ಆರ್ಎಸ್ಎಸ್ ಕುರಿತ ಕೆಲವು ಸತ್ಯ ಹಾಗೂ ಮಿಥ್ಯೆಗಳು!

ಆರ್ಎಸ್ಎಸ್ ವಿರುದ್ಧದ ಕುಟಿಲ ಆಂದೋಲನದ ಬಂಡವಾಳ ಬಯಲುಮಾಡುವಲ್ಲಿ ಸಾಮಾಜಿಕ ಮಾಧ್ಯಮ ಪ್ರಮುಖ ಪಾತ್ರ ವಹಿಸಿದೆ. ಆರ್ಎಸ್ಎಸ್ ವಿರೋಧಿ ಪ್ರಚಾರಕರ ಟ್ವೀಟುಗಳನ್ನು ಪರಿಶೀಲಿಸಿದಾಗ, ಆ ಸಂಘಟನೆಯ ಕುರಿತು ಹರಡಲಾಗಿರುವ ಕೆಲವು ಪ್ರಮುಖ ಮಿಥ್ಯೆಗಳನ್ನು ಹೊರಗೆಡವಬೇಕು ಎಂದು ನಾನು ನಿರ್ಧರಿಸಿದೆ. ಸರಿಯಾದ ಮಾಹಿತಿಯಿಲ್ಲದೆಯೇ ಬಹುತೇಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಅಬ್ಬರಿಸಿ ಮಾತನಾಡುತ್ತಾರೆ. ಎಲ್ಲರನ್ನೂ ಬದಲಾಯಿಸುವುದು ಸಾಧ್ಯವಿಲ್ಲ, ಆದರೆ ಸತ್ಯವನ್ನು ತೆರೆದಿಡುವುದಕ್ಕಂತೂ ಸಾಧ್ಯವಿದೆ. ಇಲ್ಲಿ ನೀವು ಇನ್ನೊಂದು ವಿಷಯವನ್ನು ಗಮನಿಸಬೇಕು; ನಾನೀಗ ಮುಂದಿಡುತ್ತಿರುವ ಮಾಹಿತಿ ಆರ್ಎಸ್ಎಸ್ನ ಅಧಿಕೃತ ಹೇಳಿಕೆಯಂತೂ ಅಲ್ಲ. ಆದರೆ ಇಂದಿನ ಸಾಮಾಜಿಕ ಮಾಧ್ಯಮದ ಪ್ರಜ್ಞಾವಂತ ಯುವ ಸಮೂಹ ತೆರೆದಿಟ್ಟ ಮಾಹಿತಿಗಳ ಸಂಗ್ರಹ.
ಮಿಥ್ಯೆ 1: ಗಾಂಧಿಯನ್ನು ಕೊಂದದ್ದು ಆರ್ಎಸ್ಎಸ್
ಸತ್ಯ:ನಾಥೂರಾಮ್ ಗೋಡ್ಸೆ ಗಾಂಧಿಯನ್ನು ಕೊಂದದ್ದು 1948ರಲ್ಲಿ. ಗೋಡ್ಸೆ 1930ರಲ್ಲಿಯೇ ಆರ್ಎಸ್ಎಸ್ ಅನ್ನು ತೊರೆದಿದ್ದ. ಈ ಮಾತನ್ನು ಆ ಸಂಘಟನೆ ಅನೇಕ ಬಾರಿ ಪುನರುಚ್ಚರಿಸಿದೆ. ಡಿಸೆಂಬರ್ 2010ರಂದು ರಾಮ್ ಮಾಧವ್, ಗಾಂಧೀಜಿಯ ಕೊಲೆಗೆ ಮತ್ತು ಆರ್ಎಸ್ಎಸ್ಗೆ ಸಂಬಂಧವಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ದಾಖಲೆಗಳ ಸಮೇತ ಮುಂದಿಟ್ಟಿದ್ದರು. ಇನ್ನು ಜಸ್ಟಿಸ್ ಕಪೂರ್ ಸಮಿತಿಯ ವರದಿಯೂ ಈ ಕುರಿತು ಹೀಗೆ ಹೇಳಿದೆ: "ಗಾಂಧೀಜಿಯ ಹತ್ಯೆಯಲ್ಲಿ ಆರ್ಎಸ್ಎಸ್ನ ಪಾತ್ರವಿಲ್ಲ. ಈ ಕಾರಣಕ್ಕಾಗಿಯೇ, ಆ ಶಾಂತಿ ದೂತನ ಕೊಲೆಯಲ್ಲಿ ಮತ್ತು ಅಂಥ ಅತ್ಯಂತ ಪೈಶಾಚಿಕ ಕೃತ್ಯದಲ್ಲಿ ಆರ್ಎಸ್ಎಸ್ ಅನ್ನು ಹೆಸರಿಸುವುದು ತರವಲ್ಲ. ಆರೋಪಿಯು ಆರ್ಎಸ್ಎಸ್ನ ಸದಸ್ಯನಾಗಿದ್ದ ಎನ್ನುವುದನ್ನು ಇದುವರೆಗೂ ರುಜುವಾತು ಮಾಡಲಾಗಿಲ್ಲ"
ಅಲ್ಲದೆ ಹತ್ಯೆ ನಡೆದ ಕೆಲವೇ ತಿಂಗಳಲ್ಲಿ ಆರೋಪಿ ನಾಥೂರಾಮ್ ಗೋಡ್ಸೆಯನ್ನು ನೇಣಿಗೇರಿಸಿ, ಇಡೀ ಘಟನೆಗೆ ನ್ಯಾಯ ಒದಗಿಸಲಾಯಿತು. ಗೋಡ್ಸೆ ಆರ್ಎಸ್ಎಸ್ನ ಮಾಜಿ ಸದಸ್ಯನಾಗಿದ್ದ ಎನ್ನುವ ಕಾರಣಕ್ಕೆ ಆ ರ್ಎಸ್ಎಸ್ ಅನ್ನು ದೂಷಿಸುವುದು ಹೇಗಿದೆಯೆಂದರೆ, ವಿಭಜನೆಯ ವೇಳೆ ಮುಸ್ಲಿಂ ಲೀಗ್ ಸಾಮೂಹಿಕ ಹತ್ಯಾಕಾಂಡ ಮತ್ತು ದೌರ್ಜನ್ಯ ನಡೆಸಿತು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅನ್ನು ನಿಂದಿಸಿದಂತೆ! ಏಕೆಂದರೆ ಜಿನ್ನಾ ಕೂಡಾ ಒಂದು ಸಮಯದಲ್ಲಿ(1906-1920) ಕಾಂಗ್ರೆಸ್ನ ಸದಸ್ಯರಾಗಿದ್ದರು. ಅಂದರೆ ಸುಮಾರು 14 ವರ್ಷಗಳ ಕಾಲ ಕಾಂಗ್ರೆಸ್ನ ಭಾಗವಾಗಿದ್ದ ವ್ಯಕ್ತಿಯೊಬ್ಬ, ನಂತರದಲ್ಲಿ ಹಿಂದುಗಳ ಸಾಮೂಹಿಕ ಹತ್ಯಾಕಾಂಡಕ್ಕೆ ಮತ್ತು ಸಾವಿರಾರು ಜನರ ಸಾವಿಗೆ ಕಾರಣನಾದ. ಹಾಗಿದ್ದರೆ ಸೋನಿಯಾ ಗಾಂಧಿಯವರ ಕಾಂಗ್ರೆಸ್, ಜಿನ್ನಾ ಮಾಡಿದ ತಪ್ಪಿನ ಜವಾಬ್ದಾರಿ ಹೊರುವುದೇ?
ಮಿಥ್ಯೆ 2: ಸರ್ದಾರ್ ಪಟೇಲರು ಆರ್ಎಸ್ಎಸ್ ವಿರೋಧಿಯಾಗಿದ್ದರು
ಸತ್ಯ: 1948ರಲ್ಲಿ ಸರ್ದಾರ್ ಪಟೇಲರು ಆರ್ಎಸ್ಎಸ್ ವಿರುದ್ಧ ಕ್ರಮ ಕೈಗೊಂಡಿದ್ದಕ್ಕೆ ಮುಖ್ಯ ಕಾರಣ 'ಜಾತ್ಯತೀತ' ನೆಹರು ಮತ್ತು ಅವರ ಗುಂಪಿನ ರಾಜಕೀಯ ಒತ್ತಡ. ಆದರೆ ಯಾವಾಗ ಆರ್ಎಸ್ಎಸ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಯಿತೋ, ಆಗ ಪಟೇಲರು, ಗುರೂಜಿ ಗೋಳ್ವಾಲ್ಕರ್ ಅವರಿಗೆ ಪತ್ರವೊಂದನ್ನು ಬರೆದರು-ಆ ಸಮಯದಲ್ಲಿ ಎಲ್ಲರಿಗಿಂತಲೂ ಹೆಚ್ಚು ಖುಷಿ ಪಟ್ಟಿದ್ದು ಸರ್ದಾರ್ ಪಟೇಲರೇ ಎನ್ನುವುದು ಆ ಪತ್ರದಿಂದಲೇ ತಿಳಿಯುತ್ತದೆ! ಇಂದಿನವರೆಗೂ, ಅಂದರೆ ಸರ್ದಾರ್ ವಲ್ಲಭಭಾಯಿ ಪಟೇಲರ ಸಾವಿನ ನಂತರದಿಂದ, ಆರ್ಎಸ್ಎಸ್ ಮೇಲೆ ಹೇರಿದ ನಿಷೇಧಗಳಿಗೆ ಕಾಂಗ್ರೆಸ್ಗೆ ಅದರ ಮೇಲಿರುವ ದ್ವೇಷವೇ ಕಾರಣ. ವೋಟ್ ಬ್ಯಾಂಕ್ ರಾಜಕಾರಣ, ಭ್ರಷ್ಟಾಚಾರ ಅಥವಾ ದೇಶದ ಸಾರ್ವಭೌಮತೆಯ ವಿಚಾರದಲ್ಲಿ ಆರ್ಎಸ್ಎಸ್ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಒಂದು ವೇಳೆ ಇದೇ ಮಾನದಂಡದಿಂದ ನೋಡುವುದಾದರೆ, ಇಷ್ಟರಲ್ಲಾಗಲೇ ಕಾಂಗ್ರೆಸ್, ಸಮಾಜವಾದಿ ಪಕ್ಷ ಅಥವಾ ಇನ್ನುಳಿದ ಪಕ್ಷಗಳನ್ನು ಎಂದೋ ನಿಷೇಧಿಸಬೇಕಿತ್ತು. ಅವುಗಳ ಕಾರ್ಯಕರ್ತರು ನಡೆಸಿದ ಹಿಂಸಾಚಾರ ಮತ್ತು ಕೋಮುಗಲಭೆಗಳನ್ನು ತಡೆಯುವಲ್ಲಿನ ಆ ಸರ್ಕಾರಗಳ ವೈಫಲ್ಯಗಳು ಆ ಮಟ್ಟಿಗಿವೆ. ಕಾಂಗ್ರೆಸ್ನಡಿಯಲ್ಲಿ ನಡೆದ ಹಿಂಸಾಚಾರಗಳು 150ಕ್ಕೂ ಹೆಚ್ಚಿವೆ. ಪ್ರತಿ ಗಲಭೆಗೂ ಕಾಂಗ್ರೆಸ್ ಅನ್ನು ನಿಷೇಧಿಸಿದ್ದರೆ, ಈ ಸಮಯಕ್ಕಾಗಲೇ ಅದು ಸಚಿನ್ ತೆಂಡೂಲ್ಕರ್ ಅವರ ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನೂ ಮುರಿದಿರುತ್ತಿತ್ತು!
ಮಿಥ್ಯೆ 3: ಆರ್ಎಸ್ಎಸ್ ರಾಷ್ಟ್ರ ವಿರೋಧಿ
ಸತ್ಯ: ಇಂದು ಭಾರತದಲ್ಲಿ ಅತಿದೊಡ್ಡ ರಾಷ್ಟ್ರಪ್ರೇಮಿ ಸಂಸ್ಥೆಯೇನಾದರೂ ಇದ್ದರೆ, ಅದು ಆರ್ಎಸ್ಎಸ್. ಅದರ ಕಡು ವಿರೋಧಿಯಾಗಿದ್ದ ಜವಾಹರ್ಲಾಲ್ ನೆಹರೂ ಕೂಡ ಆ ಸಂಘಟನೆಯನ್ನು 1963ರ ಗಣರಾಜ್ಯೋತ್ಸವ ಪರೇಡ್ಗೆ ಆಹ್ವಾನ ನೀಡಿದ್ದರು. ತಮ್ಮ ಕೊನೆಯ ವರ್ಷಗಳಲ್ಲಿ ನೆಹರೂರಿಗೆ ಆರ್ಎಸ್ಎಸ್ನ ದೇಶಭಕ್ತಿಯ ಮಿಡಿತದ ಅರಿವಾಯಿತು. ಅದೂ, ಕಾಂಗ್ರೆಸ್ ಪಕ್ಷದ ತಪ್ಪು ವಿದೇಶಾಂಗ ನೀತಿಯಿಂದಾಗಿ, ಚೀನಾದೆದುರು ಹೀನಾಯ ಸೋಲು ಅನುಭವಿಸಿದಾಗಲೇ! ಆ ಸಮಯದಲ್ಲಿ ಭಾರತೀಯ ಯೋಧರಿಗೆ ಮತ್ತು ಜನತೆಗೆ ಆರ್ಎಸ್ಎಸ್ ಮಾಡಿದ ಸಹಾಯವನ್ನು ನೋಡಿ, ಅದನ್ನು ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆಹ್ವಾನಿಸುವ ಅನಿವಾರ್ಯತೆ ನೆಹರು ಅವರಿಗೆ ಎದುರಾಯಿತು. ಒಂದು ವೇಳೆ ಆರ್ಎಸ್ಎಸ್ ದೇಶ ವಿರೋಧಿ ಸಂಘಟನೆಯೇ ಆಗಿದ್ದರೆ ಜಾತ್ಯತೀತತೆಯ ಪವಿತ್ರ ಮೂರ್ತಿಯಾದ ನೆಹರು, ಭಾರತೀಯ ಯೋಧರೊಂದಿಗೆ ಪಥಸಂಚಲನ ನಡೆಸಲು ಅದಕ್ಕೆ ಅವಕಾಶ ನೀಡುತ್ತಿದ್ದರೇ? ಸತ್ಯವೇನೆಂದರೆ, 1962ರ ಯುದ್ಧದ ವೇಳೆ ಸೋಕಾಲ್ಡ್ ಜಾತ್ಯತೀತರಾದ ಕಮ್ಯುನಿಷ್ಟ್ ಪಕ್ಷಗಳು, ಚೀನಾಕ್ಕೆ ಸಹಾಯ ಮಾಡಲು ಚಂದಾ ಎತ್ತುವುದರಲ್ಲಿ ನಿರತವಾಗಿದ್ದವು! 1965ರ ಭಾರತ-ಪಾಕ್ ಯುದ್ಧದ ವೇಳೆ ಅಂದಿನ ಪ್ರಧಾನಿ ಶಾಸ್ತ್ರಿಯವರು, ದೆಹಲಿಯಲ್ಲಿನ ಟ್ರಾಫಿಕ್ ಅನ್ನು ನಿಭಾಯಿಸುವಂತೆ ಆರ್ಎಸ್ಎಸ್ ಅನ್ನು ಕೇಳಿಕೊಂಡಿದ್ದರು. ಹಾಗೆ ಮಾಡಿದರೆ, ಅಲ್ಲಿನ ಪೊಲೀಸರಿಗೆ ರಕ್ಷಣಾ ಕೆಲಸಕ್ಕೆ ಮುಂದಾಗಲು ಸಹಾಯವಾಗುತ್ತದೆ ಎನ್ನುವುದು ಶಾಸ್ತ್ರಿಯವರ ಇಂಗಿತವಾಗಿತ್ತು. ಇನ್ನು ಪಾಕಿಸ್ತಾನಿಗಳು ಜಮ್ಮು-ಕಾಶ್ಮೀರವನ್ನು ಕಬಳಿಸಲು ಹೊಂಚುಹಾಕಿದಾಗ, ಭಾರತೀಯ ವಾಯು ಸೇನಾ ವಿಮಾನಗಳ ಲ್ಯಾಂಡಿಂಗ್ಗೆ ಅನುವಾಗಲು, ಅಲ್ಲಿ ಹಿಮವನ್ನೆಲ್ಲ ಸ್ವಚ್ಛಗೊಳಿಸಿದ್ದು ಆರ್ಎಸ್ಎಸ್ನ ಸ್ವಯಂಸೇವಕರೇ.
ಮಿಥ್ಯೆ 4: ಆರ್ಎಸ್ಎಸ್ ಮೂಲಭೂತವಾದಿ
ಸತ್ಯ: ಆರ್ಎಸ್ಎಸ್ ಹಿಂದುತ್ವ ಮತ್ತು ಭಾರತದ ಪರವಾದದ್ದು. ಭಾರತದಲ್ಲಿ ಎರಡು ರೀತಿಯ ಹಿಂದುಗಳಿದ್ದಾರೆ ಎಂದದು ಹೇಳುತ್ತದೆ. ಇಂದಿನ ಹಿಂದುಗಳು ಮತ್ತು ನಿನ್ನೆಯ ಹಿಂದುಗಳು. ಅಂದರೆ ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದು ಆದಂತಾಯಿತು. ಸಂಸ್ಕೃತದಲ್ಲಿ "ತ್ವ" ಎಂದರೆ ಗುರುತು, ಸತ್ವ ಅಥವಾ ಆಪ್ತತೆಯ ಭಾವ ಎಂದರ್ಥ. ಉದಾಹರಣೆಗೆ- ಮಾತೃತ್ವ, ಭ್ರಾತೃತ್ವ, ಶತ್ರುತ್ವ..ಇತ್ಯಾದಿ. ಆರ್ಎಸ್ಎಸ್ ಎಂದಿಗೂ ಯಾವುದೇ ಪವಿತ್ರ ಗ್ರಂಥವನ್ನು ಎದುರಿಗಿಟ್ಟುಕೊಂಡು ಬೋಧನೆ ಮಾಡುವುದಿಲ್ಲ. ಹಿಂದು ಧರ್ಮಕ್ಕೆ ಎಲ್ಲರೂ ಮತಾಂತರಗೊಳ್ಳಬೇಕು ಎಂದದು ಬಯಸುವುದಿಲ್ಲ. ಪ್ರತಿಯೊಬ್ಬ ಭಾರತೀಯನನ್ನೂ ಸೋದರ/ಸೋದರಿಯೆಂದು ಕಾಣುವುದಕ್ಕೆ ಅಥವಾ ದೇಶವನ್ನು ಮಾತೃಭೂಮಿ ಎಂದು ಕರೆಯುವ ಕಾರಣಕ್ಕೆ ಅದನ್ನು ಮೂಲಭೂತವಾದಿ ಎನ್ನುತ್ತೀರಾ? ಎಲ್ಲಾ ನಾಗರಿಕರಿಗೂ ಒಂದೇ ಕಾನೂನು(ವಿವಾಹ/ವಿಚ್ಛೇದನ/ಪಿತ್ರಾರ್ಜಿತ ಸಂಬಂಧಿ) ಅನ್ವಯವಾಗಬೇಕೆಂದು ಆರ್ಎಸ್ಎಸ್ಪ್ರತಿಪಾದಿಸುತ್ತದೆ. ಆದರೆ ಈ ಪ್ರಗತಿಪರ ಪಕ್ಷಗಳಾದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ಗಳಿಗೆ ಇದೆಲ್ಲಾ ಬೇಕಿಲ್ಲ!
ಮಿಥ್ಯೆ 5: ಆರ್ಎಸ್ಎಸ್ ಉಗ್ರವಾದಿ ಸಂಘಟನೆ
ಸತ್ಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದುವರೆಗೂ ಮಾಡಿರುವ ಸಾಮಾಜಿಕ ಸೇವೆಯ ಪಟ್ಟಿಯನ್ನು ತೋರಿಸಿದಾಗ, "ಜಮಾತ್ ಉದ್ ದಾವಾ ಕೂಡ ಸಾಮಾಜಿಕ ಸೇವೆಯನ್ನು ಮಾಡುತ್ತದೆ" ಎನ್ನುತ್ತಾರೆ ಜಿಹಾದಿ ಬೆಂಬಲಿಗರು. ಆದರೆ ಆರ್ಎಸ್ಎಸ್ ತನ್ನ ಯಾವ ಶಾಖೆಗಳಲ್ಲೂ ಕೂಡ ಹಿಂಸೆಯನ್ನು ಬೋಧಿಸುವುದಿಲ್ಲ ಎನ್ನುವುದನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಅದೇನಿದ್ದರೂ ಭಾರತದ 5000 ವರ್ಷಕ್ಕೂ ಹಿರಿದಾದ ಭವ್ಯ ಇತಿಹಾಸವನ್ನು, ಸಂಸ್ಕೃತಿಯನ್ನು, ಸಂಪ್ರದಾಯವನ್ನು ನೋಡಿ ನಾವು ಹೆಮ್ಮೆ ಪಡಬೇಕು ಎಂದು ಹೇಳುತ್ತದೆ.
ಜಿಹಾದಿ ಉಗ್ರ ಸಂಘಟನೆಗಳಂತೆ ಅನ್ಯ ಧರ್ಮೀಯರನ್ನು ಮತಾಂತರ ಮಾಡಬೇಕು ಅಥವಾ ಹತ್ಯೆ ಮಾಡಬೇಕು ಎಂದಲ್ಲ! ತನಗೆ ಸಂಬಂಧಿಸಿದ ವ್ಯಕ್ತಿಯೊಬ್ಬ ತಪ್ಪೆಸಗಿದರೆ, ಆತನ ವಿರುದ್ಧ ಕಾನೂನು ಕ್ರಮ ಜರುಗಲು ಯಾವ ಅಡ್ಡಿಯನ್ನೂ ಉಂಟುಮಾಡುವುದಿಲ್ಲ ಆರ್ಎಸ್ಎಸ್. ಆದರೆ ಇನ್ನೊಂದೆಡೆ ಕಾಂಗ್ರೆಸ್ ಏನು ಮಾಡುತ್ತಿದೆ? ಲಾಲೂ ಪ್ರಸಾದ್ರಂಥ ತಪ್ಪಿತಸ್ಥರನ್ನು, ಹಿಂದುಗಳ ವಿರುದ್ಧ ಸಾರ್ವಜನಿಕವಾಗಿಯೇ ದ್ವೇಷ ಕಾರಿದ ಅಕ್ಬರುದ್ದೀನ್ ಓವೈಸಿಯನ್ನು, ಸಾಮೂಹಿಕ ಕೊಲೆಗಾರ ಸಜ್ಜನ್ ಕುಮಾರ್ರಂಥವರನ್ನು ಇಂದಿಗೂ ಬೆಂಬಲಿಸುತ್ತಿದೆ. ವಿಭಜನೆಯ ಸಮಯದಲ್ಲಿ ರಕ್ತಪಾತವನ್ನು ತಡೆಯಲು ಸಾಧ್ಯವಾಗದೇ ನೆಹರು ಒದ್ದಾಡುತ್ತಿದ್ದಾಗ, 3,000 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿ ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದು ಇದೇ ಆರ್ಎಸ್ಎಸ್. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಆರ್ಎಸ್ಎಸ್ ಅನ್ನು "ಹಿಂದು ಭಯೋತ್ಪಾದನೆ', "ಕೇಸರಿ ಭಯೋಕತ್ಪಾದನೆ" ಎಂಬ ಕಟ್ಟುಕತೆಯಲ್ಲಿ ಕಟ್ಟಿಹಾಕಬೇಕು ಎನ್ನುವವರ ಪ್ರಯತ್ನ ಇದುವರೆಗೂ ಸಫಲವಾಗಿಲ್ಲ! ಅಜ್ಮೇರ್ ದರ್ಗಾ ಸ್ಫೋಟದ ಆರೋಪಿಗಳಲ್ಲೊಬ್ಬನಾದ ಭಾವೇಶ್ ಪಟೇಲ್, ಆ ಸ್ಫೋಟದಲ್ಲಿ ಆರ್ಎಸ್ಎಸ್ ಕೈವಾಡವಿದೆ ಎಂಬ ಸುಳ್ಳು ಹೇಳಲು ಕಾಂಗ್ರೆಸ್ ನಾಯಕರಾದ ಸುಶೀಲ್ ಕುಮಾರ್ ಶಿಂದೆ ಮತ್ತು ದಿಗ್ವಿಜಯ್ ಸಿಂಗ್ ಒತ್ತಡ ಹೇರುತ್ತಿದ್ದಾರೆ ಎಂದು ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ.
ಮಿಥ್ಯೆ 6: ಅದು ಹಿಂದು ಪುರುಷರಿಗಷ್ಟೇ ಸೀಮಿತ
ಸತ್ಯ: ಇದು ಮೂಢ ಸ್ತ್ರೀವಾದಿಗಳ ಅತ್ಯಂತ ಮೆಚ್ಚಿನ ಸಾಲು. ಆರ್ಎಸ್ಎಸ್ನಲ್ಲಿ ಎರಡು ಘಟಕಗಳಿವೆ- ಪುರುಷರಿಗಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಮಹಿಳೆಯರಿಗಾಗಿ ರಾಷ್ಟ್ರ ಸೇವಿಕಾ ಸಮಿತಿ. ಎರಡೂ ಕೂಡ ದೇಶದ ರಕ್ಷಣೆಗೆ ಮುಡಿಪಾಗಿವೆ.
ಮಿಥ್ಯೆ: ಆರ್ಎಸ್ಎಸ್ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿ
ಸತ್ಯ: ಆರ್ಎಸ್ಎಸ್ ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತದೆ. ಮುಸ್ಲಿಮರಿರಲಿ ಅಥವಾ ಕ್ರಿಶ್ಚಿಯನ್ನರೇ ಇರಲಿ, ಅವರೂ ಆರ್ಎಸ್ಎಸ್ನ ಭಾಗವಾಗಬಹುದು. ಆದರೆ ಮಾತೃಭೂಮಿಯನ್ನು ಗೌರವಿಸುವ ಗುಣ ಅವರಲ್ಲಿರಬೇಕಷ್ಟೆ. ಭಾರತದ ಸಾರ್ವಭೌಮತೆಗೆ ಮತ್ತು ಸಂಸ್ಕೃತಿಗೆ ಮಾರಕವಾಗುವವರನ್ನು ಮಾತ್ರ ಅದು ವಿರೋಧಿಸುತ್ತದೆ. ರಂಗನಾಥಾಚಾರ್ಯ ಅಗ್ನಿಹೋತ್ರಿ ಕೇಸಿನಲ್ಲಿ ಕರ್ನಾಟಕ ಹೈಕೋರ್ಟ್(ಅಂದಿನ ಮೈಸೂರು ಹೈಕೋರ್ಟ್), "ಆರ್ಎಸ್ಎಸ್ ರಾಜಕೀಯೇತರ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಅದು ಹಿಂದುಯೇತರರನ್ನು ದ್ವೇಷಿಸುವ ಸಂಸ್ಥೆಯಲ್ಲ" ಎಂದು ಹೇಳಿತ್ತು.
ಮಿಥ್ಯೆ 8: ಆರ್ಎಸ್ಎಸ್ ಕೇವಲ ಬ್ರಾಹ್ಮಣರು, ಕ್ಷತ್ರಿಯರು ಮತ್ತು ಉಳಿದ ಮೇಲ್ವರ್ಗದ ಹಿಂದುಗಳಿಗಷ್ಟೇ ಸೀಮಿತ
ಸತ್ಯ: ಆರ್ಎಸ್ಎಸ್ನಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ. ಅಲ್ಲಿ ಎಲ್ಲರೂ ಸಮಾನರೇ. ಅದರ ಈ ಗುಣವನ್ನು 7 ದಶಕಗಳ ಹಿಂದೆ ಮಹಾತ್ಮಾ ಗಾಂಧಿಯೇ ಮೆಚ್ಚಿ ಕೊಂಡಾಡಿದ್ದರು. ಆರ್ಎಸ್ಎಸ್ ಕಾರ್ಯಕರ್ತನಾದವನು ಭಾರತ ಮಾತೆಯನ್ನು "ವತ್ಸಲೇ, ಮಾತೃಭೂಮಿ" ಎಂದು ಗೌರವಿಸುವವನಾಗಿರಬೇಕಷ್ಟೆ.
ಮಿಥ್ಯೆ 9: 1984ರ ಗಲಭೆಗಳಲ್ಲಿ ಆರ್ಎಸ್ಎಸ್ ಸಿಖ್ ವಿರೋಧಿಯಾಗಿತ್ತು.
ಸತ್ಯ: ಆ ಸಮಯದ ಅತ್ಯಂತ ಪ್ರಬಲ ಸಿಖ್ ಬೆಂಬಲಿಗರೂ ಇಂಥ ಮಾತನ್ನಾಡುವುದಿಲ್ಲ. ಪುರಾವೆಗಾಗಿ ಖುಷವಂತ್ ಸಿಂಗ್ ಅವರ ಬರಹಗಳನ್ನು ಓದಿ. ಕಾಂಗ್ರೆಸ್ನ ಕಾರ್ಯಕರ್ತರು ಸಿಖ್ಖರ ಹತ್ಯೆಗೆ ಇಳಿದಾಗ, ದೊಡ್ಡ ಸಂಖ್ಯೆಯಲ್ಲಿ ಆ ಜನಾಂಗವನ್ನು ರಕ್ಷಿಸಿದ್ದು ಆರ್ಎಸ್ಎಸ್.
ಮಿಥ್ಯೆ 10: ಶ್ರೀರಾಮ ಸೇನೆ ಮತ್ತು ಅಭಿನವ ಭಾರತದಂಥ ಸಂಘಟನೆಗಳು ಆರ್ಎಸ್ಎಸ್ನ ಭಾಗ
ಸತ್ಯ: ಇಲ್ಲ. ಯಾವ ಸಂಘಟನೆಗಳು ಸಂಘಪರಿವಾರದ ಭಾಗ ಎನ್ನುವುದನ್ನು ಆರ್ಎಸ್ಎಸ್ ಆಗಲೇ ಸ್ಪಷ್ಟವಾಗಿ ಹೇಳಿದೆ. ಹಿಂದು ಸಂಘಟನೆಗಳು ಎಂದು ಕರೆದುಕೊಳ್ಳುವ ಎಲ್ಲರನ್ನೂ ಆರ್ಎಸ್ಎಸ್ ಎಂದು ಕರೆಯುವ, ಆ ಮೂಲಕ ಆರ್ಎಸ್ಎಸ್ನ ಹೆಸರು ಕೆಡಿಸುವ ಪ್ರಯತ್ನಗಳಾಗುತ್ತಿವೆ.
ಮಿಥ್ಯೆ 11: ಬಿಜೆಪಿ ಆರ್ಎಸ್ಎಸ್ನ ರಾಜಕೀಯ ಚಹರೆ
ಸತ್ಯ: ಆರ್ಎಸ್ಎಸ್ ರಾಜಕೀಯೇತರ ಸಂಘಟನೆಯಾಗಿಯೇ ಉಳಿದಿದೆ. ಬಿಜೆಪಿ ಹುಟ್ಟಿಕೊಂಡಿದ್ದು ಜನ ಸಂಘದಿಂದ. ವಾಜಪೇಯಿ, ಆಡ್ವಾಣಿ ಮತ್ತು ಮೋದಿಯಂಥ ಅನೇಕ ನಾಯಕರು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರಬಹುದು, ಆದರೆ ಆ ಕಾರಣಕ್ಕೆ ಅದಕ್ಕೆ ರಾಜಕೀಯ ಮುಖವಾಡ ಹಾಕುವುದು ಸರಿಯಲ್ಲ. ಹಾಗೆ ನೋಡಿದರೆ, ಆಪ್ ಮತ್ತು ಕಾಂಗ್ರೆಸ್ನ ಎಷ್ಟೋ ನಾಯಕರು ಆರ್ಎಸ್ಎಸ್ನಿಂದ ಬಂದವರು. ಇಂದು ಎಷ್ಟೋ ರಾಜಕಾರಣಿಗಳು ಎನ್ಸಿಸಿಯಿಂದ ಬಂದಿರಬಹುದು, ಹಾಗಂತ ಎನ್ಸಿಸಿಯನ್ನೇ ರಾಜಕೀಯ ಸಂಘಟನೆ ಎನ್ನುವುದಕ್ಕಾಗುತ್ತದೆಯೇ? ಆರ್ಎಸ್ಎಸ್ ಪಕ್ಷಗಳ ನಡೆಯನ್ನು ನೋಡಿ ಅವುಗಳನ್ನು ಬೆಂಬಲಿಸುತ್ತದಷ್ಟೆ. ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯನ್ನು ಅತಿ ಪ್ರಬಲವಾಗಿ ವಿರೋಧಿಸಿದ ಏಕೈಕ ಸಂಘಟನೆ ಆರ್ಎಸ್ಎಸ್. ಜೆಪಿ ಆಂದೋಲನ, ಜನಲೋಕಪಾಲ ಆಂದೋಲನ ಮುಂತಾದ ಜನೋಪಯೋಗಿ ಚಳವಳಿಗಳಿಗೆಲ್ಲ ಅದು ಬೆಂಬಲ ನೀಡಿದೆ. ಸರಳವಾಗಿ ಹೇಳಬೇಕೆಂದರೆ ಭಾರತದ ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ಆರ್ಎಸ್ಎಸ್ ಅನ್ನು ಮೆಚ್ಚುವವರು ಮತ್ತು ಚುಚ್ಚುವವರಿದ್ದಾರೆ. ಅದರ ಕಟ್ಟರ್ ವಿರೋಧಿಯಾಗಿರುವ ದಿಗ್ವಿಜಯ್ ಸಿಂಗ್ ಕೂಡ, ಒಮ್ಮೆ ಅದರ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.
ಮಿಥ್ಯೆ 12: ಆರ್ಎಸ್ಎಸ್ನಲ್ಲಿ ಸದಸ್ಯತ್ವ ಪ್ರಕ್ರಿಯೆಯಿದೆ.
ಸತ್ಯ: ತಪ್ಪು. ಯಾರು ಬೇಕಾದರೂ ಅದರ ಭಾಗವಾಗಬಹುದು, ಯಾರು ಬೇಕಾದರೂ ಅದರಿಂದ ಹೊರಬರಬಹುದು. ಯಾವ ಕಾರ್ಯಕರ್ತನೂ ಕೂಡ ಸಂಘದ ಗುರುತಿನ ಚೀಟಿ ಹೊಂದಿರುವುದಿಲ್ಲ.
ಮಿಥ್ಯೆ 13: ಆರ್ಎಸ್ಎಸ್ ಕೇವಲ ಹಿಂದುಗಳ ಕಾಳಜಿ ಮಾಡುತ್ತದೆ.
ಸತ್ಯ: 2004ರಲ್ಲಿ ತಮಿಳುನಾಡಿಗೆ ಸುನಾಮಿ ಅಪ್ಪಳಿಸಿದಾಗ, 2001ರ ಗುಜರಾತ್ ಭೂಕಂಪದ ವೇಳೆ, 2009ರ ಆಂಧ್ರಪ್ರದೇಶ- 2013ರಲ್ಲಿ ಉತ್ತರಾಖಂಡ್ನಲ್ಲಿ ನೆರೆ ಬಂದಾಗ ಅಥವಾ ಇನ್ಯಾವುದೇ ದುರ್ಘಟನೆಗಳಾದಾಗ, ಅಲ್ಲಿ ಎಲ್ಲರಿಗಿಂತಲೂ ಮೊದಲು ಸಹಾಯಹಸ್ತ ಚಾಚಿದ್ದು ಆರ್ಎಸ್ಎಸ್. ಜಮ್ಮು ಕಾಶ್ಮೀರದಿಂದ ಹಿಡಿದು ತಮಿಳುನಾಡಿನವರೆಗೆ ಹಬ್ಬಿರುವ ಆ ಸಂಘಟನೆಯ ಕಾರ್ಯಕರ್ತರೂ ಯಾವುದೇ ಪ್ರಾಕೃತಿಕ ವಿಪತ್ತುಗಳಿರಲಿ, ಅಲ್ಲಿ ನೊಂದವರ ಸಹಾಯಕ್ಕೆ ಮುಂದಾಗುತ್ತಾರೆ. ಬಾಂಗ್ಲಾದೇಶದ ನುಸುಳುಕೋರರು ಅಸ್ಸಾಂನಲ್ಲಿ 2012ರಲ್ಲಿ ಗಲಭೆ ಉಂಟುಮಾಡಿದಾಗ ಸ್ಥಳೀಯರ ಸಹಾಯಕ್ಕೆ ಕೈಚಾಚಿದ್ದು ಆರ್ಎಸ್ಎಸ್. 1970 ಯುದ್ಧ ಸಮಯದಲ್ಲಿ ಅದರ ಕಾರ್ಯಕರ್ತರು ಸಾಗರೋಪಾದಿಯಲ್ಲಿ ಬಂದು ರಕ್ತದಾನ ಮಾಡಿದರು. ಇಂದು ದೇಶದಲ್ಲಿ ಆರ್ಎಸ್ಎಸ್ನ 1,70,000ಕ್ಕೂ ಹೆಚ್ಚು ಯೋಜನೆಗಳು ನಡೆಯುತ್ತಿವೆ. ಸೇವಾ ಭಾರತಿಯ ಮೂಲಕ ದೇಶಾದ್ಯಂತ ಆಹಾರವೊದಗಿಸಲಾಗುತ್ತದೆ. ಇಂದು ಸುಮಾರು 27,041 ಶಾಲೆಗಳನ್ನು (ಎಕಾಲ್ ವಿದ್ಯಾಲಯ) ಬುಡಕಟ್ಟು ಪ್ರದೇಶಗಳಲ್ಲಿ ಅದು ನಡೆಸುತ್ತಿದೆ. ಸುಮಾರು 7,53,123 ಬುಡಕಟ್ಟು ವಿದ್ಯಾರ್ಥಿಗಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 60 ಲಕ್ಷಕ್ಕೂ ಹೆಚ್ಚಿನ ಸಕ್ರಿಯ ಸದಸ್ಯರು ಮತ್ತು ಲಕ್ಷಾಂತರ ಬೆಂಬಲಿಗರನ್ನು ಅದು ದೇಶಾದ್ಯಂತ ಹೊಂದಿದೆ. ಉತ್ತರಾಖಂಡ್ನಲ್ಲಿ ನೆರೆ ಬಂದಾಗ, ಕೂಡಲೇ ಅಲ್ಲಿಗೆ ತೆರಳಿ, ಜನತೆಯ ಸೇವೆಯಲ್ಲಿ ನಿರತರಾಗಿದ್ದ ಭಾರತೀಯ ಸೇನೆಗೂ ಆರ್ಎಸ್ಎಸ್ ಹೆಮ್ಮೆಯಿಂದ ಸಹಾಯಮಾಡಿತು!
ಅದರ ಕುರಿತು ಇನ್ನು ಎಷ್ಟೋ ಸುಳ್ಳುಗಳನ್ನು ಹರಡಲಾಗಿದೆ. ಆದರೆ ನಾನು ಕಲೆಹಾಕಿದ ಇಷ್ಟು ಮಾಹಿತಿಗಳು ಸತ್ಯವನ್ನು ಸಾರುವಲ್ಲಿ ಸಫಲವಾಗುತ್ತವೆ ಎಂದು ಭಾವಿಸಿದ್ದೇನೆ.
- ಕಿರಣ್ ಕುಮಾರ್. ಎಸ್
kirankumars@hotmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


