ನೆಹರ್ ಕಾ ನಗ್ಲಾದ ಆಚೆಗೊಂದು ಶುದ್ಧ ನೀರಿನ ನಗೆ

ಯುವಕರು ತಮ್ಮ ಪ್ರೇಯಸಿಗೆ ನೀಡುವ ಸಾಮಾನ್ಯ ಭರವಸೆ- ನಿನಗೆ ಒಮ್ಮೆಯಾದರೂ...
ನೆಹರ್ ಕಾ ನಗ್ಲಾದ ಆಚೆಗೊಂದು ಶುದ್ಧ ನೀರಿನ ನಗೆ
Updated on: 

ನೀರಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಮೊಘಲ್ ದೊರೆಗಳು ಸಮುದಾಯದ ಸಹಭಾಗಿತ್ವದಲ್ಲಿ ನೀರು ನಿರ್ವಹಣೆ ಮಾಡಬೇಕು ಎನ್ನುವುದನ್ನೂ ತಿಳಿದಿದ್ದರು. ಹೀಗಾಗಿಯೇ ಎಲ್ಲಿ ನೋಡಿದರೂ ನೀರು ನೋಡಲು ಸಾಧ್ಯವಿತ್ತು. ಪ್ರವಾಸಿ ತಾಣವಾಗುವ ಹಠದಲ್ಲಿ ಆಗ್ರಾ ಬೆಳೆಯುತ್ತಿದ್ದಂತೆ ಬಾವಿ, ಕೊಳಗಳು ಮಾಯವಾದವು. ನೀರಿನ ಮೂಲಗಳನ್ನೇ ನಿರ್ನಾಮ ಮಾಡಿ, ಅದರ ಮೇಲೆ ನಿವೇಶನ ತಯಾರಿಸಿದರು...


ಯುವಕರು ತಮ್ಮ ಪ್ರೇಯಸಿಗೆ ನೀಡುವ ಸಾಮಾನ್ಯ ಭರವಸೆ- ನಿನಗೆ ಒಮ್ಮೆಯಾದರೂ ಆಗ್ರಾ ತೋರಿಸ್ತೀನಿ ಕಣೆ. ಯುವಪ್ರೇಮಿಗಳ ಮಾತು ಬಿಡಿ. ಕಾಶಿ ಯಾತ್ರೆಗೆ ಹೋಗುವವರು, ಕಚೇರಿ ಕೆಲಸಕ್ಕಾಗಿ ದೆಹಲಿಗೆ ಹೋಗುವವರ ಯಾದಿಯಲ್ಲೂ ಆಗ್ರಾ ಇದ್ದೇ ಇರುತ್ತದೆ. ಆಗ್ರಾ ಎಂದರೆ ಪರಿಶುದ್ಧ ಪ್ರೇಮದ ಪ್ರತೀಕ. ಯಮುನೆಯ ತಟದಲ್ಲಿ ನಿಂತಿರುವ ತಾಜ್‌ಮಹಲ್ ಎಂತಹವರಿಗೂ ಪುಳಕ ಮೂಡಿಸದೇ ಇರದು. ಬೆಳದಿಂಗಳ ರಾತ್ರಿಯಲ್ಲಿ ತಾಜ್‌ಮಹಲ್‌ನ ವೈಭವವೇ ಬೇರೆ. ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತಧಾರೆ' ಕೊನೆಯ ದೃಶ್ಯ ಎಂಥ ಸೆಂಟಿಮೆಂಟ್ ಕೂಪಕ್ಕೆ ದೂಡುತ್ತದೆ ನೋಡಿ. ಆ ಭಾವದ ಪ್ರವಾಹಕ್ಕೂ ತಾಜ್‌ಮಹಲ್ಲೇ ಅಲ್ಲವೇ ಕಾರಣ?
ಉತ್ತರ ಪ್ರದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಆಗ್ರಾ ಮೊದಲ ಸ್ಥಾನದಲ್ಲಿದೆ. 2011ರ ಜನಗಣತಿ ಪ್ರಕಾರ, ಅಲ್ಲಿನ ಜನಸಂಖ್ಯೆ ಸುಮಾರು 18 ಲಕ್ಷ. ಆದರೆ ಗೊತ್ತಾ? ದೀಪದ ಬುಡದಲ್ಲಿ ಕತ್ತಲು ಎನ್ನುವ ಮಾತಿನಿಂದ ಆಗ್ರಾ ಕೂಡ ಹೊರತಲ್ಲ. ಅಲ್ಲಿನ ಜನಸಂಖ್ಯೆಯ ಅರ್ಧದಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿರುವವರು. ಆಗ್ರಾದ ಆ ತಾಜ್‌ಮಹಲ್ ಆಚೆಗೆ ಸ್ಲಮ್‌ಗಳ ಸಾಗರವೇ ಇದೆ. ಇಡೀ ಆಗ್ರಾದ ಅರ್ಧಕ್ಕಿಂತ ಹೆಚ್ಚು ಭಾಗ ಕೊಳೆಗೇರಿಗಳಿಂದಲೇ ಕೂಡಿದೆ. ಅಲ್ಲಿ ಮೂಲಸೌಲಭ್ಯಗಳಿರಲಿ, ಕಾರ್ಪೋರೇಶನ್‌ನಿಂದ ಕುಡಿಯುವ ನೀರೂ ಪೂರೈಕೆಯಾಗುವುದಿಲ್ಲ. ಕೊಳೆಗೇರಿಗಳ ಜನ ಕುಡಿಯುವ ನೀರಿಗಾಗಿ ಅವಲಂಬಿಸಿರುವುದು ಟ್ಯಾಂಕರ್‌ಗಳನ್ನು. ತಮ್ಮ ತಿಂಗಳ ಆದಾಯದಲ್ಲಿ ಶೇಕಡಾ 20ರಷ್ಟನ್ನು ನೀರಿಗಾಗಿ ವೆಚ್ಚ ಮಾಡಿದರೆ, ಆ ಕಲುಷಿತ ನೀರಿನಿಂದ ಉಂಟಾಗುವ ಅನಾರೋಗ್ಯದ ಔಷಧೋಪಚಾರಕ್ಕೆ ಮತ್ತೆ ಶೇಕಡಾ 15ರಷ್ಟನ್ನು ವ್ಯಯಿಸುತ್ತಾರೆ. ಅಂದರೆ ತಿಂಗಳ ಆದಾಯದಲ್ಲಿ ಶೇಕಡಾ 35ರಷ್ಟು ಹಣ ನೀರು ಮತ್ತು ಔಷಧಕ್ಕೆ ಬೇಕು! ಇವೆಲ್ಲ ಅಲ್ಲಿನ ಸರ್ಕಾರಕ್ಕೆ ಗೊತ್ತು. ಬಾಯ್ತೆರೆದರೆ ದಲಿತ, ಬಡವ ಅಂತ ಭಾಷಣ ಬಿಗಿಯುವ ಹಿಂದಿನ ಮುಖ್ಯಮಂತ್ರಿ ಮಾಯಾವತಿಗೂ ಇದು ಗೊತ್ತಿತ್ತು. ಆದರೆ, ಆಕೆ ಆ ಬಗ್ಗೆ ಗಮನವನ್ನೇ ಹರಿಸಲಿಲ್ಲ. ಅಖಿಲೇಶ್ ಯಾದವ್ ಬಂದಮೇಲಾದರೂ ಪರಿಸ್ಥಿತಿ ಸುಧಾರಿಸುತ್ತದಾ ಅಂತ ಕಾದರು ಅಲ್ಲಿನ ಕೊಳೆಗೇರಿ ಜನ. ಆದರೂ ಉಪಯೋಗವಾಗಲಿಲ್ಲ.
ಆಗ್ರಾದ ಪಕ್ಕದಲ್ಲೇ ರಮ್ಯವಾಗಿ ಯಮುನೆ ಹರಿಯುತ್ತಾಳೆ. ಕೋಟೆ ಸುತ್ತ ಸದಾ ನೀರಿನಿಂದ ತುಂಬಿರುತ್ತಿದ್ದ ಕಂದಕ. ಊರಿನಲ್ಲಿ ಎಲ್ಲಿ ನೋಡಿದರೂ ಕೆರೆ, ಬಾವಿ, ಬೊಲಿ (ಮೆಟ್ಟಿಲುಗಳಿರುವ ಬಾವಿ)ಗಳು. ನೀರಿನ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಮೊಘಲ್ ದೊರೆಗಳು ಸಮುದಾಯದ ಸಹಭಾಗಿತ್ವದಲ್ಲಿ ನೀರು ನಿರ್ವಹಣೆ ಮಾಡಬೇಕು ಎನ್ನುವುದನ್ನೂ ತಿಳಿದಿದ್ದರು. ಹೀಗಾಗಿಯೇ ಎಲ್ಲಿ ನೋಡಿದರೂ ನೀರು ನೋಡಲು ಸಾಧ್ಯವಿತ್ತು. ಪ್ರವಾಸಿ ತಾಣವಾಗುವ ಹಠದಲ್ಲಿ ಆಗ್ರಾ ಬೆಳೆಯುತ್ತಿದ್ದಂತೆ ಬಾವಿ, ಕೊಳಗಳು ಮಾಯವಾದವು. ನೀರಿನ ಮೂಲಗಳನ್ನೇ ನಿರ್ನಾಮ ಮಾಡಿ, ಅದರ ಮೇಲೆ ನಿವೇಶನ ತಯಾರಿಸಿದರು. ಕಾಂಪ್ಲೆಕ್ಸ್ ಕಟ್ಟಿದರು. ಅತ್ತ ದೆಹಲಿಯೂ ಬೆಳೆಯಿತು. ಹರಿಯಾಣವಂತೂ ಕೈಗಾರಿಕೆಗಳ ತಾಣವಾಗಿ ರೂಪುಗೊಂಡಿತ್ತು. ಅವೆರಡೂ ಕಡೆಯ ತ್ಯಾಜ್ಯಗಳು ಸೇರಿದ್ದು ಮಾತ್ರ ಯಮುನೆಯ ಒಡಲನ್ನು. ಹೀಗಾಗಿ ಯಮುನೆಯೂ ದಿನೇದಿನೇ ಸೊರಗುತ್ತ ಸಾಗಿದಳು. ಮಳೆಗಾಲದಲ್ಲಿ ಒಮ್ಮೊಮ್ಮೆ ಪ್ರವಾಹದಿಂದ ಅಬ್ಬರಿಸುವ ಅವಳು, ಒಂದೆರಡು ತಿಂಗಳಲ್ಲಿಯೇ ಕೃಶಳಾಗಿಬಿಡುತ್ತಾಳೆ. ಬೇಸಿಗೆಯಲ್ಲಂತೂ ಅವಳ ಎಲುಬಗಳೇ ದರ್ಶನವಾಗುತ್ತವೆ. ಆ ಆಗ್ರಾದಲ್ಲಿ ಕದ್ದು ಮೋಟಾರ್ ಹಾಕಿಕೊಂಡು ನೀರು ಮಾಡುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಇಡೀ ಆಗ್ರಾಕ್ಕೆ ಗಂಗಾಜಲ ಪೂರೈಸುವ ಯೋಜನೆಯನ್ನು ಜಪಾನ್‌ನ ಜೈಕಾ ಸಹಕಾರದಲ್ಲಿ ಸರ್ಕಾರ ಕೈಗೊಂಡಿದೆಯಾದರೂ ಯೋಜನೆ ಕುಂಟುತ್ತಾ ಸಾಗಿದೆ. 2012ರಲ್ಲಿ ಮುಗಿಯಬೇಕಿದ್ದ ಈ ಯೋಜನೆಯ ಡೆಡ್‌ಲೈನ್ 2016ಕ್ಕೆ ವಿಸ್ತರಣೆಯಾಗಿದೆ. ಇನ್ನು ಎರಡು ವರ್ಷ ಕಾಯಲೇಬೇಕಿದೆ. ಬೆಳೆಯುತ್ತಲೇ ಸಾಗಿರುವ ಆಗ್ರಾದ ನೀರಿನ ಕೊರತೆಯೂ ಅದೇ ಹೆಚ್ಚುತ್ತಿದೆ. ಆದರೆ, ಸರ್ಕಾರ ಮಾತ್ರ ಕಣ್ಣುಮುಚ್ಚಿಕೊಂಡಿದೆ.
ಇದೇ ಆಗ್ರಾದ ಒಂದು ಕೊಳೆಗೇರಿ ನೆಹರ್ ಕಾ ನಗ್ಲಾ. ಆಲ್ಲೀಗ ನೀರಿಗಾಗಿ ಹಾಹಾಕಾರ ಇಲ್ಲ. ಅಲ್ಲಿನ ಜನ ಶುದ್ಧ ನೀರು ಕುಡಿಯುತ್ತಿದ್ದಾರೆ. ಆರೋಗ್ಯ ತೊಂದರೆಗಳು ಗಣನೀಯವಾಗಿ ಕಡಿಮೆಯಾಗಿವೆ. ಅಲ್ಲಿನ ಮಹಾನಗರ ಪಾಲಿಕೆಯೇನೂ ಇವರಿಗೆ ನೀರು ಸರಬರಾಜು ಮಾಡುತ್ತಿಲ್ಲ. ಆದರೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ನೀರು ಇವರಿಗೆ ಸಿಗುತ್ತಿದೆ ಎಂದರೆ ಅದರ ಹಿಂದಿರುವುದು ಸ್ತ್ರೀ ಶಕ್ತಿ. ಇದೇ ಪ್ರದೇಶದ ಆರು ಮಹಿಳೆಯರ ಕಾಳಜಿಯ ಪ್ರತಿಫಲ. ನಿತ್ಯ ಟ್ಯಾಂಕರ್‌ಗಳ ಆಗಮನಕ್ಕೆ ಕಾದೂಕಾದು ಬೇಸತ್ತಿದ್ದ ಆರು ಮಹಿಳೆಯರಿಗೆ ಈ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳಬೇಕು ಎನ್ನುವ ಛಲ ಮೂಡಿತು. ಟ್ಯಾಂಕರ್‌ಗಳನ್ನು ನಂಬಿ ಬದುಕುವುದೇ ತಪ್ಪೆಂಬ ಜ್ಞಾನೋದಯವಾಯಿತು. 'ನಯಿ ಆಶಾ ಸ್ವಯ ಸಹಾಯತಾ ಸಮೂಹ' ಎನ್ನುವ ಹೆಸರಿನಲ್ಲಿ ಸ್ವಸಹಾಯ ಸಂಘ ರಚಿಸಿಕೊಂಡರು. ತಮ್ಮದೇ ಆದ ಶುದ್ಧ ನೀರಿನ ಘಟಕ ಹೊಂದುವ ಕನಸು ಕಂಡರು. ಅದಕ್ಕೆ ಆಗ್ರಾದ ಸೆಂಟರ್ ಫಾರ್ ಅರ್ಬನ್ ಆ್ಯಂಡ್ ರೀಜನಲ್ ಎಕ್ಸಲೆನ್ಸ್ ಎನ್ನುವ ಸರ್ಕಾರೇತರ ಸಂಸ್ಥೆ, ಎಫ್‌ಎಎಂ ಎನ್ನುವ ಇನ್ನೊಂದು ಸಂಸ್ಥೆ, ಯುರೇಕಾ ಫೋರ್ಬ್ಸ್ ನೆರವಿಗೆ ಧಾವಿಸಿದವು. ಕೆಲವೇ ದಿನಗಳಲ್ಲಿ ತಲೆ ಎತ್ತಿತು ನೋಡಿ, 'ಶುದ್ಧ ಜಲ' ಘಟಕ.
ತನ್ನದೇ ಆದ ಸಾಂಸ್ಥಿಕ ನಿಯಮಗಳನ್ನು ಹೊಂದಿರುವ ಸ್ವಸಹಾಯ ಗುಂಪು, ಉಚಿತವಾಗಿಯೇನೂ ನೀರು ಪೂರೈಸುವುದಿಲ್ಲ ಖರೆ. ಹಾಗಂತ ತೀರಾ ವಾಣಿಜ್ಯಿಕ ಉದ್ದೇಶವನ್ನೂ ಹೊಂದಿಲ್ಲ. ಟ್ಯಾಂಕರ್‌ಗಳ ಲಾಬಿಯನ್ನು ಮೀರಿ ನಿಲ್ಲುವುದು ಸುಲಭವೂ ಆಗಿರಲಿಲ್ಲ. ಆದರೆ ಭಿನ್ನ ರೀತಿಯ ತಂತ್ರದ ಮೂಲಕ ವಹಿವಾಟು ವಿಸ್ತರಿಸಿಕೊಳ್ಳುವಲ್ಲಿ ಮಹಿಳೆಯರು ಯಶ ಕಂಡರು. ಅವರೇನು ಮನೆಮನೆಗೆ ಹೋಗಿ ನಚದಚ ನೀರನ್ನೇ ಕೊಳ್ಳಿ ಎಂದು ದುಂಬಾಲು ಬೀಳಲಿಲ್ಲ. ಟ್ಯಾಂಕರ್‌ಗಳಿಗಿಂತ ಕಡಿಮೆ ದರಕ್ಕೆ ನೀರು ಕೊಡುತ್ತೇವೆ ಎಂದು ದರ ಸಮರಕ್ಕೂ ಇಳಿಯಲಿಲ್ಲ. ಟ್ಯಾಂಕರ್ ನೀರಿನ ಪ್ರಯೋಗಾಲಯ ವರದಿ, ತಮ್ಮ ಘಟಕದ ನೀರಿನ ಶುದ್ಧತೆ ಪ್ರಮಾಣೀಕರಿಸುವ ವರದಿಗಳನ್ನು ಜನರ ಮುಂದಿಟ್ಟರು. ಟ್ಯಾಂಕರ್ ನೀರಿನ ಟಿಡಿಎಸ್ (ಟೋಟಲ್ ಡಿಸಾಲ್ವ್‌ಡ್ ಸಾಲಿಡ್) ಪ್ರಮಾಣಕ್ಕಿಂತ 5000 ಪಿಪಿಎಂಗಿಂತ (ಪಾರ್ಟಿಕಲ್ಸ್ ಪರ್ ಮಿಲಿಯನ್) ಹೆಚ್ಚಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಟಿಡಿಎಸ್ ಪ್ರಮಾಣ 500 ಪಿಪಿಎಂಗಿಂತ ಕಡಿಮೆ ಇದ್ದರೆ ಮಾತ್ರ ಕುಡಿಯಲು ಬಳಸಬಹುದು. ಐನೂರೆಲ್ಲಿ? ಐದು ಸಾವಿರವೆಲ್ಲಿ? ಕೆಲವು ಮಾದರಿಗಳಲ್ಲಿ ಆರ್ಸೆನಿಕ್ ಪತ್ತೆಯಾಯಿತು. ಆಗಾಗ ಕಾಣಿಸಿಕೊಳ್ಳುವ ಮೂಳೆ ಸಂಬಂಧಿ ತೊಂದರೆಗಳು, ಅತಿಸಾರ, ಸಂಧು ನೋವು, ಹೊಟ್ಟೆನೋವು ಮೊದಲಾದವುಗಳಿಗೆ ಕಾರಣ ಇದೇ ನೀರು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ಅಷ್ಟು ಮಾತ್ರವಲ್ಲ, ತಮ್ಮತಮ್ಮ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದರು. 'ಸ್ವಚ್ಛತೆ' ಎಂದರೆ ನಮ್ಮ ಮನೆ ಕಸವನ್ನು ಪಕ್ಕದ ಮನೆಯವರ ಅಂಗಳಕ್ಕೆ ಬಿಸಾಕುವುದಲ್ಲ  ಎನ್ನುವ ಅರಿವು ಮೂಡಿಸಿದರು.
ಕಸದಿಂದ ಗಬ್ಬು ನಾರುತ್ತಿದ್ದ ಖಾಲಿ ಜಾಗ, ಮಳೆ ಚರಂಡಿಗಳಲ್ಲಿ ಈಗ ಒಂದೇಒಂದು ಕಸವೂ ಕಾಣುವುದಿಲ್ಲ ಎಂದರೆ ನಂಬಲೇಬೇಕು. ಇಷ್ಟೆಲ್ಲ ಆದ ಬಳಿಕ ಜನ ಟ್ಯಾಂಕರ್ ನೀರನ್ನು ಹೇಗೆ ತಾನೆ ಕೊಂಡಾರು? ಟ್ಯಾಂಕರ್ ಒಡೆಯರು ನೀರಿನ ದರ ಇಳಿಸಿ ಆಮಿಷ ಒಡ್ಡಿದರೂ ಜನ ಮರುಳಾಗಲಿಲ್ಲ. ನೀರಿನೊಂದಿಗೆ ಬೇರೇನೋ ಕೊಡುವ ಆಫರ್ ಅನ್ನು ಮುಂದಿಟ್ಟರೂ ಅಲ್ಲಿನ ಜನ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. 'ಶುದ್ಧ ಜಲ'ಕ್ಕೆ ಮತ್ತೆ ಮತ್ತೆ ಮಾರು ಹೋದರು. ಆರೋಗ್ಯದ ಜತೆಗೆ ತಮ್ಮ ಮನೆ ಹೆಣ್ಣುಮಕ್ಕಳಿಗೆ ಆ ಘಟಕದಲ್ಲಿ ಉದ್ಯೋಗಾವಕಾಶವೂ ದೊರೆತಿತ್ತಲ್ಲ. ಮಿಗಿಲಾಗಿ ಸ್ವಸಹಾಯ ಸಂಘದ ಸದಸ್ಯತ್ವ ಪಡೆದಿದ್ದ ಆ ಪ್ರದೇಶದ ಹೆಂಗಳೆಯರೇ ಈ ನೀರಿನ ಸ್ಥಾವರದ ಸಹ ಮಾಲೀಕರೂ ಆಗಿದ್ದರಲ್ಲ. ಯಾರಿಗೇಕೆ ದುಡ್ಡು ಕೊಡಬೇಕು? ಯಾವ ಟ್ಯಾಂಕರ್‌ನ ಹುಂಡಿಗೇಕೆ ತಮ್ಮ ದುಡಿಮೆ ಹಾಕಬೇಕು? ಆ ಮಹಿಳೆಯರು ಅಕ್ಷರಶಃ ಚಾಣಾಕ್ಷರೇ ಆದರು.
ಆರು ಮಂದಿ ಮಹಿಳೆಯರಿಂದ ಆರಂಭವಾದ ನೀರಿನ ಸ್ಥಾವರದ ಮೂಲಕ ಈಗ ನಿತ್ಯ 5,000 ಲೀಟರ್ ನೀರು ಪೂರೈಕೆಯಾಗುತ್ತಿದೆ. 20 ಲೀಟರ್ ಕ್ಯಾನ್‌ನಲ್ಲಿ ನೀರು ಸಿಗುತ್ತಿದೆ. ಅಲ್ಲೇ ಕೊಂಡರೆ ಐದು ರುಪಾಯಿ, ಮನೆಗೆ ಡೆಲಿವರಿ ಬೇಕಿದ್ದರೆ ಹತ್ತು ರುಪಾಯಿ ನಿತ್ಯ 250 ಕ್ಯಾನ್‌ಗಳು ಮಾರಾಟವಾಗುತ್ತಿವೆ. ಆರು ಜನರಲ್ಲಿ ಒಬ್ಬರು ಪಾಳಿ ಪ್ರಕಾರ ಬೆಳಗ್ಗೆ 9ಕ್ಕೆ ಸ್ಥಾವರಕ್ಕೆ ಬಂದರೆ ಸಂಜೆ 6ಕ್ಕೆ ಕೊನೆಯ ಬ್ಯಾಚ್‌ನ ಕ್ಯಾನ್‌ಗಳನ್ನು ಆಟೋರಿಕ್ಷಾಕ್ಕೆ ತುಂಬುವವರೆಗೂ ಇರುತ್ತಾರೆ. ಎಲ್ಲರೂ ಸೇರಿ ನಿಯಮಿತವಾಗಿ ಗ್ರಾಹಕರೊಂದಿಗೆ ಸಂವಾದ ನಡೆಸುತ್ತ ನೀರಿನ ಗುಣಮಟ್ಟದ ಕುರಿತು ಖಾತರಿಪಡಿಸಿಕೊಳ್ಳುತ್ತಾರೆ, ಸೇವೆ ಉತ್ತಮ ಪಡಿಸುವ ಕುರಿತಂತೆ ಚರ್ಚೆ ನಡೆಸುತ್ತಾರೆ. ಇದೇ ಅವರ ವ್ಯಾಪಾರದ ಗುಟ್ಟು! 'ನಯಿ ಆಶಾ' (ಹೊಸ ಭರವಸೆ) ಈ ಸ್ವಸಹಾಯ ಗುಂಪಿಗೆ ಕೇವಲ ಬ್ಯಾನರ್‌ನ ಘೋಷಣೆಯಲ್ಲ, ಅದು ನಿಜವಾಗಿಯೂ ನೆಹರ್ ಕಾ ನಗ್ಲಾದ ಜನರಲ್ಲಿ ಹೊಸ ಬೆಳಕು ಮೂಡಿಸಿದೆ.


-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com