ವಿಲಿಯಂ ಶೇಕ್ಸಪಿಯರ್ ಹೇಳಿದ್ದ- "ಯಾವುದಕ್ಕೂ ಹೇಸದ ವ್ಯಕ್ತಿಯನ್ನು ಪ್ರಚೋದಿಸಬೇಡ". ಅಂಥ ವ್ಯಕ್ತಿಗಳು ಈಗಿನ ಚುನಾವಣೆಯಲ್ಲಿ ದಂಡಿಯಾಗಿ ನಿಮಗೆ ಕಾಣಿಸುತ್ತಾರೆ. ಒಂದು ವೇಳೆ ಈ ಬಾರಿ ಅಧಿಕಾರ ಕೈತಪ್ಪಿದರೆ, ಇನ್ನೂ ಐದು ವರ್ಷಗಳು ತೆಪ್ಪಗಿರಬೇಕಾಗುತ್ತದೆ ಎನ್ನುವ ಭಯ ಅವರನ್ನು ಯೇನಕೇನ ಈ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪ್ರಚೋದನೆಗೆ ಗುರಿಮಾಡಿದೆ. ಇದರ ಪರಿಣಾಮವನ್ನು ನಾವು ಅದಾಗಲೇ ನೋಡುತ್ತಿದ್ದೇವೆ. ಕೋಮು ಭಾವನೆಗಳಿಗೆ ಹೆಚ್ಚು ಒತ್ತು ಕೊಡುವ, ಪರಸ್ಪರ ದ್ವೇಷ ಬಿತ್ತುವ, ಹಿಂಸೆಗೆ ಪ್ರಚೋದನೆ ನೀಡುವ ಧ್ರುವೀಕರಣದಾಟಗಳೆಲ್ಲ ಭರ್ಜರಿಯಾಗೇ ಸಾಗುತ್ತಿವೆ.
ಕೆಲವು ವಾರಗಳಿಂದಲಂತೂ ನಮ್ಮ ನಾಯಕರಿಂದ ಪುಂಖಾನುಪುಂಖವಾಗಿ ಹೇಳಿಕೆಗಳ ಸುರಿಮಳೆ ಹರಿದುಬರುತ್ತಿದೆ. ಅದರಲ್ಲಿ ಕೆಲವಂತೂ ಅರ್ಥಹೀನವಾಗಿವೆ, ಇನ್ನೂ ಕೆಲವು ಪುನರುಚ್ಚರಿಸುವಂತಿವೆ ಮತ್ತೂ ಕೆಲವು ಕಿವಿ ಮುಚ್ಚಿಕೊಳ್ಳುವಂತೆ ಮಾಡುತ್ತಿವೆ. ಕೆಲವರಂತೂ ಪ್ರಾಮಾಣಿಕವಾಗಿ ಹೇಳಿಕೆಗಳನ್ನು ಕೊಟ್ಟರು. ಇನ್ನೂ ಕೆಲವರು ಬಹುಕಾಲದ ನಂತರ ಚತುರ ಮಾತುಗಳನ್ನಾಡಿ ಆಶ್ಚರ್ಯ ಹುಟ್ಟಿಸಿದರು. ಆದರೆ ಅಸಹ್ಯ ಹುಟ್ಟಿಸುವ ಹೇಳಿಕೆಗಳಿಗೇನೂ ಬರವಿರಲಿಲ್ಲ ಬಿಡಿ. ಕ್ಷುದ್ರ ಹೇಳಿಕೆ ನೀಡಿದ ಸರದಾರರು ನಮ್ಮ ರಾಜಕೀಯ ಇಂದು ಎಂಥಾ ಹೇಸಿಗೆಯ ಕೂಪದಲ್ಲಿ ಬಿದ್ದು ಒದ್ದಾಡುತ್ತಿದೆ ಎನ್ನುವುದನ್ನು ಜಗತ್ತಿನೆದುರು ಬಹಿರಂಗಗೊಳಿಸಿದರು.
-ಕುಮಾರಸ್ವಾಮಿಯವರು ನೀಡಿದ ಹೇಳಿಕೆಯಂತೂ ಪ್ರಾಮಾಣಿಕವಾಗಿತ್ತು ಮತ್ತು ಮೆಚ್ಚುವಂತಿತ್ತು. ಕೊನೆಗೂ ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ ಹೆಚ್.ಡಿ. ಕುಮಾರಸ್ವಾಮಿಯವರು, "ನನ್ನ ತಂದೆ ದೇವೇಗೌಡರಿಗೆ ವಯಸ್ಸಾಗಿದೆ. ನನಗೆ ಹಾರ್ಟ್ ಸರ್ಜರಿ ಆಗಿರುವುದರಿಂದ ಯಾವ ಸಮಯದಲ್ಲಿ ಬೇಕಾದರೂ ನನ್ನ ಜೀವ ಹೋಗಬಹುದು. ನಮಗ್ಯಾಕೆ ಈ ರಾಜಕೀಯ?" ಎಂದರು. ಎಂಥ ಮುತ್ತಿನಂಥ ಮಾತು. ಇಂಥ ಸಾಲನ್ನು ಭಾರತದ ಪ್ರತಿಯೊಂದು ಪಕ್ಷಗಳ ಕಚೇರಿಗಳ ಮೇಲೆ ಕೆತ್ತಿಸಬೇಕು.
-ಬರೇಲಿಯ ಮೌಲಾನಾ ರೆಜಾ ಖಾನ್ ಹೇಳಿದರು: "ಮುಸ್ಲಿಮರು ಕಾಂಗ್ರೆಸ್ ಮೇಲೆ ಬಹಳ ಮುನಿಸಿಕೊಂಡಿದ್ದಾರೆ ಎನ್ನುವುದು ನಿಜ. ಒಂದು ವೇಳೆ ಮೋದಿ ಬಿಜೆಪಿಯ ಪ್ರಧಾನಿಯಾಗಿರದಿದ್ದರೆ ಅವರು ಬಿಜೆಪಿಗೂ ಓಟ್ ಹಾಕುತ್ತಿದ್ದರೇನೋ?". ಬರೇಲಿಯ ಮತ್ತೊಬ್ಬ ಮತದಾರರೂ ಮೋದಿ ಮತ್ತು ಅವರ ಬಲಗೈ ಬಂಟ ಅಮಿತ್ ಷಾ ಬಗ್ಗೆ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅವರು ಹೇಳುತ್ತಾರೆ: "ಅಧಿಕಾರಕ್ಕೆ ಬರಬೇಕಾದಾಗಲೆಲ್ಲ ಅವರು ಗಲಭೆಗಳನ್ನು ನಡೆಸುತ್ತಾರೆ. ಅಧಿಕಾರಕ್ಕೆ ಬಂದ ಮೇಲಲ್ಲ".
-ಅಜಿತ್ ಪವಾರ್‌ರಂತೂ ತಮ್ಮ ಮೂರ್ಖ ಹೇಳಿಕೆಗಳಿಂದ ಕುಖ್ಯಾತರಾದವರು. ಈ ಬಾರಿ ಅವರು ತಮ್ಮ ಸಹೋದರ ಶರದ್ ಪವಾರ್‌ರ ಪುತ್ರಿ ಸುಪ್ರಿಯಾ ಸುಲೆಗೆ ಯಾರು ಮತ ನೀಡುವುದಿಲ್ಲವೋ, ಅವರ ಮನೆಗೆ ವಿದ್ಯುತ್ ಮತ್ತು ನೀರಿನ ಸರಬರಾಜನ್ನು ನಿಲ್ಲಿಸಿಬಿಡುತ್ತೇನೆ ಎಂದು ಧಮಕಿ ಹಾಕಿದ್ದಾರವರು! ಮಾಧ್ಯಮಗಳಲ್ಲಿ ಈ ವಿಷಯವಾಗಿ ಗದ್ದಲವೆದ್ದ ಮೇಲೆ ಅವರು ತಾವು ಹಾಗೆ ಹೇಳಿಯೇ ಇಲ್ಲ ಎಂಬ ಸಮರ್ಥನೆಗೆ ನಿಂತರಾದರೂ, ಅದಾಗಲೇ ಅವರ ಮಾತುಗಳೆಲ್ಲ ವೀಡಿಯೋಗಳಲ್ಲಿ ರೋಕಾರ್ಡ್ ಆಗಿದ್ದವು. ಇನ್ನು ಅವರ ಟ್ರ್ಯಾಕ್ ರಿಕಾರ್ಡ್ ನೋಡಿದ ಯಾರಿಗೇ ಆಗಲಿ, ಹಾಗೆ ಹೇಳಿರಬಹುದು ಎನ್ನುವುದರಲ್ಲಿ ಸಂಶಯವಂತೂ ಹುಟ್ಟುವುದಿಲ್ಲ ಬಿಡಿ. 2011 ರಲ್ಲಿ ಅಜಿತ್ ಏನು ಹೇಳಿದ್ದರು ಗೊತ್ತೆ? "ಗೂಂಡಾ ಆಗದಿದ್ದರೆ ರಾಜಕೀಯದಲ್ಲಿ ಏನೂ ಮಾಡಲಾಗುವುದಿಲ್ಲ. ಮಾಧ್ಯಮದವರನ್ನು ಮೊದಲು ಬ್ಯಾನ್ ಮಾಡಬೇಕು. ಈ ಪತ್ರಕರ್ತರಿಗೆಲ್ಲ ಒದೆ ಬಿದ್ದರೆ ಮಾತ್ರ ಇವರಿಗೆ ಬುದ್ಧಿ ಬರುತ್ತದೆ"!
-ಹಿಂದುಗಳಿರುವ ಪ್ರದೇಶಗಳಲ್ಲಿ ಮುಸಲ್ಮಾನರಿಗೆ ಮನೆ ಕೊಡಬಾರದು ಎಂದು ಉಗ್ರ ಸಲಹೆ ಕೊಡುತ್ತಾರೆ ಪ್ರವೀಣ್ ಭಾಯ್ ತೊಗಾಡಿಯಾ! ದ್ವೇಷ ಭಾಷಣದಲ್ಲಿ ತೊಗಾಡಿಯಾ ಅವರನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಿಲ್ಲವೇನೋ? ಆದರೂ ಗಿರಿರಾಜ್ ಸಿಂಗ್ ಎನ್ನುವ ಬಿಹಾರ ಬಿಜೆಪಿಯ ಅಭ್ಯರ್ಥಿ ತೊಗಾಡಿಯಾ ಮಟ್ಟಕ್ಕೆ ತೊಡೆ ತಟ್ಟಿ ಅಬ್ಬರಿಸಿದ್ದಾರೆ. ಮೋದಿಯನ್ನು ಒಪ್ಪಿಕೊಳ್ಳದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಅಟ್ಟಹಾಸಗೈದಿದ್ದಾರವರು. ಅದು ಸರಿ. ಆದರೆ ಇಷ್ಟೆಲ್ಲ ವೀಸಾಗಳನ್ನು ಯಾರು ಸ್ವಾಮಿ ಒದಗಿಸುವವರು?
-ಈ ಹೇಳಿಕೆಗಳೆಲ್ಲ ಎಷ್ಟೊಂದು ಅಸಮಾಧಾನ ಹುಟ್ಟುಹಾಕಿವೆಯೆಂದರೆ, ಹಿಂದುತ್ವದ ಹೀರೋಗಳೂ ಕೂಡ ಇವುಗಳಿಂದ ದೂರ ಉಳಿದುಬಿಟ್ಟರು. ದೂರ ಉಳಿದರು ಸರಿ. ಆದರೆ ಈ ಹೇಸಿಗೆಯನ್ನು ಸ್ವಚ್ಛ ಮಾಡುವವರು ಯಾರು ಸ್ವಾಮಿ? ಆರ್‌ಎಸ್‌ಎಸ್‌ನ ವಕ್ತಾರರು ಒಮ್ಮೆಲೆ ಆಧ್ಯಾತ್ಮಿಕ ಹೇಳಿಕೆಯನ್ನು ನೀಡಿ, "ಒಗ್ಗಟ್ಟು, ಏಕತೆ" ಎಂದು ಮಂತ್ರ ಜಪಿಸಿದರು. ಮೋದಿಯವರಂತೂ ಕೇವಲ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಯಾರ ಹೆಸರನ್ನೂ ತೆಗೆದುಕೊಳ್ಳದೇ, "ನಮ್ಮ ಗಮನ ಅಭಿವೃದ್ಧಿಯತ್ತಲಷ್ಟೇ ಕೇಂದ್ರಿತವಾಗಬೇಕು" ಎಂದು ಬುದ್ಧಿವಾದ ಹೇಳಿದ್ದಾರೆ. ಇತ್ತ ಪ್ರಿಯಾಂಕಾ ಗಾಂಧಿ ಕೂಡ ತಮ್ಮ ಪತಿಯ ಮೇಲೆ ಕೆಲವರು ದಾಳಿ ಮಾಡಿ, ವಿಷಯವನ್ನು 'ಅಭಿವೃದ್ಧಿಯಿಂದ' ಬೇರೆಡೆಗೆ ಜಾರಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುತ್ತಾರೆ! ಆಹಾ...ಮೇಲ್ಮಟ್ಟದಲ್ಲಿರುವವರ ಮನಸ್ಥಿತಿಯ ನಡುವೆ ಎಷ್ಟು ಸಾಮ್ಯತೆ ಇರುತ್ತದೋ ನೋಡಿ.
ಈ ವಿಷ ವರ್ತುಲದಲ್ಲಿ ಅಜಂ ಖಾನ್ ಎಂಬ ವಿಷ ಸರ್ಪವೂ ಇದೆ. ಕಾರ್ಗಿಲ್ ಯುದ್ಧವನ್ನು ಗೆಲ್ಲಿಸಿದವರು ಮುಸಲ್ಮಾನರಷ್ಟೇ ಹೊರತು ಹಿಂದುಗಳಲ್ಲ ಎನ್ನುವುದಾತನ ಹೇಳಿಕೆ! ಬಹುಶಃ ಅವನ ಮಾತು ಕೇಳಿ ಮುಸ್ಲಿಂ ಸೈನಿಕರಿಗೂ ಮುಜುಗರವಾಗಿರಬೇಕು.
ಮಾಧ್ಯಮಗಳ ಮುಂದೆ ಬರದ, ಆದರೆ ಇದೇ ರೀತಿಯಲ್ಲಿ ದ್ವೇಷ ಬಿತ್ತುತ್ತಿರುವವರು ಇನ್ನೆಷ್ಟು ಜನರಿದ್ದಾರೋ? ಅವರನ್ನೆಲ್ಲ ಮತದಾನದ ಮೂಲಕ ಸೋಲಿಸಿ ಮೂಲೆಗೆ ತಳ್ಳಿದರೇನೇ ದೇಶ ನೆಮ್ಮದಿಯಿಂದ ಉಸಿರಾಡಬಲ್ಲದು.
-ಟಿ.ಜೆ.ಎಸ್ ಜಾರ್ಜ್