ಆಂಧ್ರಪ್ರದೇಶ ಜನ್ಮತಾಳಿದ್ದು 1952ರಲ್ಲಿ ಪೊಟ್ಟಿ ಶ್ರೀರಾಮುಲು ತಮ್ಮ ಜೀವವನ್ನು ತ್ಯಾಗ ಮಾಡಿದಾಗ. ಆದರೆ ಈಗ ತ್ಯಾಗಕ್ಕೆ ಬೆಲೆಕೊಡುವವರೇ ಇಲ್ಲ. ಆಂಧ್ರಪ್ರದೇಶವಿಂದು ಒಂದು ಭಾವನಾತ್ಮಕ ತಗ್ಗಿನಿಂದ ಇನ್ನೊಂದು ಭಾವನಾತ್ಮಕ ತಗ್ಗಿಗೆ ಬಿದ್ದು ಮೆತ್ತಗಾಗುತ್ತಲೇ ಇದೆ. ಜನರ ಮಧ್ಯೆಯೇ ವೈಮನಸ್ಸಿನ ಕಿಡಿ! ಅನೇಕ ಸ್ತರಗಳಲ್ಲಿ ಅಭಿವೃದ್ಧಿಯೆನ್ನುವುದೇ ನಿಂತು ಹೋಗಿದೆ. ಈ ಆಟ ರಾಜಕಾರಣಿಗಳಿಂದ, ರಾಜಕಾರಣಿಗಳಿಗಾಗಿ ನಡೆಯುತ್ತಿದೆ. ಇದರಲ್ಲಿ ಮತದಾರರು ದಾಳಗಳಷ್ಟೆ. ಅವರಿಗೆ ಈ ಆಟದಲ್ಲಿ ಲಾಭವಿಲ್ಲ, ಬರೀ ಲುಕ್ಸಾನೆ!
ನಾನಿಲ್ಲಿ ತೆಲಂಗಾಣ ಅಥವಾ ಹೈದ್ರಾಬಾದ್‌ನ ಪ್ರಶ್ನೆಯನ್ನು ಎತ್ತುತ್ತಿಲ್ಲ. ಆದರೆ ಪ್ರಜಾಪ್ರಭುತ್ವವಿಂದು ಎಷ್ಟು ರೋಗಗ್ರಸ್ಥವಾಗಿದೆ ಎನ್ನುವುದರ ಕುರಿತು ಮಾತನಾಡುತ್ತಿದ್ದೇನೆ. ಸಂಸತ್ತಿನಲ್ಲಿ ತೆಲಂಗಾಣ ವಿಚಾರವಾಗಿ ಜೋರಾಗಿ ಗದ್ದಲ ಶುರುವಾಗುತ್ತಿದ್ದಂತೆಯೇ ಟೆಲಿವಿಷನ್ ಕವರೇಜ್ ಅನ್ನು ತಕ್ಷಣಕ್ಕೆ ನಿಲ್ಲಿಸಲಾಯಿತು. ಎಲ್ಲರ ಟಿ.ವಿ. ಪರದೆಯ ಮೇಲೆ "HOUSE ADJOURNED' ಎನ್ನುವ ಸಂದೇಶ ಕಾಣಿಸಿಕೊಂಡಿತು. ಆದರೆ ನಿಜಕ್ಕೂ ಅದನ್ನು ಮುಂದೂಡಲಾಗಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಸಂಸತ್ತು 'ಅಧಿಕೃತ ಸುಳ್ಳನ್ನು' ಟಿ.ವಿಯಲ್ಲಿ ಬಿತ್ತರಿಸಿದ್ದು ಇದೇ ಮೊದಲಬಾರಿಗೆ ಇರಬಹುದು!
---------
ಮಹಾತ್ಮಾ ಗಾಂಧಿ, ಭಾಷೆಯ ಮೇಲೆ ಪುನರ್‌ವಿಂಗಡಣೆಯಾಗಬೇಕು ಎಂದು ವಾದಿಸಿದವರಲ್ಲಿ ಒಬ್ಬರು. ಭಾಷೆಯೇ 'ಗುರುತಿನ' ಬುನಾದಿ ಎಂದವರು ವಾದಿಸುತ್ತಿದ್ದರು. ಆದರೆ ಅವರ ಅತ್ಯಾಪ್ತರೆಲ್ಲರೂ ಈ ಮಾತನ್ನು ಪ್ರಬಲವಾಗಿ ವಿರೋಧಿಸಿದರು. ಅದರಲ್ಲೂ ಪಂಡಿತ್ ಜವಾಹರ್‌ಲಾಲ್ ನೆಹರು ಅವರು, 'ಭಾಷಾವಾರು ಪ್ರಾಂತಗಳು ಭಾರತವೆಂಬ ದೇಹದ ಅಂಗಗಳಿದ್ದಂತೆ. ಎಲ್ಲಾ ಅಂಗಗಳು ತಮ್ಮಿಚ್ಛೆಯಂತೆ ವರ್ತಿಸತೊಡಗಿದರೆ, ಆಗ ನಿಸ್ಸಂಶಯವಾಗಿಯೂ ತೊಂದರೆಗಳು ಎದುರಾಗುತ್ತವೆ, ಅವ್ಯವಸ್ಥೆ ಉಂಟಾಗುತ್ತದೆ" ಎಂದು ವಾದಿಸಿದರು. ಭಾಷೆ ಆಧಾರಿತ ವಿಂಗಡಣೆ ದೇಶದ ಐಕ್ಯತೆಗೆ ಮತ್ತು ಬಲವರ್ಧನೆಗೆ ಅಪಾಯ ತಂದೊಡ್ಡಲಿದೆ ಎಂದು ಪಟೇಲರು ಎಚ್ಚರಿಸಿದರು. ಯಾವುದೇ ಅನುಮಾನವಿಲ್ಲದೆಯೇ ರಾಜಾಜಿಯವರು ಹೇಳಿದರು: ಭಾರತಕ್ಕೆ ರಾಜಕೀಯ ಅರಾಜಕತೆಯಲ್ಲಿ ನಲುಗಬಹುದಾದ ಸನ್ನಿವೇಶ ಎದುರಾಗಬಹುದು ಮತ್ತು ಫ್ಯಾಸಿಸಂನ ಅಪಾಯವೂ ಬಂದೆರಗಬಹುದು. ಇದು ವಿಪತ್ತು ಮತ್ತು ದುರಾಡಳಿತಕ್ಕೆ ಕಾರಣವಾಗಲಿದೆ!
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಈ ವಿಷಯವಾಗಿ ಭಿನ್ನ ದೃಷ್ಟಿಕೋನವಿತ್ತು. 1955ರ Thoughts on Linguistic States ಎನ್ನುವ ಪ್ರಕರಣ ಗ್ರಂಥದಲ್ಲಿ ಅವರು, ಅಮೆರಿಕದ ಲೇಖಕರೊಬ್ಬರು ಅಮೆರಿಕನ್ ಕಾಮನ್‌ವೆಲ್ತ್ ಕುರಿತು ಹೇಳಿದ ಸಾಲುಗಳನ್ನು ಉಲ್ಲೇಖಿಸಿದ್ದರು: "ಅಮೆರಿಕದ ಪ್ರೊಟೆಸ್ಟೆಂಟ್ ಧರ್ಮಾಧ್ಯಕ್ಷೀಯ ಚರ್ಚ್‌ವೊಂದರಲ್ಲಿ ಕೆಲವು ವರ್ಷಗಳ ಹಿಂದೆ, ಅಂದರೆ ಅದರ ವಾರ್ಷಿಕ ಸಮಾವೇಶದಲ್ಲಿ LITURGY (ಪೂಜಾ ಪದ್ಧತಿ) ಬದಲಿಸುವ ಕುರಿತು ಚರ್ಚೆ ನಡೆಯಿತು. ಎಲ್ಲಾ ಜನರಿಗೂ ಸುಲಭವಾಗಲು ಸರಳ ಸ್ತೊತ್ರವನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂಬುದು ಅಂದಿನ ಚರ್ಚಾ ವಿಷಯವಾಗಿತ್ತು. ಇಂಗ್ಲೆಂಡ್‌ನ ಧಾರ್ಮಿಕ ಮುತ್ಸದ್ದಿಯೊಬ್ಬರು, 'ಓ ಲಾರ್ಡ್ ಬ್ಲೆಸ್ ಅವರ ನೇಷನ್" ಎನ್ನುವ ಸಾಲು ಸರಿಹೊಂದುತ್ತದೆ ಎಂದು ಹೇಳಿದಾಗ, ಎಲ್ಲರೂ ಅದನ್ನು ಒಪ್ಪಿಕೊಂಡರು.
ಸರಿಯಾಗಿ ಆಲೋಚಿಸದೆಯೇ ಆ ನಿರ್ಧಾರಕ್ಕೆ ಬರಲಾಯಿತು. ಆದರೆ ಮರುದಿನ ಪುನಃ ಪರಿಶೀಲಿಸುವಂತೆ ಒತ್ತಡ ಎದುರಾಯಿತು. ರಾಷ್ಟ್ರೀಯ ಐಕ್ಯತೆಗೆ 'ನೇಷನ್' ಎನ್ನುವ ಪದ ಬಳಕೆ ಸರಿಯಲ್ಲ ಎನ್ನುವುದು ಕೆಲವರ ವಾದವಾಗಿತ್ತು. ಆಗ ನೇಷನ್ ಎನ್ನುವ ಪದವನ್ನು ಬಿಟ್ಟು, ಅದರ ಜಾಗದಲ್ಲಿ ಯುನೈಟೆಡ್ ಸ್ಟೇಟ್ಸ್ ಸೇರಿಸಲಾಯಿತು. "ಓ ಲಾರ್ಡ್ ಬ್ಲೆಸ್ ದೀಸ್ ಯುನೈಟೆಡ್ ಸ್ಟೇಟ್ಸ್" ಎಂಬ ಸಾಲು ಹುಟ್ಟಿಕೊಂಡಿತು." ಇದನ್ನು ಉಲ್ಲೇಖಿಸಿದ ನಂತರ ಅಂಬೇಡ್ಕರ್ ಹೇಳುತ್ತಾರೆ- "ಭಾರತ ತನ್ನನ್ನು ತಾನು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದು ಕರೆದುಕೊಳ್ಳುವುದಕ್ಕೆ ಮಾನಸಿಕವಾಗಿ ಅಥವಾ ನೈತಿಕವಾಗಿ ಸಮರ್ಥವಾಗಿಲ್ಲ. ಆದರೆ ಉತ್ತರದ ಕ್ರೋಢೀಕರಣ ಮತ್ತು ದಕ್ಷಿಣ ಭಾರತದ ಬಾಲ್ಕನೈಸೇಷನ್(ಬಲವಂತವಾಗಿ ಒಂದುಗೂಡಿಸುವುದು) ಸರಿಯಾದ ಮಾರ್ಗವಲ್ಲ". (ಉತ್ತರ ಪ್ರದೇಶವೊಂದರಲ್ಲೇ ಆಗ 6.32 ಕೋಟಿ ಜನರಿದ್ದರು ಮತ್ತು ಬಿಹಾರದ ಜನಸಂಖ್ಯೆ 3.85 ಕೋಟಿಯಷ್ಟಿತ್ತು. ಆಗ ದಕ್ಷಿಣದ ಅತಿದೊಡ್ಡ ರಾಜ್ಯ ಮದ್ರಾಸ್ ಆಗಿತ್ತು ಮತ್ತು ಅದರ ಜನಸಂಖ್ಯೆ ಕೇವಲ 3 ಕೋಟಿಯಷ್ಟಿತ್ತು.)
ಇದೇನೇ ಇದ್ದರೂ, ವ್ಯಂಗ್ಯವೆಂದರೆ, ಒಬ್ಬ ಅದ್ಭುತ ಸಂಸದೀಯ ಪಟುವಾಗಿದ್ದ ಫಿರೋಜ್ ಗಾಂಧಿಯವರ ಮಾತುಗಳನ್ನು ನಮ್ಮ ಸಂಸತ್ತು ಮರೆತುಬಿಟ್ಟಿದೆ ಎಂಬುದು. ಇದಕ್ಕೆ ಕಾರಣ ಅವರ ನಂತರ ಹುಟ್ಟಿಕೊಂಡ ಅವರ ಕುಟುಂಬದ ರಾಜಕಾರಣ! ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅತಿದೊಡ್ಡ ಹಗರಣವನ್ನು(ದಿ ಎಲ್‌ಐಸಿ ಮುಂಧ್ರಾ) ಹೊರಹಾಕಿದ ಮತ್ತು ಸಂಸದೀಯ ಕಲಾಪಗಳಲ್ಲಿನ ಅನಗತ್ಯ ನಿರ್ಬಂಧಗಳನ್ನು ತೆಗೆಸಿಹಾಕಿದ ವ್ಯಕ್ತಿ ಫಿರೋಜ್ ಗಾಂಧಿ. ಅವರು ಹೇಳಿದ್ದರು: "ನಮ್ಮ ಸಂಸದೀಯ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕೆಂದರೆ, ಪ್ರತಿಯೊಬ್ಬ ಭಾರತೀಯನಿಗೂ ಸಂಸತ್ತಿನಲ್ಲಿ ಏನಾಗುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯಬೇಕು.
ಇದು ನನ್ನ ಮನೆಯಲ್ಲ ಅಥವಾ ನಿಮ್ಮ ಮನೆಯಲ್ಲ, ಇದು ಜನರ ಮನೆ....ತಾವು ಆಯ್ಕೆ ಮಾಡಿ ಕಳುಹಿಸಿದವರು ಸಂಸತ್ತಿನಲ್ಲಿ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಎಲ್ಲಾ ಅಧಿಕಾರವೂ ಜನರಿಗಿದೆ"! ತೆಲಂಗಾಣ ವಿಷಯವಾಗಿ ಲೋಕಸಭೆಯಲ್ಲಿ ಗದ್ದಲ ನಡೆದಾಗ, 'ತಾಂತ್ರಿಕ ದೋಷ ಎನ್ನುವ ಸುಳ್ಳು ಸುದ್ದಿ ಹೇಳಿ, ಅಲ್ಲೇನಾಗುತ್ತಿದೆ ಎನ್ನುವುದೇ ಜನರಿಗೆ ತಿಳಿಯದಂತೆ ಮಾಡಲಾಯಿತು. ಇನ್ನು ಯಶಸ್ವಿಯಾದಂತಾಯಿತಲ್ಲ ನಮ್ಮ ಪ್ರಜಾಪ್ರಭುತ್ವ!
ಓಹ್ ದೇವರೇ, ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಆಗಲು ಹೊರಟಿರುವ ಈ ದೇಶವನ್ನು ರಕ್ಷಿಸು!
ಟಿ.ಜೆ.ಎಸ್ ಜಾರ್ಜ್