ಈ 'ದೊಡ್ಡವರ' ಮುನಿಸಿನಲ್ಲಿ ಅವರ ಸಣ್ಣತನವೇ ಬಯಲು

ಭರತಪುರದ ಶ್ರೀಮಂತ ಕುಟುಂಬದಲ್ಲಿ ಜನಿಸಿ, ಪಾಟಿಯಾಲಾದ ಮಾಜಿ ಮಹಾರಾಜನ ಮಗಳನ್ನು ವರಿಸಿದ ಕೆ. ನಟವರಸಿಂಗ್ ಅವರು ದೆಹಲಿಯ ಪ್ರತಿಷ್ಠಿತರ ಪಡಸಾಲೆಯಲ್ಲಿ ವಿಶಿಷ್ಟರು. ಭಾರತೀಯ ವಿದೇಶ ಸೇವೆ (ಐಎಫ್ಎಸ್)ನ ಹಿರಿಯ ಅಧಿಕಾರಿಯಾಗಿದ್ದ ಅವರು 1984ರಲ್ಲಿ ಸಾರ್ವತ್ರಿಕ ಚುನಾವಣೆ ಸ್ಪರ್ಧಿಸಲೆಂದೇ ಬೇಗನೇ ನಿವೃತ್ತಿ ತೆಗೆದುಕೊಂಡರು. ನೆಹರು- ಗಾಂಧಿ ಪರಿವಾರಕ್ಕೆ ಅವರು ನಿಕಟರು ಎಂಬುದು ರಹಸ್ಯವೇನೂ ಅಲ್ಲ. 2004ರಲ್ಲಿ ಯುಪಿಎ ಅಧಿಕಾರ ಹಿಡಿದಾಗ ಅವರ ನಿಷ್ಠೆಗೆ ಪ್ರತಿಫಲ ದೊರೆತು ವಿದೇಶ ಸಚಿವರಾದರು.
ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ನಟವರ್ ಮಗ ಕಳಂಕಿತ ಸ್ಥಾನದಲ್ಲಿ ನಿಂತಾಗ ಇವರ ಹುದ್ದೆ ಹೋಯಿತು. ವಿಶ್ವಸಂಸ್ಥೆಯ ದಿಗ್ಭಂದನವನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಆಗಿನ ಇರಾಕ್ ಸರ್ವಾಧಿಕಾರಿ ಸದ್ದಾಂ ಹುಸೇನ್ ತನ್ನ ದೇಶದ ಆಹಾರ ಆಮದನ್ನು ಸರಿದೂಗಿಸಲು ಕಚ್ಚಾತೈಲದ ಅಲ್ಪ ಪ್ರಮಾಣವನ್ನು ಮಾರಿಕೊಳ್ಳುವ ವ್ಯವಸ್ಥೆ ಅನುಸರಿಸಿದ್ದ. ಈ ತೈಲ ಕೋಟಾ ಪ್ರಕ್ರಿಯೆಯನ್ನು ಆಯ್ದ ಮಧ್ಯವರ್ತಿಗಳ ಮೂಲಕ ನಿರ್ವಹಿಸಲಾಗುತ್ತಿತ್ತು ಹಾಗೂ ಆತನ ನಿಕಟವರ್ತಿಗಳಿಗೆ ಕಿಕ್ಬ್ಯಾಕ್ ಸಂದಾಯವಾಗುತ್ತಿತ್ತು ಎಂಬ ಶಂಕೆ. ಸ್ನೇಹಿತರಾಗಿ ಒಲಿದ ಇರಾಕಿಯೇತರ ಮಂದಿ ಆತ ಕೊಟ್ಟ ಕೋಟಾಕ್ಕೆ ಒಪ್ಪಿಕೊಂಡು ಲಾಭ ಮಾಡಿಕೊಂಡರು. ಹೀಗೆ ಸದ್ದಾಂನಿಂದ ಕಚ್ಚಾ ತೈಲದ ಕೋಟಾ ತೆಗೆದುಕೊಂಡವರಲ್ಲಿ ನಟವರ್ ಸಿಂಗ್ ಮಗನೂ ಒಬ್ಬ. ಆದರೆ ಹಲವರು ನಂಬಿರುವಂತೆ ಹಾಗೂ ಈಗಲೂ ಅನ್ನಿಸುತ್ತಿರುವಂತೆ ಈ ಕೋಟಾವನ್ನು ಸದ್ದಾಂ ಕಾಂಗ್ರೆಸ್ ಪಕ್ಷಕ್ಕಾಗಿ ಕೊಟ್ಟಿದ್ದನೇ ಹೊರತು ವ್ಯಕ್ತಿಗಲ್ಲ. ಅದನ್ನು ನಿರ್ವಹಿಸಿದ್ದು ನಟವರ್ ಮಗನಾದರೂ ಆತನ ವೈಯಕ್ತಿಕ ಲಾಭಕ್ಕಾಗಿ ಮಾತ್ರವೇ ಆ ಹಗರಣ ನಡೆದಿರಲಿಲ್ಲ. ಆದರೆ, ನಟವರ್ ತಮಗೆ ಗೊತ್ತಿಲ್ಲದಂತೆ ವೈಯಕ್ತಿಕ ಹಿತಾಸಕ್ತಿ ಸಾಧಿಸಿದರು ಎಂದು ಕಾಂಗ್ರೆಸ್ ಅವರನ್ನು ತೆಗೆದುಹಾಕಿತು.
ನಾಲ್ಕು ತಲೆಮಾರುಗಳಿಗೆ ನಿಷ್ಠೆ ಮೆರೆದಿದ್ದ ನೆಹರು- ಗಾಂಧಿ ಕುಟುಂಬದ ವಿರುದ್ಧ ನಟವರ್ ಸಿಂಗ್ ಮುನಿಸಿಕೊಂಡಿದ್ದು ಆವಾಗಲೇ. ಇದೀಗ 'ಒನ್ ಲೈಫ್ ಈಸ್ ನಾಟ್ ಇನಫ್' ಅಂತ ನಟವರ್ ಸಿಂಗ್ ತಮ್ಮ ಆತ್ಮಕತೆ ಪುಸ್ತಕ ಪ್ರಕಟಿಸಿದ್ದಾರೆ. ಅದರಲ್ಲಿ, 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿ ಪದವಿಯನ್ನು ನಿರಾಕರಿಸಿದ್ದು ತಮ್ಮ 'ಅಂತರಾತ್ಮದ ಕರೆ'ಗೆ ಮಣಿದೂ ಅಲ್ಲ, ಅಥವಾ ಭಾರತವಿನ್ನೂ ವಿದೇಶಿ ಜನ್ಮಮೂಲವನ್ನು ಹೊಂದಿದ ಪ್ರಧಾನಿಯನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಾಗಿಲ್ಲ ಎಂಬ ಹಿಂಜರಿಕೆಯಿಂದಲೂ ಅಲ್ಲ. ಬದಲಿಗೆ ಸೋನಿಯಾ ಪ್ರಧಾನಿಯಾದರೆ ಅವರ ಬದುಕು ಅಪ್ಪನಂತೆಯೇ ರಿಸ್ಕ್ಗೆ ಸಿಲುಕುತ್ತದೆ ಎಂಬ ರಾಹುಲ್ ಗಾಂಧಿ ಹೆದರಿಕೆಯೇ ಅವರನ್ನು ಹಿಂತೆಗೆಯುವಂತೆ ಮಾಡಿತು ಎಂಬುದು ನಟವರ್ ಸಿಂಗ್ ಪ್ರತಿಪಾದನೆಯಾಗಿದೆ.
ಆದರೆ, ಇವರಿಬ್ಬರ ಪೈಕಿ ಯಾರ ಬಗ್ಗೆಯೂ ನಾವು ಸಹಾನೂಭೂತಿ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಆಹಾರಕ್ಕಾಗಿ ತೈಲ ಹಗರಣದ ನಂತರ ಸೋನಿಯಾ ಗಾಂಧಿ, ನಟವರ್ ಸಿಂಗ್ರಿಗೆ ಎಲ್ಲಾದರೂ ಪುನರ್ವಸತಿ ಕಲ್ಪಿಸಿದ್ದರೆ ಈ ಪುಸ್ತಕವೇ ಬರುತ್ತಿರಲಿಲ್ಲ ಎಂಬುದಂತೂ ಗ್ಯಾರಂಟಿ. ಆದರೂ ನೆಹರು-ಗಾಂಧಿ ಕುಟುಂಬಕ್ಕೆ ನಿಕಟವರ್ತಿಯಾಗಿದ್ದ ವ್ಯಕ್ತಿಯೇ ಹೀಗೆಲ್ಲ ಬರೆದಿರುವುದು ನೆಹರು-ಗಾಂಧಿ ಕುಟುಂಬದ ಸುತ್ತಲಿದ್ದ ಅಳಿದುಳಿದ ನಿಗೂಢ ಪ್ರಭೆಯನ್ನೂ ಇಲ್ಲವಾಗಿಸಿ ಕಾಂಗ್ರೆಸ್ಗೆ ಹೊಡೆತ ನೀಡಿದೆ. ರಾಹುಲ್ ಗಾಂಧಿ ಬಿಗಿಪಟ್ಟಿನಿಂದಲೇ ತಾಯಿ ಸೋನಿಯಾ ಪ್ರಧಾನಿ ಪಟ್ಟದಿಂದ ದೂರ ಸರಿಯುವಂತಾಯಿತು ಎಂಬ ನಟವರ್ ಪ್ರತಿಪಾದನೆಯನ್ನು ಬಡಪೆಟ್ಟಿಗೆ ಪಕ್ಕಕ್ಕಿಡುವಂತೆಯೂ ಇಲ್ಲ. ಈ ನಿಟ್ಟಿನಲ್ಲಿ ನೆಹರು-ಗಾಂಧಿ ಕುಟುಂಬದ ಚರಿತ್ರೆಯನ್ನೂ ಗಮನಿಸಬೇಕಾಗುತ್ತದೆ. ಸೋನಿಯಾ ತಾವೇ ಬಿಂಬಿಸಿಕೊಂಡಂತೆ ಈ ಹಿಂದೆ ರಾಜೀವ್ ಗಾಂಧಿ ರಾಜಕೀಯಕ್ಕೆ ಬರದಂತೆ ತಡೆಯಲು 'ಸಿಂಹಿಣಿಯಂತೆ ಹೋರಾಡಿದ್ದರು'. ರಾಜೀವ್ ಬದುಕಿಗೆ ಆವರಿಸಬಹುದಾದ ಅಪಾಯ ಹಾಗೂ ಖಾಸಗಿ ಬದುಕು ಇಲ್ಲವಾಗುವಿಕೆ ಸೋನಿಯಾರನ್ನು ಅಧೀರರನ್ನಾಗಿಸಿತ್ತು.
2004ರಲ್ಲಿ ಕಾಂಗ್ರೆಸ್ ದಿಗ್ವಿಜಯವನ್ನೇನೂ ಸಾಧಿಸಿರಲಿಲ್ಲ. 138 ಸ್ಥಾನಗಳೊಂದಿಗೆ ಕುಸಿದ ಬಿಜೆಪಿ ಎದುರಿನಲ್ಲಿ ಕಾಂಗ್ರೆಸ್ 145 ಸ್ಥಾನ ಗಳಿಸಿ ಅಧಿಕಾರಕ್ಕಾಗಿ ಚುನಾವಣೋತ್ತರ ಮೈತ್ರಿಯನ್ನೂ ಅವಲಂಬಿಸಿತ್ತು. ಇಂಥ ಅಸ್ಥಿರ ಸನ್ನಿವೇಶದಲ್ಲಿ ಸೋನಿಯಾ ಪ್ರಧಾನಿ ಪದವಿ ಒಪ್ಪಿಕೊಳ್ಳುವ ಬಗ್ಗೆ ರಾಹುಲ್ ಗಾಬರಿಗೆ ಬಿದ್ದಿದ್ದನ್ನು ತಳ್ಳಿಹಾಕುವಂತಿಲ್ಲ. ಕುಟುಂಬದ ಬಗ್ಗೆ ಕಾಳಜಿ ಉಳ್ಳವನಾಗಿ ಹಾಗೂ ರಾಜಕೀಯಕ್ಕೆ ಹೊಸಬನಾಗಿ ರಾಹುಲ್ ಅಂಥ ಆತಂಕಗಳನ್ನು ಇಟ್ಟುಕೊಂಡಿದ್ದರೆ ತಪ್ಪೇನಿಲ್ಲ. ಆದರೆ ಸೋನಿಯಾ ಅದನ್ನು ಒಪ್ಪಿದರು ಎಂದಾದರೆ ಅವರಿಗೆ ಪಕ್ಷ ಹಾಗೂ ಮಿತ್ರಕೂಟಗಳಿಗಿಂತ ಕುಟುಂಬ ಪ್ರಮುಖವಾಯಿತು ಎಂದಾಯಿತಲ್ಲವೇ?
ತಾವು ಪುಸ್ತಕ ಬರೆದಾಗ ಇವೆಲ್ಲವನ್ನೂ ವಿವರಿಸುವುದಾಗಿ ಸೋನಿಯಾ ಗಾಂಧಿ ಗುಟುರಿದ್ದಾರೆ. ಇವರು ಎಲ್ಲವನ್ನೂ ತೆರೆದಿರಿಸುವ ಪ್ರಾಮಾಣಿಕ ಆತ್ಮಕತೆ ಬರೆದುಬಿಡುತ್ತಾರೆಂಬ ನಿರೀಕ್ಷೆ ಯಾರಲ್ಲೂ ಇಲ್ಲ. ಹತ್ತು ವರ್ಷಗಳ ಕಾಲ ನೇಪಥ್ಯದಲ್ಲೇ ಇದ್ದು ಉತ್ತರದಾಯಿಯಲ್ಲದ ಅಧಿಕಾರವನ್ನು ಸವಿದಿರುವ ಇವರಿಗೆ, 'ಯಾವುದಕ್ಕೂ ಕ್ಷಮೆ ಕೇಳಬೇಕಿಲ್ಲ, ಯಾವೂದಕ್ಕೂ ವಿವರಣೆ ಕೊಡಬೇಕಿಲ್ಲ' ಎಂಬ ಮಂತ್ರ ಅಂತರ್ಗತವಾಗಿದೆ.
ನೆಹರು-ಗಾಂಧಿ ಕುಟುಂಬವನ್ನು ಸುತ್ತುವರಿದಿರುವ ಸಾರ್ವಜನಿಕ ಪ್ರಚಾರ ನಿರ್ವಹಣೆಯ ಬೌದ್ಧಿಕ ವರ್ಗ ಇನ್ನು ಕೆಲದಿನಗಳ ಕಾಲ ನಟವರ್ ಪರಿಗಣನೆಗೆ ತೆಗೆದುಕೊಳ್ಳಬೇಕಾದ ವ್ಯಕ್ತಿಯೇ ಅಲ್ಲ ಎಂದು ಸಾಧಿಸುವುದಕ್ಕೆ ಹೆಣಗಾಡಲಿದೆ. ಉತ್ಕಟ ಪ್ರಹಸನ ಹಾಗೂ ಕ್ಷುಲ್ಲಕ ರಾಜಕೀಯ ಎಂಬುದು ಇವರೆಲ್ಲ ಮೊದಲಿನಿಂದಲೂ ಆಚರಿಸಿಕೊಂಡುಬಂದಿರುವ ನೀತಿಯೇ.
-ಅಶೋಕ್ ಮಲಿಕ್
ರಾಜಕೀಯ ವಿಶ್ಲೇಷಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


