ಅರುಣಾಚಲ ನಮ್ಮದೆನ್ನುತ್ತೇವೆ ಅಲ್ಲಿನ ಹುಡುಗ ಬೇಡವಾದನೇ?

ಹತ್ತೊಂಬತ್ತರ ಪ್ರಾಯದ ಟಾನಿಯಾಮ್ ಅರುಣಾಚಲ ಪ್ರದೇಶದಿಂದ ಬಂದ ವಿದ್ಯಾರ್ಥಿಯಾಗಿದ್ದ. ಅರುಣಾಚಲ ಪ್ರದೇಶವನ್ನು ಜೈಹಿಂದ್ ಪ್ರಾಂತ್ಯ ಎಂದೇ ಕರೆಯುವುದಕ್ಕೆ ಇಷ್ಟಪಡುತ್ತೇನೆ. ಪ್ರತಿ ಹಳ್ಳಿಯಲ್ಲೂ ಹಿಂದಿ ಮಾತು ಕಿವಿಗೆ ಬೀಳುತ್ತದೆ. ಉದ್ದಗಲಕ್ಕೂ ತ್ರಿವರ್ಣ ಧ್ವಜವನ್ನು ಅಭಿಮಾನದಿಂದಲೇ ಹಾರಿಸುತ್ತಾರೆ. ಇವೆಲ್ಲ ನಮಗೆ, ಉತ್ತರ ಭಾರತದವರಿಗೆ ಸ್ಫೂರ್ತಿ ನೀಡುವ ಸಂಗತಿಗಳಾಗಬೇಕು. ಆದರೆ ನಾವು ಈಶಾನ್ಯ ಭಾರತದ ಅಸ್ತಿತ್ವವನ್ನೇ ಕಡೆಗಣಿಸಿಕೊಂಡು ಬಂದಿದ್ದೇವೆ.
ತನ್ನೊಳಗೆ ಜೀವನೋತ್ಸಾಹವನ್ನು ಚಿಮ್ಮಿಸಿಕೊಂಡಿದ್ದ ಮುದ್ದು ಹುಡುಗ ಆತ. ತನ್ನ ಕೂದಲಿಗೆ ಬಣ್ಣ ಹಾಕಿಸಿಕೊಂಡಿದ್ದ. ವಿಳಾಸವೊಂದು ಬಗೆಹರಿದಿರಲಿಲ್ಲ. ಹೊಸದಿಲ್ಲಿಯ ಲಾಜ್ಪತ್ ನಗರ ಮಾರುಕಟ್ಟೆಯ ಅಂಗಡಿಕಾರನ ಬಳಿ ದಾರಿ ಕೇಳಿದ. ಅವನಿಗೆ ಸಹಾಯ ಮಾಡಬೇಕಾದವರು ಆತನನ್ನು ಗೇಲಿ ಮಾಡತೊಡಗಿದರು. ಚುಡಾಯಿಸಿ ಮಜ ತೆಗೆದುಕೊಳ್ಳತೊಡಗಿದರು. ಸಹಜವಾಗಿಯೇ ಆ ಹುಡುಗ ನಿಡೊ ಟಾನಿಯಾಮ್ಗೆ ಅವಮಾನವಾದಂತಾಗಿದೆ. ಅಂಥ ಕ್ಷಣದಲ್ಲಿ ತಡೆಯಲಾಗದ ಸಿಟ್ಟು ಬಂದುಬಿಟ್ಟಿದೆ. ಅವನೊಳಗಿನ ಸ್ವಾಭಿಮಾನ ಆಕ್ರೋಶಕ್ಕೆ ಎಡೆಮಾಡಿದ್ದರ ಪರಿಣಾಮ ಆತ ಅಂಗಡಿಯ ಗಾಜನ್ನು ಒಡೆದುಬಿಟ್ಟಿದ್ದಾನೆ.
ಅವನ ಜಾಗದಲ್ಲಿ ಯಾರೇ ಇದ್ದರೂ ಅವನಿಗಿಂತ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸುತ್ತಿದ್ದರೇನೋ. ಎಷ್ಟೆಂದರೂ ಹುಡುಗ. ಆತನ ಸಿಟ್ಟು ಅವನ ಮೇಲೆಯೇ ಎಂಬಂತಿತ್ತು. ಅದುವರೆಗೆ ಗೇಲಿ ಮಾಡುತ್ತಿದ್ದ ಅಂಗಡಿಕಾರರು ಟನಿಯಾಮ್ನ ಈ ಪ್ರತಿಕ್ರಿಯೆ ನೋಡುತ್ತಲೇ ರಾಕ್ಷಸರಾಗಿಬಿಟ್ಟರು. ಆ ಅಂಗಡಿಕಾರರೆಲ್ಲ ಒಟ್ಟಾಗಿ ಆತನನ್ನು ನಿರ್ದಯವಾಗಿ ಥಳಿಸಿದರು. ಪೊಲೀಸರು ಬಂದು ರಾಜಿ ಮಾಡಿಸುವಷ್ಟರಲ್ಲಿ ಮುಖ ಮೂತಿ ನೋಡದೇ ಅತಿ ಕ್ರೂರವಾಗಿ ಚಚ್ಚಿದ್ದರು.
ಇನ್ನು ಪೊಲೀಸರು ಅಲ್ಲಿಗೆ ಬಂದಿದ್ದಾರೂ ಏಕೆಂದುಕೊಂಡಿರಿ? ಅವರಿಗೆ ಆ ಅಂಗಡಿಕಾರರನ್ನು ರಕ್ಷಿಸುವ ದರ್ದಿತ್ತು. ಮಾತನಾಡುವುದಕ್ಕೂ ಆಗದ ಸ್ಥಿತಿಯಲ್ಲಿ ಹೊಡೆತ ತಿಂದುಬಿದ್ದ ಆ ಹುಡುಗನ ಬಗ್ಗೆ ಪೊಲೀಸರಿಗೆ ಒಂದಿನಿತೂ ಅನುಕಂಪ ಹುಟ್ಟಲಿಲ್ಲ. ಅವರು ಮಾಡಿದ ಘನಕಾರ್ಯ ಏನೆಂದರೆ ಯಮಯಾತನೆಯಲ್ಲಿ ಬಿದ್ದಿದ್ದ ಆ ಹುಡುಗನಿಂದ- 'ನನಗೆ ಯಾವ ವೈದ್ಯಕೀಯ ಸಹಾಯವೂ ಅಗತ್ಯವಿಲ್ಲ' ಎಂದು ಬರೆಸಿಕೊಂಡಿದ್ದು!
ಇದು ನಮ್ಮ ರಾಷ್ಟ್ರ ರಾಜಧಾನಿ ನಮ್ಮದೇ ಮಗ- ಮಗಳಿಗೆ ತೋರಿಸುತ್ತಿರುವ ಕ್ರೌರ್ಯ. ಸಂತ್ರಸ್ತನಾಗಿ ಬಿದ್ದವನಿಗೆ ಕರುಣೆ ತೋರುವುದನ್ನು ಬಿಚ್ಚು, ಆತನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಬೇಕಾದ ಮಾನವೀಯ ಜವಾಬ್ದಾರಿಯನ್ನು ಮರೆತು, 'ನಂಗೇನೂ ಆಗಿಲ್ಲ, ನಾನು ಓಕೆ' ಅಂತ ಬರೆಸಿಕೊಳ್ಳುವುದರಲ್ಲಿ ಪೊಲೀಸರು ಆಸಕ್ತಿ ತೋರಿದರಲ್ಲ!
ದೇಶದ ಇತರ ಭಾಗಗಳಿಂದ ಬಂದು ಇಲ್ಲಿ ತಮ್ಮ ಬಿಡಾರ ಹೂಡುವುದಕ್ಕೆ ಯತ್ನಿಸುವವರನ್ನು ದೆಹಲಿ ಅದೇಕೆ ಅಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆಯೋ ತಿಳಿಯುತ್ತಿಲ್ಲ. ಹಾಗೆ ನೋಡಿದರೆ ಯಾರೊಬ್ಬರೂ ದೆಹಲಿ ತನ್ನದೆಂದು ಹೇಳುವುದಕ್ಕೇ ಸಾಧ್ಯವಿಲ್ಲ. ಅದೊಂದು ರಾಜಕೀಯ ಮೆಟ್ಟಿಲಿನ ರೂಪಕವಾಗಿ, ಯೋಜನೆಗಳನ್ನು ಹೆಣೆಯುವವರ ತಂಗುದಾಣವಾಗಿ ಪರಿವರ್ತಿತವಾಗಿಬಿಟ್ಟಿದೆ. ನೀವು ಕಾರ್ಯನಿಮಿತ್ತ ಇಲ್ಲಿಗೆ ಬಂದಿಲ್ಲ, ನಿಮಗೆ ಇಲ್ಲಿ ಉದ್ಯೋಗ ಇಲ್ಲ ಎಂದಾದರೆ ಸುಮ್ಮನೇ ದೆಹಲಿಯಲ್ಲಿ ಬದುಕುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಇದುಇಲ್ಲಿ ಜೀವಿಸುವವರ ನಗರವಾಗಿ ಉಳಿದಿಲ್ಲ. ಹದಿನೆಂಟು ಬಾರಿ ಹತ್ಯಾಕಾಂಡಗಳು ನಡೆದ, ದಾಳಿಕೋರರಿಂದ ನಿರಂತರ ವಿಧ್ವಂಸಕ್ಕೆ, ಲೂಟಿಗೆ ದಹನಕ್ಕೆ ಒಳಗಾದ ಈ ನಗರ ಒಂದು ಹಂತದಲ್ಲಿ ಉತ್ತಮ ಭವಿಷ್ಯ ಅರಸಿ ಬೇರೆ ಬೇರೆ ಪ್ರದೇಶಗಳಿಂದ ಬಂದವರನ್ನು ಸೆಳೆಯಿತು.
ಆದರೆ ಈ ನಗರದಲ್ಲಿ ತನ್ನದೆಂಬ ಒಂದು ಭಾವವೇ ಇಲ್ಲವಾಗಿದೆ. ಸಂಸ್ಕೃತಿ, ನಾಗರಿಕತೆಯ ಹರಿವನ್ನು ಸಂವೇದನೆಗೆ ತಂದುಕೊಡುವ, ಒಂದು ಸಾಮಾನ್ಯ ಬೇರೊಂದನ್ನು ಹೊಂದಿರುವ ಕುರುಹೇ ಇಲ್ಲಿಲ್ಲ. ಜಾತಿ ನಿರ್ದೇಶಿತ ಹಣದ ಚೀಲಗಳು ಹಾಗೂ ಬೀದಿರಂಪದ ಪ್ರಾಬಲ್ಯಗಳೇ ಇಲ್ಲಿ ಮೇಲುಗೈ ಸಾಧಿಸಿವೆ. ಇದು 'ಕಾಂಟ್ಯಾಕ್ಟ್'ಗಳನ್ನು ಚೆನ್ನಾಗಿಟ್ಟುಕೊಂಡವರು, 'ಸರ್ಜೀ'ಗಳು, ನನಗವರು ಗೊತ್ತು ಎನ್ನುವವರು, 'ಸಾಹೇಬ್-ಯೆಸ್ಸರ್'ಗಳ ಜಾಯಮಾನದವರು ಮಾತ್ರ ಒಗ್ಗಿಕೊಳ್ಳಬಹುದಾದ ಜಾಗವಾಗಿಬಿಟ್ಟಿದೆ. ಇಲ್ಲಿನ ಜನಪ್ರವಾಹವೆಂದರೆ ಅದರಲ್ಲಿ ರಾಜಕೀಯ ಏಜೆಂಟರು, ಉದ್ಯೋಗ ಬೇಟೆಯಾಡುವವರು, ಡೆಡ್ಲೈನ್ ಪೂರೈಸುವ ದಾಂಗುಡಿಯಲ್ಲಿ ಬದುಕನ್ನೇ ಮರೆತ ವಿಭ್ರಾಂತರು, ಅಸೂಯೆಯನ್ನೇ ಅಸ್ತ್ರವಾಗಿರಿಸಿಕೊಂಡಿರುವ ಸ್ಪರ್ಧಾಳುಗಳು, ಸಿಕ್ಕಷ್ಟನ್ನು ಸಿಕ್ಕಷ್ಟು ಸಮಯದಲ್ಲಿ ದೋಚಿಕೊಳ್ಳುವ ಸನ್ನಾಹದಲ್ಲಿರುವ ದಗಾಕೋರರು ಇಂಥವರೇ ತುಂಬಿಬಿಟ್ಟಿದ್ದಾರೆ.
ಇಂಥದೇ ಗುಣಗಳನ್ನು ಮೈಗೂಡಿಸಿಕೊಂಡು ಬಯಸಿದೊಡನೆ ಕೈವಶವಾಗಬೇಕು ಎಂಬ ಕರುಣಾರಹಿತ ವೃತ್ತಿಪರತೆ ಹೊದ್ದು, ಬಡಿದು ಬಿಸಾಕುವ ಆಕ್ರಮಕ ಧೋರಣೆಯ ರಾಜಕೀಯ ವರ್ಗ ಇಲ್ಲಿ ಮುಖ್ಯವಾಹಿನಿಯಲ್ಲಿ ನಿಲ್ಲುತ್ತದೆ. ಇಲ್ಲಿ ಯಾವುದೂ ಅಪವಿತ್ರವಲ್ಲ, ಹಾಗೆಲ್ಲ ಯೋಚಿಸಲಿಕ್ಕಾಗುತ್ತಾ ಅನ್ನುವಂಥದ್ದು ಯಾವುದೂ ಇಲ್ಲ, ಅಸಾಧ್ಯವೂ ಇಲ್ಲ.
ಇಂಥದೊಂದು ಹೃದಯವಿಹೀನ ನಗರ ಜೀವನಕ್ಕೆ ನಿಡೊ ಟಾನಿಯಮ್ ಹಾಗೂ ಅವನಂಥ ಹಲವು ಯುವಜೀವಗಳು ಬಲಿಗಳಾಗುತ್ತಿದ್ದಾರೆ. ನೀವು ರಾಜಕೀಯವಾಗಿ ಸರಿಯಾದ ಪಾಳಯದಲ್ಲಿದ್ದೀರಿ, ಕಾಂಟ್ಯಾಕ್ಟ್ ಹೊಂದಿರುವವರು, ವ್ಯಂಗ್ಯದ ಮೊನಚಲ್ಲಿ ಎಲ್ಲವನ್ನೂ ತಿವಿಯುವ ಆಂಗಿಕ ಪ್ರದರ್ಶನವೂ ನಿಮ್ಮ ಬಳಿ ಇದೆ, ಬಣ್ಣದ ನಾಟಕ ರೂಢಿಯಾಗಿದೆ ಎಂದಾದರೆ ದೆಹಲಿಯಂಥ ನಗರದಲ್ಲಿ ಬದುಕುತ್ತೀರಿ. ಇಲ್ಲವೇ ನಿಕೃಷ್ಟರಾಗುತ್ತೀರಿ.
ನಾವು ನಿಡೊ ಟಾನಿಯಮ್ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಬೇಡುತ್ತಲೇ ನಮ್ಮ ಸಮಾಜವು ಮಾನವೀಯವಾಗಲಿ ಎಂದೂ ಆರ್ತವಾಗಿ ಪ್ರಾರ್ಥಿಸಬೇಕಿದೆ. ಆಕ್ರಮಕ ಜನಸಾಗರದ ನಡುವೆ ಒಂದಿಷ್ಟು ಮೃದು, ಸಂವೇದನಾಶೀಲ ವ್ಯಕ್ತಿಗಳೂ ಇದ್ದಾರೆ. ತಮ್ಮ ಸಹಪಾಠಿಯ ಸಾವಿಗೆ ಕಂಬನಿ ಮಿಡಿಯುತ್ತಿರುವ ಈಶಾನ್ಯ ಭಾರತದ ಆ ವಿದ್ಯಾರ್ಥಿಗಳ ಪಕ್ಕಕ್ಕೆ ನಾವೆಲ್ಲ ನಿಲ್ಲೋಣ. ಅವರ ದುಃಖಕ್ಕೆ ಧ್ವನಿಯಾಗೋಣ. ಆ ಹುಡುಗನ ಪಾಲಕರು, ಕುಟುಂಬದವರೊಂದಿಗೆ ನಿಲ್ಲಬೇಕಾದ ಗಳಿಗೆ ಇದು. ಇದು ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ ಸೀಮಿತ ವಿಷಯವಲ್ಲ. ಸಮಸ್ತ ಭಾರತೀಯರಿಗೆ ಸಂಬಂಧಿಸಿದ್ದು. ಇದು ಭಾರತದ ಕಾಳಜಿಯಾಗಬೇಕು.
ನಿಡೊ ಆತ್ಮಕ್ಕೆ ಶಾಂತಿ ಸಿಗಲಿ.
- ತರುಣ್ ವಿಜಯ್, ಅಂಕಣಕಾರ
tarunvijay2@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


