ಕೆಲವು ದಿನಗಳಿಂದಲೂ ಗಮನಿಸುತ್ತಿದ್ದೇನೆ. ಜನ, ಕೆಟ್ಟ ಕುತೂಹಲದಿಂದ ಕಮೆಂಟ್ ಮಾಡುತ್ತಿದ್ದಾರೆ; ಏನ್ರೀ, ಕಳೆದ ಎರಡು ವರ್ಷದಿಂದಲೂ ಆ ಹುಡುಗಿ ಅದೇ ಹಳೆಯ ಫೋಟೋ ಹಾಕಿಕೊಂಡೇ ಬರೀತಾ ಇದಾಳಲ್ರೀ, ಅವಳ ಹತ್ರ, ಬೇರೆ ಫೋಟೋ ಇಲ್ಲವೇನ್ರಿ?- ಎಂದು ಒಬ್ಬರು ಕೇಳುತ್ತಾರೆ. ಮತ್ತೊಬ್ಬರು, ಆ ಹುಡುಗಿ ಸ್ವಲ್ಪ ಸೈಡ್‌ಗೆ ತಿರುಗಿಕೊಂಡು ವಕ್ರವಾಗಿ ನಗುತ್ತಾ ಫೋಟೋ ತೆಗೆಸಿಕೊಂಡಿದ್ದಾಳೆ. ಅದನ್ನು ತೆಗೆದು ಹಾಕಿ ಇತ್ತೀಚಿನ ಹೊಸಾ ಫೋಟೋ ಹಾಕಿದ್ರೆ ಅವಳ ಗಂಟೇನ್ರಿ ಹೋಗುತ್ತೆ ಅನ್ನುತ್ತಾರೆ ಇನ್ನೊಬ್ಬರು, ಒಂದೊಂದ್ಸಲ ಚೆಲ್ಲು ಚೆಲ್ಲಾಗಿ, ಕೆಲವೊಮ್ಮೆ ಫ್ಯಾಷನಬಲ್ ಆಗಿ, ಮತ್ತೆ ಕೆಲವೊಮ್ಮೆ ಬಹಳ ಸೀರಿಯಸ್ಸಾಗಿ ಬರೀತಾಳಲ್ಲ; ಎಷ್ಟಿರಬಹುದ್ರೀ ಅವಳ ವಯಸ್ಸು ಎಂಬ ಪ್ರಶ್ನೆ ಹಾಕುತ್ತಾರೆ! ಅಂಥ ಕುತೂಹಲದ ಪ್ರಶ್ನೆಯ ತುಂಡು ಹೈಕಳಿಗೂ, ತುಂಟ ಅಂಕಲ್‌ಗಳಿಗೂ ನಾನು ಹೇಳುವುದಿಷ್ಟೆ; ಸ್ವಾಮೀ, ನನಗೆ ಪ್ರತಿ ದಿನಕ್ಕೂ ವಯಸ್ಸು ಹೆಚ್ಚಾಗುತ್ತಾ ಹೋಗುತ್ತೆ. ಆದರೆ ನನ್ನ ಫೋಟೋಗೆ ವಯಸ್ಸಾಗಿಲ್ಲ. ನಾನು ಈಗ ಹೇಗಿದ್ದೀನಿ? ಎಷ್ಟು ತೂಕ ಇದೀನಿ, ನಾನು ಡುಮ್ಮೀನಾ? ಸಣಕಲೀನಾ? ಅಥವಾ ಮೀಡಿಯಂ ಸೈಜಿನವಳಾ? ಎಷ್ಟು ಉದ್ದ ಇದೀನಿ ಎಂಬುದೆಲ್ಲಾ ಅಂಥಾ ಇಂಟರೆಸ್ಟಿಂಗ್ ವಿಷಯ ಅಲ್ಲದ್ದರಿಂದ ಅದನ್ನು ದಾಖಲಿಸಲು ನನಗೆ ಇಷ್ಟವಿಲ್ಲ...
'ಕುತೂಹಲಿಗಳಿಗೆ' ಹೀಗೊಂದು ಸ್ಪಷ್ಟೀಕರಣ ನೀಡಿದಾಗಲೇ ಹಿಂದೊಮ್ಮೆ ಓದಿಕೊಂಡಿದ್ದ ಚಿಕ್ಕ ಚಿಕ್ಕ ನೀತಿ ಕತೆಗಳು ಒಂದೊಂದಾಗಿ ನೆನಪಿಗೆ ಬಂದವು. ಈ ಹುಡುಗಿಯ ಹಳೇ ಪುರಾಣವನ್ನೇ ವಾರ ವಾರವೂ ಓದಬೇಕಾ ಎಂದು ಸಿಡಿಮಿಡಿಯಿಂದ ಕೇಳುವವರಿಗೆ, ಈ ಚಿಕ್ಕ ಚಿಕ್ಕ ನೀತಿ ಕತೆಗಳನ್ನು ಓದಿದಾಗ ಸ್ವಲ್ಪ ಮಟ್ಟಿಗಿನ ರಿಲೀಫ್ ಸಿಗಬಹುದು ಎಂಬ ನಂಬಿಕೆ ನನ್ನದು.
ಕಾಡಿನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬ ಕಾಲಿಲ್ಲದ ನರಿಯನ್ನು ಕಂಡ. ಅದು ಹೇಗೆ ಜೀವಿಸುತ್ತದೆ ಎಂದು ಯೋಚನೆಗೆ ಬಿದ್ದ. ಸ್ವಲ್ಪ ಹೊತ್ತಿನಲ್ಲಿಯೇ, ಹುಲಿಯೊಂದು ಆಹಾರವನ್ನು ಕಚ್ಚಿಕೊಂಡು ಅಲ್ಲಿಗೆ ಬಂತು. ತನಗೆ ಬೇಕಾದುದಷ್ಟನ್ನು ತಿಂದು ಹೊರಟು ಹೋಯಿತು. ಉಳಿದ ಆಹಾರವೆಲ್ಲಾ ನರಿಯ ಪಾಲಾಯಿತು.
ಈ ಚೋದ್ಯವನ್ನು ಕಂಡು ಬೆರಗಾದ ಆ ವ್ಯಕ್ತಿ ಕುತೂಹಲದಿಂದ ಆ ದಿನ ಅಲ್ಲಿಯೇ ಉಳಿದ. ಮರುದಿನ ಮತ್ತೊಂದು ಹುಲಿ, ಸಮಯಕ್ಕೆ ಸರಿಯಾಗಿ ಬೇಟೆಯನ್ನು ತಂದು ತಿಂದಿತು. ಯಥಾಪ್ರಕಾರ, ಉಳಿದಿದ್ದೆಲ್ಲಾ ನರಿಯ ಪಾಲಾಯಿತು. ಇದನ್ನೆಲ್ಲ ಪ್ರತ್ಯಕ್ಷ ಕಂಡ ಆ ವ್ಯಕ್ತಿ-'ನಾನೂ ಒಂದು ಮೂಲೆಯಲ್ಲಿ ಕುಳಿತು ದೇವರ ಕೃಪೆಯನ್ನು ಬೇಡುತ್ತೇನೆ. ನನಗೆ ಬೇಕಿರುವುದನ್ನೆಲ್ಲ ದೇವರೇ ಕೊಡುತ್ತಾನೆ' ಎಂದುಕೊಂಡು ಕೂತೇಬಿಟ್ಟ!
ದಿನಗಳು ಉರುಳಿದವು. ಅವನಿಗೆ ಅನ್ನ- ನೀರು ಕೊಡಲು ಯಾರೂ ಬರಲಿಲ್ಲ. ಹದಿನೈದು ದಿನಗಳ ನಿರಂತರ ಉಪವಾಸದಿಂದ ಆತ ಬಳಲಿ ಬೆಂಡಾದ. ಕಡೆಗೆ, ನಿಷ್ಕರುಣಿ ದೇವರೇ... ನಿನಗೆ ಕರುಣೆಯಿಲ್ಲವೇ? ಎಂದು ದೀನನಾಗಿ ಕೇಳಿದ. ಆಗ ಅವನಿಗೊಂದು ದನಿ ಕೇಳಿಸಿತು: 'ಅಯ್ಯಾ, ನೀನು ತಪ್ಪು ಹಾದಿ ಹಿಡಿದೆ. ನೀನು ಅನುಸರಿಸಬೇಕಾದದ್ದು ಹುಲಿಯನ್ನು, ನರಿಯನ್ನಲ್ಲ...'
-ಆದರ್ಶ ಕೃಷಿಕ ಎಂದು ಹೆಸರಾಗಿದ್ದ ರೈತನೊಬ್ಬ ತನ್ನಲ್ಲಿದ್ದ ಉತ್ತಮ ಫಸಲಿನ ಬಿತ್ತನೆ ಬೀಜಗಳನ್ನು ತನ್ನ ಊರಿನ ಎಲ್ಲ ರೈತರಿಗೂ ಉಚಿತವಾಗಿ ಹಂಚುತ್ತಿದ್ದ. ಅದನ್ನು ಕಂಡ ಪತ್ರಕರ್ತನೊಬ್ಬ ಕುತೂಹಲದಿಂದ ಕೇಳಿದ: 'ನೀನೇಕೆ ಎಲ್ಲರಿಗೂ ಉಚಿತವಾಗಿ ಬೀಜಗಳನ್ನು ಹಂಚ್ತೀಯ? ಅದರಿಂದ ನಿನಗೇನು ಲಾಭ?
ರೈತ ಮುಗುಳ್ನಕ್ಕು ಹೇಳಿದ: ನನ್ನದು ದಾನವಲ್ಲ. ಸ್ವಾರ್ಥ! ಹೇಗೆಂದರೆ -ಗಾಳಿ, ಕೀಟ ಮತ್ತು ಪರಾಗವನ್ನು ಒಯ್ದು ಹೊಲದಿಂದ ಹೊಲಕ್ಕೆ ಮುಟ್ಟಿಸುತ್ತದೆ ತಾನೆ? ಒಂದು ವೇಳೆ ನನ್ನ ನೆರೆಹೊರೆಯ ರೈತರು ಕಳಪೆ ಬೀಜ ಬಿತ್ತಿದರೆ, ಕಳಪೆ ತಳಿಯೊಂದಿಗೆ ಪರಾಗಸ್ಪರ್ಶವಾಗಿ ನನ್ನ ಹೊಲಗದ್ದೆಯ ಬೆಳೆಯೂ ನಾಶವಾಗುತ್ತದೆಯಲ್ಲವೆ? ಅಂಥದೊಂದು ಅನಾಹುತ ಆಗದಿರಲಿ ಎಂಬ ಸದಾಶಯದಿಂದಲೇ ನೆರೆಹೊರೆಯಲ್ಲಿರುವ ಎಲ್ಲ ರೈತರಿಗೂ ಉತ್ತಮ ತಳಿಯ ಬೀಜಗಳನ್ನೇ ಬಿತ್ತನೆಗೆ ಕೊಡುತ್ತೇನೆ...'
-ಅದೊಮ್ಮೆ, ಐದು ಬೆರಳುಗಳಿಗೂ ಜಗಳವಾಯಿತು. ಎಲ್ಲರಿಗಿಂತ ನಾನೇ ಹೆಚ್ಚು ಎಂದು ಅವೆಲ್ಲಾ ವಾದಿಸಲು ಆರಂಭಿಸಿದವು. ಆಗ ಪಂಚಾಯ್ತಿ ನಡೆಸಿದ ಒಂದಿಬ್ಬರು-'ನಾನೇ ಹೆಚ್ಚು ಎಂಬುದನ್ನು ವಿಶಿಷ್ಟ ರೀತಿಯಲ್ಲಿ ಸಾಬೀತುಪಡಿಸುವವರನ್ನೇ 'ವಿಜಯಿ' ಎಂದು ಘೋಷಿಸಲು ನಿರ್ಧರಿಸಿದರು. ಆಗ, ಹೆಬ್ಬೆರಳು ಹೇಳಿತು:
'ಎಲ್ಲರಿಗಿಂತ ನಾನು ದಪ್ಪಕ್ಕಿದ್ದೇನೆ. ಆ ವಿಷಯದಲ್ಲಿ ನನಗೆ ಸ್ಪರ್ಧಿಗಳೇ ಇಲ್ಲ. ಹಾಗಾಗಿ ನಾನೇ ಹೆಚ್ಚು...' ಈಗ ತೋರುಬೆರಳಿನ ಸರದಿ. ಅದು ಹೇಳಿತು: 'ಮನುಷ್ಯ ಏನನ್ನೇ ತೋರಿಸುವಾಗಲೂ ನನ್ನನ್ನೇ ಬಳಸುತ್ತಾನೆ. ಹಾಗಾಗಿ ನಾನೇ ಹೆಚ್ಚು...' ಅದರ ಮಾತು ಮುಗಿಯುವ ಮೊದಲೇ ಮಧ್ಯದ ಬೆರಳು ಹೇಳಿತು: ' ನಾವು ಐದು ಮಂದಿ ಇದ್ದೇವಲ್ಲ, ಉಳಿದೆಲ್ಲರಿಗಿಂತ ನಾನು ಉದ್ದವಾಗಿದ್ದೇನೆ. ಹಾಗಾಗಿ ನಾನೇ ಎಲ್ಲರಿಗಿಂತ ಹೆಚ್ಚು.' ಈಗ ನಾಲ್ಕನೇ ಬೆರಳಿನ ಸರದಿ. ಅದು ಹೇಳಿತು: ಮನುಷ್ಯರೆಲ್ಲ ಚಿನ್ನ, ಬೆಳ್ಳಿ, ಮುತ್ತು, ವಜ್ರದ ಉಂಗುರಗಳನ್ನು ತೊಡುವುದೇ ಈ ಬೆರಳಿಗೆ. ಹಾಗಾಗಿ, ಉಳಿದೆಲ್ಲರಿಗಿಂತ ನಾನೇ ಹೆಚ್ಚು...' ಜೊತೆಗಿದ್ದವರ ಠೇಂಕಾರದ ಮಾತುಗಳನ್ನು ಕೇಳಿದ ಕಿರುಬೆರಳಿಗೆ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ಅದು, ದೀನನಾಗಿ ದೇವರ ಮುಂದೆ ನಿಂತು- ಭಗವಂತಾ, ನನಗೆ ನೀನೇ ದಿಕ್ಕು ಎಂದಿತು. ಆಗ ಅದೃಶ್ಯ ಹಸ್ತವೊಂದು ಅದನ್ನು ನೇವರಿಸಿದಂತಾಯಿತು. ಮರುಕ್ಷಣವೇ ಕಿರುಬೆರಳು ತುಂಬ ಸಂಭ್ರಮದಿಂದ ಹೇಳಿತು: ದೇವರಿಗೆ ಕೈ ಮುಗಿತೀವಿ ನೋಡಿ, ಆಗ ಉಳಿದೆಲ್ಲರಿಗಿಂತ ಮುಂದೆ ಇರುವವ, ಅಂದರೆ- ದೇವರಿಗೆ ತುಂಬಾ ಹತ್ತಿರದಲ್ಲಿ ಇರುವವನು ನಾನೇ. ಹಾಗಾಗಿ ನಾನೇ ಹೆಚ್ಚಿನವನು...!
ಈ ಮಾತು ಕೇಳಿದ ಪಂಚಾಯ್ತಿದಾರರು 'ಹೌದು, ನೀನು ಹೇಳೋದೇ ಸರಿ' ಎಂದರು.
***
ನವವಿವಾಹಿತ ದಂಪತಿಗಳು, ಗುರುಗಳನ್ನು ಕೇಳಿದರು: 'ನಮ್ಮ ಪ್ರೀತಿ ಶಾಶ್ವತವಾಗಿ ಉಳಿಯಲು ಏನು ಮಾಡಬೇಕು?'
ಗುರುಗಳು ಉತ್ತರಿಸಿದರು: ಇತರರನ್ನು, ಇತರ ವಸ್ತುಗಳನ್ನು ನೀವು ಒಟ್ಟಾಗಿ ಪ್ರೀತಿಸಿ...'
***
ಮೊದಲೇ ಹೇಳಿದೆನಲ್ಲ, ಇವೆಲ್ಲ ಅಲ್ಲಲ್ಲಿ ಓದಿದ, ನನ್ನನ್ನು ಖುಷಿಪಡಿಸಿದ ಕಥೆ ಕಥೆಗಳು. ನಿಮಗೂ ಇಷ್ಟವಾಗುತ್ತೇವೇನೋ ಎಂದು ಹೇಳಿಕೊಂಡೆ...
- ನಾನು ಪ್ರಣತಿ