ಬದಲಾವಣೆಗೆ ಆಧಾರ್ ನಾಂದಿಯೊ ಅಥವಾ ಕೇವಲ ಪ್ರಚಾರವೊ?
ಕೇಂದ್ರದ ಯುಪಿಎ ಸರ್ಕಾರದ ಆಡಳಿತದ ಮುಖ್ಯ ಲಕ್ಷಣಗಳಲ್ಲೊಂದು - ತನ್ನ ಯೋಜನೆಗಳಿಗೆ ಸಾರ್ವಜನಿಕರ ಹಣದ ವಿನಿಯೋಗದಲ್ಲಿ ನಿರಂತರವಾಗಿ ಅಜಾಗರೂಕತೆ ಮತ್ತು ಬೇಜಾವಾಬ್ದಾರಿ ವರ್ತನೆಗಳನ್ನು ಪ್ರದರ್ಶಿಸುತ್ತಾ ಬಂದಿದೆ.
ಅಂತಹುದೇ ಒಂದು ಯೋಜನೆಯೆಂದರೆ - ವಿಶಿಷ್ಟ ಗುರುತಿನ ಚೀಟಿ (ಯುಐಡಿ) "ಆಧಾರ್" ಯೋಜನೆ ವ್ಯಾಪಕ ಚಿಂತನೆ, ನಿರ್ದಿಷ್ಟ ಸಿದ್ದತೆಗಳು, ಅನುಷ್ಠಾನದ ಬಗೆ, ಖಚಿತ ಫಲಿತಾಂಶಗಳು ಮತ್ತು ಪರಿಣಾಮಗಳ ವಿಷಯದಲ್ಲಿ ಆದ್ಯಂತವಾಗಿ ಅಸಮರ್ಪಕತೆಗಳೆ ತುಣಬಿರುವ ಈ ಯೋಜನೆಗೆ ಈಗಾಗಲೇ ತೆರಿಗೆದಾರರ ಸಾವಿರಾರು ಕೋಟಿ ಖರ್ಚಾಗಿದೆ. ಇನ್ನೂ ದು-ಖಕರ ಸಂಗತಿಯೆಂದರೆ, ಯೋಜನೆಯ ಪ್ರಚಾರ ಮತ್ತು ಹೊಗಳಿಕೆಗಳನ್ನು ಸಂಸತ್ತಿನ ಒಳಗಾಗಲಿ ಅಥವಾ ಸಾರ್ವಜನಿಕ ವಲಯದಲ್ಲಾಗಲಿ ಪ್ರಶ್ನಿಸುವ, ಚರ್ಚಿಸುವ, ಸಾಧಕ-ಬಾಧಕಗಳನ್ನು ಅಭ್ಯಸಿಸುವ, ಅವಕಾಶವನ್ನು - ಮೇಲಿಂದ ಮೇಲೆ ಕೇಳಿದಾಗಲೂ - ನೀಡಲಾಗಿಲ್ಲ. ಈ ಬಗೆಯಲ್ಲಿ ಪ್ರಚಾರಪಡೆದ ಒಂದು ಯೋಜನೆಯನ್ನು, ಯಾವ ಸಾಧಕ-ಬಾಧಕಗಳನ್ನು ಪರಿಗಣಿಸದೆ, ಸಂಸತ್ತಿನಲ್ಲೂ ಯಾವ ಚರ್ಚೆ-ವಿಮರ್ಶೆಗಳಿಲ್ಲದೆ, ಸಂಸತ್ತಿನ ಸ್ಥಾಯಿ ಸಮಿತಿಯ ಗಂಭೀರ ಸೂಚನೆಗಳ ಹೊರತಾಗಿಯೂ ಅವಕಾಶ ನೀಡಿದ್ದೇವೆ.
ತಂತ್ರಜ್ಞಾನ, ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಟದ ಕಿಂಚಿತ್ ಅನುಭವದ ಹಿನ್ನಲೆಯಿಂದ ನಾನು ಹೇಳುವುದೆಂದರೆ - ಪ್ರಸ್ತುತ ರೂಪದಲ್ಲಿ, ಆಧಾರ್ ಯೋಜನೆಯು, ಕೇವಲ ಪ್ರಚಾರದ ಅಡಿಪಾಯದ ಮೇಲೆ ನಿಂತಿರುವ ಕಾಗದದ ಅರಮನೆಯಂತಿದ್ದು ಭ್ರಷ್ಟಾಚಾರ-ನಿರ್ಮೂಲನೆ ಮುಂತಾದ ಯಾವುದೇ ಶ್ಲಾಘನೀಯ ಉದ್ದೇಶಗಳನ್ನು ಸಾಧಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಪ್ರಚಾರದ ಪರದೆಗಳನ್ನು ಸರಿಸಿ, ಯೋಜನೆಯನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ, ಸಹಜವಾಗಿ ಕೆಲವು ವಾಸ್ತವಗಳು ಸ್ಫುಟವಾಗಿ ಕಾಣುತ್ತವೆ. ಅಂತಹ ಕೆಲವು ವಾಸ್ತವ ಸಂಗತಿಗಳೆಂದರೆ...
ಆಧಾರ್ ಭಾರತೀಯರಿಗೆ ಗುರುತುಗಳನ್ನು ನೀಡುವುದಿಲ್ಲ: ಮೂಲಭೂತವಾಗಿ ಆಧಾರ್ ಎಂದರೆ ಸಮಸ್ತ ಭಾರತೀಯರ ಗುರುತಿನ ಕುರುಹು ಎಂದು ಎಲ್ಲರೂ ನಂಬಿದ್ದಾರೆ. ಇಡೀ ಆಧಾರ್ ಯೋಜನೆಯ ಪ್ರತಿಪಾದನೆಗಳಲ್ಲಿ ಅತ್ಯಂತ ಸ್ಫೋಟಕ ಹಸಿ ಸುಳ್ಳೆಂದರೆ ಇದೇ! ಒಬ್ಬ ವ್ಯಕ್ತಿಯ (ಅದು ನಾಗರಿಕನಾಗಿರಲಿ, ವಿದೇಶಿಯಾಗಿರಲಿ ಅಥವಾ ಅಕ್ರಮ ವಲಸೆಗಾರನಾಗಿರಲಿ) ಅವನ ಬಳಿ ಈಗಾಗಲೆ ಇರುವ ಗುರುತಿನ ಪುರಾವೆಯನ್ನು (ಅದು ಅಸಲಿಯಾಗಲಿ, ನಕಲಿಯಾಗಲಿ) ಪಡೆದುಕೊಂಡು, ಆಧಾರ್ ಒಂದು ಸಂಖ್ಯೆಯನ್ನು ನೀಡುತ್ತದೆ. ಅಲ್ಲಿ ಯಾವುದೇ ಗುರುತಿನ ಪರಿಶೀಲನೆ (ಐಡೆಂಟಿಟಿ ವೆರಿಫಿಕೇಷನ್) ಇಲ್ಲದಿರುವುದರಿಂದ ಯಾವ ಗುರುತನ್ನು ನೀಡಿದಂತಾಗಲಿಲ್ಲ. ಆಧಾರ್ ಮಾಡುವುದೆಂದರೆ, ಸಲ್ಲಿಸಿದ (ನಕಲಿಯೂ ಆಗಿರಬಹುದಾದ) ಪುರಾವೆಯೊಂದಿಗೆ ವ್ಯಕ್ತಿಯ ಐರಿಸ್ ್ಕಣ್ಪೊರೆ) ಮತ್ತು ಬಯೊವುಟ್ರಿಕ್ ಮಾಹಿತಿಯನ್ನು ಸೇರಿಸುತ್ತದಷ್ಟೆ. ಅಂದರೆ, ಎಕ್ಸ್ ಅನ್ನುವ ವ್ಯಕ್ತಿ ತನ್ನ ಚಿತ್ರ ಮತ್ತು ವಿಳಾಸದ ನಕಲಿ ದಾಖಲೆಯನ್ನು ಹೊಂದಿದ್ದಲ್ಲಿ, ಆಧಾರ್ ಮುಖಾಂತರ, ತನ್ನ ಫೋಟೊ ಜೊತೆಗೆ ಇನ್ನು ಮುಂದೆ ತನ್ನ ಐರಿಸ್ ಮತ್ತು ಬಯೊವುಟ್ರಿಕ್ ಮಾಹಿತಿಯನ್ನೂ ಸೇರಿಸಿ, ಆ ನಕಲಿ ದಾಖಲೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಏಕೆಂದರೆ, ಆಧಾರ್ ಯಾವ ಪರಿಶೀಲನೆಯನ್ನು ಮಾಡುವುದಿಲ್ಲ.
ಇದರ ಮೇಲೆ ಆಧಾರ್, ನಕಲಿ ಅರ್ಜಿಗಳನ್ನು ಬೇರ್ಪಡಿಸಲು ವಿಚಿತ್ರ ವಿಧಾನವನ್ನು ಬಳಸುತ್ತಿದೆ. ವಿಶಿಷ್ಟ ಗುರುತು ಪ್ರಾಧಿಕಾರವು ಒಬ್ಬ ವ್ಯಕ್ತಿಯ ಗುರುತು ಪುರಾವೆಗಳನ್ನು ನಿಷ್ಕರ್ಷಿಸುವ ವ್ಯವಸ್ಥೆಯನ್ನು, ಜವಾಬ್ದಾರಿಯಿಲ್ಲದೆ ಬೇಕಾಬಿಟ್ಟಿಯಾಗಿ ನಿರ್ವಹಿಸುವ ಎಲ್ಲ ಸಾಧ್ಯತೆಯಿರುವ ಸಣ್ಣ ಸಣ್ಣ ಖಾಸಗಿ ಸಂಸ್ಥೆಗಳಿಗೆ ನೀಡಿ, ತಾನು ಬೇಜವಾಬ್ದಾರಿ ಪ್ರದರ್ಶಿಸಿದೆ. ನೋಂದಣಿಯ ಸಂದರ್ಭದಲ್ಲಿ ಈ ಖಾಸಗಿ ಸಂಸ್ಥೆಗಳ ಹಿನ್ನಲೆ, ಯೋಗ್ಯತೆಗಳನ್ನು ಪರಿಶೀಲಿಸದೆ, ನಂತರದಲ್ಲಿ ಅವುಗಳ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ಮಾಡದೆ ಮತ್ತು ಕೆಲ ಸಂಸ್ಥೆಗಳ ಅಪರಾಧ ಕೃತ್ಯಗಳನ್ನೂ ಕೂಡ ನಿರ್ಲಕ್ಷಿಸಿರುವುದರಿಂದ, ಇಂತಹ ಸಂಸ್ಥೆಗಳನ್ನು ಮತ್ತು ಗುತ್ತಿಗೆದಾರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಆಧಾರ್, ತನ್ನ ಕಾರ್ಯ ನಿರ್ವಹಣೆಯಲ್ಲಿ ಸೋತಿದೆಯೆಂದೇ ಹೇಳಬೇಕು. ಸಂಸತ್ತಿನಲ್ಲಿ ನಾನು ನಿರ್ದಿಷ್ಟವಾಗಿ ಆಧಾರ್ನ ವಂಚನೆ ನಿದರ್ಶನಗಳ ಬಗ್ಗೆ ಪ್ರಶ್ನೆ ಮಾಡಿದಾಗಲೂ, ಸರ್ಕಾರ ಇಲ್ಲಿಯವರೆಗೂ ಉತ್ತರ ನೀಡಿಲ್ಲ!
ಇತ್ತೀಚೆಗೆ ಆಧಾರ್ ತನ್ನ ಅಡಿಬರಹವನ್ನು 'ಒಂದು ಭಾರತ- ಒಂದು ಗುರುತು' ಎಂದು ಬದಲಿಸಿದೆ. ಇದು ಮತ್ತೆ ಪದಗಳೊಂದಿಗೆ ಅದು ಆಡುತ್ತಿರುವ ಅಪ್ರಾಮಾಣಿಕ ನಾಟಕವೆ ಸರಿ. ಸ್ವದೇಶಿ-ವಿದೇಶಿ ನಾಗರೀಕರನ್ನು ವರ್ಗೀಕರಿಸುವ ಯಾವ ಪ್ರಯತ್ನವನ್ನೂ ಆಧಾರ್ ಮಾಡಿಲ್ಲ. ಒಂದು ರಾಷ್ಟ್ರೀಯ ಗುರುತಿನ ವೇದಿಕೆಯು, ಕನಿಷ್ಟ ಯಾರು ದೇಶದ ನಾಗರಿಕರು, ಯಾರಲ್ಲ ಎಂಬುದನ್ನಾದರೂ ಹೇಳಬೇಕಲ್ಲವೇ? ಇದರಿಂದ ಉದ್ಭವಿಸುವ ಮತ್ತೊಂದು ಪ್ರಶ್ನೆಯೆಂದರೆ ತೆರಿಗೆದಾರರ ಹಣದಿಂದ ನೀಡಲಾಗುವ ಸಹಾಯಧನ (ಸಬ್ಸಿಡಿ), ನಗದು ವರ್ಗಾವಣೆ ಇತ್ಯಾದಿ ಯೋಜನೆಗಳು ದೇಶದ ನಾಗರಿಕರಲ್ಲದವರಿಗೆ ಮತ್ತು ಅಕ್ರಮವಲಸಿಗರಿಗೂ ದೊರೆಯುವಂತಾಗುವುದಿಲ್ಲವೆ? ಬಜೆಟ್ನ ಹಣದಿಂದ ನಡೆಯುವ ಎಲ್ಲ ಯೋಜನೆಗಳ ಲಾಭ ಅರ್ಹ ನಾಗರಿಕರಿಗೆ ಮಾತ್ರ ದೊರೆಯಬೇಕಲ್ಲವೆ? ಇದೊಂದು ಆತ್ಯಂತ ಮಹತ್ವದ ಮತ್ತು ಮೂಲಭೂತ ವಿಷಯವಾಗಿದ್ದು ಬಹಳ ಪಾರದರ್ಶಕವಾಗಿ ಈ ಕುರಿತು ಚರ್ಚೆಗಳಾಗಬೇಕಿತ್ತು. ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಯ ಇತ್ತೀಚಿನ ಸಭೆಯಲ್ಲಿ, ಇಲ್ಲಿಯವರೆಗೂ ನೀಡಲಾಗಿರುವ ಆಧಾರ್ ಸಂಖ್ಯೆಗಳಲ್ಲಿ ಸ್ವದೇಶಿಯರೆಷ್ಟು ಮತ್ತು ವಿದೇಶಿಯರೆಷ್ಟು ಎಂದು ನಾನು ಯುಐಡಿ ಪ್ರಾಧಿಕಾರವನ್ನು ಕೇಳಿದಾಗ, "ನಮಗೆ ಗೊತ್ತಿಲ್ಲ" ಎಂದವರು ಉತ್ತರಿಸಿದರು!
ಬೇರೆ ದೇಶದ ಪ್ರಜೆಗಳಿಗೆ ಮತ್ತು ನಿರಾಶ್ರಿತರಿಗೆ ಆಧಾರ್ ದಾಖಲೆ ನೀಡಲಾಗುತ್ತಿದೆಯೆಂಬ ನಮ್ಮ ಗುಪ್ತಚರ ಇಲಾಖೆಯ (ಐಬಿ) ಗಂಭೀರ ಸವಾಲನ್ನು ಕೂಡ ಆಧಾರ್ ಪ್ರಾಧಿಕಾರ ಎದುರಿಸುತ್ತಿದೆ. ಅನಿವಾಸಿ ಭಾರತೀಯರು ಮತ್ತು ಭಾರತದಲ್ಲಿ ನೆಲೆಸಿರುವ ವಿದೇಶಿಯರು ಆಧಾರ್ ಕಾರ್ಡ್ಗಳನ್ನು ಪಡೆದುಕೊಂಡಿರುವ ಸಾಧ್ಯತೆಗಳ ಬಗ್ಗೆ ಆಕ್ಷೇಪಿಸಿರುವ ಐಬಿ, ಅಂಥ ಅರ್ಜಿದಾರರ ಹಿನ್ನೆಲೆ, ಸಲ್ಲಿಸಲಾದ ದಾಖಲೆಗಳ ಸೂಕ್ತ ಪರಿಶೀಲನೆಗಳಿಲ್ಲದೆ ಆಧಾರ್ ಕಾರ್ಡ್ ನೀಡಲಾಗಿದೆ ಎಂದಿದೆ. ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡನ್ನು ನೀಡುವಂತಿಲ್ಲವೆಂದು ಸೆಪ್ಟೆಂಬರ್ 23, 2013ರಂದು ಭಾರತದ ಸರ್ವೋಚ್ಚ ನ್ಯಾಯಾಲಯ ನೀಡಿದಾಗ ಈ ಸಂಗತಿಯು ಬೆಳಕಿಗೆ ಬಂತು.
ಇದೆಲ್ಲದರ ತಾತ್ಪರ್ಯವೆಂದರೆ - ನೋಂದಣಿ ಹಂತದ ಅವ್ಯವಸ್ಥೆ ಅಥವಾ ಸೂಕ್ತವಾಗಿ ಪರಿಶೀಲಿಸದ ಗುರುತು (ಐಡೆಂಟಿಟಿ) ದಾಖಲೆಗಳ ಸಂಗ್ರಹ ಹಾಗೂ ನಾಗರಿಕರಲ್ಲದವರಿಗೆ ಮತ್ತು ಅಕ್ರಮವಲಸಿಗರಿಗೆ ಆಧಾರ್ ಸಂಖ್ಯೆ ನೀಡಲಾಗುತ್ತಿರುವುದರಿಂದ, ತನ್ನ ಮಾಹಿತಿಗಳ ಸಮಗ್ರತೆಯ ಬಗ್ಗೆಯೇ ಗಂಭೀರ ಸವಾಲುಗಳಿರುವ ಮಾಹಿತಿ ಕಣಜವನ್ನು (ಡೇಟಾಬೇಸ್) ಆಧಾರ್ ಸೃಷ್ಟಿಸುತ್ತಿದೆ. ಇದರ ಪರಿಣಾಮವೆಂದರೆ, ಇದರಿಂದ ಮತ್ತಷ್ಟು ಅಪಾಯಕಾರಿ ಸಮಸ್ಯೆಗಳು ಉದ್ಭವಕ್ಕೆ ಇದು ಕಾರಣವಾಗುತ್ತಿದೆ. ಆಶ್ಚರ್ಯಕರ ಸಂಗತಿಯೆಂದರೆ ರಾಷ್ಟ್ರೀಯ ಭದ್ರತೆ, ಪೌರತ್ವ ಮತ್ತು ಅಂತಹ ಸೂಕ್ಷ್ಮ ವಿಚಾರಗಳು ಬೆಸೆದುಕೊಂಡಿದ್ದರೂ, ತೀರ ಸಹಜವಾಗಿ ಆಧಾರ್ ಕೇವಲ ಒಂದು ಗುರುತು ಮಾತ್ರವೆಂದು ಹಗುರಾಗಿ ವಾದಿಸಲಾಗುತ್ತಿದೆ. ಪೌರತ್ವದ ಬಗ್ಗೆ ಸ್ವಲ್ಪ ಅರಿವಿರುವ ಯಾರಿಗಾದರೂ ಕೂಡ ತಿಳಿದಿರುವುದೆಂದರೆ - ನಮ್ಮ ಸಂವಿಧಾನದ ಪ್ರಕಾರ, ಪೌರತ್ವವು ಪರಿಶೀಲಿಸಿದ ನಂತರವಷ್ಟೇ ಸ್ವೀಕರಾರ್ಹವೆ ಹೊರತು ಕೇವಲ ಘೋಷಿಸುವುದರಿಂದಲ್ಲ ಆದ್ದರಿಂದ ಪ್ರಸ್ತುತ ರೂಪದಲ್ಲಿ, ಆಧಾರ್ ಒಂದು ಗುರುತು ಆಗಲು ಸಾಧ್ಯವಿಲ್ಲ.
ಯೋಜನೆಗಳ ನಿರ್ದಿಷ್ಟ ಲಾಭಗಳಿಗೆ ಅರ್ಹ ವ್ಯಕ್ತಿಯನ್ನು ಗುರುತಿಸಲು ಸಹಾಯಕವೆಂಬ ಆಧಾರ್ನ ಮೂಲಭೂತ ಪರಿಕಲ್ಪನೆಯೇ ಕುಸಿದ ಕಟ್ಟಡವಾಗಿದೆ. ಏಕೆಂದರೆ, ಭ್ರಷ್ಟಾಚಾರ ಮತ್ತು ಸೋರುವಿಕೆಗಳಿಗೆ ಕಾರಣವಾಗಿರುವ ಅದೇ ದಾಖಲೆಗಳನ್ನೆ, ಅಂದರೆ ಅದೇ ಬಿಪಿಎಲ್ ಕಾರ್ಡುಗಳು ಮತ್ತು ಇನ್ನಿತರ ಸಾಂಪ್ರದಾಯಿಕ ಗುರುತಿನ ದಾಖಲೆಗಳನ್ನೇ ಅಧಾರ್ ಬಳಸುತ್ತಿದೆ. ಇದರರ್ಥ, ಕಾಲಾನುಕ್ರಮದಿಂದ ರಾಜಿಯಾದ ಅದೇ ಮಾಹಿತಿ ಮತ್ತು ಗುರುತು ದಾಖಲೆಯನ್ನೇ ಆಧಾರ್ ಬಳಸುತ್ತಿದೆ. ಅನುದಾನದ ಗುರಿಸಾಧನೆಯಲ್ಲಿ ಸುಧಾರಣೆಯಾಗಿದೆ ಎಂಬ ಯಾವ ಮಾಹಿತಿಯನ್ನಾಗಲಿ, ಪುರಾವೆಯನ್ನಾಗಲಿ ಸರ್ಕಾರ ಒದಗಿಸಿಲ್ಲ. ಎಲ್.ಪಿ.ಜಿಗಳಿಗೆ ನೇರ ಲಾಭ ವರ್ಗಾವಣೆಯೂ ಸೇರಿದಂತೆ ಅನುದಾನದ ಸೋರಿಕೆಯನ್ನು ತಡೆಗಟ್ಟಬಹುದೆಂಬ ಎತ್ತರದ ಆಶ್ವಾಸನೆಗಳನ್ನು ಸಮರ್ಥಿಸಲು ಸರ್ಕಾರವಾಗಲಿ, ವಿಶಿಷ್ಟ ಗುರುತು ಪ್ರಾಧಿಕಾರವಾಗಲಿ ಯಾವುದೇ ವಾಸ್ತವ ಸಾಕ್ಷ್ಯವನ್ನೊದಗಿಸಿಲ್ಲ. ಇನ್ನೂ ಹೇಳಬೇಕೆಂದರೆ, ಎಲ್.ಪಿ.ಜಿ ಸಿಲೆಂಡರ್ ವಿಷಯವೇ ಸೋರಿಕೆಯನ್ನು ತಡೆಯಲು ಆಧಾರ್ ಸಹಾಯಕವಲ್ಲವೆಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಎಟಿಎಂ ಬ್ಯಾಂಕಿಂಗ್ ಮುಂತಾದ ವಿಷಯಗಳಲ್ಲಿ ಬಯೋವುಟ್ರಿಕ್ ಎಟಿಎಂಗಳನ್ನು ಅಳವಡಿಸಿಕೊಳ್ಳಲು ಬ್ಯಾಂಕ್ಗಳನ್ನು ಒತ್ತಾಯಿಸುವುದರಿಂದ, ಆ ಅಧಿಕ ವೆಚ್ಚಗಳು ಗ್ರಾಹಕರಿಗೆ ವರ್ಗಾಯಿಸಲ್ಪಟ್ಟು ಬ್ಯಾಂಕಿಂಗ್ ವೆಚ್ಚವು ಅಧಿಕವಾಗುವುದು.
ಆಧಾರ್ ದೊಡ್ಡ ಪ್ರಮಾಣದಲ್ಲಿ ಜನರ ವಿವರಗಳನ್ನು ಸಂಗ್ರಹಿಸಿ ತನ್ನ ಡೇಟಾಬೇಸ್ನಲ್ಲಿ ಇವುಗಳನ್ನು ಕೇಂದ್ರೀಕರಿಸಿ ಶೇಖರಿಸಿಡುತ್ತದೆ. ಸಹಜವಾಗಿ, ದೃಢವಾದ ಗೌಪ್ಯತೆಯ ಕಾನೂನುಗಳಿಲ್ಲದ ಮತ್ತು ಈ ವಿಷಯದ ಬಗ್ಗೆ ಇನ್ನೂ ಸಾಕಷ್ಟು ವಿಚಾರ ಮಂಥನಗಳು ನಡೆಯದ ಭಾರತದಂತಹ ದೇಶದಲ್ಲಿ, ಮಾಹಿತಿಯ ಗೌಪ್ಯತೆಯ ಕುರಿತು ಸಂಶಯಗಳಿವೆ. ಭಾರತದಲ್ಲಿ ಸರ್ಕಾರಗಳು ಮತ್ತು ಅಧಿಕಾರಶಾಹಿಗಳ ಹಿಂದಿನ ನಡಾವಳಿಗಳನ್ನು ಗಮನಿಸಿದಾಗ ಈ ಗೌಪ್ಯತೆಯ ವಿಷಯ ಮತ್ತಷ್ಟು ಅಪಾಯಕಾರಿಯಾಗಿದೆ.
ಆಧಾರ್ನ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕಗಳು ಬಹಳ ಪ್ರಭಾವಶಾಲಿಯಾಗಿವೆ ನಿಜ, ಆದರೆ ಅದು ತನ್ನ ವಾಸ್ತವ ಸತ್ಯಗಳನ್ನು ದಾಟಿ ಬಹಳ ಮುಂದೆ ಬಂದುಬಿಟ್ಟಿದೆ. ತನ್ನನ್ನು 'ತಂತ್ರಜ್ಞಾನ ಕೌಶಲ್ಯದ ಅಭೂತಪೂರ್ವ ಕಾರ್ಯಕ್ರಮ'ವೆಂದು ಕರೆಸಿಕೊಳ್ಳುವುದು ಖಂಡಿತವಾಗಿಯೂ ವಾಸ್ತವವನ್ನು ಹಿಂದಿಕ್ಕಿದ ಪ್ರಚಾರದ ಮೇಲಾಟವೆಂದೆ ಹೇಳಬೇಕು. ಆಧಾರ್ ಒಂದು ಗುರುತಿನ ಮಾಹಿತಿ ಮತ್ತು ಬಯೋವುಟ್ರಿಕ್ ದತ್ತಾಂಶ ಸಂಗ್ರಹದ ಕಾರ್ಯಕ್ರಮ. ಮತ್ತು ಅದು ಬಳಸುತ್ತಿರುವುದು ವಿದೇಶಿ ಹಾರ್ಡ್ವೇರ್-ಸಾಫ್ ವೇರ್ಗಳನ್ನು. ತಾಂತ್ರಿಕವಾಗಿಯೂ ಇದೇನು ಅಭೂತಪೂರ್ವವಲ್ಲ, ಈ ಮೊದಲೆ ಇತರೆಡೆ ಇದನ್ನು ಮಾಡಲಾಗಿದೆ. ಗಮನಾರ್ಹವೆಂದರೆ ಇದರ ಅಗಾಧ ಗಾತ್ರ ಮತ್ತು ಅಗತ್ಯ ಶ್ರಮ - ಮತ್ತು ಅದರಲ್ಲಿ ಕೂಡ ಭಾರತ ಸರ್ಕಾರದ ಅನೇಕ ವ್ಯಾಪಕ ನಾಗರಿಕ ಮಾಹಿತಿ ಸಂಗ್ರಹಣೆಯ ಕಾರ್ಯಕ್ರಮಗಳನ್ನು ನಾವು ಈಗಾಗಲೆ ನೋಡಿದ್ದೇವೆ - ಅದು ಚುನಾವಣಾ ಆಯೋಗವಿರಬಹುದು, ಜನಗಣತಿಯಾಗಿರಬಹುದು, ರಾಷ್ಟ್ರೀಯ ಜನಸಂಖ್ಯೆ ನೋಂದಣಿಯಾಗಿರಬಹುದು (ಎನ್.ಪಿ.ಆರ್). ಆದರೆ ಇವುಗಳಿಗೆ ಆಧಾರ್ನಷ್ಟು ಪ್ರಚಾರವಿರಲಿಲ್ಲ ಅಷ್ಟೆ!
ಆಧಾರ್ ಒಂದು ವಿಶಿಷ್ಟ ಮತ್ತು ವರ್ಗಾಯಿಸಬಹುದಾದ ದಾಖಲೆಯೆಂದು ಹೇಳುವುದು ಸ್ವಾಭಾವಿಕವಾದದನ್ನು ಎತ್ತಿ ಹೇಳಿದಂತೆ. ಹಾಗಾದರೆ ಇತರ ಗುರುತಿನ ದಾಖಲೆಗಳು ಹಾಗಿಲ್ಲವೆ? ವಾಸ್ತವವಾಗಿ ಎಲ್ಲ ಗುರುತಿನ ದಾಖಲೆಗಳು ವಿಶಿಷ್ಟ ಮತ್ತು ವರ್ಗಾಯಿಸಬಹುದಾದದ್ದೆ - ಅದು ಪಾಸ್ಪೋರ್ಟ್, ಡ್ರೈವಿಂಗ್ ಲೈಸನ್ಸ್ ಮುಂತಾದ ಯಾವುದೇ ಆಗಿರಲಿ. ನಿಜವಾಗಿ, ಪಾಸ್ಪೋರ್ಟ್ಗಳನ್ನು ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಬಳಸಬಹುದು, ಆದರೆ ಹಾಗೆ ಆಧಾರ್ ಅನ್ನು ಬಳಸಲು ಬರುವುದಿಲ್ಲ, ಏಕೆಂದರೆ ಅದು ನಾಗರಿಕತ್ವವನ್ನು ಸಾಧಿಸುವುದಿಲ್ಲ.
ಉತ್ತಮ ಧ್ಯೇಯೋದ್ದೇಶಗಳಿಂದಲೇ ಪ್ರಾರಂಭವಾದ ಆಧಾರ್, ಹೀಗೆ ಬದಲಾಗಲು ಕಾರಣವೇನೆಂಬುದು ಮಾತ್ರ ನಿಗೂಢವಾಗಿದೆ. ಯಾವುದು ಆಡಳಿತವನ್ನು ಉತ್ತಮಗೊಳಿಸಲು - ಆರ್ಥಿಕವಾಗಿ ಹೊರೆಯಾಗದ, ಪರಿಣಾಮಕಾರಿ ತಂತ್ರಜ್ಞಾನ ಬಳಕೆಯ ನಿದರ್ಶನದ ಮತ್ತು ಶ್ರದ್ಧೆಯ ಕಾರ್ಯಕ್ರಮವಾಗಿ ಮತ್ತು ಆಮೂಲಕ ನಾಗರಿಕ ಗುರುತಿನ ಪ್ರಕ್ರಿಯೆಯ ಒಂದು ಬಲಿಷ್ಠ ವ್ಯವಸ್ಥೆಯಿಂದ ನಾಗರಿಕರಿಗೆ ಲಾಭವನ್ನು ತಲುಪಿಸುವ ಅತ್ಯಂತ ವಿಶ್ವಾಸಾರ್ಹವಾದ ಮಾಹಿತಿ ಸಂಗ್ರಹವಾಗಬೇಕಿತ್ತೊ ಅಂತಹ ಕಾರ್ಯಕ್ರಮ ಈ ಧ್ಯೇಯೋದ್ದೇಶಗಳನ್ನು ತಲುಪಲಾಗದೆ ಬಹಳ ಹಿಂದೆ ಉಳಿದುಬಿಟ್ಟಿದೆ. ಇಂತಹ ವೆಚ್ಚದಾಯಕ ಕಾರ್ಯಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆಯನ್ನೇಕೆ ನಡೆಸಿಲ್ಲ ಮತ್ತು ಸರ್ಕಾರ ಸಂಸತ್ತಿನ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಒಪ್ಪಲು ಏಕೆ ಹಿಂಜರಿಯುತ್ತಿದೆಯೆದು ತೆರಿಗೆದಾರ ನಾಗರಿಕರು ಕೇಳಬೇಕಾದ ಅಗತ್ಯವಿದೆ.
ಒಂದು ವೇಳೆ, ಆಧಾರ್ -ಕಾಂಗ್ರೆಸ್ನ ನೂತನ ನಾಯಕತ್ವದ ದೂರದೃಷ್ಟಿಯ ಭಾಗವಾಗಿದ್ದೇ ಆದಲ್ಲಿ, ಪ್ರಚಾರ ಮತ್ತು ಶಬ್ದಾಡಂಬರಗಳು, ನಿರ್ದಿಷ್ಟ ಗುರಿಗಳು ಮತ್ತು ವಾಸ್ತವ ಫಲಿತಾಂಶಗಳಿಗೆ ಎಂದೂ ಪರ್ಯಾಯವಾಗಬಾರದು. ಈ ದೂರದೃಷ್ಟಿ ಮತ್ತು ಪರಿಹಾರಗಳು ವಾಸ್ತವಗಳಾಗಿರುವಂತೆಯೇ ಅದರ ಮೇಲೆ ವ್ಯಯವಾಗುವ ಹಣ ನ್ಯಾಯಯುತವಾಗಿರಬೇಕು. ದುರಂತವೆಂದರೆ, ಆಧಾರ್ನಲ್ಲಿ ಇವೆರಡೂ ಆಗಿಲ್ಲ!
-ರಾಜೀವ್ ಚಂದ್ರಶೇಖರ್
ಸಂಸತ್ ಸದಸ್ಯರು, ರಾಜ್ಯಸಭೆ
rajeev.c@sansad.nic.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

