ಲೋಕಸಭೆ ಚುನಾವಣೆಗೆ ಮುನ್ನ, ಪ್ರಸ್ತುತ ಲೋಕಸಭೆಯ ಕಟ್ಟ ಕಡೆಯ ಅಧಿವೇಶನ ಆರಂಭವಾಗಿದೆ. ಎಲ್ಲ ಪಕ್ಷಗಳಿಗೂ ಈ ಅಧಿವೇಶನ ಪ್ರಚಾರ ಪಡೆಯಲು ಅಥವಾ ಎದುರಾಳಿಗಳ ವಿಚಾರದಲ್ಲಿ ಅಪ ಪ್ರಚಾರ ಮಾಡಲು, ಒಳ್ಳೆಯ ಸನ್ನಿವೇಶ. ಅದಕ್ಕೆ ಈಗಾಗಲೇ ಭೂಮಿಕೆ ಸಿದ್ಧವಾಗುತ್ತಿದೆ.
ಐದು ವರ್ಷಗಳ ಹಿಂದೆ ಲೋಕಸಭೆ ಚುನಾವಣೆ ನಡೆದಾಗ, ಕರ್ನಾಟಕದಲ್ಲಿ ಕಾಂಗ್ರೆಸ್ ಇತಿಹಾಸದಲ್ಲೇ ಹೀನಾಯ ಎನ್ನುವಂತಹ ಸೋಲನ್ನು ಅನುಭವಿಸಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿದ್ದು ಬಿಜೆಪಿ" ಲೋಕಸಭೆಗೆ ನಡೆದ ರಾಮನಗರ- ಮಂಡ್ಯ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದು ಜೆಡಿಎಸ್.
ಇದು ಈಗಾಗಲೇ ಪ್ರಕಟವಾಗಿರುವ ವಿಚಾರ. ಅದೇ ಲೆಕ್ಕಾಚಾರದ ಫಲಿತಾಶ ಲೋಕಸಭೆ ಚುನಾವಣೆಯಲ್ಲೂ ಪ್ರಕಟವಾಗಬಹುದೆ? ಆಗಲೇ ಬೇಕು ಎನ್ನುವುದು ಕಾಂಗ್ರೆಸ್ಸಿನ ಲೆಕ್ಕಾಚಾರ. ಕಾಂಗ್ರೆಸ್ಸಿನ ರಾಷ್ಟ್ರೀಯ ಲೆಕ್ಕಾಚಾರದಲ್ಲಿ ಆಂಧ್ರ ಪ್ರದೇಶದಲ್ಲಿ ಕಳೆದುಕೊಳ್ಳುವ ಸ್ಥಾನಗಳನ್ನು ಕರ್ನಾಟಕದಿಂದಲೇ ಭರ್ತಿ ಮಾಡಿಕೊಳ್ಳಬೇಕು. ಅದು ಸಾಧ್ಯವೆಂದು ಪಕ್ಷದ ವರಿಷ್ಠರು ನಂಬಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ, ರಾಹುಲ ಗಾಂಧಿ, (ಅವರೇ ರಾಷ್ಟ್ರಮಟ್ಟದ ಪ್ರಚಾರ ಸಮಿತಿಯ ಪ್ರಮುಖರೂ ಹೌದು) ರಾಜ್ಯದಿಂದ ಪಕ್ಷಕ್ಕೆ ಇಟ್ಟುಕೊಂಡಿರುವ ಗುರಿ ಕನಿಷ್ಠ ಪಕ್ಷ 28ರಲ್ಲಿ 20 ಸ್ಥಾನಗಳು. ಹಿಂದೆ ಅವರ ಗುರಿ 25ರ ವರೆಗೂ ಹೋಗಿತ್ತು. ಈಗ ಅದು 20ಕ್ಕೆ ಇಳಿದಿರುವುದಕ್ಕೆ ಕಾರಣ ರಾಜ್ಯದಲ್ಲಿನ ಕಾಂಗ್ರೆಸ್ ವಿರೋಧಿ ಪಾಳೆಯದಲ್ಲಿ ಆಗಿರುವ ಕೆಲವು ಬದಲಾವಣೆಗಳು ಹಾಗೂ ಚುನಾವಣೆ ಪೂರ್ವದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರದ ಅಲೆ.
ಅದು ಕಾಂಗ್ರೆಸ್ಸಿನ ಲೆಕ್ಕಾಚಾರ. ಅದಕ್ಕೆ ತಕ್ಕಂತೆ, ಸಿದ್ಧತೆ ನಡೆದಿದೆಯೇ? ರಾಜ್ಯದ ಉಸ್ತುವಾರಿಯ ಜವಾಬ್ದಾರಿಯನ್ನು ಹೊತ್ತಿರುವ ದಿಗ್ವಿಜಯಸಿಂಗ್ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಕರ್ನಾಟವನ್ನು ಪ್ರತಿನಿಧಿಸುವ ಅನುಭವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯಿಲಿ, ಕೆ.ಎಚ್. ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್, ರಹಮಾನ್ಖಾನ್ ಅವರು ಬೀರಬಹುದಾದ ಪ್ರಭಾವವನ್ನೇ ಕಾಂಗ್ರೆಸ್ ನಂಬಿರುವಂತಿದೆ.
ಪ್ರಾದೇಶಿಕ ಮಟ್ಟದಲ್ಲೂ, ಒಂದು ಸಮೀಕ್ಷೆಯ ಪ್ರಕಾರ ಸಿದ್ದರಾಮಯ್ಯ ಅವರ ಆಡಳಿತ ರಾಜ್ಯದ ಜನರಲ್ಲಿ ಶೇಕಡಾ ಎಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯ ಜನರಲ್ಲಿ ತೃಪ್ತಿಯನ್ನು ಉಂಟುಮಾಡಿದೆ. ಇದು ಚುನಾವಣೆಯ ಮತದಾನದಲ್ಲಿ ಪ್ರತಿಬಿಂಬಿತವಾಗಬೇಕಲ್ಲವೇ? ಜನರಿಗೆ ಸರ್ಕಾರದ ಕೆಲಸದಲ್ಲಿ ತೃಪ್ತಿ ಇದೆ ಎನ್ನುವುದು ಜನರ ಅನಿಸಿಕೆಯನ್ನು ಸಮೀಕ್ಷಕರು ಗ್ರಹಿಸಿರುವ ರೀತಿಯನ್ನು ಪ್ರತಿಬಿಂಬಿಸುವ ಮಾತು. ಆ ಸಮೀಕ್ಷೆ ನಡೆದು ತಿಂಗಳ ಮೇಲಾಯಿತು. ಸದ್ಯದ ಜ್ವಲಂತ ಸಮಸ್ಯೆಗಳಿಗೆ, ರಾಜ್ಯ ಸರ್ಕಾರ ಸ್ಪಂದಿಸಿರುವ ರೀತಿಯನ್ನು ಜನ ಮೆಚ್ಚುತ್ತಾರೆಂದು ತಿಳಿದುಕೊಳ್ಳುವುದು ತಪ್ಪಾದರೂ ಆಗಬಹುದು. ಇನ್ನು ಚುನಾವಣೆಯಲ್ಲಿನ ಪ್ರಚಾರ ಸಮರ ಪ್ರಾದೇಶಿಕ ಮಟ್ಟದಲ್ಲಿ ಆರಂಭವಾಗಿಲ್ಲ. ಜಾತಿ ಸಂಘಟನೆಗಳ ಒಲವು ಪ್ರಕಟವಾಗುವುದಕ್ಕೆ ಇನ್ನು ಸಮಯ ಬೇಕು. ಕಾಂಗ್ರೆಸ್ ಸಂಘಟನೆಯಲ್ಲಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಒಗ್ಗಟ್ಟಿನ ಪ್ರದರ್ಶನವೇನೂ ಆಗಿಲ್ಲ. ಪಕ್ಷದ ಈಗಿನ ಕೇಂದ್ರ ನಾಯಕತ್ವವನ್ನು ವ್ಯಂಗ್ಯವಾಗಿ ಟೀಕಿಸುವ ಮಧ್ಯಮ ದರ್ಜೆಯ ನಾಯಕರ ಸಂಖ್ಯೆಯೂ ಹೆಚ್ಚಾಗಿರುವಂತಿದೆ.
ಭಾರತೀಯ ಜನತಾ ಪಾರ್ಟಿ: ಕಳೆದ ಎರಡು ವಾರಗಳಲ್ಲಿ, ಸಂಘಟನೆ ಹಾಗೂ ಚುನಾವಣೆಯ ದೃಷ್ಟಿಯಿಂದ ಬಿಜೆಪಿಯಲ್ಲಿ ಗುಣಾತ್ಮಕವಾದ ಬದಲಾವಣೆ ಆಗಿರುವುದು ನಿಜ. 2008ರ ವಿಧಾನ ಸಭೆ ಚುನಾವಣೆ, 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ರೂವಾರಿ ಯಡಿಯೂರಪ್ಪ ಅವರು ಪಕ್ಷಕ್ಕೆ ಹಿಂತಿರುಗಿದ್ದಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ.
ಅಷ್ಟೇ ಅಲ್ಲ. ಯಡಿಯೂರಪ್ಪ ಬಿಜೆಪಿಯ ಚಿಹ್ನೆಯನ್ನೇ ಪಡೆದು, ಪಕ್ಷದ ಅಧಿಕೃತ ಉಮೇದುವಾರರಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಬಹಿರಂಗವಾಗಿಯೇ ಪ್ರಕಟಿಸಿರುವುದು, ಒಂದು ಪ್ರಭಾವಶಾಲಿ ಜನವರ್ಗದಲ್ಲಿ ಬಿಜೆಪಿಯ ಪರವಾಗಿ ಸಂಚಲನವನ್ನು ಮೂಡಿಸುವುದು ಖಚಿತ.
ಚುನಾವಣೆಯಲ್ಲಿ ಜಾತಿಯ ಪ್ರಮುಖ ಪಾತ್ರವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಈಗಿನ ಪ್ರದೇಶ ಕಾಂಗ್ರೆಸ್ ನಾಯಕತ್ವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಒಂದು ಜನಾಂಗವಾಗಿ ವೀರಶೈವರು ಅನುಕೂಲವಾದ ರೀತಿಯ ಸ್ಪಂದನವನ್ನು ನಿರೀಕ್ಷಿಸುವಂತಿಲ್ಲ.
ಇಲ್ಲಿ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ವೀರಪ್ಪಮೊಯಿಲಿ, ಅವರ ಪಾತ್ರವೂ ಇದ್ದೇ ಇದೆ. ಕಾಂಗ್ರೆಸ್ನಲ್ಲೂ ಹೇಳಿಕೊಳ್ಳುವಂತಹ ಲಿಂಗಾಯತ ನಾಯಕರಿಲ್ಲ, ಸರ್ಕಾರದಲ್ಲೂ ಆ ಜಾತಿಗೆ ಸೇರಿದ ಪ್ರಭಾವಿ ಮಂತ್ರಿಗಳೂ ಇಲ್ಲ. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ, ಕಳೆದ ವರ್ಷದ ವಿಧಾನ ಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ, ಗೆದ್ದಿದ್ದೂ ಆರೇ ಸ್ಥಾನಗಳೆನ್ನುವುದು ನಿಜವಾದರೂ, ಮೂವತ್ತೆರಡು ಸ್ಥಾನಗಳಲ್ಲಿ ಆ ಪಕ್ಷ (ಅಂದರೆ ಯಡಿಯೂರಪ್ಪ ಬೆಂಬಲಿಗರೇ) ಎರಡನೇ ಸ್ಥಾನ ಗಳಿಸಿತ್ತು. ಎನ್ನುವ ಅಂಶವನ್ನು ಅನೇಕರು ಗಮನಿಸಿರಲಿಕ್ಕಿಲ್ಲ. 2013 ರ ಚುನಾವಣೆಯ ಅನಂತರ ಜನಮತದ ಅಂಕಿ-ಅಂಶಗಳ ಆಧರಿತ ವಿಶ್ಲೇಷಣೆ ನಡೆದಿಲ್ಲ.
ಯಡಿಯೂರಪ್ಪ ಅವರ ಆಗಮನ, ಬಿಜೆಪಿಗೆ ಚುನಾವಣೆಯಲ್ಲಿ ಲಾಭವನ್ನು ಸೂಚಿಸಿದ್ದರೆ, ಆ ಪಕ್ಷದಲ್ಲೂ ಈಗ ಅಖಿಲ ಭಾರತ ಮಟ್ಟದಲ್ಲಿ ಕಂಡು ಬಂದಿರುವ "ಮುತ್ಸದ್ದಿ ನಾಯಕರ" ಕೊರತೆ ಎದ್ದು ಕಂಡಿರುವುದು ಹಿನ್ನಡೆಯೇ. ನರೇಂದ್ರ ಮೋದಿ ಅವರೇನೋ ರಣೋತ್ಸಾಹದ ವಿಜೃಂಭಣೆಯ ವಾತಾವರಣವನ್ನು ಮೂಡಿಸಿರಬಹುದು. ಆದರೆ ಅವರ ಅದ್ಧೂರಿ ಕಾರ್ಯಕ್ರಮದ ಅನಂತರ ಮತ್ತೆ ಎಲ್ಲವೂ ತಣ್ಣಗಾಗುವಂತೆ ಆಗಿದೆ.
ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಗಡಗಳಲ್ಲಿ ಬಿಜೆಪಿ ಗೆದ್ದಿದ್ದು, ಪ್ರಾದೇಶಿಕ ನಾಯಕರ ವರ್ಚಸ್ಸಿನಿಂದಲೇ. ಈಗಲೂ ಕರ್ನಾಟಕ ಬಿಜೆಪಿ ಒಬ್ಬ ಸಮರ್ಥ ಜನರಿಗೆ ಒಪ್ಪಿಗೆಯಾಗುವಂತಹ ನಾಯಕರನ್ನು ಬೇಗ ಹುಡುಕಿ ಕೊಳ್ಳಬೇಕಾಗಿದೆ.
ದೇವೇಗೌಡರ ನಿಲವು: ಕೊನೆಗೂ, ದೇವೇಗೌಡರು, ಹೊಸ ರಂಗದ ನಾಯಕರಾಗಿ ಕಣಕ್ಕೆ ಧುಮುಕಲು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶದ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್, ಬಿಹಾರದ ಸಂಯುಕ್ತ ಜನತಾದಳದ ಮುಖ್ಯಮಂತ್ರಿ ನಿತೀಶ್ಕುಮಾರ್, ಅವರಿಬ್ಬರ ಚಿತ್ರಗಳ ಜತೆಯಲ್ಲೇ ತ್ರಿಮೂರ್ತಿಗಳ ಚಿತ್ರದ ಮೂರನೆಯ ಚಿತ್ರವಾಗಿ ದೇವೇಗೌಡರ ಚಿತ್ರವೂ ಪ್ರಕಟವಾಗುತ್ತಿದೆ.
ಆದರೆ ಕರ್ನಾಟಕದಲ್ಲಿ ಹೊಸ ರಂಗದಲ್ಲಿ (ಅದಕ್ಕೆ ಏನಾದರೂ ಹೆಸರು ಕೊಡಲಿ) ಇರುವುದು ಜಾತ್ಯತೀತ ಜನತಾದಳವೇ. ಇಲ್ಲಿ ಕಮ್ಯುನಿಸ್ಟರು ಪ್ರಬಲವಾಗಿಲ್ಲ, ಆದ್ದರಿಂದ ದೇವೇಗೌಡರೇ ಮೂರನೆಯ ರಂಗದ ಏಕೈಕ ನಾಯಕರು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಈಗಾಗಲೇ ಪ್ರತ್ಯೇಕ, ಪ್ರತ್ಯೇಕವಾಗಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಾರ್ಟಿಗಳ ಜತೆ ಮಾತುಕತೆ ನಡೆಸಿದ್ದಾಗಿದೆ.
ಅಲ್ಲಿಗೆ ಈಗಾಗಲೇ ಮೂವರು ಸಂಭವನೀಯ ಪ್ರಧಾನ ಮಂತ್ರಿಗಳು ಸಿದ್ಧವಾಗಿದ್ದಾರೆ ಎಂದಾಯಿತು. ಈಗಾಗಲೇ ಮುಲಾಯಂ ಸಿಂಗ್ ಯಾದವ್ ಅವರು ಸಮಾಜವಾದಿ ಪಾರ್ಟಿಯ ಬೆಂಬಲವಿಲ್ಲದೇ ಮುಂದಿನ ಸರ್ಕಾರದ ರಚನೆ ಸಾಧ್ಯವಿಲ್ಲವೆಂದು ಹೇಳಿದ್ದೂ ಆಗಿದೆ. ಮೂರನೆಯ ರಂಗ ರಾಷ್ಟ್ರೀಯ ಮಟ್ಟದಲ್ಲಿ, ತನ್ನ ನಿಜವಾದ ಸ್ವರೂಪದಲ್ಲಿ ಪ್ರಕಟವಾಗಲು ಎರಡು ವಾರಗಳಾದರೂ ಬೇಕು. ಒಡಿಶಾದ ನವೀನ ಪಟ್ಟನಾಯಕ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಆಂಧ್ರದ ಜಗನ್ಮೋಹನ ರೆಡ್ಡಿ, ಹಾಗೂ ಇತರರ ಅಭಿಪ್ರಾಯ ಪ್ರಕಟವಾಗಿಲ್ಲ.
ಜಯಲಲಿತಾ ಮೂರನೆಯ ರಂಗದಲ್ಲಿದ್ದರೆ, ಕರುಣಾನಿಧಿ ಅವರ ಡಿಎಂಕೆ ಬೇರೆ ದಾರಿಯನ್ನೇ ಹಿಡಿಯಬೇಕಾದೀತು. ಅದೇ ರೀತಿ, ಜಗನ್ಮೋಹನ ರೆಡ್ಡಿ - ಚಂದ್ರಬಾಬು ನಾಯ್ಡು ಅವರೂ ಬೇರೆ ಬೇರೆ ಕೂಟಗಳಲ್ಲೇ ಇರಬೇಕಾದ್ದೂ ಸಹಜವೇ. ಉತ್ತರ ಪ್ರದೇಶದ ಮಾಯಾವತೀ ಅವರೂ ಮೂರನೆಯ ರಂಗದಿಂದ ದೂರವೇ ಉಳಿಯುತ್ತಾರೆ ಇವೆಲ್ಲದರ ನಡುವೆ, ಆಮ್ ಆದ್ಮಿ ಪಾರ್ಟಿಯ ಪ್ರಭಾವವನ್ನು ದೇಶದ ಪೇಟೆ ಪಟ್ಟಣಗಳಲ್ಲಿ ಯಾರೂ ಕಡೆಗಣಿಸುವಂತಿಲ್ಲ. ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಯ ಬೆಂಬಲದ ಪ್ರಮಾಣವನ್ನು ಅಳೆಯುವುದು ಕಷ್ಟ. ಆದರೆ, ಆ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಹಾನಿಯಾಗುವ ಸಂಭವವೇ ಹೆಚ್ಚು.
ಈ ಹಿನ್ನೆಲೆಯಲ್ಲಿ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ, ಮೂರನೆಯ ರಂಗದಲ್ಲಿ ಎಷ್ಟರ ಮಟ್ಟಿಗೆ ತನ್ನ ಛಾಪನ್ನು ಒತ್ತಬಹುದು ಎನ್ನುವುದನ್ನು ಹೇಳುವುದಕ್ಕಾಗುವುದಿಲ್ಲ. ಇದುವರೆಗೆ ಜೆಡಿಎಸ್ ಲೋಕಸಭೆಯಲ್ಲಿ ಮೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿಲ್ಲ. ಈ ಬಾರಿ ಇನ್ನಷ್ಟು ಸ್ಥಾನಗಳನ್ನು ಪಡೆಯಲು ಆ ಪಕ್ಷಕ್ಕೆ ಸಾಧ್ಯವಾದೀತೇ? ಆ ಪ್ರಶ್ನಾರ್ಥಕ ಚಿಹ್ನೆ ಹಾಗೇ ಉಳಿಯಬೇಕು. ಇಲ್ಲಿ ಹೆಚ್ಚು ಚರ್ಚೆಗೆ ಅವಕಾಶವಿಲ್ಲ.
ಕಿಡಿಗೇಡಿತನ: ಕೆಲವು ಬಿಜೆಪಿ ಎಂ.ಪಿ.ಗಳು ರಾಜ್ಯದಲ್ಲಿ ಕಾಂಗ್ರೆಸ್ ಟಿಕೆಟ್ಟನ್ನು ಕೇಳುತ್ತಿದ್ದಾರಂತೆ. ಒಬ್ಬಿಬ್ಬರಿಗೆ ಸಿಗಲೂಬಹುದು ಎನ್ನುವ ಗುಮಾನಿ ಹಬ್ಬಿದೆ. ಹಾಗಾದ್ರೆ ನಿಘಂಟುಗಳಲ್ಲಿ ಸೆಕ್ಯುಲರ್ -ಕಮ್ಯುನಲ್ ಪದಗಳಿಗೆ ಈಗಿರುವ ಅರ್ಥ ಬದಲಾಗಬೇಕೇನು?
- ಸತ್ಯ
anisikeprabha@gmail.com