ರೇಷ್ಮೆ ಉತ್ಪಾದನೆ ಮತ್ತು ತೋಟಗಾರಿಕೆ ಅಭಿವೃದ್ಧಿ

ಕಳೆದ ವಾರ ಕೃಷಿ ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಕೃಷಿಕರ ಮನೆ ಬಾಗಿಲಿಗೆ ತಲುಪಿಸಿದ ಬಗ್ಗೆ ಹೇಳುತ್ತಿದ್ದೆ. ಅದರಂತೆಯೇ ರೇಷ್ಮೆ ಹುಳು ಸಾಕಾಣಿಕೆ ಮತ್ತು ತೋಟಗಾರಿಕೆಯ ಬಗೆಗೂ ಅವರಿಗೆ ಮಾಹಿತಿ ನೀಡಲಾಯಿತು. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರೆಯುತ್ತಿರುವಾಗ ಅದರ ಪ್ರಯೋಜನ ರೈತರಿಗೂ ಸಿಗಬೇಕಾಗಿದೆ.
ಇಡೀ ಭಾರತದ ಶೇಕಡಾ ಐವತ್ತರಷ್ಟು ಕಚ್ಚಾ ರೇಷ್ಮೆ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತಿದೆ. ಅಲ್ಲದೆ ರಾಜ್ಯದಲ್ಲಿ ಹದಿಮೂರು ಲಕ್ಷ ಜನರಿಗೆ ಜೀವನೋಪಾಯವನ್ನು ಇದು ನೀಡಿದೆ. ರೇಷ್ಮೆ ಉತ್ಪಾದನೆಯಲ್ಲಿ ಧಾರವಾಡ ಮತ್ತು ತುಮಕೂರು ಮುಂದಿದ್ದರೂ ಇತರ ಪ್ರದೇಶಗಳಲ್ಲಿ ರೇಷ್ಮೆ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಹಾಗಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿಯೂ ರೇಷ್ಮೆ ಹುಳು ಸಾಕಾಣಿಕೆಯ ಅಭಿವೃದ್ಧಿಗಾಗಿ ರೇಷ್ಮೆ ಇಲಾಖೆಯಿಂದ ದೊರೆಯುವ ಸೇವಾ ಸೌಕರ್ಯಗಳ ಬಗೆಗೆ ಮಾಹಿತಿಯನ್ನು ರೈತರಿಗೆ ಒದಗಿಸಲಾಯಿತು:
-ರೇಷ್ಮೆ ವರದಾನ ಯೋಜನೆ ಅಡಿಯಲ್ಲಿ ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ಹೊಸ ತಳಿ ನಾಟಿ ಮಾಡಿದವರಿಗೆ ರು. 5000 ದವರೆಗೆ ಸಹಾಯ ಧನ ಲಭ್ಯವಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು ಹಾಗೂ ಅಂಗವಿಕಲ ರೈತರಿಗೆ ಮೊದಲ ಆದ್ಯತೆ.
-ವಿಶೇಷ ಘಟಕ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ಹೊಸ ತಳಿ ನಾಟಿ ಮಾಡಿದವರಿಗೆ ರು. 5500 ರ ವರೆಗೆ ಸಹಾಯ ಧನ ಲಭ್ಯವಿರುತ್ತದೆ.
-ಕೆಟಲೈಟಿಕ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ಹೊಸ ತಳಿ ನಾಟಿ ಮಾಡಿದವರಿಗೆ ರು. 4125 ಸಹಾಯ ಧನ.
-ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗಳನ್ನು ಖರೀದಿಸಲು ಪ್ರತಿ ಘಟಕದ ದರ ರು. 40,000 ಕ್ಕೆ ರು. 30,000 ಸಾವಿರ ಸಹಾಯ ಧನ.
-ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಲು ಕೆಟಲೈಟಿಕ್ ಅಭಿವೃದ್ಧಿ ಯೋಜನೆಯಡಿಯಲ್ಲಿ
1) 1000 ಚ.ಅ. ಮನೆಗೆ ರು. 75,000- ಕ್ಷೇತ್ರ 1.20 ಎಕರೆ
2) 600 ಚ.ಅ. ಮನೆಗೆ ರು. 50,000- ಕ್ಷೇತ್ರ 1.00 ಎಕರೆ
3) 375 ಚ.ಅ. ಮನೆಗೆ ರು. 25,000- ಕ್ಷೇತ್ರ 0.20 ಎಕರೆ.
-ಕೆಟಲೈಟಿಕ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಒಂದು ಹೆಕ್ಟರ್ ಹಿಪ್ಪು ನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು ಗರಿಷ್ಠ ರು. 37500- ಸಹಾಯ ಧನ.
ತೋಟಗಾರಿಕಾ ಕ್ಷೇತ್ರದಲ್ಲಿಯೂ ಭಾರತದಲ್ಲಿ ಕರ್ನಾಟಕ, ಮುಖ್ಯ ಪಾತ್ರಧಾರಿ. ತೋಟಗಾರಿಕೆಗಾಗಿ ಭೂಮಿಯ ಬಳಕೆ ಕೇವಲ ಶೇಕಡಾ ಹದಿನೈದರಷ್ಟಿದ್ದರೂ, ಕೃಷಿ ಉತ್ಪಾದನೆಯಲ್ಲಿ ತೋಟಗಾರಿಕೆಯದ್ದು ಶೇಕಡಾ ನಲವತ್ತರಷ್ಟು ಪಾಲಿದೆ. ಸಾಂಬಾರ ಪದಾರ್ಥಗಳು, ಸುಗಂಧ ಸಸ್ಯಗಳು ಮತ್ತು ಔಷಧೀಯ ಸಸ್ಯಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾತ್ರ ಬಹಳ ದೊಡ್ಡದು. ಕೃಷಿಯ ಜೊತೆಗೇ ತೋಟಗಾರಿಕೆಯೂ ರೈತನ ಬದುಕನ್ನು ಹಸನು ಮಾಡುವುದರಲ್ಲಿ ಸಹಾಯಕಾರಿ. ಹಾಗಾಗಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಸಹಾಯ ಸೌಲಭ್ಯಗಳ ಬಗ್ಗೆಯೂ ಕೆಳಕಂಡ ಮಾಹಿತಿಯನ್ನು ನೀಡಲಾಯಿತು.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಮತ್ತು ತೋಟಗಳ ನಿರ್ವಹಣಾ ವೆಚ್ಚ ಇವುಗಳಿಗೆ ಸಹಾಯ ಧನ ನೀಡುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಯೋಜನೆಯೇ "ರಾಷ್ಟ್ರೀಯ ತೋಟಗಾರಿಕೆ ಮಿಷನ್".
1) ಮಾವು, ದ್ರಾಕ್ಷಿ, ದಾಳಿಂಬೆ, ಸಪೋಟಾ, ಮೊಸಂಬಿ (ನಿಂಬೆ ಜಾತಿ), ಅಂಜೂರು ಮತ್ತು ತೋಟದ ಬೆಳೆಗಳಾದ ಶುಂಠಿ ಹಾಗೂ ಅರಿಶಿಣ ತೋಟಗಳ ಅಭಿವೃದ್ಧಿಗಾಗಿ ಸಹಾಯ ಧನ.
2) ನಾಟಿಯಾದ ಆರು ತಿಂಗಳೊಳಗಿನ ಹೊಸ ತೋಟಗಳಿಗೆ ಮೂರು ಕಂತುಗಳಲ್ಲಿ, ಗರಿಷ್ಠ ಹತ್ತು ಎಕರೆವರೆಗೆ ಒಟ್ಟು ವೆಚ್ಚದ ಶೇ. ಎಪ್ಪತ್ತೈದರಷ್ಟು ಸಹಾಯ ಧನವನ್ನು ಚೆಕ್ ರೂಪದಲ್ಲಿ ನೀಡಲಾಗುವುದು. ಪ್ರತಿ ಎಕರೆಗೆ: ಮೊದಲ ವರ್ಷ ಶೇ. 50 ರಂತೆ, ರೂ. 4500, ಎರಡನೆಯ ವರ್ಷಕ್ಕೆ ಶೇ. 20 ರಂತೆ, ರು. 1800, ಮೂರನೆಯ ವರ್ಷ ಶೇ. 30 ರಂತೆ ರು. 2700.
-ಅಂಗಾಂಶ ಬಾಳೆ ತಳಿಗಳಾದ ಜಿ-9, ಮಧುಕರ್ ಕೆಂಪು ಬಾಳೆ. ಈ ತಳಿಗಳನ್ನು ನಾಟಿ ಮಾಡಿದ ಹೊಸ ತೋಟಗಳಿಗೆ ಎರಡು ಕಂತುಗಳಲ್ಲಿ ಗರಿಷ್ಠ ಹತ್ತು ಎಕರೆ ವರೆಗೆ ಸಹಾಯ ಧನ ನೀಡಲಾಗುವುದು. ಪ್ರತಿ ಎಕರೆಗೆ: ಮೊದಲ ವರ್ಷ ಶೇ. 50 ರಂತೆ, ರು. 3000, ಎರಡನೆಯ ವರ್ಷ ಶೇ. 50 ರಂತೆ ರು. 3000.
-ವಾಣಿಜ್ಯ ಹೂಗಳಾದ ಗುಲಾಬಿ, ಜರ್ಬೆರಾ, ಕಾರ್ನೆಷನ್, ಬರ್ಡ್ ಆಫ್ ಪ್ಯಾರಡೈಸ್, ಆರ್ಕಿಡ್ ಮತ್ತು ಆಂಥೂರಿಯಮ್, ಗೆಡ್ಡೆ ಹೂಗಳಾದ ಸುಗಂಧರಾಜ ಹಾಗೂ ಗ್ಲಾಡಿಯೊಲಸ್, ಬಿಡಿ ಹೂಗಳಾದ ಉಡುಪಿ ಮಲ್ಲಿಗೆ, ಅಂಬೂರು ಮಲ್ಲಿಗೆ, ಸೇವಂತಿಗೆ, ಆಸ್ಟರ್, ಚಂಡು ಹೂ, ಕನಕಾಂಬರ, ಗೈಲಾರ್ಡಿಯಾ...ಈ ಎಲ್ಲಾ ಹೂ ಬೆಳೆಗಳ ಅಭಿವೃದ್ಧಿಗಾಗಿ ಸಣ್ಣ ಮತು ಅತೀ ಸಣ್ಣ ರೈತರಿಗೆ ಗರಿಷ್ಠ ಎರಡು ಘಟಕಗಳನ್ನು, ಇತರೆ ರೈತರಿಗೆ ಗರಿಷ್ಠ ನಾಲ್ಕು ಘಟಕಗಳಿಗೆ ಸಹಾಯ ಧನ ನೀಡಲಾಗುವುದು.
-ಮರು ಖರೀದಿ ಒಪ್ಪಂದ ಮಾಡಿಕೊಂಡಿರುವ ಹಾಗೂ ಖಚಿತ ಮಾರುಕಟ್ಟೆ ಹೊಂದಿರುವ ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದೇಶ ವಿಸ್ತರಣೆ ಪ್ರತಿ ಎಕರೆಗೆ ರು. 3000, ರು. 4500 ರಂತೆ ಒಟ್ಟು ವೆಚ್ಚದ ಶೇ. ಎಪ್ಪತ್ತೈದರಷ್ಟು ಗರಿಷ್ಠ ಐದು ಎಕರೆಗಳ ವರೆಗೆ ಪ್ರೋತ್ಸಾಹ ಧನ ಒದಗಿಸಲಾಗುವುದು.
-ನರ್ಸರಿ ಅಭಿವೃದ್ಧಿಗಾಗಿ ಸಾರ್ವಜನಿಕ ವಲಯಕ್ಕೆ ಶೇ. ಒಂದು ನೂರು ಹಾಗೂ ಖಾಸಗಿ ವಲಯಕ್ಕೆ ಶೇ. ಐವತ್ತರಂತೆ ಸಹಾಯ ಧನ.
1ಸಣ್ಣ ನರ್ಸರಿ: ಒಂದು ಹೆಕ್ಟೇರ್ ಪ್ರದೇಶದಲ್ಲಿ 5,00,000 ಕಸಿ ಗಿಡಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದವರಿಗೆ ಗರಿಷ್ಠ ಒಂದೂವರೆ ಲಕ್ಷಗಳವರೆಗೆ ಸಹಾಯ ಧನ ಕೊಡಲಾಗುವುದು.
2) ದೊಡ್ಡ ನರ್ಸರಿ: ನಾಲ್ಕು ಹೆಕ್ಟರ್ ಪ್ರದೇಶದಲ್ಲಿ 4,00,000 ಕಸಿ ಗಿಡಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದವರಿಗೆ ಗರಿಷ್ಠ ರು. ಒಂಬತ್ತು ಲಕ್ಷಗಳವರೆಗೆ ಸಹಾಯ ಧನ ಕೊಡಲಾಗುವುದು.
-ಮಣ್ಣು ಮತ್ತು ನೀರು ಸಂರಕ್ಷಣೆ ಮಾಡಲು ಕೃಷಿ ಹೊಂಡ/ ಸಾಮೂಹಿಕ ಕೆರೆಗಳಿಗೆ ಸಹಾಯ ಧನ ನೀಡಲಾಗುವುದು.
-ಸಾವಯವ ತೋಟಗಾರಿಕೆ ಮಾಡುವವರಿಗೆ ಪ್ರತಿ ಎಕರೆಗೆ ರು. 4000 ದಂತೆ ಗರಿಷ್ಠ ಹತ್ತು ಎಕರೆವರೆಗೆ ಸಹಾಯ ಧನ.
-ಎರೆ ಹುಳು ಘಟಕ 20-4-2 ಅಡಿಯ ಎಂಟು ಗುಂಡಿಗಳು ಅಥವಾ ಕಾಂಪೋಸ್ಟ್ ಉತ್ಪಾದನ ಘಟಕ 20-10-6 ಅಡಿಯ ಕಾಂಪೋಸ್ಟ್ ಗುಂಡಿ ಅಳವಡಿಸುವ ರೈತರಿಗೆ ಗರಿಷ್ಠ ರು. 30000ದವರೆಗೆ ಸಹಾಯ ಧನ ನೀಡಲಾಗುವುದು. ಕಳೆದ ಎರಡು ವರ್ಷಗಳಿಂದ ಸಾವಯವ ತೋಟಗಾರಿಕೆ ಮಾಡುತ್ತಿರುವವರಿಗೆ ಆದ್ಯತೆ ಕೊಡಲಾಗುವುದು.
-ಕೊಯ್ಲೋತ್ತರ ಸಂಸ್ಕರಣೆ ಮತ್ತು ಮಾರುಕಟ್ಟೆ ಚಟುವಟಿಕೆಗಳಿಗೆ ಉತ್ತೇಜನ ನೀಡಲು
1) ಐವತ್ತು ಮೆಟ್ರಿಕ್ ಟನ್ವರೆಗಿನ ಸಾಮರ್ಥ್ಯದ ಈರುಳ್ಳಿ ಶೇಖರಣ ಗೋದಾಮುಗಳಿಗೆ ಗರಿಷ್ಠ ರು. 62,500 ರವರೆಗೆ ಸಹಾಯಧನ ಒದಗಿಸಲಾಗುವುದು.
2) ಕನಿಷ್ಠ ಹತ್ತು ಎಕರೆ ತೋಟವಿರುವ ರೈತರಿಗೆ ಪ್ಯಾಕ್ ಹೋಸ್/ ವರ್ಗೀಕರಣ ಘಟಕ ನಿರ್ಮಿಸಲು ಗರಿಷ್ಠ ರು.62,500ರವರೆಗೆ ಸಹಾಯಧನ ಒದಗಿಸಲಾಗುವುದು ಹಾಗೂ ಒಣಗಿಸುವ/ಪ್ಯಾಕಿಂಗ್, ಶೇಖರಣ/ಸಾಗಾಣಿಕೆ (ಶಿಥಿಲ ವಾಹನ) ಪಕ್ವಗೊಳಿಸುವ ಮೂಲಭೂತ ಸೌಕರ್ಯಗಳಿಗೆ, ಸಂಸ್ಕರಣೆ ಮತ್ತು ಮೌಲ್ಯವೃದ್ಧೀಕರಣ ಚಟುವಟಿಕೆಗಳಿಗೆ ಸಹಾಯಧನ ಲಭ್ಯವಿರುತ್ತದೆ.
3) ರೀತ ಸಂಸ್ಥೆಗಳ ಸ್ಥಾಪನೆಗೆ ಮತ್ತು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ಚಟುವಟಿಕೆಗಳಲ್ಲಿ ನಿರತರಾಗಿರುವ ಸರ್ಕಾರಿ/ಅರೆ ಸರ್ಕಾರಿ/ ಸಹಕಾರಿ/ ಸರ್ಕಾರೇತರ ಸಂಸ್ಥೆಗಳಿಗೆ ಸಹಾಯಧನ ಒದಗಿಸಲಾಗುವುದು. ಹನಿ ನೀರಾವರಿಗೆ ಸಹಾಯಧನ ತೋಟಗಾರಿಕೆ ಬೆಳೆಗಳಿಗೆ ಐ.ಎಫ್.ಐ. ಪ್ರಮಾಣೀಕೃತ ಉತ್ಪನ್ನಗಳನ್ನು ಉಪಯೋಗಿಸಿ ಅನುಮೋದಿತ ಕಂಪನಿಗಳಿಂದ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲು ಪ್ರತಿ ಫಲಾನುಭವಿಗಳಿಗೆ ಗರಿಷ್ಠ 12.5 ಎಕರೆಗಳವರೆಗೆ ಸಹಾಯಧನ.
-ಐದು ಎಕರೆವರೆಗೆ 75 ಪ್ರತಿಶತ ಸಹಾಯಧನ, ಐದರಿಂದ ಹನ್ನೆರಡೂವರೆ ಎಕರೆವರೆಗೆ 50 ಪ್ರತಿಶತ ಸಹಾಯಧನ.
ಹಳ್ಳಿಗಳಿಗೆ ಹೋದಾಗ ತಾಂತ್ರಿಕ ಸೇವಾ ಕೇಂದ್ರದ ವಿಸ್ತರಣಾಧಿಕಾರಿಗಳು ಅಥವಾ ವಲಯಾಧಿಕಾರಿ, ತಾಲೂಕು ಅಥವಾ ಜಿಲ್ಲಾ ತೋಟಗಾರಿಕೆ ಅಧಿಕಾರಿ ರೈತರಿಗೆ ನೇರವಾಗಿ ಮಾತನಾಡಿ ಅವರ ಸಂಶಯಗಳನ್ನು ವಿವರವಾಗಿ ಚರ್ಚಿಸಿದರು. ಸಾಮಾನ್ಯವಾಗಿ ರೈತರು ಕಚೇರಿಗಳಿಗೆ ಹೋದಾಗ ಸಂಬಂಧಪಟ್ಟ ಅಧಿಕಾರಿಗಳು ಲಭ್ಯವಿರುವುದಿಲ್ಲ. ಏಕೆಂದರೆ ಅವರ ಮಧ್ಯೆ ನೇರ ಸಂಪರ್ಕ ಇರುವುದಿಲ್ಲ. ಯೋಜನೆಗಳು ಇದ್ದರೂ ಅದನ್ನು ಪಡೆಯುವುದು ಹೇಗೆ? ಇಂಥ ಪ್ರಯೋಗಗಳನ್ನು ನಮ್ಮ ಅಧಿಕಾರಿಗಳು ಮುಂಚಿತವಾಗಿ ಸಮಯ ನಿಗದಿ ಪಡಿಸಿ ಹಳ್ಳಿಗಳಿಗೆ ಭೇಟಿ ನೀಡಿ ವಿಷಯ ಚರ್ಚಿಸಿದರೆ ಸರಿಯಾದ ಮಾಹಿತಿ ಸರಿಯಾದ ಸಮಯಕ್ಕೆ ಸಿಕ್ಕಾಗ ರೈತರಿಗೆ ಸಹಾಯವಾಗುತ್ತದೆ.
ರೈತನೇ ನಮ್ಮ ದೇಶದ ಬೆನ್ನೆಲುಬಾಗಿರುವುದರಿಂದ ನಾವೆಲ್ಲರೂ ನಮ್ಮ ಕೈಲಿ ಆಗುವ ರೀತಿಯಲ್ಲಿ ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗುತ್ತದೆ. ಅದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು. ಅಲ್ಲವೇ?
-ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


