ ಮನಮೋಹನ್ ಸಿಂಗ್ ಅವರು ಆ ಹುದ್ದೆಯ ಘನತೆ, ಗೌರವಕ್ಕೆ ತಕ್ಕುದಾಗಿ ನಡೆದುಕೊಳ್ಳಲಿಲ್ಲ. ಅವರ ಮಾತು ಮತ್ತು ಕೃತಿಗಳೆಲ್ಲವೂ ಬೇರೆಯವರದ್ದೇ ಆಗಿರುತ್ತಿತ್ತು, ಆಗಿರುತ್ತದೆ ಎಂಬುದು ಅವರ ಮೇಲಿರುವ ದೊಡ್ಡ ಆಪಾದನೆ. ಹಿಂದೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹತ್ಯೆ ನಂತರ ಪ್ರಧಾನಿ ಹುದ್ದೆ ಅಲಂಕರಿಸಿದ ಪಿ.ವಿ. ನರಸಿಂಹರಾವ್ ಅವರಿಗೂ ಇದೇ ರೀತಿಯ 'ಮೌನ ಪ್ರಧಾನಿ' ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅವರು ಮಾತೇ ಆಡದೆ, ಸದ್ದಿಲ್ಲದೇ ಐದು ವರ್ಷಗಳ ಆಳ್ವಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅವರ 'ಮೌನಾಡಳಿತ' ಅವಧಿಯಲ್ಲಿ ಬಂದ ಟೀಕೆ-ಟಿಪ್ಪಣಿಗಳಿಗೆ ಲೆಕ್ಕವಿಲ್ಲ. ಅವರು ಮಾತೇ ಆಡಲ್ಲ, ತುಟಿ ಬಿಚ್ಚಲ್ಲ ಎಂದೆಲ್ಲ ಜನ ಆಡಿಕೊಂಡರು. ಆದರೆ ನರಸಿಂಹರಾವ್ ಮೌನಿ ಆಗಿದ್ದರೂ ದುರ್ಬಲ ಪ್ರಧಾನಿ ಅನಿಸಿಕೊಳ್ಳಲಿಲ್ಲ. ಇಂದಿರಾಗಾಂಧಿ ಕುಟುಂಬಕ್ಕೆ ಮೊದಲಿನಿಂದಲೂ ನಿಷ್ಠರಾಗಿದ್ದ ನರಸಿಂಹರಾವ್ ಪ್ರಧಾನಿ ಹುದ್ದೆಗೇರಿದ ನಂತರ ಆ ನಿಷ್ಠೆಯನ್ನು ಬದಲಿಸಿಕೊಳ್ಳಲಿಲ್ಲ. ಇಂದಿರಾಗಾಂಧಿ, ರಾಜೀವ್‌ಗಾಂಧಿ ರಹಿತ ಸೋನಿಯಾ ಕುಟುಂಬಕ್ಕೂ ಆ ನಿಷ್ಠೆಯನ್ನು ವಿಸ್ತರಿಸಿದರು. ಆದರೆ ಯಾವುದೇ ಕಾರಣಕ್ಕೂ ತಮ್ಮ ಆಳ್ವಿಕೆಯಲ್ಲಿ ಸೋನಿಯಾ ಗಾಂಧಿ ಅವರ ಹಸ್ತಕ್ಷೇಪಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಇವರು ಆಸ್ಪದ ಕೊಡಲಿಲ್ಲ ಎನ್ನುವುದಕ್ಕಿಂತ ರಾಜೀವ್‌ಗಾಂಧಿ ಹತ್ಯೆ ಆಘಾತದಿಂದ ದಿಗ್ಮೂಢರಾಗಿದ್ದ ಸೋನಿಯಾಗಾಂಧಿ ಹಸ್ತಕ್ಷೇಪ ಮಾಡುವ ಮನಸ್ಸು ಹಾಗೂ ಛಾತಿ ಎರಡನ್ನೂ ಹೊಂದಿರಲಿಲ್ಲ ಎಂಬುದೇ ಸರಿಯಾದ ಮಾತು.
ಆಗ ನರಸಿಂಹರಾವ್ ಸುಂಪುಟದಲ್ಲಿ ಈಗಿನ ಪ್ರಧಾನಿ ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಆಗ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮನಮೋಹನ್ ಸಿಂಗ್ ಪಾತ್ರ ಕಡಿಮೆಯೇನಿಲ್ಲ. ಇವರು ಸೇರಿದಂತೆ ಸೋನಿಯಾಗಾಂಧಿ ಕುಟುಂಬಕ್ಕೆ ಅನೇಕ ಮಂತ್ರಿಗಳು ಮುಖಂಡರು ಆಪ್ತರಾಗಿದ್ದರೂ ಅವರ್ಯಾರೂ ಬಾಲ ಬಿಚ್ಚಲು ನರಸಿಂಹರಾವ್ ಆಸ್ಪದ ಕೊಟ್ಟಿರಲಿಲ್ಲ. ನೀತಿ-ನಿರೂಪಣೆ ವಿಚಾರಗಳಲ್ಲಿ ಅವರ ನಿರ್ಣಯಗಳೇ ಅಂತಿಮ ಆಗಿರುತ್ತಿದ್ದವು. ಮಾತಾಡದಿದ್ದರೂ ತಮಗೆ ಸರಿ ಎನಿಸಿದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. ಕ್ಲಾಸಿಕ್ ಕಂಪ್ಯೂಟರ್ ಹಗರಣ, ಸ್ವೇಚ್ಛಾಡಳಿತದಿಂದ ಹೆಸರು ಕೆಡಿಸಿಕೊಂಡು, ತಿರುಗಿಬಿದ್ದಿದ್ದ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಪದವಿಯಿಂದ ಕಿತ್ತು ಹಾಕಿಸಿ, ವೀರಪ್ಪ ಮೋಯ್ಲಿಯವರನ್ನು ಆ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿಸಿದ್ದರು. ಆಗಲೂ ಕೂಡ ಅವರ ಮೌನವೇ ಮಾತಾಗಿತ್ತು. ಸಿಕ್ಕಾಪಟ್ಟೆ ಮಾತಾಡಿದ ಬಂಗಾರಪ್ಪ ಪದವಿ ಕಳೆದುಕೊಂಡಿದ್ದರು. ಏನೂ ಮಾತಾಡದ ನರಸಿಂಹರಾವ್ 'ಸೈಲೆಂಟ್ ಕಿಲ್ಲರ್' ಕೆಲಸ ಮಾಡಿದ್ದರು.
ಅಷ್ಟೇ ಅಲ್ಲ ಪಿ.ವಿ. ನರಸಿಂಹರಾವ್ 'ಮೌನ ತಂತ್ರಗಾರ' ಕೂಡ ಆಗಿದ್ದರು. ಕಾಂಗ್ರೆಸ್ ಶರೀರ ಅವರದ್ದಾಗಿದ್ದರೂ ಮನಸ್ಸಿನಲ್ಲಿ ದೇಶಪ್ರೇಮ, ಹಿಂದುತ್ವ ಮತ್ತಿತರ ಆರ್‌ಎಸ್‌ಎಸ್, ಬಿಜೆಪಿ ವಿಚಾರಗಳು ಮಡುಗಟ್ಟಿದ್ದವು. ಹೀಗಾಗಿಯೇ ಅಯೋಧ್ಯೆಯಲ್ಲಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅವರ ಹೆಸರು ತಳಕು ಹಾಕಿಕೊಂಡದ್ದು.
ಅಯೋಧ್ಯೆಯಲ್ಲಿ ಮಸೀದಿ ಧ್ವಂಸಗೊಂಡಾಗ ಉತ್ತರಪ್ರದೇಶದಲ್ಲಿ ಕಲ್ಯಾಣ್‌ಸಿಂಗ್ ನೇತೃತ್ವದ ಬಿಜೆಪಿ ಸರಕಾರವಿತ್ತು. ಕೇಂದ್ರದಲ್ಲಿ ಪಿವಿಎನ್ ಪ್ರಧಾನಿ ಆಗಿದ್ದರು. ಆಗಲೂ ಕೂಡ ಅವರ ಮೌನವೇ ಮಾತಾಗಿತ್ತು. ಮಸೀದಿ ಧ್ವಂಸಕ್ಕೆ ಅದುವೇ ಸಮ್ಮತಿಯಾಗಿತ್ತು ಎಂಬ ಟೀಕೆಗಳೂ ಕೇಳಿಬಂದವು. ಇದೆಲ್ಲ ಏನನ್ನು ಸೂಚಿಸುತ್ತವೆ ಎಂದರೆ 'ಮೌನ' ಕೂಡ ರಾಜಕೀಯ ಮಾಡಬಲ್ಲದು. ಮೌನ ಕೂಡ ರಾಜಕೀಯದಲ್ಲಿ ಗೆಲ್ಲಬಲ್ಲದು. ಮೌನವಾಗಿದ್ದುಕೊಂಡು ಯಶಸ್ವಿ ರಾಜಕಾರಣಿ ಎನಿಸಬಹುದು. ಇಲ್ಲೆಲ್ಲ 'ಮಾತು ಬೆಳ್ಳಿ, ಮೌನ ಬಂಗಾರ', 'ಮಾತಿಗಿಂತ ಕೃತಿಯೇ ಮೇಲು' ಎಂಬ ನಾಣ್ನುಡಿಗಳು ಮಾತಾಡುತ್ತವೆ. ಮೌನ ದೌರ್ಬಲ್ಯದ ಸಂಕೇತವಲ್ಲ ಎಂಬುದನ್ನು ಪ್ರತಿಪಾದಿಸುತ್ತವೆ.
ಕರ್ನಾಟಕದಲ್ಲಿ 1999ರಿಂದ 2004ರವರೆಗೆ ಆಳ್ವಿಕೆ ನಡೆಸಿದ ಎಸ್.ಎಂ.ಕೃಷ್ಣ ಕೂಡ 'ಭಯಂಕರ ಮಿತಭಾಷಿ' ಆಗಿದ್ದರು. ತಮ್ಮ ಆಡಳಿತದ ಅವಧಿಯಲ್ಲಿ ಕೃಷ್ಣ ಎದುರಿಸಿದ 'ಅನಾಹುತ'ಗಳು ಒಂದೆರಡಲ್ಲ. ಡಾ. ರಾಜ್‌ಕುಮಾರ್ ಅಪಹರಣ, ಮಾಜಿ ಸಚಿವ ನಾಗಪ್ಪ ಅಪಹರಣ ಹಾಗೂ ಹತ್ಯೆ, ಕಾವೇರಿ ವಿವಾದದಲ್ಲಿ ಸುಪ್ರೀಂಕೋರ್ಟ್‌ನಿಂದ ಛೀಮಾರಿ, ನಾಲ್ಕು ವರ್ಷಗಳ ಕಾಲ ಸತತ ಭೀಕರ ಬರಗಾಲ- ಇಷ್ಟೆಲ್ಲವನ್ನೂ ಮೌನವಾಗಿಯೇ ನಿಭಾಯಿಸಿದರು. ಹಾಗೆಂದು ಅವರು ಮಾತಾಡಲೇ ಇಲ್ಲ ಎಂದೇನೂ ಇಲ್ಲ. ಆದರೆ ಮಾತಾಡಿದ್ದು ಬಹಳ ಕಡಿಮೆ. ಅವರ ಮೌನವಾಗಲಿ, ಮಿತಭಾಷೆಯಾಗಲಿ ಟೀಕೆಗೆ ವಸ್ತುವಾಗಲಿಲ್ಲ. ಆದರೆ ಸಮಸ್ಯೆ, ಸಂದರ್ಭಗಳ ಯಶಸ್ವಿ ನಿರ್ವಹಣೆ ಅಂಥದಕ್ಕೆ ಆಸ್ಪದ ನೀಡಲಿಲ್ಲ. ಕೃಷ್ಣ ಯಶಸ್ವಿ ಮುಖ್ಯಮಂತ್ರಿ ಎನಿಸಿದರು. ಆದರೆ ಇದೇ ಮಾತನ್ನು ಅವರು ವಿದೇಶಾಂಗ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದ ಬಗ್ಗೆ ಹೇಳುವಂತಿಲ್ಲ. ತಪ್ಪು-ತಪ್ಪಾಗಿ ಮಾತಾಡಿ, ತಪ್ಪು-ತಪ್ಪು ಹೇಳಿಕೆಗಳನ್ನು ನೀಡಿ ವ್ಯಾಪಕ ಟೀಕೆಗೆ ಗುರಿಯಾದರು. ಅಷ್ಟೇ ಅಲ್ಲ ಕೇಂದ್ರ ಸಚಿವ ಸ್ಥಾನವನ್ನೂ ಕಳೆದುಕೊಂಡರು. ಮಾತು ಮತ್ತು ಮೌನದ ವೈರುಧ್ಯಗಳಿಗೆ ಉದಾಹರಣೆ ಇಲ್ಲಿದೆ. ಹಾಗೆಂದು ಎರಡನೇ ಘಟನೆಗೂ ಮೌನವೇ ಉತ್ತರವಾಗುತ್ತಿತ್ತು ಎಂದು ಹೇಳುವಂತೆಯೂ ಇಲ್ಲ.
ಇದೇ ಕೃಷ್ಣ ಅವರ ಸರಕಾರದಲ್ಲಿ ಟಿ. ಜಾನ್ ಎಂಬ ಸಚಿವರಿದ್ದರು. ಮಹಾರಾಷ್ಟ್ರ ಲಾತೂರ್ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಾಗ ಗಂಡಾಂತರಕಾರಿ, ಅಮಾನುಷ ಹೇಳಿಕೆಯೊಂದನ್ನು ಕೊಟ್ಟರು. ದೇಶದ ಅನೇಕ ಕಡೆ ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿರುವುದರಿಂದ ಏಸು ಮುನಿದಿದ್ದು ಈ ಭೂಕಂಪವಾಗಿದೆ ಎಂದರು. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿಬಂದವು. ಏಸು ಮುನಿದಿದ್ದಕ್ಕಾಗಿ ಭೂಕಂಪವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಆ ರೀತಿ ಹೇಳಿಕೆ ನೀಡಿದ್ದಕ್ಕಾಗಿ ಜಾನ್ ಮಂತ್ರಿ ಸ್ಥಾನ ಕಳೆದುಕೊಂಡರು. ಈ ದುರಂತದ ಬಗ್ಗೆ ಜಾನ್ ಮಾತಾಡದೇ ಮೌನವಾಗಿದ್ದರೆ ಅವರ ಮಾನವೀಯತೆ ಹಾಗೂ ಮಂತ್ರಿಸ್ಥಾನ ಎರಡೂ ಉಳಿದುಕೊಳ್ಳುತ್ತಿದ್ದವು. ಮೌನ ಗೆಲ್ಲುತ್ತಿತ್ತು. 'ಮಾತು ಆಡಿದರೆ ಆಯಿತು, ಮುತ್ತು ಒಡೆದರೆ ಹೋಯಿತು' ಎನ್ನುವುದು ಇದಕ್ಕೇ....!
ಇಲ್ಲಿ ಇನ್ನೂ ಒಂದು ವಿಚಿತ್ರ ಇದೆ. ಮನಮೋಹನ್ ಸಿಂಗ್ ಮೌನ ಹೇಗೆ ಟೀಕೆಗೆ ವಸ್ತುವಾಗುತ್ತದೆಯೋ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಕೂಡ ಆಕ್ಷೇಪಣೆಗೆ ಆಹಾರವಾಗುತ್ತದೆ. ಪ್ರಧಾನಿ ಮೌನದ ಬಗ್ಗೆ ಸಂಜಯ್‌ಬಾರು, ಪಾರೇಖ್ ಪುಸ್ತಕ ಬರೆಯುತ್ತಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು 'ನರಹಂತಕ' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಚುನಾವಣೆ ಆಯೋಗದಿಂದ ಎಚ್ಚರಿಕೆ ಪಡೆದುಕೊಳ್ಳುತ್ತಾರೆ. ಮನಮೋಹನ್‌ಸಿಂಗ್ ಮೌನದ ಬಗ್ಗೆ ಬಿಜೆಪಿ ಮುಖಂಡರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ಯುದ್ಧವೇ ನಡೆಯುತ್ತದೆ. ಸಿಂಗ್ ಅವರನ್ನು ಮೋದಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಟೀಕಿಸಿದರೆ, ಅವರೆಲ್ಲರನ್ನೂ ದಿಗ್ವಿಜಯ್‌ಸಿಂಗ್, ರಾಹುಲ್‌ಗಾಂಧಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಅಧಿಕಾರ ಮುಗಿಸಿ, ಅವರ ಪಾಡಿಗೆ ಅವರಿರುವ ಮಾಜಿ ಪ್ರಧಾನಿ ವಾಜಪೇಯಿ ಅವರ ಹೆಸರನ್ನು ಈ ವಾಗ್ಯುದ್ಧಕ್ಕೆ ಎಳೆದುತರುತ್ತಾರೆ.
ದೇವೇಗೌಡರು ಸಿದ್ದರಾಮಯ್ಯ ಜಾತಿವಾದಿ ಎಂದರೆ, ಸಿದ್ದರಾಮಯ್ಯ ದೇವೇಗೌಡರನ್ನು 'ವರ್ಗವಾದಿ' ಎನ್ನುತ್ತಾರೆ. ಕುಮಾರಸ್ವಾಮಿ-ಸಿದ್ದರಾಮಯ್ಯ ಬಹಿರಂಗವಾಗಿ ಕಿತ್ತಾಡಿಕೊಂಡದ್ದು ಕಡಿಮೆ ಏನಿಲ್ಲ.
ಯಡಿಯೂರಪ್ಪ-ಕುಮಾರಸ್ವಾಮಿ ಜಗಳ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಆಣೆವರೆಗೂ ಹೋಗಿಬಂತು. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಎರಡೂ ಪಕ್ಷಗಳ ಮುಖಂಡರ ನಡುವಣ ವಾಗ್ಸಮರ ರಾಮಾಂಜನೇಯ ಯುದ್ಧದಂತೆ ಭಾಸವಾಗುತ್ತಿತ್ತು.
ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ದೇವೇಗೌಡರ ನಡುವಣ ತ್ರಿಕೋನ ಜಗಳ, ಕುಮಾರಸ್ವಾಮಿ-ಡಿ.ಕೆ. ಶಿವಕುಮಾರ್ ನೇರಾನೇರ ಜಗಳ- ಹೀಗೆ ಅನೇಕರ ನಡುವಣ ಕದನಗಳು, ದ್ವೇಷದ ರಾಜಕಾರಣ ಸಾರ್ವಜನಿಕ ವಲಯದಲ್ಲಿ ಮಾತಿಗಿಂತ ಮೌನವೇ ಲೇಸು ಎಂಬ ಅಭಿಪ್ರಾಯ ಮೂಡಿಸಿದ್ದು ಸುಳ್ಳಲ್ಲ.
ಹಾಗೆಂದು ರಾಜಕಾರಣಿಗಳು ಮಾತನ್ನೇ ಆಡಬಾರದು ಎಂದೇನೂ ಇಲ್ಲ. ಆದರೆ ಆಡಿದ ಮಾತಿನಲ್ಲಿ ತೂಕವಿರಬೇಕು. ಆ ತೂಕದಲ್ಲಿ ವಿವೇಕ, ಸದ್ಚಿಂತನೆ ತುಂಬಿರಬೇಕು. ವಾದ-ಪ್ರತಿವಾದ ಸಜ್ಜನಿಕೆಯ ಎಲ್ಲೆಯನ್ನು ಮೀರಬಾರದು. ಆಡಿದವರು, ಕೇಳಿದವರು ಇಬ್ಬರೂ ಮೆಚ್ಚುವಂತಿರಬೇಕು.
ಲಗೋರಿ: ಮಾತಿನಿಂದಷ್ಟೇ ಅಲ್ಲ ಮೌನದಿಂದಲೂ ಒಬ್ಬರನ್ನು ಗೆಲ್ಲಬಹುದು, ಕೊಲ್ಲಬಹುದು.
- ಪಿ. ತ್ಯಾಗರಾಜ್
thyagarjun@gmail.com