ಅಂಕಣಗಳು

ರೈತರ ಮನೆ ಬಾಗಿಲಿಗೆ ಕೃಷಿ ಅಭಿವೃದ್ಧಿಯ ಮಾಹಿತಿ

ರೈತರ ಮನೆ ಬಾಗಿಲಿಗೆ ಕೃಷಿ ಅಭಿವೃದ್ಧಿಯ ಮಾಹಿತಿ
Published On :

ಪ್ರವಾಸೋದ್ಯಮದ ಅಭಿವೃದ್ಧಿಯ ಚಿಂತನೆ ಮತ್ತು ಅನುಷ್ಠಾನದ ಬಳಿಕ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕೃಷಿ ಅಭಿವೃದ್ಧಿ ಸಮಿತಿಯು ರೈತರ ಮನೆ ಬಾಗಿಲಿಗೆ ಕೃಷಿ ಅಭಿವೃದ್ಧಿಯ ವಿಚಾರಗಳನ್ನು ತಲುಪಿಸಿ, ರೈತ ನಗುನಗುತ್ತಾ ನೆಮ್ಮದಿಯಿಂದ ಜೀವಿಸುವಂತೆ ಮಾಡುವುದರ ಬಗ್ಗೆ ಗಮನ ಹರಿಸಬೇಕೆಂದು ನಿರ್ಧರಿಸಲಾಯಿತು. ಹಳ್ಳಿಗಳಲ್ಲೇ ತಮ್ಮ ಹೊಲ ಗದ್ದೆಗಳಲ್ಲಿ ಬೇಸಾಯ ಮಾಡುತ್ತಾ ತಮ್ಮ ಪೂರ್ವಿಕರು ಹಾಕಿಕೊಟ್ಟು ಹೋದ ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗುವ ಜಾಯಮಾನ ಮಾಯವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪ್ರಕೃತಿ ವೈಪರೀತ್ಯ, ಮಾರುಕಟ್ಟೆಯ ಅನಿರೀಕ್ಷಿತ ತಿರುವುಗಳು, ಅಧುನಿಕ ತಂತ್ರಜ್ಞಾನದ ಅರಿವಿಲ್ಲದಿರುವಿಕೆ ಮುಂತಾದ ಕಾರಣಗಳು ರೈತನು ತನ್ನ ಭೂಮಿಯನ್ನು ಮಾರಿ ಪಟ್ಟಣಗಳಲ್ಲಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಎಂದು ಗುಳೇ ಹೋಗುವುದು ಸಹಜವಾಗುತ್ತಿದೆ. ಕೃಷಿ ವಿಶ್ವವಿದ್ಯಾಲಯಗಳು ರೈತನ ಪರವಾಗಿ ಅಧ್ಯಯನಗಳನ್ನು ನಡೆಸಿ, ರೈತನ ಕೈಹಿಡಿದು ನಡೆಸಬೇಕಾಗಿದೆ. ಸಂಶೋಧನೆಗಳು ರೈತನ ದೈನಂದಿನ ಬದುಕಿಗೆ ಸಹಾಯಕಾರಿಯಾಗಬೇಕಾಗಿದೆ. ಸರ್ಕಾರ, ವಿಶ್ವವಿದ್ಯಾಲಯ, ವಿಜ್ಞಾನಿಗಳು ಮತ್ತು ರೈತರು, ಇವರೆಲ್ಲರೂ ಒಟ್ಟಿಗೆ ಅಭಿವೃದ್ಧಿಯ ಹೆಜ್ಜೆಗಳನ್ನು ಹಾಕಬೇಕಾದ ಅವಶ್ಯಕತೆಯಿದೆ. ಹೇಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಬ್ಬ ರೈತನ ಜೀವನ ಮತ್ತು ಪಟ್ಟಣಗಳಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅಂತರವಿಲ್ಲದೆ ಸರಿಸಮಾನವಾಗಿರುವುದೋ, ಅಂತೆಯೇ ನಮ್ಮ ದೇಶದಲ್ಲಿಯೂ ಆಗಬೇಕಾಗಿದೆ. ಅದಕ್ಕಾಗಿ ರೈತನಿಗೆ ಶಿಕ್ಷಣ, ಮಾಹಿತಿ ಮತ್ತು ಬೆಂಬಲದ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ. ಹಳ್ಳಿಯಲ್ಲಿರುವ ಒಬ್ಬ ರೈತ ಕಷ್ಟಪಟ್ಟು ಬೆಳೆ ಬೆಳೆದು ತನ್ನ ಬೆಳೆಗಳನ್ನು ಮಧ್ಯವರ್ತಿಗಳಿಗೆ ಅತಿ ಕಡಿಮೆ ಬೆಲೆಗೆ ಮಾರಿ, ಮಧ್ಯವರ್ತಿ ಚೆನ್ನಾಗಿ ದುಡ್ಡು ಮಾಡುವುದನ್ನು ಅಸಹಾಯಕನಾಗಿ ನಿಂತು ನೋಡುವುದನ್ನು ತಪ್ಪಿಸಬೇಕಾಗಿದೆ. ಇವೆಲ್ಲವನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರವು, ಸರ್ಕಾರದಲ್ಲಿ ಇರುವ ಯೋಜನೆಗಳ ಪ್ರಯೋಜನ ಪಡೆಯಲು ರೈತನಿಗೆ ಮಾಹಿತಿ ನೀಡಿ, ರೈತ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಿಸಿ, ಯೋಜನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಮಾಡಲು ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಟೊಂಕಕಟ್ಟಿ ನಿಂತಿತು.
ಸರ್ಕಾರದ ಯೋಜನೆಗಳಲ್ಲಿ ಕೃಷಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಕೃಷಿಕನ ಆದಾಯವನ್ನು ವೃದ್ಧಿಸುವ ಹಲವಾರು ಕಾರ್ಯಕ್ರಮಗಳು ಇರುತ್ತವೆ. ಆದರೆ ಈ ಮಾಹಿತಿಗಳೆಲ್ಲ ರೈತರಿಗೆ ಸಿಗುವುದೇ ಇಲ್ಲ. ಕೇವಲ ಕೆಲವೇ ಕೆಲವು ಮುಂದುವರಿದ ಕೃಷಿಕರು, ತಂತ್ರಜ್ಞಾನವನ್ನು ಮತ್ತು ಸರ್ಕಾರದ ಸಹಾಯಧನ ಪಡೆದು  ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿರುತ್ತಾರೆ. ಆದ್ದರಿಂದ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ವಿವಿಧ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯದಿಂದ ಪ್ರತಿಯೊಬ್ಬ ರೈತನ ಮನೆ ಬಾಗಿಲಿಗೆ ಮಾಹಿತಿಯನ್ನು ತಲುಪುವಂತೆ ಮಾಡಬೇಕು ಎಂದು ನಿರ್ಧರಿಸಿದೆವು. ಈ ಉದ್ದೇಶಕ್ಕಾಗಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಹಭಾಗಿತ್ವದ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರದ ಮೂಲಕ ವಿಭಾಗದ ಐದು ಜಿಲ್ಲೆಗಳ ಪ್ರಚಾರ ಇಲಾಖೆಗೆ ಅಂತರ್ಜಾಲ ಸೌಲಭ್ಯ ಹೊಂದಿದ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು. ಪ್ರಚಾರ ಇಲಾಖೆಯಿಂದ ಮೂರು ಪ್ರಚಾರ ವಾಹನಗಳನ್ನು ಉಪಯೋಗಿಸಿ ಚಿತ್ತಾಪೂರ ತಾಲೂಕಿನ ಮೂವತ್ತಾರು ಹಳ್ಳಿಗಳಿಗೆ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಕೇಂದ್ರದ ವಿನೂತನ ಪ್ರಯೋಗಕ್ಕೆ ಅಂದಿನ ಮುಖ್ಯಮಂತ್ರಿಗಳ ಮೂಲಕ ಚಾಲನೆ ನೀಡಲಾಯಿತು.
ಮೊಬೈಲ್ ವಾಹನಗಳ ಮೂಲಕ ರೈತರಿಗೆ ಮಾಹಿತಿಯನ್ನು ಎಲ್ಲಿ ಪಡೆಯಬೇಕು, ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಪ್ರಚಾರ ನೀಡಲಾಯಿತು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಿಂದ ತಾಂತ್ರಿಕ ಮಾಹಿತಿ ಮತ್ತು ವಿಸ್ತರಣೆಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಲಾಯಿತು. ಅಂತೆಯೇ ಕೃಷಿ ಮಿಷನ್ ವತಿಯಿಂದ ಬೆಳೆ ಅಭಿವೃದ್ಧಿ ಗುಂಪುಗಳ ಸಂಘಟನೆ ನಡೆಯಬೇಕೆಂದೂ, ಕೃಷಿ ಅಭಿವೃದ್ಧಿ ಹಾಗೂ ಕೆರೆ ಪುನಶ್ಚೇತನದ ಬಗ್ಗೆ ತಿಳಿವಳಿಕೆ, ಬೀಳು ಭೂಮಿಯಲ್ಲಿ ಔಷಧಿ ಮತ್ತು ಜೈವಿಕ ಇಂಧನ ಸಸಿಗಳ ಬಳಕೆ, ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳು ನೇರ ಸೌಲಭ್ಯವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಲಾಯಿತು.
ಮೊಬೈಲ್ ವ್ಯಾನುಗಳನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪ್ರಗತಿಪರ ರೈತರು ಸಮರ್ಥವಾಗಿ ನಿಭಾಯಿಸಿದರು. ಆಯ್ದ ಹಳ್ಳಿಗಳಿಗೆ ಅಲ್ಲಿನ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಶ್ರವ್ಯ, ದೃಶ್ಯ ಮಾಧ್ಯಮ ಮತ್ತು ಕರಪತ್ರಗಳ ಮುಖಾಂತರ ಮನವರಿಕೆ ಮಾಡಿಕೊಡಲಾಯಿತು. ಗ್ರಾಮ ಪಂಚಾಯತಿಯವರು ಮೊಬೈಲ್ ವ್ಯಾನುಗಳ ಮೂಲಕ ವಿಷದವಾಗಿ ಪ್ರಚಾರ ಮಾಡುತ್ತಿದ್ದರು. ಹಾಗಾಗಿ ಆಸಕ್ತ ರೈತರು ಮೊಬೈಲ್ ವ್ಯಾನಿಗಾಗಿ ನಿಗದಿತ ಸಮಯದಲ್ಲಿ ಕಾದಿದ್ದು, ತಮ್ಮ ಅನುಮಾನಗಳನ್ನು ಹೇಳಿಕೊಂಡು, ಚರ್ಚೆ ಮಾಡಿ, ವಿಷಯ ಸಂಗ್ರಹಿಸಿ, ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾರಂಭಿಸಿದರು. ಮುಂದೆ ತಮಗೇನಾದರೂ ಅನುಮಾನಗಳು ಬಂದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬುದರ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.
ಅವರಿಗೆ ಅನುಕೂಲವಾಗಲೆಂದು ಪ್ರಚಾರದ ಕರಪತ್ರಗಳನ್ನೂ ಹಂಚಲಾಗುತ್ತಿತ್ತು. ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.  ತಮಗೆ ಕೃಷಿ ಇಲಾಖೆಯಿಂದ ಯಾವ ಸಹಾಯವೂ ದೊರಕುವುದಿಲ್ಲ ಎಂದು ಮೊದಲು ಕೇಳಿಬರುತ್ತಿದ್ದ ಮಾತುಗಳು ನಿಂತುಹೋದವು.
ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಈ ಕೆಳಗಿನ ಸೌಲಭ್ಯಗಳ ಮಾಹಿತಿಯನ್ನು ಮುಖಾಮುಖಿ ನೀಡಲಾಯಿತು:
-ಶೇ. 50 ರ ರಿಯಾಯಿತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಬೇಕಾಗುವ ವಿವಿಧ ಬಗೆಯ ಬೀಜಗಳನ್ನು ವಿತರಿಸಲಾಗುತ್ತದೆ.
-ಶೇ. 50 ರ ರಿಯಾತಿಯಲ್ಲಿ ಟ್ರಾಕ್ಟರ್ ಚಾಲಿತ ವಿವಿಧ ಕೃಷಿ ಉಪಕರಣಗಳು, ರಾಶಿ ಮಾಡುವ ಯಂತ್ರ ಹಾಗೂ ಕೃಷಿ ಸಂಸ್ಕರಣೆಗೆ ಸಂಬಂಧಿಸಿದ ಚಾಪ್ ಕಟರ್, ಹಪ್ಪಳ ಮಾಡುವ ಯಂತ್ರ, ಖಾರ ಕುಟ್ಟುವ ಯಂತ್ರ, ಬೀಸುವ ಯಂತ್ರ ಹಾಗೂ ರವಾ ಮಾಡುವ ಯಂತ್ರಗಳನ್ನು ವಿತರಿಸಲಾಗುತ್ತದೆ.
-ಶೇ. 50 ರ ರಿಯಾಯಿತಿಯಲ್ಲಿ ಕೃಷಿ ಪರಿಕರಗಳಾದ ಜೈವಿಕ ಗೊಬ್ಬರ, ಸಾವಯವ ಗೊಬ್ಬರ, ಸಸ್ಯ ಸಂರಕ್ಷಣಾ ಕೀಟ ನಾಶಕಗಳು, ಜೈವಿಕ ಕೀಟ ನಾಶಕಗಳು, ಸಸ್ಯ ಸಂರಕ್ಷಣಾ ಉಪಕರಣಗಳು, ಎತ್ತು ಚಾಲಿತ ಕೃಷಿ ಉಪಕರಣಗಳು, ಲಘು ಪೋಷಕಾಂಶಗಳು, ಭೂ-ಸುಧಾರಕಗಳು ಹಾಗೂ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ. ಪಶು ಸಂಗೋಪನಾ ಇಲಾಖೆಯಿಂದ ಈ ಕೆಳಗಿನಂತೆ ಸಿಗುವ ಸಹಾಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
-ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಉಚಿತವಾಗಿ ಮೇವಿನ ಬೆಳೆಗಳಾದ ಮೆಕ್ಕೆ ಜೋಳ, ಹೈಬ್ರಿಡ್ ಜೋಳ, ಕುದುರೆ ಮೆಂತೆ, ಹಾಗೂ ಓಟ್ಸ್ ಬೀಜಗಳನ್ನು ವಿತರಿಸಲಾಗುವುದು.
-ಎಲ್ಲಾ ಪಶು ಆಸ್ಪತ್ರೆ ಕೇಂದ್ರಗಳಲ್ಲಿ ವಿವಿಧ ರಾಸುಗಳಿಗಾಗಿ ಕೃತಕ ಗರ್ಭಧಾರಣೆ ಸೌಲಭ್ಯ
-ಗಿರಿರಾಜ ಕೋಳಿ ಸಾಕಾಣಿಕೆ ಯೋಜನೆಯಲ್ಲಿ ಇಲಾಖೆಯಿಂದ ಮಹಿಳೆಯರಿಗೆ ಉಚಿತವಾಗಿ ಕೋಳಿಗಳನ್ನು ವಿತರಿಸಲಾಗುವುದು.
-ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಶೇ. 60 ಸಬ್ಸಿಡಿ ದರದಲ್ಲಿ  ಆಡುಗಳನ್ನು ವಿತರಿಸಲಾಗುವುದು.
-ಸ್ಥಳೀಯ ಕುರಿಗಳನ್ನು ಉನ್ನತೀಕರಿಸಲು ಬೀಜದ ತಳಿಗಳನ್ನು ಶೇ. 50 ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು.
ದನ ಕರುಗಳಿಗೆ ಕಾಲು ಬಾಯಿ ರೋಗ, ಚಪ್ಪೆ ರೋಗ, ಗಂಟಲು ಬೇನೆ ರೋಗ, ಮತ್ತು ಕುರಿಗಳಿಗೆ ಕರುಳು ಬೇನೆ ರೋಗ, ಕೋಳಿಗಳಿಗೆ ಕೊಕ್ಕರೆ ರೋಗ, ಈ ಎಲ್ಲಾ ರೋಗಗಳನ್ನು ತಡೆಗಟ್ಟಲು ಉಚಿತವಾಗಿ ಲಸಿಕೆಗಳನ್ನು ಹಾಕಲಾಗುವುದು.
-ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಹಾಗೂ ರಾಷ್ಟ್ರೀಯ ಸಮವಿಕಾಸ ಯೋಜನೆಯಡಿಯಲ್ಲಿ ಗ್ರಾಮ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು.
ಇಲಾಖೆಯಿಂದ ದನ ಕರುಗಳಿಗೆ ಜಂತು ನಿವಾರಕ ಔಷಧಿಗಳನ್ನು ಉಚಿತವಾಗಿ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಹಾಗೂ ತಾಲೂಕಿಗೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ. ರೈತರಿಗೆ ಮಾಹಿತಿಯನ್ನು ಮತ್ತು ಮಾರ್ಗದರ್ಶನವನ್ನು ಅವಿರತವಾಗಿ ನೀಡುತ್ತಲೇ ಇದ್ದಾಗ ಮಾತ್ರ ಜಾಗೃತಿ ಉಂಟು ಮಾಡಲು ಸಾಧ್ಯ ಎನ್ನುವುದು ನನ್ನ ಅನುಭವದ ಮಾತು. ಸರ್ಕಾರದ ಯೋಜನೆಗಳು ಉತ್ತಮ ಚಿಂತನೆಗಳನ್ನು ಒಳಗೊಂಡಿರುತ್ತವೆ. ಆದರೆ ಅವು ಸಾರ್ಥಕವಾಗುವುದು ಆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ .
(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.