ಮದ್ದಿಲ್ಲದ ಕಾಯಿಲೆಯವಳನ್ನು ಮುದ್ದಿಸಿ ಮದುವೆಯಾದ!

ಇದು 2005ರ ಮಾತು. ದೇಶಾದ್ಯಂತ ಏಡ್ಸ್ ವಿರುದ್ಧ ಜಾಗೃತಿ ಅಭಿಯಾನ ಆರಂಭ....
ಮದ್ದಿಲ್ಲದ ಕಾಯಿಲೆಯವಳನ್ನು ಮುದ್ದಿಸಿ ಮದುವೆಯಾದ!
Updated on: 

ಇದು 2005ರ ಮಾತು. ದೇಶಾದ್ಯಂತ ಏಡ್ಸ್ ವಿರುದ್ಧ ಜಾಗೃತಿ ಅಭಿಯಾನ ಆರಂಭವಾಗಿದ್ದ ಸಂದರ್ಭವದು. ಇಂಥ ಅಭಿಯಾನಗಳಲ್ಲಿ ಹೆಚ್ಚಾಗಿ ಎನ್‌ಜಿಒಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಪಾಲ್ಗೊಳ್ಳುತ್ತಿದ್‌ಕ್ದರು. ಅದೊಮ್ಮೆ ಏನಾಯಿತೆಂದರೆ, ಜಾಗೃತಿ ಅಭಿಯಾನದ ಸದಸ್ಯನಾಗಿದ್ದ ದೆಹಲಿಯ ನಜಾರಸ್ ಎಂಬ ಸುಂದರಾಂಗನಿಗೆ, ಪಶ್ಚಿಮ ಬಂಗಾಳ ಮೂಲದ ಮೈತ್ರಿ ಎಂಬ ಪೀಚಲು ದೇಹದ, ಗುಳಿ ಬಿದ್ದ ಕಣ್ಣುಗಳ ಯುವತಿಯ ಪರಿಚಯವಾಯಿತು. ಆಗಲೇ, ಜೊತೆಗಿದ್ದವರು ನಜಾರಸ್‌ನ ಕಿವಿಯಲ್ಲಿ ಪಿಸುಗುಟ್ಟಿದರು: 'ಈ ಹೆಂಗಸು ವಿಧವೆ. ಇವಳಿಗೆ ಏಡ್ಸ್ ಇದೆ. ಹುಷಾರು...' ಆನಂತರದಲ್ಲಿ ಏನಾಯಿತು ಅಂದರೆ -ಎಚ್‌ಐವಿ ಪಾಸಿಟಿವ್ ಇದ್ದ ಹುಡುಗಿ ಹಾಗೂ ಎಚ್‌ಐವಿ ನೆಗೆಟಿವ್ ಇದ್ದ ಹುಡುಗನ ಮಧ್ಯೆ ಪ್ರೀತಿಯ ಬಳ್ಳಿ ಚಿಗುರಿತು. ಎರಡು ವರ್ಷದ ನಂತರ ಅವರು ಮದುವೆಯಾದರು! ಈ ಪ್ರೀತಿಯ ಮಾಧುರ್ಯಕ್ಕೆ ಈಗ 8 ವರ್ಷ ತುಂಬಿದೆ. ಉಳಿದೆಲ್ಲ ದಂಪತಿಗಳಂತೆಯೇ ನಜಾರಸ್- ಮೈತ್ರಿ ಕೂಡ ಬದುಕು ಸಾಗಿಸುತ್ತಿದ್ದಾರೆ. ಈಗಲೂ ಆಕೆ ಎಚ್‌ಐವಿ ಪಾಸಿಟಿವ್. ಈತ ಎಚ್‌ಐವಿ ನೆಗೆಟಿವ್ ಆಗಿಯೇ ಉಳಿದಿದ್ದಾರೆ!
ಇದಿಷ್ಟನ್ನೂ ಓದಿದವರಿಗೆ ಮೊದಲಿಗೆ ಗಾಬರಿಯಾಗಬಹುದು. ಹೀಗೂ ಉಂಟೆ ಅನ್ನಿಸಬಹುದು. ಅದರ ಹಿಂದೆಯೇ- ಏಡ್ಸ್ ಇದೆ ಎಂಬುದು ಖಚಿತವಾದ ನಂತರವೂ ಎರಡನೇ ಮದುವೆ ಬಗ್ಗೆ ಮುಂದಾದ ಹೆಂಗಸಿನ ಬಗ್ಗೆಯೇ ಅಸಹನೆ ಉಂಟಾಗಬಹುದು. ಹಾಗೆಯೇ, ಆಕೆ ಹೆಚ್ಚು ದಿನ ಬದುಕುವುದಿಲ್ಲ ಎಂದು ಗೊತ್ತಾದ ನಂತರವೂ ಅವಳನ್ನು ಮದುವೆಯಾಗಬೇಕಾದರೆ, ಹುಡುಗನಿಗೆ ಬೇರೇನೋ ದುರುದ್ದೇಶ ಇರಬಹುದು. ಆಕೆಯ ಹೆಸರಿನಲ್ಲಿರುವ ಆಸ್ತಿ ಲಪಟಾಯಿಸುವ ಉದ್ದೇಶದಿಂದಲೇ ಆ ಹುಡುಗ ವಿಧವೆಗೆ ಬಾಳು ಕೊಡುವ ನಾಟಕ ಆಡಿರಬಹುದು ಎಂಬ ಅನುಮಾನವೂ ಜೊತೆಯಾಗಬಹುದು. ನಿಜ ಹೇಳಬೇಕೆಂದರೆ, ಇಂಥ ಯಾವ ಊಹೆಗೂ ಇಲ್ಲಿ ಜಾಗವಿಲ್ಲ. ಏಕೆಂದರೆ, ಬಡವರ ಮನೆಯಿಂದ ಬಂದವಳಾದ ಮೈತ್ರಿಯ ಹೆಸರಲ್ಲಿ ನಯಾ ಪೈಸೆಯ ಆಸ್ತಿಯೂ ಇಲ್ಲ. ಈ ದಂಪತಿಗೆ, ಈಗ ಕೂಡ ನಿಶ್ಚಿತ ಆದಾಯ ತರುವ ಪರ್ಮನೆಂಟ್ ನೌಕರಿಯೂ ಇಲ್ಲ. ಹಾಗಿದ್ದರೂ ಅವರು-'ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು' ಎಂಬ ಕವಿವಾಣಿಯಂತೆ ಬದುಕುತ್ತಿದ್ದಾರೆ. ಈ ಅಮರ ಪ್ರೇಮದ ವಿವರಣೆಯನ್ನು ಮೈತ್ರಿ ಅವರ ಮಾತುಗಳಲ್ಲಿಯೇ ಕೇಳೋಣ ಬನ್ನಿ.
---
'ಪಶ್ಚಿಮ ಬಂಗಾಳದ ದೋಮ್‌ಜೂರ್ ಜಿಲ್ಲೆಗೆ ಹತ್ತಿರವಿದ್ದ ಹಳ್ಳಿ ನನ್ನ ಹುಟ್ಟೂರು. ಪ್ರಾಪ್ತ ವಯಸ್ಕರಾದ ತಕ್ಷಣವೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ನಮ್ಮಲ್ಲಿನ ಸಂಪ್ರದಾಯ. ಅಂತೆಯೇ, 10ನೇ ತರಗತಿ ಮುಗಿಯುತ್ತಿದ್ದಂತೆಯೇ, ಮುಂಬಯಿಯ ಆಭರಣ ಮಳಿಗೆಯೊಂದರಲ್ಲಿ ಕುಸುರಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ನನ್ನ ಮದುವೆಯಾಯಿತು. ಇಷ್ಟು ಬೇಗ ಮದುವೆ ಬೇಡವೆಂದು ನಾನು ಹಠ ಹಿಡಿದೆ. ಏನೂ ಪ್ರಯೋಜನವಾಗಲಿಲ್ಲ. ನನ್ನ ದಾಂಪತ್ಯ ಖುಷಿಯಿಂದ ಕೂಡಿರಲಿಲ್ಲ. ಗಂಡನಿಗೆ ವಿಪರೀತ ಅನುಮಾನ. ನೆರೆಮನೆಯ ಗಂಡಸರೊಂದಿಗೆ ಎರಡೇ ಎರಡು ಮಾತಾಡಿದರೂ ಸಾಕು: ನಮಗಿಬ್ಬರಿಗೂ ಸಂಬಂಧವಿರಬಹುದು ಎಂದೇ ಆತ ಊಹಿಸುತ್ತಿದ್ದ. ಈ ವಿಷಯವಾಗಿಯೇ ಮನೆಯಲ್ಲಿ ಜಗಳವಾಗುತ್ತಿತ್ತು. ಆತ ದನಕ್ಕೆ ಬಡಿದಂತೆ ಬಡಿಯುತ್ತಿದ್ದ. ತಂದೆಯ ಮನೆಯಲ್ಲಿ ವಿಪರೀತ ಬಡತನವಿತ್ತು. ಹಾಗಾಗಿ ಎಲ್ಲ ಹಿಂಸೆಯನ್ನೂ ಮೌನವಾಗಿ ಸಹಿಸಿಕೊಂಡೆ. ಈ ನಡುವೆ ನಮ್ಮ ದಾಂಪತ್ಯಕ್ಕೆ ಇಬ್ಬರು ಮಕ್ಕಳಾದರು.
ಇಸವಿ 2000ದಲ್ಲಿ ಏನಾಯಿತೆಂದರೆ, ನನ್ನ ಗಂಡ ಕಾಯಿಲೆ ಬಿದ್ದ. ಪರೀಕ್ಷಿಸಿದ ವೈದ್ಯರು ಕ್ಷಯರೋಗವಿದೆ ಅಂದರು. ಆನಂತರದಲ್ಲಿ ನಡೆಸಿದ ಪರೀಕ್ಷೆಗಳಿಂದ ಆತನಿಗೆ ಏಡ್ಸ್ ಇದೆ ಎಂದು ಖಚಿತವಾಯಿತು. ವಾರದ ನಂತರ ನನ್ನನ್ನೂ ಪರೀಕ್ಷಿಸಿದ ವೈದ್ಯರು-'ನಿಮಗೂ ಎಚ್‌ಐವಿ ಪಾಸಿಟಿವ್ ಇದೆ. ಇದು ಗಂಡನ ಕಡೆಯಿಂದ ನಿಮಗೆ ಸಿಕ್ಕಿರುವ ಉಡುಗೊರೆ' ಅಂದರು. ಆನಂತರದಲ್ಲಿ ಎಲ್ಲವೂ ತುಂಬ ವೇಗವಾಗಿ ನಡೆದುಹೋಯಿತು. ಕೆಲವೇ ದಿನಗಳಲ್ಲಿ ನನ್ನ ಗಂಡ ಸತ್ತು ಹೋದ. ಅವನ ಕುಟುಂಬದವರು ನನಗೆ ಬಹಿಷ್ಕಾರ ಹಾಕಿದರು. ಅದುವರೆಗೂ ನನ್ನ ನೆರೆಹೊರೆಯವರಾಗಿದ್ದ ಮಂದಿ, ದಿಢೀರನೆ ಮಾತು ಬಿಟ್ಟರು. ಬಂಧುಗಳು, ಮುಟ್ಟಿಸಿಕೊಳ್ಳಲೂ ಹಿಂದೇಟು ಹಾಕತೊಡಗಿದರು. ಎಚ್‌ಐವಿ ಬಾಧಿತರನ್ನು ಮುಟ್ಟಿಸಿಕೊಂಡರೆ ಸಾಕು; ತಮಗೂ ರೋಗ ಅಂಟಿಕೊಳ್ಳುತ್ತದೆ ಎಂಬುದು ಹಲವರ ನಂಬಿಕೆಯಾಗಿತ್ತು. ಪರಿಣಾಮ ಏನಾಯಿತೆಂದರೆ, ಇಡೀ ಸಮಾಜ ನನಗೆ ಬಹಿಷ್ಕಾರ ಹಾಕಿತು. ನನ್ನೊಂದಿಗೆ ಮಾತಾಡಬಾರದು, ಮುಟ್ಟಿಸಿಕೊಳ್ಳಬಾರದು ಎಂದು ನಿರ್ಧರಿಸಿದ್ದವರ ಪಟ್ಟಿಯಲ್ಲಿ ನನ್ನ ಹೆತ್ತವರೂ ಇದ್ದರು. ಒಂದೇ ಸಮಾಧಾನವೆಂದರೆ, ಮಕ್ಕಳನ್ನು ಜೊತೆಗಿಟ್ಟುಕೊಳ್ಳಲು ಹೆತ್ತವರು ಒಪ್ಪಿಕೊಂಡಿದ್ದರು.
ಎಲ್ಲ ರೀತಿಯಿಂದಲೂ ನಾನು ಕೇರಾಫ್ ಫುಟ್‌ಪಾತ್ ಆಗಿದ್ದ ಸಂದರ್ಭ ಅದು. ಗಂಡನ ಮನೆ ಹಾಗೂ ತವರುಮನೆ- ಈ ಎರಡೂ ಕಡೆಯಲ್ಲಿ ಆಶ್ರಯ ದೊರೆಯದ ಕಾರಣ, ಊರಾಚೆಗಿನ ಬಯಲು ಪ್ರದೇಶದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸತೊಡಗಿದೆ. ನನಗೆ ಏಡ್ಸ್ ಇದೆ ಎಂದು ಎಲ್ಲರಿಗೂ ಗೊತ್ತಿದ್ದರಿಂದ ಗಂಡಸರ ಕಾಟವಿರಲಿಲ್ಲ. ಹೀಗಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಏಡ್ಸ್ ಬಾಧಿತರಿಗೆ ಆಖಖಿ ಮಾತ್ರೆಗಳನ್ನು ವಿತರಿಸುವ ಹಾಗೂ ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ತಿಳಿಯಿತು. ತಕ್ಷಣವೇ ಅಲ್ಲಿಗೆ ಹೋದೆ. ಅಲ್ಲಿ ನನ್ನಂಥದೇ ಸಮಸ್ಯೆ ಹೊಂದಿದ್ದ 24ಕ್ಕೂ ಹೆಚ್ಚು ಹೆಂಗಸರಿದ್ದರು. ಎಲ್ಲರೂ ಚಿಕ್ಕವಯಸ್ಸಿನವರು. ಎಲ್ಲರೂ ವೈಧವ್ಯದ ಪಟ್ಟ ಅಂಟಿಸಿಕೊಂಡವರೇ ಆಗಿದ್ದರು. ಶಿಬಿರದಲ್ಲಿ ತಜ್ಞರ ಸಲಹೆಗೆ ಕಿವಿಗೊಡುತ್ತಾ, ಎಚ್‌ಐವಿ ಪಾಸಿಟಿವ್ ಇದ್ದರೂ ಹದಿನೈದಿಪ್ಪತ್ತು ವರ್ಷ ನೆಮ್ಮದಿಯಿಂದ ಬದುಕಬಹುದು ಎಂಬ ಖುಷಿಯಲ್ಲಿ ನಾನು ಹಾಗೂ ನನ್ನಂಥ ಹಲವರು ಇದ್ದಾಗಲೇ, ಏಡ್ಸ್ ವಿರುದ್ಧದ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ದೆಹಲಿಯ ಎನ್‌ಜಿಒ ಒಂದರಿಂದ ತರುಣರ ಗುಂಪೊಂದು ಬಂದಿರುವುದಾಗಿಯೂ, ಅವರು ಮೂರು ತಿಂಗಳಿನಷ್ಟು ಸುದೀರ್ಘ ಕಾಲ ಬಂಗಾಳದಲ್ಲಿಯೇ ಇದ್ದು ಐದಾರು ಬಾರಿ ಜಾಥಾ ನಡೆಸುವರೆಂದೂ ತಿಳಿದು ಬಂತು. ಈ ಸಂದರ್ಭದಲ್ಲಿ ನಮ್ಮನ್ನೆಲ್ಲ ಕರೆಸಿದ ಸಂಘಟಕರು ಗಂಭೀರವಾಗಿ ಹೇಳಿದರು: 'ದೆಹಲಿಯಿಂದ ಎನ್‌ಜಿಒ ತಂಡದ ಹುಡುಗರು ಬಂದಿದ್ದಾರೆ. ಎಂಥ ಸಂದರ್ಭದಲ್ಲೂ ಅವರೊಂದಿಗೆ ಮಾತಾಡಬೇಡಿ. ಆಕರ್ಷಣೆಗೆ ಬಿದ್ದು ಅವರ ಹಿಂದೆ ಹೋಗಬೇಡಿ. ಐ ಲವ್ ಯೂ ಎನ್ನುವಂಥ ಸಾಹಸಕ್ಕೆ ಕೈ ಹಾಕಬೇಡಿ. ನಿಮ್ಮಿಂದ ಆ ಹುಡುಗರ ಬದುಕು ಹಾಳಾಗುವುದು ಬೇಡ. ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ಬರುವುದೂ ಬೇಡ...'
ಈ ಹೊತ್ತಿಗೆ ಆಖಖಿ ಮಾತ್ರೆಗಳನ್ನು   ಕೊಡುತ್ತಿದ್ದರಲ್ಲ, ಆದೇ ಆಫೀಸಿನಲ್ಲಿ ನನಗೆ 3000 ರೂ. ಸಂಬಳದ ನೌಕರಿ ಸಿಕ್ಕಿತ್ತು. ಆಫೀಸಿನ ಕಸ ಗುಡಿಸುವುದು, ಅಲ್ಲಿನ ಸಿಬ್ಬಂದಿಗೆ ಟೀ ಮಾಡಿಕೊಡುವುದು, ಏಡ್ಸ್ ತಡೆಗಟ್ಟಲು ಇರುವ ವಿಧಾನಗಳ ಬಗ್ಗೆ ಎಲ್ಲರಿಗೂ ವಿವರಿಸಿ ಹೇಳುವುದು- ಇದಿಷ್ಟೂ ನನ್ನ ಕೆಲಸವಾಗಿತ್ತು. ದೆಹಲಿಯ ಎನ್‌ಜಿಒದಿಂದ ಹುಡುಗರು ಬಂದರಲ್ಲ, ಆಗ ಆರಂಭವಾದ ಜಾಥಾದಲ್ಲಿ ಪಾಲ್ಗೊಳ್ಳಲು ನನಗೂ ಅವಕಾಶ ಕೊಟ್ಟರು. ಆಗ ಪರಿಚಯವಾದವನೇ ನಜಾರಸ್. ಆತ ಪದೇ ಪದೆ ನನ್ನನ್ನು ಮಾತಾಡಿಸುತ್ತಿದ್ದ. ಕೆಣಕುತ್ತಿದ್ದ. ರೇಗಿಸುತ್ತಿದ್ದ. ನಾನು ಕಾರ್ಯಕ್ರಮದ ವರದಿ ಬರೆಯಲು ಕೂತರೆ, ಪೆನ್ ಕಿತ್ತುಕೊಂಡು ಓಡಿ ಹೋಗುತ್ತಿದ್ದ. ಇದೆಲ್ಲಾ ಅತಿಯಾಯ್ತು ಅನ್ನಿಸಿದಾಗ, ಎಲ್ಲರೆದುರೇ ಅವನಿಗೆ ಛೀಮಾರಿ ಹಾಕಿದೆ. ಈ ಕಾರಣದಿಂದಾರೂ ಅವನು ದೂರವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಆತ ತುಂಬ ಸಂಕೋಚದಿಂದಲೇ ನನ್ನ ಕಥೆ ಕೇಳಿದ. ಅವತ್ತಿಗೆ, ನನ್ನ ಮನಸ್ಸಿನ ಪಿಸುಮಾತು ಕೇಳುವ ಗಂಡಸೊಬ್ಬನ ಅವಶ್ಯಕತೆ ನನಗೂ ಇತ್ತು. ಎಲ್ಲವನ್ನೂ ಹೇಳಿಕೊಂಡೆ. ಹೀಗೇ ತಿಂಗಳು ಕಳೆಯಿತು. ಅವನೊಂದಿಗೆ ಮಾತಾಡುವಾಗೆಲ್ಲ ನನಗೆ ಐಚ್‌ಐವಿ ಪಾಸಿಟಿವ್ ಇದೆ ಎಂದು ಎರಡೆರಡು ಬಾರಿ ಒತ್ತಿ ಹೇಳುತ್ತಿದ್ದೆ. ನನ್ನ ಮಾತು ಕೇಳಿಸಲೇ ಇಲ್ಲವೇನೋ ಎಂಬಂತೆ ಅದೊಮ್ಮೆ ಆತ- ' ಮೈತ್ರೀ, ಐ ಲವ್ ಯೂ' ಅಂದ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ನಾನು ಒದ್ದಾಡುತ್ತಿದ್ದಾಗಲೇ, ಆತನ ಟೀಂ ದಿಲ್ಲಿಗೆ ಹಿಂತಿರುಗಿತು.
ಇದಿಷ್ಟೂ ನಡೆದದ್ದು 2005ರಲ್ಲಿ. ನಂತರದ ಎರಡು ವರ್ಷ ಕಾಲ ಆತ ದೆಹಲಿಯಲ್ಲಿ, ನಾನು ಬಂಗಾಳದಲ್ಲಿ. ಮಾತಾಡಬೇಕು ಅನ್ನಿಸಿದಾಗೆಲ್ಲ ಕಾಯಿನ್ ಬೂತ್‌ನಿಂದ ನಜಾರಸ್ ಫೋನ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ ತಿಳಿದು ಬಂದ ವಿವರಣೆಗಳೆಂದರೆ -ಆತನ ತಂದೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರಿಯಿತ್ತು. ಆದರೆ ಕುಡಿತದ ಚಟಕ್ಕೆ ಬಿದ್ದು ಅವರು ನೌಕರಿ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮನೆಯ ಕೆಲಸದಲ್ಲಿ ಅಮ್ಮನಿಗೆ ನೆರವಾಗಲು ನಿಂತಿದ್ದರಿಂದ ನಜಾರಸ್‌ಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ಪರಿಣಾಮವಾಗಿ, ಆತ 10ನೇ ತರಗತಿಯಲ್ಲಿ ಫೇಲ್ ಆದ. ಆನಂತರದಲ್ಲಿ ಶಾಲೆಯ ಕಡೆಗೆ ತಿರುಗಿ ಕೂಡ ನೋಡಲಿಲ್ಲ. ಸಿಕ್ಕಿದ ಕೆಲಸ ಮಾಡುವುದು, ಸಂಬಳದ ಹಣದಲ್ಲಿ ಖರ್ಚಿಗೆ ಸ್ವಲ್ಪ ಇಟ್ಟುಕೊಂಡು ಉಳಿದುದನ್ನು ಅಮ್ಮನ ಕೈಗಿಡುವುದು ನಜಾರಸ್‌ಗೆ ಅಭ್ಯಾಸವಾಯಿತು...'
ದೆಹಲಿಗೆ ಹೋಗುವ ಮುನ್ನ ಅವನೇನೋ -ಐ ಲವ್ ಯೂ ಅಂದುಬಿಟ್ಟಿದ್ದ. ಆದರೆ ಅವನದು ತೋರಿಕೆಯ ಪ್ರೀತಿಯೋ, ಅನುಕಂಪದ ರೀತಿಯೋ ಅಥವಾ ಆ ಕ್ಷಣದ ಆಕರ್ಷಣೆಯೋ ಎಂದೆಲ್ಲಾ ನನಗೆ ಗೊಂದಲ ಮತ್ತು ಅನುಮಾನ ಶುರುವಾಯಿತು. 2006ರಲ್ಲಿ ನನ್ನ ಉಳಿತಾಯದ ಹಣದಿಂದ ಅವನಿಗೆ ಒಂದು ಮೊಬೈಲ್ ತೆಗೆದುಕೊಟ್ಟೆ. ಅವನನ್ನು ನೋಡಬೇಕು ಎಂಬ ಒಂದೇ ಆಸೆಯಿಂದ ಒಮ್ಮೆ ದೆಹಲಿಗೂ ಹೋಗಿ ಬಂದೆ. ಆನಂತರದಲ್ಲಿ ನಾವು ಗಂಟೆಗಳ ಕಾಲ ಮಾತಾಡಿದೆವು. ಅದೊಮ್ಮೆ ತುಂಬಾ ಸ್ಪಷ್ಟವಾಗಿ  ಹೇಳಿದೆ: 'ನಜಾರಸ್, ದಯವಿಟ್ಟು ಯೋಚನೆ ಮಾಡು. ನಾನು ಏಡ್ಸ್ ಬಾಧಿತೆ. ಸಾವು ಎಂಬುದು ಯಾವ ಕ್ಷಣದಲ್ಲಾದರೂ ನನ್ನನ್ನು ಬೇಟೆಯಾಡಬಹುದು. ಅಂಥವಳನ್ನು ಮದುವೆ ಆಗ್ತೇನೆ ಅನ್ನುತ್ತೀಯಲ್ಲ; ಇದೆಂಥ ಹುಚ್ಚು ನಿನ್ನದು? ಅವಸರದ ನಿರ್ಧಾರಕ್ಕೆ ಬರಬೇಡ. ಒಂದು ಹೆಜ್ಜೆ ಮುಂದಿಡುವ ಮೊದಲು ಹತ್ತು ಬಾರಿ ಯೋಚನೆ ಮಾಡು...' ಒಂದು ವಾರದ ನಂತರ ಅವನು ಫೋನ್ ಮಾಡಿ ಹೇಳಿದ: ಒಂದಲ್ಲ, ಸಾವಿರಕ್ಕೂ ಹೆಚ್ಚು ಬಾರಿ ಯೋಚಿಸಿಯೇ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಏನೆಂದರೆ- ನಿನ್ನನ್ನು ಪ್ರೀತಿಸಿದ್ದೇನೆ. ನಿನ್ನನ್ನು ಮದುವೆಯಾಗ್ತೇನೆ. ನಿನ್ನೊಂದಿಗೇ ಬದುಕುತ್ತೇನೆ...'
ಮುಂದಿನ ಕೆಲವೇ ದಿನಗಳಲ್ಲಿ ನಾನು ಮರುಮದುವೆಯಾಗುವ ಸುದ್ದಿ ಹಲವರನ್ನು ತಲುಪಿತು. ಎಲ್ಲರೂ ಛೀ, ಥೂ ಎಂದರು. ಸಾಯುವ ವಯಸ್ಸಿಗೆ ಇವಳಿಗೆ ಇದೆಂಥ ಚಪಲ ಬಂತು ಎಂದು ಕಮೆಂಟ್ ಮಾಡಿದರು. ಇಂಥ ಮಾತುಗಳನ್ನು ನನ್ನ ಹೆತ್ತವರೂ ಅಂದರು. ಎಲ್ಲರ ತಿರಸ್ಕಾರದ ಮಾತುಗಳ ಮಧ್ಯೆಯೇ, ಒಂದು ದೇವಸ್ಥಾನದಲ್ಲಿ ನಮ್ಮ ಮದುವೆ ನಡೆದುಹೋಯಿತು. ಮದುವೆಗೆ ಸಾಕ್ಷಿಯಾಗಿ ದೇವರು ಮತ್ತು ಅರ್ಚಕರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಈ ವೇಳೆಗೆ ನಜಾರಿಸ್ ಕೂಡ  ದೆಹಲಿಯಲ್ಲಿದ್ದ ಕೆಲಸ ಬಿಟ್ಟು, ಬಂಗಾಳಕ್ಕೆ ವಾಸ್ತವ್ಯ ಬದಲಿಸಿದ್ದ. ನಾನು ಕೆಲಸ ಮಾಡುತ್ತಿದ್ದ ಆಫೀಸಿಗೆ ಹತ್ತಿರವಿದ್ದ ಮತ್ತೊಂದು ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಸೇರಿಕೊಂಡ.
ಹೀಗೇ ಎರಡು ವರ್ಷಗಳು ಕಳೆದವು. ಎಚ್‌ಐವಿ ಪಾಸಿಟಿವ್ ಇರುವವರನ್ನು ಮುಟ್ಟುವುದರಿಂದ, ಅವರೊಂದಿಗೆ ಮಾತನಾಡುವುದರಿಂದ, ಜೊತೆಯಲ್ಲಿ ತಿಂಡಿ ತಿನ್ನುವುದರಿಂದ ಆ ರೋಗ ಇನ್ನೊಬ್ಬರಿಗೆ ಅಂಟುವುದಿಲ್ಲ ಎಂದು ನಮ್ಮಿಬ್ಬರಿಗೂ ತಿಳಿದಿತ್ತು. ಹಾಗಾಗಿ ಒಟ್ಟಾಗಿ ಬದುಕಲು ನಮಗೆ ಸಮಸ್ಯೆಯಾಗಲಿಲ್ಲ. ಹತ್ತೇ ನಿಮಿಷದಲ್ಲಿ ಮುಗಿದು ಹೋಗುವ ಸೆಕ್ಸ್‌ನಂಥ ಕ್ರಿಯೆಯ ಸಂದರ್ಭದಲ್ಲಿ ಇಬ್ಬರೂ ವಿಪರೀತ ಎಚ್ಚರಿಕೆ ವಹಿಸುವುದರಿಂದ, ಕಷ್ಟವೆಂಬುದು ನಮಗೆ ಎದುರಾಗಲೇ ಇಲ್ಲ. ಹೀಗಿರುವಾಗಲೇ ತನ್ನ ಹೆತ್ತವರೊಂದಿಗೆ ಬದುಕುವ ಆಸೆಯಿಂದ, ನನ್ನನ್ನೂ, ನನ್ನ ಎರಡು ಮಕ್ಕಳನ್ನೂ ಹೊರಡಿಸಿಕೊಂಡು ದೆಹಲಿಗೆ ಬಂದೇ ಬಿಟ್ಟ ನಜಾರಸ್. ಮುಂದೆ ಏನಾದೀತೋ ಎಂಬ ಹೆದರಿಕೆಯಿಂದ ನಾನು ನಡುಗುತ್ತ ನಿಂತಿದ್ದಾಗಲೇ ಅಮ್ಮನ ಬಳಿಗೆ ಹೋದ ನಜರಸ್ ಹೇಳಿದ: 'ಅಮ್ಮಾ, ದಯವಿಟ್ಟು ನನ್ನನ್ನು ಕ್ಷಮಿಸು. ಸಹವಾಸ ದೋಷದಿಂದ ತಪ್ಪು ಮಾಡಿಬಿಟ್ಟೆ. ಪರಿಣಾಮವಾಗಿ ನನಗೆ ಏಡ್ಸ್ ಬಂದಿದೆ. ಈ ವಿಷಯ ಗೊತ್ತಾದ ನಂತರವೂ ಮೈತ್ರಿ ನನ್ನನ್ನು ಪ್ರೀತಿಸಿದ್ದಾಳೆ. ಜೊತೆಗೇ ಬದುಕುವುದಾಗಿ ಭಾಷೆ ಕೊಟ್ಟಿದ್ದಾಳೆ. ನಮ್ಮೊಂದಿಗೆ ಬಂದಿದ್ದಾರಲ್ಲ: ಅವರು ಮೈತ್ರಿಯ ಅಕ್ಕನ ಮಕ್ಕಳು. ಅವರನ್ನು ನಾವು ದತ್ತು ತೆಗೆದುಕೊಂಡಿದೀವಿ. ಈ ಮನೆಗೆ ಹತ್ತಿರದಲ್ಲೇ ಬೇರೊಂದು ಮನೆ ಮಾಡಿಕೊಂಡು ಜೀವನ ಮಾಡ್ತೇವೆ. ನನ್ನ ತಪ್ಪನ್ನು ಕ್ಷಮಿಸಿಬಿಡಮ್ಮಾ. ಒಳ್ಳೇದಾಗ್ಲಿ ಅಂತ ಆಶೀರ್ವಾದ ಮಾಡಮ್ಮಾ... ' ನಜಾರಸ್‌ನ ಮಾತು ಮುಗಿಯುತ್ತಿದ್ದಂತೆಯೇ, ನಮ್ಮಿಬ್ಬರನ್ನೂ ಅನುಮಾನ ಹಾಗೂ ಸಂಕಟದಿಂದ ನೋಡಿದ ಆ ಅವಿದ್ಯಾವಂತ ತಾಯಿ ಕೇಳಿದಳು: 'ಮಗೂ, ದುಡೀತೀನಿ ಅಂತ ಹೋಗಿ ಇದೆಂಥಾ ದೊಡ್ಡ ತಪ್ಪು ಮಾಡಿಬಿಟ್ಟೆಯಲ್ಲೋ...'
ಮುಂದಿನ ಕೆಲವೇ ಗಂಟೆಗಳಲ್ಲಿ ನಜಾರಸ್‌ನ ಬಂಧುಗಳಿಗೆಲ್ಲಾ ವಿಷಯ ಗೊತ್ತಾಗಿ ಹೋಯಿತು. ವಾಸ್ತವವಾಗಿ ಏಡ್ಸ್ ಇದ್ದುದು ನನಗೆ.  ಸತ್ಯ ಸಂಗತಿ ಗೊತ್ತಾದರೆ, ಮನೆಯವರೆಲ್ಲ ತಕ್ಷಣವೇ ನನ್ನನ್ನು ಹೊರಹಾಕುತ್ತಾರೆಂದು ಗೊತ್ತಿದ್ದುದರಿಂದ ನಜಾರಸ್ ಒಂದು ಭಯಂಕರ ಸುಳ್ಳು ಹೇಳಿದ್ದ. ಆ ಮೂಲಕ ನನ್ನನ್ನು ಕಾಪಾಡಿಬಿಟ್ಟಿದ್ದ.
 ಮುಂದೆ, ಅವರ ಮನೆಗೆ ಹತ್ತಿರದಲ್ಲಿಯೇ ಇದ್ದ ಬಾಡಿಗೆ ಮನೆಯಲ್ಲಿ ನಮ್ಮ ಹೊಸ ಬದುಕು ಆರಂಭವಾಯಿತು. ಈ ವೇಳೆಗೆ ಲೀಲಾ ಪ್ಯಾಲೇಸ್ ಹೋಟೆಲಿನಲ್ಲಿ ಮಾಸಿಕ 9000ರೂ. ಸಂಬಳದ ನೌಕರಿಯೂ ನಜಾರಸ್‌ಗೆ ಸಿಕ್ಕಿತು. ದಿನಗಳು ಕಳೆದಂತೆಲ್ಲ ನಜಾರಸ್‌ನ ತಂಗಿಯರು ಹಾಗೂ ತಮ್ಮಂದಿರಿಗೆ ನನ್ನ ಮೇಲೆ ಅನುಮಾನ ಶುರುವಾಯಿತು. ಒಂದು ದಿನವೂ ತಪ್ಪದಂತೆ ನಾನು   ಆಖಖಿ ಮಾತ್ರೆ ನುಂಗುವುದನ್ನು ಗಮನಿಸಿದ ಅವರು ಕಡೆಗೊಂದು ದಿನ ಕೇಳಿಯೇ ಬಿಟ್ಟರು: 'ಕಾಯಿಲೆ ಇರೋದು ನಜಾರಸ್‌ಗೆ ಅಂತೀರ. ಮಾತ್ರೆಗಳನ್ನು ಅವನ ಬದಲು ನೀವೇ ನುಂಗ್ತಾ ಇದೀರ. ಏನು ಇದರ ಮರ್ಮ?' ಈ ಸಂದರ್ಭದಲ್ಲಿ ಸತ್ಯ ಹೇಳದೆ ಬೇರೆ ದಾರಿಯೇ ಇರಲಿಲ್ಲ. ಎಲ್ಲವನ್ನೂ ವಿವರವಾಗಿ ಹೇಳಿದೆ. ನನ್ನ ಪುಣ್ಯ; ಅವರು ಯಾರೂ ಗಲಾಟೆ ಮಾಡಲಿಲ್ಲ. ಬದಲಿಗೆ-'ಹೆದರಬೇಡಿ. ನಿಮ್ಮ ಬೆಂಬಲಕ್ಕೆ ನಾವೆಲ್ಲಾ ಇದ್ದೇವೆ. ಖುಷಿಯಿಂದ, ಅಷ್ಟೇ ಎಚ್ಚರದಿಂದ ಬದುಕಿ' ಎಂದರು.
ಈಗ ಏನಾಗಿದೆಯೆಂದರೆ, ನಮ್ಮ ದಾಂಪತ್ಯಕ್ಕೆ 8 ವರ್ಷಗಳು ತುಂಬಿವೆ. ನನಗೆ ನಾಳೆಗಳಲ್ಲಿ ನಂಬಿಕೆಯಿಲ್ಲ. ಇವತ್ತೇ ನನ್ನ ಕಡೆಯ ದಿನ ಅಂದುಕೊಂಡೇ ಬದುಕ್ತಾ ಇದೀನಿ. ಜೀವನದಲ್ಲಿ ಎರಡು ಬಾರಿ ಮದುವೆಯಾದೆ. ಬ್ಯಾಡ್‌ಲಕ್. ಎರಡೂ ಸಂದರ್ಭಗಳಲ್ಲಿ ರೇಷ್ಮೆ ಸೀರೆ ಉಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ನಾನು ಸತ್ತು ಹೋದ್ರೆ, ಆಗ ನನ್ನ ಶವಕ್ಕಾದ್ರೂ ರೇಷ್ಮೆ ಸೀರೆ ಉಡಿಸು ಅಂತ ನಜಾರಸ್‌ಗೆ ಹೇಳಿದೀನಿ. ಅಂಥದೇನೂ ಆಗೋದಿಲ್ಲ. ಇನ್ನೂ 20 ವರ್ಷ ನೀನು ಆರಾಮಾಗಿ ಇರ್ತೀಯ. ಆಮೇಲೆ ಏನಾಗ್ತದೋ ನೋಡೋಣ ಎಂದು ಆತ ಮಾತು ತೇಲಿಸಿದ್ದಾನೆ. ಆದರೆ, ಒಂದಂತೂ ಸತ್ಯ. ಅವನ ಸಾಂಗತ್ಯದಿಂದ ನನ್ನ ಜೀವನ ಪಾವನವಾಯ್ತು' ಎನ್ನುತ್ತಾ ತಮ್ಮ ಲವ್ ಸ್ಟೋರಿಗೆ 'ಶುಭಂ' ಹೇಳುತ್ತಾರೆ ಮೈತ್ರಿ.
ಎಲ್ಲವನ್ನೂ ಕೇಳಿದ ನಂತರ, ನಜಾರಸ್‌ನತ್ತ ತಿರುಗಿದರೆ ಆತ ಹೇಳುತ್ತಾನೆ: 'ಎಚ್‌ಐವಿ ಪಾಸಿಟಿವ್ ಇರುವವರನ್ನು ಸಾವು ಯಾವ ಕ್ಷಣದಲ್ಲಾದರೂ ಬಲಿ ತೆಗೆದುಕೊಳ್ಳಬಹುದು. ಈ ವಿಷಯ ನೆನಪಾದರೆ ಸಾಕು; ಕರುಳು ಕತ್ತರಿಸಿದಂತಾಗುತ್ತದೆ. ಆದರೆ, ಅದೇ ಎಚ್‌ಐವಿ ಪಾಸಿಟಿವ್‌ನೊಂದಿಗೆ ಮೈತ್ರಿ 14 ವರ್ಷ ಕಳೆದಿದ್ದಾಳೆ. ಇನ್ನೂ 14 ವರ್ಷ ಆಕೆ ನನ್ನೊಂದಿಗಿರಲಿ ಎಂದು ದೇವರಲ್ಲಿ ದಿನವೂ ಪ್ರಾರ್ಥಿಸ್ತಾ ಇರ್ತೇನೆ. ಆ ದೇವರು ಖಂಡಿತ ನಮ್ಮ ಕೈ ಬಿಡಲಾರ ಎಂಬ ನಂಬಿಕೆಯಿಂದಲೇ ನೆಮ್ಮದಿಯಿಂದ ಬದುಕ್ತಾ ಇದ್ದೇನೆ...'
ಅಂದಹಾಗೆ, ಇದು 'ಓಪನ್‌' ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹದ ಭಾವಾನುವಾದ. ಈ ಅಮರ ಮಧುರ ಪ್ರೇಮದ ಕತೆಯನ್ನು ಓದಿದಾಗ-' ಒಂದು ಹೆಣ್ಣಿಗೊಂದು ಗಂಡು ಹೇಗೋ ಏನೋ ಹೊಂದಿಕೊಂಡು...' ಎಂಬ ಕವಿ ವಾಣಿ ನೆನಪಾಗುವುದಿಲ್ಲವೇ? ಏಡ್ಸ್ ಬಾಧಿತೆಗೆ ಬಾಳು ಕೊಟ್ಟ ನಜಾರಸ್, ನಮ್ಮೆಲ್ಲರ ಮಧ್ಯೆ ಇರುವ ರಿಯಲ್ ಹೀರೋ, ಹೌದಲ್ಲವೇ?



-ಎ.ಆರ್. ಮಣಿಕಾಂತ್
armanikanth@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com