ಮತ ಹಾಕದವನ ಮಾತುಗಳು
ಏನೀವಾಗ? ನಾನು ಮತ ಹಾಕಿದರೆ ಎಲ್ಲ ಸರಿ ಆಗಿಬಿಡ್ತಿತ್ತಾ? ಬಿಜೆಪಿ ಬಂದ್ರೂ ಅಷ್ಟೇ, ಕಾಂಗ್ರೆಸ್ ಬಂದ್ರೂ ಅಷ್ಟೆ ಎಲ್ಲರೂ ಹಣ ತಿಂತಾರೆ. ಕೇಜ್ರಿವಾಲ್ಗೆ ಮತ ಕೊಟ್ರೆ ಆತ ಸರ್ಕಾರ ಮಾಡಲ್ಲ. ನಮ್ಮ ಎದುರು ಯಾವುದೂ ಆಯ್ಕೇನೇ ಇಲ್ಲಾ ಅಂತೀನಿ!
ಅಷ್ಟೆಲ್ಲ ಇದ್ರೆ 'ನೋಟಾ' ಒತ್ತಿ ಬರ್ಬೇಕಿತ್ತು ಅಂತಾರೆ ಕೆಲವರು. ಲುಕ್... ಫಾರ್ ಮಿ, ಟೈಮ್ ಈಸ್ ಇಂಪಾರ್ಟೆಂಟ್. ಅಲ್ಲಿ ಹೋಗೋದು, ನೋಟಾ ಒತ್ತಿ ಬರೋದು ಇದ್ರಿಂದ ಆಗೋದಾದರೂ ಏನು? ಇಂತಿಷ್ಟು ನೋಟಾ ಬಂದ್ರೆ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕು ಅಂತ ಕಾನೂನೇನಾದ್ರೂ ಬಂದಿದ್ಯಾ? ಅದು ಬಂದ್ಮೇಲೆ ಹೇಳಿ. ಆಗ ಹೋಗಿ ನೋಟಾ ಒತ್ತಿ ಬರ್ತಿನಿ. ಇನ್ನೊಂದ್ ವಿಷ್ಯ ಹೇಳ್ತೀನಿ ಕೇಳ್ರಿ. ಆ 'ನನ್ ಆಫ್ ದಿ ಎಬೌವ್' ಬಟನ್ನು ಕೆಳಗೆ ಇಟ್ಟಿದಾರೆ. ಮೇಲೆಲ್ಲಾ ಪರಿಶೀಲನೆ ಮಾಡಿ ಕೆಳಗಿನ ಗುಂಡಿ ಒತ್ತುವಷ್ಟು ಪುರಸೊತ್ತು ಯಾರಿಗ್ರೀ ಇದೆ? ನನ್ನ ಕೇಳಿದ್ರೆ, 'ನನ್ ಆಫ್ ದಿ ಬಿಲೊ' ಅಂತ ಪ್ರಾರಂಭದಲ್ಲೇ ಒಂದು ಬಟನ್ ಇಡಬೇಕಿತ್ತು. ನಾ ಹೇಳಿದ್ನಲ್ಲಾ, ಕಾಯಿದೆ ಮಾಡೋ ಯಾರಿಗೂ ತಲೆ ಇಲ್ಲ. ಯಾವ ಸರ್ಕಾರ ಬಂದ್ರೂ ಅಷ್ಟೆ. ಈ ದೇಶ ಉದ್ಧಾರ ಆಗಲ್ರೀ. ಓಟು ಹಾಕಿ ದೇಶ ಬದಲಿಸ್ತೇನೆ ಅನ್ನೋದೆಲ್ಲ ಕೆಲಸಕ್ಕೆ ಬರದ ಮಾತು. ನಿಮಗೆ ಇನ್ನೊಂದು ಹೇಳ್ಬೇಕು ಅಂದ್ರೆ, ಈಗ ಕಾಲ ಎಷ್ಟೆಲ್ಲ ಮುಂದುವರ್ದಿದೆ ಅಂದ್ರೆ ನಾವು ಒತ್ತಿದ ಬಟನ್ಗೇ ಮತ ಬೀಳುತ್ತೆ ಅನ್ನೋ ಖಾತ್ರಿ ಯಾರಿಗೆ ಇದೇರಿ? ಮೊದ್ಲೇ ಎಲ್ಲ ಫಿಕ್ಸ್ ಮಾಡಿಕೊಂಡು ಯಾವುದೇ ಬಟನ್ ಒತ್ತಿದ್ರೂ ತಮಗೆ ಬೇಕಾದ ಒಂದಿಬ್ಬರಿಗೇ ಡೈವರ್ಟ್ ಯಾಕೆ ಮಾಡ್ಕಂಡಿರ್ಬಾರ್ದು? ನಾನ್ ಹೇಳ್ತೀನಲ್ಲ, ಈ ಚುನಾವಣೆ- ಗಿನಾವಣೆ ಎಲ್ಲ ಸುಮ್ನೆ ಜನಕ್ಕೆ ಮರುಳು ಮಾಡೋಕೆ ಒಂದು ತಂತ್ರ ಅಷ್ಟೆ.
ಇನ್ನೊಂದ್ ವಿಷ್ಯ. ನೋಡಿ, ನಾವು ಇಷ್ಟೆಲ್ಲ ಟ್ಯಾಕ್ಸ್ ಕಟ್ತೀವಿ. ಸರ್ಕಾರ ನಮ್ಮ ಮನೆಗಳಿಗೆ ವಾಹನ ಕಳುಹಿಸಿ ನಾವೆಲ್ಲ ಬೂತ್ಗೆ ಹೋಗುವುದಕ್ಕೆ ವ್ಯವಸ್ಥೆ ಮಾಡಬೇಕಿತ್ತು ತಾನೇ? ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಅಷ್ಟೆಲ್ಲ ಹಣ ನುಂಗ್ತಾರೆ. ಕೆಲವು ಕೋಟಿ ರುಪಾಯಿ ಖರ್ಚು ಮಾಡಿ ನಮಗೆ ಅಷ್ಟು ಸಹಾಯ ಮಾಡೋಕೆ ಆಗಲ್ವಾ? ಈಗ ನಾನು ಆಫೀಸ್ನಿಂದ ಕಾರ್ಯನಿಮಿತ್ತ ಇನ್ನೆಲ್ಲಾದರೂ ಹೋಗೋದಕ್ಕೆ ಟಿಎ-ಡಿಎ ಕೊಡ್ತಾರೆ. ಮತ ಹಾಕೋಕೆ ಮಾತ್ರ ಪುಕ್ಕಟೆ ನಾನು ನನ್ನ ಶ್ರಮ-ಹಣ ಖಾಲಿ ಮಾಡಿಕೊಂಡು ಹೋಗ್ಬೇಕಾ? ಅಲ್ಲ, ಹೀಗೇ ಕೇಳ್ದೆ.. ನನ್ನ ಕತೆ ಹಾಗಿರ್ಲಿ. ಈಗ ಕೂಲಿ ಕೆಲಸ ಮಾಡಿಕೊಂಡಿರೋರು ಅವರ ದಿನದ ದುಡಿಮೆ ಬಿಟ್ಟು ಮತ ಹಾಕುವುದಕ್ಕೆ ಹೋಗೋದು ಬಹಳ ದುಬಾರಿ ಆಗುತ್ತೆ, ಏನಂತೀರಾ? (ಸ್ವಾಮೀ, ಅವರೆಲ್ಲ ಹಿಂಗೆ ಒಣವಾದ ಮಾಡದೇ ಮತ ಹಾಕಿದಾರೆ. ನಿಮ್ ಕತೆ ಹೇಳ್ರೀ)
ನೋಡಿ, ಸರ್ಕಾರಕ್ಕೆ ತಲೆ ಇಲ್ಲ ಅಂತ ನಾನು ಸುಮ್ನೆ ಹೇಳ್ತಿಲ್ಲ. ಅವರು ಇಂಥ ಬಿರುಬೇಸಿಗೆ ಕಾಲದಲ್ಲಿ ಮತದಾನ ಯಾಕಿಡಬೇಕಿತ್ತು ಅಂತೀನಿ! (ಅದಮ್ಕಳಪ್ಪಾ. ಚಳಿಗಾಲದಲ್ಲಿ ಎಲೆಕ್ಷನ್ ಮಾಡಿದ್ರೆ ಸ್ವೆಟರ್ ಕೊಡ್ಬೇಕು ಅಂತಿದ್ದೆ. ಮಳೆಗಾಲದಲ್ಲಿ ಛತ್ರಿ ಕೊಡದಿದ್ದಕ್ಕೆ ಮತ ಹಾಕ್ಲಿಲ್ಲ ಅಂತಿದ್ದೆ..) ಅಲ್ದೇ ಇಷ್ಟೆಲ್ಲ ರಾದ್ಧಾಂತ ಇದೆ ಅಂದ್ಮೇಲೆ ಮತಗಟ್ಟೆಗಳಲ್ಲಿ ವ್ಯವಸ್ಥೆ ಸರಿ ಇದೆ ಅಂತ ಹೇಗೆ ನಂಬೋದು? ಅಲ್ಲಿ ಆ ಬಿಸಿಲಲ್ಲಿ ಕ್ಯೂ ನಿಲ್ಲೋ ಉಸಾಬರಿ ಯಾರಿಗೆ ಬೇಕು ಹೇಳಿ? ಇನ್ನೊಂದು ಇಂಪಾರ್ಟೆಂಟ್ ಪಾಯಿಂಟ್ ಮರ್ತೇಬಿಟ್ಟಿದ್ದೆ! ಇಷ್ಟೆಲ್ಲ ಆಗಿ ಅಲ್ಲಿ ಮತಪಟ್ಟಿಯಲ್ಲಿ ನಮ್ಮ ಹೆಸ್ರು ಇದ್ದೇ ಬಿಡುತ್ತೆ ಅಂತ ಹೇಳೋಕಾಗುತ್ತಾ? ನೀವು ನ್ಯೂಸ್ ನೋಡಿ ಬೇಕಾದ್ರೆ. ಮಹಾರಾಷ್ಟ್ರದಲ್ಲಿ ಸಿಕ್ಕಾಪಟ್ಟೆ ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿದೆಯಂತೆ. ಅದೇನೋ ಆಯೋಗದವ್ರು ಈ ಬಾರಿ ಮೊದಲೇ ಮತಚೀಟಿ ಮನೆ ಮನೆಗೆ ಕೊಟ್ಟಿದಾರಂತೆ. ಅಲ್ದೇ ಮತದಾರರ ಯಾದಿಯಲ್ಲಿ ಹೆಸರು ಇದೆಯೋ ಇಲ್ಲವೋ ಪರೀಕ್ಷಿಸಿಕೊಳ್ಳಿ ಅಂತ ಎಲ್ಲ ಕಡೆ ಜಾಹೀರಾತುಗಳನ್ನೂ ಕೊಟ್ಟಿದೀವಿ ಅಂತ ಹೇಳ್ತಿದಾರೆ. ಅದೆಲ್ಲ ಸರಿ. ಆದ್ರೆ ವಿ ಆರ್ ಸೊ ಬ್ಯೂಸಿ ಯು ನೊ?
ಮತ ಹಾಕ್ಲಿ ಬಿಡ್ಲಿ, ನಾನು ಟ್ವಿಟ್ಟರ್, ಫೇಸ್ಬುಕ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರ್ತಾನೆ ಇರ್ತೀನಿ. ಆ ಮೂಲಕ ನಾನು ವ್ಯವಸ್ಥೆಯನ್ನು ನಿಯಂತ್ರಿಸ್ತೀನಿ. ಇಷ್ಟಕ್ಕೂ ಹಿಂಗೆ ಆನ್ಲೈನ್ಲ್ಲೇ ಮತ ಹಾಕೋ ಥರ ಮಾಡ್ಬಿಟ್ರೆ ವೋಟಿಂಗ್ ಪರ್ಸಂಟೇಜ್ ಹೈ ಆಗುತ್ತೆ. ಏನಂತೀರಾ? ಅವೆಲ್ಲ ಎಲ್ ಮಾಡ್ತಾರೆ... ಇಲ್ರೀ, ಈ ದೇಶ ಉದ್ಧಾರ ಆಗಲ್ಲ!
- ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

