ಚಿದಂಬರಂ ಅಭಿವೃದ್ಧಿ ರಾಜಕೀಯದ ವರಸೆಯ ವಿರೋಧಾಭಾಸಗಳು

ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ರಾಜಕೀಯಕ್ಕೆ ದೀರ್ಘವಾದ ಇತಿಹಾಸವಿದೆ. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಯುರೋಪ್ನ ರಾಷ್ಟ್ರಗಳಲ್ಲಿ ಮತ್ತು ಅಮೆರಿಕೆಯಲ್ಲಿ ಜನ್ಮವೆತ್ತಿದ ಅಭಿವೃದ್ಧಿ ಮಾದರಿಗಳು ಮತ್ತು ಸಿದ್ಧಾಂತಗಳು ವಿಶಿಷ್ಟ ರಾಜಕೀಯ ಸನ್ನಿವೇಶಗಳ ಕೂಸುಗಳಾಗಿದ್ದವು. ಆ ಮಾದರಿಗಳು ಅನುಷ್ಠಾನಗೊಂಡ ರಾಷ್ಟ್ರಗಳಲ್ಲೆಲ್ಲ ಅಭಿವೃದ್ಧಿ ರಾಜಕೀಯ ಪಸರಿಸುವಂತಾಯಿತು. ಭಾರತದಲ್ಲೂ ಆರ್ಥಿಕ ಬೆಳವಣಿಗೆ ರಾಜಕೀಯ ಅನೇಕ ಏರಿಳಿತಗಳನ್ನು ಕಂಡಿದೆ. ಒಮ್ಮೊಮ್ಮೆ ಅಪಾಯಕಾರಿ ರಾಜಕೀಯ ಮಾಡುವಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಹಿಂದೆ ಬಿದ್ದಿಲ್ಲ. ಅಪಾಯಕಾರಿ ಅಭಿವೃದ್ಧಿ ರಾಜಕೀಯ ಮಾಡುವಲ್ಲಿ ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
1991ರಲ್ಲಿ ದೇಶ ಜಾಗತೀಕರಣಕ್ಕೆ ತೆರೆದುಕೊಂಡಿತು. ಸರ್ಕಾರದ ಧೋರಣೆಗಳಲ್ಲಿ ಆದ ದೊಡ್ಡ ಬದಲಾವಣೆಗಳಿಂದಾಗಿ 90ರ ದಶಕದಲ್ಲಿ ಆರ್ಥಿಕ ಬೆಳವಣಿಗೆ ದರ ಹೆಚ್ಚುತ್ತ ಹೋಗಿ 2005-06ನೇ ಸಾಲಿನಲ್ಲಿ ಶೇ. 9.5ಕ್ಕೆ ನೆಗೆಯಿತು. 2007-08ನೆಯ ಸಾಲಿನ ಮುಂಗಡ ಪತ್ರ ಮಂಡಿಸುವಾಗ ಆಗಲೂ ವಿತ್ತ ಸಚಿವರಾಗಿದ್ದ ಚಿದಂಬರಂ ಜಯಭೇರಿ ಹೊಡೆಯುವ ಧಾಟಿಯಲ್ಲಿ ಮಾತನಾಡಿದ್ದರು. ಮಾತಿನ ಮಲ್ಲರಾದ ಅವರು ಆರ್ಥಿಕ ಬೆಳವಣಿಗೆ ದರ ಹೆಚ್ಚಿಸಿದ್ದು ತನ್ನ ವೈಯಕ್ತಿಕ ಸಾಧನೆ ಎನ್ನುವ ಧಾಟಿಯಲ್ಲಿ ಲೋಕಸಭೆಯಲ್ಲಿ ಹೇಳಿ ಮಿಂಚಿದ್ದರು. ನೊಬೆಲ್ ಪಾರಿತೋಷಕ ವಿಜೇತ ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮಹಮ್ಮದ್ ಯೂನಸ್ರನ್ನು ಉದ್ಧರಿಸಿ ಬೆಳವಣಿಗೆ ದರವನ್ನು ಇನ್ನಷ್ಟು ಹೆಚ್ಚಿಸದೆ ಬಡತನ ನಿರ್ಮೂಲನೆ ಅಸಾಧ್ಯವೆನ್ನುತ್ತ ಮಾನ್ಯ ವಿತ್ತ ಸಚಿವರು ತಮ್ಮ ಬಜೆಟ್ ಭಾಷಣ ಮುಗಿಸಿದ್ದರು. ಅವರ ಪಾಲಿಗೆ ಇದೊಂದು ಗತವೈಭವವಾಗಿ ಬಿಟ್ಟಿದೆ ಎನ್ನುವುದು ಈಗ ಚಿದಂಬರ ರಹಸ್ಯವಾಗಿ ಉಳಿದಿಲ್ಲ, ಉಳಿಯಲು ಸಾಧ್ಯವಿಲ್ಲ.
2013 ಫೆಬ್ರವರಿ ತಿಂಗಳಿನಲ್ಲಿ ಕೇಂದ್ರ ವಿತ್ತ ಸಚಿವರು ಕೆಳ ಮಟ್ಟದ ಅಭಿವೃದ್ಧಿ ರಾಜಕೀಯ ಮಾಡಿದರು. 2012 -13ನೆಯ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.5ಕ್ಕೆ ಕುಸಿಯಬಹುದೆಂದು ಕೇಂದ್ರ ಅಂಕಿ-ಅಂಶಗಳ ಸಂಸ್ಥೆ (ಸಿ.ಎಸ್.ಓ.) ಅಂದಾಜು ಮಾಡಿತ್ತು. ಇದರ ವಿರುದ್ಧ ಚಿದಂಬರಂ ನವದೆಹಲಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರೇಗಾಡಿದರು. "ನಮ್ಮ ಸಾಧನೆಗೆ ನಾವೇ ಮಸಿ ಬಳಿಯುತ್ತಿದ್ದೇವೆ" ಎಂದು ಕೋಪದ ಕಿಡಿ ಕಾರಿದರು. ಸಿ.ಎಸ್.ಓ. ತಮ್ಮ ಸರ್ಕಾರದ ಸಂಸ್ಥೆಯೆಂಬ ಅರಿವೂ ಇಲ್ಲದೇ ಸಾಹೇಬರು ಮಾತನಾಡಿದ್ದು ಸರ್ವಥಾ ಸಮಂಜಸವಾಗಿರಲಿಲ್ಲ. ಬುದ್ಧಿವಂತಿಕೆ ಇದ್ದ ಮಾತ್ರಕ್ಕೆ ಕನಿಷ್ಠ ಸೌಜನ್ಯವೂ ಅಗತ್ಯವಿಲ್ಲವೆಂದು ತೋರಿಸುವ ಸಾಹಸ ಮೆರೆದರು.
ಅವರಿಂದ ಮುಂದೆ 2013-14ನೆಯ ಸಾಲಿನ ಫೆಬ್ರವರಿ ಆಯವ್ಯಯ ಪತ್ರದ ಮಂಡನೆ. ಸಿ.ಎಸ್.ಓ. ವಿರುದ್ಧ ಕೆಂಡಾಮಂಡಲವಾಗಿದ್ದ ಚಿದಂಬರಂ ಅವರೇ ನಂತರ ತಮ್ಮ ಬಜೆಟ್ ಭಾಷಣದಲ್ಲಿ 2012-13ನೆಯ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ.5 ರಷ್ಟಾಗಬಹುದೆಂದು ಒಪ್ಪಿಕೊಂಡು ಬಿಟ್ಟರು!
ಈಗ ಪ್ರಕಟಣೆಗೊಂಡ ಸರ್ಕಾರಿ ದಾಖಲೆಗಳ ಪ್ರಕಾರ 2012-13ನೆಯ ಹಣಕಾಸಿನ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಕೇವಲ ಶೇ. 4.5ರಷ್ಟು. ತಾನು ಸಿ.ಎಸ್.ಓ. ವಿರುದ್ಧ ಹರಿಹಾಯ್ದದ್ದು ಸರಿಯಲ್ಲವೆಂದು ಬಹಿರಂಗ ಹೇಳಿಕೆ ನೀಡುವುದು ಹಾಗಿರಲಿ, ಮನಸ್ಸಿನಲ್ಲಿ ಒಪ್ಪಿಕೊಳ್ಳುವಷ್ಟು ಸೌಜನ್ಯವನ್ನು ಸಹ ಬುದ್ಧಿವಂತ (!) ವಿತ್ತ ಸಚಿವರಿಂದ ಬಯಸುವಷ್ಟು ದಡ್ಡರು ನಾವಾಗಬೇಕಾಗಿಲ್ಲ!
2013 ಫೆ.6ರಂದು ದೆಹಲಿಯಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ನಲ್ಲಿ ಚಿದಂಬರಂ ಅವರಿಂದ ವಿಶೇಷ ಉಪನ್ಯಾಸ. ಅಂದು ಅವರ ಸಂಪುಟ ಸಹದ್ಯೋಗಿ ಎ.ಕೆ. ಆ್ಯಂಟನಿ ಅವರ ಅಭಿವೃದ್ಧಿ ರಾಜಕೀಯಕ್ಕೆ ಬಲಿಯಾದರು. ಅದಕ್ಕೂ ಮೊದಲು 2013-14ರ ಕೇಂದ್ರ ಮುಂಗಡ ಪತ್ರದಲ್ಲಿ ರಕ್ಷಣಾ ಖಾತೆಗೆ ಕಡಿಮೆ ಹಣ ಮೀಸಲಿಡುವ ಹಣಕಾಸು ಸಚಿವರು ಪ್ರಸ್ತಾವಕ್ಕೆ ರಕ್ಷಣಾ ಸಚಿವರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದರಂತೆ. ದೇಶದ ಅಭಿವೃದ್ಧಿ ದರದಲ್ಲಿ ಹೆಚ್ಚಳವಾದರೆ ಭದ್ರತೆ ಸುಲಭ ಸಾಧ್ಯ, ರಕ್ಷಣಾ ಖಾತೆಯ ವೆಚ್ಚದಲ್ಲಿ ಈ ವರ್ಷ ಕಡಿತ ಅನಿವಾರ್ಯ ಮತ್ತು ಅಭಿವೃದ್ಧಿ ದರದ ಹೆಚ್ಚಳಕ್ಕೆ ರಕ್ಷಣಾ ಖಾತೆ ಕಾಯಬೇಕೆಂದು ಫೆ.6ರ ಭಾಷಣದಲ್ಲಿ ಹೇಳಿ ನಯ ನಾಜೂಕಿನ ರಾಜಕೀಯದ ರಕ್ಷಣಾ ಕವಚವನ್ನು ವಿತ್ತ ಖಾತೆಗೆ ಜೋಡಿಸಿದರು. ಈ ಪ್ರಕ್ರಿಯೆಯಲ್ಲಿ ರಕ್ಷಣಾ ಖಾತೆ ಸಹಜವಾಗಿ ಬಲಿಪಶುವಾಯಿತು.
ಮುಂದೆ ಫೆ.28ರ ಬಜೆಟ್ ಭಾಷಣದಲ್ಲಿ ಯಾವುದೇ ಸಮಯದಲ್ಲೂ ರಕ್ಷಣಾ ಖಾತೆಯ ತುರ್ತು ಅವಶ್ಯಕತೆಗಳಿಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂಬ 'ಅಭಯ' ನೀಡಿದಾಗ ಅಂಟನಿ ಮುಖದಲ್ಲಿ ಮಂದಹಾಸ ಮೂಡಿತ್ತು. ಪಾಪ!
ಚಿದಂಬರಂ ಸಿ.ಎಸ್.ಓ. ವಿರುದ್ಧ ಸಮರವನ್ನು ಮುಂದುವರಿಸಿದ್ದಾರೆ. ಕಳೆದ ಫೆ.7ರಂದು ಕೇಂದ್ರ ಅಂಕಿ-ಅಂಶಗಳ ಸಂಸ್ಥೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ಆದಾಯದ (ಜಿಡಿಪಿಯ) ಬೆಳವಣಿಗೆ ದರ ಶೇ. 4.9ರಷ್ಟಾಗಬಹುದೆಂದು ಪ್ರಕಟಣೆಯೊಂದರಲ್ಲಿ ತಿಳಿಸಿತ್ತು. ವಿತ್ತ ಸಚಿವರು ಸ್ವಲ್ಪವೂ ವಿಳಂಬ ಮಾಡಲಿಲ್ಲ. ಫೆ.8ರಂದು ನವದೆಹಲಿಯಲ್ಲಿ ಮತ್ತೊಮ್ಮೆ ಅಭಿವೃದ್ಧಿ ದರದ ರಾಜಕೀಯ ಮಾಡಿಬಿಟ್ಟರು. ಸಿ.ಎಸ್.ಓ. ವರದಿಯನ್ನು ಅಲ್ಲಗಳೆಯುವ ರೀತಿಯಲ್ಲಿ ಅವರ ಹೇಳಿಕೆ. ಸರ್ಕಾರ ಇತ್ತೀಚೆಗೆ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ಜಿಡಿಪಿ ಚೇತರಿಸಿಕೊಳ್ಳುತ್ತಿದೆ. ಈ ಹಣಕಾಸು ವರ್ಷದಲ್ಲಿ (2013-14) ಜಿಡಿಪಿ ಬೆಳವಣಿಗೆಗೆ ದರ ಶೇ.5ಕ್ಕಿಂತ ಕೆಳಗೆ ಇಳಿಯುವುದಿಲ್ಲವೆಂಬ ವಿಶ್ವಾಸವನ್ನು ಘನ ವಿತ್ತ ಸಚಿವರು ವ್ಯಕ್ತಪಡಿಸುವ ಮೂಲಕ ತೃಪ್ತಿ ಪಟ್ಟರು. ಸಿ.ಎಸ್.ಓ. ವಿರುದ್ಧ ಮತ್ತೊಮ್ಮೆ ತಗಾದೆ ದೂಡಿದರು.
ಚಿದು ತಮ್ಮ ಮಧ್ಯಂತರ ಬಜೆಟ್ಟಿನಲ್ಲಿ ಯುಪಿಎ ಸರ್ಕಾರದ ಹತ್ತು ವರ್ಷಗಳ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ಬೆಳವಣಿಗೆ ದರ ಹೆಚ್ಚಿಸಿದ್ದು ತಮ್ಮ ಸರ್ಕಾರದ ಸಾಧನೆಯೆಂದು ಇನ್ನೊಮ್ಮೆ ಹೇಳಿದ್ದಾರೆ. ಆದರೆ ಅವರ ಮಧ್ಯಂತರ ಬಜೆಟ್ನಲ್ಲಿ ಎರಡು ಪ್ರಮುಖ ವೈಫಲ್ಯಗಳನ್ನು ಪರ್ಯಾಯವಾಗಿ ಒಪ್ಪಿಕೊಂಡು ಬಿಟ್ಟಿದ್ದಾರೆ: 1) ಆಹಾರ ಪದಾರ್ಥಗಳ ಹಣದುಬ್ಬರ ಇನ್ನೂ ತೀವ್ರವಾಗಿದೆ; ಮತ್ತು 2)ತಯಾರಿಕಾ ರಂಗ (ಮ್ಯಾನ್ಯುಫಾಕ್ಚರಿಂಗ್ ವಲಯ) ಹಿನ್ನೆಡೆ ಕಾಣುತ್ತಿದ್ದು ಸರ್ಕಾರದ ಕೃಪಾಛತ್ರ ಬೇಡುತ್ತಿದೆ. ಈ ಎರಡು ಪ್ರಮುಖ ವೈಫಲ್ಯಗಳೇ ಸಾಕು. ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ-ವ್ಯವಸ್ಥೆಯ ಸಾಧನೆಗಳಿಗೆ ಮಸಿ ಬಳಿಯಲು!
2009ರ ಫೆ.16ರಂದು ಮಧ್ಯಂತರ ಬಜೆಟ್ ಮಂಡಿಸುವಾಗ ಆಗಿನ ಕೇಂದ್ರ ವಿತ್ತ ಸಚಿವ ಪ್ರಣವ್ ಮುಖರ್ಜಿ ತಮ್ಮ ನಾಯಕಿಯಾದ ಸೋನಿಯಾ ಗಾಂಧಿಯವರನ್ನು ಉದ್ಧರಿಸುತ್ತಾ ಸೇರ್ಪಡೆಯುಳ್ಳ ಬೆಳವಣಿಗೆಯ ಕುರಿತು ವ್ಯಾಖ್ಯಾನ ನೀಡಿದ್ದರು. ಚಿದು ತಮ್ಮ ಮಧ್ಯಾಂತರ ಬಜೆಟ್ಟಿನಲ್ಲಿ ಸೇರ್ಪಡೆಯುಳ್ಳ ಬೆಳವಣಿಗೆಯ ಪರಿಕಲ್ಪನೆಗೆ ಪೂಜೆಯ ಶಾಸ್ತ್ರ ಮಾಡಿದ್ದಾರೆ. ಮಾತಿನಲ್ಲೇ ಮಂಟಪ ಕಟ್ಟುವ ಜಾಣ್ಮೆಯುಳ್ಳ ಚಿದು ದೇಶದ ಮುಂದೆ ಇರುವ ಹತ್ತು ಪ್ರಮುಖ ಧ್ಯೇಯಗಳನ್ನು ಲಿಸ್ಟ್ ಮಾಡಿದ್ದಾರೆ. ಅದರಲ್ಲಿ ಸೇರ್ಪಡೆಯುಳ್ಳ ಬೆಳವಣಿಗೆಯ ಪರಿಕಲ್ಪನೆಗೆ ಸ್ಥಳವೇ ಇಲ್ಲ.
2013-14ನೆಯ ಸಾಲಿನ ಬಜೆಟ್ ಭಾಷಣದಲ್ಲಿ ಸೇರ್ಪಡೆಯುಳ್ಳ ಬೆಳವಣಿಗೆಯ ವಿಚಾರ ತಮ್ಮ ಸರ್ಕಾರದ ಮೊದಲ ಮಂತ್ರ ಎಂದು ಘೋಷಿಸಿದ್ದರು. ಮಧ್ಯಂತರ ಆಯವ್ಯಯದಲ್ಲಿ ಮೂಲಮಂತ್ರ ಹೆಚ್ಚು ಕಡಿಮನೆ ಮೂಲೆಯಲ್ಲಿ ಕುಳಿತುಕೊಂಡಿದೆ.
ಚಿದು ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳಲ್ಲಿ ರಿಸರ್ವ್ ಬ್ಯಾಂಕಿನ ಕಾರ್ಯವೈಖರಿಯ ಬಗೆಗೆ ಅಷ್ಟೊಂದು ತೃಪ್ತಿ ಇದ್ದಂತೆ ತೋರುತ್ತಿಲ್ಲ. ಆರ್ಥಿಕ ಬೆಳವಣಿಗೆ ದರ ಹೆಚ್ಚಿಸುವುದು ಕೂಡ ರಿಸರ್ವ್ ಬ್ಯಾಂಕಿನ ಗುರಿಯಾಗಬೇಕೆಂದು ಅವರು ಹೇಳಿದ್ದಾರೆ. ವಿತ್ತ ಸಚಿವಾಲಯ ಮತ್ತು ಆರ್ಬಿಐ ನಡುವೆ ಶೀತಲ ಯುದ್ಧ ಪ್ರಾರಂಭವಾದಂತಿದೆ. ರಾಜಕಾರಣಿ ಚಿದು ಬಹಿರಂಗವಾಗಿ ಆರ್ಬಿಐ ವಿರುದ್ಧ ಸಮರ ಸಾರುತ್ತಿಲ್ಲ. ತಮ್ಮ ಸರ್ಕಾರದ ಆಟ ಮುಗಿಯುತ್ತಿರುವಾಗ ಆರ್ಬಿಐಗೆ ಕಾಟ ಕೊಟ್ಟು ವಿವಾದ ಸೃಷ್ಟಿಸುವ ಸಾಹಸಕ್ಕೆ ಅವರು ಕೈ ಹಾಕುತ್ತಿಲ್ಲ. ಆದರೆ ತಮ್ಮ ಅಭಿವೃದ್ಧಿ ರಾಜಕಾರಣದ ವರಸೆಯನ್ನು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಮುಂದುವರಿಸಿದ್ದಾರೆ.
-ಪ್ರೊ. ಜಿ.ವಿ. ಜೋಶಿ, ನಿಟ್ಟೆ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


