ಅಂಕಣಗಳು

ಈ ಕುಟುಂಬ ನಿಜಕ್ಕೂ ಎಷ್ಟು ಅದೃಷ್ಟಶಾಲಿಯಲ್ಲವೇ?

Published On :

ಕೆಲವರ ಅದೃಷ್ಟವೇ ಹಾಗೆ. ಎಲ್ಲಾ ಯೋಗ-ಭೋಗಗಳನ್ನೂ ಜನ್ಮಸಿದ್ಧ ಹಕ್ಕಾಗಿಯೇ ಪಡೆದು ಬಂದಿರುತ್ತಾರೆ. ಅವರಿಗೆ ಪ್ರತಿಸ್ಪರ್ಧಿಗಳೇನಾದರೂ ಹುಟ್ಟಿಕೊಂಡಲ್ಲಿ ಅವರ ವಿರುದ್ಧ ಸೆಣೆಸುವ ಅಗತ್ಯವೂ ಇರುವುದಿಲ್ಲ. ಇನ್ಯಾರೋ ಅವರ ವಿರುದ್ಧ ಸೆಣೆಸಿ ದಾರಿ ಸುಗಮ ಮಾಡಿಕೊಡುತ್ತಾರೆ.
ಇನ್ನು ದುರಾದೃಷ್ಟರ ಬಗ್ಗೆ ಒಂದು ವಾಕ್ಯದಲ್ಲಿ ಹೇಳಬೇಕೆಂದರೆ ಎಲ್ಲಾ ಇದ್ದೂ ಏನೂ ಇಲ್ಲದವರು ಇವರು.  ಅವರು ಎಷ್ಟೇ ಯೋಗ್ಯರಾಗಿದ್ದರೂ, ಅರ್ಹರಾಗಿದ್ದರೂ, ಅಯೋಗ್ಯ, ಅನರ್ಹ, ಭ್ರಷ್ಟ, ರಾಕ್ಷಸ ಎಂಬ ಕಳಂಕವನ್ನೆಲ್ಲಾ ಹೊರಬೇಕಾಗುತ್ತದೆ.
ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಜವಾಹರ್‌ಲಾಲ್ ನೆಹರು ಅವರ ಕಥೆಯಂತೂ ಹೇಳಲೇಬೇಕಿಲ್ಲ. ಇಲ್ಲಿಂದಲೇ ನಮಗೆ ನೆಹರು ಮನೆತನದವರ ಅದೃಷ್ಟ, ಭಾರತೀಯರ ದುರಾದೃಷ್ಟ ಕಣ್ಣಿಗೆ ರಾಚುವಂತೆ ಗೋಚರಿಸುವುದು. ಇವರಿಗೆ 1928ರಲ್ಲಿ ಮೊದಲನೇ ಸಲ ಕಾಂಗ್ರೆಸ್ಸಿನ ಅಧ್ಯಕ್ಷ ಪದವಿ ಒಲಿದು ಬರುತ್ತದೆ. ಅದು ಯಾವುದೇ ಚುನಾವಣೆ ಎದುರಿಸುವುದರಿಂದಲ್ಲ, ಬದಲಾಗಿ ತಂದೆಯ ಬಳುವಳಿಯಾಗಿ. ಆಗಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮೋತಿಲಾಲ್ ನೆಹರು ತಮ್ಮ ಮಗನಿಗೆ ಅಧ್ಯಕ್ಷಗಿರಿಯನ್ನು ಗಾಂಧಿಯವರ ಕೃಪಾಕಟಾಕ್ಷದಿಂದ ಹಸ್ತಾಂತರಿಸುತ್ತಾರೆ. ಮುಂದೆ ಪ್ರಧಾನ ಮಂತ್ರಿಯ ಪದವಿಯನ್ನೂ ಚುನಾವಣಾ ಸಮರಾಂಗಣದಲ್ಲಿ ಸ್ವಶಕ್ತಿಯಿಂದ ಸೆಣಸದೇ ಕೇವಲ ಮಹಾತ್ಮ ಗಾಂಧಿಯವರ ಕೃಪಾಕಟಾಕ್ಷದಿಂದಷ್ಟೇ ದಕ್ಕಿಸಿಕೊಂಡದ್ದು ಒಂದು ಇತಿಹಾಸ. 1946ರಲ್ಲಿ ಏರ್ಪಾಟಾಗಿದ್ದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದವರೇ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು. ಆದರೆ ನೆಹರು ಅವರಿಗೆ ಚುನಾವಣೆಯಲ್ಲಿ ಗೆಲ್ಲುವಷ್ಟು ಬೆಂಬಲವಿರಲಿಲ್ಲ. 16 ರಾಜ್ಯಗಳಲ್ಲಿ 13 ರಾಜ್ಯಗಳು ಸರ್ದಾರ್ ಪಟೇಲ್ ಅವರ ಪರವಾಗಿದ್ದವು. ಆಗ ನೆಹರು ಮಹಾತ್ಮ ಗಾಂಧಿಯವರ ಬಳಿ ಹೋಗಿ ಅಲವತ್ತುಕೊಂಡರು ಎಂದು ಕೆಲವು ಇತಿಹಾಸಕಾರರು ಹೇಳಿದರೆ, ಇನ್ನು ಕೆಲವರು ತಮ್ಮನ್ನು ಕಾಂಗ್ರೆಸ್ ಅಧ್ಯಕ್ಷ್ಯನನ್ನಾಗಿ ಮಾಡದೇ ಇದ್ದರೆ ಕಾಂಗ್ರೆಸ್ಸನ್ನು ವಿಭಜಿಸುವುದಾಗಿ ಬೆದರಿಕೆ ಹಾಕಿದರೆಂದು ಹೇಳುತ್ತಾರೆ.
ಇನ್ನು ತಮ್ಮ ನಂತರ ತಮ್ಮ ಮಗಳು ಪ್ರಧಾನಿಯಾಗಬೇಕೆಂದು ನೆಹರು ಬಯಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಇತಿಹಾಸವೇ. ಅದರಂತೆ ಅವರ ಮರಣಾನಂತರ ಇಂದಿರಾಗೆ ಪ್ರಧಾನಿಯಾಗುವಂತೆ ಮನವಿಯನ್ನೂ ಮಾಡಲಾಯಿತು. ಆದರೆ ಆತ್ಮವಿಶ್ವಾಸದ ಕೊರತೆಯೋ ಇಲ್ಲಾ ಒಂದಷ್ಟು ಅನುಭವ ಪಡೆವ ಉದ್ದೇಶವೋ ಅವರೇ ಅದನ್ನು ನಿರಾಕರಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾದರು.
ಶಾಸ್ತ್ರಿ 1947 ಆಗಸ್ಟ್ 15ರಂದು ಉತ್ತರ ಪ್ರದೇಶದ ಗೋವಿಂದ ವಲ್ಲಭ ಪಂತ್‌ರವರು ಮುಖ್ಯಮಂತ್ರಿಯಾಗಿದ್ದ ಸಂಪುಟದಲ್ಲಿ ಪೊಲೀಸ್ ಹಾಗೂ ಸಾರಿಗೆ ಸಚಿವರಾಗಿದ್ದು ಎರಡೂ ಖಾತೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದವರು. ಮೊದಲ ಬಾರಿಗೆ ಮಹಿಳಾ ಕಂಡಕ್ಟರ್‌ಗಳ ನೇಮಕ, ಪ್ರತಿಭಟನಾನಿರತ ಗುಂಪುಗಳನ್ನು ಚದುರಿಸಲು ಲಾಠಿ ಬದಲು ವಾಟರ್ ಜೆಟ್‌ಗಳ ಬಳಕೆ ಜಾರಿಗೆ ತಂದಿದ್ದು ಇವರ ಆಡಳಿತ ಸಾಮರ್ಥ್ಯದ ದ್ಯೋತಕವೆಂದೇ ಹೇಳಬಹುದು.
ನೆಹರುರ ಸಂಪುಟದಲ್ಲಿ ರೈಲ್ವೆ, ಸಾರಿಗೆ, ವಾಣಿಜ್ಯ, ಕೈಗಾರಿಕೆ ಗೃಹ ಹೀಗೆ ಹಲವು ಖಾತೆಗಳನ್ನು ನಿಭಾಯಿಸಿದ್ದೂ ಅಲ್ಲದೆ ಅವುಗಳಲ್ಲಿ ತಮ್ಮದೇ ಛಾಪನ್ನೂ ಸಹ ಮೂಡಿಸಿದ್ದರು. ಗೃಹಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ನಿಗ್ರಹಕ್ಕೆಂದು ಸಂತಾನಂ ಕಮಿಟಿ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿ ಶುದ್ಧ ರಾಜಕಾರಣದ ಭರವಸೆ ಮೂಡಿಸಿದ್ದರು. ಇಂಥ ಒಬ್ಬ ದಕ್ಷ, ಪ್ರಾಮಾಣಿಕ, ಅಧಿಕಾರ ವ್ಯಾಮೋಹವಿಲ್ಲದ ವ್ಯಕ್ತಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ ಭಾರತೀಯರ ಭವಿಷ್ಯವೇ ಬದಲಾಯಿತೆಂದು ಎಲ್ಲರೂ ಕನಸು ಕಂಡಿದ್ದರು. ಅವರೂ ಕೂಡ ಆ ನಿರೀಕ್ಷೆಗಳನ್ನು ಹುಸಿಗೊಳಿಸದೆ 1965 ರಲ್ಲಿ ದಂಡೆತ್ತಿ ಬಂದ ಪಾಕಿಸ್ತಾನವನ್ನು ಬಗ್ಗು ಬಡಿದು ತಮ್ಮ ಸಾಮರ್ಥ್ಯವನ್ನು ಸಾಕ್ಷೀಕರಿಸಿದರು. "ಜೈ ಜವಾನ್, ಜೈ ಕಿಸಾನ್‌" ಎಂಬ ಘೋಷವಾಕ್ಯವನ್ನು ದೇಶಕ್ಕೆ ಕೊಟ್ಟು, ದೇಶದ ಹಸಿವನ್ನು ನೀಗುವ ರೈತ ಹಾಗೂ ದೇಶವನ್ನು ರಕ್ಷಿಸುವ ಸೈನಿಕರಿಗೆ ಗೌರವ ಸಿಗುವಂತೆ ಮಾಡಿದರು. ಆದರೆ 1966ರ ಜನವರಿಯಲ್ಲಿ ಪಾಕಿಸ್ತಾನದೊಂದಿಗಿನ ಒಂದು ಒಪ್ಪಂದಕ್ಕೆ ಸಹಿ ಹಾಕಲು ರಷ್ಯಾಕ್ಕೆ ಹೋದವರು ಮತ್ತೆ ಬರಲೇ ಇಲ್ಲ. ನೆಹರು ಅವರಿಗೆ ಮತ್ತೆ ಅಧಿಕಾರ ದಕ್ಕಿತು.ಇದನ್ನು ಅದೃಷ್ಟವೆನ್ನದೆ ಇನ್ನೇನೆನ್ನಲು ಸಾಧ್ಯ?
ಇಂದಿರಾರ ಆಡಳಿತದ ವಿಷಯಕ್ಕೆ ಬಂದರೆ ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ಧತಿ, ಭೂಸುಧಾರಣೆ, ಋಣ ಪರಿಹಾರ ಕಾಯಿದೆಯಂಥಾ ಕಾರ್ಯಕ್ರಮಗಳಿಂದ ಮೊದಮೊದಲು ಭರವಸೆ ಮೂಡಿಸಿದರೂ ನಂತರ ಸರ್ವಾಧಿಕಾರಿಯಂತೆ ವರ್ತಿಸಿದ್ದು, ರಾಜ್ಯಸರ್ಕಾರಗಳನ್ನು ಅಸ್ಥಿರಗೊಳಿಸಿದ್ದು, ಸಾಂವಿಧಾನಿಕ ಸಂಸ್ಥೆಗಳಲ್ಲಿ ರಾಜಕೀಯ ಪ್ರವೇಶವಾಗುವಂತೆ ಮಾಡಿದ್ದು, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ತನ್ನ ವಿರುದ್ಧ ದನಿ ಎತ್ತಿದವರನ್ನೆಲ್ಲಾ ಜೈಲಿಗೆ ತಳ್ಳಿ ಅತಿರೇಕದ ಪ್ರದರ್ಶನ ಮಾಡಿದ್ದು...ಇನ್ನು, ಇಂದಿರಾ ಪುತ್ರ ಸಂಜಯ ಗಾಂಧಿ ತುರ್ತುಪರಿಸ್ಥಿತಿಯಿದ್ದ ಸಂದರ್ಭದಲ್ಲಿ ನಡೆಸಿದರೆನ್ನಲಾದ ನಸ್‌ಬಂದಿ, ತುರ್ಕ್‌ಮನ್ ಗೇಟ್ ಪ್ರಕರಣಗಳು 1977ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಧೂಳೀಪಟ ಮಾಡಿದ್ದೂ ಅಲ್ಲದೆ ಮತದಾರರನ್ನು ನೆಹರು ಕುಟುಂಬದಿಂದ ಶಾಶ್ವತವಾಗಿ ದೂರ ಮಾಡಿತೆಂದೇ ತಿಳಿಯಲಾಗಿತ್ತು. ಇಂಥ ಸಂದರ್ಭದಲ್ಲಿ ಆಡಳಿತಕ್ಕೆ ಬಂದ ಜನತಾಪಕ್ಷದಲ್ಲಿ ದಕ್ಷ ಹಾಗೂ ಪ್ರಾಮಾಣಿಕರೇ ತುಂಬಿದ್ದರಿಂದ ದೇಶದಲ್ಲಿ ಕಾಂಗ್ರೆಸ್‌ಗೆ ಒಂದು ಶಕ್ತಿಶಾಲೀ ಪರ್ಯಾಯ ಉದಯವಾಯಿತೆಂದೇ ಭಾವಿಸಲಾಯಿತು. ಜಯಪ್ರಕಾಶ್ ನಾರಾಯಣ್ ಅವರ ಸಮ್ಮುಖದಲ್ಲಿ ಮಂತ್ರಿಗಳೆಲ್ಲರೂ ಗಾಂಧಿ ಸಮಾಧಿಯ ಮುಂದೆ ಸ್ವಹಿತಕ್ಕಾಗಿ ರಾಷ್ಟ್ರಹಿತವನ್ನು ಬಲಿಕೊಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದು, ಅಧಿಕಾರ ವಹಿಸಿಕೊಳ್ಳುತ್ತಿದ್ದಾಗಲೇ ಅಕ್ಕಿ ಮತ್ತು ಸಕ್ಕರೆ ಮುಕ್ತಮಾರುಕಟ್ಟೆಯಲ್ಲಿಯೇ ಕಡಿಮೆ ಬೆಲೆಗೆ ಸಿಗುವಂತಾದಾಗಿದ್ದು, ಅದೇ ರೀತಿ ಇತರೆ ಅಗತ್ಯ ವಸ್ತುಗಳ ಬೆಲೆಯೂ ಇಳಿಕೆಯಾಗಿದ್ದು, ವಾಜಪೇಯಿಯವರು ವಿದೇಶಾಂಗ ಸಚಿವರಾಗಿ ತೆಗೆದುಕೊಂಡ ನಿರ್ಧಾರಗಳು, ಆಡ್ವಾಣಿಯವರು ವಾರ್ತಾ ಮತ್ತು ಪ್ರಚಾರ ಖಾತೆಯಲ್ಲಿ ತಂದ ಸುಧಾರಣೆಗಳು, ಮಧು ದಂಡವತೆಯವರ ರೈಲ್ವೆ ಬಜೆಟ್, ಹೀಗೆ ಅನೇಕ ಜನಪರ ಕಾರ್ಯಕ್ರಮಗಳು ಆಗ ಬಂದವು. ಆದರೆ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಿಗೆಲ್ಲಾ ಅವರವರೇ ಕಿತ್ತಾಡಿಕೊಂಡು ಇಸ್ಪೀಟ್ ಎಲೆಗಳಂತೆ ಉದುರಿಹೊದರು. ಮತದಾರರು ಹಳೇ ಗಂಡನ ಪಾದವೇ ಗತಿ ಎಂಬಂತೆ ಮತ್ತೆ ಇಂದಿರಾ ಗಾಂಧಿಯವರ ತೆಕ್ಕೆಗೇ ಹೋದರು.
ಇಂದಿರಾಗಾಂಧಿಯವರ ತನಕ ಅದೃಷ್ಟದ ಜೊತೆಗೆ ಸ್ವಲ್ಪಮಟ್ಟಿನ ಅರ್ಹತೆ, ಅನುಭವವೂ ಸೇರಿಕೊಂಡಿತ್ತು. ನಂತರದ ದಿನಗಳಲ್ಲಿ ಕೇವಲ ಅದೃಷ್ಟವೇ ಪಾರಮ್ಯ ಸಾಧಿಸಿದ್ದು ಭಾರತೀಯರ ದುರ್ದೈವ. ರಾಜಕೀಯದ ಅನುಭವವೂ ಇಲ್ಲದೆ, ರಾಜಕೀಯಕ್ಕೆ ಬರಲೂ ಇಚ್ಛಿಸದೇ, ಪೈಲಟ್ ವೃತ್ತಿಯಲ್ಲಿ ಸಂತೃಪ್ತಿ ಕಂಡುಕೊಂಡಿದ್ದ ರಾಜೀವ್‌ರನ್ನು ಇಂದಿರಾ ಮರಣಾನಂತರ ಬಲವಂತವಾಗಿ ಎಳೆದುತಂದು ಸಿಂಹಾಸನದ ಮೇಲೆ ಕೂರಿಸಿ ಚಾಮರಾ ಬೀಸಲಾಯಿತು.
ರಾಜೀವ್ ಗಾಂಧಿ ನಂತರ ಅನಿವಾರ್ಯವಾಗಿ ನೆಹರು ವಂಶಸ್ಥರಲ್ಲದ ಕಾಂಗ್ರೆಸ್ಸಿಗರಿಗೆ ಅಧಿಕಾರ ಒಲಿದು ಬಂದಿತಾದರೂ, ಆಗ ಪ್ರಧಾನಿಯಾದ ಪಿ.ವಿ ನರಸಿಂಹರಾಯರು ಆಡಳಿತದಲ್ಲಿ ಸುಧಾರಣೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುತ್ತಿದ್ದಾಗಲೇ ಚುನಾವಣೆಯಲ್ಲಿ ಕಾಂಗ್ರೆಸ್ಸೇ ಸೋತು ಕಿಚಡಿ ಸರ್ಕಾರಗಳು ಬಂದು ದೇಶ ಮತ್ತೆ ನೆಹರು ವಂಶಸ್ಥರ ಕಡೆಗೇ ಮುಖಮಾಡುವಂತಾಯಿತು. ಸೋನಿಯಾಗಾಂಧಿಯವರ ವಿಷಯದಲ್ಲಂತೂ ನಾವು ಮೊದಲನೇ ಪ್ಯಾರಾದಲ್ಲಿ ಹೇಳಿರುವ ಅಷ್ಟೂ ಅದೃಷ್ಟಲಕ್ಷಣಗಳು ಒಂದರಮೇಲೊಂದು ಪೈಪೋಟಿ ನಡೆಸಿವೆ ಎಂದೇ ಹೇಳಬೇಕು. ರಾಜೀವ್ ನಂತರ ಅಧಿಕಾರವನ್ನು ವಹಿಸಿಕೊಳ್ಳಿ ಎಂದು ಅವರಿಗೆ ದುಂಬಾಲು ಬಿದ್ದಿದ್ದು, ಅವರು ನಾನು ಒಲ್ಲೆ ನಾನು ಒಲ್ಲೆ ಎಂದು ದೂರ ಸರಿದಿದ್ದು, ಅಧಿಕಾರ ಹಿಡಿಯಲು ಅವರು ಮಾನಸಿಕವಾಗಿ ಸಿದ್ಧರಾದ ತಕ್ಷಣವೇ ಸೀತಾರಾಂ ಕೇಸರಿಯವರನ್ನು ಹಠತ್ತಾನೆ ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದು ಒಂದು ಅದೃಷ್ಟದ ಸ್ಯಾಂಪಲ್!
ವಾಜಪೇಯಿಯವರ ನೇತೃತ್ವದಲ್ಲಿ ಬಂದ ಎನ್.ಡಿ.ಎ ಸರ್ಕಾರ ಚತುಷ್ಪಥ ರಸ್ತೆ ನಿರ್ಮಾಣ, ನದಿಗಳ ಜೋಡಣೆಯಂಥಾ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದಾಗ್ಯೂ, ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದ್ದಾಗ್ಯೂ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಎಲ್ಲರಿಗೂ ಮನವರಿಕೆಯಾಗಿದ್ದರೂ 2004ರ ಚುನಾವಣೆಯಲ್ಲಿ ಯಾಕೆ ಸೋಲನುಭವಿಸಬೇಕಾಗಿ ಬಂತು? ತಾನು ಗೆಲ್ಲುತ್ತೇನೆಂದು ಕನಸುಮನಸಿನಲ್ಲಿಯೂ ಎಣಿಸದಿದ್ದ ಕಾಂಗ್ರೆಸ್ ಹೇಗೆ ಜಯಭೇರಿ ಬಾರಿಸಿತು ಎಂಬುದು ಈಗಲೂ ಯಕ್ಷಪ್ರಶ್ನೆಯೇ.
1999ರಲ್ಲಿ ವಾಜಪೇಯಿಯವರ ಸರ್ಕಾರ ಪತನಗೊಂಡಾಗ ಅತ್ಯಂತ ಹುಮ್ಮಸ್ಸಿನಿಂದ ಪ್ರಧಾನಿಯಾಗಲು ಹೊರಟು ಸಮಾಜವಾದಿ ಪಕ್ಷದಿಂದ ಬೆಂಬಲಪತ್ರ ಸಿಗದೆ 272ರ ಮ್ಯಾಜಿಕ್ ಸಂಖ್ಯೆ ತಲುಪಲಾಗದೆ ನಿರಾಶೆ ಅನುಭವಿಸಿದ್ದ ಸೋನಿಯಾ 2004ರಲ್ಲಿ ಬಹುತೇಕ ಎಲ್ಲಾ ಪಕ್ಷಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಬೆಂಬಲಪತ್ರಗಳನ್ನು ಹಿಡಿದು ಅತ್ಯಂತ ಉತ್ಸಾಹದಿಂದ ರಾಷ್ತ್ರಪತಿಭವನಕ್ಕೂ ಹೊರಟಿದ್ದರು. ಪ್ರಮಾಣವಚನ ಸ್ವೀಕರಿಸುವ ದಿನ, ವೇಳೆ ಬಹುತೇಕ ಎಲ್ಲವೂ ನಿರ್ಧಾರವಾಗಿತ್ತು. ಆದರೆ ಅವರಿಗೆ ಪ್ರಧಾನಿಯಾಗಲು ಯಾವ ಅಂಶ ಅಡ್ಡಿ ಬಂದಿತೋ? ಒಟ್ಟಿನಲ್ಲಿ ರಾಷ್ಟ್ರಪತಿಭವನದಿಂದ ಹೊರಬಂದ ಸೋನಿಯಾ ಪ್ರಧಾನಿ ಹುದ್ದೆಯಿಂದ ಹಿಂದೆಸರಿಯುತ್ತಿರುವುದಾಗಿಯೂ ಆ ಸ್ಥಾನಕ್ಕೆ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಸೂಚಿಸುತ್ತಿರುವುದಾಗಿಯೂ ಘೋಷಿಸಿಬಿಟ್ಟರು. ಇದಕ್ಕೆ ಪ್ರತಿಯಾಗಿ ಇಡೀ ಸರ್ಕಾರವನ್ನೇ ನಿಯಂತ್ರಿಸಬಹುದಾದ ಹುದ್ದೆಯನ್ನು ಸೃಷ್ಟಿಸಿ ಅವರನ್ನು ಅದರಲ್ಲಿ ಪ್ರತಿಷ್ಠಾಪಿಸಲಾಯಿತಾದರೂ ಅವರು ಹಿಂದೆ ಸರಿದಿದ್ದನ್ನು ಮಹಾನ್ ತ್ಯಾಗವೆಂದೂ, ಸೋನಿಯಾರನ್ನು ಈ ದೇಶ ಕಂಡ ಮಹಾತ್ಯಾಗಿಯೆಂದೂ ಬಿಂಬಿಸಲಾಯಿತು. ಅವರ ಮಾರ್ಗದರ್ಶನದಲ್ಲಿ ಡಾ. ಸಿಂಗ್ ಅವರ ಸಾರಥ್ಯದಲ್ಲಿ ಸಾಗಿಬಂದ ಯು.ಪಿ.ಎ. 1 ಮತ್ತು ಯು.ಪಿ.ಎ. 2 ಸರ್ಕಾರಗಳು ದೇಶವನ್ನು ಹೇಗೆ ಹಳ್ಳಹಿಡಿಸಿದವು ಎನ್ನುವುದನ್ನು ನೋಡಿದ್ದೆವು.
ಇತ್ತ ರಾಹುಲ್ ಗಾಂಧಿಯವರನ್ನು ನೋಡಿ. 2014ರ ಚುನಾವಣೆಯಲ್ಲಿ ಗೆದ್ದರೆ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬುದೇ ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಆಶಯ. ಆದರೆ ಕಾಂಗ್ರೆಸಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಮಾತ್ರ ತಯಾರಿಲ್ಲ. ಏಕೆಂದರೆ  ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಅಬ್ಬರದ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟರೆ ಎಂಬ ಭಯ! ನಾಳೆ ಇದ್ದಕ್ಕಿದ್ದಂತೆ ಒಂದು ಸಮಯ ಕಾಂಗ್ರೆಸ್ ಗೆದ್ದುಬಿಟ್ಟರೆ ಇದು ರಾಹುಲ್ ಕಮಾಲ್, ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸದೇ ಇದ್ದುದೇ ಸೋಲಿಗೆ ಕಾರಣ ಎಂದು ಇಡೀ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಒಕ್ಕೊರಲಿನಿಂದ ಅರಚುತ್ತದೆ.
ಇನ್ನು ಭಾರತೀಯರ ದುರಾದೃಷ್ಟವನ್ನು ನೋಡಿ. ಈ ಬಾರಿಯಾದರೂ ದೇಶಕ್ಕೆ ಒಂದು ಒಳ್ಳೆಯ ಕಾಲ ಬರಲಿದೆ, ದಕ್ಷ, ಪ್ರಾಮಾಣಿಕ, ದೇಶದ ಅಭಿವೃದ್ಧಿಗೆ ಪೂರಕವಾದ ನಾಯಕತ್ವ ದೊರಕಲಿದೆ, ಈ ಹತ್ತು ವರ್ಷಗಳ ಯು.ಪಿ.ಎ ಅಧಿಕಾರದಿಂದ ಬೇಸತ್ತಿರುವ ಮತದಾರರೆಲ್ಲಾ ಏಕಪ್ರಕಾರವಾಗಿ ಮತಚಲಾಯಿಸಿ ಸ್ಥಿರಸರ್ಕಾರವೊಂದನ್ನು ಆಯ್ಕೆ ಮಾಡಲಿದ್ದಾರೆ, ಅದರಿಂದ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ಕನಸು ಕಾಣುತ್ತಿರುವಾಗಲೇ ಅರವಿಂದ್ ಕೇಜ್ರಿವಾಲ್ ಎಂಬ ರೂಪದಲ್ಲಿ ಬಂದು ಅದನ್ನು ಭಗ್ನಗೊಳಿಸಲು ನೋಡುತ್ತಿದೆ. ಸತ್ಯಹರಿಶ್ಚಂದ್ರರ ಪಕ್ಷವೆಂದೇ ಮಾಧ್ಯಮಗಳಿಂದ ಬಿಂಬಿಸಲ್ಪಟ್ಟಿರುವ ಇವರ ಪಕ್ಷ ನಗರಪ್ರದೇಶಗಳಲ್ಲಿ ಹಾಗೂ ವಿದ್ಯಾವಂತ ಮತದಾರರಲ್ಲಿ ಸಂಚಲನ ಮೂಡಿಸಿರುವುದಂತೂ ಸತ್ಯ. ಇವರಿಗೆ ಸ್ವಂತಬಲದ ಮೇಲೆ ಅಧಿಕಾರಕ್ಕೆ ಬರುವ ಯೋಗ್ಯತೆ ಇನ್ನೂ ಬಂದಿಲ್ಲದಿದ್ದರೂ, ಅಂತಹ ಅವಕಾಶ ಇರುವವರ ಕಾಲೆಳೆದು ರಾಜಕೀಯ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡಿ ಅಸ್ಥಿರತೆ ಉಂಟು ಮಾಡುವಷ್ಟು ಯೋಗ್ಯತೆ ಮಾತ್ರ ಖಂಡಿತಾ ಬಂದಿದೆ! ಇವರ ಬಲದಿಂದ ಮೋದಿಯಂಥವರನ್ನು ತಡೆದು ಮತ್ತೆ ಕಿಚಡಿ ಸರ್ಕಾರಗಳು ಬಂದೂ, ಉರುಳಿ, ಜನಗಳು ಬೇಸತ್ತು ಹಿಂದಿನಂತೆಯೇ ಈ ದೇಶವನ್ನಾಳುವ ಯೋಗ್ಯತೆ ನೆಹರೂ ಮನೆತನದವರಿಗೆ ಬಿಟ್ಟು ಬೇರೆಯಾರಿಗೂ ಇಲ್ಲವೆಂದು ತೀರ್ಮಾನಿಸಿ 2014 ಇಲ್ಲಾ 2016ರಲ್ಲೋ ಮತ್ತೆ ಕಾಂಗ್ರೆಸ್ಸನ್ನು ಪೂರ್ಣಬಹುಮತದೊಂದಿಗೆ ಗೆಲ್ಲಿಸಿಬಿಟ್ಟರೆಂದರೆ ಆಯಿತು, ನೆಹರು ಮನೆತನದವರ ಅದೃಷ್ಟ ಭಾರತೀಯರ ದುರಾದೃಷ್ಟವನ್ನು ನೋಡಿ ಅಟ್ಟಹಾಸದಿಂದ ನಕ್ಕಂತೆಯೇ.

-ಫಣಿರಾಮಚಂದ್ರ
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.